ಪದ್ಯ ೨೪: ಕರ್ಣನು ಯಾವ ರೀತಿ ಕಂಡನು?

ರಾಯನಣುಗರ ಗಂಡ ಕೌರವ
ರಾಯದಳ ಶೃಂಗಾರ ಮಲೆವರಿ
ರಾಯಮರ್ದನನೆಂಬ ಬಿರುದಿನಲುಲಿವ ಕಹಳೆಗಳ
ಜೀಯ ಜಯಜಯಯೆಂಬ ಪಂಡಿತ
ಗಾಯಕರ ಮಧ್ಯದಲಿ ಬೆರಳಲಿ
ಸಾಯಕವ ತಿರುಹುವನು ತಾ ಕಲಿಕರ್ಣ ನೋಡೆಂದ (ಭೀಷ್ಮ ಪರ್ವ, ೩ ಸಂಧಿ, ೨೪ ಪದ್ಯ)

ತಾತ್ಪರ್ಯ:
ಕೌರವರಾಯನಿಗೆ ಅತ್ಯಂತ ಪ್ರೀತಿಪಾತ್ರನಾದವನೂ, ಕೌರವ ಸೈನ್ಯಕ್ಕೆ ಶ್ರೇಷ್ಠನಾದವನೂ, ನಿಜವಾದ ಪರಾಕ್ರಮಿಯೂ, ಶತ್ರುರಾಜರನ್ನು ಮರ್ದಿಸುವವನೆಂಬ ಬಿರುದಾಂಕಿತನೂ, ಮೊರೆಯುವ ಕಹಳೆಗಳ ಹಿಂದೆ ಜಯಕಾರಮಾಡುವ ಪಂಡಿತರು, ಗಾಯಕರ ನಡುವೆ ಬೆರಳ್ಲಿ ಬಾಣವನ್ನು ತುಗುತ್ತಾ ನಿಂತ ವೀರ ಕರ್ಣನನ್ನು ನೋಡು ಎಂದು ಕೃಷ್ಣನು ಅರ್ಜುನನಿಗೆ ತೋರಿಸಿದನು.

ಅರ್ಥ:
ರಾಯ: ರಾಜ; ಅಣುಗ: ಪ್ರೀತಿಪಾತ್ರನಾದವನು; ಗಂಡ: ಪರಾಕ್ರಮಿ; ದಳ: ಸೈನ್ಯ; ಶೃಂಗಾರ: ಚೆಲುವು; ಮಲೆ: ಗರ್ವಿಸು, ಪ್ರತಿಭಟಿಸು; ಅರಿ: ವೈರಿ; ಮರ್ದನ: ಪುಡಿ ಮಾಡುವುದು; ಬಿರುದು: ಗೌರವ ಸೂಚಕ ಹೆಸರು; ಉಲಿ: ಧ್ವನಿ; ಕಹಳೆ: ಕಾಳೆ, ತುತ್ತೂರಿ; ಜೀಯ: ಒಡೆಯ; ಜಯ: ಉಘೇ; ಪಂಡಿತ: ವಿದ್ವಾಂಸ; ಗಾಯಕ: ಹಾಡುಗಾರ; ಮಧ್ಯ: ನಡುವೆ; ಬೆರಳು: ಅಂಗುಲಿ; ಸಾಯಕ: ಬಾಣ;ತಿರುಹು: ಅಲಾಡಿಸು, ತಿರುಗಿಸು; ಕಲಿ: ಶೂರ; ನೋಡು: ವೀಕ್ಷಿಸು;

ಪದವಿಂಗಡಣೆ:
ರಾಯನ್+ಅಣುಗರ +ಗಂಡ +ಕೌರವ
ರಾಯದಳ +ಶೃಂಗಾರ +ಮಲೆವ್+ಅರಿ
ರಾಯ+ಮರ್ದನನೆಂಬ +ಬಿರುದಿನಲ್ +ಉಲಿವ +ಕಹಳೆಗಳ
ಜೀಯ +ಜಯ+ಜಯ+ಎಂಬ+ ಪಂಡಿತ
ಗಾಯಕರ+ ಮಧ್ಯದಲಿ +ಬೆರಳಲಿ
ಸಾಯಕವ+ ತಿರುಹುವನು+ ತಾ +ಕಲಿಕರ್ಣ+ ನೋಡೆಂದ

