ಪದ್ಯ ೪೭: ಕುಂತಿಯು ಯಾವ ದೇವತೆಯನ್ನು ಕರೆದಳು?

ನಿಯಮದಲಿ ಕಾಮಿನಿ ಸರೋವಾ
ರಿಯಲಿ ಮಿಂದಳು ಬೀಜಮಂತ್ರ
ವ್ಯಯವ ಮಾಡಿದಳಮರ ನಿಕರವ ನೋಡಿ ಕೈಮುಗಿದು
ಬಯಸಿದಳು ವಾಯುವನು ನಿಜಮೂ
ರ್ತಿಯಲಿ ಬಂದು ಸಮೀರನಾ ಕುಂ
ತಿಯನು ನುಡಿಸಿದನೆಮ್ಮ ಬರಿಸಿದ ಹದನದೇನೆಂದು (ಆದಿ ಪರ್ವ, ೪ ಸಂಧಿ, ೪೭ ಪದ್ಯ)

ತಾತ್ಪರ್ಯ:
ಕುಂತಿಯು ಪಾಂಡುವಿನಪ್ಪಣೆಯೊಂದಿಗೆ ಸರೋವರದಲ್ಲಿ ಮಿಂದು, ದುರ್ವಾಸ ಮುನಿಗಳು ನೀಡಿದ್ದ ಬೀಜಮಂತ್ರವನ್ನು ಜಪಿಸಿ ದೇವತೆಗಳಿಗೆ ಕೈಮುಗಿದು ವಾಯುವನ್ನು ಬಯಸಿ ಕರೆದಳು. ವಾಯುವು ತನ್ನ ರೂಪದಿಂದ ಬಂದು ನನ್ನನ್ನೇಕೆ ಕರೆದೆ ಎಂದು ಕುಂತಿಯನ್ನು ಕೇಳಿದನು.

ಅರ್ಥ:
ನಿಯಮ: ಕಟ್ಟುಪಾಡು, ಕಟ್ಟಳೆ; ಕಾಮಿನಿ: ಹೆಣ್ಣು; ಸರೋವಾರಿ: ಸರೋವರ; ಮಿಂದು: ಸ್ನಾನ, ಮುಳುಗು; ಬೀಜ: ಮೂಲ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ವ್ಯಯ: ವೆಚ್ಚ; ಅಮರ: ದೇವತೆ; ನಿಕರ: ಗುಂಪು; ನೋಡು: ವೀಕ್ಷಿಸು; ಕೈಮುಗಿ: ನಮಸ್ಕರಿಸು; ಬಯಸು: ಇಚ್ಛಪಡು, ಆಸೆ; ವಾಯು: ಗಾಳಿ, ಸಮೀರ; ಮೂರ್ತಿ: ರೂಪ; ಬಂದು: ಆಗಮಿಸು; ಸಮೀರ: ವಾಯು; ನುಡಿಸು: ಮಾತನಾಡಿಸು; ಬರಿಸಿ: ಕರೆದಿರಿ; ಹದ: ಸ್ಥಿತಿ, ರೀತಿ;

ಪದವಿಂಗಡಣೆ:
ನಿಯಮದಲಿ+ ಕಾಮಿನಿ +ಸರೋವಾ
ರಿಯಲಿ +ಮಿಂದಳು +ಬೀಜಮಂತ್ರ
ವ್ಯಯವ +ಮಾಡಿದಳ್+ಅಮರ +ನಿಕರವ +ನೋಡಿ +ಕೈಮುಗಿದು
ಬಯಸಿದಳು +ವಾಯುವನು +ನಿಜ+ಮೂ
ರ್ತಿಯಲಿ +ಬಂದು +ಸಮೀರನ್+ಆ+ ಕುಂ
ತಿಯನು +ನುಡಿಸಿದನ್+ಎಮ್ಮ+ ಬರಿಸಿದ+ ಹದನದ್+ಏನೆಂದು

ಅಚ್ಚರಿ:
(೧) ವಾಯು, ಸಮೀರ – ಸಮಾನಾರ್ಥಕ ಪದ

ಪದ್ಯ ೧೬: ಭೀಮನು ಯಾರ ತಲೆಯನ್ನು ಮಕ್ಕಳ ಸಾವಿಗೆ ಹೊಣೆೆ ಎಂದನು?

ಸುತರ ತಲೆಯೈದಕ್ಕೆ ರಿಪುಗುರು
ಸುತನ ತಲೆಯೇ ಹೊಣೆ ಕಣಾ ಬಿಡು
ಸತಿಯೆ ಶೋಕವನೆನುತ ಬಿಟ್ಟನು ಸೂಠಿಯಲಿ ರಥವ
ವ್ಯತಿಕರವಿದವಗಡ ಸಮೀರನ
ಸುತಗೆ ಹರಿಯದು ಬವರ ನಡೆಯೆಂ
ದತಿರಥನ ಬಳಿಸಲಿಸಿದರು ನೃಪ ಹರಿ ಧನಂಜಯರು (ಗದಾ ಪರ್ವ, ೧೦ ಸಂಧಿ, ೧೬ ಪದ್ಯ)

ತಾತ್ಪರ್ಯ:
ಭೀಮನು ಐವರು ಪುತ್ರರೂ ಮಡಿದುದನ್ನು ಕೇಳಿ, ಐವರ ಮಕ್ಕಳ ತಲೆಗೆ ಅಶ್ವತ್ಥಾಮನ ತಲೆಯೇ ಹೊಣೆ. ದ್ರೌಪದೀ, ಶೋಕವನ್ನು ಬಿಡು ಎನ್ನುತ್ತಾ ರಥದಲ್ಲಿ ಅತ್ತಕಡೆ ಹೋಗಲು, ಈಗ ಒದಗಿರುವ ಮಹತ್ತಾದ ಕಾರ್ಯವು, ಭೀಮನೊಬ್ಬನಿಂದ ಹರಿಯುವುದಿಲ್ಲ, ಎಂದುಕೊಂಡು ಧರ್ಮಜ, ಶ್ರೀಕೃಷ್ಣ ಅರ್ಜುನರು ಅವನ ಹಿಂದೆಯೇ ಹೋದರು.

