ಪದ್ಯ ೪೭: ಕುಂತಿಯು ಯಾವ ದೇವತೆಯನ್ನು ಕರೆದಳು?

ನಿಯಮದಲಿ ಕಾಮಿನಿ ಸರೋವಾ
ರಿಯಲಿ ಮಿಂದಳು ಬೀಜಮಂತ್ರ
ವ್ಯಯವ ಮಾಡಿದಳಮರ ನಿಕರವ ನೋಡಿ ಕೈಮುಗಿದು
ಬಯಸಿದಳು ವಾಯುವನು ನಿಜಮೂ
ರ್ತಿಯಲಿ ಬಂದು ಸಮೀರನಾ ಕುಂ
ತಿಯನು ನುಡಿಸಿದನೆಮ್ಮ ಬರಿಸಿದ ಹದನದೇನೆಂದು (ಆದಿ ಪರ್ವ, ೪ ಸಂಧಿ, ೪೭ ಪದ್ಯ)

ತಾತ್ಪರ್ಯ:
ಕುಂತಿಯು ಪಾಂಡುವಿನಪ್ಪಣೆಯೊಂದಿಗೆ ಸರೋವರದಲ್ಲಿ ಮಿಂದು, ದುರ್ವಾಸ ಮುನಿಗಳು ನೀಡಿದ್ದ ಬೀಜಮಂತ್ರವನ್ನು ಜಪಿಸಿ ದೇವತೆಗಳಿಗೆ ಕೈಮುಗಿದು ವಾಯುವನ್ನು ಬಯಸಿ ಕರೆದಳು. ವಾಯುವು ತನ್ನ ರೂಪದಿಂದ ಬಂದು ನನ್ನನ್ನೇಕೆ ಕರೆದೆ ಎಂದು ಕುಂತಿಯನ್ನು ಕೇಳಿದನು.

ಅರ್ಥ:
ನಿಯಮ: ಕಟ್ಟುಪಾಡು, ಕಟ್ಟಳೆ; ಕಾಮಿನಿ: ಹೆಣ್ಣು; ಸರೋವಾರಿ: ಸರೋವರ; ಮಿಂದು: ಸ್ನಾನ, ಮುಳುಗು; ಬೀಜ: ಮೂಲ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ವ್ಯಯ: ವೆಚ್ಚ; ಅಮರ: ದೇವತೆ; ನಿಕರ: ಗುಂಪು; ನೋಡು: ವೀಕ್ಷಿಸು; ಕೈಮುಗಿ: ನಮಸ್ಕರಿಸು; ಬಯಸು: ಇಚ್ಛಪಡು, ಆಸೆ; ವಾಯು: ಗಾಳಿ, ಸಮೀರ; ಮೂರ್ತಿ: ರೂಪ; ಬಂದು: ಆಗಮಿಸು; ಸಮೀರ: ವಾಯು; ನುಡಿಸು: ಮಾತನಾಡಿಸು; ಬರಿಸಿ: ಕರೆದಿರಿ; ಹದ: ಸ್ಥಿತಿ, ರೀತಿ;

ಪದವಿಂಗಡಣೆ:
ನಿಯಮದಲಿ+ ಕಾಮಿನಿ +ಸರೋವಾ
ರಿಯಲಿ +ಮಿಂದಳು +ಬೀಜಮಂತ್ರ
ವ್ಯಯವ +ಮಾಡಿದಳ್+ಅಮರ +ನಿಕರವ +ನೋಡಿ +ಕೈಮುಗಿದು
ಬಯಸಿದಳು +ವಾಯುವನು +ನಿಜ+ಮೂ
ರ್ತಿಯಲಿ +ಬಂದು +ಸಮೀರನ್+ಆ+ ಕುಂ
ತಿಯನು +ನುಡಿಸಿದನ್+ಎಮ್ಮ+ ಬರಿಸಿದ+ ಹದನದ್+ಏನೆಂದು

ಅಚ್ಚರಿ:
(೧) ವಾಯು, ಸಮೀರ – ಸಮಾನಾರ್ಥಕ ಪದ

ಪದ್ಯ ೩೬: ಅರ್ಜುನನು ರಥವನ್ನು ಹೇಗೆ ಏರಿದನು?

