ಪದ್ಯ ೪೫: ಸೂರ್ಯೋದಯವನ್ನು ಹೇಗೆ ವರ್ಣಿಸಬಹುದು?

ಭೂರಿ ವಿರಹಾಗ್ನಿಯಲಿ ಲೋಚನ
ವಾರಿಯಾಜ್ಯಾಹುತಿಗಳಲಿ ರಿಪು
ಮಾರಣಾಧ್ವರವೆಸೆದುದಿರುಳು ರಥಾಂಗ ದೀಕ್ಷಿತನ
ತಾರಕೆಯ ಮುರಿವುಗಳು ಕುಣಿವ
ಸಮೀರಣನ ಶಶಿಯೆಡೆಗೆ ರಜನೀ
ನಾರಿ ತೋಳೆಡೆಗೊಟ್ಟಳಂಬುಜ ಬಂಧು ಹೊರವಂಟ (ದ್ರೋಣ ಪರ್ವ, ೧೭ ಸಂಧಿ, ೪೫ ಪದ್ಯ)

ತಾತ್ಪರ್ಯ:
ವಿರಹಾಗ್ನಿ, ಕಣ್ಣೀರಿನ ಅಜ್ಯಾಹುತಿಗಳಿಂದ ಚಕ್ರವಾಕದ ಶತ್ರುಗಳ ಮಾರಣಯಜ್ಞ ನಡೆಯಿತು. ನಕ್ಷತ್ರಗಳು ಮುಳುಗಿದವು. ಚಂದ್ರನು ಕಳಾಹೀನನಾದನು. ರಾತ್ರಿರಮಣಿಯು ಕೈಚಾಚಿ ಲಾಘವವನ್ನು ಕೊಡಲು ಸೂರ್ಯನು ಉದಯಿಸಿದನು.

ಅರ್ಥ:
ಭೂರಿ: ಹೆಚ್ಚು, ಅಧಿಕ; ವಿರಹ: ಅಗಲಿಕೆ, ವಿಯೋಗ; ಅಗ್ನಿ: ಬೆಂಕಿ; ಲೋಚನ: ಕಣ್ಣು; ವಾರಿ: ಜಲ; ಆಜ್ಯ: ತುಪ್ಪ; ಆಹುತಿ: ಯಜ್ಞಾಯಾಗಾದಿಗಳಲ್ಲಿ ದೇವತೆಗಳಿಗಾಗಿ ಅಗ್ನಿಯಲ್ಲಿ ಅರ್ಪಿಸುವ ಹವಿಸ್ಸು; ರಿಪು: ವೈರಿ; ಮಾರಣ: ಸಾವು; ಅಧ್ವರ: ಯಜ್ಞ; ಎಸೆ: ಹೊರತರು; ಇರುಳು: ರಾತ್ರಿ; ರಥಾಂಗ: ಚಕ್ರವಾಕ ಪಕ್ಷಿ, ಜಕ್ಕವಕ್ಕಿ; ದೀಕ್ಷೆ: ವ್ರತ, ನಿಯಮ; ತಾರಕೆ: ನಕ್ಷತ್ರ; ಮುರಿ: ಸೀಳು; ಕುಣಿ: ನರ್ತಿಸು; ಸಮೀರ: ವಾಯು; ಶಶಿ: ಚಂದ್ರ; ರಜನಿ: ರಾತ್ರಿ; ನಾರಿ: ಹೆಣ್ಣು; ತೋಳು: ಭುಜ; ಎಡೆ: ಸಮೀಪ; ಅಂಬುಜ: ತಾವರೆ; ಬಂಧು: ಸಂಬಂಧಿಕ; ಹೊರವಂಟ: ಹೊರಬಂದ;

