ಪದ್ಯ ೧೦: ವೈಶಂಪಾಯನರು ಯಾವ ದೇವರನ್ನು ಮೊದಲಿಗೆ ಸ್ಮರಿಸಿದರು?

ಮನದೊಳಾದ್ಯಂಪುರುಷಮೀಶಾ
ನನನು ಪುರುಹೂತನ ಪುರಷ್ಟುತ
ನನಘನೇಕಾಕ್ಷರ ಪರಬ್ರಹ್ಮನ ಸನಾತನನ
ದನುಜರಿಪು ಸುವ್ಯಕ್ತನವ್ಯ
ಕ್ತನನು ಸದಸದ್ರೂಪನವ್ಯಯ
ನೆನಿಪ ವಿಷ್ಣುವ ನೆನೆದು ಮುನಿ ವಿಸ್ತರಿಸಿದನು ಕಥೆಯ (ಆದಿ ಪರ್ವ, ೨ ಸಂಧಿ, ೧೦ ಪದ್ಯ)

ತಾತ್ಪರ್ಯ:
ಬಳಿಕ ತನ್ನ ಮನಸ್ಸಿನಲ್ಲಿ ಮೊದಲಿನವನೂ, ಪುರುಷನೂ, ಈಶಾನನೂ, ಇಂದ್ರನೂ, ಸ್ತುತಿಸಲ್ಪಟ್ಟ ಪುರುಷನೂ, ಪಾಪರಹಿತನೂ, ಓಂಕಾರವಾಚ್ಯವಾದ ಸನಾತನನೂ ಪರಬ್ರಹ್ಮನೂ ಚೆನ್ನಾಗಿ ಕಾಣಿಸುವವನೂ, ಕಾಣಿಸದಿರುವವನೂ, ಇರುವಿಕೆ, ಇಲ್ಲದಿರುವಿಕೆಗಳೆರಡೂ ಆಗಿರುವವನೂ ನಾಶರಹಿತನೂ ಆದ ವಿಷ್ಣುವನ್ನು ನೆನೆದು ಮಹಾಭಾರತದ ಕಥೆಯನ್ನು ವಿಸ್ತಾರವಾಗಿ ಹೇಳಿದನು.

ಅರ್ಥ:
ಮನ: ಮನಸ್ಸು; ಆದ್ಯ: ಆದಿ; ಪುರುಹೂತ: ಇಂದ್ರ; ಅನಘ: ಪಾಪರಹಿತನಾದವನು; ಅಕ್ಷರ: ವರ್ಣ; ಸನಾತನ: ಶಾಶ್ವತವಾದುದು; ದನುಜರಿಪು: ಕೃಷ್ಣ; ಸುವ್ಯಕ್ತ: ಚೆನ್ನಾಗಿ ಕಾಣಿಸುವವನು; ಅವ್ಯಕ್ತ: ಕಾಣದಿರುವವನು; ಸದ್ರೂಪ: ಚೆನ್ನಾಗಿರುವವನೂ; ಅವ್ಯಯ: ನಾಶರಹಿತನಾದವನು; ನೆನೆ: ಜ್ಞಾಪಿಸು; ಮುನಿ: ಋಷಿ; ವಿಸ್ತರಿಸು: ವಿಶಾಲವಾಗಿ ಹೇಳು; ಕಥೆ: ಚರಿತ್ರೆ, ವಿಚಾರ;

ಪದವಿಂಗಡಣೆ:
ಮನದೊಳ್+ಆದ್ಯಂ+ಪುರುಷಂ+ಈಶಾ
ನನನು +ಪುರುಹೂತನ+ ಪುರಷ್ಟುತನ್
ಅನಘನ್+ಏಕಾಕ್ಷರ+ ಪರಬ್ರಹ್ಮನ+ ಸನಾತನನ
ದನುಜರಿಪು +ಸುವ್ಯಕ್ತನ್+ಅವ್ಯ
ಕ್ತನನು +ಸದಸದ್ರೂಪನ್+ಅವ್ಯಯ
ನೆನಿಪ+ ವಿಷ್ಣುವ +ನೆನೆದು +ಮುನಿ +ವಿಸ್ತರಿಸಿದನು +ಕಥೆಯ

ಅಚ್ಚರಿ:
(೧) ವಿಷ್ಣುವಿನ ಗುಣಗಳನ್ನು ಹೇಳುವ ಪರಿ – ಪರಬ್ರಹ್ಮ, ಸನಾತನ, ಸುವ್ಯಕ್ತ, ಅವ್ಯಕ್ತ, ಸದಸದ್ರೂಪ, ಅವ್ಯಯನ್, ಏಕಾಕ್ಷರ
(೨) ಒಂದೇ ಪದವಾಗಿ ರಚನೆ: ಮನದೊಳಾದ್ಯಂಪುರುಷಮೀಶಾ

ಪದ್ಯ ೩೭: ದ್ರೋಣನೇಕೆ ಆಯಾಸಗೊಂಡನು?