ಅರ್ಥ:
ಸುತ: ಮಕ್ಕಳು; ತಲೆ: ಶಿರ; ಐದು: ಹೋಗು; ರಿಪು: ವೈರಿ; ಗುರುಸುತ: ಅಶ್ವತ್ಥಾಮ; ಹೊಣೆ: ಕಾರಣ; ಕಣಾ: ಅಲ್ಲವೇ; ಬಿಡು: ತೊರೆ; ಸತಿ: ಹೆಂಡತಿ; ಶೋಕ: ದುಃಖ; ಬಿಟ್ಟನು: ಹೊರಡು; ಸೂಠಿ: ವೇಗ; ರಥ: ಬಂಡಿ; ವ್ಯತಿಕರ: ತೊಂದರೆ, ಉಪದ್ರವ; ಅವಗಡ: ಅಸಡ್ಡೆ; ಸಮೀರ: ವಾಯು; ಸುತ: ಮಗ; ಹರಿ: ನಿವಾರಣೆಯಾಗು; ಬವರ: ಜಗಳ, ಕಾಳಗ, ಯುದ್ಧ; ನಡೆ: ಚಲಿಸು; ಅತಿರಥ: ಪರಾಕ್ರಮಿ; ಬಳಿ: ಹತ್ತಿರ; ಸಲಿಸು: ದೊರಕಿಸಿ ಕೊಡು, ಪೂರೈಸು; ನೃಪ: ರಾಜ;

ಪದವಿಂಗಡಣೆ:
ಸುತರ +ತಲೆ+ಐದಕ್ಕೆ +ರಿಪು+ಗುರು
ಸುತನ +ತಲೆಯೇ +ಹೊಣೆ +ಕಣಾ +ಬಿಡು
ಸತಿಯೆ +ಶೋಕವನ್+ಎನುತ +ಬಿಟ್ಟನು+ ಸೂಠಿಯಲಿ +ರಥವ
ವ್ಯತಿಕರವಿದ್+ಅವಗಡ +ಸಮೀರನ
ಸುತಗೆ +ಹರಿಯದು +ಬವರ +ನಡೆಯೆಂದ್
ಅತಿರಥನ +ಬಳಿ+ಸಲಿಸಿದರು+ ನೃಪ +ಹರಿ +ಧನಂಜಯರು

ಅಚ್ಚರಿ:
(೧) ಸುತ – ೧,೨, ೫ ಸಾಲಿನ ಮೊದಲ ಪದ
(೨) ಸಮೀರನ ಸುತ – ಭೀಮನನ್ನು ಕರೆದ ಪರಿ

ಪದ್ಯ ೪೫: ಸೂರ್ಯೋದಯವನ್ನು ಹೇಗೆ ವರ್ಣಿಸಬಹುದು?

ಭೂರಿ ವಿರಹಾಗ್ನಿಯಲಿ ಲೋಚನ
ವಾರಿಯಾಜ್ಯಾಹುತಿಗಳಲಿ ರಿಪು
ಮಾರಣಾಧ್ವರವೆಸೆದುದಿರುಳು ರಥಾಂಗ ದೀಕ್ಷಿತನ
ತಾರಕೆಯ ಮುರಿವುಗಳು ಕುಣಿವ
ಸಮೀರಣನ ಶಶಿಯೆಡೆಗೆ ರಜನೀ
ನಾರಿ ತೋಳೆಡೆಗೊಟ್ಟಳಂಬುಜ ಬಂಧು ಹೊರವಂಟ (ದ್ರೋಣ ಪರ್ವ, ೧೭ ಸಂಧಿ, ೪೫ ಪದ್ಯ)

ತಾತ್ಪರ್ಯ:
ವಿರಹಾಗ್ನಿ, ಕಣ್ಣೀರಿನ ಅಜ್ಯಾಹುತಿಗಳಿಂದ ಚಕ್ರವಾಕದ ಶತ್ರುಗಳ ಮಾರಣಯಜ್ಞ ನಡೆಯಿತು. ನಕ್ಷತ್ರಗಳು ಮುಳುಗಿದವು. ಚಂದ್ರನು ಕಳಾಹೀನನಾದನು. ರಾತ್ರಿರಮಣಿಯು ಕೈಚಾಚಿ ಲಾಘವವನ್ನು ಕೊಡಲು ಸೂರ್ಯನು ಉದಯಿಸಿದನು.

ಅರ್ಥ:
ಭೂರಿ: ಹೆಚ್ಚು, ಅಧಿಕ; ವಿರಹ: ಅಗಲಿಕೆ, ವಿಯೋಗ; ಅಗ್ನಿ: ಬೆಂಕಿ; ಲೋಚನ: ಕಣ್ಣು; ವಾರಿ: ಜಲ; ಆಜ್ಯ: ತುಪ್ಪ; ಆಹುತಿ: ಯಜ್ಞಾಯಾಗಾದಿಗಳಲ್ಲಿ ದೇವತೆಗಳಿಗಾಗಿ ಅಗ್ನಿಯಲ್ಲಿ ಅರ್ಪಿಸುವ ಹವಿಸ್ಸು; ರಿಪು: ವೈರಿ; ಮಾರಣ: ಸಾವು; ಅಧ್ವರ: ಯಜ್ಞ; ಎಸೆ: ಹೊರತರು; ಇರುಳು: ರಾತ್ರಿ; ರಥಾಂಗ: ಚಕ್ರವಾಕ ಪಕ್ಷಿ, ಜಕ್ಕವಕ್ಕಿ; ದೀಕ್ಷೆ: ವ್ರತ, ನಿಯಮ; ತಾರಕೆ: ನಕ್ಷತ್ರ; ಮುರಿ: ಸೀಳು; ಕುಣಿ: ನರ್ತಿಸು; ಸಮೀರ: ವಾಯು; ಶಶಿ: ಚಂದ್ರ; ರಜನಿ: ರಾತ್ರಿ; ನಾರಿ: ಹೆಣ್ಣು; ತೋಳು: ಭುಜ; ಎಡೆ: ಸಮೀಪ; ಅಂಬುಜ: ತಾವರೆ; ಬಂಧು: ಸಂಬಂಧಿಕ; ಹೊರವಂಟ: ಹೊರಬಂದ;

