ಪದ್ಯ ೨೩: ಯೋಧರ ಅಪರಕರ್ಮವನ್ನು ಹೇಗೆ ಮಾಡಲಾಯಿತು?

ಕಳನ ಚೌಕದ ಸುತ್ತಲೊಟ್ಟಿಸಿ
ತಳಿಗಳನು ಬಹಳಾಗ್ನಿಯನು ಕೈ
ಕೊಳಿಸಿದರು ದಹಿಸಿದರು ಬಹಳಾಕ್ಷೋಹಿಣೀಭಟರ
ಬಳಿಕ ಹಸ್ತಿನಪುರದ ಸೀಮಾ
ಸ್ಥಳಕೆ ಬಂದರು ನಿಖಿಳ ಕಾಂತಾ
ವಳಿಸಹಿತ ಗಂಗಾವಗಹನವ ಮಾಡಿದನು ನೃಪತಿ (ಗದಾ ಪರ್ವ, ೧೨ ಸಂಧಿ, ೨೩ ಪದ್ಯ)

ತಾತ್ಪರ್ಯ:
ರಣರಂಗದ ಸುತ್ತಲೂ ಕೊರಡುಗಲನ್ನೊಟ್ಟಿಸಿ, ಹದಿನೆಂಟು ಅಕ್ಷೋಹಿಣೀ ಸೈನ್ಯದ ಯೋಧರನ್ನು ದಹಿಸಿದರು. ನಂತರ ಧರ್ಮಜನು ಹಸ್ತಿನಾವತಿಯ ಪ್ರದೇಶಕ್ಕೆ ಬಂದು ಸ್ತ್ರೀಯರೊಡನೆ ಗಂಗಾ ಸ್ನಾನವನ್ನು ಮಾಡಿದರು.

ಅರ್ಥ:
ಕಳ: ರಣರಂಗ; ಚೌಕ: ಚತುಷ್ಕಾಕಾರವಾದುದು; ಸುತ್ತ: ಎಲ್ಲಾ ಕಡೆ; ಒಟ್ಟಿಸು: ಕೂಡಿಸು; ತಳಿ: ಹರಡು, ಕೆದರು; ಬಹಳ: ತುಂಬ; ಅಗ್ನಿ: ಬೆಂಕಿ; ಕೈಕೊಳಿಸು: ಸ್ವೀಕರಿಸು; ದಹಿಸು: ಸುಡು; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ಭಟ: ಸೈನಿಕ; ಬಳಿಕ: ನಂತರ; ಸೀಮೆ: ಎಲ್ಲೆ, ಗಡಿ; ಸ್ಥಳ: ಪ್ರದೇಶ; ಬಂದು: ಆಗಮಿಸು; ನಿಖಿಳ: ಎಲ್ಲಾ; ಕಾಂತಾವಳಿ: ಸ್ತ್ರೀಯರ ಗುಂಪು; ಅವಗಾಹ: ಸ್ನಾನ; ನೃಪತಿ: ರಾಜ;

ಪದವಿಂಗಡಣೆ:
ಕಳನ +ಚೌಕದ +ಸುತ್ತಲೊಟ್ಟಿಸಿ
ತಳಿಗಳನು +ಬಹಳಾಗ್ನಿಯನು+ ಕೈ
ಕೊಳಿಸಿದರು +ದಹಿಸಿದರು +ಬಹಳ+ಅಕ್ಷೋಹಿಣೀ+ಭಟರ
ಬಳಿಕ +ಹಸ್ತಿನಪುರದ ಸೀಮಾ
ಸ್ಥಳಕೆ+ ಬಂದರು +ನಿಖಿಳ +ಕಾಂತಾ
ವಳಿ+ಸಹಿತ +ಗಂಗಾವಗಹನವ+ ಮಾಡಿದನು +ನೃಪತಿ

ಪದ್ಯ ೧೪: ತಂದ ವಸ್ತುಗಳನ್ನು ಎಲ್ಲಿ ಇಟ್ಟರು?

