ಪದ್ಯ ೩೦: ದ್ರೋಣನು ತನ್ನ ಪರಿಚಯವನ್ನು ದ್ವಾರಪಾಲಕನಿಗೆ ಹೇಗೆ ಮಾಡಿದನು?

ಬಂದನೀತನು ದ್ರುಪದ ರಾಯನ
ಮಂದಿರಕೆಯಾ ಬಾಗಿಲವನೊಡ
ನೆಂದನೆಲವೋ ನಾವು ನಿಮ್ಮರಸಂಗೆ ಪೂರ್ವದಲಿ
ಸಂದ ಮಿತ್ರರು ದ್ರೋಣಮುನಿಪತಿ
ಯೆಂದು ನಮ್ಮಭಿದಾನ ನೀ ಹೇ
ಳೆಂದು ಕಳುಹಲು ಬಂದು ಬಿನ್ನಹ ಮಾಡಿದನು ಹದನ (ಆದಿ ಪರ್ವ, ೬ ಸಂಧಿ, ೩೦ ಪದ್ಯ)

ತಾತ್ಪರ್ಯ:
ದ್ರೋಣನು ದ್ರುಪದರಾಜನ ಅರಮನೆಗೆ ಬಮ್ದು, ಬಾಗಿಲು ಕಾಯುತ್ತಿದ್ದವನಿಗೆ ಎಲವೋ, ನಾವು ನಿಮ್ಮ ರಾಜನಿಗೆ ಪೂರ್ವ ಕಾಲದ ಸ್ನೇಹಿತರು ಅವನ ಆಪ್ತ ಮಿತ್ರರು. ದ್ರೋಣನೆನ್ನುವುದು ನನ್ನ ಹೆಸರು, ನಿಮ್ಮ ರಾಜನಿಗೆ ಹೇಳು ಎನ್ನಲು, ದೂತನು ಬಂದು ದ್ರುಪದನಿಗೆ ದ್ರೋಣನ ಮಾತುಗಳನ್ನು ತಿಳಿಸಿದನು.

ಅರ್ಥ:
ಬಂದು: ಆಗಮಿಸು; ರಾಯ: ರಾಜ; ಮಂದಿರ: ಆಲಯ; ಬಾಗಿಲು: ಕದ; ಅರಸ: ರಾಜ; ಪೂರ್ವ: ಹಿಂದೆ; ಮಿತ್ರ: ಸ್ನೇಹಿತ; ಮುನಿ: ಋಷಿ; ಅಭಿದಾನ: ಹೆಸರು; ಹೇಳು: ತಿಳಿಸು; ಕಳುಹು: ತೆರಳು; ಬಿನ್ನಹ: ಕೋರಿಕೆ; ಹದ: ಸ್ಥಿತಿ;

ಪದವಿಂಗಡಣೆ:
ಬಂದನ್+ಈತನು +ದ್ರುಪದ +ರಾಯನ
ಮಂದಿರಕೆ+ಆ+ ಬಾಗಿಲವನೊಡನ್
ಎಂದನ್+ಎಲವೋ +ನಾವು +ನಿಮ್ಮರಸಂಗೆ +ಪೂರ್ವದಲಿ
ಸಂದ +ಮಿತ್ರರು+ ದ್ರೋಣ+ಮುನಿಪತಿ
ಎಂದು +ನಮ್ಮಭಿದಾನ +ನೀ +ಹೇ
ಳೆಂದು +ಕಳುಹಲು+ ಬಂದು+ ಬಿನ್ನಹ +ಮಾಡಿದನು +ಹದನ

ಅಚ್ಚರಿ:
(೧) ರಾಯ, ಅರಸ – ಸಮಾನಾರ್ಥಕ ಪದ

ಪದ್ಯ ೧೬: ಮಾದ್ರಿ ಏಕೆ ಭಯಗೊಂಡಳು?

ಆ ಸುಖದ ಝೋಂಪಿನಲಿ ಮೈಮರೆ
ದೋಸರಿಸಿದುದು ವದನ ಕಂಗಳು
ಪೈಸರಿಸಿದವು ತೆಕ್ಕೆ ಸಡಿಲಿತು ದೇಹ ಬಾರಿಸಿತು
ಸೂಸಿದುದು ನಿಟ್ಟುಸಿರು ರಾಣೀ
ವಾಸದುರದಲಿ ಕದಪನಿಟ್ಟು ಮ
ಹೀಶನೊರಗಿದ ಹದನ ಕಂಡಳು ಕಾಂತೆ ಭೀತಿಯಲಿ (ಆದಿ ಪರ್ವ, ೫ ಸಂಧಿ, ೧೬ ಪದ್ಯ)

ತಾತ್ಪರ್ಯ:
ಆ ಸುಖಾತಿಶಯದಲ್ಲಿ ಝೋಂಪಿನಿಂದ ಮೈಮರೆತು, ಮುಖವು ಪಕ್ಕಕ್ಕೆ ವಾಲಿತು. ಕಣ್ಣುಗಳು ಹಿಂದಕ್ಕೆ ಸರಿದವು. ಅವನ ಆಲಿಂಗನವು ಸಡಲಿತು. ದೇಹವು ಶಕ್ತಿಹೀನವಾಯಿತು. ನಿಟ್ಟುಸಿರು ಬಿಟ್ಟು ಮಾದ್ರಿಯ ಎದೆಯ ಮೇಲೆ ಕೆನ್ನೆಯನ್ನಿಟ್ಟು ನಿಶ್ಚೇಷ್ಟಿತನಾಗಿ ಮಲಗಿದುದನ್ನು ಕಂಡು ಮಾದ್ರಿಯು ಭಯಗೊಂಡಳು.

