ಪದ್ಯ ೪೮: ಘಟೋತ್ಕಚನ ಯುದ್ಧವು ಹೇಗೆ ರಣರಂಗವನ್ನು ತಲ್ಲಣಗೊಳಿಸಿತು?

ಅಣೆದನಶ್ವತ್ಥಾಮನನು ತ
ಕ್ಷಣದೊಳರಸನ ತಾಗಿ ದ್ರೋಣನ
ಕೆಣಕಿ ದುಶ್ಯಾಸನನ ಮಸೆಗಾಣಿಸಿ ಕೃಪಾದಿಗಳ
ರಣದೊಳೋಡಿಸಿ ಮುರಿದು ಕರ್ಣನ
ಸೆಣಸಿ ನಿಂದನು ಮತ್ತೆ ಸಮರಾಂ
ಗಣದ ಚೌಪಟಮಲ್ಲನಿತ್ತನು ಪಡೆಗೆ ತಲ್ಲಣವ (ದ್ರೋಣ ಪರ್ವ, ೧೬ ಸಂಧಿ, ೪೮ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನನ್ನು ತಿವಿದು, ಅದೇ ಕ್ಷಣದಲ್ಲಿ ಕೌರವನನ್ನು ಹೊಡೆದು, ದ್ರೋಣನನ್ನು ಕೆಣಕಿ, ದುಶ್ಯಾಸನನಿಗೆ ಗಾಯಮಾಡಿ, ಕೃಪಾದಿಗಳನ್ನು ಓಡಿಸಿ ಹಿಂದಿರುಗಿ ಬಂದು ಕರ್ಣನೊಡನೆ ಸಮರಕ್ಕೆ ನಿಂತು ರಣರಂಗವು ತಲ್ಲಣಿಸುವಂತೆ ಮಾಡಿದನು.

ಅರ್ಥ:
ಅಣೆ: ತಿವಿ, ಹೊಡೆ; ತಕ್ಷಣ: ಕೂಡಲೆ; ಅರಸ: ರಾಜ; ತಾಗು: ಹೊಡೆತ, ಪೆಟ್ಟು; ಕೆಣಕು: ರೇಗಿಸು; ಮಸೆ: ಹರಿತವಾದುದು; ರಣ: ಯುದ್ಧ; ಓಡು: ಧಾವಿಸು; ಮುರಿ: ಸೀಳು; ಸೆಣಸು: ಯುದ್ಧಮಾಡು; ನಿಂದು: ನಿಲ್ಲು; ಸಮರಾಂಗಣ: ಯುದ್ಧಭೂಮಿ; ಚೌಪಟಮಲ್ಲ: ಪರಾಕ್ರಮಿ; ಪಡೆ: ಸೈನ್ಯ; ತಲ್ಲಣ: ಅಂಜಿಕೆ, ಭಯ;

ಪದವಿಂಗಡಣೆ:
ಅಣೆದನ್+ಅಶ್ವತ್ಥಾಮನನು +ತ
ಕ್ಷಣದೊಳ್+ಅರಸನ +ತಾಗಿ +ದ್ರೋಣನ
ಕೆಣಕಿ +ದುಶ್ಯಾಸನನ +ಮಸೆಗಾಣಿಸಿ +ಕೃಪಾದಿಗಳ
ರಣದೊಳ್+ಓಡಿಸಿ +ಮುರಿದು +ಕರ್ಣನ
ಸೆಣಸಿ +ನಿಂದನು +ಮತ್ತೆ +ಸಮರಾಂ
ಗಣದ +ಚೌಪಟಮಲ್ಲನ್+ಇತ್ತನು +ಪಡೆಗೆ +ತಲ್ಲಣವ

ಅಚ್ಚರಿ:
(೧) ಘಟೋತ್ಕಚನ ಪರಾಕ್ರಮವನ್ನು ವರ್ಣಿಸುವ ಪರಿ – ಸಮರಾಂಗಣದ ಚೌಪಟಮಲ್ಲ

ಪದ್ಯ ೬೨: ದ್ರೋಣರ ಯುದ್ಧವು ಹೇಗಿತ್ತು?

