ಪದ್ಯ ೯: ಕಾಂಭೋಜ ಮತ್ತು ದ್ರುಪದ ರಾಜನ ಸತಿಯರ ಸ್ಥಿತಿ ಹೇಗಿತ್ತು?

ದೇವ ನೋಡಾ ಶೋಕವಹ್ನಿಯ
ಡಾವರವ ಕಾಂಭೋಜನರಸಿಯ
ರಾವ ನೋಂಪಿಯ ನೋಂತರೋ ಶಿವಶಿವ ಮಹಾದೇವ
ಆವನಾತನು ನಿಮ್ಮವರುಗಳ
ಮಾವನೇ ಪಾಂಚಾಲ ಸತಿಯರು
ಜೀವದಲಿ ಜಾರಿದರು ರಮಣರ ಮೇಲೆ ತನಿಹೊರಳಿ (ಗದಾ ಪರ್ವ, ೧೨ ಸಂಧಿ, ೯ ಪದ್ಯ)

ತಾತ್ಪರ್ಯ:
ದೇವಾ ನೋಡು, ಕಾಂಭೋಜನ ಅರಸಿಯರು ಈ ದುಃಖವನ್ನು ಭರಿಸಲು ಯಾವ ವ್ರತವನ್ನು ಮಾಡಿದ್ದಾರೋ ಏನೋ? ಅಲ್ಲಿರುವವನಾರು, ದ್ರುಪದನೇ, ಅವನ ಸತಿಯರು ಮೂರ್ಛಿತರಾಗಿ ಅವನ ದೇಹದ ಮೇಲೆ ಹೊರಳಿ ಬಿದ್ದರು.

ಅರ್ಥ:
ದೇವ: ಭಗವಂತ; ನೋಡು: ವೀಕ್ಷಿಸು; ಶೋಕ: ದುಃಖ; ವಹ್ನಿ: ಬೆಂಕಿ; ಡಾವರ: ದಗೆ, ತಾಪ; ಅರಸಿ: ರಾಣಿ; ನೋಂಪಿ: ವ್ರತ; ಮಾವ: ತಂಗಿಯ ಗಂಡ; ಸತಿ: ಹೆಣ್ಣು; ಜೀವ: ಪ್ರಾಣ; ಜಾರು: ಬೀಳು; ರಮಣ: ಪ್ರೀತಿಪಾತ್ರನಾದ; ತನಿ: ಚೆನ್ನಾಗಿ ಬೆಳೆದುದು; ಹೊರಳು: ತಿರುವು, ಬಾಗು;

ಪದವಿಂಗಡಣೆ:
ದೇವ +ನೋಡ್+ಆ+ ಶೋಕವಹ್ನಿಯ
ಡಾವರವ +ಕಾಂಭೋಜನ್+ಅರಸಿಯರ್
ಆವ +ನೋಂಪಿಯ +ನೋಂತರೋ +ಶಿವಶಿವ+ ಮಹಾದೇವ
ಆವನ್+ಆತನು +ನಿಮ್ಮವರುಗಳ
ಮಾವನೇ +ಪಾಂಚಾಲ +ಸತಿಯರು
ಜೀವದಲಿ +ಜಾರಿದರು +ರಮಣರ +ಮೇಲೆ +ತನಿಹೊರಳಿ

ಅಚ್ಚರಿ:
(೧) ದುಃಖದ ತೀವ್ರತೆಯನ್ನು ಹೇಳುವ ಪರಿ – ಶೋಕವಹ್ನಿಯ ಡಾವರವ

ಪದ್ಯ ೨೪: ಪಾಂಡವರು ಯಾವ ತಪ್ಪು ಮಾಡಿದರೆಂದು ಬಲರಾಮನು ಹೇಳಿದನು?

ನೀವು ಮಾಡಿದ ಸತ್ಯಭಾಷೆಗೆ
ನೀವಲಾ ತಪ್ಪಿದಿರಿ ನೋಟಕ
ರಾವು ಮಧ್ಯಸ್ಥಿತರಲೇ ಧರ್ಮೈಕರಕ್ಷಕರು
ನಾವು ಸಾಕ್ಷಿಗಳಬಳರೆಂದೇ
ನೀವು ನೃಪತಿಯ ತೊಡೆಯನುಡಿದಿರಿ
ಡಾವರವೆ ಸಾಕೈಸೆ ಕಾಲಿಕ್ಕಿದಿರಿ ಸಿರಿಮುಡಿಗೆ (ಗದಾ ಪರ್ವ, ೮ ಸಂಧಿ, ೨೪ ಪದ್ಯ)

ತಾತ್ಪರ್ಯ:
ಬಲರಾಮನು ಮಾತನಾಡುತ್ತಾ, ನೀವು ಆಡಿದ ಸತ್ಯವಾಕ್ಯಕ್ಕೆ ನೀವೇ ತಪ್ಪಿದಿರಿ, ನಾವು ನೋಟಕರು ಮಧ್ಯಸ್ಥರು, ಸಾಕ್ಷಿಗಳಾದ ನಾವು ದುರ್ಬಲರೆಂದು ಭಾವಿಸಿ ಕೌರವನ ತೊಡೆಯನ್ನೊಡೆದಿರಿ, ಈ ಘೋರವೇ ಸಾಲದು ಎಂದು ಕೌರವನ ಸಿರಿಮುಡಿಯನ್ನು ಕಾಲಿನಿಂದೊದೆದಿರಿ.