ಅರ್ಥ:
ಸುಖ: ನೆಮ್ಮದಿ; ಝೊಂಪು: ಮೈಮರೆವು, ನಿದ್ರೆ; ಮೈಮರೆ: ಜ್ಞಾನತಪ್ಪು; ಓಸರಿಸು: ಓರೆಮಾಡು, ಹಿಂಜರಿ; ವದನ: ಮುಖ; ಕಂಗಳು: ಕಣ್ಣು, ನಯನ; ಪೈಸರಿಸು: ಹಿಮ್ಮೆಟ್ಟು, ಹಿಂಜರಿ; ತೆಕ್ಕೆ: ಅಪ್ಪುಗೆ, ಆಲಿಂಗನ; ಸಡಿಲ: ಬಿಗಿಯಿಲ್ಲದಿರುವುದು, ಶಿಥಿಲವಾದುದು; ದೇಹ: ಕಾಯ; ಬಾರಿ: ಬಲಿ, ಆಹುತಿ; ಸೂಸು: ಎರಚು, ಚಲ್ಲು; ನಿಟ್ಟುಸಿರು: ಜೋರಾದ ಶ್ವಾಸ; ರಾಣಿ: ಅರಸಿ; ವಾಸ: ಬಟ್ಟೆ; ಉರ: ಎದೆ; ಕದಪ: ಕೆನ್ನೆ; ಮಹೀಶ: ರಾಜ; ಒರಗು: ಮಲಗು; ಹದ: ಸ್ಥಿತಿ; ಕಂಡು: ನೋಡು; ಕಾಂತೆ: ಸ್ತ್ರಿ, ಹೆಂಡತಿ, ಸುಂದರಿ; ಭೀತಿ: ಭಯ;

ಪದವಿಂಗಡಣೆ:
ಆ+ ಸುಖದ +ಝೋಂಪಿನಲಿ +ಮೈಮರೆದ್
ಓಸರಿಸಿದುದು +ವದನ +ಕಂಗಳು
ಪೈಸರಿಸಿದವು +ತೆಕ್ಕೆ +ಸಡಿಲಿತು +ದೇಹ +ಬಾರಿಸಿತು
ಸೂಸಿದುದು +ನಿಟ್ಟುಸಿರು +ರಾಣೀ
ವಾಸದ್+ಉರದಲಿ +ಕದಪನಿಟ್ಟು +ಮ
ಹೀಶನ್+ಒರಗಿದ +ಹದನ +ಕಂಡಳು +ಕಾಂತೆ +ಭೀತಿಯಲಿ

ಅಚ್ಚರಿ:
(೧) ಸಾಯುವ ಸ್ಥಿತಿಯನ್ನು ವಿವರಿಸುವ ಪರಿ
(೨) ಓಸರಿಸಿ, ಪೈಸರಿಸಿ, ಬಾರಿಸಿ – ಪದಗಳ ಬಳಕೆ
(೩) ಪಾಂಡುವಿನ ಕೊನೆಯ ಕ್ಷಣವನ್ನು ಚಿತ್ರಿಸುವ ಪರಿ – ರಾಣೀವಾಸದುರದಲಿ ಕದಪನಿಟ್ಟು ಮ
ಹೀಶನೊರಗಿದ

ಪದ್ಯ ೨೮: ಧರ್ಮಜನು ಕೌರವರ ಪಾಳೆಯದ ವಿಷಯವನ್ನು ಯಾರಿಗೆ ತಿಳಿಸಿದನು?

ಉಬ್ಬಿದನಲೈ ಮಧುರವಚನದ
ಹಬ್ಬದಲಿ ನಿನ್ನಾತನಿತ್ತಲು
ತುಬ್ಬಿನವದಿರು ತಂದು ಬಿಸುಟರು ನಿಮ್ಮ ಪಾಳೆಯದ
ಸರ್ಬ ವೃತ್ತಾಂತವನು ಗಾಢದ
ಗರ್ಭ ಮುರಿದುದು ಕೃಷ್ಣರಾಯನ
ನೆಬ್ಬಿಸಿದನಿರುಳವನಿಪತಿ ಬಿನ್ನೈಸಿದನು ಹದನ (ಶಲ್ಯ ಪರ್ವ, ೧ ಸಂಧಿ, ೨೮ ಪದ್ಯ)

ತಾತ್ಪರ್ಯ:
ಶಲ್ಯನ ಮಧುರ ವಚನಗಳ ಹಬ್ಬದಿಂದ ಕೌರವನು ಸಂತೋಷದಿಂದ ಉಬ್ಬಿದನು. ಇತ್ತ ಗೂಢಾಚಾರರು ಬಂದು ಕೌರವನ ಪಾಳೆಯದಲ್ಲಿ ನಡೆದ ಎಲ್ಲಾ ವೃತ್ತಾಂತಗಳನ್ನು ತಿಳಿಸಿದರು. ಕೌರವ ಪಾಳೆಯದ ಅತಿಶಯ ವೃತ್ತಾಂತವು ತಿಳಿದೊಡನೆ ಧರ್ಮಜನು ರಾತ್ರಿಯಲ್ಲೇ ಹೋಗಿ ಕೃಷ್ಣನನ್ನೆಬ್ಬಿಸಿ ವಿಷಯವನ್ನು ತಿಳಿಸಿದನು.