ಪದವಿಂಗಡಣೆ:
ಭೂರಿ +ವಿರಹಾಗ್ನಿಯಲಿ+ ಲೋಚನ
ವಾರಿ+ಆಜ್ಯಾಹುತಿಗಳಲಿ +ರಿಪು
ಮಾರಣ+ಅಧ್ವರವ್+ಎಸೆದುದ್+ಇರುಳು +ರಥಾಂಗ+ ದೀಕ್ಷಿತನ
ತಾರಕೆಯ +ಮುರಿವುಗಳು +ಕುಣಿವ
ಸಮೀರಣನ +ಶಶಿಯೆಡೆಗೆ +ರಜನೀ
ನಾರಿ +ತೋಳ್+ಎಡೆಗೊಟ್ಟಳ್+ಅಂಬುಜ +ಬಂಧು+ ಹೊರವಂಟ

ಅಚ್ಚರಿ:
(೧) ಸೂರ್ಯನನ್ನು ಅಂಬುಜಬಂಧು ಎಂದು ಕರೆದಿರುವುದು
(೨) ರಾತ್ರಿಯು ಮುಗಿಯಿತು ಎಂದು ಸುಂದರವಾಗಿ ಹೇಳುವ ಪರಿ

ಪದ್ಯ ೧೮: ಧರ್ಮಜನು ಏನೆಂದು ಚಿಂತಿಸಿದನು?

ಶೋಕವಿಮ್ಮಡಿಸಿತ್ತು ಚಿತ್ತ
ವ್ಯಾಕುಳತೆಯಾ ಸತಿಯ ನುಡಿಗಳ
ನೇಕ ಸಾಣೆಯ ಸರಳು ಮುರಿದವು ನೃಪನ ಹೃದಯದಲಿ
ಆ ಕುಮಾರ ವಿಯೋಗವಹ್ನಿಗೆ
ಯೀಕೆಯಳಲು ಸಮೀರನಾಯ್ತು ದಿ
ವೌಕಸರ ಸಮ್ಮೇಳವೇ ಪುರುಷಾರ್ಥ ತನಗೆಂದ (ದ್ರೋಣ ಪರ್ವ, ೭ ಸಂಧಿ, ೧೮ ಪದ್ಯ)

ತಾತ್ಪರ್ಯ:
ಮಗನ ವಿಯೋಗದ ಕಿಚ್ಚಿನಿಂದ ಬಳಲುತ್ತಿದ್ದ ಯುಧಿಷ್ಥಿರನ ಹೃದಯಕ್ಕೆ ಸುಭದ್ರೆಯ ಸಾಣೆಹಿಡಿದ ಬಾಣಗಳಂತಿದ್ದ ಮಾತುಗಳು ನೆಟ್ಟವು. ಆ ಉರಿಗೆ ಸುಭದ್ರೆಯ ಮಾತುಗಳು ಗಾಳಿಯಂತಾಗಿ ಉರಿ ಇಮ್ಮಡಿಸಿತು. ಇನ್ನು ದೇವತೆಗಳ ಬಳಿಗೆ ಹೋಗುವುದೇ ನಾನು ಸಾಧಿಸಬೇಕಾದ ಪುರುಷಾರ್ಥ ಎಂದವನು ಚಿಂತಿಸಿದನು.

ಅರ್ಥ:
ಶೋಕ: ದುಃಖ; ಇಮ್ಮಡಿಸು: ಅಧಿಕವಾಗು, ಎರಡುಪಟ್ಟಾಗು; ಚಿತ್ತ: ಮನಸ್ಸು; ವ್ಯಾಕುಲತೆ: ಚಿಂತೆ, ಕಳವಳ; ಸತಿ: ಹೆಣ್ಣು; ನುಡಿ: ಮಾತು; ಅನೇಕ: ಬಹಳ; ಸಾಣೆ: ಉಜ್ಜುವ ಕಲ್ಲು; ಸರಳು: ಬಾಣ; ಮುರಿ: ಸೀಳು; ನೃಪ: ರಾಜ; ಹೃದಯ: ಎದೆ; ಕುಮಾರ: ಮಗು; ವಿಯೋಗ: ಅಗಲಿಕೆ; ವಹ್ನಿ: ಬೆಂಕಿ; ಅಳಲು: ದುಃಖ; ಸಮೀರ: ವಾಯು; ದಿವೌಕಸ: ದೇವತೆ; ಸಮ್ಮೇಳ: ಗುಂಪು; ಪುರುಷಾರ್ಥ: ಪರಮಧ್ಯೇಯಗಳು;

ಪದವಿಂಗಡಣೆ:
ಶೋಕವ್+ಇಮ್ಮಡಿಸಿತ್ತು +ಚಿತ್ತ
ವ್ಯಾಕುಳತೆ+ಆ+ ಸತಿಯ +ನುಡಿಗಳ್
ಅನೇಕ +ಸಾಣೆಯ +ಸರಳು +ಮುರಿದವು +ನೃಪನ +ಹೃದಯದಲಿ
ಆ +ಕುಮಾರ +ವಿಯೋಗ+ವಹ್ನಿಗೆ
ಈಕೆ+ಅಳಲು +ಸಮೀರನಾಯ್ತು +ದಿ
ವೌಕಸರ +ಸಮ್ಮೇಳವೇ +ಪುರುಷಾರ್ಥ +ತನಗೆಂದ

ಅಚ್ಚರಿ:
(೧) ರೂಪಕದ ಪ್ರಯೋಗ – ಸತಿಯ ನುಡಿಗಳನೇಕ ಸಾಣೆಯ ಸರಳು ಮುರಿದವು ನೃಪನ ಹೃದಯದಲಿ

ಪದ್ಯ ೬೨: ಪಾಂಡವರ ಮೇಲೆ ದೇವರ ಕರುಣೆ ಹೇಗಿತ್ತು?