ಅಚ್ಚರಿ:
(೧) ಕರ್ಣನ ಹೆಗ್ಗಳಿಕೆ – ರಾಯನಣುಗರ ಗಂಡ, ಕೌರವ ರಾಯದಳ ಶೃಂಗಾರ, ಮಲೆವರಿ
ರಾಯಮರ್ದನನೆಂಬ ಬಿರುದಿನಲುಲಿವ ಕಹಳೆಗಳ
(೨) ರಾಯ ಪದದ ಬಳಕೆ, ರಾಯ, ಕೌರವರಾಯ, ಅರಿರಾಯ

ಪದ್ಯ ೨೬: ಕಂಕನು ಯಾವ ಸಲಹೆಯನ್ನು ನೀಡಿದನು?

ಕರೆಸು ನಿಮ್ಮಯ ಮಲ್ಲರನು ಸಂ
ಗರವ ಜಯಿಸಲಿ ಜಯಿಸದಿರಲಾ
ಪರಿಯ ಬಿಡುವರೆ ರಾಯಲಕ್ಷಣಗಳನು ವಹಿಸಿರ್ದು
ಕರೆಸಿದರೆ ತಮತಮಗೆ ತವಕದಿ
ಹಿರಿದು ಶೃಂಗಾರವನು ಮಾಡಿಯೆ
ನೆರೆದು ಬಂದರು ಮೊರೆವ ಡೌಡೆಯ ವಾದ್ಯ ರಭಸದಲಿ (ವಿರಾಟ ಪರ್ವ, ೪ ಸಂಧಿ, ೨೬ ಪದ್ಯ)

ತಾತ್ಪರ್ಯ:
ಕಂಕನು ತನ್ನ ಅಭಿಪ್ರಾಯವನ್ನು ಹೇಳುತ್ತಾ, ನಿಮ್ಮ ಜಟ್ಟಿಗಳನ್ನು ಕರೆಸು, ಅವರು ಮಲ್ಲಯುದ್ಧದಲ್ಲಿ ಜಯಿಸಲಿ ಬಿಡಲಿ, ರಾಜ ಮರ್ಯಾದೆಯನ್ನು ಬಿಡಬಾರದು ಎನಲು, ವಿರಾಟನು ಮಲ್ಲರಿಗೆ ಹೇಳಿಕಳುಹಿಸಿದನು. ಮಲ್ಲರು ಅವಸರದಲ್ಲಿ ತಮಗೆ ಒಪ್ಪುವಾಗಿ ಅಲಂಕಾರ ಮಾಡಿಕೊಂಡು ನಗಾರಿ ಮುಂತಾದ ವಾದ್ಯಗಳನ್ನು ನುಡಿಸುತ್ತಾ ಆಸ್ಥಾನಕೆ ಬಂದರು.

ಅರ್ಥ:
ಕರೆಸು: ಬರೆಮಾಡು; ಮಲ್ಲ: ಜಟ್ಟಿ; ಸಂಗರ: ಯುದ್ಧ; ಜಯಿಸು: ವಿಜಯ, ಗೆಲುವು; ಪರಿ: ರೀತಿ; ಬಿಡು: ತೊರೆ; ರಾಯ: ರಾಜ; ಲಕ್ಷಣ: ಗುರುತು, ಚಿಹ್ನೆ; ವಹಿಸು: ಸಾಗು, ಮುಂದುವರಿ; ಕರೆಸು: ಬರೆಮಾಡು; ತವಕ: ತೊಂದರೆ; ಹಿರಿ: ದೊಡ್ಡ; ಶೃಂಗಾರ: ಚೆಲುವು; ನೆರೆ: ಪಕ್ಕ, ಪಾರ್ಶ್ವ; ಬಂದು: ಆಗಮಿಸು; ಮೊರೆ: ಧ್ವನಿ ಮಾಡು; ಡೌಡೆ: ನಗಾರಿ; ವಾದ್ಯ: ಸಂಗೀತದ ಸಾಧನ; ರಭಸ: ವೇಗ;