ನಕುಲನನು ಮಸೆಗಾಣಿಸಿಯೆ ಸಾ
ತ್ಯಕಿಯ ವಿರಥನ ಮಾಡಿ ಪಾಂಚಾ
ಲಕರನೋಡಿಸಿ ಮತ್ಸ್ಯ ಕೇಕೆಯ ಬಲವ ಬರಿಕೈದು
ಸಕಲ ಸನ್ನಾಹದಲಿ ಚೈದ್ಯ
ಪ್ರಕರವನು ತವೆ ಕೊಂದು ಭೂಪಾ
ಲಕನ ಬೆಂಬತ್ತಿದನು ಭೀಮ ಘಟೋತ್ಕಚರ ಗೆಲಿದ (ದ್ರೋಣ ಪರ್ವ, ೧೦ ಸಂಧಿ, ೬೨ ಪದ್ಯ)

ತಾತ್ಪರ್ಯ:
ನಕುಲನಿಗೆ ಗಾಯಗಳಾಗುವಂತೆ ಹೊಡೆದನು. ದ್ರೋಣನನ್ನೆದುರಿಸೆ ಸಾತ್ಯಕಿಯು ವಿರಥನಾದನು. ಪಾಂಚಾಲರು ಓಡಿಹೋದರು. ಮತ್ಸ್ಯ, ಕೇಕೆಯ ಬಲಗಳನ್ನು ಬಯಲು ಮಾಡಿದನು. ಚೈದ್ಯರನ್ನು ಸಂಹರಿಸಿದನು. ಬಳಿಕ ದೊರೆಯಾದ ಧರ್ಮಪುತ್ರನನ್ನು ಅಟ್ಟಿಸ್ಕೊಂಡು ಹೋಗಿ ಅಡ್ಡಬಂದ ಭೀಮ ಘಟೋತ್ಕಚರನ್ನು ಜಯಿಸಿದನು.

ಅರ್ಥ:
ಮಸೆ: ಹರಿತವಾದುದು; ವಿರಥ: ರಥವಿಲ್ಲದ ಸ್ಥಿತಿ; ಓಡು: ಧಾವಿಸು; ಬಲ: ಸೈನ್ಯ; ಬರಿಕೈ: ಬಯಲು ಮಾಡು; ಸಕಲ: ಎಲ್ಲಾ; ಸನ್ನಾಹ: ಬಂಧನ; ಪ್ರಕರ: ಗುಂಪು, ಸಮೂಹ; ತವೆ: ಅತಿಶಯವಾಗಿ, ಹೆಚ್ಚಾಗಿ; ಕೊಂದು: ಸಾಯಿಸು; ಭೂಪಾಲ: ರಾಜ; ಬೆಂಬತ್ತು: ಅಟ್ಟಿಸಿಕೊಂಡು ಹೋಗು; ಗೆಲಿದು: ಜಯಿಸು;

ಪದವಿಂಗಡಣೆ:
ನಕುಲನನು +ಮಸೆಗಾಣಿಸಿಯೆ +ಸಾ
ತ್ಯಕಿಯ +ವಿರಥನ+ ಮಾಡಿ +ಪಾಂಚಾ
ಲಕರನ್+ಓಡಿಸಿ +ಮತ್ಸ್ಯ +ಕೇಕೆಯ +ಬಲವ +ಬರಿಕೈದು
ಸಕಲ+ ಸನ್ನಾಹದಲಿ +ಚೈದ್ಯ
ಪ್ರಕರವನು +ತವೆ +ಕೊಂದು +ಭೂಪಾ
ಲಕನ +ಬೆಂಬತ್ತಿದನು +ಭೀಮ +ಘಟೋತ್ಕಚರ+ ಗೆಲಿದ

ಅಚ್ಚರಿ:
(೧) ಸೋಲಿಸಿದ ಎನ್ನುವ ಪದಗಳ ಬಳಕೆ ಮಸೆಗಾಣಿಸಿ, ವಿರಥ, ಓಡಿಸು, ಬರಿಕೈದು, ಕೊಂದು, ಗೆಲಿದು

ಪದ್ಯ ೨೮: ಧರ್ಮಜಾದಿಯರನ್ನು ಯಾರು ತಡೆದರು?

