ಪದ್ಯ ೨೨: ಭೀಷ್ಮರು ಹೇಗೆ ಧ್ಯಾನಮಗ್ನರಾಗಿದ್ದರು?

ಎನಲು ಹೃದಯಾಂಬುಜದ ಪೀಠದ
ವನಜನಾಭ ಧ್ಯಾನಸುಧೆಯಲಿ
ನನೆದು ಹೊಂಗಿದ ಕರಣ ಹೊರೆಯೇರಿತ್ತು ನಿಮಿಷದಲಿ
ತನುಪುಳಕ ತಲೆದೋರೆ ರೋಮಾಂ
ಚನದ ಬಿಗುಹಡಗಿತ್ತು ಕಂಗಳ
ನನೆಗಳರಳಿದವಾಯ್ತು ಭೀಷ್ಮಂಗಿತ್ತಣವಧಾನ (ದ್ರೋಣ ಪರ್ವ, ೧ ಸಂಧಿ, ೨೨ ಪದ್ಯ)

ತಾತ್ಪರ್ಯ:
ಭೀಷ್ಮನು ಹೃದಯಕಮಲ ಪೀಠದಲ್ಲಿ ನೆಲೆಗೊಳಿಸಿದ ಶ್ರೀಕೃಷ್ಣನ ಧ್ಯಾನಾಮೃತದಲ್ಲಿ ನೆನೆದು ಸಂತೋಷದಿಂದ ರೋಮಾಂಚನಗೊಂಡಿದ್ದನು. ಕರ್ಣನು ತನ್ನ ಪಾದಗಲನ್ನು ಹಣೆಗೊತ್ತಿದೊಡನೆ ಆ ರೋಮಾಂಚನವು ನಿವಾರಣೆಯಾಯಿತು, ಕಣ್ಣುಗಳು ತೆರೆದವು, ಅವನ ಮನಸ್ಸು ಹೊರಪ್ರಪಂಚಕ್ಕೆ ಬಂದಿತು.

ಅರ್ಥ:
ಹೃದಯ: ಎದೆ; ಅಂಬುಜ: ತಾವರೆ; ಪೀಠ: ಆಸನ; ವನಜನಾಭ: ಕೃಷ್ಣ, ವಿಷ್ಣು, ನಾಭಿಯಲ್ಲಿ ಕಮಲವನ್ನು ಹೊಂದಿದವ; ಧ್ಯಾನ: ಚಿಂತನೆ, ಮನನ; ಸುಧೆ: ಅಮೃತ; ನನೆ: ತೋಯು, ಒದ್ದೆಯಾಗು; ಹೊಂಗು: ಉಕ್ಕು, ಹೊರ ಹೊಮ್ಮು; ಕರಣ: ಜ್ಞಾನೇಂದ್ರಿಯ, ಕಿವಿ; ಹೊರೆ: ಭಾರ; ಏರು: ಹೆಚ್ಚಾಗು; ನಿಮಿಷ: ಕ್ಷಣ, ಕಾಲದ ಪ್ರಮಾಣ; ತನು: ದೇಹ; ಪುಳಕ: ಮೈನವಿರೇಳುವಿಕೆ; ತಲೆ: ಶಿರ; ತೋರು: ಗೋಚರಿಸು; ರೋಮಾಂಚನ: ಆಶ್ಚರ್ಯ; ಬಿಗುಹು: ಬಿಗಿ; ಅಡಗು: ಮರೆಯಾಗು; ಕಂಗಳು: ಕಣ್ಣು; ನನೆ: ಒದ್ದೆಯಾಗು; ಅರಳು: ವಿಕಸನವಾಗು; ಅವಧಾನ: ಏಕಚಿತ್ತತೆ, ಸ್ಮರಣೆ;