ಅರ್ಥ:
ಸತ್ಯ: ನಿಜ; ಭಾಷೆ: ನುಡಿ; ತಪ್ಪು: ಸರಿಯಿಲ್ಲದ್ದು; ನೋಟಕ: ನೋಡುವವ; ಮಧ್ಯಸ್ಥಿತಿ: ನಡುವಿನವರು; ರಕ್ಷಕ: ಕಾಪಾಡುವವ; ಧರ್ಮ: ಧಾರಣೆ ಮಾಡಿದುದು; ಸಾಕ್ಷಿ: ಪುರಾವೆ, ರುಜುವಾತು; ನೃಪತಿ: ರಾಜ; ತೊಡೆ: ಜಂಘೆ; ಉಡಿ: ಮುರಿ, ತುಂಡು ಮಾಡು; ಡಾವರ: ಪ್ರತಾಪ, ಕಾವು, ದಗೆ, ತಾಪ; ಸಾಕು: ನಿಲ್ಲು; ಕಾಲು: ಪಾದ; ಸಿರಿಮುಡಿ: ಶ್ರೇಷ್ಠವಾದ ಶಿರ; ಅಬಳ: ದುರ್ಬಲ;

ಪದವಿಂಗಡಣೆ:
ನೀವು +ಮಾಡಿದ +ಸತ್ಯ+ಭಾಷೆಗೆ
ನೀವಲಾ +ತಪ್ಪಿದಿರಿ +ನೋಟಕರ್
ಆವು +ಮಧ್ಯಸ್ಥಿತರಲೇ +ಧರ್ಮೈಕ+ರಕ್ಷಕರು
ನಾವು +ಸಾಕ್ಷಿಗಳ್+ಅಬಳರೆಂದೇ
ನೀವು +ನೃಪತಿಯ +ತೊಡೆಯನ್+ಉಡಿದಿರಿ
ಡಾವರವೆ +ಸಾಕೈಸೆ +ಕಾಲಿಕ್ಕಿದಿರಿ+ ಸಿರಿಮುಡಿಗೆ

ಅಚ್ಚರಿ:
(೧) ನೀವು, ನಾವು, ಆವು – ಪ್ರಾಸ ಪದಗಳು

ಪದ್ಯ ೧೫: ಭೀಮನು ದುರ್ಯೋಧನನ್ನು ಹೇಗೆ ಹಂಗಿಸಿದನು?

ಓಡಿ ಜಲದಲಿ ಮುಳುಗಿದವರಿಗೆ
ಖೋಡಿಯುಂಟೇ ರಥವಿಳಿದ ರಣ
ಖೇಡ ಕಾಲಾಳಿಂಗೆ ಪಯಗತಿಯೋರೆಪೋರೆಗಳೆ
ನೋಡುತಿದೆ ಪರಿವಾರ ನೀ ಕೈ
ಮಾಡಿ ತೋರಾ ಬರಿಯ ಕಂಠದ
ಮೂಡಿಗೆಯ ಡಾವರದ ಲೇಹುದೆಂದನಾ ಭೀಮ (ಗದಾ ಪರ್ವ, ೬ ಸಂಧಿ, ೧೫ ಪದ್ಯ)

ತಾತ್ಪರ್ಯ:
ಓಡಿ ಹೋಗಿ ನಿರಿನಲ್ಲಿ ಮುಳುಗಿದವರಿಗೆ ನಾಚಿಕೆಯುಂಟೇ? ರಥವನ್ನಿಳಿದ ಹೇಡಿ ಕಾಲಾಳಿಗೆ ಪಾದ ಚಲನೆಯ ಓರೆಪೋರೆಗಳೇ? ಪರಿವಾರ ನೋಡುತ್ತಲೇ ಇದೆ, ನೀನು ಯುದ್ಧಚಾತುರ್ಯವನ್ನು ತೋರಿಸು, ಇಲ್ಲದಿದ್ದರೆ ಬರಿಯ ಕಂಠವೇ ಬತ್ತಳಿಕೆ, ಮಾತೇ ಯುದ್ಧವಾಗುತ್ತದೆ ಎಂದು ಭೀಮನು ನುಡಿದನು.

ಅರ್ಥ:
ಓಡು: ಧಾವಿಸು; ಜಲ: ನೀರು; ಮುಳುಗು: ನೀರಿನಲ್ಲಿ ಮೀಯು, ಕಾಣದಾಗು; ಖೋಡಿ: ದುರುಳತನ, ನೀಚತನ; ರಥ: ಬಂಡಿ; ರಣ: ಯುದ್ಧರಂಗ; ಖೇಡ: ಹೆದರಿದವನು; ಕಾಲಾಳು: ಸೈನಿಕ; ಪಯಗತಿ: ಓಡುವ ವೇಗ; ಓರೆಪೋರೆ: ವಕ್ರ; ನೋಡು: ವೀಕ್ಷಿಸು; ಪರಿವಾರ: ಬಂಧುಜನ; ಕೈಮಾಡು: ಹೋರಾಡು, ಹೊಡಿ; ತೋರು: ಪ್ರದರ್ಶಿಸು; ಬರಿಯ: ಕೇವಲ; ಕಂಠ: ಗಂಟಲು; ಮೂಡಿಗೆ: ಬಾಣಗಳನ್ನಿಡುವ ಚೀಲ, ಬತ್ತಳಿಕೆ; ಡಾವರ: ಬರಗಾಲ; ಲೇಹ: ನೆಕ್ಕುವುದು;