ಪದವಿಂಗಡಣೆ:
ಕರೆಸು +ನಿಮ್ಮಯ +ಮಲ್ಲರನು +ಸಂ
ಗರವ +ಜಯಿಸಲಿ+ ಜಯಿಸದಿರಲ್+ಆ
ಪರಿಯ +ಬಿಡುವರೆ +ರಾಯ+ಲಕ್ಷಣಗಳನು+ ವಹಿಸಿರ್ದು
ಕರೆಸಿದರೆ+ ತಮತಮಗೆ+ ತವಕದಿ
ಹಿರಿದು+ ಶೃಂಗಾರವನು+ ಮಾಡಿಯೆ
ನೆರೆದು +ಬಂದರು +ಮೊರೆವ +ಡೌಡೆಯ +ವಾದ್ಯ +ರಭಸದಲಿ

ಅಚ್ಚರಿ:
(೧) ಜಯಿಸು, ಜಯಿಸದಿರ್ – ವಿರುದ್ಧ ಪದ, ಜಯ ಪದದ ಬಳಕೆ

ಪದ್ಯ ೨೦: ಮಲ್ಲರು ಯಾರ ಆಸ್ಥಾನವನ್ನು ಪ್ರವೇಶಿಸಿದರು?

ಪರಿಪರಿಯ ಶೃಂಗಾರದಲಿ ಮ
ಲ್ಲರುಗಳೇಳಲು ಮುಂದೆ ನಾದಿಪ
ಬಿರುದು ಜಾಗಟೆ ಡೌಡೆ ಪಾಠಕನಿಕರದೊಗ್ಗಿನಲಿ
ಪುರವ ಹೊಕ್ಕರು ರಾಜಸಭೆಗೊಡ
ನಿರದೆ ನಡೆಯಲು ಮತ್ಸ್ಯಭೂಪತಿ
ಸಿರಿಯೊಳೋಲಗವಿತ್ತು ಕುಳ್ಳಿರ್ದನು ಸರಾಗದಲಿ (ವಿರಾಟ ಪರ್ವ, ೪ ಸಂಧಿ, ೨೦ ಪದ್ಯ)

ತಾತ್ಪರ್ಯ:
ಮಲ್ಲರೆಲ್ಲರೂ ಶೃಂಗಾರ ಮಾಡಿಕೊಂಡು ಸ್ತುತಿಪಾಠಕರು, ಜಾಗಟೆ, ನಗಾರಿ ವಾದ್ಯಗಳೊಡನೆ ಊರನ್ನು ಪ್ರವೇಶಿಸಿ ರಾಜ ಸಭೆಗೆ ಬಂದರು. ಅಲ್ಲಿ ವಿರಾಟರಾಜನು ಐಶ್ವರ್ಯಭರಿತನಾಗಿ ಓಲಗದಲ್ಲಿ ಸಂತೋಷದಿ ಆಸೀನನಾಗಿದ್ದನು.

ಅರ್ಥ:
ಪರಿಪರಿ: ಹಲವಾರು; ಶೃಂಗಾರ: ಅಲಂಕಾರ; ಮಲ್ಲ: ಜಟ್ಟಿ; ಏಳು: ಮೇಲೆ ಬಂದು; ನಾದು: ತೋಯಿಸು, ಲೇಪಿಸು; ಬಿರುದು: ಗೌರವಸೂಚಕ ಹೆಸರು; ಜಾಗಟೆ: ಒಂದು ಚರ್ಮವಾದ್ಯ; ಡೌಡೆ: ನಗಾರೈ; ಪಾಠಕ: ಸ್ತುತಿಮಾಡುವವ, ವಂದಿಮಾಗದ; ನಿಕರ: ಗುಂಪು; ಒಗ್ಗು: ಜೊತೆ; ಪುರ: ಊರು; ಹೊಕ್ಕು: ಸೇರು; ರಾಜಸಭೆ: ದರ್ಬಾರು; ನಡೆ: ಚಲಿಸು; ಭೂಪತಿ: ರಾಜ; ಸಿರಿ: ಐಶ್ವರ್ಯ; ಓಲಗ: ದರ್ಬಾರು; ಕುಳ್ಳಿರ್ದ: ಆಸೀನನಾಗು; ಸರಾಗ: ಪ್ರೀತಿ;