ಪದವಿಂಗಡಣೆ:
ಭೂರಿ +ವಿರಹಾಗ್ನಿಯಲಿ+ ಲೋಚನ
ವಾರಿ+ಆಜ್ಯಾಹುತಿಗಳಲಿ +ರಿಪು
ಮಾರಣ+ಅಧ್ವರವ್+ಎಸೆದುದ್+ಇರುಳು +ರಥಾಂಗ+ ದೀಕ್ಷಿತನ
ತಾರಕೆಯ +ಮುರಿವುಗಳು +ಕುಣಿವ
ಸಮೀರಣನ +ಶಶಿಯೆಡೆಗೆ +ರಜನೀ
ನಾರಿ +ತೋಳ್+ಎಡೆಗೊಟ್ಟಳ್+ಅಂಬುಜ +ಬಂಧು+ ಹೊರವಂಟ

ಅಚ್ಚರಿ:
(೧) ಸೂರ್ಯನನ್ನು ಅಂಬುಜಬಂಧು ಎಂದು ಕರೆದಿರುವುದು
(೨) ರಾತ್ರಿಯು ಮುಗಿಯಿತು ಎಂದು ಸುಂದರವಾಗಿ ಹೇಳುವ ಪರಿ

ಪದ್ಯ ೫೧: ಚಂದ್ರನ ಉದಯವನ್ನು ಹೇಗೆ ಕಾಣಬಹುದು?

ಸಲೆ ದಿಗಂಗನೆಯಿಟ್ಟ ಚಂದನ
ತಿಲಕವೋ ಮನುಮಥನ ರಾಣಿಯ
ಚೆಲುವ ಕೈಗನ್ನಡಿಯೊ ಮದನನ ಬಿರುದಿನೊಡ್ಡಣವೊ
ತಳಿತ ವಿರಹಿಯ ಸುಡುವ ಕೆಂಡದ
ಹೊಳಹೊ ಬೆಸಗೊಳಲೇನು ರಜನೀ
ವಳಯದಲಿ ಶಶಿಯುದಯವಾದನು ಜಗವನುಜ್ವಳಿಸಿ (ವಿರಾಟ ಪರ್ವ, ೨ ಸಂಧಿ, ೫೧ ಪದ್ಯ)

ತಾತ್ಪರ್ಯ:
ಪೂರ್ವ ದಿಗ್ವನಿತೆಯು ಅಲಂಕರಿಸಿಕೊಂಡ ಚಂದನ ತಿಲಕವೋ, ರತಿದೇವಿಯ ಕೈಗನ್ನಡಿಯೋ, ಮನ್ಮಥನ ಬಿರುದಿನ ಪ್ರದರ್ಶನವೋ, ವಿರಹಿಯನ್ನು ಸುಡಲೆಂದು ಹುಟ್ಟಿದ ಕೆಂಡದ ಹೊಳಪೋ ಏನೆಂದು ಹೇಳಲಿ, ಚಂದ್ರನು ರಾತ್ರಿಯಲ್ಲಿ ಹುಟ್ಟಿ ಜಗತ್ತನ್ನು ಬೆಳಗಿದನು.

ಅರ್ಥ:
ಸಲೆ: ಪೂರ್ಣ, ಚೆನ್ನಾಗಿ; ಅಂಗನೆ: ಹೆಣ್ಣು; ಚಂದನ: ಗಂಧ; ತಿಲಕ: ಶ್ರೇಷ್ಠ; ಮನ್ಮಥ: ಕಾಮ; ರಾಣಿ: ಅರಸಿ; ಚೆಲುವು: ಸೌಂದರ್ಯ; ಕನ್ನಡಿ: ಮುಕುರ; ಮದನ: ಮನ್ಮಥ; ಬಿರುದು: ಗೌರವ ಸೂಚಕವಾಗಿ ಕೊಡುವ ಹೆಸರು; ಒಡ್ಡಣ: ಗುಂಪು; ತಳಿತ: ಚಿಗುರು; ವಿರಹಿ: ವಿಯೋಗಿ; ಸುಡು: ದಹಿಸು; ಕೆಂಡ: ಬೆಂಕಿ; ಹೊಳಹು: ಕಾಂತಿ, ಪ್ರಕಾಶ; ಬೆಸ: ಕೇಳು, ಅಪ್ಪಣೆ, ಆದೇಶ, ಕಾರ್ಯ; ರಜನಿ: ರಾತ್ರಿ; ವಳಯ: ಅಂಗಳ, ಆವರಣ; ಶಶಿ: ಚಂದ್ರ; ಉದಯ: ಹುಟ್ತು; ಜಗ: ಪ್ರಪಂಚ; ಉಜ್ವಳಿಸು: ಪ್ರಕಾಶಿಸು;