ಪದವಿಂಗಡಣೆ:
ಓಡಿ+ ಜಲದಲಿ +ಮುಳುಗಿದವರಿಗೆ
ಖೋಡಿಯುಂಟೇ +ರಥವಿಳಿದ +ರಣ
ಖೇಡ +ಕಾಲಾಳಿಂಗೆ +ಪಯಗತಿ+ಓರೆಪೋರೆಗಳೆ
ನೋಡುತಿದೆ +ಪರಿವಾರ +ನೀ +ಕೈ
ಮಾಡಿ +ತೋರಾ +ಬರಿಯ +ಕಂಠದ
ಮೂಡಿಗೆಯ +ಡಾವರದ +ಲೇಹುದೆಂದನಾ +ಭೀಮ

ಅಚ್ಚರಿ:
(೧) ಖೋಡಿ, ಖೇಡ – ಖ ಕಾರದ ಪದಗಲ ಬಳಕೆ
(೨) ಹಂಗಿಸುವ ಪರಿ – ನೀ ಕೈಮಾಡಿ ತೋರಾ ಬರಿಯ ಕಂಠದ ಮೂಡಿಗೆಯ ಡಾವರದ ಲೇಹುದೆಂದನಾ ಭೀಮ

ಪದ್ಯ ೧೯: ಹಸ್ತಿನಾಪುರದ ಸ್ಥಿತಿ ಹೇಗಿತ್ತು?

ತುಂಬಿತಿದು ಗಜಪುರವನಲ್ಲಿಯ
ಕಂಬನಿಯ ಕಾಲುವೆಯನದನೇ
ನೆಂಬೆನೈ ಗಜಬಜಿಕೆ ಮೊಳೆತುದು ಕೇರಿಕೇರಿಯಲಿ
ಲಂಬಿಸಿತು ಭಯತಿಮಿರ ಶೋಕಾ
ಡಂಬರದ ಡಾವರ ವಿವೇಕವ
ಚುಂಬಿಸಿತು ಧೃತರಾಷ್ಟ್ರ ವಿದುರರ ಪೌರ ಪರಿಜನದ (ಗದಾ ಪರ್ವ, ೪ ಸಂಧಿ, ೧೯ ಪದ್ಯ)

ತಾತ್ಪರ್ಯ:
ಪಾಳೆಯದಿಂದ ಹೋದ ಗಾಡಿ, ರಥ, ಕಂಬಿಗಳು ಗಜಪುರವನ್ನು ತಲುಪಲು ಕಣ್ಣಿರಿನ ಕಾಲುವೆಯೇ ಹರಿಯಿತು. ಕೇರಿಕೇರಿಗಳಲ್ಲಿ ಗೊಂದಲವಾಯಿತು. ಕರಾಳದ ಭಯದ ಕತ್ತಲೆ ಕವಿದು, ಧೃತರಾಷ್ಟ್ರ ವಿದುರ ಪುರಜನರೆಲ್ಲರ ವಿವೇಕವನ್ನು ಚುಂಬಿಸಿತು.

ಅರ್ಥ:
ತುಂಬು: ಭರ್ತಿಯಾಗು; ಗಜಪುರ: ಹಸ್ತಿನಾಪುರ; ಕಂಬನಿ: ಕಣ್ಣೀರು; ಕಾಲುವೆ: ನೀರು ಹರಿಯುವುದಕ್ಕಾಗಿ ಮಾಡಿದ ತಗ್ಗು; ಗಜಬಜ: ಕೋಲಾಹಲ; ಮೊಳೆತು: ಚಿಗುರು, ಅಂಕುರಿಸು; ಕೇರಿ: ದಾರಿ, ಮಾರ್ಗ; ಲಂಬ: ಉದ್ದ; ಭಯ: ಅಂಜಿಕೆ; ತಿಮಿರ: ಕತ್ತಲೆ; ಶೋಕ: ದುಃಖ; ಆಡಂಬರ: ತೋರಿಕೆ, ಢಂಭ; ಡಾವರ: ಹಿಂಸೆ, ಕೋಟಲೆ; ವಿವೇಕ: ಯುಕ್ತಾಯುಕ್ತ ವಿಚಾರ, ವಿವೇಚನೆ; ಚುಂಬಿಸು: ಮುತ್ತಿಡು; ಪೌರ: ಊರು; ಪರಿಜನ: ಸಂಬಂಧಿಕ;

ಪದವಿಂಗಡಣೆ:
ತುಂಬಿತಿದು +ಗಜಪುರವನ್+ಅಲ್ಲಿಯ
ಕಂಬನಿಯ +ಕಾಲುವೆಯನ್+ಅದನೇನ್
ಎಂಬೆನೈ +ಗಜಬಜಿಕೆ+ ಮೊಳೆತುದು +ಕೇರಿಕೇರಿಯಲಿ
ಲಂಬಿಸಿತು +ಭಯ+ತಿಮಿರ +ಶೋಕ
ಆಡಂಬರದ +ಡಾವರ +ವಿವೇಕವ
ಚುಂಬಿಸಿತು +ಧೃತರಾಷ್ಟ್ರ +ವಿದುರರ+ ಪೌರ +ಪರಿಜನದ

