ಪದ್ಯ ೭೧: ಪಾಂಡವರು ಯಾರನ್ನು ಒಲಿಸಿದರು?

ಹಲಬರಸುರರು ಮಡಿದರಿವನ
ಗ್ಗಳೆಯನಿರುಳಿನ ಬವರದಾಯತ
ತಿಳಿವುದೀತಂಗೆನುತಲಾ ದ್ರೋಣಾದಿ ನಾಯಕರು
ಅಳುಕಿದರು ಬಳಿಕೇನು ಭಕುತಿಯ
ಲೊಲಿಸಿದರಲೈ ಪಾಂಡವರು ಯದು
ಕುಲಲಲಾಮನನಮಳ ಗದುಗಿನ ವೀರನರಯಣನ (ದ್ರೋಣ ಪರ್ವ, ೧೫ ಸಂಧಿ, ೭೧ ಪದ್ಯ)

ತಾತ್ಪರ್ಯ:
ಇವನಿಂದ ಅನೇಕ ದೈತ್ಯರು ಮಡಿದರು, ರಾತ್ರಿಯುದ್ಧದ ಗುಟ್ಟು ಇವನಿಗೆ ಗೊತ್ತಿದೆ ಎಂದು ದ್ರೋಣನೇ ಮೊದಲಾದ ನಾಯಕರು ಹೆದರಿದರು. ಧೃತರಾಷ್ಟ್ರ ಹೇಳಲು ಇನ್ನೇನು ಉಳಿದಿದೆ, ಯದುಕುಲ ಭೂಷಣನೂ, ನಿರ್ಮಲನೂ ಆದ ಗದುಗಿನ ವೀರ ನಾಯಾರಣನನ್ನು ಪಾಂಡವರು ಭಕ್ತಿಯಿಂದ ಒಲಿಸಿದರು.

ಅರ್ಥ:
ಹಲಬರು: ಅನೇಕ; ಅಸುರ: ರಾಕ್ಷಸ; ಮಡಿ: ಸಾವನ್ನು ಹೊಂದು; ಅಗ್ಗಳೆ: ಶ್ರೇಷ್ಠ; ಇರುಳು: ರಾತ್ರಿ; ಬವರ: ಯುದ್ಧ; ಆಯತ: ವಿಶಾಲವಾದ; ನಾಯಕ: ಒಡೆಯ; ಅಳುಕು: ಹೆದರು; ಬಳಿಕ: ನಂತರ; ಭಕುತಿ: ಗುರು ದೈವಗಳಲ್ಲಿ ಶ್ರದ್ಧೆ; ಒಲಿಸು: ಪ್ರೀತಿ; ಕುಲ: ವಂಶ; ಲಲಾಮ: ಶ್ರೇಷ್ಠ, ತಿಲಕ; ಅಮಳ: ನಿರ್ಮಲ;

ಪದವಿಂಗಡಣೆ:
ಹಲಬರ್+ಅಸುರರು +ಮಡಿದರ್+ಇವನ್
ಅಗ್ಗಳೆಯನ್+ಇರುಳಿನ +ಬವರದ್+ಆಯತ
ತಿಳಿವುದ್+ಈತಂಗೆನುತಲ್+ಆ+ ದ್ರೋಣಾದಿ +ನಾಯಕರು
ಅಳುಕಿದರು +ಬಳಿಕೇನು +ಭಕುತಿಯಲ್
ಒಲಿಸಿದರಲೈ +ಪಾಂಡವರು +ಯದು
ಕುಲ+ಲಲಾಮನನ್+ಅಮಳ +ಗದುಗಿನ+ ವೀರನರಯಣನ

ಅಚ್ಚರಿ:
(೧) ಕೃಷ್ಣನನ್ನು ಹೊಗಳಿದ ಪರಿ – ಯದುಕುಲಲಲಾಮನನಮಳ

ಪದ್ಯ ೩೯: ದುರ್ಜಯನು ಭೀಮನನ್ನು ಹೇಗೆ ಎದುರಿಸಿದನು?

