ಪದ್ಯ ೧೯: ಕುಮಾರವ್ಯಾಸ ಭಾರತ ಕಾವ್ಯದ ಹಿರಿಮೆಯೇನು?

ಅರಸುಗಳಿಗಿದು ವೀರ ದ್ವಿಜರಿಗೆ
ಪರಮವೇದದ ಸಾರ ಯೋಗೀ
ಶ್ವರರ ತತ್ವವಿಚಾರ ಮಂತ್ರೀಜನಕೆ ಬುದ್ಧಿಗುಣ
ವಿರಹಿಗಳ ಶೃಂಗಾರ ವಿದ್ಯಾ
ಪರಿಣತರಲಂಕಾರ ಕಾವ್ಯಕೆ
ಗುರುವೆನಲು ರಚಿಸಿದ ಕುಮಾರವ್ಯಾಸ ಭಾರತವ (ಆದಿ ಪರ್ವ, ೧ ಸಂಧಿ, ೧೯ ಪದ್ಯ)

ತಾತ್ಪರ್ಯ:
ಈ ಮಹಾಕಾವ್ಯವು ರಾಜರಿಗೆ ಕ್ಷತ್ರಿಯಧರ್ಮವನ್ನು ತಿಳಿಸಿದರೆ, ಬ್ರಾಹ್ಮಣರಿಗೆ ವೇದದ ಸಾರವನ್ನು ತಿಳಿಸಿ, ಆತ್ಮಜ್ಞಾನಿಗಳಿಗೆ ಆತ್ಮತತ್ವದ ವಿಚಾರವನ್ನು, ಮಂತ್ರಿಗಳಿಗೆ ಬುದ್ಧಿದಾಯಕ, ವಿರಹಿಗಳಿಗೆ ಶೃಂಗಾರರಸ ಭರಿತವಾಗಿ, ವಿದ್ವಾಂಸರಿಗೆ ಅಲಂಕಾರ ಪ್ರಬೋಧಕವಾಗಿರುವ ಈ ಕಾವ್ಯ ಕಾವ್ಯಗಳಿಗೆ ಗುರುವಾಗಿದೆ.

ಅರ್ಥ:
ಅರಸು: ರಾಜ; ವೀರ: ಶೌರ್ಯ; ದ್ವಿಜ: ಬ್ರಾಹ್ಮಣ; ಪರಮ: ಶ್ರೇಷ್ಠ; ವೇದ: ಜ್ಞಾನ; ಸಾರ: ರಸ; ಯೋಗಿ: ಋಷಿ; ತತ್ವ: ಶಾಸ್ತ್ರ; ವಿಚಾರ: ವಿಮರ್ಶೆ; ಮಂತ್ರಿ: ಸಚಿವ; ಬುದ್ಧಿ: ಜ್ಞಾನ; ವಿರಹಿ: ವಿಯೋಗಿ; ಶೃಂಗಾರ: ಭೂಷಣ; ವಿದ್ಯಾ: ವಿದ್ಯೆ, ಜ್ಞಾನ; ಪರಿಣತ:ನೈಪುಣ್ಯ, ಪ್ರೌಢ; ಕಾವ್ಯ: ಪದ್ಯ; ಗುರು: ಆಚಾರ್ಯ; ರಚಿಸು: ರೂಪಿಸು, ಬರೆ;

ಪದವಿಂಗಡಣೆ:
ಅರಸುಗಳಿಗಿದು+ ವೀರ +ದ್ವಿಜರಿಗೆ
ಪರಮವೇದದ +ಸಾರ +ಯೋಗೀ
ಶ್ವರರ +ತತ್ವವಿಚಾರ +ಮಂತ್ರೀಜನಕೆ +ಬುದ್ಧಿಗುಣ
ವಿರಹಿಗಳ +ಶೃಂಗಾರ +ವಿದ್ಯಾ
ಪರಿಣತರ್+ಅಲಂಕಾರ+ ಕಾವ್ಯಕೆ
ಗುರುವ್+ಎನಲು +ರಚಿಸಿದ +ಕುಮಾರವ್ಯಾಸ +ಭಾರತವ

ಅಚ್ಚರಿ:
(೧) ವೀರ, ವೇದದ ಸಾರ, ತತ್ವವಿಚಾರ, ಬುದ್ಧಿಗುಣ, ಶೃಂಗಾರ, ಅಲಂಕಾರ, ಕಾವ್ಯಕೆ ಗುರು – ಕುಮಾರವ್ಯಾಸದ ಹಿರಿಮೆಯನ್ನು ತಿಳಿಸಿರುವುದು