ಪದ್ಯ ೬: ಕೃಪ, ಕೃತವರ್ಮರು ಹೇಗೆ ಎದ್ದು ಕುಳಿತರು?

ಇದು ಮದೀಯ ಮನೋರಥದ ಸಂ
ಹೃದಯದೊಲು ಸಂಕಲ್ಪ ಕಾರ್ಯಾ
ಭ್ಯುದಯ ಸೂಚಕವಾಯ್ತು ನಿದ್ರಾಮುದ್ರಿತೇಕ್ಷಣರ
ಪದವ ಹಿಡಿದಲ್ಲಾದಿದಡೆ ಮೈ
ಬೆದರುತೇನೇನೆನುತ ನಿದ್ರಾ
ಮದವಿಘೂರ್ಣನವಡಗಿ ಕುಳ್ಳಿರ್ದರು ಮಹಾರಥರು (ಗದಾ ಪರ್ವ, ೯ ಸಂಧಿ, ೬ ಪದ್ಯ)

ತಾತ್ಪರ್ಯ:
ಈ ಘಟನೆಯು ನನ್ನ ಮನೋರಥವನ್ನು ಪೂರೈಸುವ ಮಾರ್ಗವನ್ನು ಸೂಚಿಸಿದಂತಾಯಿತು. ನನ್ನ ಸಂಕಲ್ಪ ಸಿದ್ಧಿಗೆ ಇದೇ ದಾರಿ ಎಂದುಕೊಂಡು ಅಶ್ವತ್ಥಾಮನು ಕೃಪ, ಕೃತವರ್ಮರ ಕಾಲುಗಲನ್ನು ಅಲುಗಿಸಿದನು. ಅವರಿಬ್ಬರ ನಿದ್ದೆಯ ಮದವು ಅಡಗಿ ಏನು ಏನು ಎಂದು ಕೇಳುತ್ತಾ ಎದ್ದು ಕುಳಿತರು.

ಅರ್ಥ:
ಮದೀಯ: ನನ್ನ; ಮನೋರಥ: ಮನಸ್ಸಿನ ಆಸೆ, ಇಚ್ಛೆ; ಹೃದಯ: ಮನಸ್ಸು, ಅಂತಃಕರಣ; ಸಂಕಲ್ಪ: ನಿರ್ಧಾರ, ನಿರ್ಣಯ; ಕಾರ್ಯ: ಕೆಲಸ; ಅಭ್ಯುದಯ: ಏಳಿಗೆ; ಸೂಚಕ: ತೋರಿಸು, ಹೇಳು; ನಿದ್ರಾ: ಶಯನ; ಮುದ್ರೆ: ಮೊಹರು, ಚಿಹ್ನೆ; ಪದ: ಚರನ; ಹಿಡಿ: ಗ್ರಹಿಸು; ಅಲ್ಲಾಡಿಸು: ತೂಗಾಡು; ಮೈ: ತನು, ದೇಹ; ಬೆದರು: ಹೆದರು; ಮದ: ಅಮಲು, ಮತ್ತು; ಅಡಗು: ಅವಿತುಕೊಳ್ಳು, ಮರೆಯಾಗು; ಕುಳ್ಳಿರ್ದು: ಕುಳಿತು; ಮಹಾರಥ: ಪರಾಕ್ರಮಿ;

ಪದವಿಂಗಡಣೆ:
ಇದು +ಮದೀಯ +ಮನೋರಥದ +ಸಂ
ಹೃದಯದೊಲು +ಸಂಕಲ್ಪ+ ಕಾರ್ಯ
ಅಭ್ಯುದಯ +ಸೂಚಕವಾಯ್ತು +ನಿದ್ರಾಮುದ್ರಿತೇಕ್ಷಣರ
ಪದವ +ಹಿಡಿದ್+ಅಲ್ಲಾಡಿದಡೆ +ಮೈ
ಬೆದರುತ್+ ಏನ್+ಏನ್+ಎನುತ +ನಿದ್ರಾ
ಮದ+ವಿಘೂರ್ಣನವ್+ಅಡಗಿ +ಕುಳ್ಳಿರ್ದರು+ ಮಹಾರಥರು

ಅಚ್ಚರಿ:
(೧) ಮಲಗಿದ್ದರು ಎಂದು ಹೇಳಲು – ನಿದ್ರಾಮುದ್ರಿತೇಕ್ಷಣರ
(೨) ಎಚ್ಚರಗೊಂಡರು ಎಂದು ಹೇಳುವ ಪರಿ – ನಿದ್ರಾಮದವಿಘೂರ್ಣನವಡಗಿ ಕುಳ್ಳಿರ್ದರು

ಪದ್ಯ ೧೮: ಧರ್ಮಜನು ಏನೆಂದು ಚಿಂತಿಸಿದನು?

ಶೋಕವಿಮ್ಮಡಿಸಿತ್ತು ಚಿತ್ತ
ವ್ಯಾಕುಳತೆಯಾ ಸತಿಯ ನುಡಿಗಳ
ನೇಕ ಸಾಣೆಯ ಸರಳು ಮುರಿದವು ನೃಪನ ಹೃದಯದಲಿ
ಆ ಕುಮಾರ ವಿಯೋಗವಹ್ನಿಗೆ
ಯೀಕೆಯಳಲು ಸಮೀರನಾಯ್ತು ದಿ
ವೌಕಸರ ಸಮ್ಮೇಳವೇ ಪುರುಷಾರ್ಥ ತನಗೆಂದ (ದ್ರೋಣ ಪರ್ವ, ೭ ಸಂಧಿ, ೧೮ ಪದ್ಯ)

ತಾತ್ಪರ್ಯ:
ಮಗನ ವಿಯೋಗದ ಕಿಚ್ಚಿನಿಂದ ಬಳಲುತ್ತಿದ್ದ ಯುಧಿಷ್ಥಿರನ ಹೃದಯಕ್ಕೆ ಸುಭದ್ರೆಯ ಸಾಣೆಹಿಡಿದ ಬಾಣಗಳಂತಿದ್ದ ಮಾತುಗಳು ನೆಟ್ಟವು. ಆ ಉರಿಗೆ ಸುಭದ್ರೆಯ ಮಾತುಗಳು ಗಾಳಿಯಂತಾಗಿ ಉರಿ ಇಮ್ಮಡಿಸಿತು. ಇನ್ನು ದೇವತೆಗಳ ಬಳಿಗೆ ಹೋಗುವುದೇ ನಾನು ಸಾಧಿಸಬೇಕಾದ ಪುರುಷಾರ್ಥ ಎಂದವನು ಚಿಂತಿಸಿದನು.