ಕಳನ ಸವೆದರು ಮೂರು ಯೋಜನ
ವಳಯದಲಿ ಪಡಿಯಗಳು ಕೋಟಾ
ವಳಯ ಸುಯ್ಧಾನದಲಿ ಹೊಯ್ದರು ರತ್ನ ಕಾಂಚನವ
ಕೆಲದೊಳೈಗಾವುದದೊಳಿಕ್ಕಿದ
ತಳಿಯ ಮಧ್ಯದೊಳಖಿಳ ವಸ್ತ್ರಾ
ವಳಿಯನೊಟ್ಟಿದರದರ ಕೆಲದಲಿ ರಾಯ ಕೇಳೆಂದ (ಸಭಾ ಪರ್ವ, ೬ ಸಂಧಿ, ೧೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಮೂರು ಯೋಜನ ವಿಸ್ತಾರದಲಿ ಭೂಮಿಯನ್ನು ಸಮತಟ್ಟು ಮಾಡಿ ಸುತ್ತಲೂ ಕೋಟೆಯನ್ನು ಕಟ್ಟಿ ಕೋಟೆಯ ಹೊರಗೆ ಕಂದಕವನ್ನು ರಚಿಸಿದರು. ಕೋಟೆಯ ನಡುವಿನ ಪ್ರದೇಶದಲ್ಲಿ ನವರತ್ನಗಳನ್ನೂ, ಬಂಗಾರವನ್ನೂ ಸುರಿದರು. ಕೋಟೆಯ ಪಕ್ಕದಲ್ಲಿ ಐದು ಗಾವುದ ಪ್ರದೇಶಕ್ಕೆ ಬೇಲಿಯನ್ನು ರಚಿಸಿ ಹೊಸವಸ್ತುಗಳನ್ನು ಒಟ್ಟಿದರು.

ಅರ್ಥ:
ಕಳ: ಭೂಮಿ, ಧಾನ್ಯಗಳನ್ನು ಒಕ್ಕುವುದಕ್ಕಾಗಿ ಸಿದ್ಧಪಡಿಸಿದ ಸ್ಥಳ; ಸವೆ:ನಿರ್ಮಿಸು, ಸಜ್ಜು ಮಾಡು; ಯೋಜನ: ಅಳತೆಯ ಪ್ರಮಾಣ; ವಳಯ: ವರ್ತುಲ, ಪರಿಧಿ; ಪಡಿ: ಸಮಾನವಾದುದು; ಕೋಟೆ: ದುರ್ಗ; ಹೊಯ್ದರು: ಸುರಿದರು; ರತ್ನ: ಬೆಲೆಬಾಳುವ ಮಣಿ; ಕಾಂಚನ: ಚಿನ್ನ; ತಳಿ: ಬೇಲಿ; ಮಧ್ಯ: ನಡು; ಅಖಿಳ: ಎಲ್ಲಾ; ವಸ್ತ್ರ: ಬಟ್ಟೆ; ಆವಳಿ: ಗುಂಪು, ಸಾಲು; ಕೆಲ: ಪಕ್ಕ, ಮಗ್ಗುಲು; ರಾಯ: ರಾಜ;

ಪದವಿಂಗಡಣೆ:
ಕಳನ +ಸವೆದರು +ಮೂರು +ಯೋಜನ
ವಳಯದಲಿ+ ಪಡಿಯಗಳು +ಕೋಟಾ
ವಳಯ +ಸುಯ್ಧಾನದಲಿ+ ಹೊಯ್ದರು +ರತ್ನ+ ಕಾಂಚನವ
ಕೆಲದೊಳ್+ಐಗಾವುದದೊಳ್+ಇಕ್ಕಿದ
ತಳಿಯ +ಮಧ್ಯದೊಳ್+ಅಖಿಳ+ ವಸ್ತ್ರಾ
ವಳಿಯನ್+ಒಟ್ಟಿದರ್+ಅದರ+ ಕೆಲದಲಿ+ ರಾಯ +ಕೇಳೆಂದ

ಅಚ್ಚರಿ:
(೧) ವಳ,ವಳಿ – ೨,೩, ೬ ಸಾಲಿನ ಮೊದಲ ಪದ