ಈತನಸ್ತ್ರವ ಕಡಿದು ಬಾಣ
ವ್ರಾತವನು ತೆರಳಿಚಿದನರ್ಜುನ
ಸೇತುವಾದವು ಸರಳು ವೈಹಾಯಸ ಮಹಾರ್ಣವಕೆ
ಕೇತುವಾದವು ರವಿರಥಕೆ ಪುರು
ಹೂತನಾದನು ಗಿರಿಕುಳಕೆ ಕೈ
ಸೋತುವಿವ ತರಿದೊಟ್ಟಿ ಬಳಲಿದು ನಿಂದನಾ ದ್ರೋಣ (ಭೀಷ್ಮ ಪರ್ವ, ೮ ಸಂಧಿ, ೩೭ ಪದ್ಯ)

ತಾತ್ಪರ್ಯ:
ದ್ರೋಣನ ಬಾಣಗಳನ್ನು ಕಡಿದು, ಅರ್ಜುನನು ಬಾಣ ಪ್ರಯೊಗ ಮಾಡಲು, ಆ ಬಾಣಗಳು ಆಕಾಶ ಸಮುದ್ರಕ್ಕೆ ಸೇತುವಾಯಿತು. ಸೂರ್ಯನ ರಥಕ್ಕೆ ಧ್ವಜಗಳಾದವು, ಪರ್ವತಗಳಿಗೆ ಇಂದ್ರನಾದವು, ಅರ್ಜುನನ ಬಾಣಗಳನ್ನು ಕಡಿದೊಟ್ಟಿ ದ್ರೋಣನು ಕೈಸೋತು ಆಯಾಸಗೊಂಡನು.

ಅರ್ಥ:
ಅಸ್ತ್ರ: ಶಸ್ತ್ರ; ಕಡಿ: ಸೀಳು; ಬಾಣ: ಅಂಬು; ವ್ರಾತ: ಗುಂಪು; ತೆರಳು: ಹೋಗು, ನಡೆ; ಸೇತು: ಬಂಧ, ಸಂಕ; ಸರಳು: ಬಾಣ; ವೈಹಾಯಸ: ಆಕಾಶ; ಮಹಾರ್ಣವ: ದೊಡ್ಡ ಸಾಗರ; ಕೇತು: ಬಾವುಟ; ರವಿ: ಸೂರ್ಯ; ರಥ: ಬಂಡಿ; ಪುರುಹೂತ: ಇಂದ್ರ; ಗಿರಿಕುಳ: ಬೆಟ್ಟಗಳ ಸಮೂಹ; ಕೈ: ಹಸ್ತ; ಸೋತು: ಪರಾಭವ; ಬಳಲು: ಆಯಾಸ; ನಿಂದು: ನಿಲ್ಲು;

ಪದವಿಂಗಡಣೆ:
ಈತನ್+ಅಸ್ತ್ರವ +ಕಡಿದು +ಬಾಣ
ವ್ರಾತವನು +ತೆರಳಿಚಿದನ್+ಅರ್ಜುನ
ಸೇತುವಾದವು+ ಸರಳು +ವೈಹಾಯಸ +ಮಹಾರ್ಣವಕೆ
ಕೇತುವಾದವು+ ರವಿ+ರಥಕೆ+ ಪುರು
ಹೂತನಾದನು +ಗಿರಿಕುಳಕೆ+ ಕೈ
ಸೋತುವಿವ +ತರಿದ್+ಒಟ್ಟಿ +ಬಳಲಿದು+ ನಿಂದನಾ +ದ್ರೋಣ

ಅಚ್ಚರಿ:
(೧) ಬಾಣಗಳು ಹೇಗೆ ಕಂಡವು – ಸೇತುವಾದವು ಸರಳು ವೈಹಾಯಸ ಮಹಾರ್ಣವಕೆ, ಕೇತುವಾದವು ರವಿರಥಕೆ, ಪುರುಹೂತನಾದನು ಗಿರಿಕುಳಕೆ

ಪದ್ಯ ೫೯: ಭೀಷ್ಮಾರ್ಜುನರ ಯುದ್ಧ ಹೇಗಿತ್ತು?