ಪದವಿಂಗಡಣೆ:
ಪರಿಪರಿಯ +ಶೃಂಗಾರದಲಿ+ ಮ
ಲ್ಲರುಗಳ್+ಏಳಲು +ಮುಂದೆ +ನಾದಿಪ
ಬಿರುದು+ ಜಾಗಟೆ +ಡೌಡೆ +ಪಾಠಕ+ನಿಕರದ್+ಒಗ್ಗಿನಲಿ
ಪುರವ+ ಹೊಕ್ಕರು +ರಾಜಸಭೆಗೊಡ
ನಿರದೆ +ನಡೆಯಲು +ಮತ್ಸ್ಯ+ಭೂಪತಿ
ಸಿರಿಯೊಳ್+ಒಲಗವಿತ್ತು+ ಕುಳ್ಳಿರ್ದನು +ಸರಾಗದಲಿ

ಅಚ್ಚರಿ:
(೧) ಜಾಗಟೆ, ಡೌಡೆ – ವಾದ್ಯಗಳ ಹೆಸರು;

ಪದ್ಯ ೮೫: ಭೀಷ್ಮರು ಶಕುನಿಯ ಮಾತಿಗೆ ಹೇಗೆ ಉತ್ತರಿಸಿದರು?

ವಾರಕದ ವಿವಿಧಾಭರಣ ಶೃಂ
ಗಾರವಂತಿರಲೀಕೆಯಾಡಿದ
ಸಾರ ಭಾಷೆಗೆ ನೆನೆಯಿರೈ ನಿರ್ವಾಹ ಸಂಗತಿಯ
ಓರೆ ಪೋರೆಯೊಳಾಡಿ ಧರ್ಮದ
ಧಾರಣಿಯ ಧಟ್ಟಿಸುವದಿದು ಗಂ
ಭೀರರಿಗೆ ಗರುವಾಯಿಯೇ ಸುಡಲೆಂದನಾ ಭೀಷ್ಮ (ಸಭಾ ಪರ್ವ, ೧೫ ಸಂಧಿ, ೮೫ ಪದ್ಯ)

ತಾತ್ಪರ್ಯ:
ಶಕುನಿಯು ದ್ರೌಪದಿಯನ್ನು ವಿವಿಧಾಭರಣದಿಂದ ಮೆರೆ ಎಂದು ಹೀಯಾಳಿಸಿದ ಬಳಿಕ ಭೀಷ್ಮರು ಆ ವಿವಿಧಾಭರಣದ ವಿಷಯ ಹಾಗಿರಲಿ, ಈಕೆ ಕೇಳಿರುವ ಸಾರವತ್ತಾದ ಪ್ರಶ್ನೆಗೆ ಉತ್ತರವನ್ನು ಸರಿಯಾಗಿ ಕೊಡುವುದನ್ನು ಯೋಚಿಸಿರಿ, ಓರೆ ಕೋರೆಗಳನ್ನೇ ಕುರಿತು ಮಾತಾಡಿ ಧರ್ಮಪಾಲನೆಯನ್ನು ಕೈಬಿಡುವುದು ಗಂಭೀರರಾದವರಿಗೆ ಶೋಭೆ ತರುತ್ತದೆಯೇ, ಅಂತಹದು ಸುಡಲಿ ಎಂದು ಭೀಷ್ಮರು ನುಡಿದರು.

