ಪದ್ಯ ೧೫: ದ್ರೌಪದಿಯ ದುಃಖಕ್ಕೆ ಕಾರಣವೇನು?

ಏನಿದೇನದುಭುತವೆನುತ ದು
ಮ್ಮಾನದಲಿ ಹರಿತಂದು ಹಿಡಿದನು
ಮಾನಿನಿಯ ಕೈಗಳನು ಕಂಬನಿದೊಡೆದು ಸೆರಗಿನಲಿ
ಹಾನಿಯೇನೆನೆ ಮಡಿದರೆನ್ನಯ
ಸೂನುಗಳು ತನ್ನನುಜರೆನೆ ಪವ
ಮಾನಸುತ ಕೇಳಿದನು ಕೋಳಾಹಳವ ಗುರುಸುತನ (ಗದಾ ಪರ್ವ, ೧೦ ಸಂಧಿ, ೧೫ ಪದ್ಯ)

ತಾತ್ಪರ್ಯ:
ಧರ್ಮಜನು ಇದೇನಾಶ್ಚರ್ಯ ಎಂದು ಚಿಂತಿಸುತ್ತಾ ದುಃಖದಿಂದ ದ್ರೌಪದಿಯ ಕೈಗಳನ್ನು ಹಿಡಿದು ಸೆರಗಿನಿಂದ ಅವಳ ಕಣ್ಣೀರನ್ನೊರಸಿದನು. ಏನಾಯಿತು ಎಂದು ಕೇಳಲು, ದ್ರೌಪದಿಯು ದುಃಖದಿಂದ ನನ್ನ ಮಕ್ಕಳೂ, ಸಹೋದರರೂ ಮಡಿದರು ಎಂದು ನಡೆದ ಸಂಗತಿಯನ್ನು ಹೇಳಲು, ಭೀಮನು ಅಶ್ವತ್ಥಾಮನ ಈ ಹಾವಳಿಯನ್ನು ಕೇಳಿದನು.

ಅರ್ಥ:
ಅದುಭುತ: ಆಶ್ಚರ್ಯ; ದುಮ್ಮಾನ: ದುಃಖ; ಹರಿತಂದು: ವೇಗವಾಗಿ ಚಲಿಸುತ, ಆಗಮಿಸು; ಹಿಡಿ: ಗ್ರಹಿಸು; ಮಾನಿನಿ: ಹೆಣ್ಣು; ಕೈ: ಹಸ್ತ; ಕಂಬನಿ: ಕಣ್ಣೀರು; ಸೆರಗು: ಸೀರೆಯ ಅಂಚು; ಹಾನಿ: ನಾಶ; ಮಡಿ: ಸಾವು; ಸೂನು: ಮಕ್ಕಳು; ಅನುಜ: ತಮ್ಮ; ಪವಮಾನ: ವಾಯು; ಸುತ: ಮಗ; ಕೇಳು: ಆಲಿಸು; ಕೋಳಾಹಲ: ಗದ್ದಲ; ಗುರು: ಆಚಾರ್ಯ; ಗುರುಸುತ: ಅಶ್ವತ್ಥಾಮ;

ಪದವಿಂಗಡಣೆ:
ಏನಿದೇನ್+ಅದುಭುತವ್+ಎನುತ +ದು
ಮ್ಮಾನದಲಿ +ಹರಿತಂದು +ಹಿಡಿದನು
ಮಾನಿನಿಯ +ಕೈಗಳನು +ಕಂಬನಿದೊಡೆದು +ಸೆರಗಿನಲಿ
ಹಾನಿಯೇನ್+ಎನೆ +ಮಡಿದರ್+ಎನ್ನಯ
ಸೂನುಗಳು +ತನ್ನ್+ಅನುಜರ್+ಎನೆ +ಪವ
ಮಾನಸುತ+ ಕೇಳಿದನು+ ಕೋಳಾಹಳವ +ಗುರುಸುತನ

ಅಚ್ಚರಿ:
(೧) ಸುತ ಪದದ ಬಳಕೆ – ಪವಮಾನಸುತ, ಗುರುಸುತ
(೨) ಏನಿದೇನ್, ಎನುತ, ಎನೆ, ಎನ್ನಯ – ಪದಗಳ ಬಳಕೆ

ಪದ್ಯ ೬: ಕೃಪಚಾರ್ಯರು ರಾತ್ರಿಯ ಯುದ್ಧವನ್ನು ಹೇಗೆ ವಿವರಿಸಿದರು?

ಏನನೆಂಬೆನು ಜೀಯ ದ್ರುಪದನ
ಸೂನು ಪಂಚದ್ರೌಪದೇಯರ
ಹಾನಿಯನು ಸೃಂಜಯ ಶಿಖಂಡಿ ಪ್ರಮುಖರುಪಹತಿಯ
ವೈನತೇಯನ ಲಳಿಯಲಹಿಕುಲ
ವಾನುವುದೆ ಪಾಂಚಾಲಕದಳೀ
ಕಾನನವ ನಿನ್ನಾನೆ ಸವರಿತು ಹೇಳಲೇನೆಂದ (ಗದಾ ಪರ್ವ, ೧೦ ಸಂಧಿ, ೬ ಪದ್ಯ)

ತಾತ್ಪರ್ಯ:
ಕೃಪನು ಆ ರಾತ್ರಿ ಯುದ್ಧವನ್ನು ವಿವರಿಸಿದನು. ಒಡೆಯ, ಅಶ್ವತ್ಥಾಮನು ಉಪಪಾಂಡವರು, ಸೃಂಜಯ, ಶಿಖಂಡಿ, ಮೊದಲಾದ ಪ್ರಮುಖರನ್ನು ನಾಶ ಮಾಡಿದನು. ಗರುಡನ ದಾಳಿಯನ್ನು ಸರ್ಪಗಳು ಸಹಿಸಬಲ್ಲವೇ? ಪಾಂಚಾಲರೆಂಬ ಬಾಳೆಯ ತೋಟವನ್ನು ನಿನ್ನ ಆನೆಯು ನಾಶಮಾಡಿತು.

