ಪದ್ಯ ೭೦: ಭೀಮನು ಯಾವ ಶಪಥವನ್ನು ಮಾಡಿದನು?

ಈಸು ದಿನವೆಮ್ಮಣ್ಣನಾಜ್ಞಾ
ಪಾಶದಲಿ ಸಿಲುಕಿರ್ದೆ ಸಿಂಹದ
ಕೂಸು ನರಿ ಕೆನಕುವವೊಲೀ ಕುರುಕೀಚಕಾದಿಗಳು
ಗಾಸಿಯಾದರು ಕೆಣಕಿ ನಾಯ್ಗಳ
ವೀಸ ಬಡ್ಡಿಯಲಸುವ ಕೊಂಬೆನು
ವಾಸಿ ಧರ್ಮದ ಮೇರೆ ತಪ್ಪಿತು ಕಾಂತೆ ಕೇಳೆಂದ (ವಿರಾಟ ಪರ್ವ, ೩ ಸಂಧಿ, ೭೦ ಪದ್ಯ)

ತಾತ್ಪರ್ಯ:
ಇಷ್ಟು ದಿನ ನಮ್ಮಣ್ನನ ಆಜ್ಞೆಯ ಹಗ್ಗದಿಮ್ದ ಕಟ್ಟಲ್ಪಟ್ಟಿದ್ದೆ, ಆದುರದಿಂದ ಕೌರವರು ಕೀಚಕರು ಮೊದಲಾದ ನಾಯಿಗಳು ಸಿಂಹದ ಮರಿಯನ್ನು ಕೆಣಕುವಂತೆ ನನ್ನನ್ನು ಕೆಣಕಿ ಕೆಟ್ಟು ಹೋದರು. ಈ ನಾಯಿಗಳನ್ನು ಈಗ ನಾನೇ ಕೆಣಕಿ, ವೀಸಬಡ್ಡಿ ಸೇರಿಸಿ ಪ್ರಾಣವನ್ನು ತೆಗೆಯುತ್ತೇನೆ, ಶಪಥ ಮಾಡಿ ಹೇಳುತ್ತೇನೆ ಇನ್ನು ಧರ್ಮದ ಮೇರೆಯನ್ನು ಮೀರುತ್ತೇನೆ ಎಂದು ದ್ರೌಪದಿಗೆ ಹೇಳಿದನು.

ಅರ್ಥ:
ಈಸು: ಇಷ್ತು; ದಿನ: ದಿವಸ; ಅಣ್ಣ: ಸಹೋದರ; ಆಜ್ಞೆ: ಅಪ್ಪಣೆ; ಪಾಶ: ಹಗ್ಗ, ಬಂಧನ; ಸಿಲುಕು: ಸೆರೆಯಾಗು; ಸಿಂಹ: ಕೇಸರಿ; ಕೂಸು: ಮರಿ; ಕೆಣಕು: ರೇಗಿಸು; ಆದಿ: ಮುಂತಾದ; ಗಾಸಿ: ಪೆಟ್ಟು, ತೊಂದರೆ; ನಾಯಿ: ಶ್ವಾನ; ಬಡ್ಡಿ: ಹೆಚ್ಚಳ; ವೀಸ: ಆಣೆಯ ೧/೧೬ನೇ ಭಾಗ; ಅಸುವ: ಪ್ರಾಣ; ಕೊಂಬೆ: ತೆಗೆ; ವಾಸಿ: ಪ್ರತಿಜ್ಞೆ, ಶಪಥ; ಧರ್ಮ: ನಿಯಮ; ಮೇರೆ: ಎಲ್ಲೆ; ತಪ್ಪು: ಮೀರು; ಕಾಂತೆ: ಪ್ರಿಯತಮೆ; ಕೇಳು: ಆಲಿಸು;

ಪದವಿಂಗಡಣೆ:
ಈಸು +ದಿನವ್+ಎಮ್ಮಣ್ಣನ+ಆಜ್ಞಾ
ಪಾಶದಲಿ+ ಸಿಲುಕಿರ್ದೆ+ ಸಿಂಹದ
ಕೂಸು +ನರಿ+ ಕೆನಕುವವೊಲ್+ಈ+ ಕುರು+ಕೀಚಕಾದಿಗಳು
ಗಾಸಿಯಾದರು +ಕೆಣಕಿ+ ನಾಯ್ಗಳ
ವೀಸ ಬಡ್ಡಿಯಲ್+ಅಸುವ +ಕೊಂಬೆನು
ವಾಸಿ +ಧರ್ಮದ+ ಮೇರೆ +ತಪ್ಪಿತು +ಕಾಂತೆ +ಕೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸಿಂಹದ ಕೂಸು ನರಿ ಕೆನಕುವವೊಲೀ ಕುರುಕೀಚಕಾದಿಗಳು ಗಾಸಿಯಾದರು

ಪದ್ಯ ೧೯: ಭೀಮನೇಕೆ ಆಶ್ಚರ್ಯಗೊಂಡನು?