ಅರ್ಥ:
ಉಬ್ಬು: ಹಿಗ್ಗು, ಗರ್ವಿಸು; ಮಧುರ: ಸಿಹಿ; ವಚನ: ಮಾತು; ಹಬ್ಬ: ಸಂಭ್ರಮ; ತುಬ್ಬು: ಪತ್ತೆ ಮಾಡು, ಶೋಧಿಸು; ಬಿಸುಟು: ಹೊರಹಾಕು; ಪಾಳೆಯ: ಬೀಡು, ಶಿಬಿರ; ಸರ್ಬ: ಸರ್ವ, ಎಲ್ಲ, ಸಮಸ್ತ; ವೃತ್ತಾಂತ: ವಿಷಯ; ಗಾಢ: ಹೆಚ್ಚಳ, ಅತಿಶಯ; ಗರ್ಭ: ಹೊಟ್ಟೆ; ಮುರಿ: ಸೀಳು; ರಾಯ: ರಾಜ; ಎಬ್ಬಿಸು: ಎಚ್ಚರಿಸು; ಇರುಳು: ರಾತ್ರಿ; ಅವನಿಪ: ರಾಜ; ಬಿನ್ನೈಸು: ಕೇಳು; ಹದ: ಸ್ಥಿತಿ;

ಪದವಿಂಗಡಣೆ:
ಉಬ್ಬಿದನಲೈ +ಮಧುರ+ವಚನದ
ಹಬ್ಬದಲಿ +ನಿನ್ನಾತನ್+ಇತ್ತಲು
ತುಬ್ಬಿನವದಿರು+ ತಂದು +ಬಿಸುಟರು +ನಿಮ್ಮ +ಪಾಳೆಯದ
ಸರ್ಬ +ವೃತ್ತಾಂತವನು +ಗಾಢದ
ಗರ್ಭ +ಮುರಿದುದು +ಕೃಷ್ಣ+ರಾಯನನ್
ಎಬ್ಬಿಸಿದನ್+ಇರುಳ್+ಅವನಿಪತಿ+ ಬಿನ್ನೈಸಿದನು +ಹದನ

ಅಚ್ಚರಿ:
(೧) ಸರ್ಬ, ಗರ್ಭ – ಪ್ರಾಸ ಪದ

ಪದ್ಯ ೧೧: ಸುಭದ್ರಾದೇವಿಯು ಯಾವ ವಾರ್ತೆಯನ್ನು ಕೇಳಿದಳು?

ಅರಮನೆಯ ಗಜಬಜವ ಕೇಳಿದು
ದೊರೆಯೊಳಾವವನಳಿದನಕಟೆಂ
ದರಸಿಯರು ಬೆಸಗೊಳಲು ದ್ರೌಪದಿಗರುಹಿದರು ಹದನ
ಉರಿಯ ಡಾವರವೆಳೆಯ ಬಾಳೆಯ
ಬೆರಸುವಂತಿರೆ ರಾಯ ಕುವರನ
ಮರಣವಾರ್ತೆಯನಾ ಸುಭದ್ರಾದೇವಿ ಕೇಳಿದಳು (ದ್ರೋಣ ಪರ್ವ, ೭ ಸಂಧಿ, ೧೧ ಪದ್ಯ)

ತಾತ್ಪರ್ಯ:
ಅರಮನೆಯಲ್ಲೇನು ಗದ್ದಲ, ಅರಸರಲ್ಲಿ ಯಾರಾದರೂ ಅಳಿದರೇ ಅಯ್ಯೋ ಎಂದು ರಾಣಿವಾಸದಾರು ಕೇಳಲು, ದ್ರೌಪದಿಗೆ ಸುದ್ದಿಯನ್ನು ತಿಳಿಸಿದರು. ಉರಿಯ ಜ್ವಾಲೆಯು ಎಳೆ ಬಾಳೆಯನ್ನು ಆವರಿಸಿದಂತೆ, ಮಗನ ಮರಣ ವಾರ್ತೆಯನ್ನು ಸುಭದ್ರಾ ದೇವಿಯು ಕೇಳಿದಳು.

ಅರ್ಥ:
ಅರಮನೆ: ರಾಜರ ಆಲಯ; ಗಜಬಜ: ಗೊಂದಲ; ಕೇಳು: ಆಲಿಸು; ದೊರೆ: ಅರಸ; ಅಳಿ: ನಾಶ; ಅಕಟ: ಅಯ್ಯೋ; ಅರಸಿ: ರಾಣಿ; ಬೆಸ: ವಿಚಾರಿಸುವುದು; ಅರುಹು: ಹೇಳು; ಹದ: ಸ್ಥಿತಿ; ಉರಿ: ಬೆಂಕಿ; ಡಾವರ: ದಗೆ; ಬಾಳೆ: ಕದಳಿಫಲ; ಎಳೆ: ಚಿಕ್ಕ; ಬೆಅರ್ಸು: ಆವರಿಸು; ರಾಯ: ರಾಜ; ಕುವರ: ಮಗು; ಮರಣ: ಸಾವು; ವಾರ್ತೆ: ವಿಷಯ; ಕೇಳು: ಆಲಿಸು;

ಪದವಿಂಗಡಣೆ:
ಅರಮನೆಯ +ಗಜಬಜವ +ಕೇಳಿದು
ದೊರೆಯೊಳ್+ಆವವನ್+ಅಳಿದನ್+ಅಕಟೆಂದ್
ಅರಸಿಯರು +ಬೆಸಗೊಳಲು +ದ್ರೌಪದಿಗ್+ಅರುಹಿದರು +ಹದನ
ಉರಿಯ +ಡಾವರವ್+ಎಳೆಯ +ಬಾಳೆಯ
ಬೆರಸುವಂತಿರೆ +ರಾಯ +ಕುವರನ
ಮರಣ+ವಾರ್ತೆಯನಾ+ ಸುಭದ್ರಾದೇವಿ +ಕೇಳಿದಳು

ಅಚ್ಚರಿ:
(೧) ಉಪಮಾನದ ಪ್ರಯೋಗ – ಉರಿಯ ಡಾವರವೆಳೆಯ ಬಾಳೆಯ ಬೆರಸುವಂತಿರೆ

ಪದ್ಯ ೨೬: ಸೇನೆಯನ್ನು ಕೌರವನು ಎರಡು ಭಾಗವನ್ನಾಗಿಸಿದನೇಕೆ?