ಪದವಿಂಗಡಣೆ:
ಸಲೆ+ ದಿಕ್+ಅಂಗನೆಯಿಟ್ಟ+ ಚಂದನ
ತಿಲಕವೋ +ಮನುಮಥನ+ ರಾಣಿಯ
ಚೆಲುವ +ಕೈಗನ್ನಡಿಯೊ+ ಮದನನ +ಬಿರುದಿನೊಡ್ಡಣವೊ
ತಳಿತ +ವಿರಹಿಯ +ಸುಡುವ +ಕೆಂಡದ
ಹೊಳಹೊ +ಬೆಸಗೊಳಲ್+ಏನು+ ರಜನೀ
ವಳಯದಲಿ+ ಶಶಿ+ಉದಯವಾದನು +ಜಗವನ್+ಉಜ್ವಳಿಸಿ

ಅಚ್ಚರಿ:
(೧) ಉಪಮಾನಗಳ ಪ್ರಯೋಗ – ಸಲೆ ದಿಗಂಗನೆಯಿಟ್ಟ ಚಂದನ ತಿಲಕವೋ ಮನುಮಥನ ರಾಣಿಯ
ಚೆಲುವ ಕೈಗನ್ನಡಿಯೊ ಮದನನ ಬಿರುದಿನೊಡ್ಡಣವೊ ತಳಿತ ವಿರಹಿಯ ಸುಡುವ ಕೆಂಡದ
ಹೊಳಹೊ

ಪದ್ಯ ೨೯: ಅರ್ಜುನನು ಯುಧಿಷ್ಠಿರನನ್ನು ಹೇಗೆ ಹಂಗಿಸಿದನು -೧?

ಎಲೆ ಯುಧಿಷ್ಠಿರ ಜನಿಸಿದೈ ಶಶಿ
ಕುಲದ ವೀರ ಕ್ಷತ್ರ ಪಂತಿಯೊ
ಳೆಳಮನದ ಕಾಳಿಕೆಯ ತೊಡಹದ ಗಂಡು ರೂಪಿನಲಿ
ನೆಲನ ಕೊಂಡರು ನಿನ್ನ ಮೋರೆಯ
ಬಲುಹ ಕಂಡೇ ಕೌರವರು ನಿ
ನ್ನೊಳಗೆ ಬಲ್ಲಿದನೆನ್ನ ಭಂಗಿಸಲೇಕೆ ನೀನೆಂದ (ಕರ್ಣ ಪರ್ವ, ೧೭ ಸಂಧಿ, ೨೯ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನ ಮಾತಿನ ಕತ್ತಿಯಿಂದ ಯುಧಿಷ್ಥಿರನನ್ನು ಕೊಲ್ಲಲು ಪ್ರಾರಂಭಿಸಿದನು. ಎಲೈ ಯುಧಿಷ್ಠಿರ ನೀನು ಚಂದ್ರವಂಶದ ವೀರಕ್ಷತ್ರಿಯರ ಪಂಕ್ತಿಯಲ್ಲಿ ಕಪ್ಪು ಬಣ್ಣದ ಲೇಪವಿರುವ ದುರ್ಬಲಮನಸ್ಸಿನ ಗಂಡುರೂಪವನ್ನು ತಾಳಿ ಹುಟ್ಟಿದೆ. ನಿನ್ನ ಮುಖವನ್ನು ಕಂಡೇ, ನಿನ್ನೊಳಗೆ ಪರಾಕ್ರಮವಿಲ್ಲವೆಂದು ತಿಳಿದು ಕೌರವರು ರಾಜ್ಯವನ್ನು ಅಪಹರಿಸಿದರು. ಹೀಗಿರುವ ನೀನು ನನ್ನನ್ನು ಅವಮಾನಗೊಳಿಸುವುದೇ? ಎಂದು ನುಡಿದನು.