ಪದವಿಂಗಡಣೆ:
ಎನಲು +ಹೃದಯ+ಅಂಬುಜದ +ಪೀಠದ
ವನಜನಾಭ+ ಧ್ಯಾನ+ಸುಧೆಯಲಿ
ನನೆದು+ ಹೊಂಗಿದ +ಕರಣ +ಹೊರೆ+ಏರಿತ್ತು +ನಿಮಿಷದಲಿ
ತನುಪುಳಕ +ತಲೆದೋರೆ +ರೋಮಾಂ
ಚನದ +ಬಿಗುಹ್+ಅಡಗಿತ್ತು +ಕಂಗಳ
ನನೆಗಳ್+ಅರಳಿದವಾಯ್ತು +ಭೀಷ್ಮಂಗ್+ಇತ್ತಣ್+ಅವಧಾನ

ಅಚ್ಚರಿ:
(೧) ಧ್ಯಾನ ಮಗ್ನನಾಗಿದ್ದ ಎಂದು ಹೇಳುವ ಪರಿ – ಹೃದಯಾಂಬುಜದ ಪೀಠದ ವನಜನಾಭ ಧ್ಯಾನಸುಧೆಯಲಿ
ನನೆದು ಹೊಂಗಿದ ಕರಣ ಹೊರೆಯೇರಿತ್ತು ನಿಮಿಷದಲಿ
(೨) ವನಜ, ಅಂಜುಬ – ಸಮಾನಾರ್ಥಕ ಪದ

ಪದ್ಯ ೩೭: ಕಣ್ವ ಮುನಿಗಳು ಫಲದೊಡನೆ ಯಾರನ್ನು ನೋಡಲು ಬಂದರು?

ಮುನಿಪ ಕಣ್ವನು ಕಂದೆರೆದು ಪರ
ಮನನು ಜಾನಿಸಿ ಕರವನರಳಿಚ
ಲೊನೆದು ಬಿದ್ದುದು ಹಣ್ಣು ಕಂಡನು ನಗುತ ಮನದೊಳಗೆ
ವನಜನಾಭನ ತಂತ್ರವಿದು ಪಾ
ವನ ಸುರೂಪನ ನೋಳ್ಪೆನೆಂದಾ
ಮುನಿಪ ಫಲಸಹ ಬಂದು ಕಂಡನು ಕೃಷ್ಣಪಾಂಡವರ (ಅರಣ್ಯ ಪರ್ವ, ೪ ಸಂಧಿ, ೩೭ ಪದ್ಯ)

ತಾತ್ಪರ್ಯ:
ಹಣ್ಣು ಮರವನ್ನೇರಿ ಪಾಂಡವರು ತಮ್ಮ ವನವನ್ನು ಸೇರಲು, ಕಣ್ವ ಮುನಿಗಳು ತಮ್ಮ ಕಣ್ಣನ್ನು ತೆರೆದು ಹಸ್ತವನ್ನು ಚಾಚಲು, ಮೇಲಿದ್ದ ನೇರಳೆಯ ಹಣ್ಣು ಅವನ ಕೈಯೊಳಕ್ಕೆ ಬಿದ್ದಿತು. ಕಣ್ವನು ನಕ್ಕು ಮನಸ್ಸಿನಲ್ಲಿಯೇ ಇದು ಶ್ರೀಕೃಷ್ಣನ ತಂತ್ರ. ಆ ಪಾವನನೂ ಸುಂದರ ಸ್ವರೂಪನೂ ಆದವನನ್ನು ನೋಡಬೇಕೆಂಬ ಹಂಬಲದಿಂದ ಹಣ್ಣಿನೊಡನೆ ಕೃಷ್ಣ ಪಾಂಡವರಿದ್ದ ವನಕ್ಕೆ ತೆರಳಿದನು.