ಅರ್ಥ:
ಜೀಯ: ಒಡೆಯ; ಸೂನು: ಮಗ; ಪಂಚ: ಐದು; ದ್ರೌಪದೇಯ: ದ್ರೌಪದಿಯ ಮಕ್ಕಳು, ಉಪಪಾಂಡವರು; ಹಾನಿ: ನಾಶ; ಪ್ರಮುಖ: ಮುಖ್ಯ; ಉಪಹತಿ: ಹೊಡೆತ, ಆಘಾತ; ವೈನತೇಯ: ಗರುಡ; ಲಳಿ: ವೇಗ; ಅಹಿ: ಸರ್ಪ; ಕುಲ: ವಂಶ; ಆನು: ಎದುರಿಸು; ಕದಳೀ; ಬಾಳೆ; ಕಾನನ: ಅರಣ್ಯ; ಆನೆ: ಬಲಶಾಲಿ, ಗಜ; ಸವರು: ನಾಶ;

ಪದವಿಂಗಡಣೆ:
ಏನನೆಂಬೆನು +ಜೀಯ +ದ್ರುಪದನ
ಸೂನು +ಪಂಚ+ದ್ರೌಪದೇಯರ
ಹಾನಿಯನು +ಸೃಂಜಯ +ಶಿಖಂಡಿ +ಪ್ರಮುಖರ್+ಉಪಹತಿಯ
ವೈನತೇಯನ +ಲಳಿಯಲ್+ಅಹಿಕುಲವ್
ಆನುವುದೆ +ಪಾಂಚಾಲ+ಕದಳೀ
ಕಾನನವ +ನಿನ್ನಾನೆ +ಸವರಿತು +ಹೇಳಲೇನೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ವೈನತೇಯನ ಲಳಿಯಲಹಿಕುಲವಾನುವುದೆ
(೨) ರೂಪಕದ ಪ್ರಯೋಗ – ಪಾಂಚಾಲಕದಳೀಕಾನನವ ನಿನ್ನಾನೆ ಸವರಿತು

ಪದ್ಯ ೩೨: ಕೌರವನು ಧರ್ಮಜನನ್ನು ಹೇಗೆ ನಿಂದಿಸಿದನು?

ಹಾನಿಯೆಮಗಾಯ್ತೆಂದು ಕಡುಸು
ಮ್ಮಾನವುಕ್ಕಿತೆ ನಿಮಿಷದಲಿ ದು
ಮ್ಮಾನ ಶರಧಿಯೊಳದ್ದುವೆನು ತಿದ್ದುವೆನು ನಿನ್ನವರ
ಈ ನಗೆಯನೀ ಬಗೆಯನೀ ವಿಜ
ಯಾನುರಾಗವ ನಿಲಿಸುವೆನು ಯಮ
ಸೂನು ಸೈರಿಸೆನುತ್ತ ಜರೆದನು ವಾಮಹಸ್ತದಲಿ (ಗದಾ ಪರ್ವ, ೭ ಸಂಧಿ, ೩೨ ಪದ್ಯ)

ತಾತ್ಪರ್ಯ:
ಕೌರವನು ಎಡಗೈ ನೀಡಿ, ನನಗೆ ಪೆಟ್ಟು ಬಿದ್ದಿತೆಂದು ನಿಮಗೆ ಸಂತೋಷವುಕ್ಕಿತೇ? ಇನ್ನೊಂದು ನಿಮಿಷದಲ್ಲಿ ನಿಮ್ಮನ್ನು ದುಃಖದ ಕಡಲಿನಲ್ಲಿ ಅದ್ದುತ್ತೇನೆ. ಈ ನಗು, ಈ ಹುಮ್ಮಸ್ಸು, ಜಯದ ಸಂತೋಷಗಳನ್ನು ನಿಲ್ಲಿಸುತ್ತೇನೆ ಎಂದು ಧರ್ಮಜನನ್ನು ಜರೆದನು.

ಅರ್ಥ:
ಹಾನಿ: ಹಾಳು; ಕಡು: ಬಹಳ; ಸುಮ್ಮಾನ:ಸಂತೋಷ, ಹಿಗ್ಗು; ನಿಮಿಷ: ಕ್ಷಣ; ದುಮ್ಮಾನ: ದುಃಖ; ಶರಧಿ: ಸಾಗರ; ಅದ್ದು: ಮುಳುಗಿಸು; ತಿದ್ದು: ಸರಿಪಡಿಸು; ನಗೆ: ಹರ್ಷ; ಬಗೆ: ರೀತಿ; ವಿಜಯ: ಗೆಲುವು; ಅನುರಾಗ: ಪ್ರೀತಿ; ನಿಲಿಸು: ತಡೆ; ಸೂನು: ಮಗ; ಸೈರಿಸು: ತಾಳು; ಜರೆ: ಬಯ್ಯು, ನಿಂದಿಸು; ವಾಮ: ಎಡಭಾಗ; ಹಸ್ತ: ಕೈ;

