ಪದ್ಯ ೨೩: ಹಾರವೇಕೈ ಕಂಗಳಿ ಎಂದು ಕೃಷ್ಣನು ಅರ್ಜುನನನ್ನು ಏಕೆ ಕೇಳಿದನು?

ತೇರಿನಲಿ ಚಾಚಿದನು ಮೆಲ್ಲನೆ
ಭಾರಿ ಧನುವನು ಕಯ್ಯ ಕಣೆಗಳ
ನೋರೆಯಲಿ ಸೈತಿರಿಸೆ ಕಂಡನು ಮತ್ತೆ ಮುರವೈರಿ
ಹಾರವೇಕೈ ಕಂಗಳಲಿ ಕ
ಸ್ತೂರಿಯೇಕೈ ಕದಪಿನಲಿ ಶೃಂ
ಗಾರವಿದು ವಿಪರೀತವೇನೈ ಪಾರ್ಥ ಹೇಳೆಂದ (ಕರ್ಣ ಪರ್ವ, ೨೬ ಸಂಧಿ, ೨೩ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನ ಕೈಯಲ್ಲಿದ್ದ ಗಾಂಡೀವವನ್ನು ರಥದಲ್ಲಿ ಮೆಲ್ಲನೆ ಇಟ್ಟನು. ಕೈಯಲ್ಲಿದ್ದ ಬಾಣಗಳನ್ನು ಪಕ್ಕಕ್ಕಿಟ್ಟನು. ಇದನ್ನು ನೋಡಿದ ಕೃಷ್ಣನು ಅರ್ಜುನ ಇದೇನಿದು, ಕಣ್ಣಿನಲ್ಲಿ ಹಾರವನ್ನು ಕೆನ್ನೆಯ ಮೇಲೆ ಕಸ್ತೂರಿಯನ್ನು ಏಕೆ ಧರಿಸಿದೆ? ನಿನ್ನ ಅಲಂಕಾರ ತಿರುಮುರುವಾಯಿತು ಎಂದನು.

ಅರ್ಥ:
ತೇರು: ರಥ, ಬಂಡಿ; ಚಾಚು: ಹರಡು; ಮೆಲ್ಲನೆ: ನಿಧಾನವಾಗಿ; ಭಾರಿ: ದೊಡ್ಡ; ಧನು: ಬಿಲ್ಲು; ಕಯ್ಯ: ಹಸ್ತ; ಕಣೆ: ಬಾಣ; ಓರೆ: ವಕ್ರ, ಡೊಂಕು; ಸೈತು: ಸುಮ್ಮನೆ, ಮೌನವಾಗಿ, ನೇರವಾದುದು; ಕಂಡು: ನೋಡು; ಮುರವೈರಿ: ಕೃಷ್ಣ; ಹಾರ: ಮಾಲೆ; ಕಂಗಳು: ಕಣ್ಣು, ನಯನ; ಕಸ್ತೂರಿ: ಸುಗಂಧ ದ್ರವ್ಯ; ಕದಪು: ಕೆನ್ನೆ; ಶೃಂಗಾರ: ಅಲಂಕಾರ, ಭೂಷಣ; ವಿಪರೀತ:ವಿರುದ್ಧವಾದ; ಹೇಳು: ತಿಳಿಸು;

ಪದವಿಂಗಡಣೆ:
ತೇರಿನಲಿ +ಚಾಚಿದನು +ಮೆಲ್ಲನೆ
ಭಾರಿ +ಧನುವನು +ಕಯ್ಯ +ಕಣೆಗಳನ್
ಓರೆಯಲಿ +ಸೈತಿರಿಸೆ +ಕಂಡನು +ಮತ್ತೆ +ಮುರವೈರಿ
ಹಾರವೇಕೈ+ ಕಂಗಳಲಿ+ ಕ
ಸ್ತೂರಿ+ಏಕೈ+ ಕದಪಿನಲಿ +ಶೃಂ
ಗಾರವಿದು +ವಿಪರೀತ+ಏನೈ +ಪಾರ್ಥ +ಹೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹಾರವೇಕೈ ಕಂಗಳಲಿ ಕಸ್ತೂರಿಯೇಕೈ ಕದಪಿನಲಿ ಶೃಂಗಾರವಿದು ವಿಪರೀತವೇನೈ ಪಾರ್ಥ ಹೇಳೆಂದ

ಪದ್ಯ ೯೦: ಜರಾಸಂಧನು ಕೃಷ್ಣ ಭೀಮಾರ್ಜುನರು ಸಿದ್ಧರಾಗಲು ಏನನ್ನು ತರಿಸಿದನು?