ಖುರಕೆ ರತುನವ ಸುರಿದು ತೇರಿನ
ತುರಗವನು ವಂದಿಸಿದನಾ ಪಳ
ಹರದ ಹನುಮಮ್ಗೆರಗಿದನು ಸುರಕುಲಕೆ ಕೈಮುಗಿದು
ವರರಥವ ಬಲಗೊಂಡು ಕವಚಾ
ಬರಿಗೆ ಬಿಗಿದನು ಕೈಗೆ ವಜ್ರದ
ತಿರುವೊಡೆಯನವಚಿದನು ರಥವೇರಿದನು ಕಲಿಪಾರ್ಥ (ದ್ರೋಣ ಪರ್ವ, ೯ ಸಂಧಿ, ೩೬ ಪದ್ಯ)

ತಾತ್ಪರ್ಯ:
ಅರ್ಜುನನು ರಥದ ಕುದುರೆಗಳ ಖುರಪುಟಗಳಿಗೆ ರತ್ನಗಳನ್ನು ಅರ್ಪಿಸಿ ನಮಸ್ಕರಿಸಿ, ಧ್ವಜದಲ್ಲಿದ್ದ ಹನುಮಂತನಿಗೆ ವಂದಿಸಿ, ದೇವತಾ ಸಮೂಹಕ್ಕೆ ಕೈಮುಗಿದು, ರಥವನ್ನು ಪ್ರದಕ್ಷಿಣೆ ಮಾಡಿ, ಕವಚವನ್ನು ಧರಿಸಿ ಕೈಗೆ ವಜ್ರದ ಖಡೆಯವನ್ನು ಹಾಕಿಕೊಂಡು ರಥವನ್ನೇರಿದನು.

ಅರ್ಥ:
ಖುರ:ಕುದುರೆ ದನಕರುಗಳ ಕಾಲಿನ ಗೊರಸು, ಕೊಳಗು; ರತುನ: ಮಣಿ; ಸುರಿ: ಚೆಲ್ಲು; ತೇರು: ಬಂಡಿ; ತುರಗ: ಅಶ್ವ; ವಂದಿಸು: ನಮಸ್ಕರಿಸು; ಪಳಹರ: ಬಾವುಟ; ಹನುಮ: ಆಂಜನೇಯ; ಎರಗು: ನಮಸ್ಕರಿಸು; ಸುರಕುಲ: ದೇವತೆ; ಕೈಮುಗಿ: ನಮಸ್ಕರಿಸು; ವರ: ಶ್ರೇಷ್ಠ; ರಥ: ಬಂಡಿ; ಕವಚ: ಉಕ್ಕಿನ ಅಂಗಿ; ಬರಿ: ಪಕ್ಕ, ಬದಿ; ಬಿಗಿ: ಕಟ್ಟು; ಕೈ: ಹಸ್ತ; ವಜ್ರ: ಗಟ್ಟಿಯಾದ; ಅವಚು: ಅಪ್ಪಿಕೊಳ್ಳು; ರಥ: ಬಂಡಿ; ಏರು: ಹತ್ತು; ಕಲಿ: ಶೂರ;

ಪದವಿಂಗಡಣೆ:
ಖುರಕೆ +ರತುನವ +ಸುರಿದು +ತೇರಿನ
ತುರಗವನು +ವಂದಿಸಿದನಾ +ಪಳ
ಹರದ +ಹನುಮಂಗ್+ಎರಗಿದನು +ಸುರಕುಲಕೆ +ಕೈಮುಗಿದು
ವರರಥವ+ ಬಲಗೊಂಡು +ಕವಚವ
ಬರಿಗೆ +ಬಿಗಿದನು +ಕೈಗೆ +ವಜ್ರದ
ತಿರುವೊಡೆಯನ್+ಅವಚಿದನು +ರಥವೇರಿದನು +ಕಲಿಪಾರ್ಥ

ಅಚ್ಚರಿ:
(೧) ವಂದಿಸು, ಎರಗು, ಕೈಮುಗಿ – ಸಾಮ್ಯಾರ್ಥ ಪದಗಳು

ಪದ್ಯ ೨೧: ಕೌರವನು ಭೀಷ್ಮನಿಗೆ ಏನು ಹೇಳಿದ?

ಬಂದು ಭೀಷ್ಮಗೆರಗಿ ಕೈಮುಗಿ
ದೆಂದನೀತನು ಪಾರ್ಥನಾದೊಡೆ
ಹಿಂದಣಂತಿರೆ ನವೆಯ ಬೇಹುದು ವರುಷ ಹದಿಮೂರ
ಸಂದುದಿಲ್ಲಜ್ಞಾತ ವಾಸಕೆ
ಮುಂದೆ ದಿನವುಂಟೆನ್ನ ಲೆಕ್ಕ
ಕ್ಕೆಂದು ಕುರುಪತಿ ನುಡಿಯೆ ನಗುತಿಂತೆಂದನಾ ಭೀಷ್ಮ (ವಿರಾಟ ಪರ್ವ, ೮ ಸಂಧಿ, ೨೧ ಪದ್ಯ)

ತಾತ್ಪರ್ಯ:
ಕೌರವನು ಭೀಷ್ಮನ ಬಳಿಗೆ ಬಂದು, ಇವನು ಅರ್ಜುನನೇ ಆಗಿದ್ದರೆ ಪಾಂಡವರು ಮತ್ತೆ ಹದಿಮೂರು ವರ್ಷ ರಾಜ್ಯದಿಂದ ದೂರ ಹೋಗಬೇಕು, ನನ್ನ ಲೆಕ್ಕದಲ್ಲಿ ಅಜ್ಞಾತವಾಸ ಮುಗಿಯಲು ಇನ್ನೂ ಕೆಲವು ದಿನಗಳಿವೆ ಎಂದನು, ಆಗ ಭೀಷ್ಮನು ನಗುತ್ತಾ ಹೀಗೆ ಹೇಳಿದನು.