ಅರ್ಥ:
ವಾರಕ: ಉಡುಗೊರೆ; ವಿವಿಧ: ಹಲವಾರು; ಆಭರಣ: ಒಡವೆ; ಶೃಂಗಾರ: ಅಲಂಕಾರ; ಅಂತಿರಲಿ: ಹಾಗಿರಲಿ; ಆಡಿದ: ನುಡಿದ; ಸಾರ: ರಸ; ಭಾಷೆ: ಮಾತು; ನೆನೆ: ಜ್ಞಾಪಿಸಿಕೊ; ನಿರ್ವಾಹ: ನಿವಾರಣೋಪಾಯ, ಆಧಾರ; ಸಂಗತಿ: ಜೊತೆ; ಓರೆ: ವಕ್ರ; ಧರ್ಮ: ಧಾರಣೆ ಮಾಡಿದುದು, ನಿಯಮ; ಧಾರಣೆ: ಧರಿಸು; ಧಟ್ಟಿಸು: ಒರಸಿಹಾಕು, ಉಜ್ಜು; ಗಂಭೀರ: ಆಳ, ಗಹನ; ಗರುವಾಯಿ: ದೊಡ್ಡತನ, ಠೀವಿ; ಸುಡು: ಭಸ್ಮ;

ಪದವಿಂಗಡಣೆ:
ವಾರಕದ +ವಿವಿಧ+ಆಭರಣ +ಶೃಂ
ಗಾರವ್+ ಅಂತಿರಲಿ+ಈಕೆ+ಆಡಿದ
ಸಾರ +ಭಾಷೆಗೆ +ನೆನೆಯಿರೈ +ನಿರ್ವಾಹ +ಸಂಗತಿಯ
ಓರೆ+ ಪೋರೆಯೊಳಾಡಿ +ಧರ್ಮದ
ಧಾರಣಿಯ +ಧಟ್ಟಿಸುವದ್+ಇದು ಗಂ
ಭೀರರಿಗೆ+ ಗರುವಾಯಿಯೇ +ಸುಡಲೆಂದನಾ +ಭೀಷ್ಮ

ಅಚ್ಚರಿ:
(೧) ಧ ಕಾರದ ತ್ರಿವಳಿ ಪದ – ಧರ್ಮದ ಧಾರಣಿಯ ಧಟ್ಟಿಸುವದಿದು
(೨) ಆಡು ಭಾಷೆಯನ್ನು ಬಳಸುವ ಪರಿ – ಓರೆ ಪೋರೆ

ಪದ್ಯ ೨೩: ಹಾರವೇಕೈ ಕಂಗಳಿ ಎಂದು ಕೃಷ್ಣನು ಅರ್ಜುನನನ್ನು ಏಕೆ ಕೇಳಿದನು?

ತೇರಿನಲಿ ಚಾಚಿದನು ಮೆಲ್ಲನೆ
ಭಾರಿ ಧನುವನು ಕಯ್ಯ ಕಣೆಗಳ
ನೋರೆಯಲಿ ಸೈತಿರಿಸೆ ಕಂಡನು ಮತ್ತೆ ಮುರವೈರಿ
ಹಾರವೇಕೈ ಕಂಗಳಲಿ ಕ
ಸ್ತೂರಿಯೇಕೈ ಕದಪಿನಲಿ ಶೃಂ
ಗಾರವಿದು ವಿಪರೀತವೇನೈ ಪಾರ್ಥ ಹೇಳೆಂದ (ಕರ್ಣ ಪರ್ವ, ೨೬ ಸಂಧಿ, ೨೩ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನ ಕೈಯಲ್ಲಿದ್ದ ಗಾಂಡೀವವನ್ನು ರಥದಲ್ಲಿ ಮೆಲ್ಲನೆ ಇಟ್ಟನು. ಕೈಯಲ್ಲಿದ್ದ ಬಾಣಗಳನ್ನು ಪಕ್ಕಕ್ಕಿಟ್ಟನು. ಇದನ್ನು ನೋಡಿದ ಕೃಷ್ಣನು ಅರ್ಜುನ ಇದೇನಿದು, ಕಣ್ಣಿನಲ್ಲಿ ಹಾರವನ್ನು ಕೆನ್ನೆಯ ಮೇಲೆ ಕಸ್ತೂರಿಯನ್ನು ಏಕೆ ಧರಿಸಿದೆ? ನಿನ್ನ ಅಲಂಕಾರ ತಿರುಮುರುವಾಯಿತು ಎಂದನು.