ತರಿಸಿದನು ಚಂದನದ ಸಾದಿನ
ಭರಣಿಗಳ ಕರ್ಪೂರ ವರಕ
ತ್ತುರಿ ಜವಾಜಿ ಪ್ರಮುಖ ಬಹುವಿಧಯಕ್ಷಕರ್ದಮವ
ಹರಿ ವೃಕೋದರ ಪಾರ್ಥರಿದಿರಲಿ
ಭರಣಿಗಳ ನೂಕಿದನು ಮಾಲ್ಯಾಂ
ಬರ ವಿಲೇಪನದಿಂದಲಂಕರಿಸಿದರು ನಿಜತನುವ (ಸಭಾ ಪರ್ವ, ೨ ಸಂಧಿ, ೯೦ ಪದ್ಯ)

ತಾತ್ಪರ್ಯ:
ಯುದ್ಧಕ್ಕೆ ತಯಾರಾಗಲು ತಮ್ಮ ಎದುರಾಳಿಗಳು ಸಿದ್ಧರಾಗಲು, ಜರಾಸಂಧನು ಚಂದನ, ಸಾದು ಮೊದಲಾದವುಗಳನ್ನು, ಕಸ್ತೂರಿ ಜವಾಜಿ ಮೊದಲಾದವುಗಳಿಂದ ಮಾಡಿದ ಯಕ್ಷಕರ್ದಮವನ್ನೂ ತರಿಸಿ, ಕೃಷ್ಣ, ಭೀಮ, ಅರ್ಜುನರ ಎದುರಿಗೆ ನೂಕಿದನು. ಅವರು ಉತ್ತಮವಾದ ಬಟ್ಟೆ ವಿಲೇಪನ ಹೂಗಳಿಂದ ಅಲಂಕಾರ ಮಾಡಿಕೊಂಡರು.

ಅರ್ಥ:
ತರಿಸು: ಬರೆಮಾಡು; ಚಂದನ: ಗಂಧ; ಸಾದಭರ ಸಿಂಧೂರ; ಭರಣಿ:ಕುಂಕುಮ ಮತ್ತು ಕಣ್ಕಪ್ಪನ್ನು ಇಡಲು ಮಾಡಿರುವ ಸಣ್ಣ ಡಬ್ಬಿ; ಕರ್ಪೂರ: ಒಂದು ಬಗೆಯ ಸುಗಂಧ ದ್ರವ್ಯ; ಕತ್ತುರಿ: ಕಸ್ತೂರಿ ಮೃಗದ ನಾಭಿಯಿಂದ ದೊರೆಯುವ ದ್ರವ್ಯ, ಮೃಗಮದ; ಜವಾಜಿ: ಪುನುಗು, ಒಂದು ಬಗೆಯ ಸುಗಂಧ ದ್ರವ್ಯ; ಪ್ರಮುಖ: ಮುಖ್ಯ; ವರ: ಶ್ರೇಷ್ಠ; ಬಹು: ಬಹಳ; ವಿಧ: ಬಗೆ; ಯಕ್ಷಕರ್ದಮ: ಪಚ್ಚಕರ್ಪೂರ ಅಗರು ಕಸ್ತೂರಿಗಳಿಂದ ಮಾಡಿದ ಅನುಲೇಪನ); ಹರಿ: ಕೃಷ್ಣ; ವೃಕೋದರ: ಭೀಮ; ಇದಿರು: ಎದುರು; ನೂಕು: ತಳ್ಳು; ಮಾಲೆ: ಸರ; ಅಂಬರ: ಬಟ್ಟೆ; ವಿಲೇಪನ: ಹಚ್ಚು; ಅಲಂಕರಿಸು: ಶೃಂಗಾರಮಾಡು; ನಿಜ: ತಮ್ಮ; ತನು: ದೇಹ;