ಅರ್ಥ:
ಬಂದು: ಆಗಮಿಸು; ಎರಗು: ನಮಸ್ಕರಿಸು; ಕೈಮುಗಿ: ನಮಸ್ಕರಿಸು; ಹಿಂದಣ: ಪೂರ್ವ; ನವೆ: ದುಃಖಿಸು; ವರುಷ: ಸಂವತ್ಸರ; ಸಂದು: ಅವಕಾಶ, ಸಂದರ್ಭ, ಕೊನೆ; ಅಜ್ಞಾತ: ತಿಳಿಯದ; ದಿನ: ದಿವಸ; ಲೆಕ್ಕ: ಎಣಿಕೆ; ನುಡಿ: ಮಾತಾದು; ನಗು: ಹರ್ಷ;

ಪದವಿಂಗಡಣೆ:
ಬಂದು +ಭೀಷ್ಮಗ್+ಎರಗಿ +ಕೈಮುಗಿದ್
ಎಂದನ್+ಈತನು+ ಪಾರ್ಥನಾದೊಡೆ
ಹಿಂದಣಂತಿರೆ+ ನವೆಯ +ಬೇಹುದು +ವರುಷ +ಹದಿಮೂರ
ಸಂದುದಿಲ್ಲ್+ಅಜ್ಞಾತ ವಾಸಕೆ
ಮುಂದೆ +ದಿನವುಂಟ್+ಎನ್ನ+ ಲೆಕ್ಕ
ಕ್ಕೆಂದು +ಕುರುಪತಿ +ನುಡಿಯೆ +ನಗುತ್+ಇಂತೆಂದನಾ +ಭೀಷ್ಮ

ಅಚ್ಚರಿ:
(೧) ಎರಗು, ಕೈಮುಗಿ – ಸಾಮ್ಯಾರ್ಥ ಪದ

ಪದ್ಯ ೪೭: ಉತ್ತರನು ಅರ್ಜುನನ ಬಳಿ ಯಾವ ಕೋರಿಕೆಯನಿಟ್ಟನು?

ಮೌಳಿಯನು ನೆಗಹಿದನು ನಿನ್ನಯ
ಮೇಲೆ ತಪ್ಪಿಲ್ಲೆನುತ ಫಲುಗುಣ
ಬೋಳವಿಸೆ ನಿಂದಿರ್ದು ಕೈಮುಗಿದುತ್ತರನು ನಗುತ
ಬಾಲಕನ ಬಿನ್ನಪವನೊಂದನು
ಕೇಳಬೇಹುದು ನಿಮ್ಮ ದಶನಾ
ಮಾವಳಿಯ ಪೇಳ್ದಲ್ಪಮತಿಯನು ತಿಳುಹಬೇಕೆಂದ (ವಿರಾಟ ಪರ್ವ, ೭ ಸಂಧಿ, ೪೭ ಪದ್ಯ)

ತಾತ್ಪರ್ಯ:
ಅರ್ಜುನನು ಉತ್ತರನ ತಲೆಯನ್ನೆತ್ತಿ, ನಿನ್ನ ಮೇಲೆ ಏನು ತಪ್ಪಿಲ್ಲ ಎಂದು ಸಂತೈಸಿದನು. ಉತ್ತರನು ಅರ್ಜುನನಿಗೆ ಕೈಮುಗಿದು, ನಿಮ್ಮ ಹತ್ತು ನಾಮಗಳನ್ನು ಹೇಳಿ, ಅಲ್ಪಮತಿಯಾದ ನನಗೆ ತಿಳುವಳಿಕೆ ನೀಡಬೇಕೆಂದು ಬೇಡಿಕೊಂಡನು.