ಅಚ್ಚರಿ:
(೧) ದುಃಖದ ತೀವ್ರತೆಯನ್ನು ವಿವರಿಸುವ ಪರಿ – ತುಂಬಿತಿದು ಗಜಪುರವನಲ್ಲಿಯಕಂಬನಿಯ ಕಾಲುವೆ
(೨) ಭಯದ ತೀವ್ರತೆ – ಲಂಬಿಸಿತು ಭಯತಿಮಿರ ಶೋಕಾಡಂಬರದ ಡಾವರ ವಿವೇಕವ ಚುಂಬಿಸಿತು

ಪದ್ಯ ೩೮: ಭೀಮನ ಆಕ್ರಮಣ ಹೇಗಿತ್ತು?

ನೆತ್ತಿಯಗತೆಯೊಳೂರಿದಂಕುಶ
ವೆತ್ತಿದಡೆ ತಲೆಗೊಡಹಿದವು ಬೆರ
ಳೊತ್ತು ಗಿವಿಗಳ ಡಾವರಿಪಡಾವರದ ಡಬ್ಬುಕದ
ವಾರೆಯ ಬಗೆಯದಾನೆಗ
ಕುತ್ತುಳಿತ್ತ ಮುರಿದವು ಸಿಂಹನಾದಕೆ
ಮತ್ತಗಜ ಮೊಗದಿರುಹಿದವು ದಳವುಳಿಸಿದನು ಭೀಮ (ಗದಾ ಪರ್ವ, ೨ ಸಂಧಿ, ೩೮ ಪದ್ಯ)

ತಾತ್ಪರ್ಯ:
ಭೀಮನು ಸಿಂಹನಾದವನ್ನು ಹೊರಹೊಮ್ಮುತ್ತಾ ರಭಸದಿಂದ ಬರಲು, ಜೋದರು ನೆತ್ತಿಗಿರಿದ ಅಂಕುಶವನ್ನೆತ್ತಿದೊಡನೆ ತಲೆಕೊಡವಿ ನಿಂತುಬಿಟ್ಟವು. ಬೆರಳಿಂದ ಕಿವಿಗಳನ್ನೊತ್ತಿದ ಹಾರೆಗೆ ಬೆದರಳೆ ಇಲ್ಲ. ಆನೆಗಳು ಹಿಮ್ಮೆಟ್ಟಿದವು.

ಅರ್ಥ:
ನೆತ್ತಿ: ಶಿರ; ಅಗತೆ: ತೋಡು; ಊರು: ಭದ್ರವಾಗಿ ನಿಲಿಸು; ಅಂಕುಶ: ಹಿಡಿತ, ಹತೋಟಿ; ತಲೆ: ಶಿರ; ಕೊಡು: ನೀಡು; ಬೆರಳು: ಅಂಗುಲಿ; ಒತ್ತು: ಚುಚ್ಚು, ತಿವಿ; ಕಿವಿ: ಕರ್ಣ; ಡಾವರಿಸು: ನೋಯಿಸು; ಡಬ್ಬುಕ: ಡಬ್ ಡಬ್ ಸಪ್ಪಳ; ಡಾವರ: ಕ್ಷೋಭೆ; ಬಗೆ: ಎಣಿಸು; ಆನೆ: ಗಜ; ಕುತ್ತು: ತಿವಿ; ಮುರಿ: ಸೀಳು; ಸಿಂಹನಾದ: ಗರ್ಜನೆ; ಮತ್ತಗಜ: ಅಮಲಿನಿಂದ ಕೂಡಿದ ಆನೆ; ಮೊಗ: ಮುಖ, ಮೋರೆ; ದಳ: ಸೈನ್ಯ; ಉಳಿಸು: ರಕ್ಷಿಸು;

ಪದವಿಂಗಡಣೆ:
ನೆತ್ತಿ+ಅಗತೆಯೊಳ್+ಊರಿದ್+ಅಂಕುಶವ್
ಎತ್ತಿದಡೆ +ತಲೆ+ಕೊಡಹಿದವು +ಬೆರಳ್
ಒತ್ತು + ಕಿವಿಗಳ +ಡಾವರಿಪ + ಡಾವರದ +ಡಬ್ಬುಕದ
ವಾರೆಯ +ಬಗೆಯದ್+ಆನೆಗ
ಕುತ್ತುಳ್+ಇತ್ತ +ಮುರಿದವು +ಸಿಂಹನಾದಕೆ
ಮತ್ತಗಜ+ ಮೊಗದ್+ಇರುಹಿದವು + ದಳವುಳಿಸಿದನು +ಭೀಮ

ಅಚ್ಚರಿ:
(೧) ಡ ಕಾರದ ಪದಗಳು – ಡಾವರಿಪ ಡಾವರದ ಡಬ್ಬುಕದ
(೨) ಭೀಮನ ಗರ್ಜನೆಯ ಶಕ್ತಿ – ಮುರಿದವು ಸಿಂಹನಾದಕೆ ಮತ್ತಗಜ ಮೊಗದಿರುಹಿದವು

ಪದ್ಯ ೫೩: ಭೀಮನು ಧರ್ಮಜನನ್ನು ರಕ್ಷಿಸಲು ಹೇಗೆ ಬಂದನು?