ಮೇಲೆ ನೆಗಳುವ ಹದನನಿಲ್ಲಿಂ
ಮೇಲೆ ನೀನೇ ಬಲ್ಲೆಯೆನುತ ವಿ
ಶಾಲಮತಿ ಬಿಸುಸುಯ್ದು ಕೌರವ ಕೆಟ್ಟನಕಟೆನುತ
ಕಾಳಗವ ನಾವಾನುವೆವು ಪಶು
ಜಾಲ ಸಹಿತಭಪುರಿಗೆ ನೀ ಕಿರಿ
ದಾಳೊಡನೆ ನಡೆಯೆಂದು ಸೇನೆಯನೆರಡು ಮಾಡಿಸಿದ (ವಿರಾಟ ಪರ್ವ, ೮ ಸಂಧಿ, ೨೬ ಪದ್ಯ)

ತಾತ್ಪರ್ಯ:
ಮುಂದಾಗುವುದನ್ನು ನೀನೇ ನೋಡುವೆ, ಎಂದು ಭೀಷ್ಮನು ಅಯ್ಯೋ ಕೌರವನು ಕೆಟ್ಟನಲ್ಲಾ ಎಂದು ನಿಟ್ಟುಸಿರು ಬಿಟ್ಟನು. ನೀನು ಸ್ವಲ್ಪ ಸೈನ್ಯದೊಂದಿಗೆ ಗೋವುಗಳೊಡನೆ ಹಸ್ತಿನಾಪುರಕ್ಕೆ ಹೋಗು, ನಾವಿಲ್ಲಿ ಶತ್ರುಗಳನ್ನು ಎದುರಿಸುತ್ತೇವೆ ಎಂದು ಕೌರವನಿಗೆ ಹೇಳಿ, ಸೇನೆಯನ್ನು ಎರಡು ಭಾಗವನ್ನಾಗಿ ನಿಲ್ಲಿಸಿದನು.

ಅರ್ಥ:
ನೆಗಳು: ಮಾಡು, ಆಚರಿಸು; ಹದ: ಸ್ಥಿತಿ; ಬಲ್ಲೆ: ತಿಳಿ; ವಿಶಾಲ: ಹಿರಿದು, ದೊಡ್ಡದು; ಮತಿ: ಬುದ್ಧಿ; ಬಿಸುಸುಯ್: ನಿಟ್ಟುಸಿರುಬಿಡು; ಅಕಟ: ಅಯ್ಯೋ; ಕಾಳಗ: ಯುದ್ಧ; ಆನು: ಎದುರಿಸು; ಪಶುಜಾಲ: ಪ್ರಾಣಿಗಳ ಗುಂಪು; ಇಭಪುರಿ: ಹಸ್ತಿನಾಪುರ; ಕಿರಿದಾಳು: ಸ್ವಲ್ಪ ಸೈನ್ಯ; ನಡೆ: ಚಲಿಸು; ಸೇನೆ: ಸೈನ್ಯ;

ಪದವಿಂಗಡಣೆ:
ಮೇಲೆ +ನೆಗಳುವ +ಹದನನ್+ಇಲ್ಲಿಂ
ಮೇಲೆ +ನೀನೇ +ಬಲ್ಲೆ+ಎನುತ +ವಿ
ಶಾಲಮತಿ+ ಬಿಸುಸುಯ್ದು+ ಕೌರವ+ ಕೆಟ್ಟನ್+ಅಕಟೆನುತ
ಕಾಳಗವ +ನಾವ್+ಆನುವೆವು +ಪಶು
ಜಾಲ +ಸಹಿತ್+ಇಭಪುರಿಗೆ+ ನೀ +ಕಿರಿ
ದಾಳೊಡನೆ +ನಡೆಯೆಂದು +ಸೇನೆಯನ್+ಎರಡು+ ಮಾಡಿಸಿದ

ಅಚ್ಚರಿ:
(೧) ಭೀಷ್ಮರನ್ನು ವಿಶಾಲಮತಿ ಎಂದು ಕರೆದಿರುವುದು

ಪದ್ಯ ೯೩: ದ್ರೌಪದಿಯು ಏಕೆ ಕಳಕಳಿಸಿದಳು?

ತಲೆಯ ನೆದೆಯೊಳಗಿಕ್ಕಿ ಕೈಕಾ
ಲ್ಗಳನು ಬಸುರೊಳಗಿಕ್ಕಿ ದೂರಕೆ
ತೊಲಗಿದನು ತೋರಿದನು ರಮಣಿಗೆ ಕಿಚಕನ ಹದನ
ಖಳನು ಕಾಲನ ಕೋಣ ತುಳಿದಂ
ತಿಳೆಯೊಳೊರಗಿರೆ ಕಂಡು ಕಾಮಿನಿ
ಕಳಕಳಿಸಿದಳು ಭೀಮಸೇನನಪ್ಪಿ ಮುಂಡಾಡಿ (ವಿರಾಟ ಪರ್ವ, ೩ ಸಂಧಿ, ೯೩ ಪದ್ಯ)

