ಪದ್ಯ ೨೨: ದ್ರೋಣನಿಗೆ ದ್ರೋಣನೆಂದು ಹೆಸರಿಡಲು ಕಾರಣವೇನು?

ದ್ರೋಣಕಲಶದೊಳಾದ ದೆಸೆಯಿಂ
ದ್ರೋಣನಾದನು ಬಳಿಕ ಮುನಿಯಾ
ದ್ರೋಣಗುಪನಯನಾದಿ ವಿಪ್ರಕ್ರಿಯೆಗಳನು ರಚಿಸಿ
ದ್ರೋಣನೊಡನೋದಿಸಿ ನೃಪಾಲ
ಶ್ರೇಣಿಯನು ಶಸ್ತ್ರಾಸ್ತ್ರ ಕಳೆಯಲಿ
ಜಾಣರನು ಮಾಡಿದನು ಭಾರದ್ವಾಜ ಮುನಿಯಂದು (ಆದಿ ಪರ್ವ, ೬ ಸಂಧಿ, ೨೨ ಪದ್ಯ)

ತಾತ್ಪರ್ಯ:
ನೀರನ್ನು ತುಂಬುವ ಮರದ ಪಾತ್ರೆ (ದ್ರೋಣ)ಯ ಕಲಶದಲ್ಲಿ ಹುಟ್ತಿದುದರಿಂದ ಅವನಿಗೆ ದ್ರೋಣನೆಮ್ಬ ಹೆಸರಾಯಿತು. ದ್ರೋಣನಿಗೆ ಉಪನಯನಾದಿ ಸಂಸ್ಕಾರಗಲನ್ನು ಮಾಡಿಸಿದನು. ಅನೇಕ ರಾಜರಿಗೆ ದ್ರೋಣನೊಡನೆ ಶಸ್ತ್ರಾಸ್ತ್ರವಿದ್ಯಾಭ್ಯಾಸವನ್ನು ಭಾರದ್ವಾಜನು ಮಾಡಿಸಿದನು.

ಅರ್ಥ:
ಕಲಶ: ಕುಂಭ; ದೆಸೆ: ಕಾರಣ; ಬಳಿಕ: ನಂತರ; ಮುನಿ: ಋಷಿ; ಉಪನಯನ: ಮುಂಜಿ; ವಿಪ್ರ: ಬ್ರಾಹ್ಮಣ; ಕ್ರಿಯೆ: ಕಾರ್ಯ; ರಚಿಸು: ನಿರ್ಮಿಸು; ಓದು: ವಿದ್ಯಾಭ್ಯಾಸ; ನೃಪಾಲ: ರಾಜ; ಶ್ರೇಣಿ: ಪಂಕ್ತಿ, ಸಾಲು; ಶಸ್ತ್ರಾಸ್ತ್ರ: ಆಯುಧ; ಕಳೆ: ಕುಶಲವಿದ್ಯೆ; ಜಾಣ: ಬುದ್ಧಿವಂತ;

ಪದವಿಂಗಡಣೆ:
ದ್ರೋಣ+ಕಲಶದೊಳ್+ಆದ +ದೆಸೆಯಿಂ
ದ್ರೋಣನಾದನು +ಬಳಿಕ+ ಮುನಿಯಾ
ದ್ರೋಣಗ್+ಉಪನಯನಾದಿ +ವಿಪ್ರ+ಕ್ರಿಯೆಗಳನು+ ರಚಿಸಿ
ದ್ರೋಣನೊಡನ್+ಓದಿಸಿ +ನೃಪಾಲ
ಶ್ರೇಣಿಯನು+ ಶಸ್ತ್ರಾಸ್ತ್ರ +ಕಳೆಯಲಿ
ಜಾಣರನು +ಮಾಡಿದನು +ಭಾರದ್ವಾಜ+ ಮುನಿಯಂದು

ಅಚ್ಚರಿ:
(೧) ದ್ರೋಣ ಪದದ ಬಳಕೆ – ೧-೪ ಸಾಲಿನ ಮೊದಲ ಪದ
(೨) ದ್ರೋಣ ಪದದ ಬಳಕೆ – ದ್ರೋಣಕಲಶದೊಳಾದ ದೆಸೆಯಿಂದ್ರೋಣನಾದನು

ಪದ್ಯ ೨೬: ಕುರುಸೇನೆಯಲ್ಲಿ ಯಾವ ಆಶೆ ಕಡಿಮೆಯಾಗಿತ್ತು?