ಬಿಲುದುಡುಕಿ ರಿಪುಭಟನೊಡನೆ ಮುಂ
ಕೊಳಿಸಿದನು ದುರ್ಜಯನು ಹಿಮ್ಮೆ
ಟ್ಟೆಲವೊ ಪವನಜ ನಿಂದಡರಿವೆನು ನಿನ್ನೊಡಲನೆನುತ
ಒಲುಮೆಯೊಡಹುಟ್ಟಿದರ ಬಯಕೆಯ
ಸಲಿಸುವರೆ ನಾವಲ್ಲದೆ ಕುರು
ಕುಲ ಲಲಾಮರು ತಪ್ಪಿ ನುಡಿಯರೆನುತ್ತ ಮಂಡಿಸಿದ (ದ್ರೋಣ ಪರ್ವ, ೧೩ ಸಂಧಿ, ೩೯ ಪದ್ಯ)

ತಾತ್ಪರ್ಯ:
ದುರ್ಜಯನು ಬಿಲ್ಲನ್ನು ಹಿಡಿದು ಭೀಮನನ್ನು ಇದಿರಿಸಿದನು. ಭೀಮಾ ಹಿಮ್ಮೆಟ್ಟು ನಿಂತರೆ ನಿನ್ನ ದೇಹವನ್ನು ತುಂಡು ಮಾಡುತ್ತೇನೆ. ಭೀಮನು ಪ್ರೀತಿಯ ತಮ್ಮಂದಿರ ಬಯಕೆಯನ್ನು ಸಲ್ಲಿಸುವವರೇ ನಾವು, ಕುರುಕುಲ ತಿಲಿಕರು ತಪ್ಪಿ ನುಡಿಯುವವರಲ್ಲ ಎನ್ನುತ್ತ ಮಂಡಿಹಚ್ಚಿ ಕುಳಿತನು.

ಅರ್ಥ:
ಬಿಲು: ಬಿಲ್ಲು, ಧನು; ತುಡುಕು: ಹೋರಾಡು, ಸೆಣಸು; ರಿಪು: ವೈರಿ; ಭಟ: ಸೈನಿಕ; ಮುಂಕೊಳಿಸು: ಇದಿರು; ಹಿಮ್ಮೆಟ್ಟು: ಹಿಂದೆ ಸರಿ; ಪವನಜ: ಭೀಮ; ನಿಂದು: ನಿಲ್ಲು; ಅಡರು: ಆಸರೆ; ಒಡಲು: ದೇಹ; ಒಲುಮೆ: ಪ್ರೀತಿ; ಒಡಹುಟ್ಟಿ: ಜೊತೆಯಲ್ಲಿ ಜನಿಸಿದ, ಸಹೋದರ; ಬಯಕೆ: ಆಸೆ; ಸಲಿಸು: ಪೂರೈಸು, ಒಪ್ಪಿಸು; ಕುಲ: ವಂಶ; ಲಲಾಮ: ಶ್ರೇಷ್ಠ, ತಿಲಕ; ತಪ್ಪು: ಸರಿಯಿಲ್ಲದು; ನುಡಿ: ಮಾತು; ಮಂಡಿಸು: ಕೂಡು;

ಪದವಿಂಗಡಣೆ:
ಬಿಲು+ತುಡುಕಿ +ರಿಪುಭಟನೊಡನೆ +ಮುಂ
ಕೊಳಿಸಿದನು +ದುರ್ಜಯನು +ಹಿಮ್ಮೆಟ್ಟ್
ಎಲವೊ +ಪವನಜ +ನಿಂದಡ್+ಅರಿವೆನು +ನಿನ್ನೊಡಲನೆನುತ
ಒಲುಮೆ+ಒಡಹುಟ್ಟಿದರ+ ಬಯಕೆಯ
ಸಲಿಸುವರೆ +ನಾವಲ್ಲದೆ +ಕುರು
ಕುಲ +ಲಲಾಮರು +ತಪ್ಪಿ+ ನುಡಿಯರ್+ಎನುತ್ತ +ಮಂಡಿಸಿದ

ಅಚ್ಚರಿ:
(೧) ಭೀಮನೆದುರು ಗರ್ಜಿಸಿದ ಪರಿ – ಹಿಮ್ಮೆಟ್ಟೆಲವೊ ಪವನಜ ನಿಂದಡರಿವೆನು ನಿನ್ನೊಡಲನೆನುತ

ಪದ್ಯ ೩೦: ಕೌರವ ಕುಮಾರರು ಭೀಮನೆದುರು ಹೇಗೆ ಬಂದರು?

