ಪದ್ಯ ೨೩: ಹಾರವೇಕೈ ಕಂಗಳಿ ಎಂದು ಕೃಷ್ಣನು ಅರ್ಜುನನನ್ನು ಏಕೆ ಕೇಳಿದನು?

ತೇರಿನಲಿ ಚಾಚಿದನು ಮೆಲ್ಲನೆ
ಭಾರಿ ಧನುವನು ಕಯ್ಯ ಕಣೆಗಳ
ನೋರೆಯಲಿ ಸೈತಿರಿಸೆ ಕಂಡನು ಮತ್ತೆ ಮುರವೈರಿ
ಹಾರವೇಕೈ ಕಂಗಳಲಿ ಕ
ಸ್ತೂರಿಯೇಕೈ ಕದಪಿನಲಿ ಶೃಂ
ಗಾರವಿದು ವಿಪರೀತವೇನೈ ಪಾರ್ಥ ಹೇಳೆಂದ (ಕರ್ಣ ಪರ್ವ, ೨೬ ಸಂಧಿ, ೨೩ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನ ಕೈಯಲ್ಲಿದ್ದ ಗಾಂಡೀವವನ್ನು ರಥದಲ್ಲಿ ಮೆಲ್ಲನೆ ಇಟ್ಟನು. ಕೈಯಲ್ಲಿದ್ದ ಬಾಣಗಳನ್ನು ಪಕ್ಕಕ್ಕಿಟ್ಟನು. ಇದನ್ನು ನೋಡಿದ ಕೃಷ್ಣನು ಅರ್ಜುನ ಇದೇನಿದು, ಕಣ್ಣಿನಲ್ಲಿ ಹಾರವನ್ನು ಕೆನ್ನೆಯ ಮೇಲೆ ಕಸ್ತೂರಿಯನ್ನು ಏಕೆ ಧರಿಸಿದೆ? ನಿನ್ನ ಅಲಂಕಾರ ತಿರುಮುರುವಾಯಿತು ಎಂದನು.

ಅರ್ಥ:
ತೇರು: ರಥ, ಬಂಡಿ; ಚಾಚು: ಹರಡು; ಮೆಲ್ಲನೆ: ನಿಧಾನವಾಗಿ; ಭಾರಿ: ದೊಡ್ಡ; ಧನು: ಬಿಲ್ಲು; ಕಯ್ಯ: ಹಸ್ತ; ಕಣೆ: ಬಾಣ; ಓರೆ: ವಕ್ರ, ಡೊಂಕು; ಸೈತು: ಸುಮ್ಮನೆ, ಮೌನವಾಗಿ, ನೇರವಾದುದು; ಕಂಡು: ನೋಡು; ಮುರವೈರಿ: ಕೃಷ್ಣ; ಹಾರ: ಮಾಲೆ; ಕಂಗಳು: ಕಣ್ಣು, ನಯನ; ಕಸ್ತೂರಿ: ಸುಗಂಧ ದ್ರವ್ಯ; ಕದಪು: ಕೆನ್ನೆ; ಶೃಂಗಾರ: ಅಲಂಕಾರ, ಭೂಷಣ; ವಿಪರೀತ:ವಿರುದ್ಧವಾದ; ಹೇಳು: ತಿಳಿಸು;

ಪದವಿಂಗಡಣೆ:
ತೇರಿನಲಿ +ಚಾಚಿದನು +ಮೆಲ್ಲನೆ
ಭಾರಿ +ಧನುವನು +ಕಯ್ಯ +ಕಣೆಗಳನ್
ಓರೆಯಲಿ +ಸೈತಿರಿಸೆ +ಕಂಡನು +ಮತ್ತೆ +ಮುರವೈರಿ
ಹಾರವೇಕೈ+ ಕಂಗಳಲಿ+ ಕ
ಸ್ತೂರಿ+ಏಕೈ+ ಕದಪಿನಲಿ +ಶೃಂ
ಗಾರವಿದು +ವಿಪರೀತ+ಏನೈ +ಪಾರ್ಥ +ಹೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹಾರವೇಕೈ ಕಂಗಳಲಿ ಕಸ್ತೂರಿಯೇಕೈ ಕದಪಿನಲಿ ಶೃಂಗಾರವಿದು ವಿಪರೀತವೇನೈ ಪಾರ್ಥ ಹೇಳೆಂದ

ನಿಮ್ಮ ಟಿಪ್ಪಣಿ ಬರೆಯಿರಿ