ಪದ್ಯ ೭೮: ಅಭಿಮನ್ಯು ಲಕ್ಷಣನನ್ನು ಹೇಗೆ ಸಂಹರಿಸಿದನು?

ಉರಗನಿಕ್ಕಡಿಗಾರ ಹುಲ್ಲಿನ
ಸರವಿಗಂಜುವುದುಂಟೆ ಕರ್ಣಾ
ದ್ಯರನು ಕಡ್ಡಿಗೆ ಬಗೆಯನೀ ಹೂಹೆಗಳ ಗಣಿಸುವನೆ
ಎರಡು ಶರದಲಿ ಲಕ್ಷಣನ ಸಂ
ಹರಿಸಿದನು ಹದಿನೈದು ಬಾಣದ
ಲರಿದನುಳಿದ ಕುಮಾರಕರನಭಿಮನ್ಯು ನಿಮಿಷದಲಿ (ದ್ರೋಣ ಪರ್ವ, ೫ ಸಂಧಿ, ೭೮ ಪದ್ಯ)

ತಾತ್ಪರ್ಯ:
ಸರ್ಪವು ಎರಡು ತುಂಡಾದ ಹುಲ್ಲಿನ ಹಗ್ಗಕ್ಕೆ ಅಂಜುವುದೇ? ಕರ್ಣಾದಿಗಳನ್ನೇ ಕಡ್ಡಿಗೂ ಸಮವಲ್ಲವೆಂದು ಭಾವಿಸುವವನು, ಈ ಬಿದಿರು ಬೊಂಬೆಗಳನ್ನು ಲೆಕ್ಕಿಸುವವನೇ? ಎರಡು ಬಾಣಗಳಿಂದ ಲಕ್ಷಣನನ್ನು ಸಂಹರಿಸಿ, ಹದಿನೈದು ಬಾಣಗಳಿಂದ ಉಳಿದವರೆಲ್ಲರನ್ನೂ ಕ್ಷಣಮಾತ್ರದಲ್ಲಿ ಕೊಂದನು.

ಅರ್ಥ:
ಉರಗ: ಹಾವು; ಇಕ್ಕಡಿಗಡಿ: ಎರಡು ತುಂಡಾಗಿ ಕತ್ತರಿಸು; ಹುಲ್ಲು: ತೃಣ; ಸರವಿ: ಹಗ್ಗ, ಹುರಿ; ಅಂಜು: ಹೆದರು; ಆದಿ: ಮುಂತಾದ; ಕಡ್ಡಿ: ಮರದತುಂಡು, ಕಾಷ್ಠ; ಬಗೆ: ಆಲೋಚನೆ, ಯೋಚನೆ; ಹೂಹೆ: ಹಸುಳೆ, ಶಿಶು; ಗಣಿಸು: ಲೆಕ್ಕಿಸು; ಶರ: ಬಾಣ; ಸಂಹರ: ನಾಶ; ಅರಿ: ನಾಶ; ಉಳಿದ: ಮಿಕ್ಕ; ಕುಮಾರ: ಪುತ್ರರು; ನಿಮಿಷ: ಕ್ಷಣಮಾತ್ರ;

ಪದವಿಂಗಡಣೆ:
ಉರಗನ್+ಇಕ್ಕಡಿಗಾರ +ಹುಲ್ಲಿನ
ಸರವಿಗ್+ಅಂಜುವುದುಂಟೆ +ಕರ್ಣಾ
ದ್ಯರನು +ಕಡ್ಡಿಗೆ +ಬಗೆಯನ್+ಈ+ ಹೂಹೆಗಳ+ ಗಣಿಸುವನೆ
ಎರಡು+ ಶರದಲಿ +ಲಕ್ಷಣನ+ ಸಂ
ಹರಿಸಿದನು +ಹದಿನೈದು +ಬಾಣದಲ್
ಅರಿದನ್+ಉಳಿದ +ಕುಮಾರಕರನ್+ಅಭಿಮನ್ಯು +ನಿಮಿಷದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಉರಗನಿಕ್ಕಡಿಗಾರ ಹುಲ್ಲಿನಸರವಿಗಂಜುವುದುಂಟೆ
(೨) ಕರ್ಣನನ್ನು ಹೋಲಿಸಿದ ಪರಿ – ಕರ್ಣಾದ್ಯರನು ಕಡ್ಡಿಗೆ ಬಗೆಯನೀ ಹೂಹೆಗಳ ಗಣಿಸುವನೆ
(೩) ಶರ, ಬಾಣ – ಸಮಾನಾರ್ಥಕ ಪದ

ಪದ್ಯ ೨೬: ಕಂಕನು ಯಾವ ಸಲಹೆಯನ್ನು ನೀಡಿದನು?