ತಾತ್ಪರ್ಯ:
ಕೀಚಕನ ತಲೆಯನ್ನು ಎದೆಯೊಳಗೆ ತುರುಕಿ, ಕೈ ಕಾಲುಗಳನ್ನು ಹೊಟ್ಟೆಯಲ್ಲಿ ಸಿಕ್ಕಿಸಿ ಭೀಮನು ದೂರ ನಿಮ್ತು ಕೀಚಕನ ದುಸ್ಥಿತಿಯನ್ನು ದ್ರೌಪದಿಗೆ ತೋರಿಸಿದನು. ಯಮನ ಕೋಣವು ತುಳಿಯಿತೋ ಎಂಬಂತೆ ಕಿಚಕನ ದೇಹ ಅಲ್ಲಿ ಬಿದ್ದಿತ್ತು. ದ್ರೌಪದಿಯು ಅದನ್ನು ಕಂಡು ಅತಿಶಯ ಸಂತೋಷಗೊಂಡು ಭೀಮನನ್ನು ಬಿಗಿದಪ್ಪಿ ಅವನ ತಲೆಯನ್ನು ಸವರಿದಳು.

ಅರ್ಥ:
ತಲೆ: ಶಿರ; ಎದೆ: ಹೃದಯ; ಇಕ್ಕು: ಸೇರಿಸು; ಕೈ: ಹಸ್ತ; ಕಾಲು: ಪಾದ; ಬಸುರು: ಹೊಟ್ಟೆ; ಸಿಕ್ಕಿ: ತುರುಕು; ದೂರ: ಬಹಳ ಅಂತರ; ತೊಲಗು: ದೂರ ಸರಿ; ತೋರು: ಪ್ರದರ್ಶಿಸು; ರಮಣಿ: ಪ್ರಿಯತಮೆ; ಹದ: ಸ್ಥಿತಿ; ಖಳ: ದುಷ್ಟ; ಕಾಲ: ಯಮ; ಕೋಣ: ಎಮ್ಮೆ; ತುಳಿ: ಮೆಟ್ಟು; ಇಳೆ: ಭೂಮಿ; ಒರಗು: ಮಲಗು; ಕಂಡು: ನೋಡು; ಕಾಮಿನಿ: ಹೆಣ್ಣು; ಕಳಕಳಿಸು: ಹರ್ಷಿಸು; ಅಪ್ಪು: ಆಲಿಂಗನ; ಮುಂಡಾಡು: ತಲೆಯನ್ನು ನೇವರಿಸು;

ಪದವಿಂಗಡಣೆ:
ತಲೆಯನ್ + ಎದೆಯೊಳಗಿಕ್ಕಿ +ಕೈ+ಕಾ
ಲ್ಗಳನು+ ಬಸುರೊಳಗಿಕ್ಕಿ+ ದೂರಕೆ
ತೊಲಗಿದನು +ತೋರಿದನು+ ರಮಣಿಗೆ +ಕಿಚಕನ +ಹದನ
ಖಳನು+ ಕಾಲನ +ಕೋಣ +ತುಳಿದಂತ್
ಇಳೆಯೊಳ್+ಒರಗಿರೆ +ಕಂಡು +ಕಾಮಿನಿ
ಕಳಕಳಿಸಿದಳು+ ಭೀಮಸೇನನ್+ಅಪ್ಪಿ+ ಮುಂಡಾಡಿ

ಅಚ್ಚರಿ:
(೧) ಕೀಚಕನ ದೇಹದ ಸ್ಥಿತಿ – ತಲೆಯ ನೆದೆಯೊಳಗಿಕ್ಕಿ ಕೈಕಾಲ್ಗಳನು ಬಸುರೊಳಗಿಕ್ಕಿ
(೨) ಉಪಮಾನದ ಪ್ರಯೋಗ – ಖಳನು ಕಾಲನ ಕೋಣ ತುಳಿದಂತಿಳೆಯೊಳೊರಗಿರೆ

ಪದ್ಯ ೩: ಧರ್ಮರಾಯ ಕೃಷ್ಣನಿಗೆ ಏನು ಹೇಳಿದನು?

ವಿದಿತವೈದೂರುಗಳ ಕೊಟ್ಟೊಡೆ
ಹದುಳವಿಡುವುದು ಮುನಿದರಾದೊಡೆ
ಕದನವನೆ ಕೈಕೊಳುವುದುಚಿತಾನುಚಿತದನುವರಿದು
ಹದನ ನೀನೇ ಬಲ್ಲೆ ಸಾಕಿ
ನ್ನಿದು ನಿಧಾನವು ಬಗೆಯಲೆಮ್ಮ
ಭ್ಯುದಯ ನಿಮ್ಮಾಧೀನವೆಂದನು ಧರ್ಮನಂದನನು (ಉದ್ಯೋಗ ಪರ್ವ, ೭ ಸಂಧಿ, ೩ ಪದ್ಯ)

ತಾತ್ಪರ್ಯ:
ಈ ಹಿಂದೆ ಒಪ್ಪಿಗೆಯಾದಂತೆ ಐದು ಊರುಗಳನ್ನು ನೀಡಿದರೆ ಒಳ್ಳೆಯದು, ಇದಕ್ಕೆ ವಿರುದ್ಧವಾಗಿ ನಡೆದರೆ ಯುದ್ದವೇ ನಡೆಯುತ್ತದೆ. ಇದರಲ್ಲಿ ಉಚಿತ ಮತ್ತು ಅನುಚಿತವಾವುದೆಂದು ತಿಳಿದು ನಿರ್ಧರಿಸಲಿ, ಸರಿಯಾದ ಸ್ಥಿತಿಯನ್ನು ನೀನೆ ಅರಿತಿರುವೆ, ಈ ವಿಳಂಬ ಇನ್ನು ಸಾಕು, ನಮ್ಮ ಅಭ್ಯುದಯಕ್ಕೆ ಯಾವುದು ಸೂಕ್ತವೋ ಆ ನಿರ್ಧಾರವನ್ನೇ ನೀನು ಮಾಡು, ನಿಮ್ಮ ಅಧೀನದಲ್ಲಿ ನಾವಿರುವೆವು ಎಂದು ಧರ್ಮರಾಯನು ಕೃಷ್ಣನಿಗೆ ಹೇಳಿದನು.