ಅರ್ಥ:
ಶೋಕ: ದುಃಖ; ಇಮ್ಮಡಿಸು: ಅಧಿಕವಾಗು, ಎರಡುಪಟ್ಟಾಗು; ಚಿತ್ತ: ಮನಸ್ಸು; ವ್ಯಾಕುಲತೆ: ಚಿಂತೆ, ಕಳವಳ; ಸತಿ: ಹೆಣ್ಣು; ನುಡಿ: ಮಾತು; ಅನೇಕ: ಬಹಳ; ಸಾಣೆ: ಉಜ್ಜುವ ಕಲ್ಲು; ಸರಳು: ಬಾಣ; ಮುರಿ: ಸೀಳು; ನೃಪ: ರಾಜ; ಹೃದಯ: ಎದೆ; ಕುಮಾರ: ಮಗು; ವಿಯೋಗ: ಅಗಲಿಕೆ; ವಹ್ನಿ: ಬೆಂಕಿ; ಅಳಲು: ದುಃಖ; ಸಮೀರ: ವಾಯು; ದಿವೌಕಸ: ದೇವತೆ; ಸಮ್ಮೇಳ: ಗುಂಪು; ಪುರುಷಾರ್ಥ: ಪರಮಧ್ಯೇಯಗಳು;

ಪದವಿಂಗಡಣೆ:
ಶೋಕವ್+ಇಮ್ಮಡಿಸಿತ್ತು +ಚಿತ್ತ
ವ್ಯಾಕುಳತೆ+ಆ+ ಸತಿಯ +ನುಡಿಗಳ್
ಅನೇಕ +ಸಾಣೆಯ +ಸರಳು +ಮುರಿದವು +ನೃಪನ +ಹೃದಯದಲಿ
ಆ +ಕುಮಾರ +ವಿಯೋಗ+ವಹ್ನಿಗೆ
ಈಕೆ+ಅಳಲು +ಸಮೀರನಾಯ್ತು +ದಿ
ವೌಕಸರ +ಸಮ್ಮೇಳವೇ +ಪುರುಷಾರ್ಥ +ತನಗೆಂದ

ಅಚ್ಚರಿ:
(೧) ರೂಪಕದ ಪ್ರಯೋಗ – ಸತಿಯ ನುಡಿಗಳನೇಕ ಸಾಣೆಯ ಸರಳು ಮುರಿದವು ನೃಪನ ಹೃದಯದಲಿ

ಪದ್ಯ ೨೨: ಭೀಷ್ಮರು ಹೇಗೆ ಧ್ಯಾನಮಗ್ನರಾಗಿದ್ದರು?

ಎನಲು ಹೃದಯಾಂಬುಜದ ಪೀಠದ
ವನಜನಾಭ ಧ್ಯಾನಸುಧೆಯಲಿ
ನನೆದು ಹೊಂಗಿದ ಕರಣ ಹೊರೆಯೇರಿತ್ತು ನಿಮಿಷದಲಿ
ತನುಪುಳಕ ತಲೆದೋರೆ ರೋಮಾಂ
ಚನದ ಬಿಗುಹಡಗಿತ್ತು ಕಂಗಳ
ನನೆಗಳರಳಿದವಾಯ್ತು ಭೀಷ್ಮಂಗಿತ್ತಣವಧಾನ (ದ್ರೋಣ ಪರ್ವ, ೧ ಸಂಧಿ, ೨೨ ಪದ್ಯ)

ತಾತ್ಪರ್ಯ:
ಭೀಷ್ಮನು ಹೃದಯಕಮಲ ಪೀಠದಲ್ಲಿ ನೆಲೆಗೊಳಿಸಿದ ಶ್ರೀಕೃಷ್ಣನ ಧ್ಯಾನಾಮೃತದಲ್ಲಿ ನೆನೆದು ಸಂತೋಷದಿಂದ ರೋಮಾಂಚನಗೊಂಡಿದ್ದನು. ಕರ್ಣನು ತನ್ನ ಪಾದಗಲನ್ನು ಹಣೆಗೊತ್ತಿದೊಡನೆ ಆ ರೋಮಾಂಚನವು ನಿವಾರಣೆಯಾಯಿತು, ಕಣ್ಣುಗಳು ತೆರೆದವು, ಅವನ ಮನಸ್ಸು ಹೊರಪ್ರಪಂಚಕ್ಕೆ ಬಂದಿತು.