ಎಲೆಲೆ ಭೂಪತಿ ಸಿಕ್ಕಿದನು ಗಜ
ಬಲದ ಭಾರಣೆ ಬಲುಹೆನುತ ಬಲ
ಕಳವಳಿಸೆ ಕೇಳಿದನಲೈ ಕಲಿಭೀಮನಾಚೆಯಲಿ
ಪ್ರಳಯದಿವಸದ ಶಿಖಿಯ ಡಾವರ
ದೊಳಗೆ ಶ್ರವಮಾಡಿದನೆನಲು ಮಿಗೆ
ಮೊಳಗಿ ಮಂಡಿಯನಿಕ್ಕಿ ಮಲೆತನು ಸಿಂಹನಾದದಲಿ (ಗದಾ ಪರ್ವ, ೧ ಸಂಧಿ, ೫೩ ಪದ್ಯ)

ತಾತ್ಪರ್ಯ:
ಪಾಂಡವ ಸೇನೆಯು, ಆನೆಯ ಸೈನ್ಯ ಬಹಳ ಬಲಶಾಲಿಯಾಗಿದೆ. ದೊರೆಯು ಅದಕ್ಕೆ ಸಿಕ್ಕಿಬಿಟ್ಟ ಎಮ್ದು ಗೊಂದಲ ಪಡಲು, ಆಚೆಯಿದ್ದ ವೀರ ಭೀಮನು ಅದನ್ನು ಕೇಳಿದನು. ಪ್ರಳಯ ಕಾಲದ ಅಗ್ನಿಯ ಡಾವರದಲ್ಲಿ ಸಾಧನೆ ಮಾಡಿದವನೋ ಎಂಬಂತೆ ಗರ್ಜಿಸಿ, ಮಂಡಿಯನ್ನಿಟ್ಟು ಸಿಂಹನಾದವನ್ನು ಮಾಡಿ ಗಜಸೈನ್ಯಕ್ಕೆ ಇದಿರಾದನು.

ಅರ್ಥ:
ಭೂಪತಿ: ರಾಜ; ಸಿಕ್ಕು: ಬಂಧನಕ್ಕೊಳಗಾಗು, ಸೆರೆಯಾಗು; ಗಜ: ಆನೆ; ಬಲ: ಸೈನ್ಯ, ಶಕ್ತಿ; ಭಾರಣೆ: ಮಹಿಮೆ, ಗೌರವ; ಬಲುಹು: ಬಲ, ಶಕ್ತಿ; ಕಳವಳ: ಗೊಂದಲ; ಕೇಳು: ಆಲಿಸು; ಕಲಿ: ಶೂರ; ಆಚೆ: ಹೊರಗೆ; ಪ್ರಳಯ: ಅಂತ್ಯಕಾಲ; ದಿವಸ: ದಿನ; ಶಿಖಿ: ಅಗ್ನಿ; ಡಾವರ: ತೀವ್ರತೆ, ರಭಸ; ಶ್ರವ: ಶಬ್ದ, ಧ್ವನಿ ಮಾಡು; ಮಿಗೆ: ಅಧಿಕ; ಮೊಳಗು: ಧ್ವನಿ, ಸದ್ದು; ಮಂಡಿ: ಮೊಳಕಾಲು; ಮಲೆ: ಗರ್ವಿಸು; ಸಿಂಹ: ಕೇಸರಿ; ನಾದ: ಶಬ್ದ;

ಪದವಿಂಗಡಣೆ:
ಎಲೆಲೆ +ಭೂಪತಿ +ಸಿಕ್ಕಿದನು +ಗಜ
ಬಲದ +ಭಾರಣೆ +ಬಲುಹೆನುತ+ ಬಲ
ಕಳವಳಿಸೆ +ಕೇಳಿದನಲೈ +ಕಲಿಭೀಮನ್+ಆಚೆಯಲಿ
ಪ್ರಳಯ+ದಿವಸದ+ ಶಿಖಿಯ +ಡಾವರ
ದೊಳಗೆ +ಶ್ರವಮಾಡಿದನೆನಲು +ಮಿಗೆ
ಮೊಳಗಿ+ ಮಂಡಿಯನಿಕ್ಕಿ +ಮಲೆತನು +ಸಿಂಹನಾದದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಪ್ರಳಯದಿವಸದ ಶಿಖಿಯ ಡಾವರ ದೊಳಗೆ ಶ್ರವಮಾಡಿದನೆನಲು
(೨) ಮ ಕಾರದ ಸಾಲು ಪದ – ಮಿಗೆ ಮೊಳಗಿ ಮಂಡಿಯನಿಕ್ಕಿ ಮಲೆತನು
(೩) ಬ ಕಾರದ ಸಾಲು ಪದ – ಬಲದ ಭಾರಣೆ ಬಲುಹೆನುತ ಬಲ
(೪) ಕ ಕಾರದ ಸಾಲು ಪದ – ಕಳವಳಿಸೆ ಕೇಳಿದನಲೈ ಕಲಿಭೀಮನಾಚೆಯಲಿ

ಪದ್ಯ ೧೭: ಅಶ್ವತ್ಥಾಮನ ಬಾಣಗಳಿಗೆ ಯಾರು ತುತ್ತಾದರು?

