ಪದ್ಯ ೩೭: ಭೀಮನು ಯಾವ ಪ್ರತಿಜ್ಞೆ ಮಾಡಿದನು?

ಮಾಣಲದು ಕೌರವರ ನೂರ್ವರ
ಗೋಣಬನ ಕಾಳಗದೊಳೆನ್ನಯ
ಕೇಣಿ ತನ್ನಯ ಗದೆಗೆ ದುರಿಯೋಧನನ ತೊಡೆಗಳಿಗೆ
ವಾಣಿಯವು ದುಶ್ಯಾಸನನ ತನಿ
ಶೋಣಿತವ ನಾ ಕುಡಿಯದಿರೆ ನಿ
ನ್ನಾಣೆ ಸೈರಣೆಗಿದುವೆ ಫಲವೆಂದೊದರಿದನು ಭೀಮ (ಸಭಾ ಪರ್ವ, ೧೬ ಸಂಧಿ, ೩೭ ಪದ್ಯ)

ತಾತ್ಪರ್ಯ:
ಅರ್ಜುನನು ಭೀಮನಿಗೆ ಸಮಾಧಾನಿಸಲು ಹೇಳಿದ ನಂತರ, ಭೀಮನು ಅರ್ಜುನನಿಗೆ, ಅರ್ಜುನ ಹಾಗಾದರೆ ನಾನು ಕೌರವರನ್ನು ಈಗ ತಿನ್ನುವುದಿಲ್ಲ. ಯುದ್ಧದಲ್ಲಿ ನೂರ್ವರು ಕೌರವರ ಕತ್ತುಗಳ ಕಾಡನ್ನು ನಾನು ಗುತ್ತಿಗೆ ಹಿಡಿದಿದ್ದೇನೆ. ದುರ್ಯೋಧನನ ತೊಡೆಗಳನ್ನು ನನ್ನ ಗದೆಗೆ ಕೊಂಡುಕೊಂಡಿದ್ದೇನೆ. ದುಶ್ಯಾಸನ ಬಿಸಿ ರಕ್ತವನ್ನು ನಾನು ಕುಡಿಯದಿದ್ದರೆ ನಿನ್ನಾಣೆ, ಇದಕ್ಕೆ ತಪ್ಪುವುದಿಲ್ಲ. ಈಗ ನಾನು ಸೈರಿಸಿದುದಕ್ಕೆ ಇದೇ ನನ್ನ ಫಲ ಎಂದು ಭೀಮನು ಪ್ರಮಾಣ ಮಾಡಿ ಅರ್ಜುನನಿಗೆ ಉತ್ತರಿಸಿದನು.

ಅರ್ಥ:
ಮಾಣು: ನಿಲ್ಲಿಸು; ಗೋಣು: ಕುತ್ತಿಗೆ; ಕಾಳಗ: ಯುದ್ಧ; ಕೇಣಿ: ಗುತ್ತಿಗೆ, ಗೇಣಿ; ಗದೆ: ಮುದ್ಗರ; ತೊಡೆ: ಊರು; ವಾಣಿ: ಮಾತು; ತನಿ: ರುಚಿ, ಪಕ್ವವಾದ; ಶೋಣಿತ: ರಕ್ತ; ಕುಡಿ: ಪಾನ ಮಾಡು; ಆಣೆ: ಪ್ರಮಾಣ; ಸೈರಣೆ: ತಾಳ್ಮೆ, ಸಹನೆ; ಫಲ: ಪ್ರಯೋಜನ; ಒದರು: ಹೇಳು;

ಪದವಿಂಗಡಣೆ:
ಮಾಣಲದು+ ಕೌರವರ +ನೂರ್ವರ
ಗೋಣಬನ+ ಕಾಳಗದೊಳ್+ಎನ್ನಯ
ಕೇಣಿ +ತನ್ನಯ +ಗದೆಗೆ +ದುರಿಯೋಧನನ +ತೊಡೆಗಳಿಗೆ
ವಾಣಿಯವು +ದುಶ್ಯಾಸನನ +ತನಿ
ಶೋಣಿತವ +ನಾ +ಕುಡಿಯದಿರೆ+ ನಿ
ನ್ನಾಣೆ +ಸೈರಣೆಗ್+ಇದುವೆ +ಫಲವೆಂದ್+ಒದರಿದನು +ಭೀಮ

ಅಚ್ಚರಿ:
(೧) ಮಾಣ, ಗೋಣ – ಪ್ರಾಸ ಪದ
(೨) ಭೀಮನ ಪ್ರಮಾಣ – ದುಶ್ಯಾಸನನ ತನಿಶೋಣಿತವ ನಾ ಕುಡಿಯದಿರೆ ನಿನ್ನಾಣೆ

ನಿಮ್ಮ ಟಿಪ್ಪಣಿ ಬರೆಯಿರಿ