ಅರ್ಥ:
ಹೃದಯ: ಎದೆ; ಅಂಬುಜ: ತಾವರೆ; ಪೀಠ: ಆಸನ; ವನಜನಾಭ: ಕೃಷ್ಣ, ವಿಷ್ಣು, ನಾಭಿಯಲ್ಲಿ ಕಮಲವನ್ನು ಹೊಂದಿದವ; ಧ್ಯಾನ: ಚಿಂತನೆ, ಮನನ; ಸುಧೆ: ಅಮೃತ; ನನೆ: ತೋಯು, ಒದ್ದೆಯಾಗು; ಹೊಂಗು: ಉಕ್ಕು, ಹೊರ ಹೊಮ್ಮು; ಕರಣ: ಜ್ಞಾನೇಂದ್ರಿಯ, ಕಿವಿ; ಹೊರೆ: ಭಾರ; ಏರು: ಹೆಚ್ಚಾಗು; ನಿಮಿಷ: ಕ್ಷಣ, ಕಾಲದ ಪ್ರಮಾಣ; ತನು: ದೇಹ; ಪುಳಕ: ಮೈನವಿರೇಳುವಿಕೆ; ತಲೆ: ಶಿರ; ತೋರು: ಗೋಚರಿಸು; ರೋಮಾಂಚನ: ಆಶ್ಚರ್ಯ; ಬಿಗುಹು: ಬಿಗಿ; ಅಡಗು: ಮರೆಯಾಗು; ಕಂಗಳು: ಕಣ್ಣು; ನನೆ: ಒದ್ದೆಯಾಗು; ಅರಳು: ವಿಕಸನವಾಗು; ಅವಧಾನ: ಏಕಚಿತ್ತತೆ, ಸ್ಮರಣೆ;

ಪದವಿಂಗಡಣೆ:
ಎನಲು +ಹೃದಯ+ಅಂಬುಜದ +ಪೀಠದ
ವನಜನಾಭ+ ಧ್ಯಾನ+ಸುಧೆಯಲಿ
ನನೆದು+ ಹೊಂಗಿದ +ಕರಣ +ಹೊರೆ+ಏರಿತ್ತು +ನಿಮಿಷದಲಿ
ತನುಪುಳಕ +ತಲೆದೋರೆ +ರೋಮಾಂ
ಚನದ +ಬಿಗುಹ್+ಅಡಗಿತ್ತು +ಕಂಗಳ
ನನೆಗಳ್+ಅರಳಿದವಾಯ್ತು +ಭೀಷ್ಮಂಗ್+ಇತ್ತಣ್+ಅವಧಾನ

ಅಚ್ಚರಿ:
(೧) ಧ್ಯಾನ ಮಗ್ನನಾಗಿದ್ದ ಎಂದು ಹೇಳುವ ಪರಿ – ಹೃದಯಾಂಬುಜದ ಪೀಠದ ವನಜನಾಭ ಧ್ಯಾನಸುಧೆಯಲಿ
ನನೆದು ಹೊಂಗಿದ ಕರಣ ಹೊರೆಯೇರಿತ್ತು ನಿಮಿಷದಲಿ
(೨) ವನಜ, ಅಂಜುಬ – ಸಮಾನಾರ್ಥಕ ಪದ

ಪದ್ಯ ೭: ಕೌರವ ಸೈನ್ಯದ ಸ್ಥಿತಿ ಹೇಗಿತ್ತು?

ಹರಿದುದೈ ಕುರುಸೇನೆ ಬತ್ತಿದ
ಕೆರೆಯೊಳಗೆ ಬಲೆಯೇಕೆ ಹಗೆ ಹೊ
ಕ್ಕಿರಿವರಿನ್ನಾರಡ್ಡ ಬೀಳ್ವರು ನಿನ್ನ ಮಕ್ಕಳಿಗೆ
ಬರಿದೆ ಮನ ನೋಯದಿರು ಸಾಕೆ
ಚ್ಚರುವುದೆನೆ ತನ್ನೊಳಗೆ ಹದುಳಿಸಿ
ಸರಿಹೃದಯನೀ ಮಾತನೆಂದನು ಮತ್ತೆ ಸಂಜಯಗೆ (ದ್ರೋಣ ಪರ್ವ, ೧ ಸಂಧಿ, ೭ ಪದ್ಯ)

ತಾತ್ಪರ್ಯ:
ಸಂಜಯನು ಯುದ್ಧವನ್ನು ವಿವರಿಸುತ್ತಾ, ನಿನ್ನ ಸೇನೆಯು ಓಡಿಹೋಯಿತು, ಕೆರೆ ಬತ್ತಿದಮೇಲೆ ಮೀನು ಹಿಡಿಯಲು ಬಲೆಯೇಕೆ ಬೇಕು? ಶತ್ರುವು ನುಗ್ಗಿ ಇರಿದರೆ ನಿನ್ನ ಮಕ್ಕಳನ್ನು ರಕ್ಷಿಸಲು ಅಡ್ಡಬರುವವರು ಯಾರು? ಸುಮ್ಮನೆ ದುಃಖಿಸಬೇಡ, ಎಚ್ಚರ್ಗೊಳ್ಳು ಎಂದು ಸಂಜಯನು ಹೇಳಲು ಧೃತರಾಷ್ಟ್ರನು ಸಾವರಿಸಿಕೊಂಡು ಹೀಗೆಂದನು.

ಅರ್ಥ:
ಹರಿ: ಸೀಳು, ಒಡೆದುಹೋಗು; ಬತ್ತು: ಆವಿಯಾಗು, ಒಣಗು; ಕೆರೆ: ಸರೋವರ; ಬಲೆ: ಜಾಲ; ಹಗೆ: ವೈರ; ಹೊಕ್ಕು: ಸೇರು; ಇರಿ: ಚುಚ್ಚು; ಅಡ್ಡ: ಮಧ್ಯ; ಬೀಳು: ಬಾಗು; ಮಕ್ಕಳು: ಸುತರು; ಬರಿ: ಕೇವಲ; ಮನ: ಮನಸ್ಸು; ನೋವು: ಪೆಟ್ಟು; ಸಾಕು: ನಿಲ್ಲಿಸು; ಎಚ್ಚರ: ಗಮನವಿಡು; ಹದುಳ: ಸೌಖ್ಯ, ಕ್ಷೇಮ ; ಹೃದಯ: ಎದೆ; ಮಾತು: ವಾಣಿ;

