ಪದ್ಯ ೭೧: ಪಾಂಡವರು ಯಾರನ್ನು ಒಲಿಸಿದರು?

ಹಲಬರಸುರರು ಮಡಿದರಿವನ
ಗ್ಗಳೆಯನಿರುಳಿನ ಬವರದಾಯತ
ತಿಳಿವುದೀತಂಗೆನುತಲಾ ದ್ರೋಣಾದಿ ನಾಯಕರು
ಅಳುಕಿದರು ಬಳಿಕೇನು ಭಕುತಿಯ
ಲೊಲಿಸಿದರಲೈ ಪಾಂಡವರು ಯದು
ಕುಲಲಲಾಮನನಮಳ ಗದುಗಿನ ವೀರನರಯಣನ (ದ್ರೋಣ ಪರ್ವ, ೧೫ ಸಂಧಿ, ೭೧ ಪದ್ಯ)

ತಾತ್ಪರ್ಯ:
ಇವನಿಂದ ಅನೇಕ ದೈತ್ಯರು ಮಡಿದರು, ರಾತ್ರಿಯುದ್ಧದ ಗುಟ್ಟು ಇವನಿಗೆ ಗೊತ್ತಿದೆ ಎಂದು ದ್ರೋಣನೇ ಮೊದಲಾದ ನಾಯಕರು ಹೆದರಿದರು. ಧೃತರಾಷ್ಟ್ರ ಹೇಳಲು ಇನ್ನೇನು ಉಳಿದಿದೆ, ಯದುಕುಲ ಭೂಷಣನೂ, ನಿರ್ಮಲನೂ ಆದ ಗದುಗಿನ ವೀರ ನಾಯಾರಣನನ್ನು ಪಾಂಡವರು ಭಕ್ತಿಯಿಂದ ಒಲಿಸಿದರು.

ಅರ್ಥ:
ಹಲಬರು: ಅನೇಕ; ಅಸುರ: ರಾಕ್ಷಸ; ಮಡಿ: ಸಾವನ್ನು ಹೊಂದು; ಅಗ್ಗಳೆ: ಶ್ರೇಷ್ಠ; ಇರುಳು: ರಾತ್ರಿ; ಬವರ: ಯುದ್ಧ; ಆಯತ: ವಿಶಾಲವಾದ; ನಾಯಕ: ಒಡೆಯ; ಅಳುಕು: ಹೆದರು; ಬಳಿಕ: ನಂತರ; ಭಕುತಿ: ಗುರು ದೈವಗಳಲ್ಲಿ ಶ್ರದ್ಧೆ; ಒಲಿಸು: ಪ್ರೀತಿ; ಕುಲ: ವಂಶ; ಲಲಾಮ: ಶ್ರೇಷ್ಠ, ತಿಲಕ; ಅಮಳ: ನಿರ್ಮಲ;

ಪದವಿಂಗಡಣೆ:
ಹಲಬರ್+ಅಸುರರು +ಮಡಿದರ್+ಇವನ್
ಅಗ್ಗಳೆಯನ್+ಇರುಳಿನ +ಬವರದ್+ಆಯತ
ತಿಳಿವುದ್+ಈತಂಗೆನುತಲ್+ಆ+ ದ್ರೋಣಾದಿ +ನಾಯಕರು
ಅಳುಕಿದರು +ಬಳಿಕೇನು +ಭಕುತಿಯಲ್
ಒಲಿಸಿದರಲೈ +ಪಾಂಡವರು +ಯದು
ಕುಲ+ಲಲಾಮನನ್+ಅಮಳ +ಗದುಗಿನ+ ವೀರನರಯಣನ

ಅಚ್ಚರಿ:
(೧) ಕೃಷ್ಣನನ್ನು ಹೊಗಳಿದ ಪರಿ – ಯದುಕುಲಲಲಾಮನನಮಳ

ಪದ್ಯ ೯: ದ್ರೋಣರಿಗೆ ಭೀಮನು ಹೇಗೆ ಉತ್ತರಿಸಿದನು?