ವರುಣ ಬಾಣದಲಸ್ತ್ರವನು ಸಂ
ಹರಿಸಿದನು ಕಲಿ ಭೀಷ್ಮನೊಬ್ಬೊ
ಬ್ಬರು ಪರಾಜಯ ರೋಷಪಾವಕ ವಿಸ್ಫುಲಿಂಗಿತರು
ಹರಿಸಿದರು ಕೌಬೇರ ಮಾರುತ
ನಿರುತಿ ಯಮ ಪುರುಹೂತ ಶಂಕರ
ಪರಿಪರಿಯ ಪ್ರತ್ಯಸ್ತ್ರವನು ಗಾಂಗೇಯ ಫಲುಗುಣರು (ವಿರಾಟ ಪರ್ವ, ೯ ಸಂಧಿ, ೫೯ ಪದ್ಯ)

ತಾತ್ಪರ್ಯ:
ಭೀಷ್ಮನು ವರುಣಾಸ್ತ್ರದಿಂದ ಆಗ್ನೇಯಾಸ್ತ್ರವನ್ನು ನಿವಾರಿಸಿದನು. ಭೀಷ್ಮಾರ್ಜುನರಿಬ್ಬರೂ ತಾತ್ಕಾಲಿಕವಾದ ಪರಾಜಯೈಂದಾದ ಕೋಪಾಗ್ನಿಯ ಕಿಡಿಗಳನ್ನು ಸುರಿಸುತ್ತಾ ಕುಬೇರ, ವಾಯು, ನಿರುತಿ, ಯಮ, ಇಂದ್ರ, ಶಿವಾ ಮೊದಲಾದ ಅಸ್ತ್ರ ಪ್ರತ್ಯಸ್ತ್ರಗಳನ್ನು ಸುರಿಸಿದರು.

ಅರ್ಥ:
ವರುಣ: ನೀರು, ನೀರಿನ ಅಧಿದೇವತೆ; ಬಾಣ: ಶರ; ಅಸ್ತ್ರ: ಶಸ್ತ್ರ, ಆಯುಧ; ಸಂಹರಿಸು: ನಾಶಮಾಡು; ಕಲಿ: ಶೂರ; ಪರಾಜಯ: ಸೋಲು; ರೋಷ: ಕೋಪ; ಪಾವಕ: ಬೆಂಕಿ; ಸ್ಫುಲಿಂಗ: ಬೆಂಕಿಯ ಕಿಡಿ, ಅಗ್ನಿಕಣ; ಹರಿಸು: ಸಾರು; ಕುಬೇರ: ಧನಪತಿ; ಮಾರುತ: ವಾಯು; ನಿರುತಿ: ನೈಋತ್ಯದಿಕ್ಕಿನ ಒಡೆಯ; ಯಮ: ಕಾಲ, ಮೃತ್ಯುದೇವತೆ; ಪುರುಹೂತ: ಇಂದ್ರ; ಶಂಕರ: ಶಿವ; ಪರಿಪರಿ: ಹಲವಾರು; ಪ್ರತ್ಯಸ್ತ್ರ: ಅಸ್ತ್ರಕ್ಕೆ ಎದುರಾದ ಅಸ್ತ್ರ;

ಪದವಿಂಗಡಣೆ:
ವರುಣ +ಬಾಣದಲ್+ಅಸ್ತ್ರವನು +ಸಂ
ಹರಿಸಿದನು+ ಕಲಿ+ ಭೀಷ್ಮನ್+ಒಬ್ಬೊ
ಬ್ಬರು +ಪರಾಜಯ+ ರೋಷ+ಪಾವಕ +ವಿಸ್ಫುಲಿಂಗಿತರು
ಹರಿಸಿದರು+ ಕೌಬೇರ +ಮಾರುತ
ನಿರುತಿ +ಯಮ+ ಪುರುಹೂತ+ ಶಂಕರ
ಪರಿಪರಿಯ+ ಪ್ರತ್ಯಸ್ತ್ರವನು +ಗಾಂಗೇಯ +ಫಲುಗುಣರು

ಅಚ್ಚರಿ:
(೧) ಅಸ್ತ್ರಗಳ ಹೆಸರು – ವರುಣ, ಕೌಬೇರ, ಮಾರುತ, ನಿರುತಿ, ಯಮ, ಇಂದ್ರ, ಶಿವ

ಪದ್ಯ ೧೫: ಕರ್ಣನು ಕೋಪದಿಂದ ಹೇಗೆ ನುಡಿದನು?