ಕಾಣಿಕೆಯನಿತ್ತಖಿಳ ಸುಭಟ
ಶ್ರೇಣಿ ಕಂಡುದು ನುಡಿಯ ಹಾಣಾ
ಹಾಣಿಗಳ ಭಾಷೆಗಳ ಹಕ್ಕಲು ವೀರರುಕ್ಕುಗಳ
ಪ್ರಾಣಚುಳಕೋದಕದ ಚೇಷ್ಟೆಯ
ಹೂಣಿಗರು ವಿಜಯಾಂಗನೋಪ
ಕ್ಷೀಣಮಾನಸರೊಪ್ಪಿದರು ಕುರುಪತಿಯ ಪರಿವಾರ (ಶಲ್ಯ ಪರ್ವ, ೧ ಸಂಧಿ, ೨೬ ಪದ್ಯ)

ತಾತ್ಪರ್ಯ:
ಕುರುಸೇನೆಯ ಸುಭಟರೆಲ್ಲರೂ ಶಲ್ಯ್ನ ದರ್ಶನವನ್ನು ಪಡೆದುಕೊಂಡು ಕಾಣಿಕೆಯನ್ನು ಕೊಟ್ಟರು. ಹಾಣಾಹಾಣಿ ಯುದ್ಧವನ್ನು ಮಾಡಿ ಪರಸೇನೆಯ ವೀರರನ್ನು ಕಡಿದುಹಾಕುವ ವೀರಾಲಾಪವನ್ನು ಮಾಡಿದರು. ಶತ್ರುಸೈನ್ಯದಲ್ಲಿ ನುಗ್ಗಿ ವಿರೋಧಿ ಯೋಧರನ್ನು ಆಪೋಶನ ತೆಗೆದುಕೊಳ್ಳುವ ಆತುರವನ್ನು ತೋರಿದರು. ಆದರೆ ವಿಜಯದ ಆಶೆ ಅವರಲ್ಲಿ ಕಡಿಮೆಯಾಗಿತ್ತು.

ಅರ್ಥ:
ಕಾಣಿಕೆ: ಉಡುಗೊರೆ; ಇತ್ತು: ನೀಡು; ಅಖಿಳ: ಎಲ್ಲಾ; ಸುಭಟ: ಪರಾಕ್ರಮಿ; ಶ್ರೇಣಿ: ಗುಂಪು; ಕಂಡು: ನೋಡು; ನುಡಿ: ಮಾತು; ಹಾಣಾಹಾಣಿ: ಬೆರೆಸು, ಹಣೆ ಹಣೆಯ ಯುದ್ಧ; ಭಾಷೆ: ನುಡಿ; ಹಕ್ಕು: ಜವಾಬ್ದಾರಿ; ಉಕ್ಕು: ಹಿಗ್ಗುವಿಕೆ; ಪ್ರಾಣ: ಜೀವ; ಉದಕ: ನೀರು; ಚೇಷ್ಟೆ: ಅಂಗಾಂಗಗಳ ಚಲನೆ; ಹೂಣಿಗ: ಬಾಣವನ್ನು ಹೂಡುವವನು, ಬಿಲ್ಲುಗಾರ; ವಿಜಯ: ಗೆಲುವು; ಕ್ಷೀಣ: ನಾಶ, ಕೇಡು; ಮಾನಸ: ಮನಸ್ಸು; ಒಪ್ಪು: ಒಪ್ಪಿಗೆ, ಸಮ್ಮತಿ; ಪರಿವಾರ: ಸುತ್ತಲಿನವರು, ಪರಿಜನ;

ಪದವಿಂಗಡಣೆ:
ಕಾಣಿಕೆಯನಿತ್ತ್+ಅಖಿಳ +ಸುಭಟ
ಶ್ರೇಣಿ +ಕಂಡುದು +ನುಡಿಯ +ಹಾಣಾ
ಹಾಣಿಗಳ+ ಭಾಷೆಗಳ +ಹಕ್ಕಲು +ವೀರರುಕ್ಕುಗಳ
ಪ್ರಾಣಚುಳಕ+ಉದಕದ +ಚೇಷ್ಟೆಯ
ಹೂಣಿಗರು+ ವಿಜಯಾಂಗನೋಪ
ಕ್ಷೀಣಮಾನಸರ್+ಒಪ್ಪಿದರು +ಕುರುಪತಿಯ +ಪರಿವಾರ

ಅಚ್ಚರಿ:
(೧) ಗೆಲುವಿನ ಆಸೆ ಕ್ಷೀಣಿಸಿತು ಎಂದು ಹೇಳಲು – ವಿಜಯಾಂಗನೋಪ ಕ್ಷೀಣಮಾನಸರೊಪ್ಪಿದರು
(೨) ವೀರರನ್ನು ವಿವರಿಸುವ ಪರಿ – ಪ್ರಾಣಚುಳಕೋದಕದ ಚೇಷ್ಟೆಯ ಹೂಣಿಗರು

ಪದ್ಯ ೪೨: ಭೀಮನು ಹೇಗೆ ಅಭಯವನ್ನು ನೀಡಿದನು?