ಗುರುವೆಮಗೆ ನೀವ್ ನಿಮಗೆ ನಾವ್ ಡಿಂ
ಗರಿಗರೆಮ್ಮಿತ್ತಂಡವಿದರಲಿ
ವರ ವಿನೀತರು ಕೆಲರು ಕೆಲಬರು ಧೂರ್ತರಾಗಿಹರು
ನರ ಯುಧಿಷ್ಠಿರ ನಕುಳ ಸಹದೇ
ವರವೊಲೆನಗಿಲ್ಲತಿ ಭಕುತಿ ಸಂ
ಗರದೊಳೆನ್ನಯ ದಂಡಿ ಹೊಸಪರಿ ಬೇಡ ಮರಳೆಂದ (ದ್ರೋಣ ಪರ್ವ, ೧೩ ಸಂಧಿ, ೯ ಪದ್ಯ)

ತಾತ್ಪರ್ಯ:
ಭೀಮನು ಉತ್ತರಿಸುತ್ತಾ, ನೀವು ನಮ್ಮ ಗುರುಗಳು, ನಾವು ನಿಮ್ಮ ಸೇವಕರು, ನಮ್ಮಲ್ಲಿ ಎರಡು ಪಂಗಡಗಳಿವೆ. ಕೆಲವರು ವಿನಯಪರರು, ಕೆಲವರು ಧೂರ್ತರು. ಧರ್ಮಜ, ಅರ್ಜುನ, ನಕುಲ ಸಹದೇವರಂತೆ ನನಗೆ ನಿಮ್ಮಲ್ಲಿ ಬಹಳ ಭಕ್ತಿಯಿಲ್ಲ. ಯುದ್ಧದಲ್ಲಿ ನನ್ನ ವರಸೆಯು ಹೊಸ ರೀತಿಯದ್ದು, ನೀವು ಹಿಂದಿರುಗಿ ಎಂದು ಹೇಳಿದನು.

ಅರ್ಥ:
ಗುರು: ಆಚಾರ್ಯ; ಡಿಂಗರಿಗ: ಭಕ್ತ; ತಂಡ: ಗುಂಪು; ವರ: ಶ್ರೇಷ್ಠ; ವಿನೀತ: ಸೌಜನ್ಯದಿಂದ ಕೂಡಿದ ವ್ಯಕ್ತಿ; ಧೂರ್ತ: ದುಷ್ಟ; ನರ: ಅರ್ಜುನ; ಭಕುತಿ: ಹಿರಿಯರಲ್ಲಿ ತೋರುವ ಆದರ; ಸಂಗರ: ಯುದ್ಧ; ದಂಡಿ: ಘನತೆ, ಹಿರಿಮೆ; ಹೊಸ: ನವೀನ; ಪರಿ: ರೀತಿ; ಬೇಡ: ತ್ಯಜಿಸು; ಮರಳು: ಹಿಂದಿರುಗು;

ಪದವಿಂಗಡಣೆ:
ಗುರುವೆಮಗೆ +ನೀವ್ +ನಿಮಗೆ+ ನಾವ್+ ಡಿಂ
ಗರಿಗರ್+ಎಮ್ಮಿತ್ತಂಡವ್+ಇದರಲಿ
ವರ+ ವಿನೀತರು +ಕೆಲರು +ಕೆಲಬರು +ಧೂರ್ತರಾಗಿಹರು
ನರ +ಯುಧಿಷ್ಠಿರ +ನಕುಳ +ಸಹದೇ
ವರವೊಲ್+ಎನಗಿಲ್ಲ್+ಅತಿ +ಭಕುತಿ +ಸಂ
ಗರದೊಳ್+ಎನ್ನಯ +ದಂಡಿ +ಹೊಸಪರಿ +ಬೇಡ +ಮರಳೆಂದ

ಅಚ್ಚರಿ:
(೧) ವಿನೀತ, ಧೂರ್ತ – ವಿರುದ್ಧಾರ್ಥಕ ಪದ

ಪದ್ಯ ೧೭: ಭೀಷ್ಮನು ಪಾಂಡವರನ್ನು ಹೇಗೆ ಬರೆಮಾಡಿಕೊಂಡನು?

ನಗುತ ಹರಿ ಗಂಗಾಕುಮಾರನ
ನೆಗಹಿದನು ಬಳಿಕಿವರು ರತುನಾ
ಳಿಗಳ ಕಾಣಿಕೆಯಿತ್ತು ಮೈಯಿಕ್ಕಿದವರು ಭಕುತಿಯಲಿ
ತೆಗೆದು ಬಿಗಿಯಪ್ಪಿದನು ಯಮಜಾ
ದಿಗಳ ಮನ್ನಿಸಿ ವೀಳೆಯವನಿ
ತ್ತೊಗುಮಿಗೆಯ ಹರುಷದಲಿ ಹೊಂಪುಳಿಯೋದನಾ ಭೀಷ್ಮ (ಭೀಷ್ಮ ಪರ್ವ, ೭ ಸಂಧಿ, ೧೭ ಪದ್ಯ)