ಪದವಿಂಗಡಣೆ:
ಹಾನಿ+ಎಮಗಾಯ್ತೆಂದು +ಕಡು+ಸು
ಮ್ಮಾನವುಕ್ಕಿತೆ+ ನಿಮಿಷದಲಿ+ ದು
ಮ್ಮಾನ+ ಶರಧಿಯೊಳ್+ಅದ್ದುವೆನು +ತಿದ್ದುವೆನು +ನಿನ್ನವರ
ಈ +ನಗೆಯನೀ +ಬಗೆಯನೀ +ವಿಜಯ
ಅನುರಾಗವ +ನಿಲಿಸುವೆನು +ಯಮ
ಸೂನು +ಸೈರಿಸೆನುತ್ತ+ ಜರೆದನು +ವಾಮ+ಹಸ್ತದಲಿ

ಅಚ್ಚರಿ:
(೧) ಸುಮ್ಮಾನ, ದುಮ್ಮಾನ – ವಿರುದ್ಧ ಪದಗಳು
(೨) ದುಃಖವನ್ನು ಓಡಿಸುವೆ ಎಂದು ಹೇಳುವ ಪರಿ – ನಿಮಿಷದಲಿ ದುಮ್ಮಾನ ಶರಧಿಯೊಳದ್ದುವೆನು

ಪದ್ಯ ೧೯: ಸೈನಿಕರನ್ನು ಹೇಗೆ ಎಚ್ಚರಿಸಿದರು?

ದೊರೆಯೊಳೊಬ್ಬನ ಹಾನಿ ಭಟರೆ
ಲ್ಲರಿಗೆ ದೊರೆ ದೊರೆ ತತ್ತರುಳಿದರು
ನೆರವು ಬಹುದೋರಂದವೊಮ್ಮುಖವೊಂದು ಸಂಕೇತ
ಉರವಣಿಸದಿರಿ ಕಂಡ ಮುಖದಲಿ
ಕರಿ ತುರಗ ರಥ ಪತ್ತಿ ರಣಕು
ಬ್ಬರಿಸದಿರಿ ಕೃತಸಮಯವೆಂದರು ಸಾರಿ ಸುಭಟರಿಗೆ (ಶಲ್ಯ ಪರ್ವ, ೨ ಸಂಧಿ, ೧೯ ಪದ್ಯ)

ತಾತ್ಪರ್ಯ:
ಒಬ್ಬ ಸೇನಾನಾಯಕನ ಸಾವು ಅವನ ಯೋಧರೆಲ್ಲರ ಸಾವಿಗೆ ಸಮ. ದೊರೆಯು ಯುದ್ಧಕ್ಕೆ ಬಂದರೆ ಉಳಿದವರೆಲ್ಲರೂ ಒಮ್ಮುಖವಾಗಿ ಒಂದೇ ಮನಸ್ಸಿನಿಮ್ದ ಅವನ ಸಹಾಯಕ್ಕೆ ಬರಬೇಕು. ನೋಡಿದೊಡನೆ ಮುನ್ನುಗ್ಗಬೇಡಿರಿ, ಚತುರಂಗ ಸೈನ್ಯದವರು ಯುದ್ಧಕ್ಕೆ ನುಗ್ಗಿ ಕೆಡಿಸಬೇಡಿರಿ, ಇದು ಯುದ್ಧದ ಸಮಯ ಎಂದು ಸುಭಟರೆಲ್ಲರನ್ನು ಎಚ್ಚರಿಸಿದರು.

ಅರ್ಥ:
ದೊರೆ: ರಾಜ; ಹಾನಿ: ನಾಶ; ಭಟ: ಸೈನಿಕ; ಉರುಳು: ಬೀಳು; ನೆರವು: ಸಹಾಯ; ಬಹು: ಬಹಳ; ತೋರು: ಗೋಚರಿಸು; ಮುಖ: ಆನನ; ಸಂಕೇತ: ಗುರುತು; ಉರವಣಿಸು: ಆತುರಿಸು; ಕಂಡು: ನೋದು; ಕರಿ: ಆನೆ; ತುರಗ: ಕುದುರೆ; ರಥ: ಬಂಡಿ; ಪತ್ತಿ: ಒಂದು ರಥ, ಒಂದು ಆನೆ, ಮೂರು ಕುದುರೆ ಮತ್ತು ಐದು ಕಾಲಾಳುಗಳಿಂದ ಕೂಡಿದ ಸೈನ್ಯದ ಚಿಕ್ಕ ಭಾಗ; ರಣ: ಯುದ್ಧಭೂಮಿ; ಉಬ್ಬರ: ಅತಿಶಯ, ಹೆಚ್ಚಳ; ಕೃತ: ಮಾಡಿದ, ಮುಗಿಸಿದ; ಸಮಯ: ಕಾಲ; ಸಾರು:ಹರಡು; ಸುಭಟ: ಪರಾಕ್ರಮಿ;

