ಪದ್ಯ ೨೮: ಕೀಚಕನು ದ್ರೌಪದಿಯನ್ನು ಹೇಗೆ ಬೇಡಿದ?

ಸಾವು ತಪ್ಪದು ತನಗೆ ಕಾಮನ
ಡಾವರವು ಘನ ನಿನ್ನ ನೆರೆದೇ
ಸಾವೆನಲ್ಲದೆ ಕಾಮನಂಬಿಂಗೊಡಲನೊಪ್ಪಿಸೆನು
ಭಾವೆ ನೂಕದಿರೆನ್ನ ವರ ರಾ
ಜೀವಮುಖಿ ಕೃಪೆ ಮಾಡು ತನ್ನಯ
ಜೀವನವನುಳುಹೆನುತ ಕಮಲಾನನಗೆ ಕೈಮುಗಿದ (ವಿರಾಟ ಪರ್ವ, ೨ ಸಂಧಿ, ೨೮ ಪದ್ಯ)

ತಾತ್ಪರ್ಯ:
ಕೀಚಕನ ವಿವೇಕವು ಮಾಸಿಹೋದವು, ಸೈರಂಧ್ರಿ ಹೇಗಿದ್ದರೂ ನನಗೆ ಸಾವು ತಪ್ಪುವುದಿಲ್ಲ, ಮನ್ಮಥನ ತಾಪ ಬಲು ಹೆಚ್ಚಿನದು. ನಿನ್ನನ್ನು ಕೂಡಿಯೇ ಸಾಯುತ್ತೇನೆ, ಕಾಮನ ಬಾಣಗಳಿಗೆ ಈ ದೇಹವನ್ನು ಬಲಿಕೊಡುವುದಿಲ್ಲ. ಸುಂದರಿ, ನನ್ನನ್ನು ತಿರಸ್ಕರಿಸಬೇಡ. ಕಮಲವದನೆ ನನ್ನ ಮೇಲೆ ಕೃಪೆಮಾಡು, ಎಂದು ಕೀಚಕನು ದ್ರೌಪದಿಗೆ ಕೈಮುಗಿದನು.

ಅರ್ಥ:
ಸಾವು: ಮರಣ; ತಪ್ಪದು: ಖಂಡಿತವಾಗಿ ಬರುತ್ತದೆ; ಕಾಮ: ಮನ್ಮಥ; ಡಾವರ: ತೀವ್ರತೆ, ರಭಸ; ಘನ: ಶ್ರೇಷ್ಠ; ನೆರೆ:ಸೇರು, ಜೊತೆಗೂಡು; ಅಂಬು: ಬಾಣ; ಒಡಲು: ದೇಹ; ಒಪ್ಪಿಸು: ಸಮ್ಮತಿಸು, ನೀಡು; ಭಾವೆ: ಸುಂದರಿ; ನೂಕು: ತಳ್ಳು; ವರ: ಶ್ರೇಷ್ಠ; ರಾಜೀವಮುಖಿ: ಕಮಲದಂತ ಮುಖವುಳ್ಳವಳು; ಕೃಪೆ: ದಯೆ; ಜೀವ: ಪ್ರಾಣ; ಉಳುಹು: ರಕ್ಷಿಸು; ಕಮಲಾನನೆ: ಕಮಲದಂತ ಮುಖವುಳ್ಳವಳು; ಕೈಮುಗಿ: ನಮಸ್ಕರಿಸು;

ಪದವಿಂಗಡಣೆ:
ಸಾವು+ ತಪ್ಪದು +ತನಗೆ +ಕಾಮನ
ಡಾವರವು +ಘನ +ನಿನ್ನ +ನೆರೆದೇ
ಸಾವೆನ್+ಅಲ್ಲದೆ+ ಕಾಮನ್+ಅಂಬಿಂಗ್+ಒಡಲನ್+ಒಪ್ಪಿಸೆನು
ಭಾವೆ +ನೂಕದಿರ್+ಎನ್ನ +ವರ +ರಾ
ಜೀವಮುಖಿ +ಕೃಪೆ+ ಮಾಡು +ತನ್ನಯ
ಜೀವನವನ್+ಉಳುಹೆನುತ+ ಕಮಲಾನನಗೆ+ ಕೈಮುಗಿದ

ಅಚ್ಚರಿ:
(೧) ರಾಜೀವಮುಖಿ, ಕಮಲಾನನೆ, ಭಾವೆ – ದ್ರೌಪದಿಯನ್ನು ಕರೆದ ಪರಿ

ಪದ್ಯ ೪೫: ಅರ್ಜುನನು ಏನೆಂದು ಚಿಂತಿಸಿದನು?