ಅರ್ಥ:
ಮೌಳಿ: ಶಿರ; ನೆಗಹು: ಮೇಲೆತ್ತು; ತಪ್ಪು: ಸರಿಯಲ್ಲದು; ಬೋಳವಿಸು: ಸಂತೈಸು; ಕೈಮುಗಿ: ನಮಸ್ಕರಿಸು; ನಗು: ಹರ್ಷ; ಬಾಲಕ: ಚಿಕ್ಕವ; ಬಿನ್ನಪ: ಕೋರಿಕೆ; ಕೇಳು: ಆಲಿಸು; ದಶ: ಹತ್ತು; ನಾಮ: ಹೆಸರು; ಪೇಳು: ಹೇಳು; ಅಲ್ಪ: ತುಚ್ಛ, ಸಣ್ಣ; ಮತಿ: ಬುದ್ಧಿ; ತಿಳುಹು: ತಿಳಿಸು;

ಪದವಿಂಗಡಣೆ:
ಮೌಳಿಯನು +ನೆಗಹಿದನು +ನಿನ್ನಯ
ಮೇಲೆ +ತಪ್ಪಿಲ್ಲೆನುತ+ ಫಲುಗುಣ
ಬೋಳವಿಸೆ +ನಿಂದಿರ್ದು +ಕೈಮುಗಿದ್+ಉತ್ತರನು +ನಗುತ
ಬಾಲಕನ+ ಬಿನ್ನಪವನ್+ಒಂದನು
ಕೇಳಬೇಹುದು+ ನಿಮ್ಮ +ದಶ+ನಾ
ಮಾವಳಿಯ +ಪೇಳ್ದ್+ಅಲ್ಪಮತಿಯನು +ತಿಳುಹಬೇಕೆಂದ

ಅಚ್ಚರಿ:
(೧) ಪ್ರೀತಿಯನ್ನು ತೋರುವ ಪರಿ – ಮೌಳಿಯನು ನೆಗಹಿದನು ನಿನ್ನಯಮೇಲೆ ತಪ್ಪಿಲ್ಲೆನುತ

ಪದ್ಯ ೩೮: ಕೀಚಕನು ದ್ರೌಪದಿಯನ್ನು ಏನೆಂದು ಬೇಡಿದನು?

ಉಳಿದ ತನ್ನರಸಿಯರ ನಿನ್ನಯ
ಬಳಿಯ ತೊತ್ತಿರ ಮಾಡುವೆನು ಕೇ
ಳೆಲೆಗೆ ತನ್ನೊಡಲಿಂಗೆಯೊಡೆತನ ನಿನ್ನದಾಗಿರಲಿ
ಲಲನೆ ನಿನ್ನೊಳು ನಟ್ಟಲೋಚನ
ತೊಲಗಲಾರದು ತನ್ನ ಕಾಯವ
ಬಳಲಿಸದೆ ಕೃಪೆ ಮಾಡಬೇಹುದೆನುತ್ತ ಕೈಮುಗಿದ (ವಿರಾಟ ಪರ್ವ, ೨ ಸಂಧಿ, ೩೮ ಪದ್ಯ)

ತಾತ್ಪರ್ಯ:
ಎಲೈ ಸೈರಂಧ್ರಿ, ಉಳಿದ ನನ್ನೆಲ್ಲಾ ರಾಣಿಯರೂ ನಿನಗೆ ದಾಸಿಗಳಾಗುತ್ತಾರೆ, ನನ್ನ ದೇಹಕ್ಕೆ ನೀನೇ ಒಡೆಯಳಾಗಿರುವೆ, ನಿನ್ನ ದೇಹದಲ್ಲಿ ನಟ್ಟ ನನ್ನ ಕಣ್ಣುಗಳು ಬೇರೆ ಕಡೆಗೆ ತಿರುಗುವುದೇ ಇಲ್ಲ. ನನ್ನ ದೇಹವನ್ನು ಬಳಲಿಸದೆ ಕೃಪೆತೋರು ಎಂದು ಕೀಚಕನು ದ್ರೌಪದಿಗೆ ಕೈಮುಗಿದು ಬೇಡಿದನು.

ಅರ್ಥ:
ಉಳಿದ: ಮಿಕ್ಕ; ಅರಸಿ: ರಾಣಿ; ಬಳಿ: ಹತ್ತಿರ; ತೊತ್ತು: ದಾಸಿ, ಸೇವಕಿ; ಕೇಳು: ಆಲಿಸು; ಒಡಲು: ದೇಹ; ಒಡೆತನ: ಯಜಮಾನತನ; ಲಲನೆ: ಹೆಣ್ಣು; ನಟ್ಟು: ಗಮನವಿಟ್ಟ; ಲೋಚನ: ಕಣ್ಣು; ತೊಲಗು: ಹೊರಹೋಗು; ಕಾಯ: ದೇಹ; ಬಳಲು: ಆಯಾಸಗೊಳಿಸು; ಕೃಪೆ: ದಯೆ; ಕೈಮುಗಿ: ನಮಸ್ಕರಿಸು;