ಕಡಿವಡೆದುದಿನ್ನೂರು ಗಜ ಧರೆ
ಗುಡಿದು ಬಿದ್ದುದು ತೇರು ಸಾವಿರ
ವಡಗುದರಿಯಾಯ್ತಶ್ವಚಯ ಸಾವಿರದ ಮೂನೂರು
ಕಡುಗಲಿಗಳರುವತ್ತು ಸಾವಿರ
ವೊಡಲನಿಕ್ಕಿತು ಪಾಯದಳವು
ಗ್ಗಡದ ಡಾವರ ಡಿಳ್ಳವಾದುದು ವೈರಿಸುಭಟರಿಗೆ (ಶಲ್ಯ ಪರ್ವ, ೩ ಸಂಧಿ, ೧೭ ಪದ್ಯ)

ತಾತ್ಪರ್ಯ:
ಇನ್ನೂರು ಆನೆಗಳು, ಸಾವಿರ ರಥಗಳು, ಸಾವಿರದ ಮುನ್ನೂರು ಕುದುರೆಗಳು, ಅರವತ್ತು ಸಾವಿರ ಕಾಲಾಳುಗಳು ಅಶ್ವತ್ಥಾಮನ ಬಾಣಗಳಿಗೆ ತುತ್ತಾದರು.

ಅರ್ಥ:
ಕಡಿ: ಸೀಳು; ಗಜ: ಆನೆ; ಧರೆ: ಭೂಮಿ; ಕುಡಿ: ತುದಿ, ಕೊನೆ; ಬಿದ್ದು: ಬೀಳು; ತೇರು: ಬಂಡಿ; ಸಾವಿರ: ಸಹಸ್ರ; ಅಶ್ವಚಯ: ಕುದುರೆಯ ಗುಂಪು; ಕಡುಗಲಿ: ಪರಾಕ್ರಮ; ಒಡಲು: ದೇಹ; ಪಾಯದಳ: ಸೈನಿಕ; ಉಗ್ಗಡ: ಉತ್ಕಟತೆ, ಅತಿಶಯ; ಡಾವರ: ಹಿಂಸೆ, ಕೋಟಲೆ; ಡಿಳ್ಳ: ಸಡಿಲು; ವೈರಿ: ಶತ್ರು; ಭಟ: ಸೈನಿಕ;

ಪದವಿಂಗಡಣೆ:
ಕಡಿವಡೆದುದ್+ಇನ್ನೂರು +ಗಜ +ಧರೆ
ಕುಡಿದು +ಬಿದ್ದುದು +ತೇರು +ಸಾವಿರ
ವಡಗುದರಿಯಾಯ್ತ್+ಅಶ್ವಚಯ+ ಸಾವಿರದ +ಮೂನೂರು
ಕಡುಗಲಿಗಳ್+ಅರುವತ್ತು +ಸಾವಿರ
ಒಡಲನಿಕ್ಕಿತು +ಪಾಯದಳವ್
ಉಗ್ಗಡದ+ ಡಾವರ +ಡಿಳ್ಳವಾದುದು +ವೈರಿ+ಸುಭಟರಿಗೆ

ಅಚ್ಚರಿ:
(೧) ಸಾವಿರ – ೨, ೪ ಸಾಲಿನ ಕೊನೆ ಪದ

ಪದ್ಯ ೨೭: ಶ್ರೀಕೃಷ್ಣನು ಕುದುರೆಗಳ ಆಯಾಸವನ್ನು ಹೇಗೆ ದೂರಮಾಡಿದನು?

ದೇವ ಕಾಳೆಗ ಬಲುಹು ಬಿಸಿಲಿನ
ಡಾವರಕೆ ರಥತುರಗವತಿ ನಿ
ರ್ಜೀವಿಯಾದವು ಹರಿಯ ಗಮನದ ಹದನನರಿಯೆನಲು
ಆ ವಿನೋದಿಗಳರಸ ಶರಣರ
ಕಾವ ಭರದಲಿ ದನುಜಕುಲ ವಿ
ದ್ರಾವಣನು ನಸುನಗುತ ಬೋಳೈಸಿದನು ತೇಜಿಗಳ (ದ್ರೋಣ ಪರ್ವ, ೧೦ ಸಂಧಿ, ೨೭ ಪದ್ಯ)

ತಾತ್ಪರ್ಯ:
ಅರ್ಜುನನು, ದೇವ, ಯುದ್ಧವು ಬಹಳ ಭಯಂಕರವಾಗಿದೆ, ಬಿಸಿಲಿನ ಕಾಟಕ್ಕೆ ರಥದ ಕುದುರೆಗಳು ಬಾಯಾರಿಸಿ ಬಳಲಿವೆ, ಇವು ಸರಿಯಾಗುವುದು ಹೇಗೆ ಕಂಡುಹಿಡಿಯಿರಿ ಎನ್ನಲು, ರಾಕ್ಷಸ ಕುಲದ ಸಂಹಾರನೂ, ವಿನೋದಿಗಳ ಒಡೆಯನೂ ಆದ ಶ್ರೀಕೃಷ್ಣನು ಭಕ್ತನನ್ನು ಕಾಯಲೆಂದು ನಸುನಗುತ್ತಾ ಕುದುರೆಗಳ ಮೇಲೆ ಕೈಯಾಡಿಸಿದನು.