ಈತ ಸಾರಥಿಯಳವೈಯಲಿ ಮಿಗು
ವಾತನುತ್ತರನರ್ಜುನಂಗೀ
ಸೂತತನವೆತ್ತಲು ನಪುಂಸಕ ವೇಷ ತಾನೆತ್ತ
ಈತನರ್ಜುನನಾಗಲಾ ಪುರು
ಹೂತನಾಗಲಿ ರಾಮನಾಗಲಿ
ಆತಡಿರಿವೆನು ಬರಲಿಯೆಂದನು ಖಾತಿಯಲಿ ಕರ್ಣ (ವಿರಾಟ ಪರ್ವ, ೭ ಸಂಧಿ, ೧೫ ಪದ್ಯ)

ತಾತ್ಪರ್ಯ:
ಸೈನ್ಯದಲ್ಲಿನ ಕೆಲವು ಸೈನಿಕರು ಮಾತನಾಡುತ್ತಾ, ಅಟ್ಟಿಸಿಕೊಂಡು ಹೋಗುವವನು ಸಾರಥಿ, ಓಡಿ ಹೋಗುವವನು ಉತ್ತರ, ಎಂದರೆ, ಇನ್ನು ಕೆಲವರು ಅರ್ಜುನನಿಗೆ ಸಾರಥಿತನವೇಕೆ ಬಂತು? ನಪುಂಸಕ ವೇಷವಾದರು ಯಾಕೆ ತೊಟ್ಟಿದ್ದಾನೆ ಎಂದು ಅನುಮಾನವನ್ನು ವ್ಯಕ್ತಪಡಿಸಿದರು. ಕರ್ಣನಾದರೋ ಇವನು ಅರ್ಜುನನಾಗಲಿ, ಅವನಪ್ಪ ಇಂದ್ರನಾಗಲಿ, ಶ್ರೀರಾಮನೇ ಆಗಿರಲಿ ಯುದ್ಧಕ್ಕೆ ಬಂದರೆ ಅವನನ್ನು ಕೊಲ್ಲುತ್ತೇನೆ ಎಂದನು.

ಅರ್ಥ:
ಸಾರಥಿ: ಸೂತ; ಮಿಗು: ಮತ್ತು; ನಪುಂಸಕ: ಷಂಡ; ವೇಷ: ಉಡುಗೆ ತೊಡುಗೆ; ಪುರುಹೂತ: ಇಂದ್ರ; ಇರಿ: ಚುಚ್ಚು; ಬರಲಿ: ಆಗಮಿಸು; ಖಾತಿ: ಕೋಪ; ಅಳವು: ಸಾಮರ್ಥ್ಯ, ಶಕ್ತಿ;

ಪದವಿಂಗಡಣೆ:
ಈತ +ಸಾರಥಿಯಳವೈಯಲಿ +ಮಿಗುವ್
ಆತನ್+ಉತ್ತರನ್+ಅರ್ಜುನಂಗೀ
ಸೂತತನವ್+ಎತ್ತಲು+ ನಪುಂಸಕ+ ವೇಷ +ತಾನೆತ್ತ
ಈತನ್+ಅರ್ಜುನನ್+ಆಗಲ್+ಆ+ ಪುರು
ಹೂತನಾಗಲಿ +ರಾಮನಾಗಲಿ
ಆತಡ್+ಇರಿವೆನು +ಬರಲಿ+ಎಂದನು +ಖಾತಿಯಲಿ +ಕರ್ಣ

ಅಚ್ಚರಿ:
(೧) ಕರ್ಣನ ಕೋಪ – ಈತನರ್ಜುನನಾಗಲಾ ಪುರುಹೂತನಾಗಲಿ ರಾಮನಾಗಲಿ ಆತಡಿರಿವೆನು

ಪದ್ಯ ೩: ಲೋಮಶನನ್ನು ಹೇಗೆ ಸ್ವಾಗತಿಸಲಾಯಿತು?