ಪದವಿಂಗಡಣೆ:
ಉಳಿದ +ತನ್ನ್+ಅರಸಿಯರ +ನಿನ್ನಯ
ಬಳಿಯ +ತೊತ್ತಿರ +ಮಾಡುವೆನು +ಕೇಳ್
ಎಲೆಗೆ+ ತನ್ನೊಡಲಿಂಗೆ+ಒಡೆತನ+ ನಿನ್ನದಾಗಿರಲಿ
ಲಲನೆ +ನಿನ್ನೊಳು +ನಟ್ಟ+ಲೋಚನ
ತೊಲಗಲಾರದು +ತನ್ನ +ಕಾಯವ
ಬಳಲಿಸದೆ+ ಕೃಪೆ+ ಮಾಡಬೇಹುದ್+ಎನುತ್ತ +ಕೈಮುಗಿದ

ಅಚ್ಚರಿ:
(೧) ಆಸೆ ತೋರಿಸುವ ಪರಿ – ಉಳಿದ ತನ್ನರಸಿಯರ ನಿನ್ನಯ ಬಳಿಯ ತೊತ್ತಿರ ಮಾಡುವೆನು

ಪದ್ಯ ೨೦: ಕೀಚಕನು ದ್ರೌಪದಿಗೆ ಏನು ಹೇಳಿದನು?

ಎಲೆಗೆ ಪಾತಕಿ ನಿನ್ನ ಕಣ್ಣೆಂ
ಬಲಗಿನಲಿ ತನ್ನೆದೆಯ ನೋಯಿಸಿ
ತೊಲಗಬಹುದೇ ಕರುಣವಿಲ್ಲವೆ ನಿನ್ನ ಮನದೊಳಗೆ
ಒಲಿದು ಬಂದೆನು ಕಾಮನೂಳಿಗ
ಬಲುಹು ಎನ್ನಯ ಭಯವ ತಗ್ಗಿಸಿ
ತಲೆಯ ಕಾಯಲು ಬೇಕೆನುತ ಕೀಚಕನು ಕೈಮುಗಿದ (ವಿರಾಟ ಪರ್ವ, ೨ ಸಂಧಿ, ೨೦ ಪದ್ಯ)

ತಾತ್ಪರ್ಯ:
ಕೀಚಕನು ದ್ರೌಪದಿಯನ್ನುದ್ದೇಶಿಸಿ, ಎಲೆ ಪಾಪಿ, ನಿನ್ನ ಕಣ್ಣೆಂಬ ಬಾಣದಿಂದ ನನ್ನನ್ನು ನೋಯಿಸಿ, ನೀನು ಹೀಗೆ ಹೋಗಿ ಬಿಡಬಹುದೆ? ನಿನ್ನ ಮನಸ್ಸಿನಲ್ಲಿ ಕರುಣೆಯೇ ಇಲ್ಲವೇ? ನಿನಗೆ ಒಲಿದು ಬಂದಿದ್ದೇನೆ, ಮನ್ಮಥನ ಕಾಟವು ಪ್ರಬಲವಾದದ್ದು, ಭಯಗೊಂಡ ನನ್ನನ್ನು ಸಂತೈಸಿ ಕಾಪಾಡು ಎಂದು ನಮಸ್ಕರಿಸಿದನು.

ಅರ್ಥ:
ಪಾತಕಿ: ಪಾಪಿಲ್ ಕಣ್ಣು: ನಯನ; ಅಲಗು: ಬಾಣ; ಎದೆ: ಹೃದಯ; ನೋಯಿಸು: ಪೆಟ್ಟು; ತೊಲಗು: ಹೊರಡು; ಕರುಣೆ: ದಯೆ; ಮನ: ಮನಸ್ಸು; ಒಲಿ: ಪ್ರೀತಿಸು; ಬಂದೆ: ಆಗಮಿಸು; ಕಾಮ: ಮನ್ಮಥ; ಊಳಿಗ: ಸೇವೆ; ಬಲುಹು: ಬಲ, ಶಕ್ತಿ; ಭಯ: ಹೆದರು; ತಗ್ಗಿಸು: ಕಡಿಮೆ ಮಾಡು; ತಲೆ: ಶಿರ; ಕಾಯು: ರಕ್ಷಿಸು; ಕೈಮುಗಿ: ನಮಸ್ಕರಿಸು;

ಪದವಿಂಗಡಣೆ:
ಎಲೆಗೆ +ಪಾತಕಿ+ ನಿನ್ನ +ಕಣ್ಣೆಂಬ್
ಅಲಗಿನಲಿ +ತನ್ನೆದೆಯ +ನೋಯಿಸಿ
ತೊಲಗಬಹುದೇ +ಕರುಣವಿಲ್ಲವೆ +ನಿನ್ನ +ಮನದೊಳಗೆ
ಒಲಿದು +ಬಂದೆನು +ಕಾಮನೂಳಿಗ
ಬಲುಹು +ಎನ್ನಯ +ಭಯವ +ತಗ್ಗಿಸಿ
ತಲೆಯ +ಕಾಯಲು +ಬೇಕೆನುತ+ ಕೀಚಕನು+ ಕೈಮುಗಿದ

ಅಚ್ಚರಿ:
(೧) ದ್ರೌಪದಿಯನ್ನು ಬಯ್ಯುವ ಪರಿ – ನಿನ್ನ ಕಣ್ಣೆಂಬಲಗಿನಲಿ ತನ್ನೆದೆಯ ನೋಯಿಸಿ ತೊಲಗಬಹುದೇ

ಪದ್ಯ ೪೪: ದೂರ್ವಾಸನು ಕೃಷ್ಣನನ್ನು ಹೇಗೆ ಭೇಟಿಯಾದನು?