ಪದವಿಂಗಡಣೆ:
ದೊರೆಯೊಳ್+ಒಬ್ಬನ +ಹಾನಿ +ಭಟರೆ
ಲ್ಲರಿಗೆ +ದೊರೆ +ದೊರೆ +ತತ್ತ್+ಉರುಳಿದರು
ನೆರವು+ ಬಹುದೋರಂದವ್+ಒಮ್ಮುಖ+ಒಂದು +ಸಂಕೇತ
ಉರವಣಿಸದಿರಿ +ಕಂಡ +ಮುಖದಲಿ
ಕರಿ +ತುರಗ +ರಥ +ಪತ್ತಿ +ರಣಕ್
ಉಬ್ಬರಿಸದಿರಿ +ಕೃತ+ಸಮಯವೆಂದರು +ಸಾರಿ +ಸುಭಟರಿಗೆ

ಅಚ್ಚರಿ:
(೧) ಭಟ, ಸುಭಟ – ಪದಗಳ ಬಳಕೆ
(೨) ಉರವಣಿಸು, ಉಬ್ಬರಿಸು – ಸಾಮ್ಯಾರ್ಥ ಪದಗಳು

ಪದ್ಯ ೨೨: ದುರ್ಯೋಧನನು ಕೃಪಾಚಾರ್ಯರಲ್ಲಿ ಏನೆಂದು ಕೇಳಿಕೊಂಡನು?

ಸುರನದೀಜ ದ್ರೋಣ ಕೃಪರೀ
ಕುರುಬಲರಕೆ ಕಟ್ಟೊಡೆಯ ರವರಿ
ಬ್ಬರ ಪರೋಕ್ಷದಲಾರವಿಲ್ಲಿಯ ಹಾನಿವೃದ್ಧಿಗಳು
ಗುರುಸುತನೊ ಶಲ್ಯನೊ ಚಮೂಮು
ಖ್ಯರನು ನೀವೇ ಬೆಸಸಿಯೆಂದನು
ಧರಣಿಪತಿ ಕೇಳೈ ಕೃಪಾಚಾರ್ಯಂಗೆ ಕುರುರಾಯ (ಶಲ್ಯ ಪರ್ವ, ೧ ಸಂಧಿ, ೨೨ ಪದ್ಯ)

ತಾತ್ಪರ್ಯ:
ದುರ್ಯೋಧನನು ಮಾತನಾಡುತ್ತಾ, ಭೀಷ್ಮ, ದ್ರೋಣ, ಕೃಪಾಚಾರ್ಯರು ಈ ಸೇನೆಗೆ ಸ್ವಾಭಾವಿಕವಾಗಿ ಒಡೆಯರು. ಇಲ್ಲಿ ಹಾನಿವೃದ್ಧಿಗಳು ಅವರಿಲ್ಲದೆ ಸಂಭವಿಸುವುದಿಲ್ಲ. ಸೇನಾಧಿಪತಿಯು ಯಾರು? ಅಶ್ವತ್ಥಾಮನೋ, ಶಲ್ಯನೋ ಎಂದು ನೀವೇ ನಿರ್ಧರಿಸಿ ಹೇಳಿರಿ ಎಂದು ಕೃಪಾಚಾರ್ಯರನ್ನು ದುರ್ಯೋಧನನು ಕೇಳಿಕೊಂಡನು.

ಅರ್ಥ:
ಸುರನದೀಜ: ಗಂಗಾಪುತ್ರ; ಒಡೆಯ: ನಾಯಕ; ಪರೋಕ್ಷ: ಕಣ್ಣಿಗೆ ಕಾಣದಿರುವುದು; ಹಾನಿ: ನಷ್ಟ; ವೃದ್ಧಿ: ಹೆಚ್ಚಾಗು, ಅಭಿವೃದ್ಧಿ; ಸುತ: ಮಗ; ಚಮೂ: ಸೈನ್ಯ; ಮುಖ್ಯ: ಒಡೆಯ; ಬೆಸಸು: ಹೇಳು, ಆಜ್ಞಾಪಿಸು; ಧರಣಿಪತಿ: ರಾಜ;

ಪದವಿಂಗಡಣೆ:
ಸುರನದೀಜ +ದ್ರೋಣ +ಕೃಪರ್
ಈ+ಕುರುಬಲರಕೆ+ ಕಟ್ಟೊಡೆಯರ್ +ಅವರಿ
ಬ್ಬರ +ಪರೋಕ್ಷದಲ್+ಆರವ್+ಇಲ್ಲಿಯ +ಹಾನಿ+ವೃದ್ಧಿಗಳು
ಗುರುಸುತನೊ +ಶಲ್ಯನೊ +ಚಮೂ+ಮು
ಖ್ಯರನು +ನೀವೇ +ಬೆಸಸಿ+ಎಂದನು
ಧರಣಿಪತಿ+ ಕೇಳೈ +ಕೃಪಾಚಾರ್ಯಂಗೆ +ಕುರುರಾಯ

ಅಚ್ಚರಿ:
(೧) ಒಡೆಯ, ಮುಖ್ಯ – ಸಾಮ್ಯಾರ್ಥ ಪದ
(೨) ಸೇನಾಪತಿ ಎಂದು ಹೇಳಲು ಚಮೂಮುಖ್ಯ ಪದದ ಬಳಕೆ

ಪದ್ಯ ೫೨: ಅಶ್ವತ್ಥಾಮನು ಹೇಗೆ ಶಿಬಿರಕ್ಕೆ ಹಿಂದಿರುಗಿದನು?