ಅರ್ಥ:
ತೇರು: ರಥ, ಬಂಡಿ; ಚಾಚು: ಹರಡು; ಮೆಲ್ಲನೆ: ನಿಧಾನವಾಗಿ; ಭಾರಿ: ದೊಡ್ಡ; ಧನು: ಬಿಲ್ಲು; ಕಯ್ಯ: ಹಸ್ತ; ಕಣೆ: ಬಾಣ; ಓರೆ: ವಕ್ರ, ಡೊಂಕು; ಸೈತು: ಸುಮ್ಮನೆ, ಮೌನವಾಗಿ, ನೇರವಾದುದು; ಕಂಡು: ನೋಡು; ಮುರವೈರಿ: ಕೃಷ್ಣ; ಹಾರ: ಮಾಲೆ; ಕಂಗಳು: ಕಣ್ಣು, ನಯನ; ಕಸ್ತೂರಿ: ಸುಗಂಧ ದ್ರವ್ಯ; ಕದಪು: ಕೆನ್ನೆ; ಶೃಂಗಾರ: ಅಲಂಕಾರ, ಭೂಷಣ; ವಿಪರೀತ:ವಿರುದ್ಧವಾದ; ಹೇಳು: ತಿಳಿಸು;

ಪದವಿಂಗಡಣೆ:
ತೇರಿನಲಿ +ಚಾಚಿದನು +ಮೆಲ್ಲನೆ
ಭಾರಿ +ಧನುವನು +ಕಯ್ಯ +ಕಣೆಗಳನ್
ಓರೆಯಲಿ +ಸೈತಿರಿಸೆ +ಕಂಡನು +ಮತ್ತೆ +ಮುರವೈರಿ
ಹಾರವೇಕೈ+ ಕಂಗಳಲಿ+ ಕ
ಸ್ತೂರಿ+ಏಕೈ+ ಕದಪಿನಲಿ +ಶೃಂ
ಗಾರವಿದು +ವಿಪರೀತ+ಏನೈ +ಪಾರ್ಥ +ಹೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹಾರವೇಕೈ ಕಂಗಳಲಿ ಕಸ್ತೂರಿಯೇಕೈ ಕದಪಿನಲಿ ಶೃಂಗಾರವಿದು ವಿಪರೀತವೇನೈ ಪಾರ್ಥ ಹೇಳೆಂದ

ಪದ್ಯ ೪೫: ಯುದ್ಧಕ್ಕೆ ಉತ್ತರನ ಸಿದ್ಧತೆ ಹೇಗಾಯಿತು?

ಮಂಗಳಾರತಿಯೆತ್ತಿದರು ನಿಖಿ
ಳಾಂಗನೆಯರುತ್ತರಗೆ ನಿಜ ಸ
ರ್ವಾಂಗ ಶೃಂಗಾರದಲಿ ಹೊಳೆವುತ ಬಂದು ರಥವೇರಿ
ಹೊಂಗೆಲಸಮಯ ಕವಚವನು ಪಾ
ರ್ಥಂಗೆ ಕೊಟ್ಟನು ಜೋಡಿಸೀಸಕ
ದಂಗಿಗಳನಳವಡಿಸಿ ರಾಜಕುಮಾರನನುವಾದ (ವಿರಾಟ ಪರ್ವ, ೬ ಸಂಧಿ, ೪೫ ಪದ್ಯ)

ತಾತ್ಪರ್ಯ:
ಆಸ್ಥಾನದಲ್ಲಿದ್ದ ಹೆಣ್ಣುಮಕ್ಕಳು ಉತ್ತರನಿಗೆ ಜಯದ ಆರತಿಯನ್ನು ಎತ್ತಿದರು, ಸರ್ವಾಂಗದಲ್ಲೂ ಶೃಂಗಾರಮಾಡಿಕೊಂಡು ಉತ್ತರನು ಸಿದ್ಧನಾಗಿ ರಥವನ್ನು ಏರಿದನು. ಬಂಗಾರದ ಕುಸುರಿ ಕೆಲಸದ ಕವಚವನ್ನು ಅರ್ಜುನನಿಗೆ ಕೊಟ್ಟು ತಾನು ಅಂಗರಕ್ಷೆ, ಶಿರಸ್ತ್ರಾಣಗಳನ್ನು ಧರಿಸಿ ಉತ್ತರನು ಸಿದ್ಧನಾದನು.