ಪ್ರಾಣದತಿಶಯವೇನು ಮಿಗೆ ಸಂ
ಗ್ರಾಣಿಸುವುದಿನ್ನೊಮ್ಮೆ ನಾನೇ
ಕಾಣೆ ಕಾಣುವೆನವರ ಜೀವದ ನೆಲಕಡೆಯನೆಲ್ಲ
ಕ್ಷೋಣಿಪತಿ ಕರೆಸಿದರೆ ಮಲ್ಲ
ಶ್ರೇಣಿ ಬಂದುದು ಧುರವ ಜಯಿಸುವ
ತ್ರಾಣಿಗನ ಕರೆಸೆನುತಲಿದ್ದರು ರಾಜಸಭೆಯೊಳಗೆ (ವಿರಾಟ ಪರ್ವ, ೪ ಸಂಧಿ, ೪೨ ಪದ್ಯ)

ತಾತ್ಪರ್ಯ:
ಎಲೈ ರಾಜ, ಅಕ್ಷೋಣಿಪತಿ, ಪ್ರಾಣವೇನೂ ಅಂತಹ ಅಪೂರ್ವವಲ್ಲ, ಇದು ಮತ್ತೆ ಜನ್ಮತಾಳುತ್ತದೆ, ಹುಟ್ಟುವರೋ ಇಲ್ಲವೋ ನಾನು ಕಾಣೆ, ವಿರೋಧಿ ಮಲ್ಲರನ್ನು ನೆಲಕ್ಕೆ ಕೆಡವಿ ಅವರ ಜೀವದ ಅಂತ್ಯವನ್ನು ಕಾಣುತ್ತೇನೆ, ಎಂದು ಭೀಮನು ಹೇಳಿದನು. ಮಲ್ಲರು ಬಂದು ಯುದ್ಧವನ್ನು ಜಯಿಸುವ ಬಲಶಾಲಿಯನ್ನು ಕರೆಸು ಎಂದರು.

ಅರ್ಥ:
ಪ್ರಾಣ: ಜೀವ; ಅತಿಶಯ: ಹೆಚ್ಚು; ಮಿಗೆ: ಮತ್ತು, ಅಧಿಕ; ಸಂಗ್ರಾಣಿಸು: ಹುಟ್ಟು; ಕಾಣು: ತೋರು; ನೆಲಕಡೆ: ಸೋಲು, ನಾಶ; ಕ್ಷೋಣಿಪತಿ: ರಾಜ; ಕ್ಷೋಣಿ: ಭೂಮಿ; ಕರೆಸು: ಬರೆಮಾಡು; ಮಲ್ಲ: ಜಟ್ಟಿ; ಶ್ರೇಣಿ: ಗುಂಪು; ಬಂದು: ಆಗಮಿಸು; ಧುರ: ಯುದ್ಧ, ಕಾಳಗ; ಜಯಿಸು: ಗೆಲ್ಲು; ತ್ರಾಣ: ಶಕ್ತಿ, ಬಲ; ಕರೆಸು: ಬರೆಮಾಡು; ಸಭೆ: ದರ್ಬಾರು;

ಪದವಿಂಗಡಣೆ:
ಪ್ರಾಣದ್+ಅತಿಶಯವೇನು+ ಮಿಗೆ+ ಸಂ
ಗ್ರಾಣಿಸುವುದ್+ಇನ್ನೊಮ್ಮೆ +ನಾನೇ
ಕಾಣೆ +ಕಾಣುವೆನ್+ಅವರ +ಜೀವದ +ನೆಲಕಡೆಯನೆಲ್ಲ
ಕ್ಷೋಣಿಪತಿ+ ಕರೆಸಿದರೆ+ ಮಲ್ಲ
ಶ್ರೇಣಿ +ಬಂದುದು +ಧುರವ +ಜಯಿಸುವ
ತ್ರಾಣಿಗನ +ಕರೆಸ್+ಎನುತಲಿದ್ದರು +ರಾಜ+ಸಭೆಯೊಳಗೆ

ಅಚ್ಚರಿ:
(೧) ಕ್ಷೋಣಿ, ಸಂಗ್ರಾಣಿ, ಶ್ರೇಣಿ – ಪ್ರಾಸ ಪದಗಳು
(೨) ಸೋಲಿಸುವೆ ಎಂದು ಹೇಳುವ ಪರಿ – ಕಾಣುವೆನವರ ಜೀವದ ನೆಲಕಡೆಯನೆಲ್ಲ