ಏನು ಮಾಡುವೆನಿನ್ನು ಭಾಗ್ಯವಿ
ಹೀನನಕಟಾ ಕೌರವನು ಸುರ
ಧೇನು ನೆರೆ ಗೊಡ್ಡಾಯ್ತು ಸುರತರು ಕಾಡಮರನಾಯ್ತು
ಹಾನಿಯಿವದಿರಿಗೊಲಿದುದಾರಿ
ದ್ದೇನಹುದು ಪರದೈವದನುಸಂ
ಧಾನವತ್ತಲು ಸುಡಲೆನುತ ತಿರುಗಿದನು ಪಾಳೆಯಕೆ (ದ್ರೋಣ ಪರ್ವ, ೧೯ ಸಂಧಿ, ೫೨ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ನಾನಿನ್ನೇನು ಮಾಡಲಿ, ಕಾಮಧೇನು ಗೊಡ್ಡಾಯಿತು, ನಾರಾಯಣಾಸ್ತ್ರವು ನಿಷ್ಫಲವಾಯಿತು, ಕಲ್ಪವೃಕ್ಷವು ಕಾಡುಮರವಾಯಿತು. ಕೌರವನು, ಅಯ್ಯೋ ಭಾಗ್ಯಹೀನನು, ಇವರಿಗೆ ಹಾನಿಯು ಒಲಿದು ಬಂದರೆ ಯಾರಿದ್ದು ಏನು ಮಾಡಲು ಸಾಧ್ಯ, ಸುಡಲಿ, ಪರದೈವವು ಪಾಂಡವರತ್ತ ಒಲಿದಿದೆ, ಎಂದು ಚಿಂತಿಸುತ್ತಾ ಪಾಳೆಯಕ್ಕೆ ಹೋದನು.

ಅರ್ಥ:
ಭಾಗ್ಯ: ಮಂಗಳ; ವಿಹೀನ: ತೊರೆದ, ತ್ಯಜಿಸಿದ; ಅಕಟಾ: ಅಯ್ಯೋ; ಸುರಧೇನು: ಕಾಮಧೇನು; ನೆರೆ: ಗುಂಪು; ಗೊಡ್ಡು: ಗಬ್ಬವಾಗದ ಹಸು, ನಿಷ್ಫಲತೆ; ಸುರತರು: ಕಲ್ಪವೃಕ್ಷ; ಕಾಡು: ವನ; ಮರ: ತರು; ಹಾನಿ: ನಷ್ಟ; ಒಲಿ: ಒಪ್ಪು; ಪರದೈವ: ಪರಮಾತ್ಮ; ಅನುಸಂಧಾನ: ಪರಿಶೀಲನೆ; ಸುಡು: ದಹಿಸು; ತಿರುಗು: ಮರಳು; ಪಾಳೆಯ: ಬೀಡು, ಶಿಬಿರ;

ಪದವಿಂಗಡಣೆ:
ಏನು +ಮಾಡುವೆನ್+ಇನ್ನು +ಭಾಗ್ಯವಿ
ಹೀನನ್+ಅಕಟಾ +ಕೌರವನು +ಸುರ
ಧೇನು +ನೆರೆ +ಗೊಡ್ಡಾಯ್ತು +ಸುರತರು +ಕಾಡಮರನಾಯ್ತು
ಹಾನಿಯಿವದಿರಿಗ್+ಒಲಿದುದ್+ಆರಿ
ದ್ದೇನಹುದು +ಪರದೈವದ್+ಅನುಸಂ
ಧಾನವ್+ಅತ್ತಲು +ಸುಡಲೆನುತ +ತಿರುಗಿದನು +ಪಾಳೆಯಕೆ

ಅಚ್ಚರಿ:
(೧) ರೂಪಕದ ಪ್ರಯೋಗ – ಸುರಧೇನು ನೆರೆ ಗೊಡ್ಡಾಯ್ತು ಸುರತರು ಕಾಡಮರನಾಯ್ತು

ಪದ್ಯ ೬: ಅಶ್ವತ್ಥಾಮನು ಏನೆಂದು ಚಿಂತಿಸಿದನು?

ಏನಿದಚ್ಚರಿ ಕೌರವೇಂದ್ರನ
ಸೇನೆ ತಲೆಕೆಳಗಾಗುತಿದೆ ರಿಪು
ಸೇನೆ ಬೊಬ್ಬಿರಿದಾರುತಿದೆ ಮಡಿದಾತನಾವನನೊ
ಸೇನೆಗೊಡೆಯನು ಬೊಪ್ಪನಿದು ತಾ
ನೇನು ರಥವೇ ಬರಿದು ಬರುತಿದೆ
ಹಾನಿ ಜನಕಂಗಾಯ್ತೊ ಶಿವ ಶಿವ ಎಂದನಾ ದ್ರೌಣಿ (ದ್ರೋಣ ಪರ್ವ, ೧೯ ಸಂಧಿ, ೬ ಪದ್ಯ)

ತಾತ್ಪರ್ಯ:
ಶಿವ ಶಿವಾ ಏನಿದಾಶ್ಚರ್ಯ, ಕೌರವ ಸೈನ್ಯವು ಬುಡಬ್ಮೇಲಾಗಿದೆ, ಪಾಂಡವ ಸೇನೆಯು ಜೋರಾಗಿ ಗರ್ಜಿಸುತ್ತಿದೆ. ಯಾರು ಯುದ್ಧದಲ್ಲಿ ಮಡಿದರೋ ಏನೋ, ನನ್ನ ತಂದೆಯೇ ಸೇನಾಧಿಪತಿ, ಅವನ ರಥ ಬರಿದಾಗಿ ಬರುತ್ತಿದೆ, ತಂದೆಗೆ ಹಾನಿಯಾಯಿತೇ ಎಂದು ಅಶ್ವತ್ಥಾಮನು ಚಿಂತಿಸಿದನು.