ಈತನಿದಿರೆದ್ದರ್ಘ್ಯಪಾದ್ಯವ
ನಾ ತಪೋನಿಧಿಗಿತ್ತು ಬಹಳ
ಪ್ರೀತಿಯಲಿ ಬೆಸಗೊಂಡನವರಾಗಮನ ಸಂಗತಿಯ
ಆತನಮಳ ಸ್ವರ್ಗಸದನ ಸು
ಖಾತಿಶಯವನು ಹೇಳಿದನು ಪುರು
ಹೂತ ಭವನದಲರ್ಜುನನ ವಾರ್ತೆಯನು ವಿವರಿಸಿದ (ಅರಣ್ಯ ಪರ್ವ, ೧೦ ಸಂಧಿ, ೩ ಪದ್ಯ)

ತಾತ್ಪರ್ಯ:
ಧರ್ಮಜನು ಲೋಮಶನನ್ನು ಎದುರುಗೊಂಡು ಅಮರಾವತಿಯ ವಿದ್ಯಮಾನಗಳೇನೆಂದು ಕೇಳಿದನು, ಸ್ವರ್ಗದ ಸಂತೋಷಾತಿಶಯವನ್ನೂ ಅರ್ಜುನನು ದೇವೇಂದ್ರ ಭವನದಲ್ಲಿದ್ದ ವಾರ್ತೆಯನ್ನು ಲೋಮಶನು ತಿಳಿಸಿದನು.

ಅರ್ಥ:
ಅರ್ಘ್ಯ: ದೇವತೆಗಳಿಗೂ ಪೂಜ್ಯರಿಗೂ ಕೈತೊಳೆಯಲು ಕೊಡುವ ನೀರು; ಪಾದ್ಯ: ಕಾಲು ತೊಳೆಯುವ ನೀರು; ತಪೋನಿಧಿ: ಮುನಿ; ಬಹಳ: ತುಂಬ; ಪ್ರೀತಿ: ಒಲವು; ಬೆಸಗೊಳ್: ಕೇಳು;
ಆಗಮನ: ಬರುವಿಕೆ; ಸಂಗತಿ: ವಿಚಾರ; ಅಮಳ: ನಿರ್ಮಲ; ಸ್ವರ್ಗ: ನಾಕ; ಸದನ; ಆಲಯ; ಸುಖ: ಸಮಾಧಾನ, ಸಂತಸ; ಅತಿಶಯ: ಹೆಚ್ಚಳ; ಹೇಳು: ತಿಳಿಸು; ಪುರುಹೂತ: ಇಂದ್ರ; ಭವನ: ಆಲಯ; ವಾರ್ತೆ: ವಿಚಾರ, ವಿಷಯ; ವಿವರಿಸು: ತಿಳಿಸು;

ಪದವಿಂಗಡಣೆ:
ಈತನ್+ಇದಿರೆದ್+ಅರ್ಘ್ಯ+ಪಾದ್ಯವನ್
ಆ+ ತಪೋನಿಧಿಗಿತ್ತು +ಬಹಳ
ಪ್ರೀತಿಯಲಿ +ಬೆಸಗೊಂಡನ್+ಅವರ್+ಆಗಮನ +ಸಂಗತಿಯ
ಆತನ್+ಅಮಳ +ಸ್ವರ್ಗ+ಸದನ +ಸುಖ
ಅತಿಶಯವನು +ಹೇಳಿದನು +ಪುರು
ಹೂತ +ಭವನದಲ್+ಅರ್ಜುನನ +ವಾರ್ತೆಯನು +ವಿವರಿಸಿದ

ಅಚ್ಚರಿ:
(೧) ಲೋಮಶ ಮುನಿಗಳನ್ನು ತಪೋನಿಧಿ ಎಂದು ಕರೆದಿರುವುದು
(೨) ಇಂದ್ರನನ್ನು ಕರೆದ ಪರಿ – ಪುರುಹೂತ

ಪದ್ಯ ೮೫: ಅರ್ಜುನನನ್ನು ನೋಡಲು ಯಾರು ಬಂದರು?