ಪದವಿಂಗಡಣೆ:
ಹರಿದುದೈ +ಕುರುಸೇನೆ +ಬತ್ತಿದ
ಕೆರೆಯೊಳಗೆ +ಬಲೆಯೇಕೆ +ಹಗೆ +ಹೊಕ್ಕ್
ಇರಿವರ್+ಇನ್ನಾರ್+ಅಡ್ಡ+ ಬೀಳ್ವರು +ನಿನ್ನ +ಮಕ್ಕಳಿಗೆ
ಬರಿದೆ+ ಮನ +ನೋಯದಿರು +ಸಾಕ್
ಎಚ್ಚರುವುದ್+ಎನೆ +ತನ್ನೊಳಗೆ +ಹದುಳಿಸಿ
ಸರಿ+ಹೃದಯನೀ +ಮಾತನೆಂದನು +ಮತ್ತೆ +ಸಂಜಯಗೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬತ್ತಿದ ಕೆರೆಯೊಳಗೆ ಬಲೆಯೇಕೆ

ಪದ್ಯ ೨: ಭೀಷ್ಮನ ನೆತ್ತಿಗೆ ಯಾರು ಬಾಣವನ್ನು ಹೂಡಿದರು?

ಒದರಿ ಜೇವಡೆಗೈದು ಬಾಣವ
ಕೆದರಿದನು ಥಟ್ಟೈಸಿ ಚಾಪವ
ನೊದೆದು ಹಾಯ್ದವು ಕೋದವಂಬುಗಳರಿಯ ನೆತ್ತಿಯಲಿ
ಇದಿರೊಳುಲಿದು ಶಿಖಂಡಿ ಶರ ಸಂ
ಘದಲಿ ಹೂಳಿದನಾಗ ಭೀಷ್ಮನ
ಹೃದಯದಲಿ ವೈರಾಗ್ಯ ಮನೆಗಟ್ಟಿತ್ತು ನಿಮಿಷದಲಿ (ಭೀಷ್ಮ ಪರ್ವ, ೧೦ ಸಂಧಿ, ೨ ಪದ್ಯ)

ತಾತ್ಪರ್ಯ:
ಅರ್ಜುನನು ಗರ್ಜಿಸಿ ಹೆದೆಯನ್ನು ಒದರಿಸಿ ಬಾಣಗಳನ್ನು ಬಿಡಲು, ಅವು ಬಿಲ್ಲನ್ನೊದೆದು ಹೋಗಿ ಭೀಷ್ಮನ ನೆತ್ತಿಯಲ್ಲಿ ನೆಟ್ಟಿದವು. ಶಿಖಂಡಿಯು ಭೀಷ್ಮನೆದುರಿನಲ್ಲೇ ನಿಂತು, ಕೂಗಿ, ಬಾಣಗಳನ್ನು ಭೀಷ್ಮನ ಮೈಯಲ್ಲಿ ಹೊಗಿಸಿದನು. ಭೀಷ್ಮನ ಮನಸ್ಸಿನಲ್ಲಿ ವೈರಾಗ್ಯವುದಿಸಿತು.

ಅರ್ಥ:
ಒದರು: ಕೊಡಹು, ಜಾಡಿಸು; ಜೇವಡೆ: ಬಿಲ್ಲಿಗೆ ಹೆದೆಯೇರಿಸಿ ಮಾಡುವ ಧ್ವನಿ, ಧನುಷ್ಟಂಕಾರ; ಬಾಣ: ಸರಳು; ಕೆದರು: ಹರಡು; ಥಟ್ಟು: ಪಕ್ಕ, ಕಡೆ, ಗುಂಪು; ಚಾಪ: ಬಿಲ್ಲು; ಒದೆ: ತುಳಿ, ಮೆಟ್ಟು; ಹಾಯ್ದು: ಹೊಡೆ; ಕೋದು: ಸೇರಿಸು; ಅಂಬು: ಬಾಣ; ಅರಿ: ವೈರಿ; ನೆತ್ತಿ: ತಲೆಯ ಮಧ್ಯಭಾಗ, ನಡುದಲೆ; ಉಲಿ: ಧ್ವನಿ; ಶಿಖಂಡಿ: ನಪುಂಸಕ; ಶರ: ಬಾಣ; ಸಂಘ: ಜೊತೆ; ಹೂಳು: ಹೂತು ಹಾಕು, ಮುಚ್ಚು; ಹೃದಯ: ಎದೆ; ವೈರಾಗ್ಯ: ಪಂಚದ ವಿಷಯಗಳಲ್ಲಿ ಅನಾಸಕ್ತಿ, ವಿರಕ್ತಿ; ಮನೆ: ಆಲಯ; ಕಟ್ಟು: ನಿರ್ಮಿಸು; ನಿಮಿಷ: ಕ್ಷಣಮಾತ್ರ, ಕಾಲದ ಪ್ರಮಾಣ;

ಪದವಿಂಗಡಣೆ:
ಒದರಿ +ಜೇವಡೆಗ್+ಐದು +ಬಾಣವ
ಕೆದರಿದನು +ಥಟ್ಟೈಸಿ +ಚಾಪವನ್
ಒದೆದು +ಹಾಯ್ದವು +ಕೋದವ್+ಅಂಬುಗಳ್+ಅರಿಯ+ ನೆತ್ತಿಯಲಿ
ಇದಿರೊಳ್+ಉಲಿದು +ಶಿಖಂಡಿ+ ಶರ+ ಸಂ
ಘದಲಿ +ಹೂಳಿದನಾಗ+ ಭೀಷ್ಮನ
ಹೃದಯದಲಿ +ವೈರಾಗ್ಯ +ಮನೆಗಟ್ಟಿತ್ತು +ನಿಮಿಷದಲಿ

ಅಚ್ಚರಿ:
(೧) ಬಾಣ, ಶರ – ಸಮಾನಾರ್ಥಕ ಪದ

ಪದ್ಯ ೨೭: ಭೀಷ್ಮರ ಮಾತಿಗೆ ಅರ್ಜುನನು ಹೇಗೆ ಪ್ರತಿಕ್ರಯಿಸಿದನು?