ಅರ್ಥ:
ಜನಿಸು: ಹುಟ್ಟು; ಶಶಿ: ಚಂದ್ರ; ಕುಲ: ವಂಶ; ವೀರ: ಪರಾಕ್ರಮ; ಕ್ಷತ್ರ: ಕ್ಷತ್ರಿಯ; ಪಂತಿ: ಸಾಲು; ಎಳಮನ: ದುರ್ಬಲ ಮನಸ್ಸು; ಕಾಳಿಕೆ: ಕೊಳಕು; ತೊಡಹು: ಆಭರಣ, ತೊಡಿಗೆ; ಗಂಡು: ವೀರ, ಗಂಡಸು; ರೂಪ: ಆಕಾರ; ನೆಲ: ಭೂಮಿ; ಕೊಂಡು: ತೆಗೆದು; ಮೋರೆ: ಮುಖ; ಬಲುಹ: ಬಲ, ಶಕ್ತಿ; ಕಂಡು: ನೋಡಿ; ಬಲ್ಲಿದ: ತಿಳಿದ; ಭಂಗಿಸು: ಅವಮಾನಿಸು;

ಪದವಿಂಗಡಣೆ:
ಎಲೆ +ಯುಧಿಷ್ಠಿರ +ಜನಿಸಿದೈ+ ಶಶಿ
ಕುಲದ +ವೀರ +ಕ್ಷತ್ರ+ ಪಂತಿಯೊಳ್
ಎಳಮನದ +ಕಾಳಿಕೆಯ +ತೊಡಹದ+ ಗಂಡು+ ರೂಪಿನಲಿ
ನೆಲನ +ಕೊಂಡರು +ನಿನ್ನ +ಮೋರೆಯ
ಬಲುಹ +ಕಂಡೇ +ಕೌರವರು +ನಿ
ನ್ನೊಳಗೆ +ಬಲ್ಲಿದನ್+ಎನ್ನ+ ಭಂಗಿಸಲೇಕೆ +ನೀನೆಂದ

ಅಚ್ಚರಿ:
(೧) ಬಿಳಿಯಾದ ಚಂದ್ರವಂಶದಲ್ಲಿ ಕಪ್ಪು ಚುಕ್ಕೆ ಎನ್ನುವ ಪರಿ – ಕಾಳಿಕೆಯ ತೊಡಹದ ಗಂಡು ರೂಪಿನಲಿ

ಪದ್ಯ ೩: ಶಿವನ ರಥವು ಹೇಗೆ ತಯಾರಾಯಿತು?

ಆಸುರವಲೇ ವಿಂಧ್ಯ ಹಿಮಗಿರಿ
ಹಾಸು ಹಲಗೆಗಳಾದವಚ್ಚು ಮ
ಹಾ ಸಮುದ್ರವೆ ಆಯ್ತು ಗಾಲಿಗೆ ಬೇರೆ ತರಲೇಕೆ
ಆ ಸಸಿಯ ಸೂರಿಯನ ಮಂಡಲ
ವೈಸಲೇ ಗಂಗಾದಿ ಸಕಲ ಮ
ಹಾ ಸರಿತ್ಕುಲವಾಯ್ತು ಚಮರಗ್ರಾಹಿಣಿಯರಲ್ಲಿ (ಕರ್ಣ ಪರ್ವ, ೭ ಸಂಧಿ, ೩ ಪದ್ಯ)

ತಾತ್ಪರ್ಯ:
ಮಹಾ ಅದ್ರಿಗಳಾದ ವಿಂಧ್ಯ, ಹಿಮಾಚಲ ಪರ್ವತಗಳೇ ರಥದ ಹಾಸು ಹಲಗೆಗಳಾದವು, ಸಾಗರವೇ ಅಚ್ಚಾಯಿತು, ಸೂರ್ಯ ಮತ್ತು ಚಂದ್ರಮಂಡಲಗಳಿರುವಾಗ ಚಕ್ರಕ್ಕೆ ಬೇರೆಯಾಕೆ ಹುಡುಕಬೇಕು? ಗಂಗಾದಿ ನದಿಗಳೇ ಚಾಮರವನ್ನು ಬೀಸುವವರಾದರು.