ಅರ್ಥ:
ಅಚ್ಚರಿ: ಆಶ್ಚರ್ಯ; ಸೇನೆ: ಸೈನ್ಯ; ತಲೆಕೆಳಗೆ: ಉಲ್ಟ, ಏರುಪೇರು; ರಿಪು: ವೈರಿ; ಬೊಬ್ಬಿರಿ: ಗರ್ಜಿಸು; ಮಡಿ: ಸಾವು; ಒಡೆಯ: ನಾಯಕ; ಬೊಪ್ಪ: ತಂದೆ; ರಥ: ಬಂಡಿ; ಬರಿ: ಕಾಲಿ; ಬರುತಿದೆ: ಆಗಮಿಸು; ಹಾನಿ: ನಷ್ಟ; ಜನಕ: ತಂದೆ; ದ್ರೌಣಿ: ಅಶ್ವತ್ಥಾಮ;

ಪದವಿಂಗಡಣೆ:
ಏನಿದಚ್ಚರಿ +ಕೌರವೇಂದ್ರನ
ಸೇನೆ +ತಲೆಕೆಳಗಾಗುತಿದೆ +ರಿಪು
ಸೇನೆ +ಬೊಬ್ಬಿರಿದಾರುತಿದೆ +ಮಡಿದಾತನ್+ಆವನನೊ
ಸೇನೆಗ್+ಒಡೆಯನು +ಬೊಪ್ಪನಿದು +ತಾ
ನೇನು +ರಥವೇ +ಬರಿದು +ಬರುತಿದೆ
ಹಾನಿ+ ಜನಕಂಗಾಯ್ತೊ +ಶಿವ+ ಶಿವ +ಎಂದನಾ +ದ್ರೌಣಿ

ಅಚ್ಚರಿ:
(೧) ಬೊಪ್ಪ, ಜನಕ – ಸಮಾನಾರ್ಥಕ ಪದ

ಪದ್ಯ ೧: ಕೌರವ ಪಾಂಡವ ಸೈನ್ಯದಲ್ಲಿ ಏನು ತೋರುತ್ತಿತ್ತು?

ನೀನು ನೆರಹಿದ ಸುಕೃತ ಫಲವದ
ನೇನ ಹೇಳುವೆನಿತ್ತಲುಗ್ಗಡ
ದಾನೆ ಬಿದ್ದುದು ಕಾದಿ ನಸು ಸೊಪ್ಪಾದುದರಿಸೇನೆ
ಧ್ಯಾನವಿತ್ತಲು ರಾಗವತ್ತಲು
ಮೋನವಿತ್ತಲು ರಭಸವತ್ತಲು
ಹಾನಿಯಿತ್ತಲು ವೃದ್ಧಿಯತ್ತಲು ಭೂಪ ಕೇಳೆಂದ (ದ್ರೋಣ ಪರ್ವ, ೪ ಸಂಧಿ, ೧ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಕೇಳು, ನೀನು ಗಳಿಸಿದ ಪುಣ್ಯದ ಫಲವನ್ನು ಏನೆಂದು ಹೇಳಲಿ, ಮಹಾಗಜವಾದ ಸುಪ್ರತೀಕವು ಸತ್ತುಬಿದ್ದಿತು. ಯುದ್ಧದಲ್ಲಿ ಶತ್ರುಗಳ ಸೈನ್ಯಕ್ಕೆ ಸ್ವಲ್ಪ ಹಾನಿಯಾಯಿತು, ಅವರ ಸೈನ್ಯದಲ್ಲಿ ಅತಿ ಸಂತೋಷವಿದ್ದರೆ, ನಮ್ಮಲ್ಲಿ ಚಿಂತೆ, ಅಲ್ಲಿ ರಭಸ ಆವೇಶವಿದ್ದರೆ ಇಲ್ಲಿ ಮೌನ, ಅಲ್ಲಿ ಏಳಿಗೆ ಅಭ್ಯುದಯ ಕಾಣಿಸಿದರೆ ಇಲ್ಲಿ ಹಾನಿ ತೋರುತ್ತಿತ್ತು.

ಅರ್ಥ:
ನೆರಹು: ಗುಂಪು; ಸುಕೃತ: ಒಳ್ಳೆಯ ಕೆಲಸ; ಫಲ: ಪ್ರಯೋಜನ; ಹೇಳು: ತಿಳಿಸು; ಉಗ್ಗಡ: ಉತ್ಕಟತೆ, ಅತಿಶಯ; ಆನೆ: ಗಜ; ಬಿದ್ದು: ಉರುಳು; ಕಾದು: ಹೋರಾಡು; ನಸು: ಕೊಂಚ, ಸ್ವಲ್ಪ; ಸೊಪ್ಪಾದು: ಹಾನಿಯಾಗು; ಅರಿ: ವೈರಿ; ಸೇನೆ: ಸೈನ್ಯ; ಧ್ಯಾನ: ಆತ್ಮಚಿಂತನೆ; ರಾಗ:ಹಿಗ್ಗು, ಸಂತೋಷ; ಮೋನ: ಮೌನ; ರಭಸ: ವೇಗ; ಹಾನಿ: ನಾಶ; ವೃದ್ಧಿ: ಹೆಚ್ಚಳ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ನೀನು +ನೆರಹಿದ +ಸುಕೃತ+ ಫಲವದನ್
ಏನ +ಹೇಳುವೆನ್+ಇತ್ತಲ್+ಉಗ್ಗಡದ್
ಆನೆ +ಬಿದ್ದುದು +ಕಾದಿ +ನಸು +ಸೊಪ್ಪಾದುದ್+ಅರಿಸೇನೆ
ಧ್ಯಾನವಿತ್ತಲು +ರಾಗವತ್ತಲು
ಮೋನವಿತ್ತಲು +ರಭಸವತ್ತಲು
ಹಾನಿಯಿತ್ತಲು +ವೃದ್ಧಿಯತ್ತಲು +ಭೂಪ +ಕೇಳೆಂದ