ಅರಸು ಮಕ್ಕಳ ಕೊಂದನೈನೂ
ರ್ವರನು ಮೂರಕ್ಷೋಣಿ ಸೈನ್ಯವ
ನೊರಸಿದನು ಮಸೆಗಾಣಿಸಿದನಗ್ಗದ ಮಹಾರಥರ
ಧುರವ ಗೆಲಿದನು ಪಡಿತಳಿಸಿ ನಾ
ವುರವಣಿಸಲಡಹಾಯ್ದು ನಮ್ಮನು
ಹರನ ವರವುಂಟೆಂದು ತಡೆದನು ಸಿಂಧು ಭೂಪಾಲ (ದ್ರೋಣ ಪರ್ವ, ೮ ಸಂಧಿ, ೨೮ ಪದ್ಯ)

ತಾತ್ಪರ್ಯ:
ಅಭಿಮನ್ಯುವು ಐನೂರು ರಾಜಕುಮಾರರನ್ನು ಕೊಂದನು, ಮೂರು ಅಕ್ಷೋಹಿಣಿ ಸೈನ್ಯವನ್ನು ಒರಸಿದನು. ಮಹಾರಥರ ಮೈಗಳನ್ನು ಗಾಯಗೊಳಿಸಿದನು. ಅವನು ಅತ್ತ ಜಯಶಾಲಿಯಾಗುತ್ತಿದ್ದಾಗ ನಾವು ಅವನ ಹಿಂದೆ ಹೋಗಲು ಪದ್ಮವ್ಯೂಹದ ಬಾಗಿಲಿನಲ್ಲಿ ನನಗೆ ಶಿವನ ವರವಿದೆ, ಎಂದು ಸೈಂಧವನು ನಮ್ಮನ್ನು ತಡೆದನು.

ಅರ್ಥ:
ಅರಸು: ರಾಜ; ಮಕ್ಕಳು: ಸುತ; ಕೊಂದು: ಸಾಯಿಸು; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ಸೈನ್ಯ: ಸೇನೆ; ಒರಸು: ನಾಶ; ಮಸೆ: ಉಜ್ಜು, ತಿಕ್ಕು; ಅಗ್ಗ: ಶ್ರೇಷ್ಠ; ಮಹಾರಥ: ಪರಾಕ್ರಮ; ಧುರ: ಯುದ್ಧ; ಗೆಲಿದು: ಜಯಿಸು; ಪಡಿತಳ: ಮುನ್ನುಗ್ಗುವಿಕೆ, ಆಕ್ರಮಣ; ಉರವಣಿಸು: ಆತುರಿಸು; ಅಡಹಾಯ್ದು: ಅಡ್ಡ ಬಂದು ಹೋರಾಡು; ಹರ: ಶಿವ; ವರ: ಆಶೀರ್ವಾದ; ತಡೆ: ನಿಲ್ಲಿಸು; ಭೂಪಾಲ: ರಾಜ; ಸಿಂಧುಭೂಪಾಲ: ಸೈಂಧವ;

ಪದವಿಂಗಡಣೆ:
ಅರಸು +ಮಕ್ಕಳ +ಕೊಂದನ್+ಐನೂ
ರ್ವರನು +ಮೂರಕ್ಷೋಣಿ +ಸೈನ್ಯವನ್
ಒರಸಿದನು +ಮಸೆಗಾಣಿಸಿದನ್+ಅಗ್ಗದ +ಮಹಾರಥರ
ಧುರವ +ಗೆಲಿದನು +ಪಡಿತಳಿಸಿ +ನಾವ್
ಉರವಣಿಸಲ್+ಅಡಹಾಯ್ದು +ನಮ್ಮನು
ಹರನ +ವರವುಂಟೆಂದು +ತಡೆದನು +ಸಿಂಧು +ಭೂಪಾಲ

ಅಚ್ಚರಿ:
(೧) ಸೈಂಧವ ನೆಂದು ಹೇಳಲು – ಸಿಂಧು ಭೂಪಾಲ ಪದದ ಬಳಕೆ
(೨) ಅಭಿಮನ್ಯುವಿನ ಪರಾಕ್ರಮ – ಅರಸು ಮಕ್ಕಳ ಕೊಂದನೈನೂರ್ವರನು ಮೂರಕ್ಷೋಣಿ ಸೈನ್ಯವ
ನೊರಸಿದನು ಮಸೆಗಾಣಿಸಿದನಗ್ಗದ ಮಹಾರಥರ

ಪದ್ಯ ೬೦: ದ್ರೋಣರು ಯಾರ ಎದುರು ಯುದ್ಧಕ್ಕೆ ಬಂದರು?