ಅರ್ಥ:
ಆಸುರ: ಅತಿಶಯ, ಭಯಂಕರ; ಗಿರಿ: ಬೆಟ್ಟ; ಹಾಸು: ಹಗ್ಗ; ಹಲಗೆ: ಮರದ ಅಗಲವಾದ ಹಾಗೂ ತೆಳುವಾದ ಸೀಳು; ಅಚ್ಚು: ನಡುಗೂಟ, ಕೀಲು; ಸಮುದ್ರ: ಸಾಗರ; ಗಾಲಿ: ಚಕ್ರ; ಬೇರೆ: ಅನ್ಯ; ತರಲು: ಕೊಂಡು ಬಾ; ಸಸಿ: ಶಶಿ, ಚಂದ್ರ; ಸೂರಿಯ: ಸೂರ್ಯ, ಭಾನು; ಮಂಡಲ: ಗುಂಡಾಗಿರುವ ಆಕಾರ; ಐಸಲೇ: ಅಲ್ಲವೇ; ಗಂಗ: ಗಂಗಾನದಿ, ಜಾಹ್ನವಿ; ಆದಿ: ಮುಂತಾದ; ಸಕಲ: ಎಲ್ಲಾ; ಮಹಾ: ಶ್ರೇಷ್ಠ; ಸರಿತ್ಕುಲ: ನದಿಗಳ ಸಮೂಹ; ಚಮರ: ಚಾಮರ; ಗ್ರಾಹಿ: ಹಿಡಿಯುವ;

ಪದವಿಂಗಡಣೆ:
ಆಸುರವಲೇ +ವಿಂಧ್ಯ +ಹಿಮಗಿರಿ
ಹಾಸು +ಹಲಗೆಗಳಾದವ್+ಅಚ್ಚು +ಮ
ಹಾ +ಸಮುದ್ರವೆ +ಆಯ್ತು +ಗಾಲಿಗೆ+ ಬೇರೆ+ ತರಲೇಕೆ
ಆ +ಸಸಿಯ +ಸೂರಿಯನ + ಮಂಡಲವ್
ಐಸಲೇ +ಗಂಗಾದಿ +ಸಕಲ +ಮ
ಹಾ +ಸರಿತ್ಕುಲವಾಯ್ತು +ಚಮರ+ಗ್ರಾಹಿಣಿಯರಲ್ಲಿ

ಅಚ್ಚರಿ:
(೧) ಮಹಾ ಪದದ ಬಳಕೆ – ೨, ೫ ಸಾಲು
(೨) ವಿಂಧ್ಯ, ಹಿಮಗಿರಿ, ಸಮುದ್ರ, ಶಶಿ, ಸೂರ್ಯ, ಗಂಗಾದಿ ನದಿ – ಶಿವನ ರಥದ ಭಾಗಗಳು

ಪದ್ಯ ೨೦: ಕೃಷ್ಣನ ಲೀಲೆ ಎಂತಹದು?

ಅವನೊಬ್ಬನ ಬೆಳಗಿನಿಂದವೆ
ಜೀವನವು ರವಿಶಶಿಗಳಿಗೆ ಮಗು
ಳಾವನೊಬ್ಬನ ನೇಮದಿಂದವೆ ಪವನ ಪಾವಕರು
ಜೀವಿಸುವರಿಂತೊಬ್ಬನುರುಲೀ
ಲಾ ವಿನೋದದೆ ಬ್ರಹ್ಮ ವಿಷ್ಣು ಶಿ
ವಾವಳಿಗಳುದ್ಭವಿಸಿ ತೋರುವುವಾತ ನೋಡೀತ (ಉದ್ಯೋಗ ಪರ್ವ, ೧೦ ಸಂಧಿ, ೨೦ ಪದ್ಯ)