ಅರ್ಥ:
ದೇವ: ಭಗವಂತ; ಕಾಳೆಗ: ಯುದ್ಧ; ಬಲುಹು: ಬಹಳ; ಬಿಸಿಲು: ಕಾವು; ಡಾವರ: ತೀವ್ರತೆ, ರಭಸ; ರಥ: ಬಂಡಿ; ತುರಗ: ಅಶ್ವ; ನಿರ್ಜೀವ: ಜೀವ ವಿಲ್ಲದ; ಹರಿ: ಕೃಷ್ಣ; ಗಮನ: ಲಕ್ಷ್ಯ, ಅವಧಾನ; ಹದ: ಸ್ಥಿತಿ; ಅರಿ: ತಿಳಿ; ವಿನೋದ: ಹಾಸ್ಯ, ತಮಾಷೆ; ಅರಸ: ರಾಜ; ಶರಣ: ಭಕ್ತ; ಕಾವ: ಕಾವಲು, ರಕ್ಷಿಸು; ಭರ: ವೇಗ; ದನುಜ: ರಾಕ್ಷಸ; ಕುಲ: ವಂಶ; ವಿದ್ರಾವಣ: ನಾಶ ಮಾಡುವ; ನಗು: ಹರ್ಷ; ಬೋಳೈಸು: ಸಂತೈಸು; ತೇಜಿ: ಕುದುರೆ;

ಪದವಿಂಗಡಣೆ:
ದೇವ +ಕಾಳೆಗ +ಬಲುಹು +ಬಿಸಿಲಿನ
ಡಾವರಕೆ +ರಥ+ತುರಗವ್+ಅತಿ +ನಿ
ರ್ಜೀವಿಯಾದವು +ಹರಿಯ +ಗಮನದ +ಹದನನ್+ಅರಿಯೆನಲು
ಆ +ವಿನೋದಿಗಳರಸ+ ಶರಣರ
ಕಾವ +ಭರದಲಿ+ ದನುಜಕುಲ+ ವಿ
ದ್ರಾವಣನು +ನಸುನಗುತ +ಬೋಳೈಸಿದನು +ತೇಜಿಗಳ

ಅಚ್ಚರಿ:
(೧) ವಿನೋದಿಗಳರಸ, ದನುಜಕುಲ ವಿದ್ರಾವಣ, ದೇವ, ಹರಿ – ಕೃಷ್ಣನನ್ನು ಕರೆದ ಪರಿ

ಪದ್ಯ ೧೧: ಸುಭದ್ರಾದೇವಿಯು ಯಾವ ವಾರ್ತೆಯನ್ನು ಕೇಳಿದಳು?

ಅರಮನೆಯ ಗಜಬಜವ ಕೇಳಿದು
ದೊರೆಯೊಳಾವವನಳಿದನಕಟೆಂ
ದರಸಿಯರು ಬೆಸಗೊಳಲು ದ್ರೌಪದಿಗರುಹಿದರು ಹದನ
ಉರಿಯ ಡಾವರವೆಳೆಯ ಬಾಳೆಯ
ಬೆರಸುವಂತಿರೆ ರಾಯ ಕುವರನ
ಮರಣವಾರ್ತೆಯನಾ ಸುಭದ್ರಾದೇವಿ ಕೇಳಿದಳು (ದ್ರೋಣ ಪರ್ವ, ೭ ಸಂಧಿ, ೧೧ ಪದ್ಯ)

ತಾತ್ಪರ್ಯ:
ಅರಮನೆಯಲ್ಲೇನು ಗದ್ದಲ, ಅರಸರಲ್ಲಿ ಯಾರಾದರೂ ಅಳಿದರೇ ಅಯ್ಯೋ ಎಂದು ರಾಣಿವಾಸದಾರು ಕೇಳಲು, ದ್ರೌಪದಿಗೆ ಸುದ್ದಿಯನ್ನು ತಿಳಿಸಿದರು. ಉರಿಯ ಜ್ವಾಲೆಯು ಎಳೆ ಬಾಳೆಯನ್ನು ಆವರಿಸಿದಂತೆ, ಮಗನ ಮರಣ ವಾರ್ತೆಯನ್ನು ಸುಭದ್ರಾ ದೇವಿಯು ಕೇಳಿದಳು.

ಅರ್ಥ:
ಅರಮನೆ: ರಾಜರ ಆಲಯ; ಗಜಬಜ: ಗೊಂದಲ; ಕೇಳು: ಆಲಿಸು; ದೊರೆ: ಅರಸ; ಅಳಿ: ನಾಶ; ಅಕಟ: ಅಯ್ಯೋ; ಅರಸಿ: ರಾಣಿ; ಬೆಸ: ವಿಚಾರಿಸುವುದು; ಅರುಹು: ಹೇಳು; ಹದ: ಸ್ಥಿತಿ; ಉರಿ: ಬೆಂಕಿ; ಡಾವರ: ದಗೆ; ಬಾಳೆ: ಕದಳಿಫಲ; ಎಳೆ: ಚಿಕ್ಕ; ಬೆಅರ್ಸು: ಆವರಿಸು; ರಾಯ: ರಾಜ; ಕುವರ: ಮಗು; ಮರಣ: ಸಾವು; ವಾರ್ತೆ: ವಿಷಯ; ಕೇಳು: ಆಲಿಸು;