ಕೌರವೇಂದ್ರನ ಮನೆಯ ಮಲ್ಲರ
ತೋರಹತ್ತರ ಮುರಿದನದಟ ಸ
ಮೀರ ಸುತನೆಂದರಕೆಯಾಗದೆ ಗೆಲಿದು ಬದುಕಿದರು
ವೀರನಾರಾಯಣನ ಕರುಣಾ
ವಾರಿಧಿಯ ಕಾಲುವೆಯ ಭಾಗ್ಯದ
ಚಾರು ಶಾಲೀವನದ ವೀರರು ತೊಳಗಿ ಬೆಳಗಿದರು (ವಿರಾಟ ಪರ್ವ, ೪ ಸಂಧಿ, ೬೨ ಪದ್ಯ)

ತಾತ್ಪರ್ಯ:
ಕೌರವನ ಅರಮನೆಯ ಮಹಾಭುಜಬಲಶಾಲಿಗಳಾದ ಮಲ್ಲರನ್ನು ಭೀಮನು ಕೊಂದನೆಂದು ಯಾರಿಗೂ ತಿಳಿಯಲಿಲ್ಲ. ಪಾಂಡವರು ಗೆದ್ದು ಬದುಕಿದರು. ವೀರನಾರಾಯಣನ ಕರುಣೆಯೆಂಬ ಕೆರೆಯ ಕಾಲುವೆಯಿಂದ ಬಂದ ನೀರಿನಿಂದ ಪೋಷಿತವಾದ ಮಹಾ ಭಾಗ್ಯವೆಂಬ ಬತ್ತದ ಗದ್ದೆಯಮ್ತಿದ್ದ ವೀರರಾದ ಪಾಂಡವರು ಹೊಳೆದು ಪ್ರಕಾಶಿಸಿದರು.

ಅರ್ಥ:
ಮನೆ: ಆಲಯ; ಮಲ್ಲ: ಜಟ್ಟಿ; ತೋರಹತ್ತ: ಬಲಶಾಲಿ; ಮುರಿ: ಸೀಳು; ಅದಟ: ಶೂರ, ಪರಾಕ್ರಮಿ; ಸಮೀರ: ವಾಯು; ಸುತ: ಮಗ; ಅರಕೆ: ಕೊರತೆ, ನ್ಯೂನತೆ; ಗೆಲುವು: ಜಯ; ಬದುಕು: ಜೀವಿಸು; ಕರುಣ: ದಯೆ; ವಾರಿಧಿ: ಸಮುದ್ರ; ಕಾಲುವೆ: ನೀರು ಹರಿಯುವುದಕ್ಕಾಗಿ ಮಾಡಿದ ತಗ್ಗು; ಭಾಗ್ಯ: ಅದೃಷ್ಟ, ಸುದೈವ; ಚಾರು: ಸುಂದರ; ಶಾಲೀವನ: ಬತ್ತದ ಗದ್ದೆ; ವೀರ: ಪರಾಕ್ರಮಿ; ತೊಳಗು: ಕಾಂತಿ, ಪ್ರಕಾಶ; ಬೆಳಗು: ಹೊಳಪು, ಕಾಂತಿ;

ಪದವಿಂಗಡಣೆ:
ಕೌರವೇಂದ್ರನ +ಮನೆಯ +ಮಲ್ಲರ
ತೋರಹತ್ತರ+ ಮುರಿದನ್+ಅದಟ +ಸ
ಮೀರ +ಸುತನೆಂದ್+ಅರಕೆ+ಆಗದೆ +ಗೆಲಿದು +ಬದುಕಿದರು
ವೀರನಾರಾಯಣನ +ಕರುಣಾ
ವಾರಿಧಿಯ +ಕಾಲುವೆಯ +ಭಾಗ್ಯದ
ಚಾರು +ಶಾಲೀವನದ +ವೀರರು +ತೊಳಗಿ +ಬೆಳಗಿದರು

ಅಚ್ಚರಿ:
(೧) ಉಪಮಾನದ ಪ್ರಯೋಗ – ವೀರನಾರಾಯಣನ ಕರುಣಾವಾರಿಧಿಯ ಕಾಲುವೆಯ ಭಾಗ್ಯದ
ಚಾರು ಶಾಲೀವನದ ವೀರರು ತೊಳಗಿ ಬೆಳಗಿದರು

ಪದ್ಯ ೯: ದೇವತೆಗಳ ಸೈನ್ಯವು ಹೇಗೆ ಹೊರಹೊಮ್ಮಿತು?

