ಪದ್ಯ ೧೮: ಯುಧಿಷ್ಠಿರನೇಕೆ ನಿಟ್ಟುಸಿರು ಬಿಟ್ಟನು?

ಅತ್ತ ಸಾತ್ಯಕಿಗಾಯ್ತು ರಣದೊ
ತ್ತೊತ್ತೆ ಮೋಹರ ಮಧ್ಯರಂಗದೊ
ಳಿತ್ತಲರ್ಜುನನಾಹವವನೇನೆಂಬೆನದ್ಭುತವ
ಮತ್ತೆ ಕೃಷ್ಣನ ಶಂಖನಾದವ
ನಿತ್ತಲವನೀಪಾಲ ಕೇಳಿದು
ಚಿತ್ತ ಕದಡಿದುದಡಿಗಡಿಗೆ ಮನನೊಂದು ಬಿಸುಸುಯ್ದು (ದ್ರೋಣ ಪರ್ವ, ೧೧ ಸಂಧಿ, ೧೮ ಪದ್ಯ)

ತಾತ್ಪರ್ಯ:
ಹಂಸವ್ಯೂಹದಲ್ಲಿ ಸಾತ್ಯಕಿಯ ಸುತ್ತಲೂ ಯುದ್ಧವು ಒತ್ತರಿಸಿತ್ತು. ಇತ್ತ ಅರ್ಜುನನೂ ಅದ್ಭುತವಾಗಿ ಹೋರಾಡುತ್ತಿದ್ದನು. ಕೃಷ್ಣನು ಮತ್ತೆ ಪಾಂಚಜನ್ಯವನ್ನೂದಿದನು. ಕೃಷ್ಣನ ಶಂಖನಾದವನ್ನು ಕೇಳಿ ಯುಧಿಷ್ಠಿರನ ಮನಸ್ಸು ಕದಡಿ ನೋವನ್ನುಂಡು ನಿಟ್ಟುಸಿರು ಬಿಟ್ಟನು.

ಅರ್ಥ:
ರಣ: ಯುದ್ಧ; ಒತ್ತು: ಆಕ್ರಮಿಸು, ಮುತ್ತು; ಮೋಹರ: ಯುದ್ಧ; ಮಧ್ಯ: ನಡುವೆ; ರಂಗ: ಯುದ್ಧ; ಆಹವ: ಯುದ್ಧ; ಅದ್ಭುತ: ಆಶ್ಚರ್ಯ; ಶಂಖ: ಕಂಬು; ನಾದ: ಶಬ್ದ; ಅವನೀಪಾಲ: ರಾಜ; ಕೇಳು: ಆಲಿಸು; ಚಿತ್ತ: ಮನಸ್ಸು; ಕದಡು: ಕಲಕು; ಅಡಿಗಡಿ: ಮತ್ತೆ ಮತ್ತೆ; ಮನ: ಮನಸ್ಸು; ನೊಂದು: ನೋವುಂಡು; ಬಿಸುಸುಯ್: ನಿಟ್ಟುಸಿರು ಬಿಡು;

ಪದವಿಂಗಡಣೆ:
ಅತ್ತ +ಸಾತ್ಯಕಿಗಾಯ್ತು +ರಣದ್
ಒತ್ತೊತ್ತೆ +ಮೋಹರ +ಮಧ್ಯ+ರಂಗದೊಳ್
ಇತ್ತಲ್+ಅರ್ಜುನನ್+ಆಹವವನ್+ಏನೆಂಬೆನ್+ಅದ್ಭುತವ
ಮತ್ತೆ +ಕೃಷ್ಣನ +ಶಂಖನಾದವನ್
ಇತ್ತಲ್+ಅವನೀಪಾಲ +ಕೇಳಿದು
ಚಿತ್ತ +ಕದಡಿದುದ್+ಅಡಿಗಡಿಗೆ +ಮನನೊಂದು +ಬಿಸುಸುಯ್ದು

ಅಚ್ಚರಿ:
(೧) ಅತ್ತ, ಇತ್ತ, ಚಿತ್ತ – ಪ್ರಾಸ ಪದಗಳು

ಪದ್ಯ ೨೬: ಸೇನೆಯನ್ನು ಕೌರವನು ಎರಡು ಭಾಗವನ್ನಾಗಿಸಿದನೇಕೆ?

