ಪದ್ಯ ೫೫: ಕೃಷ್ಣನು ಬಂದೊಡನೆ ಎಲ್ಲರು ಹೇಗೆ ಸ್ವಾಗತಿಸಿದರು?

ಬರಲು ಮುರಹರನಿದಿರುವಂದರು
ಗುರುನದೀಜ ದ್ರೋಣ ಗೌತಮ
ಗುರುಸುರಾದಿ ಸಮಸ್ತ ಭೂಪ ಚಮೂಹ ಸಂದೋಹ
ಚರಣದಲಿ ಚಾಚಿದರು ಭೂಮೀ
ಶ್ವರರು ಮುಕುಟವನಂತತಾರಾ
ಪರಿವೃತೇಂದುವಿನಂತೆ ಮೆರೆದುದು ಹರಿಯ ಪದನಖವು (ಉದ್ಯೋಗ ಪರ್ವ, ೮ ಸಂಧಿ, ೫೫ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಓಲಗಕೆ ಬರಲು ಅವನನ್ನು ಎದುರು ನೋಡುತ್ತಾ, ಕೃಪಾಚಾರ್ಯರು, ಭೀಷ್ಮ, ದ್ರೋಣ, ಗೌತಮ, ಬೃಹಸ್ಪತಿ, ಸಮಸ್ತ ರಾಜ, ಸೇನಾಧಿಪತಿಗಳ ಗುಂಪು ಆತನ ಚರಣಕ್ಕೆ ಎರಗಿದರು. ಎಲ್ಲರ ಮಣೀಖಚಿತ ಮಕುಟವು ಆಗಸದಲ್ಲಿ ನಕ್ಷತ್ರಗಳೂ ಹೇಗೆ ಚಂದ್ರನನ್ನು ಆವರಿಸುತ್ತದೋ ಹಾಗೆ ಕೃಷ್ಣನ ಚರಣದ ನಖವು ಮೆರೆಯುತ್ತಿತ್ತು.

ಅರ್ಥ:
ಬರಲು: ಆಗಮಿಸಲು; ಮುರಹರ: ಕೃಷ್ಣ; ಇದಿರು: ಎದುರು; ವಂದರು: ಸ್ತುತಿಸುವವ; ಗುರು: ಆಚಾರ್ಯ; ನದೀಜ: ಭೀಷ್ಮ;ಸುರ: ದೇವ; ಆದಿ: ಮುಂತಾದ; ಸಮಸ್ತ: ಎಲ್ಲಾ; ಭೂಪ: ರಾಜ; ಚಮೂಹ: ಸೇನಾಧಿಪತಿ; ಸಂದೋಹ: ಗುಂಪು, ಸಮೂಹ; ಚರಣ: ಪಾದ; ಚಾಚು: ಹರಡು; ಭೂಮೀಶ್ವರ: ರಾಜ; ಮಕುಟ: ಕಿರೀಟ; ತಾರ: ನಕ್ಷತ್ರ; ಪರಿವೃತ: ಆವರಿಸು; ಇಂದು:ಚಂದ್ರ; ಮೆರೆ: ಹೊಳೆ, ಪ್ರಜ್ವಲಿಸು; ಹರಿ: ವಿಷ್ಣು; ಪದ: ಪಾದ; ನಖ: ಉಗುರು; ಗುರುಸುರ: ಬೃಹಸ್ಪತಿ;

ಪದವಿಂಗಡಣೆ:
ಬರಲು+ ಮುರಹರನ್+ಇದಿರು+ವಂದರು
ಗುರು+ನದೀಜ+ ದ್ರೋಣ +ಗೌತಮ
ಗುರುಸುರಾದಿ+ ಸಮಸ್ತ+ ಭೂಪ +ಚಮೂಹ +ಸಂದೋಹ
ಚರಣದಲಿ +ಚಾಚಿದರು +ಭೂಮೀ
ಶ್ವರರು+ ಮಕುಟವ್+ಅನಂತ+ತಾರಾ
ಪರಿವೃತ+ಇಂದುವಿನಂತೆ+ ಮೆರೆದುದು +ಹರಿಯ +ಪದನಖವು

ಅಚ್ಚರಿ:
(೧) ಗುರು ಪದದ ಬಳಕೆ – ೨, ೩ ಸಾಲಿನ ಮೊದಲ ಪದ
(೨) ನಮಸ್ಕರಿಸಿದರು ಎಂದು ಹೇಳಲು – ಚರಣದಲಿ ಚಾಚಿದರು ಭೂಮೀಶ್ವರರು ಮಕುಟವ
(೩) ಉಪಮಾನದ ಪ್ರಯೋಗ – ಅನಂತ ತಾರಾ ಪರಿವೃತೇಂದುವಿನಂತೆ ಮೆರೆದುದು

ನಿಮ್ಮ ಟಿಪ್ಪಣಿ ಬರೆಯಿರಿ