ಅರ್ಥ:
ಮಂಗಳ: ಶುಭ; ಆರತಿ: ನೀರಾಂಜನ; ಎತ್ತು: ತೋರಿಸು, ಬೆಳಗು; ನಿಖಿಳ: ಸರ್ವ; ಅಂಗನೆ:ಸ್ತ್ರೀ; ನಿಖಿಳಾಂಗನೆ: ಎಲ್ಲಾ ಹೆಣ್ಣುಮಕ್ಕಳು; ನಿಜ: ನೈಜ; ಸರ್ವಾಂಗ: ಎಲ್ಲಾ ದೇಹದ ಅಂಗ; ಶೃಂಗಾರ: ಅಲಂಕಾರ; ಹೊಳೆ: ಕಾಂತಿಯುಕ್ತ; ಬಂದು: ಆಗಮಿಸಿ; ರಥ: ತೇರು, ಬಂಡಿ; ಏರು: ಹತ್ತು; ಹೊಂಗೆಲಸಮಯ: ಬಂಗಾರದಿಂದು ಕೂಡಿದ; ಹೊನ್ನು; ಚಿನ್ನ; ಕೆಲಸ:ಕಾರ್ಯ; ಕವಚ: ಹೊದಿಕೆ; ಕೊಟ್ಟು: ನೀಡು; ಜೋಡಿ: ಜೊತೆ; ಸೀಸಕ: ಶಿರಸ್ತ್ರಾಣ; ಅಂಗಿ: ಬಟ್ಟೆ, ಕವಚ; ಅಳವಡಿಸು: ಜೋಡಿಸು; ಅನುವು: ರೀತಿ; ಅನುವಾಗು: ಸಿದ್ಧವಾಗು;

ಪದವಿಂಗಡಣೆ:
ಮಂಗಳಾರತಿ+ಯೆತ್ತಿದರು +ನಿಖಿ
ಳಾಂಗನೆಯರ್+ಉತ್ತರಗೆ +ನಿಜ +ಸ
ರ್ವಾಂಗ +ಶೃಂಗಾರದಲಿ +ಹೊಳೆವುತ+ ಬಂದು +ರಥವೇರಿ
ಹೊಂಗೆಲಸಮಯ +ಕವಚವನು +ಪಾ
ರ್ಥಂಗೆ +ಕೊಟ್ಟನು +ಜೋಡಿ+ಸೀಸಕದ್
ಅಂಗಿಗಳನ್+ಅಳವಡಿಸಿ +ರಾಜಕುಮಾರನ್+ಅನುವಾದ

ಅಚ್ಚರಿ:
(೧) ಉತ್ತರನು ಯುದ್ಧಕ್ಕೆ ಹೋಗುವಾಗ – ಸರ್ವಾಂಗ ಶೃಂಗಾರದಲಿ ಹೊಳೆವುತ ಬಂದನು – ಯುದ್ದಕ್ಕೆ ಶೃಂಗಾರಮಯವಾಗಿ ಹೋಗುತ್ತರೆಯೆ ಎಂದು ಇಲ್ಲಿ ಕವಿ ಮಾರ್ಮಿಕವಾಗಿ ಕೇಳುವಂತಿದೆ

ಪದ್ಯ ೧೯: ಕುಮಾರವ್ಯಾಸ ಭಾರತ ಕಾವ್ಯದ ಹಿರಿಮೆಯೇನು?