ನುಸಿಗಳಿವದಿರು ಮರ್ತ್ಯರೆಂಬವ
ರೊಸಗೆಯಮರಾವತಿಯೊಳೇನಿದು
ಹೊಸತಲಾ ಬಂದಾತನಾರೋ ಪೂತುರೇಯೆನುತ
ವಸುಗಳಾದಿತ್ಯರು ಭುಜಂಗಮ
ವಿಸರ ಗಂಧರ್ವಾದಿ ದೇವ
ಪ್ರಸರ ಬಂದುದು ಕಾಣಿಕೆಗೆ ಪುರುಹೂತ ನಂದನನ (ಅರಣ್ಯ ಪರ್ವ, ೮ ಸಂಧಿ, ೮೫ ಪದ್ಯ)

ತಾತ್ಪರ್ಯ:
ಮನುಷ್ಯರು ದೇವತೆಗಳಿಗೆ ನುಸಿಗಳಿದ್ದ ಹಾಗೆ, ಅಂತಹದರಲ್ಲಿ ಈ ಹುಲು ಮಾನವನು ಬಂದುದಕ್ಕೆ ಅಮರಾವತಿಯಲ್ಲೇಕೆ ಶುಭಸಮಾರಂಭ? ಬಂದವನು ಯಾರೋ ಹೋಗಿ ನೋಡೋಣ ಎಂದು ವಸುಗಳು, ಆದಿತ್ಯರು, ಸರ್ಪಗಳು, ಗಂಧರ್ವರ ಗುಂಪುಗಳು ಅರ್ಜುನನನ್ನು ನೋಡಲು ಬಂದರು.

ಅರ್ಥ:
ನುಸಿ: ಹುಡಿ, ಧೂಳು; ಇವದಿರು: ಇವರು; ಮರ್ತ್ಯ: ಮನುಷ್ಯ; ಒಸಗೆ: ಶುಭ, ಮಂಗಳಕಾರ್ಯ;
ಹೊಸತು: ನವೀನ; ಬಂದು: ಆಗಮಿಸು; ಪೂತುರೆ: ಭಲೇ, ಭೇಷ್; ವಸು: ದೇವತೆಗಳ ಒಂದು ವರ್ಗ; ಆದಿತ್ಯ: ಸೂರ್ಯ; ಭುಜಂಗ: ಹಾವು; ವಿಸರ: ವಿಸ್ತಾರ, ವ್ಯಾಪ್ತಿ; ಗಂಧರ್ವ: ದೇವಲೋಕದ ಸಂಗೀತಗಾರ; ಪ್ರಸರ: ಹರಡುವುದು; ಕಾಣಿಕೆ: ಉಡುಗೊರೆ, ದಕ್ಷಿಣೆ; ಪುರುಹೂತ: ಇಂದ್ರ; ನಂದನ: ಮಗ;

ಪದವಿಂಗಡಣೆ:
ನುಸಿಗಳ್+ಇವದಿರು +ಮರ್ತ್ಯರೆಂಬ್+ಅವರ್
ಒಸಗೆ+ಅಮರಾವತಿಯೊಳ್+ಏನಿದು
ಹೊಸತಲಾ +ಬಂದಾತನ್+ ಆರೋ +ಪೂತುರೇ+ಎನುತ
ವಸುಗಳ್+ಅದಿತ್ಯರು +ಭುಜಂಗಮ
ವಿಸರ +ಗಂಧರ್ವಾದಿ+ ದೇವ
ಪ್ರಸರ +ಬಂದುದು+ ಕಾಣಿಕೆಗೆ+ ಪುರುಹೂತ+ ನಂದನನ

ಅಚ್ಚರಿ:
(೧) ದೇವತೆಗಳ ವರ್ಗ: ಅದಿತ್ಯರು, ಭುಜಂಗ, ಗಂಧರ್ವ

ಪದ್ಯ ೧೦: ಕರ್ಣನು ಶಲ್ಯನಿಗೆ ಏನು ಹೇಳಿದ?