ಎನಲು ಶಿವಶಿವ ಶಿವಮಹಾದೇ
ವೆನುತ ಕಿವಿಗಳ ಮುಚ್ಚಿದನು ಕಂ
ಬನಿಯನುಗುರಲಿ ಮಿಡಿದು ನೊಂದನು ಪಾರ್ಥ ಹೃದಯದಲಿ
ಎನಗೆ ಗೆಲವಾಯ್ತದು ಕೃತಾರ್ಥರು
ಜದದೊಳೆನ್ನವೊಲಾರು ಬಳಿಕೇ
ನೆನಗೆ ನಿಮ್ಮವೊಲಾರು ಹಗೆಗಳು ಜಗದೊಳುಂಟೆಂದ (ಭೀಷ್ಮ ಪರ್ವ, ೭ ಸಂಧಿ, ೨೭ ಪದ್ಯ)

ತಾತ್ಪರ್ಯ:
ಭೀಷ್ಮನ ಮಾತುಗಳನ್ನು ಕೇಳಿ ಅರ್ಜುನನು ಶಿವ ಶಿವಾ ಮಹಾದೇಆ ಎಂದುದ್ಗರಿಸಿ ಕಿವಿಗಳನ್ನು ಮುಚ್ಚಿಕೊಂಡನು ಕಂಬನಿಯನ್ನು ಉಗುರಲ್ಲಿ ಮಿಡಿದು, ಮನಸ್ಸಿನಲ್ಲಿ ಅತಿಶಯವಾಗಿ ನೋಮ್ದನು. ನಾನು ಗೆದ್ದೆ, ನನ್ನಂತಹ ಕೃತಾರ್ಥರು ಯಾರಿದ್ದಾರೆ? ಪಿತಾಮಹಾ ನಿನ್ನಂತಹ ವೈರಿಗಳು ನನಗೆ ಈ ಲೋಕದಲ್ಲಿ ಯಾರಿದ್ದಾರೆ ಎಂದನು.

ಅರ್ಥ:
ಎನಲು: ಹೀಗೆ ಹೇಳಲು; ಶಿವ: ಶಂಕರ; ಕಿವಿ: ಕರ್ಣ; ಮುಚ್ಚು: ಅಡಗಿಸು, ಮರೆಮಾಡು; ಕಂಬನಿ: ಕಣ್ಣೀರು; ಉಗುರು: ನಖ; ಮಿಡಿ: ತವಕಿಸು; ನೊಂದು: ನೋವನ್ನುಂಡು; ಹೃದಯ: ಎದೆ; ಗೆಲುವು: ಜಯ; ಕೃತಾರ್ಥ: ಮಾಡಬೇಕಾದ ಕೆಲಸವನ್ನು ಮಾಡಿ ಸಫಲತೆಯನ್ನು ಹೊಂದಿದವ, ಧನ್ಯ; ಜನ: ಮನುಷ್ಯ; ಬಳಿಕ: ನಂತರ; ಹಗೆ: ವೈರಿ; ಜಗ: ಪ್ರಪಂಚ;

ಪದವಿಂಗಡಣೆ:
ಎನಲು +ಶಿವಶಿವ+ ಶಿವಮಹಾದೇವ
ಎನುತ +ಕಿವಿಗಳ +ಮುಚ್ಚಿದನು +ಕಂ
ಬನಿಯನ್+ಉಗುರಲಿ +ಮಿಡಿದು +ನೊಂದನು +ಪಾರ್ಥ +ಹೃದಯದಲಿ
ಎನಗೆ +ಗೆಲವಾಯ್ತ್+ಅದು +ಕೃತಾರ್ಥರು
ಜನದೊಳ್+ಎನ್ನವೊಲ್+ಆರು +ಬಳಿಕೇನ್
ಎನಗೆ+ ನಿಮ್ಮವೊಲ್+ಆರು +ಹಗೆಗಳು +ಜಗದೊಳ್+ಉಂಟೆಂದ

ಅಚ್ಚರಿ:
(೧) ಅರ್ಜುನನ ದುಃಖ – ಕಿವಿಗಳ ಮುಚ್ಚಿದನು ಕಂಬನಿಯನುಗುರಲಿ ಮಿಡಿದು ನೊಂದನು ಪಾರ್ಥ ಹೃದಯದಲಿ

ಪದ್ಯ ೨೭: ಧರ್ಮಜನು ಅರ್ಜುನನಿಗೆ ಯಾವ ಸಲಹೆ ನೀಡಿದನು?

ಅದರಿನಾವಂಗುಪಹತಿಯ ಮಾ
ಡದಿರು ಸಚರಾಚರದಚೈತ
ನ್ಯದಲಿ ನಿನ್ನನೆ ಬೆರಸಿ ಕಾಂಬುದು ನಿನ್ನ ತನುವೆಂದು
ಬೆದರದಿರು ಬಲುತಪಕೆ ಶೂಲಿಯ
ಪದಯುಗವ ಮರೆಯದಿರು ಹರಿಯನು
ಹೃದಯದಲಿ ಪಲ್ಲಟಿಸದಿರು ಸುಖಿಯಾಗು ಹೋಗೆಂದ (ಅರಣ್ಯ ಪರ್ವ, ೫ ಸಂಧಿ, ೨೭ ಪದ್ಯ)