ಕರೆಸು ನಿಮ್ಮಯ ಮಲ್ಲರನು ಸಂ
ಗರವ ಜಯಿಸಲಿ ಜಯಿಸದಿರಲಾ
ಪರಿಯ ಬಿಡುವರೆ ರಾಯಲಕ್ಷಣಗಳನು ವಹಿಸಿರ್ದು
ಕರೆಸಿದರೆ ತಮತಮಗೆ ತವಕದಿ
ಹಿರಿದು ಶೃಂಗಾರವನು ಮಾಡಿಯೆ
ನೆರೆದು ಬಂದರು ಮೊರೆವ ಡೌಡೆಯ ವಾದ್ಯ ರಭಸದಲಿ (ವಿರಾಟ ಪರ್ವ, ೪ ಸಂಧಿ, ೨೬ ಪದ್ಯ)

ತಾತ್ಪರ್ಯ:
ಕಂಕನು ತನ್ನ ಅಭಿಪ್ರಾಯವನ್ನು ಹೇಳುತ್ತಾ, ನಿಮ್ಮ ಜಟ್ಟಿಗಳನ್ನು ಕರೆಸು, ಅವರು ಮಲ್ಲಯುದ್ಧದಲ್ಲಿ ಜಯಿಸಲಿ ಬಿಡಲಿ, ರಾಜ ಮರ್ಯಾದೆಯನ್ನು ಬಿಡಬಾರದು ಎನಲು, ವಿರಾಟನು ಮಲ್ಲರಿಗೆ ಹೇಳಿಕಳುಹಿಸಿದನು. ಮಲ್ಲರು ಅವಸರದಲ್ಲಿ ತಮಗೆ ಒಪ್ಪುವಾಗಿ ಅಲಂಕಾರ ಮಾಡಿಕೊಂಡು ನಗಾರಿ ಮುಂತಾದ ವಾದ್ಯಗಳನ್ನು ನುಡಿಸುತ್ತಾ ಆಸ್ಥಾನಕೆ ಬಂದರು.

ಅರ್ಥ:
ಕರೆಸು: ಬರೆಮಾಡು; ಮಲ್ಲ: ಜಟ್ಟಿ; ಸಂಗರ: ಯುದ್ಧ; ಜಯಿಸು: ವಿಜಯ, ಗೆಲುವು; ಪರಿ: ರೀತಿ; ಬಿಡು: ತೊರೆ; ರಾಯ: ರಾಜ; ಲಕ್ಷಣ: ಗುರುತು, ಚಿಹ್ನೆ; ವಹಿಸು: ಸಾಗು, ಮುಂದುವರಿ; ಕರೆಸು: ಬರೆಮಾಡು; ತವಕ: ತೊಂದರೆ; ಹಿರಿ: ದೊಡ್ಡ; ಶೃಂಗಾರ: ಚೆಲುವು; ನೆರೆ: ಪಕ್ಕ, ಪಾರ್ಶ್ವ; ಬಂದು: ಆಗಮಿಸು; ಮೊರೆ: ಧ್ವನಿ ಮಾಡು; ಡೌಡೆ: ನಗಾರಿ; ವಾದ್ಯ: ಸಂಗೀತದ ಸಾಧನ; ರಭಸ: ವೇಗ;

ಪದವಿಂಗಡಣೆ:
ಕರೆಸು +ನಿಮ್ಮಯ +ಮಲ್ಲರನು +ಸಂ
ಗರವ +ಜಯಿಸಲಿ+ ಜಯಿಸದಿರಲ್+ಆ
ಪರಿಯ +ಬಿಡುವರೆ +ರಾಯ+ಲಕ್ಷಣಗಳನು+ ವಹಿಸಿರ್ದು
ಕರೆಸಿದರೆ+ ತಮತಮಗೆ+ ತವಕದಿ
ಹಿರಿದು+ ಶೃಂಗಾರವನು+ ಮಾಡಿಯೆ
ನೆರೆದು +ಬಂದರು +ಮೊರೆವ +ಡೌಡೆಯ +ವಾದ್ಯ +ರಭಸದಲಿ

ಅಚ್ಚರಿ:
(೧) ಜಯಿಸು, ಜಯಿಸದಿರ್ – ವಿರುದ್ಧ ಪದ, ಜಯ ಪದದ ಬಳಕೆ

ಪದ್ಯ ೭೧: ಯಜ್ಞಕುಂಡದಿಂದ ಬಂದವನ ಲಕ್ಷಣ ಹೇಗಿತ್ತು?