ಅಚ್ಚರಿ:
(೧) ಇತ್ತಲು ಅತ್ತಲು ಪದದ ಬಳಕೆ
(೨) ಎಂಥಾ ಪುಣ್ಯನಿನ್ನದು ಎಂದು ಹಂಗಿಸುವ ಪರಿ – ನೀನು ನೆರಹಿದ ಸುಕೃತ ಫಲವದನೇನ ಹೇಳುವೆನ್

ಪದ್ಯ ೩೧: ಯಾರಿದ್ದಿದ್ದರೆ ಯುಧಿಷ್ಠಿರನಿಗೆ ಈ ವಿಪತ್ತು ಬರದಂತಾಗುತ್ತಿತ್ತು?

ಏನನೆಂಬೆನು ನಮ್ಮ ಪುಣ್ಯದ
ಹಾನಿ ತಲೆದೋರಿದರೆ ಭೀಮನ
ಸೂನುವಿರಲಭಿಮನ್ಯು ವಿರಲೆವಗೀ ವಿಪತ್ತಹುದೆ
ಆ ನದೀಜ ದ್ರೋಣರಲಿ ತಾ
ಹಾನಿಯನು ಮಿಗೆ ಕಂಡೆನೇ ನೆರೆ
ಹೀನನು ಕಂಡಾದಡೆಯು ಬದುಕುವುದು ಲೇಸೆಂದ (ಕರ್ಣ ಪರ್ವ, ೧೬ ಸಂಧಿ, ೩೧ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ತನ್ನ ನೋವನ್ನು ತೋಡಿಕೊಳ್ಳುತ್ತಾ, ನಮ್ಮ ಪುಣ್ಯಕ್ಕೆ ಹಾನಿಯಾದರೆ ಏನೆಂದು ಹೇಳಬೇಕು! ಘಟೋತ್ಕಚ, ಅಭಿಮನ್ಯುಗಳಿದ್ದರೆ ನಮಗೆ ಈ ವಿಪತ್ತು ಬರುತ್ತಿತ್ತೆ? ಭೀಷ್ಮ ದ್ರೋಣರಿದ್ದಾಗಲೂ ನನಗಿಂತಹ ಕಷ್ಟ ಬರಲಿಲ್ಲ, ಇಂತಹ ಹೀನನನ್ನು ಕಂಡಾದರೂ ಬದುಕಬೇಕಾದುದು ಒಳೆತೆ ಎಂದು ತನ್ನ ನೋವನ್ನು ಅರ್ಜುನನ ಮೇಲಿನ ಕೋಪವನ್ನು ಹೊರಹಾಕಿದ.

ಅರ್ಥ:
ಎಂಬೆನು: ಹೇಳಲಿ; ಪುಣ್ಯ: ಸದಾಚಾರ; ಹಾನಿ: ನಾಶ; ತಲೆದೋರು: ಕಾಣಿಸು, ಬಂದು; ಸೂನು: ಮಗ; ವಿಪತ್ತು: ಆಪತ್ತು, ತೊಂದರೆ; ನದೀಜ: ಭೀಷ್ಮ; ಮಿಗೆ: ಅಧಿಕವಾಗಿ, ಮತ್ತು; ಕಂಡು: ನೋಡು; ನೆರೆ: ಸಮೀಪ, ಹತ್ತಿರ; ಹೀನ: ಕೆಟ್ಟ, ದುಷ್ಟ, ತೊರೆದ; ಕಂಡು: ನೋಡು; ಬದುಕು: ಜೀವಿಸು; ಲೇಸು: ಒಳಿತು;

ಪದವಿಂಗಡಣೆ:
ಏನನೆಂಬೆನು+ ನಮ್ಮ +ಪುಣ್ಯದ
ಹಾನಿ +ತಲೆದೋರಿದರೆ+ ಭೀಮನ
ಸೂನುವಿರಲ್+ಅಭಿಮನ್ಯು +ವಿರಲ್+ಎವಗೀ+ ವಿಪತ್ತಹುದೆ
ಆ +ನದೀಜ +ದ್ರೋಣರಲಿ +ತಾ
ಹಾನಿಯನು +ಮಿಗೆ +ಕಂಡೆನೇ+ ನೆರೆ
ಹೀನನು +ಕಂಡಾದಡೆಯು +ಬದುಕುವುದು +ಲೇಸೆಂದ

ಅಚ್ಚರಿ:
(೧) ಧರ್ಮಜನು ತನ್ನ ಕೋಪವನ್ನು ಅರ್ಜುನನ ಮೇಲೆ ಮಾತಿನ ಮೂಲಕ ತೋರಿಸುತ್ತಿರುವುದು

ಪದ್ಯ ೨೪: ಕೃಷ್ಣನು ಧೃತರಾಷ್ಟ್ರನಿಗೆ ಏನು ಹೇಳಿದ?