ಅರ್ಥ:
ಮುನಿಪ: ಋಷಿ; ಕಂದೆರೆದು: ಕಣ್ಣನ್ನು ಅರಳಿಸು; ಪರಮನ: ಭಗವಂತ; ಜಾನಿಸು: ಜ್ಞಾಪಿಸು, ನೆನೆ; ಕರ: ಹಸ್ತ; ಅರಳಿಚು: ಚಾಚು; ಒನೆದು: ಕೂಡಲೆ; ಬಿದ್ದು: ಕೆಳಕ್ಕೆ ಬೀಳು; ಹಣ್ಣು: ಫಲ; ಕಂಡು: ನೋಡು; ನಗುತ: ಸಂತಸ; ಮನ: ಮನಸ್ಸು; ವನಜ: ಕಮಲ; ವನಜನಾಭ: ವಿಷ್ಣು; ತಂತ್ರ: ಕೈಕೆಲಸ; ಪಾವನ: ನಿರ್ಮಲ; ಸುರೂಪ: ಸ್ವರೂಪ, ಸ್ವಂತ ಆಕೃತಿ; ನೋಳ್ಪು: ನೋಡು; ಸಹ: ಜೊತೆ; ಬಂದು: ಆಗಮಿಸು; ಕಂಡು: ನೋಡು;

ಪದವಿಂಗಡಣೆ:
ಮುನಿಪ +ಕಣ್ವನು +ಕಂದೆರೆದು +ಪರ
ಮನನು +ಜಾನಿಸಿ+ ಕರವನ್+ಅರಳಿಚಲ್
ಒನೆದು +ಬಿದ್ದುದು +ಹಣ್ಣು +ಕಂಡನು +ನಗುತ ಮನದೊಳಗೆ
ವನಜನಾಭನ+ ತಂತ್ರವಿದು +ಪಾ
ವನ +ಸುರೂಪನ +ನೋಳ್ಪೆನೆಂದ್+ಆ
ಮುನಿಪ+ ಫಲಸಹ +ಬಂದು +ಕಂಡನು +ಕೃಷ್ಣ+ಪಾಂಡವರ

ಅಚ್ಚರಿ:
(೧) ಕೃಷ್ಣನನ್ನು ಕರೆದ ಬಗೆ – ವನಜನಾಭ, ಪಾವನ ಸುರೂಪ
(೨) ಮುನಿಪ – ೧, ೬ ಸಾಲಿನ ಮೊದಲ ಪದ

ಪದ್ಯ ೨೭: ಧರ್ಮಜನು ತನ್ನ ಮಾತಿಗೆ ಯಾರನ್ನು ಸಾಕ್ಷಿ ಮಾಡಿದನು?

ಎನಲು ತಂದಿರಿಸಿದರು ಫಲವನು
ವನಜನಾಭನ ಹೇಳಿಕೆಯಲಾ
ಕ್ಷಣಕೆ ಕುಂತೀತನುಜ ಹೇಳನೆ ಕೈಗಳನು ಮುಗಿದು
ಇನ ಶಶಿಗಳಿಂದ್ರಾನಲಾಂತಕ
ದನುಜ ವರುಣ ಸಮೀರ ಹರಸಖ
ಮನುಮಥಾರಿಯೆ ನೀವು ಚಿತ್ತವಿಸೆನುತಲಿಂತೆಂದ (ಅರಣ್ಯ ಪರ್ವ, ೪ ಸಂಧಿ, ೨೭ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನ ಅಪ್ಪಣೆಯಂತೆ ಹಣ್ಣನ್ನು ಸರಿಯಾದ ಜಾಗದಲ್ಲಿ ತಂದಿಟ್ಟರು. ಶ್ರೀಕೃಷ್ಣನು ಧರ್ಮಜನಿಗೆ ನಿನ್ನ ಮನಸ್ಸಿನ ಸತ್ಯವನ್ನು ಹೇಳೆನಲು, ಆ ಕ್ಷಣದಲ್ಲಿಯೇ, ಧರ್ಮಜನು ಕೈಗಳನ್ನು ಮುಗಿದು, ರವಿ, ಚಂದ್ರ, ಇಂದ್ರ, ಅಗ್ನಿ, ಯಮ, ನಿರಋತಿ, ವರುಣ, ವಾಯು, ಕುಬೇರ, ಶಿವ ನೀವೇ ಸಾಕ್ಷಿಯಾಗಿ ಹೇಳುತ್ತಿದ್ದೇನೆ ಎಂದು ತನ್ನ ಮಾತನ್ನು ಪ್ರಾರಂಭಿಸಿದನು.