ಏನ ಹೇಳುವೆನರಸ ದಿವಿಜರ
ಸೇನೆಯಲ್ಲಾ ಛತ್ರ ಚಮರವಿ
ತಾನದಲಿ ನಭವಿಲ್ಲ ನೆಗಹಿದ ಸಬಳ ಸೆಲ್ಲಹಕೆ
ಮೈನುಸುಳ ಕಾಣೆನು ಸಮೀರನ
ಭಾನು ಕಿರಣದ ಸುಳಿವನೀಶ್ವರ
ತಾನೆ ಬಲ್ಲನು ಶಿವ ಶಿವೆನೆ ಜೋಡಿಸಿತು ನಿಮಿಷದಲಿ (ಅರಣ್ಯ ಪರ್ವ, ೨೦ ಸಂಧಿ, ೯ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ನಾನೇನೆಂದು ಹೇಳಲಿ, ಇದು ದೇವತೆಗಳ ಸೈನ್ಯವಲ್ಲವೇ, ಛತ್ರ, ಆಮರ, ಭರ್ಜಿ, ಭಲ್ಲೆಹಗಳ ಸಮೂಹದಲ್ಲಿ ಗಾಳಿ, ಸೂರ್ಯನ ಬೆಳಕು, ಆಗಸ ಕಾಣದೆ ಹೋದವು, ಇದನ್ನು ಶಂಕರನೊಬ್ಬನೆ ತಿಳಿದವ, ಅವನೇ ಇವೆಲ್ಲವನ್ನೂ ಜೋಡಿಸಿದನು.

ಅರ್ಥ:
ಹೇಳು: ತಿಳಿಸು; ಅರಸ: ರಾಜ; ದಿವಿಜ: ಸುರ; ಸೇನೆ: ಸೈನ್ಯ; ಛತ್ರ: ಕೊಡೆ; ಚಾಮರ: ಚಮರ ಮೃಗದ ಬಾಲದ ಕೂದಲಿನಿಂದ ತಯಾರಿಸಿದ ಕುಂಚ; ವಿತಾನ: ಹಬ್ಬುವಿಕೆ, ವಿಸ್ತಾರ; ನಭ: ಆಗಸ; ನೆಗಹು: ಮೇಲೆತ್ತು; ಸಬಳ: ಈಟಿ, ಭರ್ಜಿ; ಸೆಲ್ಲಹು: ಈಟಿ, ಭರ್ಜಿ; ಮೈನುಸುಳು: ತಪ್ಪಿಸಿಕೋ, ಜಾರಿಕೋ; ಕಾಣು: ತೋರು; ಸಮೀರ: ಗಾಳಿ; ಭಾನು: ಸೂರ್ಯ; ಕಿರಣ: ರಶ್ಮಿ; ಸುಳಿ: ಕಾಣಿಸಿಕೊಳ್ಳು; ಈಶ್ವರ: ಶಂಕರ; ಬಲ್ಲನು: ತಿಳಿದವ; ಜೋಡಿಸು: ಕೂಡಿಸು; ನಿಮಿಷ: ಕ್ಷಣಮಾತ್ರದಲಿ;

ಪದವಿಂಗಡಣೆ:
ಏನ +ಹೇಳುವೆನ್+ಅರಸ +ದಿವಿಜರ
ಸೇನೆಯಲ್ಲಾ +ಛತ್ರ +ಚಮರ+ವಿ
ತಾನದಲಿ +ನಭವಿಲ್ಲ+ ನೆಗಹಿದ+ ಸಬಳ +ಸೆಲ್ಲಹಕೆ
ಮೈನುಸುಳ+ ಕಾಣೆನು +ಸಮೀರನ
ಭಾನು +ಕಿರಣದ +ಸುಳಿವನ್+ಈಶ್ವರ
ತಾನೆ +ಬಲ್ಲನು +ಶಿವ +ಶಿವೆನೆ+ ಜೋಡಿಸಿತು+ ನಿಮಿಷದಲಿ

ಅಚ್ಚರಿ:
(೧) ಸಬಲ, ಸೆಲ್ಲಹು – ಸಮನಾರ್ಥಕ ಪದ
(೨) ಛತ್ರ ಚಮರವಿತಾನದಲಿ ನಭವಿಲ್ಲ; ಮೈನುಸುಳ ಕಾಣೆನು ಸಮೀರನ; ಭಾನು ಕಿರಣದ ಸುಳಿವನೀಶ್ವರತಾನೆ ಬಲ್ಲನು

ಪದ್ಯ ೨೭: ಧರ್ಮಜನು ತನ್ನ ಮಾತಿಗೆ ಯಾರನ್ನು ಸಾಕ್ಷಿ ಮಾಡಿದನು?

ಎನಲು ತಂದಿರಿಸಿದರು ಫಲವನು
ವನಜನಾಭನ ಹೇಳಿಕೆಯಲಾ
ಕ್ಷಣಕೆ ಕುಂತೀತನುಜ ಹೇಳನೆ ಕೈಗಳನು ಮುಗಿದು
ಇನ ಶಶಿಗಳಿಂದ್ರಾನಲಾಂತಕ
ದನುಜ ವರುಣ ಸಮೀರ ಹರಸಖ
ಮನುಮಥಾರಿಯೆ ನೀವು ಚಿತ್ತವಿಸೆನುತಲಿಂತೆಂದ (ಅರಣ್ಯ ಪರ್ವ, ೪ ಸಂಧಿ, ೨೭ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನ ಅಪ್ಪಣೆಯಂತೆ ಹಣ್ಣನ್ನು ಸರಿಯಾದ ಜಾಗದಲ್ಲಿ ತಂದಿಟ್ಟರು. ಶ್ರೀಕೃಷ್ಣನು ಧರ್ಮಜನಿಗೆ ನಿನ್ನ ಮನಸ್ಸಿನ ಸತ್ಯವನ್ನು ಹೇಳೆನಲು, ಆ ಕ್ಷಣದಲ್ಲಿಯೇ, ಧರ್ಮಜನು ಕೈಗಳನ್ನು ಮುಗಿದು, ರವಿ, ಚಂದ್ರ, ಇಂದ್ರ, ಅಗ್ನಿ, ಯಮ, ನಿರಋತಿ, ವರುಣ, ವಾಯು, ಕುಬೇರ, ಶಿವ ನೀವೇ ಸಾಕ್ಷಿಯಾಗಿ ಹೇಳುತ್ತಿದ್ದೇನೆ ಎಂದು ತನ್ನ ಮಾತನ್ನು ಪ್ರಾರಂಭಿಸಿದನು.

