ಪದ್ಯ ೫: ಕರ್ಣನು ಏಕೆ ಕೊರಗಿದನು?

ದ್ರೋಣಭೀಷ್ಮರ ನಚ್ಚಿದರೆ ಮುಂ
ಗಾಣಿಕೆಯಲೇ ಮಡಿದರೆನ್ನಯ
ಗೋಣ ಕೊಯ್ದನು ಕೃಷ್ಣ ಮುನ್ನಿನ ಕುಲವನೆಚ್ಚರಿಸಿ
ಪ್ರಾಣ ಪಾಂಡವರೆಂಬ ನುಡಿಯನು
ಜಾಣಿನಲಿ ಹರಿ ಬಲಿದನೊಡೆಯಗೆ
ಕಾಣೆನಾಪ್ತರನೆಂದು ಮನದಲಿ ಮರುಗಿದನು ಕರ್ಣ (ಕರ್ಣ ಪರ್ವ, ೨೭ ಸಂಧಿ, ೫ ಪದ್ಯ)

ತಾತ್ಪರ್ಯ:
ಕರುಣಾರಸವು ಕರ್ಣನ ಮನಸ್ಸನ್ನು ಆವರಿಸಲು ಅವನು ಯೋಚಿಸುತ್ತಾ, ಭೀಷ್ಮ, ದ್ರೋಣರನ್ನು ದುರ್ಯೋಧನನು ನಂಬಿದ್ದ, ಆದರೆ ಅವರು ತೋರಿಕೆಯ ಯುದ್ಧ ಮಾಡಿ ಮಡಿದರು, ನನ್ನ ಕುಲವನ್ನು ಮೊದಲೇ ತಿಳಿಸಿ ಕೃಷ್ಣನು ನನ್ನ ಕೊರಲನ್ನೇ ಕೊಯ್ದು ಹಾಕಿದನು. ಪಾಂಡವರೇ ನನ್ನ ಪ್ರಾಣ ಎಂಬ ಪ್ರತಿಜ್ಞೆಯನ್ನು ಕೃಷ್ಣನು ಜಾಣತನದಿಂದ ಈಡೇರಿಸಿಕೊಂಡನು. ನನ್ನ ಒಡೆಯನಿಗೆ ಆಪ್ತರಾದವರು ಯಾರು ಕಾಣುತ್ತಿಲ್ಲ ಎಂದು ಕರ್ಣನು ಮನಸ್ಸಿನಲ್ಲೇ ಮರುಗಿದನು.

ಅರ್ಥ:
ನಚ್ಚು: ನಂಬಿಕೆ, ವಿಶ್ವಾಸ; ಮುಂಗಾಣಿಕೆ: ತೋರಿಕೆ; ಮಡಿ: ಸಾವು; ಗೋಣ: ಕೊರಳು; ಕೊಯ್ದನು: ಸೀಳು; ಮುನ್ನ: ಮೊದಲೇ; ಕುಲ: ವಂಶ; ಎಚ್ಚರಿಸು: ಸಾವಧಾನ; ಪ್ರಾಣ:ಜೀವ; ನುಡಿ: ಮಾತು; ಜಾಣ: ಬುದ್ಧಿವಂತ; ಬಲಿ: ಗಟ್ಟಿ, ದೃಢ; ಒಡೆಯ: ದೊರೆ; ಕಾಣು: ತೋರು; ಆಪ್ತ: ಹತ್ತಿರದವ; ಮನ: ಮನಸ್ಸು; ಮರುಗು: ಕೊರಗು;

ಪದವಿಂಗಡಣೆ:
ದ್ರೋಣ+ಭೀಷ್ಮರ +ನಚ್ಚಿದರೆ+ ಮುಂ
ಗಾಣಿಕೆಯಲೇ +ಮಡಿದರ್+ಎನ್ನಯ
ಗೋಣ +ಕೊಯ್ದನು +ಕೃಷ್ಣ +ಮುನ್ನಿನ+ ಕುಲವನ್+ಎಚ್ಚರಿಸಿ
ಪ್ರಾಣ+ ಪಾಂಡವರೆಂಬ+ ನುಡಿಯನು
ಜಾಣಿನಲಿ +ಹರಿ +ಬಲಿದನ್+ಒಡೆಯಗೆ
ಕಾಣೆನಾಪ್ತರನೆಂದು ಮನದಲಿ ಮರುಗಿದನು ಕರ್ಣ

ಅಚ್ಚರಿ:
(೧) ಕರ್ಣನ ದುಃಖ – ಒಡೆಯಗೆ ಕಾಣೆನಾಪ್ತರನೆಂದು ಮನದಲಿ ಮರುಗಿದನು ಕರ್ಣ
(೨) ದ್ರೋಣ, ಗೋಣ, ಪ್ರಾಣ – ಪ್ರಾಸ ಪದ