ಅರ್ಥ:
ವಿದಿತ: ಒಪ್ಪಿಗೆ, ಸಮ್ಮತಿ; ಊರು: ಪ್ರದೇಶ; ಕೊಡು: ನೀಡು; ಹದುಳ: ಸೌಖ್ಯ, ಕ್ಷೇಮ; ಮುನಿ: ಕೋಪಗೊಳ್ಳು; ಕದನ: ಯುದ್ಧ; ಉಚಿತ: ಸರಿಯಾದ; ಅನುಚಿತ: ಸರಿಯಲ್ಲದ; ಅರಿ: ತಿಳಿ; ಹದ: ಸರಿಯಾದ ಸ್ಥಿತಿ; ಬಲ್ಲೆ: ತಿಳಿದಿರುವೆ; ಸಾಕು: ನಿಲ್ಲಿಸು; ನಿಧಾನ:ವಿಳಂಬ, ಸಾವಕಾಶ; ಬಗೆ: ಅಭಿಪ್ರಾಯ; ಅಭ್ಯುದಯ: ಏಳಿಗೆ; ಅಧೀನ: ಕೈಕೆಳಗಿರುವ; ನಂದನ: ಮಗ;

ಪದವಿಂಗಡಣೆ:
ವಿದಿತವ್+ಐದ್+ಊರುಗಳ +ಕೊಟ್ಟೊಡೆ
ಹದುಳವ್+ಇಡುವುದು +ಮುನಿದರಾದೊಡೆ
ಕದನವನೆ +ಕೈಕೊಳುವುದ್+ಉಚಿತ+ಅನುಚಿತದನುವ್+ಅರಿದು
ಹದನ +ನೀನೇ +ಬಲ್ಲೆ+ ಸಾಕಿನ್
ಇದು +ನಿಧಾನವು +ಬಗೆಯಲ್+ಎಮ್
ಅಭ್ಯುದಯ +ನಿಮ್ಮ+ಅಧೀನವ್+ಎಂದನು +ಧರ್ಮನಂದನನು

ಅಚ್ಚರಿ:
(೧) ಉಚಿತ ಅನುಚಿತ – ವಿರುದ್ಧ ಪದಗಳ ಬಳಕೆ
(೨) ಕದನ, ಹದನ – ಪ್ರಾಸ ಪದ
(೩) ಅಭ್ಯುದಯ ಅಧೀನ – ಪದಗಳ ಬಳಕೆ

ಪದ್ಯ ೧೫: ಸೇವಕರು ದ್ರೌಪದಿಗೆ ಏನು ಹೇಳಿದರು?

ದೇವಿ ಚಿತ್ತೈಸುವುದು ವರವಸು
ದೇವನಂದನಟ್ಟಿದನು ಸಂ
ಭಾವಿಸುವುದರಿರಾಯರಲಿ ಸಂಧಾನ ಸಂರಂಭ
ನೀವು ಬಿಜಯಂಗೈದು ಚಿತ್ತದೊ
ಳಾವ ಹದನಾ ಹದನನಾ ರಾ
ಜೀವನಾಭಾದಿಗಳಿಗರುಹುವುದೆಂದರಾ ಚರರು (ಉದ್ಯೋಗ ಪರ್ವ, ೬ ಸಂಧಿ, ೧೫ ಪದ್ಯ)

ತಾತ್ಪರ್ಯ:
ಸೇವಕರು ಹೋಗಿ ದ್ರೌಪದಿಗೆ ವಂದಿಸಿ, ದೇವಿ ಗಮನವಿಟ್ಟು ಕೇಳಿ, ಶ್ರೀಕೃಷ್ಣನು ನಮ್ಮನ್ನು ನಿಮ್ಮ ಬಳಿ ಕಳಿಸಿದ್ದಾನೆ. ಶತ್ರುರಾಜರೊಡನೆ ಸಂಧಾನ ಮಾಡಿಕೊಳ್ಳುವ ಸಂಭ್ರಮ ಶುರುವಾಗಿದೆ. ನೀವು ಅಲ್ಲಿಗೆ ಬಂದು ನಿಮ್ಮ ಮನಸ್ಸಿನ ಅಭಿಪ್ರಾಯವೇನೋ ಅದನ್ನು ಶ್ರೀಕೃಷ್ಣನಿಗೆ ತಿಳಿಸಿರಿ ಎಂದು ಸೇವಕರು ತಿಳಿಸಿದರು.