ಅರ್ಥ:
ಎನಲು: ಹೀಗೆ ಹೇಳಲು; ಇರಿಸು: ಇಡು; ಫಲ: ಹಣ್ಣು; ವನಜನಾಭ: ಕಮಲವನ್ನು ನಾಭಿಯಲ್ಲಿ ಧರಿಸಿದವ (ವಿಷ್ಣು); ಹೇಳು: ತಿಳಿಸು; ಕ್ಷಣ: ಸಮಯ; ತನುಜ: ಮಗ; ಕೈ: ಹಸ್ತ; ಮುಗಿದು: ನಮಸ್ಕರಿಸು; ಇನ: ರವಿ; ಶಶಿ: ಚಂದ್ರ; ಅನಲ: ಬೆಂಕಿ; ಅಂತಕ: ಯಮ; ದನುಜ: ರಾಕ್ಷಸ; ಸಮೀರ: ವಾಯು; ಹರ: ಶಿವ; ಸಖ: ಮಿತ್ರ; ಹರಸಖ: ಕುಬೇರ; ಮನುಮಥ: ಕಾಮ; ಅರಿ: ವೈರಿ; ಮನುಮಥಾರಿ: ಶಿವ; ಅಂತಕದನುಜ: ನಿರಋತಿ;

ಪದವಿಂಗಡಣೆ:
ಎನಲು+ ತಂದ್+ಇರಿಸಿದರು +ಫಲವನು
ವನಜನಾಭನ +ಹೇಳಿಕೆಯಲ್+ಆ
ಕ್ಷಣಕೆ+ ಕುಂತೀತನುಜ +ಹೇಳನೆ +ಕೈಗಳನು +ಮುಗಿದು
ಇನ +ಶಶಿಗಳ್+ಇಂದ್ರ+ಅನಲ್+ಅಂತಕ
ದನುಜ +ವರುಣ +ಸಮೀರ +ಹರಸಖ
ಮನುಮಥಾರಿಯೆ +ನೀವು +ಚಿತ್ತವಿಸೆನುತಲ್+ಇಂತೆಂದ

ಅಚ್ಚರಿ:
(೧) ಶಿವನನ್ನು ಮನುಮಥಾರಿ, ಕುಬೇರನನ್ನು ಹರಸಖ ಎಂದು ಕರೆದಿರುವುದು
(೨) ವನಜ, ತನುಜ, ದನುಜ – ಪ್ರಾಸ ಪದಗಳ ಬಳಕೆ

ಪದ್ಯ ೫೩: ಇಂದ್ರನನ್ನು ಯಾರು ಸೋಲಿಸಿದರು?

ಅವರೊಳಗ್ಗದ ಕಾಲನೇಮಿ
ಪ್ರವರನಮರವಿಭಾಡ ವರದಾ
ನವಶಿರೋಮಣಿ ದಿವಿಜನಾಯಕ ಶರಭ ಭೇರುಂಡ
ಬವರದಲಿ ಶಕ್ರಾಗ್ನಿಯಮ ಶಶಿ
ರವಿ ಕುಬೇರ ಸಮೀರಣಾದ್ಯರ
ಸವರಿ ಸಪ್ತಾಂಗವನು ಕೊಂಡನು ಮೇಘವಾಹನನ (ಸಭಾ ಪರ್ವ, ೧೦ ಸಂಧಿ, ೫೩ ಪದ್ಯ)

ತಾತ್ಪರ್ಯ:
ಆ ರಾಕ್ಷಸರಲ್ಲಿ ಕಾಲನೇಮಿಯೆಂಬುವನು ದೇವತೆಗಳನ್ನು ಹೊಡೆದು ರಾಕ್ಷಸರ ನಾಯಕ ಶರಭ ಭೇರುಂಡ ಎಂಬ ಬಿರುದುಳ್ಳವನು, ಅವನು ಯುದ್ಧದಲ್ಲಿ ಇಂದ್ರ, ಅಗ್ನಿ, ಯಮ, ಚಂದ್ರ, ಸೂರ್ಯ, ಕುಬೇರ ವಾಯು ಮೊದಲಾದವರನ್ನು ಬಡಿದು ದೇವೇಂದ್ರನ ರಾಜ್ಯದ ಸಪ್ತಾಂಗಗಳನ್ನು ವಶಪಡಿಸಿಕೊಂಡನು.

ಅರ್ಥ:
ಅಗ್ಗ: ಶ್ರೇಷ್ಠ; ಪ್ರವರ: ಪ್ರಧಾನ ವ್ಯಕ್ತಿ; ಅಮರ: ವಿಭಾಡ: ನಾಶಮಾಡುವವನು; ವರ: ಶ್ರೇಷ್ಠ; ದಾನವ: ರಾಕ್ಷಸ; ಶಿರೋಮಣಿ: ಪ್ರಮುಖ, ಶ್ರೇಷ್ಠನಾದವನು; ದಿವಿಜ: ಸುರರು; ನಾಯಕ: ಒಡೆಯ; ಶರಭ: ನರಸಿಂಹನನ್ನು ಶಾಂತಗೊಳಿಸಲು ಶಿವನು ಧರಿಸಿದ ರೂಪ; ಬವರ: ಯುದ್ಧ; ಶಕ್ರ: ಇಂದ್ರ; ಅಗ್ನಿ: ಬೆಂಕಿ; ಯಮ: ಇಂದ್ರಿಯ ನಿಗ್ರಹ, ಸಂಯಮ, ಮೃತ್ಯುದೇವತೆ; ಶಶಿ: ಚಂದ್ರ; ರವಿ: ಸೂರ್ಯ; ಕುಬೇರ: ಅಷ್ಟದಿಕ್ಪಾಲಕರಲ್ಲಿ ಒಬ್ಬ, ಧನಪತಿ; ಸಮೀರ: ಗಾಳಿ, ವಾಯು; ಆದಿ: ಮುಂತಾದ; ಸವರು: ನಾಶಗೊಳಿಸು; ಸಪಾಂಗ: ಏಳು ಭಾಗ; ಕೊಂಡು: ತೆಗೆದುಕೊಳ್ಳು; ಮೇಘ: ಮೋಡ; ಮೇಘವಾಹನ: ಇಂದ್ರ;