ತಾತ್ಪರ್ಯ:
ಕೃಷ್ಣನೊಬ್ಬನ ಬೆಳಕಿನಿಂದ ಜಗತ್ತಿನಲ್ಲಿ ಜೀವನವು ನಡೆಯುವುದು, ಸೂರ್ಯ ಚಂದ್ರರು ಪುನಃ ಬೆಳಗುವರು ಅವನ ನಿಯಮದಿಂದ ಗಾಳಿ, ಅಗ್ನಿಗಳು ಚಲಿಸುವವು, ಹೀಗೆ ಒಬ್ಬರಿಂತೊಬ್ಬರು ಬದುಕುವುದಕ್ಕೆ ಕಾರಣನಾದ, ಯಾರ ಲೀಲೆಯಿಂದ ಬ್ರಹ್ಮ ವಿಷ್ಣು ಶಿವರು ಹುಟ್ಟಿ ತೋರುವರೋ ಅಂತಹ ಪರಬ್ರಹ್ಮ ವಸ್ತುವೇ ಇವನು ಎಂದು ಕೃಷ್ಣನ ಲೀಲೆಯ ಮಹಿಮೆಯನ್ನು ವಿದುರ ತಿಳಿಸಿದನು.

ಅರ್ಥ:
ಬೆಳಗು: ಹಗಲು; ಜೀವನ:ಬಾಳು, ಬದುಕು; ಮಗುಳು: ಹಿಂತಿರುಗು, ಪುನಃ; ರವಿ: ಭಾನು, ಸೂರ್ಯ; ಶಶಿ: ಚಂದ್ರ; ನೇಮ: ನಿಯಮ, ವ್ರತ; ಪವನ: ವಾಯು; ಪಾವಕ: ಅಗ್ನಿ ; ಜೀವಿಸು: ಬದುಕು; ಉರು: ಶ್ರೇಷ್ಠವಾದ; ಲೀಲೆ: ವಿಲಾಸ; ವಿನೋದ: ವಿಹಾರ, ಕ್ರೀಡೆ; ಆಳಿ: ಸಾಲು, ಗುಂಪು; ಉದ್ಭವಿಸು: ಹುಟ್ಟು; ತೋರು: ಗೋಚರಿಸು; ನೋಡು: ವೀಕ್ಷಿಸು;

ಪದವಿಂಗಡಣೆ:
ಅವನೊಬ್ಬನ +ಬೆಳಗಿನಿಂದವೆ
ಜೀವನವು +ರವಿ+ಶಶಿಗಳಿಗೆ+ ಮಗುಳ್
ಆವನೊಬ್ಬನ +ನೇಮದಿಂದವೆ+ ಪವನ +ಪಾವಕರು
ಜೀವಿಸುವರ್+ಇಂತ್+ಒಬ್ಬನ್+ಉರು+ಲೀ
ಲಾ +ವಿನೋದದೆ +ಬ್ರಹ್ಮ +ವಿಷ್ಣು +ಶಿವ
ಆವಳಿಗಳ್+ಉದ್ಭವಿಸಿ +ತೋರುವುವ್+ಆತ +ನೋಡೀತ

ಅಚ್ಚರಿ:
(೧) ತೋರುವುವಾತ ನೋಡೀತ – ಪ್ರಾಸ ಪದಗಳ ಬಳಕೆ
(೨) ಪವನ ಪಾವಕ – ಪ ಕಾರದ ಜೋಡಿ ಪದ
(೩) ಅವನೊಬ್ಬನ – ೧, ೩ ಸಾಲಿನ ಮೊದಲ ಪದ

ಪದ್ಯ ೩೪: ದುರ್ಯೋಧನನ ಆಸ್ಥಾನ ಹೇಗೆ ಚೆಲುವಾಯಿತು?