ಕಾಣುತಿದಿರೆದ್ದಸುರ ಮರ್ದನ
ಕಾಣಿಕೆಯನಿತ್ತೆರಗಿ ಹೋ ಹೋ
ಸ್ಥಾಣುವಿನ ಬರವೆತ್ತಣಿಂದಾಯ್ತೆನುತ ಕೈಮುಗಿಯೆ
ಮಾಣು ಮಾಧವ ನಿಲ್ಲು ಮಾನವ
ನಾಣೆಯದ ನಾಟಕದ ನುಡಿಯಿದು
ಜಾಣ ನೀನಹೆಯೆನುತ ಮುನಿ ಹಾಯ್ದಪ್ಪಿದನು ಹರಿಯ (ಅರಣ್ಯ ಪರ್ವ, ೧೭ ಸಂಧಿ, ೪೪ ಪದ್ಯ)

ತಾತ್ಪರ್ಯ:
ದೂರ್ವಾಸನು ಬಂದುದನ್ನು ನೋಡಿ, ಶ್ರೀಕೃಷ್ಣನು ಎದುರಾಗಿ ಹೋಗಿ ಕಾಣಿಕೆಯನ್ನು ಕೊಟ್ಟು ನಮಸ್ಕರಿಸಿ, ಹೋ ಹೋ ಸ್ಥಾಣುವಿನ ಬರವು ಯಾವ ಕಡೆಯಿಂದ ಆಯಿತು ಎನ್ನಲು, ದೂರ್ವಾಸನು, ಕೃಷ್ಣ ಮಾನವ ಅವತಾರದಲ್ಲಿ ನಾಟಕವಾಡಿ ನಮ್ಮನ್ನು ನಾಚಿಸಬೇಡ. ನೀನು ಬಹು ಜಾಣ ಎಂದು ಮುನ್ನುಗ್ಗಿ ಕೃಷ್ಣನನ್ನು ಅಪ್ಪಿಕೊಂಡನು.

ಅರ್ಥ:
ಕಾಣು: ತೋರು; ಅಸುರ: ರಾಕ್ಷಸ; ಮರ್ದನ: ನಾಶ, ಸಾವು; ಕಾಣಿಕೆ: ಉಡುಗೊರೆ; ಎರಗು: ನಮಸ್ಕರಿಸು; ಸ್ಥಾಣು: ಶಿವ, ಭದ್ರವಾದ; ಬರವು: ಆಗಮನ; ಕೈಮುಗಿ: ನಮಸ್ಕರಿಸು; ಮಾಣು: ನಿಲ್ಲು; ಮಾಧವ: ಕೃಷ್ಣ; ನಿಲ್ಲು: ತಡೆ; ಮಾನವ: ಮನುಷ್ಯ; ಆಣೆ: ಅಪ್ಪಣೆ; ನಾಟಕ: ನಟನೆ, ನಿಜವಲ್ಲದ; ನುಡಿ: ಮಾತು; ಜಾಣ: ಬುದ್ಧಿವಂತ; ಮುನಿ: ಋಷಿ; ಹಾಯ್ದು: ಚಾಚು, ಮೇಲೆಬೀಳು; ಅಪ್ಪು: ತಬ್ಬಿಕೋ; ಹರಿ: ಕೃಷ್ಣ;

ಪದವಿಂಗಡಣೆ:
ಕಾಣುತ್+ಇದಿರೆದ್+ಅಸುರ +ಮರ್ದನ
ಕಾಣಿಕೆಯನಿತ್+ಎರಗಿ+ ಹೋ +ಹೋ
ಸ್ಥಾಣುವಿನ+ ಬರವ್+ಎತ್ತಣಿಂದಾಯ್ತ್+ಎನುತ +ಕೈಮುಗಿಯೆ
ಮಾಣು +ಮಾಧವ +ನಿಲ್ಲು +ಮಾನವನ್
ಆಣೆಯದ +ನಾಟಕದ+ ನುಡಿಯಿದು
ಜಾಣ+ ನೀನಹೆ+ಎನುತ +ಮುನಿ +ಹಾಯ್ದಪ್ಪಿದನು +ಹರಿಯ

ಅಚ್ಚರಿ:
(೧) ಅಸುರಮರ್ದನ, ಮಾಧವ, ಹರಿ – ಕೃಷ್ಣನನ್ನು ಕರೆದ ಪರಿ
(೨) ಎರಗು, ಕೈಮುಗಿ – ಸಮನಾರ್ಥಕ ಪದಗಳು

ಪದ್ಯ ೨೬: ಪುರುಷಾಮೃಗನು ಭೀಮನ ಕಾಲುಗಳನ್ನು ಬಿಟ್ಟನೆ?