ಅರಸುಗಳಿಗಿದು ವೀರ ದ್ವಿಜರಿಗೆ
ಪರಮವೇದದ ಸಾರ ಯೋಗೀ
ಶ್ವರರ ತತ್ವವಿಚಾರ ಮಂತ್ರೀಜನಕೆ ಬುದ್ಧಿಗುಣ
ವಿರಹಿಗಳ ಶೃಂಗಾರ ವಿದ್ಯಾ
ಪರಿಣತರಲಂಕಾರ ಕಾವ್ಯಕೆ
ಗುರುವೆನಲು ರಚಿಸಿದ ಕುಮಾರವ್ಯಾಸ ಭಾರತವ (ಆದಿ ಪರ್ವ, ೧ ಸಂಧಿ, ೧೯ ಪದ್ಯ)

ತಾತ್ಪರ್ಯ:
ಈ ಮಹಾಕಾವ್ಯವು ರಾಜರಿಗೆ ಕ್ಷತ್ರಿಯಧರ್ಮವನ್ನು ತಿಳಿಸಿದರೆ, ಬ್ರಾಹ್ಮಣರಿಗೆ ವೇದದ ಸಾರವನ್ನು ತಿಳಿಸಿ, ಆತ್ಮಜ್ಞಾನಿಗಳಿಗೆ ಆತ್ಮತತ್ವದ ವಿಚಾರವನ್ನು, ಮಂತ್ರಿಗಳಿಗೆ ಬುದ್ಧಿದಾಯಕ, ವಿರಹಿಗಳಿಗೆ ಶೃಂಗಾರರಸ ಭರಿತವಾಗಿ, ವಿದ್ವಾಂಸರಿಗೆ ಅಲಂಕಾರ ಪ್ರಬೋಧಕವಾಗಿರುವ ಈ ಕಾವ್ಯ ಕಾವ್ಯಗಳಿಗೆ ಗುರುವಾಗಿದೆ.

ಅರ್ಥ:
ಅರಸು: ರಾಜ; ವೀರ: ಶೌರ್ಯ; ದ್ವಿಜ: ಬ್ರಾಹ್ಮಣ; ಪರಮ: ಶ್ರೇಷ್ಠ; ವೇದ: ಜ್ಞಾನ; ಸಾರ: ರಸ; ಯೋಗಿ: ಋಷಿ; ತತ್ವ: ಶಾಸ್ತ್ರ; ವಿಚಾರ: ವಿಮರ್ಶೆ; ಮಂತ್ರಿ: ಸಚಿವ; ಬುದ್ಧಿ: ಜ್ಞಾನ; ವಿರಹಿ: ವಿಯೋಗಿ; ಶೃಂಗಾರ: ಭೂಷಣ; ವಿದ್ಯಾ: ವಿದ್ಯೆ, ಜ್ಞಾನ; ಪರಿಣತ:ನೈಪುಣ್ಯ, ಪ್ರೌಢ; ಕಾವ್ಯ: ಪದ್ಯ; ಗುರು: ಆಚಾರ್ಯ; ರಚಿಸು: ರೂಪಿಸು, ಬರೆ;

ಪದವಿಂಗಡಣೆ:
ಅರಸುಗಳಿಗಿದು+ ವೀರ +ದ್ವಿಜರಿಗೆ
ಪರಮವೇದದ +ಸಾರ +ಯೋಗೀ
ಶ್ವರರ +ತತ್ವವಿಚಾರ +ಮಂತ್ರೀಜನಕೆ +ಬುದ್ಧಿಗುಣ
ವಿರಹಿಗಳ +ಶೃಂಗಾರ +ವಿದ್ಯಾ
ಪರಿಣತರ್+ಅಲಂಕಾರ+ ಕಾವ್ಯಕೆ
ಗುರುವ್+ಎನಲು +ರಚಿಸಿದ +ಕುಮಾರವ್ಯಾಸ +ಭಾರತವ

ಅಚ್ಚರಿ:
(೧) ವೀರ, ವೇದದ ಸಾರ, ತತ್ವವಿಚಾರ, ಬುದ್ಧಿಗುಣ, ಶೃಂಗಾರ, ಅಲಂಕಾರ, ಕಾವ್ಯಕೆ ಗುರು – ಕುಮಾರವ್ಯಾಸದ ಹಿರಿಮೆಯನ್ನು ತಿಳಿಸಿರುವುದು