ಅರ್ಥ:
ಎನಲು: ಹೀಗೆ ಹೇಳಲು; ಇರಿಸು: ಇಡು; ಫಲ: ಹಣ್ಣು; ವನಜನಾಭ: ಕಮಲವನ್ನು ನಾಭಿಯಲ್ಲಿ ಧರಿಸಿದವ (ವಿಷ್ಣು); ಹೇಳು: ತಿಳಿಸು; ಕ್ಷಣ: ಸಮಯ; ತನುಜ: ಮಗ; ಕೈ: ಹಸ್ತ; ಮುಗಿದು: ನಮಸ್ಕರಿಸು; ಇನ: ರವಿ; ಶಶಿ: ಚಂದ್ರ; ಅನಲ: ಬೆಂಕಿ; ಅಂತಕ: ಯಮ; ದನುಜ: ರಾಕ್ಷಸ; ಸಮೀರ: ವಾಯು; ಹರ: ಶಿವ; ಸಖ: ಮಿತ್ರ; ಹರಸಖ: ಕುಬೇರ; ಮನುಮಥ: ಕಾಮ; ಅರಿ: ವೈರಿ; ಮನುಮಥಾರಿ: ಶಿವ; ಅಂತಕದನುಜ: ನಿರಋತಿ;

ಪದವಿಂಗಡಣೆ:
ಎನಲು+ ತಂದ್+ಇರಿಸಿದರು +ಫಲವನು
ವನಜನಾಭನ +ಹೇಳಿಕೆಯಲ್+ಆ
ಕ್ಷಣಕೆ+ ಕುಂತೀತನುಜ +ಹೇಳನೆ +ಕೈಗಳನು +ಮುಗಿದು
ಇನ +ಶಶಿಗಳ್+ಇಂದ್ರ+ಅನಲ್+ಅಂತಕ
ದನುಜ +ವರುಣ +ಸಮೀರ +ಹರಸಖ
ಮನುಮಥಾರಿಯೆ +ನೀವು +ಚಿತ್ತವಿಸೆನುತಲ್+ಇಂತೆಂದ

ಅಚ್ಚರಿ:
(೧) ಶಿವನನ್ನು ಮನುಮಥಾರಿ, ಕುಬೇರನನ್ನು ಹರಸಖ ಎಂದು ಕರೆದಿರುವುದು
(೨) ವನಜ, ತನುಜ, ದನುಜ – ಪ್ರಾಸ ಪದಗಳ ಬಳಕೆ

ಪದ್ಯ ೨೨: ಧರ್ಮಜನು ಕೃಷ್ಣನನ್ನು ಹೇಗೆ ಭಜಿಸಿದನು?

ಎನಲು ಭೂಪತಿ ಕೃಷ್ಣ ರಕ್ಷಿಸು
ದನುಜರಿಪು ಗೋವಿಂದ ರಕ್ಷಿಸು
ವನಜನಾಭ ಮುಕುಂದ ರಕ್ಷಿಸು ದಾನವಾಂತಕನೆ
ಮನಸಿಜನಪಿತ ರಾಮ ರಕ್ಷಿಸು
ಘನಮಹಿಮ ಕೇಶವನೆ ರಕ್ಷಿಸು
ನೆನೆವ ಭಕ್ತರ ಭಾಗ್ಯನಿಧಿ ಮಾಧವನೆ ರಕ್ಷಿಪುದು (ಅರಣ್ಯ ಪರ್ವ, ೪ ಸಂಧಿ, ೨೨ ಪದ್ಯ)