ಎಂದು ಧರ್ಮಕಥಾ ಪ್ರಸಂಗ
ಕ್ಕಿಂದು ಪುರುಷಾಮೃಗವ ತಿಳುಹಲಿ
ಕಂದು ನಗುತನಿಲಜನ ಕಾಲ್ಗಳ ಬಿಟ್ಟು ಹೆರೆಹಿಂಗಿ
ನಿಂದಿರಲು ಕಲಿಭೀಮನೆದ್ದು ಮು
ಕುಂದನಂಘ್ರಿಗೆ ನಮಿಸಿ ಕಾಲನ
ನಂದನಂಗೆರಗಿದನು ಮುನಿಸಂಕುಲಕೆ ಕೈಮುಗಿದು (ಸಭಾ ಪರ್ವ, ೭ ಸಂಧಿ, ೨೬ ಪದ್ಯ)

ತಾತ್ಪರ್ಯ:
ಧರ್ಮರಾಯನು ಧರ್ಮದ ಸೂಕ್ಷ್ಮಗಳನ್ನು ಪುರುಷಮೃಗನಿಗೆ ವಿವರಿಸಲು, ಅವನು ಒಪ್ಪಿ ಭೀಮನ ಕಾಲುಗಳನ್ನು ಬಿಟ್ಟು ಹಿಂದೆಸರಿದು ಸಮೀಪದಲ್ಲಿ ನಿಂತಿತು. ಭೀಮನು ಎದ್ದು ಕೃಷ್ಣನಿಗೆ ನಮಸ್ಕರಿಸಿ ಮುನಿಗಳಿಗೆ ಕೈಮುಗಿದು ಧರ್ಮರಾಯನಿಗೆ ವಂದಿಸಿದನು.

ಅರ್ಥ:
ಧರ್ಮ: ಆಚಾರ, ನಿಯಮ; ಕಥಾ: ಪ್ರಸಂಗವನ್ನು ವಿವರಿಸುವ ರೀತಿ; ಪ್ರಸಂಗ: ಸಂದರ್ಭ; ತಿಳುಹಲಿ: ಅರ್ಥೈಸು; ನಗುತ: ಸಂತೋಷ; ಅನಿಲಜ: ಭೀಮ; ಅನಿಲ: ವಾಯು; ಕಾಲು: ಪಾದ; ಹೆರೆಹಿಂಗೆ: ದೂರಸರಿ; ನಿಂದು: ನಿಲ್ಲು; ಕಲಿ: ಶೂರ; ಎದ್ದು: ಮೇಲೇಳಿ; ಅಂಘ್ರಿ: ಪಾದ; ನಮಿಸು: ಎರಗು; ಕಾಲ: ಯಮ; ನಂದನ: ಮಗ; ಮುನಿ: ಋಷಿ; ಸಂಕುಲ: ಗುಂಪು; ಕೈಮುಗಿ: ನಮಸ್ಕರಿಸು;

ಪದವಿಂಗಡಣೆ:
ಎಂದು +ಧರ್ಮಕಥಾ +ಪ್ರಸಂಗ
ಕ್ಕಿಂದು +ಪುರುಷಾಮೃಗವ+ ತಿಳುಹಲಿ
ಕಂದು +ನಗುತ್+ಅನಿಲಜನ +ಕಾಲ್ಗಳ +ಬಿಟ್ಟು +ಹೆರೆಹಿಂಗಿ
ನಿಂದಿರಲು +ಕಲಿ+ಭೀಮನೆದ್ದು+ ಮು
ಕುಂದನ್+ಅಂಘ್ರಿಗೆ +ನಮಿಸಿ +ಕಾಲನ
ನಂದನಂಗ್+ಎರಗಿದನು+ ಮುನಿ+ಸಂಕುಲಕೆ +ಕೈಮುಗಿದು

ಅಚ್ಚರಿ:
(೧) ಭೀಮನನ್ನು ಅನಿಲಜ, ಧರ್ಮರಾಯನನ್ನು ಕಾಲನನಂದನ ಎಂದು ಕರೆದಿರುವುದು
(೨) ನಮಿಸಿ, ಎರಗು, ಕೈಮುಗಿ – ನಮಸ್ಕರಿಸಿದನು ಎನ್ನಲು ಉಪಯೋಗಿಸಿರುವ ಪದಗಳು

ಪದ್ಯ ೧೦೦: ಕುಂತಿಯು ಐರಾವತವನ್ನು ಹೇಗೆ ಏರಿದಳು?