ಮಾತು ತಪ್ಪಿತು ರಿಪುಗಳೈವರಿ
ಗೌತಣಿಸಿದವು ನೆರವಿನಲಿ ಪುರು
ಹೂತ ಶಿಖಿ ಯಮ ನಿರುತಿ ವರುಣ ಸಮೀರ ಹರಸಖರು
ಆತುಕೊಳಲಿಂದೀ ಸುಯೋಧನ
ಜಾತಪುಣ್ಯನೊ ಧರ್ಮಪುತ್ರನೆ
ಭೂತಭಾಗ್ಯನೊ ಕಾಣಲಹದೈ ಶಲ್ಯ ಕೇಳೆಂದ (ಕರ್ಣ ಪರ್ವ, ೨೧ ಸಂಧಿ, ೧೦ ಪದ್ಯ)

ತಾತ್ಪರ್ಯ:
ಕರ್ಣನು ಶಲ್ಯನಿಗೆ ಹೇಳಿದನು, ಈಗ ನಾನಾಡಿದ ಮಾತು ತಪ್ಪಾಗಿದೆ, ಪಾಂಡವರ ಐವರಿಗೂ ನಾನು ಯುದ್ಧಕ್ಕೆ ಔತಣವನ್ನು ನೀಡುತ್ತಿದ್ದೇನೆ. ಇಂದ್ರ, ಅಗ್ನಿ, ಯಮ, ನಿಋತಿ, ವರುಣ, ವಾಯು, ಕುಬೇರರೂ ಅವರಿಗೆ ಸಹಾಯವಾಗಿ ಬಂದು ನಮ್ಮನ್ನಿದಿರಿಸಲಿ ಧರ್ಮಜನೇ ಪುಣ್ಯಶಾಲಿಯೋ, ದುರ್ಯೋಧನನೇ ಪೂರ್ವದಲ್ಲಿ ಪುಣ್ಯಮಾಡಿದವನೋ ಎಂಬುದನ್ನು ಈ ದಿವಸ ನೋಡಬಹುದು.

ಅರ್ಥ:
ಮಾತು: ನುಡಿ; ತಪ್ಪಿತು: ಸಿಕ್ಕದೆ ಹೋಗು, ಗುರಿ ತಪ್ಪು; ರಿಪು: ವೈರಿ; ಔತಣ: ಆಮಂತ್ರಣ; ನೆರವು: ಸಹಾಯ, ಬೆಂಬಲ; ಪುರುಹೂತ: ಇಂದ್ರ; ಶಿಖಿ: ಬೆಂಕಿ; ಯಮ: ಜವರಾಯ; ನಿರುತಿ: ನೈಋತ್ಯದಿಕ್ಕಿನ ಒಡೆಯ; ವರುಣ: ನೀರಿನ ಅಧಿದೇವತೆಯೂ ಪಶ್ಚಿಮ ದಿಕ್ಪಾಲಕನೂ ಆಗಿರುವ ಒಬ್ಬ ದೇವತೆ; ಸಮೀರ: ಗಾಳಿ, ವಾಯು; ಹರ: ಶಿವ; ಸಖ: ಮಿತ್ರ; ಹರಸಖ: ಕುಬೇರ; ಒಳಿತು: ಯೋಗ್ಯವಾದುದು, ಒಳ್ಳೆಯದು; ಜಾತ: ಹುಟ್ಟಿದ; ಪುಣ್ಯ: ಸದಾಚಾರ, ಪರೋಪಕಾರ; ಪುತ್ರ: ಮಗ; ಭಾಗ್ಯ: ವಿಧಿ, ಹಣೆಬರಹ; ಕಾಣು: ತೋರು; ಕೇಳು: ಆಲಿಸು;

ಪದವಿಂಗಡಣೆ:
ಮಾತು +ತಪ್ಪಿತು +ರಿಪುಗಳ್+ಐವರಿಗ್
ಔತಣಿಸಿದವು +ನೆರವಿನಲಿ +ಪುರು
ಹೂತ +ಶಿಖಿ +ಯಮ +ನಿರುತಿ +ವರುಣ +ಸಮೀರ +ಹರಸಖರು
ಆತುಕ್+ಒಳಲ್+ಇಂದ್+ಈ+ಸುಯೋಧನ
ಜಾತಪುಣ್ಯನೊ +ಧರ್ಮಪುತ್ರನೆ
ಭೂತಭಾಗ್ಯನೊ +ಕಾಣಲಹದೈ+ ಶಲ್ಯ +ಕೇಳೆಂದ

ಅಚ್ಚರಿ:
(೧) ಯಾರ ಸಹಾಯ ಪಡೆಯಲು ಪಾಂಡವರಿಗೆ ಹೇಳಿದನು – ಪುರುಹೂತ, ಶಿಖಿ, ಯಮ, ನಿರುತಿ, ವರುಣ, ಸಮೀರ, ಹರಸಖರು

ಪದ್ಯ ೯೧: ಹರಿಶ್ಚಂದ್ರ ಮತ್ತು ಪಾಂಡು ಯಾರ ಸಭೆಯಲ್ಲಿದ್ದಾರೆ?