ಪದವಿಂಗಡಣೆ:
ಅವರೊಳ್+ಅಗ್ಗದ +ಕಾಲನೇಮಿ
ಪ್ರವರನ್+ಅಮರ+ವಿಭಾಡ +ವರ+ದಾ
ನವ+ಶಿರೋಮಣಿ +ದಿವಿಜನಾಯಕ+ ಶರಭ+ ಭೇರುಂಡ
ಬವರದಲಿ+ ಶಕ್ರ+ಅಗ್ನಿ+ಯಮ + ಶಶಿ
ರವಿ+ ಕುಬೇರ +ಸಮೀರಣ್+ಆದ್ಯರ
ಸವರಿ+ ಸಪ್ತಾಂಗವನು +ಕೊಂಡನು +ಮೇಘವಾಹನನ

ಅಚ್ಚರಿ:
(೧) ಶಕ್ರ, ಮೇಘವಾಹನ – ಇಂದ್ರನ ಹೆಸರುಗಳು
(೨) ಅಮರ, ದಿವಿಜ – ಸಮನಾರ್ಥಕ ಪದ

ಪದ್ಯ ೧೦: ಕರ್ಣನು ಶಲ್ಯನಿಗೆ ಏನು ಹೇಳಿದ?

ಮಾತು ತಪ್ಪಿತು ರಿಪುಗಳೈವರಿ
ಗೌತಣಿಸಿದವು ನೆರವಿನಲಿ ಪುರು
ಹೂತ ಶಿಖಿ ಯಮ ನಿರುತಿ ವರುಣ ಸಮೀರ ಹರಸಖರು
ಆತುಕೊಳಲಿಂದೀ ಸುಯೋಧನ
ಜಾತಪುಣ್ಯನೊ ಧರ್ಮಪುತ್ರನೆ
ಭೂತಭಾಗ್ಯನೊ ಕಾಣಲಹದೈ ಶಲ್ಯ ಕೇಳೆಂದ (ಕರ್ಣ ಪರ್ವ, ೨೧ ಸಂಧಿ, ೧೦ ಪದ್ಯ)

ತಾತ್ಪರ್ಯ:
ಕರ್ಣನು ಶಲ್ಯನಿಗೆ ಹೇಳಿದನು, ಈಗ ನಾನಾಡಿದ ಮಾತು ತಪ್ಪಾಗಿದೆ, ಪಾಂಡವರ ಐವರಿಗೂ ನಾನು ಯುದ್ಧಕ್ಕೆ ಔತಣವನ್ನು ನೀಡುತ್ತಿದ್ದೇನೆ. ಇಂದ್ರ, ಅಗ್ನಿ, ಯಮ, ನಿಋತಿ, ವರುಣ, ವಾಯು, ಕುಬೇರರೂ ಅವರಿಗೆ ಸಹಾಯವಾಗಿ ಬಂದು ನಮ್ಮನ್ನಿದಿರಿಸಲಿ ಧರ್ಮಜನೇ ಪುಣ್ಯಶಾಲಿಯೋ, ದುರ್ಯೋಧನನೇ ಪೂರ್ವದಲ್ಲಿ ಪುಣ್ಯಮಾಡಿದವನೋ ಎಂಬುದನ್ನು ಈ ದಿವಸ ನೋಡಬಹುದು.

ಅರ್ಥ:
ಮಾತು: ನುಡಿ; ತಪ್ಪಿತು: ಸಿಕ್ಕದೆ ಹೋಗು, ಗುರಿ ತಪ್ಪು; ರಿಪು: ವೈರಿ; ಔತಣ: ಆಮಂತ್ರಣ; ನೆರವು: ಸಹಾಯ, ಬೆಂಬಲ; ಪುರುಹೂತ: ಇಂದ್ರ; ಶಿಖಿ: ಬೆಂಕಿ; ಯಮ: ಜವರಾಯ; ನಿರುತಿ: ನೈಋತ್ಯದಿಕ್ಕಿನ ಒಡೆಯ; ವರುಣ: ನೀರಿನ ಅಧಿದೇವತೆಯೂ ಪಶ್ಚಿಮ ದಿಕ್ಪಾಲಕನೂ ಆಗಿರುವ ಒಬ್ಬ ದೇವತೆ; ಸಮೀರ: ಗಾಳಿ, ವಾಯು; ಹರ: ಶಿವ; ಸಖ: ಮಿತ್ರ; ಹರಸಖ: ಕುಬೇರ; ಒಳಿತು: ಯೋಗ್ಯವಾದುದು, ಒಳ್ಳೆಯದು; ಜಾತ: ಹುಟ್ಟಿದ; ಪುಣ್ಯ: ಸದಾಚಾರ, ಪರೋಪಕಾರ; ಪುತ್ರ: ಮಗ; ಭಾಗ್ಯ: ವಿಧಿ, ಹಣೆಬರಹ; ಕಾಣು: ತೋರು; ಕೇಳು: ಆಲಿಸು;

ಪದವಿಂಗಡಣೆ:
ಮಾತು +ತಪ್ಪಿತು +ರಿಪುಗಳ್+ಐವರಿಗ್
ಔತಣಿಸಿದವು +ನೆರವಿನಲಿ +ಪುರು
ಹೂತ +ಶಿಖಿ +ಯಮ +ನಿರುತಿ +ವರುಣ +ಸಮೀರ +ಹರಸಖರು
ಆತುಕ್+ಒಳಲ್+ಇಂದ್+ಈ+ಸುಯೋಧನ
ಜಾತಪುಣ್ಯನೊ +ಧರ್ಮಪುತ್ರನೆ
ಭೂತಭಾಗ್ಯನೊ +ಕಾಣಲಹದೈ+ ಶಲ್ಯ +ಕೇಳೆಂದ

ಅಚ್ಚರಿ:
(೧) ಯಾರ ಸಹಾಯ ಪಡೆಯಲು ಪಾಂಡವರಿಗೆ ಹೇಳಿದನು – ಪುರುಹೂತ, ಶಿಖಿ, ಯಮ, ನಿರುತಿ, ವರುಣ, ಸಮೀರ, ಹರಸಖರು

ಪದ್ಯ ೩೩: ಕರ್ಣನು ಪಾಂಡವ ಸೈನ್ಯವನ್ನು ಹೇಗೆ ಎದುರಿಸಿದನು?