ತಾತ್ಪರ್ಯ:
ಅರ್ಜುನ, ಹೀಗಿರುವುದರಿಂದ ನೀನು ಯಾರಿಗೂ ಕೇಡನ್ನು ಮಾಡಬೇಡ, ಚರಾಚರಗಳೆಲ್ಲರಲ್ಲೂ ಇರುವ ಚೈತನ್ಯವೇ ನೀನು, ಇದೆಲ್ಲವೂ ನಿನ್ನ ದೇಹವೇ ಎಂದು ಕಾಣು. ಉಗ್ರತಪಸ್ಸನ್ನು ಮಾಡಲು ಹೆದರಬೇಡ, ಶಿವನ ಪಾದಕಮಲಗಳನ್ನು ಮರೆಯಬೇಡ. ಹೃದಯದಲ್ಲಿ ಹರಿಯನ್ನು ಮರೆಯಬೇಡ, ನೀನು ಸುಖಿಯಾಗಿ ಹೋಗಿ ಬಾ ಎಂದು ಆಶೀರ್ವದಿಸಿ ಧರ್ಮಜನು ಅರ್ಜುನನನ್ನು ಕಳಿಸಿದನು.

ಅರ್ಥ:
ಅದರಿನ್: ಆದುದರಿಂದ; ಆವಂಗ್: ಯಾರಿಗೂ; ಅಪಹತಿ: ಕೇಡು; ಸಚರಾಚರ: ಚಲಿಸುವ ಹಾಗು ಚಲಿಸದಿರುವ; ಚೈತನ್ಯ: ಜೀವದ ಲಕ್ಷಣ, ಜೀವಂತಿಕೆ; ಬೆರಸು: ಸೇರಿಸು; ಕಾಂಬು: ನೋಡು; ತನು: ದೇಹ; ಬೆದರು: ಹೆದರು; ಬಲು: ಬಹಳ, ಕಠಿಣ, ದೊಡ್ಡ; ತಪ: ತಪಸ್ಸು; ಶೂಲಿ: ಶಿವ; ಪದಯುಗ: ಪಾದಕಮಲ; ಮರೆ: ನೆನಪಿನಿಂದ ದೂರ ಮಾಡು; ಹರಿ: ವಿಷ್ಣು, ಕೃಷ್ಣ; ಹೃದಯ: ಎದೆ; ಪಲ್ಲಟ: ಅವ್ಯವಸ್ಥೆ, ತಲೆಕೆಳಗು; ಸುಖಿ: ಸಂತಸ, ಕ್ಷೇಮ; ಹೋಗು: ತೆರಳು;

ಪದವಿಂಗಡಣೆ:
ಅದರಿನ್+ಆವಂಗ್+ಉಪಹತಿಯ +ಮಾ
ಡದಿರು +ಸಚರಾಚರದ+ಚೈತ
ನ್ಯದಲಿ +ನಿನ್ನನೆ +ಬೆರಸಿ +ಕಾಂಬುದು +ನಿನ್ನ +ತನುವೆಂದು
ಬೆದರದಿರು +ಬಲು+ತಪಕೆ+ ಶೂಲಿಯ
ಪದಯುಗವ +ಮರೆಯದಿರು +ಹರಿಯನು
ಹೃದಯದಲಿ +ಪಲ್ಲಟಿಸದಿರು +ಸುಖಿಯಾಗು +ಹೋಗೆಂದ

ಅಚ್ಚರಿ:
(೧) ಎಲ್ಲರಲ್ಲೂ ನಿನ್ನನ್ನೆ ಕಾಣು ಎಂಬುವ ಸಂದೇಶ – ಸಚರಾಚರದಚೈತ
ನ್ಯದಲಿ ನಿನ್ನನೆ ಬೆರಸಿ ಕಾಂಬುದು ನಿನ್ನ ತನುವೆಂದು

ಪದ್ಯ ೧೭: ಎಲ್ಲಿಂದ ನೀರನ್ನು ತೆಗೆಯಲು ವಿಪ್ರ ವೇಷದ ಕೃಷ್ಣನು ಹೇಳಿದನು?

ಉದಕವನು ಹೊರಗರಸುತಿರಲಾ
ಪದುಮನಾಭನು ನಗುತ ನಿನ್ನಯ
ಹೃದಯದೊಳಗಿರ್ದಮಲಗಂಗಾಜಲವ ತೆಗೆದೆನಗೆ
ಹದುಳದಿಂದೆರೆ ಧಾರೆಯನು ಸಂ
ಪದದ ಮುಕುತಿಯ ಪದವನೊಲುವಡೆ
ಇದು ಶುಭೋದಯವೆಂದು ಮಾಯವಿಪ್ರನರುಹಿದನು (ಕರ್ಣ ಪರ್ವ, ೨೭ ಸಂಧಿ, ೧೭ ಪದ್ಯ)

ತಾತ್ಪರ್ಯ:
ಕರ್ಣನು ನೀರಿಗಾಗಿ ಹೊರಗೆ ಹುಡುಕುತ್ತಿರುವುದನ್ನು ನೋಡಿದ ಬ್ರಾಹ್ಮಣ ವೇಷದ ಕೃಷ್ಣನು, ನಿನ್ನ ಹೃದಯದಲ್ಲಿರುವ ಶುದ್ಧವಾದ ಗಂಗಾಜಲವನ್ನು ತೆಗೆದು ಸಂತೋಷದಿಂದ ನಿನ್ನ ಕುಂಡಲಗಳನ್ನು ಧಾರೆಯೆರೆದು ಕೊಡು, ನಿನಗೆ ಮುಕ್ತಿ ಬೇಕಾದರೆ ಈ ದಾನವೇ ಮಂಗಳದ ಉದಯವಾಗಲಿ ಎಂದು ಕೃಷ್ಣನು ಹೇಳಿದನು.

