ಪದ್ಯ ೧೦೦: ಕುಂತಿಯು ಐರಾವತವನ್ನು ಹೇಗೆ ಏರಿದಳು?

ತಿರುಗಿದಳು ಬಲದಿಂದಲಾನೆಗೆ
ಕರವ ನೊಸಲೊಳು ಚಾಚಿ ದಿಗುಪಾ
ಲರಿಗೆ ಮಣಿದಳು ಮುನಿಜನಕೆ ಕೈಮುಗಿದು ಹರುಷದಲಿ
ವರರತುನಮಯ ತೊಟ್ಟಿಲಲಿ ಕು
ಳ್ಳಿರಲು ತೆಗೆದರು ಗಜದ ಮೇಲಕೆ
ಸರಸಿಜಾನನೆ ಕುಂತಿಯೈರಾವತವನೇರಿದಳು (ಆದಿ ಪರ್ವ, ೨೧ ಸಂಧಿ, ೧೦೦ ಪದ್ಯ)

ತಾತ್ಪರ್ಯ:
ಕುಂತಿಯು ಐರಾವತಕ್ಕೆ ಪ್ರದಕ್ಷಿಣೆಯನ್ನು ಹಾಕಿ, ದಿಕ್ಪಾಲಕರಿಗೆ, ಮುನಿಗಳಿಗೆ ಸಂತೋಷದಿಂದ ನಮಸ್ಕರಿಸಿ, ರತ್ನಖಚಿತವಾದ ತೊಟ್ಟಿಲಿನಲ್ಲಿ ಕೂತಳು, ಅದನ್ನು ಆನೆಯ ಮೇಲಕ್ಕೆ ಎತ್ತಲು, ಕುಂತಿಯು ಐರಾವತದ ಮೇಲೆ ಆಸೀನಳಾದಳು.

ಅರ್ಥ:
ತಿರುಗು: ಸುತ್ತುವರಿ; ಬಲ: ದಕ್ಷಿಣ, ಪಾರ್ಶ್ವ; ಆನೆ: ಕರಿ, ಹಸ್ತಿ; ಕರ: ಕೈ; ನೊಸಲು: ಹಣೆ; ಚಾಚು: ವಿಸ್ತರಿಸು; ದಿಗು: ದಿಕ್ಕು, ದಿಶೆ, ಪಾಲಕ: ರಾಜ; ಮಣಿ: ನಮಸ್ಕರಿಸಿ; ಮುನಿ: ಋಷಿ; ಜನ: ಸಮೂಹ; ಕೈಮುಗಿ: ನಮಸ್ಕರಿಸು; ಹರುಷ: ಸಂತೋಷ; ವರ: ಶ್ರೇಷ್ಠ; ರತುನ: ಚಿನ್ನ; ತೊಟ್ಟಿಲು: ಲೋಹ ಅಥವ ಮರದಿಂದ ಕೂರಲು/ಮಲಗಲು ಮಾಡಿದ ಸಾಧನ;ಕುಳ್ಳಿರಲು: ಆಸೀನರಾಗುವುದು; ಮೇಲೆ: ಅಗ್ರ, ತುದಿ; ಸರಸಿಜ: ಕಮಲ; ಸರಸಿಜಾನನೆ: ಕಮಲದ ಮುಖದವಳು, ಸುಂದರಿ;

ಪದವಿಂಗಡಣೆ:
ತಿರುಗಿದಳು +ಬಲದಿಂದಲ್+ಆನೆಗೆ
ಕರವ+ ನೊಸಲೊಳು +ಚಾಚಿ +ದಿಗುಪಾ
ಲರಿಗೆ +ಮಣಿದಳು +ಮುನಿಜನಕೆ+ ಕೈಮುಗಿದು+ ಹರುಷದಲಿ
ವರ+ರತುನಮಯ +ತೊಟ್ಟಿಲಲಿ+ ಕು
ಳ್ಳಿರಲು +ತೆಗೆದರು +ಗಜದ +ಮೇಲಕೆ
ಸರಸಿಜಾನನೆ +ಕುಂತಿ+ಯೈರಾವತವನ್+ಏರಿದಳು

ಅಚ್ಚರಿ:
(೧) ಪ್ರದಕ್ಷಿಣೆ ಹಾಕುವ ಬಗೆ – ತಿರುಗಿದಳು ಬಲದಿಂದ (ಎಡಕ್ಕೆ)
(೨) ನಮಸ್ಕಾರದ ಪರಿ – ಕರವ ನೊಸಲೊಳು ಚಾಚಿ
(೩) ಕೈಮುಗಿ, ಮಣಿ, ಕರವ ನೊಸಲೊಳು ಚಾಚಿ – ನಮಸ್ಕರಿಸಿದಳು ಎಂದು ಹೇಳುವ ಪರಿ
(೪) ಕುಂತಿಗೆ ಉಪಯೋಗಿಸಿದ ಗುಣವಿಶೇಷ – ಸರಸಿಜಾನನೆ