ಬಿಲುದೆಗಹಿನಾಕರ್ಣಪೂರದ
ಹಿಳುಕಿನನಿಲಿಜನಿರಲು ಸಿಂಹದ
ಹೊಲನ ಹೊಗುವಿಭದಂತೆ ಹೊರಕಾಲ್ಗೊಳುತಲಿರೆ ಕಂಡು
ತೊಲಗದಿರಿ ತಮ್ಮಂದಿರಿರ ಕುರು
ಕುಲಲಲಾಮರು ಜಗದೊಳತಿ ವೆ
ಗ್ಗಳೆಯ ಸುಭಟರು ನೀವೆನುತ ತೆಗೆದೆಚ್ಚನಾ ಭೀಮ (ದ್ರೋಣ ಪರ್ವ, ೧೨ ಸಂಧಿ, ೩೦ ಪದ್ಯ)

ತಾತ್ಪರ್ಯ:
ಬಿಲ್ಲಿಗೆ ಬಾಣವನ್ನು ಹೂಡಿ ಹೆದೆಯನ್ನು ಕಿವಿವರೆಗೆ ಎಳೆದ ಭೀಮನನ್ನು ನೋಡಿ ಯುದ್ಧಕ್ಕೆ ಬಂದ ಕೌರವನ ತಮ್ಮಂದಿರು ಹೊರಕಾಲಿಟ್ಟು ಹೋಗಲು ಅನುವಾದರು. ಭೀಮನು, ತಮ್ಮಂದಿರಾ ಓಡಿಹೋಗಬೇಡಿ, ನೀವು ಕುರುಕುಲ ಭೂಷಣರು. ಈ ಲೋಕದಲ್ಲಿ ಉತ್ತಮ ಸುಭಟರು ಎನ್ನುತ್ತಾ ಬಾಣಗಳನ್ನು ಬಿಟ್ಟನು.

ಅರ್ಥ:
ಬಿಲು: ಬಿಲ್ಲು; ತೆಗೆ: ಹೊರತರು; ಕರ್ಣ: ಕಿವಿ; ಪೂರ: ಪೂರ್ತಿಯಾಗಿ; ಹಿಳುಕು: ಬಾಣದ ಗಿರಿ; ಅನಿಲಜ: ವಾಯುಪುತ್ರ (ಭೀಮ); ಸಿಂಹ: ಕೇಸರಿ; ಹೊಲ: ವಾಸಸ್ಥಾನ, ಪ್ರದೇಶ; ಹೊಗು: ತೆರಳು; ಇಭ: ದಂತಿ, ಆನೆ; ಕಾಲು: ಪಾದ; ಕಂಡು: ನೋಡು; ತೊಲಗು: ದೂರ ಸರಿ; ತಮ್ಮ: ಸಹೋದರ; ವೆಗ್ಗಳ: ಶ್ರೇಷ್ಠತೆ; ಸುಭಟ: ಪರಾಕ್ರಮಿ; ಎಚ್ಚು: ಬಾಣ ಪ್ರಯೋಗ ಮಾಡು; ಲಲಾಮ: ತಿಲಕ; ಜಗ: ಪ್ರಪಂಚ;

ಪದವಿಂಗಡಣೆ:
ಬಿಲು+ತೆಗಹಿನಾ+ಕರ್ಣಪೂರದ
ಹಿಳುಕಿನ್+ಅನಿಲಿಜನ್+ಇರಲು +ಸಿಂಹದ
ಹೊಲನ +ಹೊಗುವ್+ಇಭದಂತೆ +ಹೊರಕಾಲ್ಗೊಳುತಲಿರೆ+ ಕಂಡು
ತೊಲಗದಿರಿ +ತಮ್ಮಂದಿರಿರ+ ಕುರು
ಕುಲ+ಲಲಾಮರು+ ಜಗದೊಳ್+ಅತಿ+ ವೆ
ಗ್ಗಳೆಯ +ಸುಭಟರು+ ನೀವೆನುತ +ತೆಗೆದ್+ಎಚ್ಚನಾ +ಭೀಮ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸಿಂಹದ ಹೊಲನ ಹೊಗುವಿಭದಂತೆ ಹೊರಕಾಲ್ಗೊಳುತಲಿರೆ

ಪದ್ಯ ೨: ಯುದ್ಧದಲ್ಲಿ ಯಾರು ಗರ್ಜಿಸಿದರು?