ರಾಯನಳಲಿಗರಿವರಘಾಟದ
ನಾಯಕರು ಕಾಣಿರೆ ಸಮೀರನ
ಲಾಯದಲಿ ಲಂಬಿಸಿದವಕಟ ತುಷಾರವಾಜಿಗಳು
ಆಯಿತದು ತಪ್ಪೇನೆನುತ ಕ
ರ್ಣಾಯತಾಸ್ತ್ರದಿ ಹರೆಗಡಿದು ರಿಪು
ರಾಯನಲ್ಲಿಗೆ ರಥವ ಬಿಟ್ಟನು ಸೂಠಿಯಲಿ ಕರ್ಣ (ಕರ್ಣ ಪರ್ವ, ೧೧ ಸಂಧಿ, ೩೩ ಪದ್ಯ)

ತಾತ್ಪರ್ಯ:
ಪಾಂಡವರ ಸೈನ್ಯವು ಕರ್ಣನ ಮೇಲೆ ಬರುವುದನ್ನು ಕಂಡ ಕರ್ಣನು, ಓ ಹೋ ಈ ಪಾಂಡವ ಯೋಧರು ದೊರೆಯು ಕಷ್ಟಕ್ಕೆ ಒದಗಿದ್ದಾನೆಂದು ತಿಳಿದು ಮಹಾರಥರೆಲ್ಲರೂ ಒಂದುಗೂಡಿದ್ದಾರೆ, ಇವರನ್ನು ನೋಡಿದರೆ, ವಾಯುವಿನ ಲಾಯದಲ್ಲಿ ತುಂತುರು ಹನಿಯ ಕುದುರೆಗಳು ಬಂದಂತಿವೆ, ಆಗಲಿ ತಪ್ಪೇನು ಎನ್ನುತಾ, ಕಿವಿವರೆಗೆಳೆದು ಬಿಟ್ಟ ಬಾಣಗಳಿಂದ ಅವರೆಲ್ಲರನ್ನೂ ಕಡಿದು ಹಾಕಿ, ಅರಸನಿರುವಲ್ಲಿಗೆ ತನ್ನ ರಥವನ್ನು ಬಿಟ್ಟನು.

ಅರ್ಥ:
ರಾಯ: ರಾಜ; ಅಳಲು: ಕಷ್ಟ; ಅರಿ: ತಿಳಿದು; ವರ: ಶ್ರೇಷ್ಠ; ಘಾಟ: ಸೇರಿಕೆ; ನಾಯಕ: ಪರಾಕ್ರಮಿಗಳು; ಕಾಣಿರೆ: ನೋಡಿರಿ; ಸಮೀರ:ಗಾಳಿ, ವಾಯು; ಲಾಯ: ಕುದುರೆಗಳನ್ನು ಕಟ್ಟುವ ಸ್ಥಳ; ಲಂಬಿಸು: ತೂಗಾಡು, ಜೋಲಾಡು; ಅಕಟ: ಅಯ್ಯೋ; ತುಷಾರ:ಹಿಮ, ಮಂಜು; ವಾಜಿ: ಕುದುರೆ;ಆಯಿತ: ಆಗಲಿ; ತಪ್ಪು: ಸರಿಯಲ್ಲದ; ಆಯತ: ಅಣಿಗೊಳಿಸು, ಸಿದ್ಧ; ಕರ್ಣ: ಕಿವಿ; ಅಸ್ತ್ರ: ಶಸ್ತ್ರ; ಹರೆ: ವಿಸ್ತರಿಸು; ಕಡಿ: ಸೀಳು; ರಿಪು: ವೈರಿ; ರಾಯ: ರಾಜ; ರಥ: ಬಂಡಿ; ಬಿಡು: ಹೊರಹೊಮ್ಮಿಸು; ಸೂಠಿ: ವೇಗ;

ಪದವಿಂಗಡಣೆ:
ರಾಯನ್+ಅಳಲಿಗ್+ಅರಿ+ ವರ+ಘಾಟದ
ನಾಯಕರು+ ಕಾಣಿರೆ+ ಸಮೀರನ
ಲಾಯದಲಿ +ಲಂಬಿಸಿದವ್+ಅಕಟ+ ತುಷಾರ+ವಾಜಿಗಳು
ಆಯಿತದು +ತಪ್ಪೇನೆನುತ +ಕ
ರ್ಣಾಯತ+ಅಸ್ತ್ರದಿ +ಹರೆಗಡಿದು +ರಿಪು
ರಾಯನಲ್ಲಿಗೆ +ರಥವ +ಬಿಟ್ಟನು +ಸೂಠಿಯಲಿ+ ಕರ್ಣ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸಮೀರನ ಲಾಯದಲಿ ಲಂಬಿಸಿದವಕಟ ತುಷಾರವಾಜಿಗಳು
(೨) ಕರ್ಣಾಯತ, ಸೂಠಿಯಲಿ ಕರ್ಣ – ಒಂದು ಕಿವಿ, ಮತ್ತೊಂದು ಕರ್ಣನ ಹೆಸರು – ಪದಗಳ ಬಳಕೆ