ತಿರುಗಿದಳು ಬಲದಿಂದಲಾನೆಗೆ
ಕರವ ನೊಸಲೊಳು ಚಾಚಿ ದಿಗುಪಾ
ಲರಿಗೆ ಮಣಿದಳು ಮುನಿಜನಕೆ ಕೈಮುಗಿದು ಹರುಷದಲಿ
ವರರತುನಮಯ ತೊಟ್ಟಿಲಲಿ ಕು
ಳ್ಳಿರಲು ತೆಗೆದರು ಗಜದ ಮೇಲಕೆ
ಸರಸಿಜಾನನೆ ಕುಂತಿಯೈರಾವತವನೇರಿದಳು (ಆದಿ ಪರ್ವ, ೨೧ ಸಂಧಿ, ೧೦೦ ಪದ್ಯ)

ತಾತ್ಪರ್ಯ:
ಕುಂತಿಯು ಐರಾವತಕ್ಕೆ ಪ್ರದಕ್ಷಿಣೆಯನ್ನು ಹಾಕಿ, ದಿಕ್ಪಾಲಕರಿಗೆ, ಮುನಿಗಳಿಗೆ ಸಂತೋಷದಿಂದ ನಮಸ್ಕರಿಸಿ, ರತ್ನಖಚಿತವಾದ ತೊಟ್ಟಿಲಿನಲ್ಲಿ ಕೂತಳು, ಅದನ್ನು ಆನೆಯ ಮೇಲಕ್ಕೆ ಎತ್ತಲು, ಕುಂತಿಯು ಐರಾವತದ ಮೇಲೆ ಆಸೀನಳಾದಳು.

ಅರ್ಥ:
ತಿರುಗು: ಸುತ್ತುವರಿ; ಬಲ: ದಕ್ಷಿಣ, ಪಾರ್ಶ್ವ; ಆನೆ: ಕರಿ, ಹಸ್ತಿ; ಕರ: ಕೈ; ನೊಸಲು: ಹಣೆ; ಚಾಚು: ವಿಸ್ತರಿಸು; ದಿಗು: ದಿಕ್ಕು, ದಿಶೆ, ಪಾಲಕ: ರಾಜ; ಮಣಿ: ನಮಸ್ಕರಿಸಿ; ಮುನಿ: ಋಷಿ; ಜನ: ಸಮೂಹ; ಕೈಮುಗಿ: ನಮಸ್ಕರಿಸು; ಹರುಷ: ಸಂತೋಷ; ವರ: ಶ್ರೇಷ್ಠ; ರತುನ: ಚಿನ್ನ; ತೊಟ್ಟಿಲು: ಲೋಹ ಅಥವ ಮರದಿಂದ ಕೂರಲು/ಮಲಗಲು ಮಾಡಿದ ಸಾಧನ;ಕುಳ್ಳಿರಲು: ಆಸೀನರಾಗುವುದು; ಮೇಲೆ: ಅಗ್ರ, ತುದಿ; ಸರಸಿಜ: ಕಮಲ; ಸರಸಿಜಾನನೆ: ಕಮಲದ ಮುಖದವಳು, ಸುಂದರಿ;

ಪದವಿಂಗಡಣೆ:
ತಿರುಗಿದಳು +ಬಲದಿಂದಲ್+ಆನೆಗೆ
ಕರವ+ ನೊಸಲೊಳು +ಚಾಚಿ +ದಿಗುಪಾ
ಲರಿಗೆ +ಮಣಿದಳು +ಮುನಿಜನಕೆ+ ಕೈಮುಗಿದು+ ಹರುಷದಲಿ
ವರ+ರತುನಮಯ +ತೊಟ್ಟಿಲಲಿ+ ಕು
ಳ್ಳಿರಲು +ತೆಗೆದರು +ಗಜದ +ಮೇಲಕೆ
ಸರಸಿಜಾನನೆ +ಕುಂತಿ+ಯೈರಾವತವನ್+ಏರಿದಳು

ಅಚ್ಚರಿ:
(೧) ಪ್ರದಕ್ಷಿಣೆ ಹಾಕುವ ಬಗೆ – ತಿರುಗಿದಳು ಬಲದಿಂದ (ಎಡಕ್ಕೆ)
(೨) ನಮಸ್ಕಾರದ ಪರಿ – ಕರವ ನೊಸಲೊಳು ಚಾಚಿ
(೩) ಕೈಮುಗಿ, ಮಣಿ, ಕರವ ನೊಸಲೊಳು ಚಾಚಿ – ನಮಸ್ಕರಿಸಿದಳು ಎಂದು ಹೇಳುವ ಪರಿ
(೪) ಕುಂತಿಗೆ ಉಪಯೋಗಿಸಿದ ಗುಣವಿಶೇಷ – ಸರಸಿಜಾನನೆ