ಮಿಸುಪ ತಮ್ಮ ಮುಖೇಂದುವನು ಸೈ
ರಿಸದ ಚಂದ್ರನ ಕಿತ್ತು ನಭದಲಿ
ಬಿಸುಟು ಬೇರ್ಗಳ ಹಿಡಿದರೋ ಹೇಳೆನಲು ಸಭೆಯೊಳಗೆ
ಶಶಿವದನೆಯರ ಕೈಯ ಸೀಗುರಿ
ವೆಸೆದವಿಕ್ಕೆಲದಲಿ ಸುಯೋಧನ
ವಸುಮತೀಶನ ವೈಭವದಲಾಸ್ಥಾನ ಚೆಲುವಾಯ್ತು (ಉದ್ಯೋಗ ಪರ್ವ, ೮ ಸಂಧಿ, ೩೪ ಪದ್ಯ)

ತಾತ್ಪರ್ಯ:
ಹೊಳೆವ ತಮ್ಮ ಮುಖದ ಚಂದ್ರನನ್ನು ಸೈರಿಸದ ಚಂದ್ರನನ್ನು ಕಿತ್ತು ಆಗಸದಲ್ಲಿ ತ್ಯಜಿಸಿ ಬೇರೆಯ ಚಂದ್ರನನ್ನು ಹಿಡಿದರೋ ಎನ್ನುವಂತೆ ಸಭೆಯ ಎರಡು ಕಡೆಯಲ್ಲೂ ಸುಂದರಿಯರು ತಮ್ಮ ಕೈಯಲ್ಲಿ ಚಾಮರವನ್ನು ಹಿಡಿದು ಬೀಸುತ್ತಿರಲು ದುರ್ಯೋಧನ ದರ್ಬಾರಿನ ವೈಭವವು ಸುಂದರವಾಗಿ ತೋರುತ್ತಿತ್ತು.

ಅರ್ಥ:
ಮಿಸುಪ: ಹೊಳೆವ, ಸುಂದರವಾದ; ತಮ್ಮ: ಅವರ; ಮುಖ: ಆನನ; ಇಂದು: ಚಂದ್ರ; ಸೈರಿಸು: ತಾಳು, ಸಹಿಸು; ಚಂದ್ರ: ಶಶಿ, ಇಂದು; ಕಿತ್ತು: ಸೀಳಿ; ನಭ: ಆಗಸ; ಬಿಸುಟು: ಬಿಸಾಕು, ಎಸೆ; ಬೇರ್ಗಳ: ಬೇರೆ; ಹಿಡಿ: ಬಂಧನ, ಸೆರೆ; ಹೇಳು: ತಿಳಿಸು; ಸಭೆ: ದರ್ಬಾರು; ಶಶಿ: ಚಂದ್ರ; ವದನ: ಮುಖ; ಶಶಿವದನೆ: ಸುಂದರಿ; ಕೈ: ಹಸ್ತ, ಕರ; ಸೀಗುರಿ: ಚಾಮರ; ಎಸೆ:ಶೋಭಿಸು; ಇಕ್ಕೆಲ:ಎರಡೂ ಕಡೆ; ವಸುಮತಿ: ಭೂಮಿ; ಈಶ: ಒಡೆಯ; ವೈಭವ: ಐಶ್ವರ್ಯ; ಚೆಲುವು: ಸುಂದರ;

ಪದವಿಂಗಡಣೆ:
ಮಿಸುಪ+ ತಮ್ಮ +ಮುಖ+ಇಂದುವನು +ಸೈ
ರಿಸದ+ ಚಂದ್ರನ+ ಕಿತ್ತು +ನಭದಲಿ
ಬಿಸುಟು +ಬೇರ್ಗಳ +ಹಿಡಿದರೋ+ ಹೇಳ್+ಎನಲು+ ಸಭೆಯೊಳಗೆ
ಶಶಿವದನೆಯರ+ ಕೈಯ +ಸೀಗುರಿವ್
ಎಸೆದವ್+ಇಕ್ಕೆಲದಲಿ +ಸುಯೋಧನ
ವಸುಮತೀಶನ+ ವೈಭವದಲ್+ಆಸ್ಥಾನ +ಚೆಲುವಾಯ್ತು

ಅಚ್ಚರಿ:
(೧) ಆಗಸದ ಚಂದ್ರನಿಗಿಂತ ಸುಂದರಿಯರ ಮುಖಾರವಿಂದ ಚೆಲುವಾಗಿತ್ತು ಎಂಬ ಉಪಮಾನದ ಕಲ್ಪನೆ
(೨) ಶಶಿ, ಇಂದು, ಚಂದ್ರ – ಸಮನಾರ್ಥಕ ಪದ