ಅರ್ಥ:
ಉದಕ: ನೀರು; ಹೊರಗೆ: ಆಚೆ; ಅರಸು: ಹುಡುಕು; ಪದುಮನಾಭ: ಕೃಷ್ಣ; ನಗು: ಸಂತೋಷ; ಹೃದಯ: ಎದೆ, ವಕ್ಷಸ್ಥಳ; ಅಮಲ: ನಿರ್ಮಲ; ಗಂಗಾಜಲ: ಪವಿತ್ರ ನೀರು; ತೆಗೆ: ಹೊರಹಾಕು; ಹದುಳ: ಉತ್ಸಾಹ, ಹುರುಪು, ಸಂತೋಶ; ಎರೆ: ನೀಡು, ಸುರಿ; ಧಾರೆ: ದಾನ ಮಾಡುವಾಗ ಎರೆಯುವ ನೀರು; ಸಂಪದ:ಸಿರಿ; ಮುಕುತಿ: ಮೋಕ್ಷ; ಪದ: ಪದವಿ; ಒಲುವು: ಪ್ರೀತಿ, ಬಯಸು; ಶುಭೋದಯ: ಮಂಗಳದುದಯ; ಉದಯ: ಹುಟ್ಟು, ಪ್ರಾರಂಭ; ಮಾಯ: ಗಾರುಡಿ, ಭ್ರಾಂತಿ; ವಿಪ್ರ: ಬ್ರಾಹ್ಮಣ; ಅರುಹು: ಹೇಳು;

ಪದವಿಂಗಡಣೆ:
ಉದಕವನು +ಹೊರಗ್+ಅರಸುತಿರಲ್
ಆ+ಪದುಮನಾಭನು+ ನಗುತ+ ನಿನ್ನಯ
ಹೃದಯದೊಳಗ್+ಇರ್ದ+ಅಮಲ+ಗಂಗಾಜಲವ +ತೆಗೆದ್+ಎನಗೆ
ಹದುಳದಿಂದ್+ಎರೆ+ ಧಾರೆಯನು +ಸಂ
ಪದದ +ಮುಕುತಿಯ +ಪದವನ್+ಒಲುವಡೆ
ಇದು+ ಶುಭೋದಯವೆಂದು+ ಮಾಯ+ವಿಪ್ರನ್+ಅರುಹಿದನು

ಅಚ್ಚರಿ:
(೧) ಸಂಪದ, ಪದ – ಪದಗಳ ಬಳಕೆ

ಪದ್ಯ ೨೬: ಕರ್ಣನಿಗೆ ಸೇನಾಧಿಪತ್ಯ ಪಟ್ಟ ಕಟ್ಟುವ ಪ್ರಸ್ತಾಪಕ್ಕೆ ಅಶ್ವತ್ಥಾಮನ ಅಭಿಪ್ರಾಯವೇನು?

ಎಮ್ಮ ತೋರಿಸಬೇಡ ಸುಖದಲಿ
ನಿಮ್ಮ ಚಿತ್ತಕೆ ಬಹುದ ಮಾಡುವು
ದೆಮ್ಮ ಹೃದಯ ವ್ಯಥೆಯ ನಾವಿನ್ನಾಡಿ ಫಲವೇನು
ಎಮ್ಮ ಪುಣ್ಯದ ಬೆಳೆಗಳೊಣಗಿದ
ಡಮ್ಮಿ ಮಾಡುವುದೇನು ಕರ್ಣನು
ನಮ್ಮ ದಳವಾಯೆಂದನಶ್ವತ್ಥಾಮನರಸಂಗೆ (ಕರ್ಣ ಪರ್ವ, ೧ ಸಂಧಿ, ೨೬ ಪದ್ಯ)

ತಾತ್ಪರ್ಯ:
ಎಲ್ಲರೂ ಅಶ್ವತ್ಥಾಮನ ಕಡೆ ನೋಡಲು, ನಮ್ಮನ್ನು ತೋರಿಸಲು ಹೋಗಬೇಡಿ, ನಿನ್ನ ಮನಸ್ಸಿಗೆ ಬಂದಂತೆ ಮಾಡು, ನಮ್ಮ ಮನೋವ್ಯಥೆಯನ್ನು ಬಾಯಿ ಬಿಟ್ಟು ಆಡಿ ಫಲವೇನು? ನಮ್ಮ ಪುಣ್ಯಾ ಬೆಳೆಗಳು ಒಣಗಿ ಹೋದವು. ಹೋರಾಡಿ ಏನು ಮಾಡಬಹುದು ಕರ್ಣನೇ ನಮ್ಮ ಸೇನಾಧಿಪತಿ ಎಂದು ಅಶ್ವತ್ಥಾಮನು ನುಡಿದನು.

ಅರ್ಥ:
ಎಮ್ಮ: ನಮ್ಮ; ತೋರು: ಗೋಚರ, ಕಾಣು; ಸುಖ: ಆನಂದ, ಸಂತೋಷ; ಚಿತ್ತ: ಮನಸ್ಸು; ಬಹುದು: ಬರುವುದೋ; ಮಾಡು: ಕಾರ್ಯ ರೂಪಕ್ಕೆ ತರುವುದು; ಹೃದಯ: ವಕ್ಷಸ್ಥಳ; ವ್ಯಥೆ: ದುಃಖ; ಫಲ: ಪ್ರಯೋಜನ; ಪುಣ್ಯ:ಸದಾಚಾರ; ಬೆಳೆ: ಪೈರು; ಒಣಗು: ಬಾಡು, ಸಾರಹೀನ; ದಳವಾಯಿ: ಸೇನಾಧಿಪತಿ; ಅರಸ: ರಾಜ;