ಪದವಿಂಗಡಣೆ:
ಅರಮನೆಯ +ಗಜಬಜವ +ಕೇಳಿದು
ದೊರೆಯೊಳ್+ಆವವನ್+ಅಳಿದನ್+ಅಕಟೆಂದ್
ಅರಸಿಯರು +ಬೆಸಗೊಳಲು +ದ್ರೌಪದಿಗ್+ಅರುಹಿದರು +ಹದನ
ಉರಿಯ +ಡಾವರವ್+ಎಳೆಯ +ಬಾಳೆಯ
ಬೆರಸುವಂತಿರೆ +ರಾಯ +ಕುವರನ
ಮರಣ+ವಾರ್ತೆಯನಾ+ ಸುಭದ್ರಾದೇವಿ +ಕೇಳಿದಳು

ಅಚ್ಚರಿ:
(೧) ಉಪಮಾನದ ಪ್ರಯೋಗ – ಉರಿಯ ಡಾವರವೆಳೆಯ ಬಾಳೆಯ ಬೆರಸುವಂತಿರೆ

ಪದ್ಯ ೨೮: ಕೀಚಕನು ದ್ರೌಪದಿಯನ್ನು ಹೇಗೆ ಬೇಡಿದ?

ಸಾವು ತಪ್ಪದು ತನಗೆ ಕಾಮನ
ಡಾವರವು ಘನ ನಿನ್ನ ನೆರೆದೇ
ಸಾವೆನಲ್ಲದೆ ಕಾಮನಂಬಿಂಗೊಡಲನೊಪ್ಪಿಸೆನು
ಭಾವೆ ನೂಕದಿರೆನ್ನ ವರ ರಾ
ಜೀವಮುಖಿ ಕೃಪೆ ಮಾಡು ತನ್ನಯ
ಜೀವನವನುಳುಹೆನುತ ಕಮಲಾನನಗೆ ಕೈಮುಗಿದ (ವಿರಾಟ ಪರ್ವ, ೨ ಸಂಧಿ, ೨೮ ಪದ್ಯ)

ತಾತ್ಪರ್ಯ:
ಕೀಚಕನ ವಿವೇಕವು ಮಾಸಿಹೋದವು, ಸೈರಂಧ್ರಿ ಹೇಗಿದ್ದರೂ ನನಗೆ ಸಾವು ತಪ್ಪುವುದಿಲ್ಲ, ಮನ್ಮಥನ ತಾಪ ಬಲು ಹೆಚ್ಚಿನದು. ನಿನ್ನನ್ನು ಕೂಡಿಯೇ ಸಾಯುತ್ತೇನೆ, ಕಾಮನ ಬಾಣಗಳಿಗೆ ಈ ದೇಹವನ್ನು ಬಲಿಕೊಡುವುದಿಲ್ಲ. ಸುಂದರಿ, ನನ್ನನ್ನು ತಿರಸ್ಕರಿಸಬೇಡ. ಕಮಲವದನೆ ನನ್ನ ಮೇಲೆ ಕೃಪೆಮಾಡು, ಎಂದು ಕೀಚಕನು ದ್ರೌಪದಿಗೆ ಕೈಮುಗಿದನು.

ಅರ್ಥ:
ಸಾವು: ಮರಣ; ತಪ್ಪದು: ಖಂಡಿತವಾಗಿ ಬರುತ್ತದೆ; ಕಾಮ: ಮನ್ಮಥ; ಡಾವರ: ತೀವ್ರತೆ, ರಭಸ; ಘನ: ಶ್ರೇಷ್ಠ; ನೆರೆ:ಸೇರು, ಜೊತೆಗೂಡು; ಅಂಬು: ಬಾಣ; ಒಡಲು: ದೇಹ; ಒಪ್ಪಿಸು: ಸಮ್ಮತಿಸು, ನೀಡು; ಭಾವೆ: ಸುಂದರಿ; ನೂಕು: ತಳ್ಳು; ವರ: ಶ್ರೇಷ್ಠ; ರಾಜೀವಮುಖಿ: ಕಮಲದಂತ ಮುಖವುಳ್ಳವಳು; ಕೃಪೆ: ದಯೆ; ಜೀವ: ಪ್ರಾಣ; ಉಳುಹು: ರಕ್ಷಿಸು; ಕಮಲಾನನೆ: ಕಮಲದಂತ ಮುಖವುಳ್ಳವಳು; ಕೈಮುಗಿ: ನಮಸ್ಕರಿಸು;

ಪದವಿಂಗಡಣೆ:
ಸಾವು+ ತಪ್ಪದು +ತನಗೆ +ಕಾಮನ
ಡಾವರವು +ಘನ +ನಿನ್ನ +ನೆರೆದೇ
ಸಾವೆನ್+ಅಲ್ಲದೆ+ ಕಾಮನ್+ಅಂಬಿಂಗ್+ಒಡಲನ್+ಒಪ್ಪಿಸೆನು
ಭಾವೆ +ನೂಕದಿರ್+ಎನ್ನ +ವರ +ರಾ
ಜೀವಮುಖಿ +ಕೃಪೆ+ ಮಾಡು +ತನ್ನಯ
ಜೀವನವನ್+ಉಳುಹೆನುತ+ ಕಮಲಾನನಗೆ+ ಕೈಮುಗಿದ

ಅಚ್ಚರಿ:
(೧) ರಾಜೀವಮುಖಿ, ಕಮಲಾನನೆ, ಭಾವೆ – ದ್ರೌಪದಿಯನ್ನು ಕರೆದ ಪರಿ