ಕೆಡಿಸದಿರು ಧೃತರಾಷ್ಟ್ರ ಕುಲದೊಳು
ಕೊಡಲಿಗಾವನು ಹೆತ್ತು ವಂಶವ
ಕೆಡಿಸಿ ಕಳೆದಡೆ ಹಾನಿವೃದ್ಧಿಗಳೆಲ್ಲ ನಿನಗಹುದು
ನುಡಿಗೆ ನೀಂ ಮತಗುಡದೆ ಗರ್ವದ
ಗಡಣದೊಳು ಮುಂದರಿಯದವದಿರ
ನೊಡಬಡಿಸಿ ಪಾಂಡವರ ಸ್ವಾಮ್ಯವನೀಸಿಕೊಡಿಯೆಂದ (ಉದ್ಯೋಗ ಪರ್ವ, ೯ ಸಂಧಿ, ೨೪ ಪದ್ಯ)

ತಾತ್ಪರ್ಯ:
ಎಲೈ ಧೃತರಾಷ್ಟ್ರನೇ, ನೀನ್ನ ಕುಲಕ್ಕೆ ಹಾನಿಮಾಡಬೇಡ. ಈ ಕೊಡಲಿಯ ಕಾವಿನಿಂದ ನಿನ್ನ ಹೆತ್ತ ವಂಶವನ್ನು ನಶಿಸುವಂತೆ ಮಾಡಬೇಡ. ವಂಶವನ್ನು ನಾಶಮಾಡಿದರೆ ಅದರ ಹಾನಿಯು ನಿನ್ನದು, ಅದನ್ನು ಉಳಿಸಿದರೆ ಅದರ ಹೆಚ್ಚಳವೂ ನಿನ್ನದೆ. ಈ ನಿನ್ನ ಮಕ್ಕಳ ಗರ್ವದ ಮಾತಿಗೆ ಕಿವಿಗೊಡಬೇಡ, ಮುಂದನ್ನರಿಯದ ನಿನ್ನ ಮಕ್ಕಳನ್ನು ಒಪ್ಪಿಸು, ಪಾಂಡವರ ರಾಜ್ಯದ ಒಡೆತನವನ್ನು ಅವರಿಗೆ ನೀಡು ಎಂದು ಶ್ರೀಕೃಷ್ಣನು ಧೃತರಾಷ್ಟ್ರನಿಗೆ ತಿಳಿಸಿದನು.

ಅರ್ಥ:
ಕೆಡಿಸು: ಹಾನಿಮಾಡು; ಕುಲ: ವಂಶ; ಕೊಡಲಿ: ಪರಶು; ಹೆತ್ತು: ಹುಟ್ಟಿಸು; ಕಳೆ: ವ್ಯರ್ಥವಾದುದು; ಹಾನಿ: ನಷ್ಟ; ವೃದ್ಧಿ: ಹೆಚ್ಚಾಗು; ನುಡಿ: ಮಾತು; ಮತ: ಅಭಿಪ್ರಾಯ; ಗರ್ವ: ಅಹಂಕಾರ; ಗಡಣ: ಕೂಡಿಸುವಿಕೆ; ಮುಂದು: ಭವಿಷ್ಯ; ಅರಿ: ತಿಳಿ; ಅವದಿರು: ಅವರು; ಒಡಬಡಿಸು: ಒಪ್ಪಿಸು; ಸ್ವಾಮ್ಯ: ಒಡೆತನ; ಈಸಿ: ಪಡೆದು; ಕೊಡು: ನೀಡು; ಕಾವು: ಬಿಸಿ, ಶಾಖ;

ಪದವಿಂಗಡಣೆ:
ಕೆಡಿಸದಿರು+ ಧೃತರಾಷ್ಟ್ರ+ ಕುಲದೊಳು
ಕೊಡಲಿ+ಕಾವನು+ ಹೆತ್ತು +ವಂಶವ
ಕೆಡಿಸಿ+ ಕಳೆದಡೆ+ ಹಾನಿ+ವೃದ್ಧಿಗಳೆಲ್ಲ +ನಿನಗಹುದು
ನುಡಿಗೆ +ನೀಂ +ಮತಗುಡದೆ +ಗರ್ವದ
ಗಡಣದೊಳು +ಮುಂದ್+ಅರಿಯದ್+ಅವದಿರನ್
ಒಡಬಡಿಸಿ+ ಪಾಂಡವರ+ ಸ್ವಾಮ್ಯವನ್+ಈಸಿ+ಕೊಡಿಯೆಂದ

ಅಚ್ಚರಿ:
(೧) ಸಾಲು ಪದಗಳ ಬಳಕೆ – ‘ಕ’ಕುಲದೊಳು ಕೊಡಲಿಗಾವನು; ನಿನಗಹುದು ನುಡಿಗೆ ನೀಂ
(೨) ಕುಲ, ವಂಶ – ಸಮನಾರ್ಥಕ ಪದ
(೩) ಕೆಡಿಸಿ – ೧, ೩ ಸಾಲಿನ ಮೊದಲ ಪದ