ಪದವಿಂಗಡಣೆ:
ತರಿಸಿದನು +ಚಂದನದ +ಸಾದಿನ
ಭರಣಿಗಳ +ಕರ್ಪೂರ +ವರ+ಕ
ತ್ತುರಿ +ಜವಾಜಿ +ಪ್ರಮುಖ +ಬಹುವಿಧ+ಯಕ್ಷಕರ್ದಮವ
ಹರಿ +ವೃಕೋದರ+ ಪಾರ್ಥರ್+ಇದಿರಲಿ
ಭರಣಿಗಳ +ನೂಕಿದನು +ಮಾಲ್ಯಾಂ
ಬರ +ವಿಲೇಪನದಿಂದ್+ಅಲಂಕರಿಸಿದರು+ ನಿಜತನುವ

ಅಚ್ಚರಿ:
(೧) ಜರಾಸಂಧನ ಅಹಂಕಾರವನ್ನು ಚಿತ್ರಿಸಿರುವುದು: ಭರಣಿಗಳ ನೂಕಿದನು
(೨) ಅಲಂಕರಿಸಲು ಬಳಸುತ್ತಿದ್ದ ವಸ್ತುಗಳು – ಚಂದನ, ಸಾದು, ಕರ್ಪೂರ, ಕಸ್ತೂರಿ, ಜವಾಜಿ, ಯಕ್ಷಕರ್ದಮ, ಮಾಲೆ, ಅಂಬರ,

ಪದ್ಯ ೧೦: ಬಿರುಗಾಳಿ ಕುಸಿಯಲು ಕಾರಣವೇನು?

ಕಾರಣೆಯ ಕುಂಕುಮದ ಸಾದಿನ
ಸಾರಣೆಯ ನೆಲೆಗಟ್ಟುಗಳ ಕ
ರ್ಪೂರ ಧೂಳಿಯ ಹೊಳಹುಗಳ ಪನ್ನೀರ ಪಕ್ಕಲೆಯ
ಚಾರು ಚಳೆಯದ ಕೆಸರಿಡುವ ಕ
ಸ್ತೂರಿಗಳ ಪೂರಾಯ ಪರಿಮಳ
ಭಾರದಲಿ ಬಿರುಗಾಳಿ ಕುಸಿದುದು ಹೇಳಲೇನೆಂದ (ಆದಿ ಪರ್ವ, ೧೨ ಸಂಧಿ, ೧೦ ಪದ್ಯ)

ತಾತ್ಪರ್ಯ:
ಮನೆಗಳ ಹೊರಾಂಗಣ ಅಲಂಕಾರವನ್ನು ವರ್ಣಿಸಿದ ಮೇಲೆ, ಮನೆಯ ಒಳಭಾಗವನ್ನು ಹೇಗೆ ಸಿಂಗರಿಸಿದ್ದಾರೆ ಎಂದು ಇಲ್ಲಿ ವಿವರಿಸಿದೆ. ಸುಗಂಧಮಯವಾಗಿಸಲು, ಪರಿಮಳದ ಲೇಪನವನ್ನು ಗೋಡೆಯ ಕೆಳಭಾಗದಲ್ಲಿ ಬಳೆದು, ನೆಲವನ್ನು ಕರ್ಪೂರದ ಧೂಳಿನಿಂದ ಸಮವಾಗಿ ಹರಡಿ, ದೊಡ್ಡಪಾತ್ರೆಗಳಲ್ಲಿ (ಪಕ್ಕಲೆ) ಪನ್ನೀರನ್ನಿಟ್ಟು, ನೆಲನೆನೆಯುವಂತೆ ಈ ನೀರನ್ನು ಚುಮುಕಿಸಿದರು, ಈ ಸುಗಂಧಮಯವಾದ ಆ ಕೆಸರಿನ ಪರಿಮಳದ ಭಾರಕ್ಕೆ ಬಿರುಗಾಳಿಯು ಸಹ ಕುಸಿಯಿತು.