ಸವರಿ ಹೊಕ್ಕನು ಕೆಲಬಲದ ಪಾಂ
ಡವ ಮಹಾರಥರನು ವಿಭಾಡಿಸಿ
ಪವನಜನ ಮುರಿಯೆಚ್ಚು ನಕುಲನ ರಥವ ಹುಡಿಮಾಡಿ
ಕವಲುಗೋಲಲಿ ದ್ರುಪದ ಮತ್ಸ್ಯರ
ನವಗಡಿಸಿ ಹೈಡಿಂಬನಭಿಮ
ನ್ಯುವನು ಮಸೆಗಾಣಿಸಿ ಮಹೀಶನ ರಥಕೆ ಮಾರಾಂತ (ದ್ರೋಣ ಪರ್ವ, ೧ ಸಂಧಿ, ೬೦ ಪದ್ಯ)

ತಾತ್ಪರ್ಯ:
ಅಕ್ಕಪಕ್ಕದಲ್ಲಿದ್ದ ಪಾಂಡವ ಮಹಾರಥರನ್ನು ಸೋಲಿಸಿ, ಬಡಿದು, ಭೀಮನ ರಥವನ್ನು ಮುರಿದು, ನಕುಲನ ರಥವನ್ನು ಪುಡಿಮಾಡಿ, ಕವಲು ಬಾಣದಿಂದ ದ್ರುಪದ, ವಿರಾಟರನ್ನು ಗೆದ್ದು, ಅಭಿಮನ್ಯು ಮತ್ತು ಘಟೋತ್ಕಚರಿಗೆ ಬಾಣದ ರುಚಿಯನ್ನು ತೋರಿಸಿ ಧರ್ಮಜನ ರಥದತ್ತ ದೋಣರು ಮುಂದುವರೆದರು.

ಅರ್ಥ:
ಸವರು: ನಾಶಗೊಳಿಸು, ಧ್ವಂಸ ಮಾಡು; ಹೊಕ್ಕು: ಸೇರು; ಕೆಲಬಲ: ಅಕ್ಕಪಕ್ಕ, ಎಡಬಲ; ವಿಭಾಡ: ನಾಶಮಾಡುವವನು; ಪವನಜ: ವಾಯುಪುತ್ರ (ಭೀಮ); ಮುರಿ: ಸೀಳು; ಎಚ್ಚು: ಬಾಣ ಪ್ರಯೋಗ ಮಾಡು; ರಥ: ಬಂಡಿ; ಹುಡಿ: ಪುಡಿ; ಕವಲುಗೋಲು: ಬಾಣ; ಅವಗಡಿಸು: ಕಡೆಗಣಿಸು; ಹೈಡಿಂಬ: ಘಟೋತ್ಕಚ; ಮಸೆ:ಹರಿತವಾದುದು; ಮಹೀಶ: ರಾಜ; ರಥ: ಬಂಡಿ; ಮಾರಾಂತು: ಯುದ್ಧಕ್ಕೆ ನಿಂತು, ಎದುರಾಗು;

ಪದವಿಂಗಡಣೆ:
ಸವರಿ +ಹೊಕ್ಕನು +ಕೆಲಬಲದ +ಪಾಂ
ಡವ +ಮಹಾರಥರನು+ ವಿಭಾಡಿಸಿ
ಪವನಜನ +ಮುರಿ+ಎಚ್ಚು +ನಕುಲನ +ರಥವ +ಹುಡಿಮಾಡಿ
ಕವಲುಗೋಲಲಿ +ದ್ರುಪದ +ಮತ್ಸ್ಯರನ್
ಅವಗಡಿಸಿ +ಹೈಡಿಂಬನ್+ಅಭಿಮ
ನ್ಯುವನು +ಮಸೆಗಾಣಿಸಿ+ ಮಹೀಶನ +ರಥಕೆ +ಮಾರಾಂತ

ಅಚ್ಚರಿ:
(೧) ನಾಶಮಾಡು, ಸೊಲಿಸು ಎಂದು ಹೇಳುವ ಪದಗಳ ಬಳಕೆ – ಸವರಿ, ವಿಭಾಡಿಸಿ, ಮುರಿ, ಹುಡಿಮಾಡಿ, ಅವಗಡಿಸಿ, ಮಸೆಗಾಣಿಸಿ

ಪದ್ಯ ೨೩: ಭೀಮನು ಹನುಮನನ್ನು ಏನು ಕೇಳಿದ?