ಕೇಳು ಜನಮೇಜಯ ಧರಿತ್ರೀ
ಪಾಲ ಹಿಮಕರಕುಲಲಲಾಮರು
ಕಾಳೆಗಕೆ ಕೈದಟ್ಟಿ ಹರಿದುದು ಕಳನ ಚೌಕದಲಿ
ಆಳು ಗಜಮಜಿಸಿತ್ತು ರಾವುತ
ರೋಳಿ ಸೇರಿತು ಸರಸದಲಿ ದೆ
ಖ್ಖಾಳಿಸಿದುದಿಭರಥನಿಕಾಯದ ಬೆರಳ ಬೊಬ್ಬೆಯಲಿ (ಭೀಷ್ಮ ಪರ್ವ, ೩ ಸಂಧಿ, ೨ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಚಂದ್ರವಂಶದ ರಾಜರು ಕೈತಟ್ಟಿ ಯುದ್ಧಕ್ಕೆ ರಣರಂಗದಲ್ಲಿ ನಿಂತರು, ಕಾಲಾಳುಗಳು, ರಾವುತರು, ರಥಿಕರು, ಮಾವುತರು ಎಲ್ಲರೂ ಜೋರಾಗಿ ಗರ್ಜಿಸಿದರು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಧರಿತ್ರೀ: ಭೂಮಿ; ಹಿಮಕರ: ಚಂದ್ರ; ಕುಲ: ವಂಶ; ಲಲಾಮ: ತಿಲಕ; ಕಾಳಗ: ಯುದ್ಧ; ಕೈದಟ್ಟಿ: ಜೋರಾಗಿ; ಹರಿ: ಚಲಿಸು; ಕಳ: ರಣರಂಗ; ಚೌಕ: ಅಂಗಳ; ಆಳು: ಸೈನಿಕ; ಗಜಬಜಿಸು: ಗೊಂದಲ; ರಾವುತ: ಕುದುರೆ ಸವಾರ, ಅಶ್ವಾರೋಹಿ; ಓಳಿ: ಸಮೂಹ; ಸೇರು: ಜೊತೆಗೂಡು; ಸರಸ: ಚೆಲ್ಲಾಟ, ವಿನೋದ; ದೆಖ್ಖಾಳಿಸು: ಗರ್ಜಿಸು; ಇಭ: ಆನೆ; ರಥ: ಬಂಡಿ; ನಿಕಾಯ: ಗುಂಪು; ಬೆರಳ: ಅಂಗುಲಿ; ಬೊಬ್ಬೆ: ಗರ್ಜಿಸು, ಕೂಗು;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಹಿಮಕರ+ಕುಲ+ಲಲಾಮರು
ಕಾಳೆಗಕೆ+ ಕೈದಟ್ಟಿ +ಹರಿದುದು +ಕಳನ +ಚೌಕದಲಿ
ಆಳು+ ಗಜಬಜಿಸಿತ್ತು +ರಾವುತರ್
ಓಳಿ +ಸೇರಿತು +ಸರಸದಲಿ+ ದೆ
ಖ್ಖಾಳಿಸಿದುದ್+ಇಭರಥ+ನಿಕಾಯದ +ಬೆರಳ +ಬೊಬ್ಬೆಯಲಿ

ಅಚ್ಚರಿ:
(೧) ಮಾವುತರು ಎಂದು ಹೇಳಲು – ಇಭರಥ ನಿಕಾಯ
(೨) ಗಜಬಜಿಸು, ಬೊಬ್ಬೆ, ದೆಖ್ಖಾಳಿ – ಸಾಮ್ಯಾರ್ಥ ಪದಗಳು

ಪದ್ಯ ೨: ಅರ್ಜುನ ಮತ್ತು ಉತ್ತರ ಕುಮಾರರು ಊರಿಗೆ ಹೇಗೆ ಹಿಂದಿರುಗಿದರು?