ಐಸಲೇ ತಪ್ಪೇನೆನುತ ತನ
ಗೇಸು ಬಲುಹುಂಟೈಸರಲಿ ಕ
ಟ್ಟಾಸುರದಲೌಕಿದನು ಬಾಲವನೊದರಿ ಬೊಬ್ಬಿರಿದು
ಗಾಸಿಯಾದನು ಪವನಸುತನೆ
ಳ್ಳೈಸು ಮಿಡುಕದು ಬಾಲವೂರ್ದ್ವ
ಶ್ವಾಸಲಹರಿಯಲಡಿಗಡಿಗೆ ಲಟಕಟಿಸಿದನು ಭೀಮ (ಅರಣ್ಯ ಪರ್ವ, ೧೧ ಸಂಧಿ, ೧೯ ಪದ್ಯ)

ತಾತ್ಪರ್ಯ:
ಭೀಮನು ಹನುಮನ ಕೋರಿಕೆಯನ್ನು ಕೇಳಿ, ಅಷ್ಟೇ ತಾನೆ, ಇದರಲ್ಲೇನು ತಪ್ಪು ಎಂದು ಹೇಳಿ ಭೀಮನು ತನಗೆಷ್ಟು ಸತ್ವವಿತ್ತೋ ಆ ಬಲವನ್ನೇಲ್ಲ ಒಟ್ಟುಗೂಡಿಸಿ ಜೋರಾಗಿ ಬೊಬ್ಬೆಯಿಡುತ್ತಾ ಬಾಲವನ್ನು ಅಲುಗಾಡಿಸಿದರೂ ಆ ಬಾಲವು ಒಂದು ಎಳ್ಳಿನಷ್ಟೂ ಅಲುಗಲಿಲ್ಲ. ಭೀಮನಿಗೆ ಮೇಲುಸಿರು ಬಂತು, ಆಶ್ಚರ್ಯಚಕಿತನಾಗಿ ಭೀಮನು ಬೆಂಡಾದನು.

ಅರ್ಥ:
ಐಸಲೇ: ಅಲ್ಲವೇ; ಏಸು: ಎಷ್ಟು; ಬಲ: ಶಕ್ತಿ; ಐಸರ್: ಅಷ್ಟರಲ್ಲಿ; ಕಟ್ಟಾಸುರ: ಅತ್ಯಂತ ಭಯಂಕರ; ಔಕು: ನೂಕು; ಬಾಲ: ಪುಚ್ಛ; ಒದರು: ಕೊಡಹು, ಜಾಡಿಸು; ಬೊಬ್ಬೆ: ಗರ್ಜಿಸು; ಗಾಸಿ: ತೊಂದರೆ, ಕಷ್ಟ; ಪವನಸುತ: ವಾಯುಪುತ್ರ (ಭೀಮ); ಎಳ್ಳೈಸು: ಎಳ್ಳಿನಷ್ಟು, ಸ್ವಲ್ಪವೂ; ಮಿಡುಕು: ಅಲ್ಲಾಡು; ಊರ್ಧ್ವ: ಮೇಲ್ಭಾಗ; ಶ್ವಾಸ: ಉಸಿರು; ಲಹರಿ: ರಭಸ, ಆವೇಗ; ಅಡಿಗಡಿಗೆ: ಮತ್ತೆ ಮತ್ತೆ; ಲಟಕಟಿಸು: ಉದ್ವೇಗ, ಆಶ್ಚರ್ಯ;

ಪದವಿಂಗಡಣೆ:
ಐಸಲೇ +ತಪ್ಪೇನ್+ಎನುತ +ತನಗ್
ಏಸು+ ಬಲುಹುಂಟ್+ಐಸರಲಿ +ಕ
ಟ್ಟಾಸುರದಲ್+ಔಕಿದನು +ಬಾಲವನ್+ಒದರಿ +ಬೊಬ್ಬಿರಿದು
ಗಾಸಿಯಾದನು+ ಪವನಸುತನ್
ಎಳ್ಳೈಸು +ಮಿಡುಕದು +ಬಾಲವ್+ಊರ್ದ್ವ
ಶ್ವಾಸ+ಲಹರಿಯಲ್+ಅಡಿಗಡಿಗೆ+ ಲಟಕಟಿಸಿದನು +ಭೀಮ

ಅಚ್ಚರಿ:
(೧) ಭೀಮನು ಆಯಾಸಗೊಂಡ ಪರಿ – ಊರ್ದ್ವಶ್ವಾಸಲಹರಿಯಲಡಿಗಡಿಗೆ ಲಟಕಟಿಸಿದನು ಭೀಮ

ಪದ್ಯ ೨೯:ಗಂಗೆಯು ಕುಂತಿಗೆ ಏನು ಹೇಳಿದಳು?