ತಾತ್ಪರ್ಯ:
ಶ್ರೀ ಕೃಷ್ಣನು ನಗುತ್ತಾ ಭೀಷ್ಮನನ್ನೆತ್ತಿದನು. ಬಳಿಕ ಪಾಂಡವರು ಭೀಷ್ಮನಿಗೆ ಉತ್ತಮ ರತ್ನಗಳನ್ನು ಕಾಣಿಕೆಯಾಗಿ ಕೊಟ್ಟು ಭಕ್ತಿಯಿಂದ ನಮಸ್ಕರಿಸಿದರು. ಭೀಷ್ಮನು ಅವರನ್ನು ಆಲಿಂಗಿಸಿಕೊಂಡು ವೀಳೇಯವನ್ನಿತ್ತು ಪುರಸ್ಕರಿಸಿ ಸಂತೋಷಗೊಂಡನು.

ಅರ್ಥ:
ನಗು: ಸಂತಸ; ಹರಿ: ಕೃಷ್ಣ; ಕುಮಾರ: ಪುತ್ರ, ಮಗ; ನೆಗಹು: ಮೇಲೆತ್ತು; ಬಳಿಕ: ನಂತರ; ರತುನಾಳಿ: ಬೆಲೆಬಾಳುವ ಮುತ್ತುಗಳು; ಕಾಣಿಕೆ: ಉಡುಗೊರೆ; ಮೈಯಿಕ್ಕು: ನಮಸ್ಕರಿಸು; ಭಕುತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ತೆಗೆ: ಹೊರತರು; ಅಪ್ಪು: ಆಲಿಂಗನ; ಯಮಜ: ಧರ್ಮಜ; ಮನ್ನಿಸು: ಗೌರವಿಸು; ವೀಳೆಯ: ಒಪ್ಪಿಗೆ ಕೊಡು, ಸನ್ಮಾನ ಮಾಡು; ಒಗುಮಿಗೆ: ಉತ್ಸಾಹ, ಸಂತೋಷ; ಹರುಷ: ಸಂತಸ; ಹೊಂಪುಳಿ: ಹಿಗ್ಗು, ಸಂತಸ;

ಪದವಿಂಗಡಣೆ:
ನಗುತ +ಹರಿ+ ಗಂಗಾಕುಮಾರನ
ನೆಗಹಿದನು +ಬಳಿಕಿವರು +ರತುನಾ
ಳಿಗಳ +ಕಾಣಿಕೆಯಿತ್ತು +ಮೈಯಿಕ್ಕಿದವರು +ಭಕುತಿಯಲಿ
ತೆಗೆದು +ಬಿಗಿ+ಅಪ್ಪಿದನು +ಯಮಜಾ
ದಿಗಳ+ ಮನ್ನಿಸಿ +ವೀಳೆಯವನಿತ್ತ್
ಒಗುಮಿಗೆಯ +ಹರುಷದಲಿ +ಹೊಂಪುಳಿಯೋದನಾ+ ಭೀಷ್ಮ

ಅಚ್ಚರಿ:
(೧) ನಗು, ಹರುಷ, ಹೊಂಪುಳಿ – ಸಾಮ್ಯಾರ್ಥ ಪದ

ಪದ್ಯ ೧೮: ಮತ್ಸ್ಯ ಭೂಪನು ಹೇಗೆ ವಂದಿಸಿದನು?

ಬಗೆದೆನಪರಾಧವನು ಕರುಣಾ
ಳುಗಳ ಬಲ್ಲಹ ನೀನು ನಿನ್ನಂ
ಘ್ರಿಗಳಿಗೀತಲೆ ಬಂಟ ನೀನಿದ ಕಾಯಬೇಕೆನುತ
ಮಿಗೆ ಭಕುತಿ ಭಾವದಲಿ ನಿಜಮಂ
ತ್ರಿಗಳು ಮಕ್ಕಳು ಸಹಿತ ಮನ ನಂ
ಬುಗೆಯ ಮೆರೆದನು ಮತ್ಸಭೂಪ ಮಹೀಶನೆದುರಿನಲಿ (ವಿರಾಟ ಪರ್ವ, ೧೧ ಸಂಧಿ, ೧೮ ಪದ್ಯ)

ತಾತ್ಪರ್ಯ:
ಎಲೈ ದೊರೆಯೆ, ನಾನು ನಿನಗೆ ಅಪರಾಧವನ್ನು ಮಾಡಿದೆ, ನೀನು ಕರುಣಾಶಾಲಿಗಳ ದೊರೆ. ನನ್ನ ತಲೆಯು ನಿನಗೆ ಸೇವಕ. ಇದನ್ನು ಕಾಪಾಡು, ಎಂದು ಹೇಳಿ ವಿರಾಟನು ಮಂತ್ರಿಗಳು ಮಕ್ಕಳ ಸಹಿತ ಧರ್ಮಜನ ಮನಸ್ಸನ್ನು ಸಮಾಧಾನ ಪಡಿಸಿ ಒಲಿಸಿಕೊಂಡನು.

ಅರ್ಥ:
ಬಗೆ: ಯೋಚನೆ, ಕ್ರಮ; ಅಪರಾಧ: ತಪ್ಪು; ಕರುಣಾಳು: ದಯೆಯಿಂದ ಕೂಡಿದವ; ಬಲ್ಲಹ: ಯಜಮಾನ; ಅಂಘ್ರಿ: ಪಾದ; ಬಂಟ: ಸೇವಕ ಕಾಯು: ರಕ್ಷಿಸು; ಮಿಗೆ: ಮತ್ತು, ಅಧಿಕವಾಗಿ; ಭಕುತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಭಾವ: ಅಂತರ್ಗತ ಅರ್ಥ; ಮಂತ್ರಿ: ಸಚಿವ; ಮಕ್ಕಳು: ಸುತರು; ಸಹಿತ: ಜೊತೆ; ಮನ: ಮನಸ್ಸು; ನಂಬು: ವಿಶ್ವಾಸವಿಡು; ಮೆರೆ: ಹೊಳೆ, ಪ್ರಕಾಶಿಸು; ಭೂಪ: ರಾಜ; ಮಹೀಶ: ರಾಜ; ಎದುರು: ಮುಂದೆ;

ಪದವಿಂಗಡಣೆ:
ಬಗೆದೆನ್+ಅಪರಾಧವನು+ ಕರುಣಾ
ಳುಗಳ+ ಬಲ್ಲಹ+ ನೀನು +ನಿನ್ನಂ
ಘ್ರಿಗಳಿಗ್+ಈ+ತಲೆ+ ಬಂಟ +ನೀನ್+ಇದ+ ಕಾಯಬೇಕೆನುತ
ಮಿಗೆ +ಭಕುತಿ +ಭಾವದಲಿ +ನಿಜ+ಮಂ
ತ್ರಿಗಳು +ಮಕ್ಕಳು +ಸಹಿತ +ಮನ +ನಂ
ಬುಗೆಯ +ಮೆರೆದನು +ಮತ್ಸಭೂಪ +ಮಹೀಶನ್+ಎದುರಿನಲಿ

ಅಚ್ಚರಿ:
(೧) ಭೂಪ, ಮಹೀಶ – ಸಮನಾರ್ಥಕ ಪದ
(೨) ಧರ್ಮಜನನ್ನು ಹೊಗಳುವ ಪರಿ – ಕರುಣಾಳುಗಳ ಬಲ್ಲಹ ನೀನು

ಪದ್ಯ ೩೦: ದ್ರೌಪದಿಯು ಯಾರನ್ನು ಕರೆದಳು?

ಅಗಿದು ಬೆಂಬತ್ತಿದಡೆ ಮುನಿ ಮೂ
ಜಗವನೆಲ್ಲವ ತೊಳಲಿ ಭಕುತಿಯ
ಬಿಗುಹಿನಲಿ ಮೈಯಿಕ್ಕಿ ಶ್ರುತಿಶೀರ್ಷೋಕ್ತ ರೀತಿಯಲಿ
ಹೊಗಳಿದೊಡೆ ಹಿಂಗಿದವಲಾ ಸುರ
ರುಗಳುಘೇಯೆನಲಂಬರೀಷನ
ಬೆಗಡ ಬಿಡಿಸಿದ ಕೃಷ್ಣ ಮೈದೋರೆಂದಳಿಂದು ಮುಖಿ (ಅರಣ್ಯ ಪರ್ವ, ೧೭ ಸಂಧಿ, ೩೦ ಪದ್ಯ)

ತಾತ್ಪರ್ಯ:
ಸುದರ್ಶನ ಚಕ್ರವು ಬೆನ್ನು ಹತ್ತಲು ದೂರ್ವಾಸನು ಮೂರು ಲೋಕಗಳನ್ನು ಸುತ್ತಿ ತಪ್ಪಿಸಿಕೊಳ್ಳಲಾರದೆ ವೇದ ಶೀರ್ಷೋಕ್ತ (ಉಪನಿಷತ್ತುಗಳು) ರೀತಿಯಲ್ಲಿ ನಿನ್ನನ್ನು ಹೊಗಳಿದನು. ಆಗ ಚಕ್ರವು ಹಿಂದೆಗೆದು ಹೋಯಿತು. ಅಂಬರೀಷನೂ ಭಯಮುಕ್ತನಾದನು. ಅಂಬರೀಷನ ಭಯವನ್ನು ಬಿಡಿಸಿದ ಕೃಷ್ಣನೇ, ಇಲ್ಲಿಗೆ ಬಾ ಎಂದು ದ್ರೌಪದಿಯು ಪ್ರಾರ್ಥಿಸಿದಳು.

ಅರ್ಥ:
ಅಗಿ: ಹೆದರು, ಆವರಿಸು; ಬೆಂಬತ್ತು: ಹಿಂದೆ ಬೀಳು; ಮುನಿ: ಋಷಿ; ಮೂಜಗ: ಮೂರು ಲೋಕ; ತೊಳಲು: ಬವಣೆ, ಸಂಕಟ; ಭಕುತಿ: ದೇವರಲ್ಲಿ ತೋರುವ ನಿಷ್ಠೆ; ಬಿಗುಹು: ಬಿಗಿ; ಮೈ: ತನು; ಮೈಯಿಕ್ಕು: ಬಾಗು, ನಮಸ್ಕರಿಸು; ಶ್ರುತಿ: ವೇದ; ಶೀರ್ಷ: ತಲೆ, ಅಗ್ರ; ಉಕ್ತಿ: ನುಡಿ; ಶ್ರುತಿಶೀರ್ಷೋಕ್ತ: ಉಪನಿಷತ್ತು; ರೀತಿ: ಶೈಲಿ; ಹೊಗಳು: ಪ್ರಶಂಶಿಸು; ಹಿಂಗಿದ: ಹಿಂತಿರುಗು; ಸುರರು: ದೇವತೆಗಳು; ಉಘೇ: ಜಯಘೋಷ; ಬೆಗಡು: ಆಶ್ಚರ್ಯ, ಬೆರಗು; ಬಿಡಿಸು: ಹೋಗಲಾಡಿಸು; ಮೈದೋರು: ಗೋಚರಿಸು; ಇಂದುಮುಖಿ: ಚಂದ್ರನಮ್ತ ಮುಖವುಳ್ಳವಳು (ದ್ರೌಪದಿ);

ಪದವಿಂಗಡಣೆ:
ಅಗಿದು +ಬೆಂಬತ್ತಿದಡೆ +ಮುನಿ +ಮೂ
ಜಗವನೆಲ್ಲವ +ತೊಳಲಿ +ಭಕುತಿಯ
ಬಿಗುಹಿನಲಿ +ಮೈಯಿಕ್ಕಿ +ಶ್ರುತಿ+ಶೀರ್ಷ+ ಉಕ್ತ +ರೀತಿಯಲಿ
ಹೊಗಳಿದೊಡೆ +ಹಿಂಗಿದವಲಾ +ಸುರ
ರುಗಳ್+ಉಘೇ+ಎನಲ್+ಅಂಬರೀಷನ
ಬೆಗಡ+ ಬಿಡಿಸಿದ +ಕೃಷ್ಣ +ಮೈದೋರೆಂದಳ್+ಇಂದುಮುಖಿ

ಅಚ್ಚರಿ:
(೧) ದೂರ್ವಾಸನು ಸುದರ್ಶನ ಚಕ್ರದಿಂದ ತಪ್ಪಿಸಿಕೊಂಡ ಬಗೆ – ಮೂಜಗವನೆಲ್ಲವ ತೊಳಲಿ ಭಕುತಿಯ ಬಿಗುಹಿನಲಿ ಮೈಯಿಕ್ಕಿ ಶ್ರುತಿಶೀರ್ಷೋಕ್ತ ರೀತಿಯಲಿ ಹೊಗಳಿದೊಡೆ ಹಿಂಗಿದವಲಾ
(೨) ಹೊಗಳು, ಉಘೇ – ಸಾಮ್ಯಾರ್ಥ ಪದ