ಅರ್ಥ:
ದೇವಿ: ತಾಯೆ; ಚಿತ್ತೈಸು: ಗಮನವಿಟ್ಟು ಕೇಳು; ವರ: ಶ್ರೇಷ್ಠ; ನಂದನ: ಮಗ; ಅಟ್ಟು: ಬೆನ್ನಟ್ಟುವಿಕೆ; ಸಂಭಾವಿಸು:ಯೋಚಿಸು, ನಿಭಾಯಿಸು; ಅರಿ: ವೈರಿ; ರಾಯ: ರಾಜ; ಸಂಧಾನ: ಸಂಧಿ; ಸಂರಂಭ: ಸಂಭ್ರಮ; ಬಿಜಯಂಗೈ: ಹೊರಡು, ದಯಮಾಡಿಸು; ಚಿತ್ತ: ಬುದ್ಧಿ; ಹದ: ಸರಿಯಾದ ಸ್ಥಿತಿ; ಅಹದ: ಸರಿಯಲ್ಲದ; ರಾಜೀವ: ಕಮಲ; ರಾಜೀವನಾಭ: ಕೃಷ್ಣ; ಆದಿ: ಮುಂತಾದ; ಅರುಹು: ಹೇಳು; ಚರ: ಸೇವಕ;

ಪದವಿಂಗಡಣೆ:
ದೇವಿ +ಚಿತ್ತೈಸುವುದು +ವರ+ವಸು
ದೇವ+ನಂದನ್+ಅಟ್ಟಿದನು +ಸಂ
ಭಾವಿಸುವುದ್+ಅರಿ+ರಾಯರಲಿ +ಸಂಧಾನ +ಸಂರಂಭ
ನೀವು +ಬಿಜಯಂಗೈದು +ಚಿತ್ತದೊಳ್
ಆವ +ಹದನ+ಅಹದನನ್+ಆ+ ರಾ
ಜೀವನಾಭಾದಿಗಳಿಗ್+ಅರುಹುವುದ್+ಎಂದರಾ +ಚರರು

ಅಚ್ಚರಿ:
(೧) ದೇವಿ, ದೇವ – ೧, ೨ ಸಾಲಿನ ಮೊದಲ ಪದ
(೨) ಸಂಧಾನ ಸಂರಂಭ – ಸಂಧಾನದ ಮಾತು ಜೋರಾಗಿ ನಡೆದಿದೆ ಎಂದು ಹೇಳಲು
(೩) ಹದನ ಅಹದನ – ವಿರುದ್ಧ (ಹದನ) ಪದಗಳ ಬಳಕೆ

ಪದ್ಯ ೨೩: ಜರಾಸಂಧ ಮತ್ತು ಶಿಶುಪಾಲರಲ್ಲಿ ಯಾರು ಬಲಶಾಲಿಗಳು?

ಅಧಿಕರಿವರಿಬ್ಬರೊಳಗಾ ಮಾ
ಗಧನೆ ಬಲುಗೈ ರಾಜಸೂಯಕೆ
ಸದರವನು ನಾ ಕಾಣೆನಾತನ ಖಂಡೆಯದ ಮೊನೆಗೆ
ನಿಧನವಲ್ಲದೆ ಧನವ ನೆರಹುವ
ಹದನ ನೀನೇ ಕಾಂಬೆಯಾತನ
ವಧೆಯು ಹರಿಯದು ನಮ್ಮ ಕೈಯಲಿ ರಾಯ ಕೇಳೆಂದ (ಸಭಾ ಪರ್ವ, ೨ ಸಂಧಿ, ೨೩ ಪದ್ಯ)

ತಾತ್ಪರ್ಯ:
ಜರಾಸಂಧ ಮತ್ತು ಶಿಶುಪಾಲರ ಮಧ್ಯೆ, ಜರಾಸಂಧನೆ ಹೆಚ್ಚು ಬಲಶಾಲಿ, ರಾಜಸೂಯ ಯಜ್ಞಕ್ಕೆ ಅವನಿಂದಲೆ ಹೆಚ್ಚು ಅಡಚಣೆಯಾಗುತ್ತದೆ, ಅವನು ಹೋಗದೆ ಈ ಯಾಗಕ್ಕೆ ಬೇಕಾದ ಹಣವನ್ನು ಕೊಡಿಸುವುದು ಸುಲಭವಲ್ಲವೆಂದು ನೀನೆ ಕಾಣುವೆ, ಆದರೆ ಅವನನ್ನು ಕೊಲ್ಲುವುದು ನನ್ನ ಕೈಯಲ್ಲಿಲ್ಲ.

ಅರ್ಥ:
ಅಧಿಕ: ಹೆಚ್ಚು; ಮಾಗಧ: ಜರಾಸಂಧ; ಬಲುಗೈ: ಮುಖ್ಯ; ಕಾಣೆ: ತೋರನು; ಖಂಡೆಯ:ಕತ್ತಿ; ಮೊನೆ: ತುದಿ, ಕೊನೆ; ನಿಧನ: ಸಾವು; ಧನವ: ಐಶ್ವರ್ಯ; ನೆರಹು: ನೆರವು, ಒಟ್ಟುಗೂಡು; ಹದ: ಸರಿಯಾದ ಸ್ಥಿತಿ, ರೀತಿ; ಕಾಂಬ: ಕಾಣುವ; ವಧೆ: ಕೊಲ್ಲು; ಹರಿ: ಕೀಳು, ಕಿತ್ತುಹಾಕು; ರಾಯ:ರಾಜ;

ಪದವಿಂಗಡಣೆ:
ಅಧಿಕರ್+ಇವರಿಬ್ಬರ್+ಒಳಗ್+ಆ+ ಮಾ
ಗಧನೆ +ಬಲುಗೈ +ರಾಜಸೂಯಕೆ
ಸದರವನು +ನಾ +ಕಾಣೆನ್+ಆತನ +ಖಂಡೆಯದ +ಮೊನೆಗೆ
ನಿಧನವಲ್ಲದೆ+ ಧನವ+ ನೆರಹುವ
ಹದನ +ನೀನೇ +ಕಾಂಬೆ+ಯಾತನ
ವಧೆಯು +ಹರಿಯದು +ನಮ್ಮ +ಕೈಯಲಿ +ರಾಯ +ಕೇಳೆಂದ