ಭೀಮ ಗಡ ತಾನೌಕಿ ನಿಲಲು
ದ್ದಾಮ ಬಾಲದ ನಿದ್ರೆ ತಿಳಿಯದು
ರೋಮತತಿ ಮಸೆಗಾಣಿಸಿದುವೆನ್ನುತ್ತಮಾಂಗದಲಿ
ಈ ಮನುಷ್ಯ ಶರೀರವಪಜಯ
ಧಾಮವಲ್ಲಾ ಹರಹರಾ ನಿ
ಸ್ಸೀಮ ಕಪಿ ನೀನಾರೆನುತ ಪವನಜನ ಬೆಸಗೊಂಡ (ಅರಣ್ಯ ಪರ್ವ, ೧೧ ಸಂಧಿ, ೨೩ ಪದ್ಯ)

ತಾತ್ಪರ್ಯ:
ನಾನು ಭೀಮನಲ್ಲವೇ? ನಾನು ಸಮಸ್ತ ಶಕ್ತಿಯಿಂದ ನೂಕಿದರೂ ಈ ಬಾಲವೂ ಒಂದು ಎಳ್ಳಿನಷ್ಟು ಅಲ್ಲಾಡಲಿಲ್ಲ, ಬಾಲದ ಮೇಲಿನ ರೋಮಗಳು ನನ್ನ ಅಂಗಾಂಗಳನ್ನು ತೆರೆದು ಬಿಟ್ಟವು. ಅಯ್ಯೋ ಈ ಮನುಷ್ಯ ದೇಹವೆಂಬುದು ಅಪಜಯದ ಆವಾಸಸ್ಥಾನ ಎಂದು ಭೀಮನು ದುಃಖಿಸಿ ಹನುಮಂತನನ್ನು ಅಪಾರ ಬಲಶಾಲಿಯಾದ ಕಪಿಯೇ ನೀನಾರು ಎಂದು ಕೇಳಿದನು.

ಅರ್ಥ:
ಗಡ: ಸಂತೋಷ, ಆಶ್ಚರ್ಯವನ್ನು ಸೂಚಿಸುವ ಪದ; ಔಕು: ಒತ್ತು; ನಿಲು: ನಿಲ್ಲು; ಉದ್ದಾಮ:ಶ್ರೇಷ್ಠ; ಬಾಲ: ಪುಚ್ಛ; ನಿದ್ರೆ: ಶಯನ; ತಿಳಿ: ಅರಿ; ರೋಮ: ಕೂದಲು; ತತಿ: ಗುಂಪು; ಮಸೆ: ಹರಿತ, ಚೂಪು; ಕಾಣಿಸು: ತೋರು; ಅಂಗ: ದೇಹದ ಭಾಗ; ಮನುಷ್ಯ: ನರ; ಶರೀರ: ಒಡಲು; ಅಪಜಯ: ಸೋಲು; ಧಾಮ: ವಾಸಸ್ಥಳ, ಶರೀರ; ಹರಹರಾ: ಶಿವ ಶಿವಾ; ನಿಸ್ಸೀಮ: ಎಲ್ಲೆಯಿಲ್ಲದುದು; ಕಪಿ: ವಾನರ; ಪವನಜ: ವಾಯುಪುತ್ರ (ಭೀಮ); ಬೆಸ: ವಿಚಾರಿಸುವುದು;

ಪದವಿಂಗಡಣೆ:
ಭೀಮ+ ಗಡ+ ತಾನ್+ಔಕಿ+ ನಿಲಲ್
ಉದ್ದಾಮ +ಬಾಲದ +ನಿದ್ರೆ +ತಿಳಿಯದು
ರೋಮತತಿ+ ಮಸೆಗಾಣಿಸಿದುವೆನ್+ಉತ್ತಮಾಂಗದಲಿ
ಈ +ಮನುಷ್ಯ +ಶರೀರವ್+ಅಪಜಯ
ಧಾಮವಲ್ಲಾ+ ಹರಹರಾ+ ನಿ
ಸ್ಸೀಮ +ಕಪಿ+ ನೀನಾರೆನುತ+ ಪವನಜನ +ಬೆಸಗೊಂಡ

ಅಚ್ಚರಿ:
(೧) ಮನುಷ್ಯ ಶರೀರದ ಬಗ್ಗೆ ಭೀಮನು ಹೇಳಿದ ನುಡಿ – ಈ ಮನುಷ್ಯ ಶರೀರವಪಜಯ
ಧಾಮವಲ್ಲಾ