ಸುರಪತಿಗೆ ಸೂಚಿಸಿದೆನೇ ಮೇಣ್
ಕರೆಸಿದೆನೆ ಕಮಲಾನನೆಯ ನಿ
ಷ್ಠುರದ ನುಡಿಗಪರಾಧವುಂಟೇ ತಾನು ಮಾಡಿದುದು
ಮವರುಷತನಕ ನಪುಂಸಕದಲಾ
ಚರಿಸಿ ಬಲ್ಲೆನೆ ಸಾಕು ದೇಹಾಂ
ತರವನಂಗೀಕರಿಸುವೆನಲಾ ತನ್ನ ಸುಡಲೆಂದ (ಅರಣ್ಯ ಪರ್ವ, ೯ ಸಂಧಿ, ೪೫ ಪದ್ಯ)

ತಾತ್ಪರ್ಯ:
ಅರ್ಜುನನು ಚಿಂತಾಕ್ರಾಂತನಾದನು, ಊರ್ವಶಿಯನ್ನು ನನ್ನ ಬಳಿ ಕರೆಸೆಂದು ನಾನು ಇಂದ್ರನಿಗೆ ಹೇಳಿದ್ದೆನೆ? ಊರ್ವಶಿಯನ್ನು ತನ್ನ ಬಳಿ ಬಾರೆಂದು ನಾನು ಕರೆಸಿದೆನೇ? ಊರ್ವಶಿಯು ನಿಷ್ಠುರವಾಗಿ ಶಪಿಸಲು ನಾನು ಮಾಡಿದ ತಪ್ಪಾದರೇನು? ಒಂದು ವರ್ಷ ನಪುಂಸಕನಾಗಿ ನಾನು ಓಡಾಡಲು ಸಾಧ್ಯವೇ? ಇಷ್ಟು ಸಾಕು ಬೇರೆ ದೇಹವನ್ನೇ ಹೊಂದುವುದು ಉತ್ತಮ, ನನ್ನನ್ನು ಸುಡಲಿ ಎಂದು ಅರ್ಜುನನು ವ್ಯಥೆಯಿಂದ ಚಿಂತಿಸಿದನು.

ಅರ್ಥ:
ಸುರಪತಿ: ಇಂದ್ರ; ಸೂಚಿಸು: ತಿಳಿಸು; ಮೇಣ್: ಅಥವ; ಕರೆಸು: ಬರೆಮಾಡು; ಕಮಲಾನನೆ: ಕಮಲದಂತ ಮುಖವುಳ್ಳವಳು (ಊರ್ವಶಿ); ನಿಷ್ಠುರ: ಕಠಿಣವಾದ; ನುಡಿ: ಮಾತು; ಅಪರಾಧ: ತಪ್ಪು; ಮಾಡು: ಆಚರಿಸು; ವರುಷ: ಸಂವತ್ಸರ; ತನಕ: ವರೆಗು; ನಪುಂಸಕ: ಕೊಜ್ಜೆ, ಷಂಡ, ಖೋಜಾ; ಆಚರಿಸು: ನಡೆಸು; ಬಲ್ಲೆ: ತಿಳಿ; ಸಾಕು: ಕೊನೆ, ಅಂತ್ಯ; ದೇಹಾಂತರ: ದೇಹದಿಂದ ಹೊರಹೋಗು, ದೇಹವನ್ನು ತೊರೆ; ದೇಹ: ತನು, ಶರೀರ; ಅಂಗೀಕರಿಸು: ಸಮ್ಮತಿಸು; ಸುಡು: ದಹಿಸು;

ಪದವಿಂಗಡಣೆ:
ಸುರಪತಿಗೆ +ಸೂಚಿಸಿದೆನೇ +ಮೇಣ್
ಕರೆಸಿದೆನೆ+ ಕಮಲಾನನೆಯ +ನಿ
ಷ್ಠುರದ +ನುಡಿಗ್+ಅಪರಾಧವುಂಟೇ +ತಾನು +ಮಾಡಿದುದು
ವರುಷತನಕ +ನಪುಂಸಕದಲ್
ಆಚರಿಸಿ +ಬಲ್ಲೆನೆ +ಸಾಕು +ದೇಹಾಂ
ತರವನ್+ಅಂಗೀಕರಿಸುವೆನಲಾ+ ತನ್ನ +ಸುಡಲೆಂದ

ಅಚ್ಚರಿ:
(೧) ಅರ್ಜುನನು ಸಾಯಲು ನಿಶ್ಚಯಿಸುವ ಪರಿ – ದೇಹಾಂತರವನಂಗೀಕರಿಸುವೆನಲಾ ತನ್ನ ಸುಡಲೆಂದ