ಮೇಲೆ ನೆಗಳುವ ಹದನನಿಲ್ಲಿಂ
ಮೇಲೆ ನೀನೇ ಬಲ್ಲೆಯೆನುತ ವಿ
ಶಾಲಮತಿ ಬಿಸುಸುಯ್ದು ಕೌರವ ಕೆಟ್ಟನಕಟೆನುತ
ಕಾಳಗವ ನಾವಾನುವೆವು ಪಶು
ಜಾಲ ಸಹಿತಭಪುರಿಗೆ ನೀ ಕಿರಿ
ದಾಳೊಡನೆ ನಡೆಯೆಂದು ಸೇನೆಯನೆರಡು ಮಾಡಿಸಿದ (ವಿರಾಟ ಪರ್ವ, ೮ ಸಂಧಿ, ೨೬ ಪದ್ಯ)

ತಾತ್ಪರ್ಯ:
ಮುಂದಾಗುವುದನ್ನು ನೀನೇ ನೋಡುವೆ, ಎಂದು ಭೀಷ್ಮನು ಅಯ್ಯೋ ಕೌರವನು ಕೆಟ್ಟನಲ್ಲಾ ಎಂದು ನಿಟ್ಟುಸಿರು ಬಿಟ್ಟನು. ನೀನು ಸ್ವಲ್ಪ ಸೈನ್ಯದೊಂದಿಗೆ ಗೋವುಗಳೊಡನೆ ಹಸ್ತಿನಾಪುರಕ್ಕೆ ಹೋಗು, ನಾವಿಲ್ಲಿ ಶತ್ರುಗಳನ್ನು ಎದುರಿಸುತ್ತೇವೆ ಎಂದು ಕೌರವನಿಗೆ ಹೇಳಿ, ಸೇನೆಯನ್ನು ಎರಡು ಭಾಗವನ್ನಾಗಿ ನಿಲ್ಲಿಸಿದನು.

ಅರ್ಥ:
ನೆಗಳು: ಮಾಡು, ಆಚರಿಸು; ಹದ: ಸ್ಥಿತಿ; ಬಲ್ಲೆ: ತಿಳಿ; ವಿಶಾಲ: ಹಿರಿದು, ದೊಡ್ಡದು; ಮತಿ: ಬುದ್ಧಿ; ಬಿಸುಸುಯ್: ನಿಟ್ಟುಸಿರುಬಿಡು; ಅಕಟ: ಅಯ್ಯೋ; ಕಾಳಗ: ಯುದ್ಧ; ಆನು: ಎದುರಿಸು; ಪಶುಜಾಲ: ಪ್ರಾಣಿಗಳ ಗುಂಪು; ಇಭಪುರಿ: ಹಸ್ತಿನಾಪುರ; ಕಿರಿದಾಳು: ಸ್ವಲ್ಪ ಸೈನ್ಯ; ನಡೆ: ಚಲಿಸು; ಸೇನೆ: ಸೈನ್ಯ;

ಪದವಿಂಗಡಣೆ:
ಮೇಲೆ +ನೆಗಳುವ +ಹದನನ್+ಇಲ್ಲಿಂ
ಮೇಲೆ +ನೀನೇ +ಬಲ್ಲೆ+ಎನುತ +ವಿ
ಶಾಲಮತಿ+ ಬಿಸುಸುಯ್ದು+ ಕೌರವ+ ಕೆಟ್ಟನ್+ಅಕಟೆನುತ
ಕಾಳಗವ +ನಾವ್+ಆನುವೆವು +ಪಶು
ಜಾಲ +ಸಹಿತ್+ಇಭಪುರಿಗೆ+ ನೀ +ಕಿರಿ
ದಾಳೊಡನೆ +ನಡೆಯೆಂದು +ಸೇನೆಯನ್+ಎರಡು+ ಮಾಡಿಸಿದ

ಅಚ್ಚರಿ:
(೧) ಭೀಷ್ಮರನ್ನು ವಿಶಾಲಮತಿ ಎಂದು ಕರೆದಿರುವುದು

ಪದ್ಯ ೫೪: ಭೀಮನ ಮಾತನ್ನು ಕೇಳಿದ ದ್ರೌಪದಿಯ ಸ್ಥಿತಿ ಹೇಗಿತ್ತು?

ಕೇಳುತಿದ್ದಳು ಕೊರಳ ಸೆರೆ ಗೋ
ನಾಳಿಗೌಕಿತು ಬಿಕ್ಕಿ ಬಿಕ್ಕಿ ವಿ
ಶಾಲ ಲೊಚನೆ ನೆನೆದಳುನ್ನತ ನಯನವಾರಿಯಲಿ
ಶೂಲ ಮರುಮೊನೆಗೊಂಡವೊಲು ಸುಳಿ
ವಾಳೆ ಝಳತಾಗಿದವೊಲುದರ
ಜ್ವಾಲೆ ನೆತ್ತಿಯನೇರೆ ಮಿಡುಕಿದಳಬಲೆ ಬಿಸುಸುಯ್ದು (ವಿರಾಟ ಪರ್ವ, ೩ ಸಂಧಿ, ೫೪ ಪದ್ಯ)