ಅರ್ಥ:
ಕಾರಣೆ: ಮೇಜುಕಟ್ಟು, ಗೋಡೆಯ ಕೆಳಭಾಗದಲ್ಲಿ ಬಳಿಯುವ ಬಣ್ಣದ ಗೆರೆ; ಕುಂಕುಮ: ಕೆಂಪು ಬಣ್ಣ ಸೂಚಿಸುವ ಪದ; ಸಾದು: ಪರಿಮಳದ ಲೇಪನ; ಸಾರಣೆ: ಸಾರುವಿಕೆ, ಗೋಮಯ ಅಥವ ಸುಗಂದದ್ರವ್ಯದಿಂದ ನೆಲವನ್ನು ಸಾರಿಸುವುದು; ನೆಲೆಗಟ್ಟು: ಸಮಮಾಡಿದ ನೆಲ; ಕರ್ಪೂರ: ಕಪ್ಪುರ, ಒಂದು ಸುಗಂಧ ದ್ರವ್ಯ; ಧೂಳಿ: ಮಣ್ಣಿನಪುಡಿ, ಧೂಳು; ಹೊಳಹು: ಕಾಂತಿ; ಪನ್ನೀರ: ಸುಗಂಧ ದ್ರವ್ಯ; ಪಕ್ಕಲೆ: ಒಂದು ಬಗೆಯ ಪಾತ್ರೆ, ಕೊಪ್ಪರಿಗೆ; ಚಾರು: ಸುಂದರ; ಚಳೆ: ಸಿಂಪಡಿಸು, ಚಿಮುಕಿಸು; ಕೆಸರು: ಪಂಕ, ರಾಡಿ; ಕಸ್ತೂರಿ: ಸುಗಂಧ ದ್ರವ್ಯ; ಪೂರಾಯ: ಅತ್ಯಧಿಕವಾದ, ಸಮಗ್ರತೆ; ಪರಿಮಳ: ಸುವಾಸನೆ; ಭಾರ: ಘನ; ಬಿರುಗಾಳಿ: ಜೋರಾದ ಗಾಳಿ, ಸುಂಟರಗಾಳಿ; ಕುಸಿ: ಕೆಳಗೆ ಬೀಳು; ಹೇಳು: ಉಚ್ಚರಿಸು, ತಿಳಿಸು;

ಪದವಿಂಗಡನೆ:
ಕಾರಣೆಯ +ಕುಂಕುಮದ +ಸಾದಿನ
ಸಾರಣೆಯ +ನೆಲೆಗಟ್ಟುಗಳ+ ಕ
ರ್ಪೂರ +ಧೂಳಿಯ +ಹೊಳಹುಗಳ+ ಪನ್ನೀರ +ಪಕ್ಕಲೆಯ
ಚಾರು +ಚಳೆಯದ +ಕೆಸರಿಡುವ+ ಕ
ಸ್ತೂರಿಗಳ+ ಪೂರಾಯ +ಪರಿಮಳ
ಭಾರದಲಿ+ ಬಿರುಗಾಳಿ+ ಕುಸಿದುದು+ ಹೇಳಲೇನೆಂದ

ಅಚ್ಚರಿ:
(೧) ಜೋಡಿ ಪದಗಳ ಬಳಕೆ: ಕಾರಣೆಯ ಕುಂಕುಮದ, ಸಾದಿನ ಸಾರಣೆಯ, ಪನ್ನೀರ ಪಕ್ಕಲೆಯ, ಚಾರು ಚಳೆಯದ ಕೆಸರಿಡುವ ಕಸ್ತೂರಿಗಳ, ಪೂರಾಯ ಪರಿಮಳ, ಭಾರದಲಿ ಬಿರುಗಾಳಿ
(೨) ಪರಿಮಳ, ಸುಗಂಧ ದ ಅರ್ಥವನ್ನು ನೀಡುವ ಪದಗಳ ಬಳಕೆ: ಸಾದಿನ, ಕರ್ಪೂರ, ಪನ್ನೀರು, ಕಸ್ತೂರಿ, ಪರಿಮಳ
(೩) ಕಾರಣೆ, ಸಾರಣೆ – ಪ್ರಾಸ ಪದ