ಆ ಸಮಯದೊಳು ಗಂಗೆ ನಾರೀ
ವೇಷದೊಳು ನಡೆತಂದಳೆಲೆ ಕುಂ
ತೀ ಸತಿಯೆ ಕೈಯೆಡೆಯ ಕಂದನನೊಪ್ಪುಗೊಳು ನೀನು
ಈಸುದಿನಮಿವನಾಗು ಹೋಗಿನ
ಗಾಸಿಯನು ಸಲೆ ಯಾದೆನೆನ್ನಯ
ಭಾಷೆಸಂದುದೆನುತ್ತೆ ತಾಯಿಗೆ ಕೊಟ್ಟಳಾತ್ಮಜನ (ಉದ್ಯೋಗ ಪರ್ವ, ೧೧ ಸಂಧಿ, ೨೯ ಪದ್ಯ)

ತಾತ್ಪರ್ಯ:
ಕುಂತಿ ಕರ್ಣರಿಬ್ಬರು ಇದ್ದ ಸಮಯದಲ್ಲಿ ಗಂಗಾದೇವಿಯು ನಾರೀ ರೂಪವನ್ನು ಧರಿಸಿ ಬಂದು ಕುಂತಿಗೆ, “ಎಲೌ ಕುಂತಿ ಚಿಕ್ಕಂದಿನಲ್ಲಿ ನನ್ನ ಕೈಗೊಪ್ಪಿಸಿದ್ದ ನಿನ್ನ ಮಗುವನ್ನು ಹಿಂದಿರುಗಿ ಕೊಟ್ಟಿದ್ದೇನೆ, ಇಷ್ಟು ದಿನ ಇವನ ಆಗು ಹೋಗುಗಳು ಕಷ್ಟದಿಂದ ನಾನಿವನನ್ನು ಕಾಪಾಡಿದೆ. ನನ್ನ ಭಾಷೆ ಇಂದಿಗೆ ತೀರಿತು. ನಿನ್ನ ಮಗನನ್ನು ಒಪ್ಪಿಸಿಕೋ ಎಂದು ಹೇಳಿ ಹೊರಟು ಹೋದಳು.

ಅರ್ಥ:
ಸಮಯ: ಕಾಲ; ನಾರಿ: ಹೆಣ್ಣು; ವೇಷ: ರೂಪ; ನಡೆ: ಮುಂದೆ ಬಂದು; ಸತಿ: ನಾರಿ; ಕೈ: ಕರ, ಹಸ್ತ; ಕಂದ: ಮಗು; ಒಪ್ಪುಗೊಳು: ಒಪ್ಪಿಸಿಕೋ, ಸ್ವೀಕರಿಸು; ಈಸು: ಇಷ್ಟು; ದಿನ: ವಾರ, ಸಮಯ; ಆಗುಹೋಗು: ನಡೆದ; ಗಾಸಿ:ತೊಂದರೆ, ಕಷ್ಟ; ಸಲೆ: ಒಂದೇ ಸಮನೆ; ಕಾಯ್ದೆನು: ನೋಡಿಕೊಂಡೆನು, ರಕ್ಷಿಸು; ಭಾಷೆ: ಪ್ರಮಾಣ; ಸಂದುದು: ತೀರಿತು; ಆತ್ಮಜ: ಮಗ; ಕೊಟ್ಟಳು: ನೀಡಿದಳು;

ಪದವಿಂಗಡಣೆ:
ಆ +ಸಮಯದೊಳು +ಗಂಗೆ +ನಾರೀ
ವೇಷದೊಳು +ನಡೆತಂದಳ್+ಎಲೆ +ಕುಂ
ತೀ +ಸತಿಯೆ +ಕೈಯೆಡೆಯ+ ಕಂದನನ್+ಒಪ್ಪುಗೊಳು +ನೀನು
ಈಸುದಿನಮ್+ಇವನ್+ಆಗು ಹೋಗಿನ
ಗಾಸಿಯನು +ಸಲೆ +ಯಾದೆನ್+ಎನ್ನಯ
ಭಾಷೆಸಂದುದ್+ಎನುತ್ತೆ +ತಾಯಿಗೆ +ಕೊಟ್ಟಳ್+ಆತ್ಮಜನ

ಅಚ್ಚರಿ:
(೧) ನಾರಿ, ಸತಿ – ಸಮನಾರ್ಥಕ ಪದ