ಬಳಿಕ ಫಲಗುಣನತ್ತಲಾ ಮರ
ದೊಳಗೆ ಕೈದುವನಿರಿಸಿ ಮುನ್ನಿನ
ಹುಲುರಥವ ಮೇಳೈಸಿ ಸಾರಥಿತನವನಳವಡಿಸೆ
ಇಳಿದು ಪಾರ್ಥವ ಮೈದಡವಿ ಕಪಿ
ಕುಲ ಲಲಾಮನು ವನಕೆ ಹಾಯ್ದನು
ಹೊಳಲ ಹೊರೆಯಲಿ ನಿಂದು ನಗುತುತ್ತರನೊಳಿಂತೆಂದ (ವಿರಾಟ ಪರ್ವ, ೧೦ ಸಂಧಿ, ೨ ಪದ್ಯ)

ತಾತ್ಪರ್ಯ:
ಬನ್ನಿಯಮರದಲ್ಲಿ ಆಯುಧಗಳನ್ನಿಟ್ಟು, ಊರಿನಿಂದ ತಂದಿದ್ದ ಹುಲುರಥವನ್ನು ಸರಿಪಡಿಸಿ ಅರ್ಜುನನು ಸಾರಥಿಯಾದನು. ಹನುಮಂತನು ಧ್ವಜದಿಂದಿಳಿದು ಅರ್ಜುನನ ಮೈದಡವಿ ತನ್ನ ವನಕ್ಕೆ ಹೋದನು. ಊರ ಹತ್ತಿರ ರಥವನ್ನು ನಿಲ್ಲಿಸಿ ಅರ್ಜುನನು ನಗುತ್ತಾ ಉತ್ತರನಿಗೆ ಹೀಗೆಂದು ಹೇಳಿದನು.

ಅರ್ಥ:
ಬಳಿಕ: ನಂತರ; ಮರ: ತರು; ಕೈದು: ಆಯುಧ; ಇರಿಸು: ಇಡು; ಮುನ್ನ: ಆರಂಭ, ಮೊದಲು; ಹುಲು: ಅಲ್ಪ; ರಥ: ಬಂಡಿ; ಮೇಳೈಸು: ಸೇರು, ಜೊತೆಯಾಗು; ಸಾರಥಿ: ಸೂತ; ಅಳವಡಿಸು: ಇಳಿ: ಕೆಳಗೆ ಬಾ; ಮೈದಡವಿ: ಮೈಕೊಡವಿ; ಕಪಿ: ಹನುಮ; ಕುಲ: ವಂಶ; ಲಲಾಮ: ಹಣೆ; ವನ: ಕಾದು; ಹಾಯ್ದು: ಮೇಲೆಬೀಳು; ಹೊಳಲು: ಪ್ರಕಾಶ; ಪೊಟರೆ; ಹೊರೆ: ರಕ್ಷಣೆ, ಆಶ್ರಯ; ನಿಂದು: ನಿಲ್ಲು; ನಗುತ: ಹರ್ಷಿಸು; ಒಳಿತು: ಯೋಗ್ಯ;

ಪದವಿಂಗಡಣೆ:
ಬಳಿಕ +ಫಲಗುಣನತ್ತಲಾ +ಮರ
ದೊಳಗೆ +ಕೈದುವನಿರಿಸಿ+ ಮುನ್ನಿನ
ಹುಲು+ರಥವ+ ಮೇಳೈಸಿ +ಸಾರಥಿತನವನ್+ಅಳವಡಿಸೆ
ಇಳಿದು+ ಪಾರ್ಥವ +ಮೈದಡವಿ +ಕಪಿ
ಕುಲ +ಲಲಾಮನು +ವನಕೆ+ ಹಾಯ್ದನು
ಹೊಳಲ +ಹೊರೆಯಲಿ +ನಿಂದು +ನಗುತ್+ಉತ್ತರನ್+ಒಳಿಂತೆಂದ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹಾಯ್ದನು ಹೊಳಲ ಹೊರೆಯಲಿ