ಅಚ್ಚರಿ:
(೧) ಜರಾಸಂಧನ ವಧೆಯನ್ನು ಹೇಳುವ ಪರಿ: ಖಂಡೆಯದ ಮೊನೆಗೆ ನಿಧನ – ಕತ್ತಿಯ ತುದಿಯನ್ನು ಧ್ವಂಸಗೊಳಿಸು;
(೨) ನಿಧನ, ವದೆ – ಸಾಮ್ಯ ಪದ
(೩) ನಿಧನ, ಹದನ – ಪ್ರಾಸಪದ
(೪) ನಾ ಕಾಣೆ, ನೀನೇ ಕಾಂಬೆ – ನಾನು ಕಾಣೆ, ನೀನೆ ನೋಡುವೆ ಅರ್ಥೈಸುವ ಪದ – ೩, ೫ ಸಾಲು
(೫) ಕೈ ಪದದ ಬಳಕೆ – ಬಲುಗೈ, ನಮ್ಮ ಕೈ – ೨, ೬ ಸಾಲು

ಪದ್ಯ ೧೩: ಹಸ್ತಿನಾವತಿಗೆ ಯಾವ ಸುದ್ದಿಯನ್ನು ಯಾರು ಹಬ್ಬಿಸಿದರು?

ಅರಸ ಚಿತ್ತೈಸಂದಿನೋಲಗ
ಹರಿದುದಾ ಹರಿಸೇನೆ ಬಿಟ್ಟುದು
ಪುರದ ಬಹಿರುದ್ಯಾನ ವೀಧಿಗಳೊಳಗೆ ಹರಹಿನಲಿ
ಕುರುನೃಪಾಲನ ಗುಪ್ತಚಾರರು
ಅರಿದರೀವಾರ್ತೆಯನು ಪುರದಲಿ
ಹರಹಿದರು ನೆರೆ ಕೇಳಿದನು ಧೃತರಾಷ್ಟ್ರನೀ ಹದನ (ಆದಿ ಪರ್ವ, ೧೭ ಸಂಧಿ, ೧೩ ಪದ್ಯ)

ತಾತ್ಪರ್ಯ:
ಜನಮೇಜಯ ಕೇಳು, ಅಂದಿನ ರಾಜಸಭೆ ಮುಗಿಯಲು, ಯಾದವ ಸೇನೆಯು ಊರಹೊರಗಿನ ಉದ್ಯಾನದಲ್ಲಿ ಮತ್ತು ಬೀದಿಗಳಲ್ಲಿ ಬೀಡು ಬಿಟ್ಟಿತು, ಕೌರವರ ಗೂಢಾಚಾರರು ಈ ವಿಷಯ ತಿಳಿದು ಹಸ್ತಿನಾವತಿಗೆ ತಲುಪಿಸಿದರು, ಧೃತರಾಷ್ಟ್ರನು ಇವೆಲ್ಲವನ್ನು ಕೇಳಿದನು.

ಅರ್ಥ:
ಅರಸ: ರಾಜ; ಚಿತ್ತೈಸು: ಗಮನವಿಟ್ಟು ಕೇಳು; ಓಲಗ: ದರ್ಬಾರು; ಹರಿದು: ಮುಗಿದು; ಹರಿಸೇನೆ: ಯಾದವ ಸೇನೆ; ಬಿಟ್ಟುದು: ಬೀಡು ಬಿಟ್ಟು, ನೆಲೆ; ಪುರ: ಊರು; ಬಹಿರ್: ಹೊರಗೆ; ಉದ್ಯಾನ: ಉಪವನ; ವೀಧಿ: ಬೀದಿ, ದಾರಿ; ಹರಹು: ಹರಡು, ವ್ಯಾಪಿಸುವಂತೆ ಮಾಡು;ನೃಪ: ರಾಜ; ಗುಪ್ತಚರರು: ಗೂಢಾಚಾರರು; ಅರಿ: ತಿಳಿ; ವಾರ್ತೆ: ವಿಷಯ; ನೆರೆ: ಗುಂಪು; ಹದನ: ಸಮಯ, ಕಾಲ, ರೀತಿ;

ಪದವಿಂಗಡಣೆ:
ಅರಸ +ಚಿತ್ತೈಸ್+ಅಂದಿನ್+ಓಲಗ
ಹರಿದುದಾ +ಹರಿಸೇನೆ+ ಬಿಟ್ಟುದು
ಪುರದ+ ಬಹಿರುದ್ಯಾನ +ವೀಧಿಗಳ್+ಒಳಗೆ +ಹರಹಿನಲಿ
ಕುರು+ನೃಪಾಲನ +ಗುಪ್ತಚಾರರು
ಅರಿದರ್+ಈ+ವಾರ್ತೆಯನು +ಪುರದಲಿ
ಹರಹಿದರು+ ನೆರೆ+ ಕೇಳಿದನು+ ಧೃತರಾಷ್ಟ್ರನೀ+ ಹದನ

ಅಚ್ಚರಿ:
(೧) “ಹ” ಕಾರದ ಪದಗಳು: ಹರಹು, ಹದನ, ಹರಹಿ, ಹರಿದು
(೨) ನೃಪ, ಅರಸ – ಸಮನಾರ್ಥಕ ಪದ
(೩) ಹರಹಿ – ೩,೬ ಸಾಲಿನ ಕೊನೆ ಮತ್ತು ಮೊದಲ ಪದ