ಪದವಿಂಗಡಣೆ:
ಎಮ್ಮ +ತೋರಿಸಬೇಡ +ಸುಖದಲಿ
ನಿಮ್ಮ +ಚಿತ್ತಕೆ +ಬಹುದ +ಮಾಡುವುದ್
ಎಮ್ಮ +ಹೃದಯ +ವ್ಯಥೆಯ +ನಾವಿನ್ನಾಡಿ +ಫಲವೇನು
ಎಮ್ಮ +ಪುಣ್ಯದ +ಬೆಳೆಗಳ್+ಒಣಗಿದ
ಡಮ್ಮಿ +ಮಾಡುವುದೇನು +ಕರ್ಣನು
ನಮ್ಮ +ದಳವಾಯೆಂದನ್+ಅಶ್ವತ್ಥಾಮನ್+ಅರಸಂಗೆ

ಅಚ್ಚರಿ:
(೧) ಎಮ್ಮ – ೩ ಬಾರಿ ಪ್ರಯೋಗ
(೨) ಪುಣ್ಯವು ಹೋಯಿತೆನಲು ಬೆಳೆಗಳ ಉಪಮಾನ – ಎಮ್ಮ ಪುಣ್ಯದ ಬೆಳೆಗಳೊಣಗಿದಡಮ್ಮಿ ಮಾಡುವುದೇನು

ಪದ್ಯ ೪: ಕರ್ಣನ ಸುದ್ದಿಯನ್ನು ಕೇಳಿ ಆಸ್ಥಾನವು ಯಾವುದರಲ್ಲಿ ಮುಳುಗಿತು?

ಮೊದಲಲಿದ್ದುದು ಜೀವಕಳೆ ಹೃದ
ಯದಲಿ ಹೃದಯವನೊಡೆದು ಮಿಗೆ ಕಂ
ಠದಲಿ ಕವಿದುದು ಮಂಚದಲಿ ಮೈಮರೆದು ಮಲಗಿದನು
ಕೆದರಿತಲ್ಲಿಯದಲ್ಲಿ ರಾಯನ
ಹದನನರಿದೊಳಗೊಳಗೆ ರಾಣಿಯ
ರೊದರಲಂತಃಪುರದಲುಕ್ಕಿತು ಶೋಕರಸಜಲಧಿ (ಕರ್ಣ ಪರ್ವ, ೧ ಸಂಧಿ, ೪ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನ ಜೀವವು ಮೊದಲು ಹೃದಯದಲ್ಲಿತ್ತು, ನಂತರ ಹೃದಯವನ್ನು ಬಿಟ್ಟು ಮೇಲೇಳಿ ಕಂಠಕ್ಕೆ ಬಂತು, ಅವನು ಮೈಮರೆದು ಮಂಚದ ಮೇಲೆ ಮಲಗಿದನು. ಆಸ್ಥಾನದಲ್ಲಿದ್ದವರು ಅತ್ತಿತ್ತ ಹೋದರು. ಈ ವಿಷಯವು ತಿಳಿದು ಅಂತಃಪುರದಲ್ಲಿದ್ದ ರಾಣಿಯರು ಜೋರಾಗಿ ಅತ್ತರು.
ಅರಮನೆಯಲ್ಲಿ ಶೋಕ ಸಮುದ್ರವೇ ಉಕ್ಕಿತು.

ಅರ್ಥ:
ಮೊದಲು: ಆದಿ; ಜೀವ: ಉಸಿರಾಡುವ ಶಕ್ತಿ; ಕಳೆ: ತೇಜ, ಸ್ವರೂಪ; ಹೃದಯ: ವಕ್ಷಸ್ಥಳ; ಒಡೆದು: ಸೀಳಿ; ಮಿಗೆ: ಮತ್ತು; ಕಂಠ: ಕೊರಳು; ಕವಿದು: ಮುಚ್ಚಳ, ಮುಸುಕು; ಮಂಚ: ಪರ್ಯಂಕ; ಮೈ: ತನು; ಮರೆದು: ಅರಿವಿಲ್ಲದೆ; ಮಲಗು: ಶಯನ, ನಿದ್ರೆ; ಕೆದರು: ಕದಡು; ರಾಯ: ರಾಜ; ಹದ: ಸರಿಯಾದ ಸ್ಥಿತಿ; ಅರಿ:ತಿಳಿ; ಒಳಗೆ: ಆಂತರ್ಯ; ರಾಣಿ: ಅರಸಿ; ರೋದ: ಅಳು; ಅಂತಃಪುರ: ರಾಣಿಯರ ವಾಸಸ್ಥಾನ; ಉಕ್ಕು: ಹೆಚ್ಚಳ; ಶೋಕ: ದುಃಖ; ಜಲಧಿ: ಸಾಗರ; ರಸ: ಸಾರ;

ಪದವಿಂಗಡಣೆ:
ಮೊದಲಲ್+ಇದ್ದುದು +ಜೀವಕಳೆ+ ಹೃದ
ಯದಲಿ +ಹೃದಯವನ್+ಒಡೆದು +ಮಿಗೆ +ಕಂ
ಠದಲಿ +ಕವಿದುದು +ಮಂಚದಲಿ +ಮೈಮರೆದು +ಮಲಗಿದನು
ಕೆದರಿತ್+ಅಲ್ಲಿಯದಲ್ಲಿ+ ರಾಯನ
ಹದನನ್+ಅರಿದ್+ಒಳಗೊಳಗೆ +ರಾಣಿಯ
ರೊದರಲ್+ಅಂತಃಪುರದಲ್+ಉಕ್ಕಿತು +ಶೋಕರಸ+ಜಲಧಿ

ಅಚ್ಚರಿ:
(೧) ದುಃಖವು ಆವರಿಸುವ ಬಗೆಯ ವಿವರಣೆ – ಹೃದಯದಿಂದ ಕಂಠಕ್ಕೆ
(೨) ಮ ಕಾರದ ತ್ರಿವಳಿ ಪದ – ಮಂಚದಲಿ ಮೈಮರೆದು ಮಲಗಿದನು
(೩) ಉಪಮಾನದ ಪ್ರಯೋಗ – ಅಂತಃಪುರದಲುಕ್ಕಿತು ಶೋಕರಸಜಲಧಿ