ತಾತ್ಪರ್ಯ:
ಧೌಮ್ಯ ಮಹರ್ಷಿಗಳು ಕೃಷ್ಣನನ್ನು ಭಜಿಸಲು ಹೇಳಿದ ಕೂಡಲೆ, ಧರ್ಮಜನು ಕೃಷ್ಣನನ್ನು ಪ್ರಾರ್ಥಿಸಿದನು, ಹೇ ಕೃಷ್ಣ, ರಾಕ್ಷಸರ ವೈರಿ, ಗೋವಿಂದ, ಕಮಲನಾಭನೇ, ಮುಕುಂದನೇ, ರಾಕ್ಷಸರಿಗೆ ಅಂತಕ ಸ್ವರೂಪನೇ, ಮನ್ಮಥನ ಪಿತನೆ, ರಾಮನೇ, ಮಹಿಮಾನ್ವಿತನಾದವನೇ, ಕೇಶವನೇ, ಭಕ್ತರ ಭಾಗ್ಯನಿಧಿಯೇ, ಮಾಧವನೇ ನಮ್ಮನ್ನು ಈ ವಿಪತ್ತಿನಿಂದ ರಕ್ಷಿಸು ಎಂದು ಧರ್ಮಜನು ಕೃಷ್ಣನನ್ನು ಬೇಡಿಕೊಂಡನು.

ಅರ್ಥ:
ಎನಲು: ಹೀಗೆ ಹೇಳಲು; ಭೂಪತಿ: ರಾಜ; ರಕ್ಷಿಸು: ಕಾಪಾಡು; ದನುಜರಿಪು: ರಾಕ್ಷಸರ ವೈರಿ; ವನಜನಾಭ: ಕಮಲವನ್ನು ನಾಭಿಯಲ್ಲಿ ಹೊಂದಿರುವವ; ದಾನವಾಂತಕ: ರಾಕ್ಷಸರನ್ನು ಕೊಲ್ಲುವವ; ಮನಸಿಜ: ಮನ್ಮಥ; ಪಿತ: ತಂದೆ; ಘನಮಹಿಮ: ಶ್ರೇಷ್ಠ; ನೆನೆ: ಜ್ಞಾಪಿಸಿಕೊಳ್ಳು; ಭಕ್ತ: ಆರಾಧಕ; ಭಾಗ್ಯ: ಅದೃಷ್ಟ; ನಿಧಿ: ಐಶ್ವರ್ಯ;

ಪದವಿಂಗಡಣೆ:
ಎನಲು +ಭೂಪತಿ+ ಕೃಷ್ಣ +ರಕ್ಷಿಸು
ದನುಜರಿಪು +ಗೋವಿಂದ +ರಕ್ಷಿಸು
ವನಜನಾಭ +ಮುಕುಂದ +ರಕ್ಷಿಸು +ದಾನವಾಂತಕನೆ
ಮನಸಿಜನ+ಪಿತ+ ರಾಮ +ರಕ್ಷಿಸು
ಘನಮಹಿಮ+ ಕೇಶವನೆ+ ರಕ್ಷಿಸು
ನೆನೆವ+ ಭಕ್ತರ+ ಭಾಗ್ಯನಿಧಿ+ ಮಾಧವನೆ +ರಕ್ಷಿಪುದು

ಅಚ್ಚರಿ:
(೧) ದನುಜ, ದಾನವ – ಸಮನಾರ್ಥಕ ಪದ
(೨) ಕೃಷ್ಣನ ಹೆಸರುಗಳು – ಗೋವಿಂದ, ಮುಕುಂದ, ಕೇಶವ, ಮಾಧವ
(೨) ಕೃಷ್ಣನ ಗುಣವಾಚಕಗಳು – ದನುಜರಿಪು, ದಾನವಾಂತಕ, ಘನಮಹಿಮ, ಭಾಗ್ಯನಿಧಿ, ವನಜನಾಭ