ತಾತ್ಪರ್ಯ:
ಭೀಮನ ಕಠೋರ ನುಡಿಗಳನ್ನು ಕೇಳುತ್ತಾ ದ್ರೌಪದಿಯ ಕೊರಳ ನರಗಳು ಕಂಠಕ್ಕೊತ್ತಿತು, ಆಕೆ ಬಿಕ್ಕಿ ಬಿಕ್ಕಿ ಅತ್ತಳು, ಶೂಲವು ಗಾಯದ ಮೇಲೆ ಚುಚ್ಚಿದಂತೆ, ಸುಳಿ ಬಾಳೆಗೆ ಉರಿಯುವ ಜ್ವಾಲೆ ತಾಗಿದಂತೆ ಆಯಿತು. ಹೊಟ್ಟೆಯಲ್ಲಿದ್ದ ಬೆಂಕಿಯು ನೆತ್ತಿಗೇರಿದಂತಾಗಿ ಅವಳು ಕಣ್ಣೀರಿನಿಂದ ತೊಯ್ದು ಹೋದಳು, ಮತ್ತೆ ಮತ್ತೆ ನಿಟ್ಟುಸಿರು ಬಿಟ್ಟು ಚಡಪಡಿಸಿದಳು.

ಅರ್ಥ:
ಕೇಳು: ಆಲಿಸು; ಕೊರಳು: ಗಂಟಲು; ಸೆರೆ: ಬಂಧಿಸು; ಗೋನಾಳಿ: ಕುತ್ತಿಗೆಯ ನಾಳ; ಔಕು: ಒತ್ತು; ಬಿಕ್ಕಿ: ಜೋರಾಗಿ; ವಿಶಾಲ: ದೊಡ್ಡ; ಲೋಚನ: ಕಣ್ಣು; ನೆನೆ: ಒದ್ದೆಯಾಗು; ಉನ್ನತ: ಹೆಚ್ಚು; ನಯನ: ಕಣ್ಣು; ವಾರಿ: ನೀರು; ಶೂಲ: ಚೂಪಾದ ತುದಿಯುಳ್ಳ ಒಂದು ಬಗೆಯ ಆಯುಧ, ಈಟಿ; ಮರು: ಮತ್ತೆ, ಎರಡನೆಯ; ಮೊನೆ: ತುದಿ, ಕೊನೆ, ಹರಿತವಾದ; ಸುಳಿ: ಆವರಿಸು, ಮುತ್ತು, ತಿರುಗು; ವಾಳೆ: ಬಾಳೆ; ಝಳ: ಶಾಖ, ಉಷ್ಣತೆ; ಉದರ: ಹೊಟ್ಟೆ; ಜ್ವಾಲೆ: ಬೆಂಕಿ; ನೆತ್ತಿ: ತಲೆ, ಶಿರ; ಏರು: ಮೇಲೆ ಏಳು, ಹೆಚ್ಚಾಗು; ಮಿಡುಕು: ನಡುಕ, ಕಂಪನ, ತುಡಿತ; ಅಬಲೆ: ಹೆಣ್ಣು; ಬಿಸುಸುಯ್ದು: ನಿಟ್ಟುಸಿರು;

ಪದವಿಂಗಡಣೆ:
ಕೇಳುತಿದ್ದಳು +ಕೊರಳ+ ಸೆರೆ+ ಗೋ
ನಾಳಿಗ್+ಔಕಿತು +ಬಿಕ್ಕಿ +ಬಿಕ್ಕಿ +ವಿ
ಶಾಲ +ಲೊಚನೆ +ನೆನೆದಳ್+ಉನ್ನತ +ನಯನ+ವಾರಿಯಲಿ
ಶೂಲ+ ಮರುಮೊನೆಗೊಂಡವೊಲು+ ಸುಳಿ
ವಾಳೆ +ಝಳತಾಗಿದವೊಲ್+ಉದರ
ಜ್ವಾಲೆ +ನೆತ್ತಿಯನೇರೆ+ ಮಿಡುಕಿದಳ್+ಅಬಲೆ +ಬಿಸುಸುಯ್ದು

ಅಚ್ಚರಿ:
(೧) ಉಪಮಾನದ ಪ್ರಯೋಗ – ಶೂಲ ಮರುಮೊನೆಗೊಂಡವೊಲು; ಸುಳಿವಾಳೆ ಝಳತಾಗಿದವೊಲ್
(೨) ವಿಶಾಲಲೋಚನೆ, ಅಬಲೆ – ದ್ರೌಪದಿಯನ್ನು ಕರೆದ ಪರಿ
(೩) ಲೋಚನೆ, ನಯನ – ಸಮನಾರ್ಥಕ ಪದ

ಪದ್ಯ ೧೫: ದುರ್ಯೋಧನನು ತನ್ನ ಮಾವನಿಗೆ ಏನು ