ಪದ್ಯ ೯: ದ್ರೋಣರಿಗೆ ಭೀಮನು ಹೇಗೆ ಉತ್ತರಿಸಿದನು?

ಗುರುವೆಮಗೆ ನೀವ್ ನಿಮಗೆ ನಾವ್ ಡಿಂ
ಗರಿಗರೆಮ್ಮಿತ್ತಂಡವಿದರಲಿ
ವರ ವಿನೀತರು ಕೆಲರು ಕೆಲಬರು ಧೂರ್ತರಾಗಿಹರು
ನರ ಯುಧಿಷ್ಠಿರ ನಕುಳ ಸಹದೇ
ವರವೊಲೆನಗಿಲ್ಲತಿ ಭಕುತಿ ಸಂ
ಗರದೊಳೆನ್ನಯ ದಂಡಿ ಹೊಸಪರಿ ಬೇಡ ಮರಳೆಂದ (ದ್ರೋಣ ಪರ್ವ, ೧೩ ಸಂಧಿ, ೯ ಪದ್ಯ)

ತಾತ್ಪರ್ಯ:
ಭೀಮನು ಉತ್ತರಿಸುತ್ತಾ, ನೀವು ನಮ್ಮ ಗುರುಗಳು, ನಾವು ನಿಮ್ಮ ಸೇವಕರು, ನಮ್ಮಲ್ಲಿ ಎರಡು ಪಂಗಡಗಳಿವೆ. ಕೆಲವರು ವಿನಯಪರರು, ಕೆಲವರು ಧೂರ್ತರು. ಧರ್ಮಜ, ಅರ್ಜುನ, ನಕುಲ ಸಹದೇವರಂತೆ ನನಗೆ ನಿಮ್ಮಲ್ಲಿ ಬಹಳ ಭಕ್ತಿಯಿಲ್ಲ. ಯುದ್ಧದಲ್ಲಿ ನನ್ನ ವರಸೆಯು ಹೊಸ ರೀತಿಯದ್ದು, ನೀವು ಹಿಂದಿರುಗಿ ಎಂದು ಹೇಳಿದನು.

ಅರ್ಥ:
ಗುರು: ಆಚಾರ್ಯ; ಡಿಂಗರಿಗ: ಭಕ್ತ; ತಂಡ: ಗುಂಪು; ವರ: ಶ್ರೇಷ್ಠ; ವಿನೀತ: ಸೌಜನ್ಯದಿಂದ ಕೂಡಿದ ವ್ಯಕ್ತಿ; ಧೂರ್ತ: ದುಷ್ಟ; ನರ: ಅರ್ಜುನ; ಭಕುತಿ: ಹಿರಿಯರಲ್ಲಿ ತೋರುವ ಆದರ; ಸಂಗರ: ಯುದ್ಧ; ದಂಡಿ: ಘನತೆ, ಹಿರಿಮೆ; ಹೊಸ: ನವೀನ; ಪರಿ: ರೀತಿ; ಬೇಡ: ತ್ಯಜಿಸು; ಮರಳು: ಹಿಂದಿರುಗು;

ಪದವಿಂಗಡಣೆ:
ಗುರುವೆಮಗೆ +ನೀವ್ +ನಿಮಗೆ+ ನಾವ್+ ಡಿಂ
ಗರಿಗರ್+ಎಮ್ಮಿತ್ತಂಡವ್+ಇದರಲಿ
ವರ+ ವಿನೀತರು +ಕೆಲರು +ಕೆಲಬರು +ಧೂರ್ತರಾಗಿಹರು
ನರ +ಯುಧಿಷ್ಠಿರ +ನಕುಳ +ಸಹದೇ
ವರವೊಲ್+ಎನಗಿಲ್ಲ್+ಅತಿ +ಭಕುತಿ +ಸಂ
ಗರದೊಳ್+ಎನ್ನಯ +ದಂಡಿ +ಹೊಸಪರಿ +ಬೇಡ +ಮರಳೆಂದ

ಅಚ್ಚರಿ:
(೧) ವಿನೀತ, ಧೂರ್ತ – ವಿರುದ್ಧಾರ್ಥಕ ಪದ

ಪದ್ಯ ೩೮: ಅರ್ಜುನನು ಸೈಂಧವನನ್ನು ಕೊಲ್ಲದಿದ್ದರೆ ಯಾವ ಲೋಕಗಳು ತನಗೆ ಒದಗಲೆಂದು ಹೇಳಿದನು?

ಖಳನ ಧೂರ್ತನ ನಾಸ್ತಿಕನ ಚಂ
ಚಳನ ಪರ ನಿಕ್ಷೇಪಹಾರಿಯ
ದಳಿತ ಮರ್ಯಾದನ ಕೃತಘ್ನನ ಭರ್ತೃನಿಂದಕನ
ಸ್ಖಲಿತ ವಚನನ ಯೋಗಿನಿಂದಾ
ಕುಲನ ವಿಕಲವ್ರತನ ಲೋಕಾ
ವಳಿಗಳಾಗಲಿ ಕೊಲ್ಲದಿದ್ದರೆ ನಾಳೆ ಸೈಂಧವನ (ದ್ರೋಣ ಪರ್ವ, ೮ ಸಂಧಿ, ೩೮ ಪದ್ಯ)

ತಾತ್ಪರ್ಯ:
ನೀಚನು, ಮೋಸಗಾರನು, ದೇವರಲ್ಲಿ ನಂಬಿಕೆಯಿರದವನು, ಚಂಚಲನು, ಪರದ್ರವ್ಯಾಪಹಾರಿಯು, ಮರ್ಯಾದೆ ಇಲ್ಲದವನು, ಉಪಕಾರವನ್ನು ಮರೆಯುವವನು, ಒಡೆಯನನ್ನು ನಿಂದಿಸುವವನು, ಮಾತಿಗೆ ತಪ್ಪುವವನು, ಜ್ಞಾನಿಗಳನ್ನು ನಿಂದಿಸುವವನು, ವ್ರತಗೆಟ್ಟವನು, ಯಾವ ಲೋಕಗಳಿಗೆ ಹೋಗುವನೋ ನಾಳೆ ಸೈಂಧವನನ್ನು ಕೊಲ್ಲದಿದ್ದರೆ ಆ ಲೋಕಗಳು ನನಗೆ ಬರಲಿ ಎಂದು ಅರ್ಜುನನು ಪ್ರಮಾಣವನ್ನು ಮಾಡಿದನು.

ಅರ್ಥ:
ಖಳ: ದುಷ್ಟ; ಧೂರ್ತ: ದುರುಳ, ದುಷ್ಟ; ನಾಸ್ತಿಕ: ದೇವರನ್ನು ನಂಬದವ; ಚಂಚಳ: ಚಪಲಸ್ವಭಾವ; ಪರ: ಬೇರೆಯ; ನಿಕ್ಷೇಪ: ಹುದುಗಿಸಿಟ್ಟ ಹಣ, ಧನ; ಅಪಹರ: ಕದಿ; ದಳಿ: ತಡಿಕೆ; ಮರ್ಯಾದೆ: ಗೌರವ, ಮನ್ನಣೆ; ಕೃತಘ್ನ: ಉಪಕಾರವನ್ನು ಮರೆಯುವವನು; ಭರ್ತೃ: ಗಂಡ, ಯಜಮಾನ; ನಿಂದಕ: ಬಯ್ಯುವವ; ಸ್ಖಲಿತ: ತಪ್ಪು, ಅಪರಾಧ; ವಚನ: ಮಾತು, ನುಡಿ; ಯೋಗಿ: ಋಷಿ; ವಿಕಳ: ಚಂಚಲ, ಲೋಪ; ವ್ರತ: ನಡವಳಿಕೆ; ಲೋಕ: ಜಗತ್ತು; ಆವಳಿ: ಗುಂಪು, ಸಾಲು; ಕೊಲ್ಲು: ಸಾಯಿಸು;

ಪದವಿಂಗಡಣೆ:
ಖಳನ +ಧೂರ್ತನ +ನಾಸ್ತಿಕನ+ ಚಂ
ಚಳನ +ಪರ +ನಿಕ್ಷೇಪಹಾರಿಯ
ದಳಿತ+ ಮರ್ಯಾದನ +ಕೃತಘ್ನನ +ಭರ್ತೃ+ನಿಂದಕನ
ಸ್ಖಲಿತ +ವಚನನ +ಯೋಗಿ+ನಿಂದಾ
ಕುಳನ+ ವಿಕಳವ್ರತನ+ ಲೋಕಾ
ವಳಿಗಳಾಗಲಿ +ಕೊಲ್ಲದಿದ್ದರೆ +ನಾಳೆ +ಸೈಂಧವನ

ಅಚ್ಚರಿ:
(೧) ಖಳ, ಚಂಚಳ, ನಿಂದಾಕುಳ, ವಿಕಳ – ಪ್ರಾಸ ಪದಗಳು