ವೈದಿಕೋಕ್ತಿಗಳಲಿ ಹರಿಶ್ಚಂ
ದ್ರಾದಿ ರಾಯರು ರಾಜಸೂಯದೊ
ಳಾದರನಿಬರೊಳಗ್ಗಳೆಯರಿಂದ್ರಂಗೆ ಸರಿಮಿಗಿಲು
ಆದೊಡಾ ಪುರುಹೂತ ಸಭೆಯೋ
ಪಾದಿ ಯಮನಾಸ್ಥಾನವಲ್ಲಿ ವಿ
ಷಾದದಲಿ ನಿಮ್ಮಯ್ಯನಿಹನಾತನ ಸಮೀಪದಲಿ (ಸಭಾ ಪರ್ವ, ೧ ಸಂಧಿ, ೯೧ ಪದ್ಯ)

ತಾತ್ಪರ್ಯ:
ವೇದ ವಿಧಿಯಂತೆ ಹರಿಶ್ಚಂದ್ರನೇ ಮೊದಲಾದ ರಾಜರು ರಾಜಸೂಯಯಾಗವನ್ನು ಮಾಡಿ ಇಂದ್ರನಿಗೆ ಸರಿಮಿಗಿಲಾಗಿ ಸ್ವರ್ಗದಲ್ಲಿದ್ದಾರೆ. ಯಮನ ಸಭೆಯು ದೇವೆಂದ್ರನ ಸಭೆಯಂತೆಯೇ ಇದೆ. ಅಲ್ಲಿ ನಿಮ್ಮ ತಂದೆಯಾದ ಪಾಂಡುರಾಜನು ದುಃಖಭರಿತನಾಗಿ ಯಮನ ಸಮೀಪದಲ್ಲಿದ್ದಾನೆ.

ಅರ್ಥ:
ವೈದಿಕ: ವೇದ ವಿಧಿಯಂತೆ; ಉಕ್ತಿ: ಹೇಳಿಕೆ; ಆದಿ: ಮುಂತಾದ; ರಾಯ: ರಾಜ; ಇನಿಬರ್: ಇಷ್ಟುಜನ; ಸರಿಮಿಗಿಲು: ಸರಿಸಮ; ಪುರುಹೂತ: ಇಂದ್ರ; ಉಪಾದಿ: ಅಂತೆ, ಸಮನಾಗಿ; ಆಸ್ಥಾನ: ದರ್ಬಾರು; ವಿಷಾದ: ದುಃಖ; ಆಯ್ಯ: ತಂದೆ; ಸಮೀಪ: ಹತ್ತಿರ;

ಪದವಿಂಗಡಣೆ:
ವೈದಿಕ+ಉಕ್ತಿಗಳಲಿ +ಹರಿಶ್ಚಂ
ದ್ರಾದಿ +ರಾಯರು +ರಾಜಸೂಯದೊಳ್
ಆದರನ್+ಇನಿಬರೊಳ್+ಅಗ್ಗಳೆಯರ್+ಇಂದ್ರಂಗೆ +ಸರಿಮಿಗಿಲು
ಆದೊಡ್+ಆ+ ಪುರುಹೂತ +ಸಭೆಯೋ
ಪಾದಿ +ಯಮನ+ಆಸ್ಥಾನವಲ್ಲಿ +ವಿ
ಷಾದದಲಿ +ನಿಮ್ಮ್+ಅಯ್ಯನ್+ಇಹನ್+ಆತನ +ಸಮೀಪದಲಿ

ಅಚ್ಚರಿ:
(೧) ಇಂದ್ರನನ್ನು ಪುರುಹೂತ ನೆಂದು ಕರೆದಿರುವುದು
(೨) ೩, ೬ ಸಾಲಿನ ಕೊನೆ ಪದ “ಸ”ಕಾರ ವಾಗಿರುವುದು – ಸರಿಮಿಗಿಲು, ಸಮೀಪದಲಿ
(೩) ಸಭೆ ಆಸ್ಥಾನ – ಸಾಮ್ಯಪದಗಳು