ಅರಸ ಕೇಳೈ ಕುಂಡ ಮಧ್ಯದೊ
ಳುರಿಯ ಕರುವಿಟ್ಟೆರಕಿದರೊ ಭಾ
ಸುರ ಮಹಾನಲನಪರರೂಪೋ ತಾನಿದೇನೆನಲು
ಶರವಡಾಯುಧ ಚಾಪ ವರ್ಮೋ
ತ್ಕರ ಸಹಿತ ರೌದ್ರಾಂಗನಾಗವ
ತರಿಸಿದನು ಪಾಂಚಾಲಭೂಪತಿ ಭುಜವ ಸೂಳೈಸೆ (ಆದಿ ಪರ್ವ, ೭ ಸಂಧಿ, ೭೧ ಪದ್ಯ)

ತಾತ್ಪರ್ಯ:
ಯಾಜ, ಉಪಯಾಜರ ನೇತೃತ್ವದಲ್ಲಿ ನಡೆದ ಪುತ್ರಕಾಮೇಷ್ತಿಯಾಗವು ಸಾಂಗವಾಗಿ ನಡೆಯಲು, ಯಜ್ಞಕುಂಡದ ಮಧ್ಯದಿಂದ ಉರಿಯನ್ನು ಎರಕವಿಟ್ಟು ಮಾಡಿದರೋ, ದೀಪ್ತತೇಜನಾದ ಯಜ್ಞೇಶ್ವರನ ಇನ್ನೊಂದು ರೂಪವೋ ಎನ್ನುವಂತೆ ಬಿಲ್ಲು, ಬಾಣ,ಕತ್ತಿಗಳನ್ನು ಹಿಡಿದು, ಕವಚವನ್ನು ಧರಿಸಿ ಭಯಂಕರ ತೇಜಸ್ವಿಯು ಎದ್ದುಬಂದುದನ್ನು ಕಂಡು ದ್ರುಪದನು ಸಂತೋಷಗೊಂಡನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಕುಂಡ: ಹೋಮಕಾರ್ಯಕ್ಕೆ ನೆಲದಲ್ಲಿ ಮಾಡಿದ ಕುಣಿ, ಗುಣಿ; ಮಧ್ಯ: ನಡುವಿನ ಭಾಗ; ಉರಿ: ಜ್ವಲಿಸು, ಸುಡು; ಕರು: ಎರಕ ಹೊಯ್ಯುವುದಕ್ಕಾಗಿ ಮಾಡಿದ ಅಚ್ಚು, ಎರಕದ ಬೊಂಬೆ, ತಳಹದಿ, ಹಿರಿಮೆ; ಎರಕೆ: ಕಾಯಿಸಿದ ಲೋಹದ ದ್ರವವನ್ನು ಅಚ್ಚಿಗೆ ಎರೆಯುವಿಕೆ, ಪ್ರೀತಿ, ಅನುರಾಗ; ಭಾಸುರ: ಅಂದ, ಸೊಗಸು, ಶೂರ, ಕಲಿ; ಮಹಾ: ಮಹತ್ತ್ವ, ಶ್ರೇಷ್ಠ; ನಲ: ನಿಷೇಧದೇಶದ ರಾಜ; ಅಪರ: ಅತ್ಯುತ್ತಮವಾದುದು, ಮನೋಹರ; ರೂಪ: ಆಕಾರ;
ಶರ: ಬಾಣ; ಆಯುಧ: ಶಸ್ತ್ರ; ಚಾಪ: ಬಿಲ್ಲು; ವರ್ಮ: ಅಂಗರಕ್ಷೆಗಾಗಿ ತೊಡುವ ಉಕ್ಕಿನ ಕವಚ; ಸಹಿತ: ಜೊತೆ; ರೌದ್ರ: ಭಯಂಕರ; ಅಂಗ: ಭಾಗ; ಆವತರಿಸು: ಹುಟ್ಟು, ಕಾಣಿಸಿಕೊ; ಭೂಪತಿ: ರಾಜ; ಭುಜ:ಸೂಳೈಸು: ಗಟ್ಟಿಯಾಗಿ ಧ್ವನಿ ಮಾಡು, ಅಬ್ಬರಿಸು, ಹೊಡೆ; ಭುಜ: ತೋಳು, ಬಾಹು;

ಪದವಿಂಗಡನೆ:
ಅರಸ+ ಕೇಳೈ+ ಕುಂಡ +ಮಧ್ಯದೊಳ್+
ಉರಿಯ +ಕರುವಿಟ್ಟ್+ಎರಕಿದರೊ+ ಭಾ
ಸುರ +ಮಹಾ+ನಲನ+ಅಪರರೂಪೋ +ತಾನ್+ಇದೇನ್+ಎನಲು
ಶರವಡ್+ಆಯುಧ+ ಚಾಪ +ವರ್ಮೋ
ತ್ಕರ+ ಸಹಿತ+ ರೌದ್ರಾಂಗನ್+ಆಗ್+ಅವ
ತರಿಸಿದನು +ಪಾಂಚಾಲ+ಭೂಪತಿ+ ಭುಜವ+ ಸೂಳೈಸೆ

ಅಚ್ಚರಿ:
(೧) ಅರಸ, ಭೂಪತಿ – ರಾಜ ಪದದ ಸಮಾನಾರ್ಥಕ ಪದ
(೨) ಉಪಮಾನಗಳ ಬಳಕೆ: ಉರಿಯ ಕರುವಿಟ್ಟೆರಕಿದರೊ, ಮಹಾನಲನಪರರೂಪೋ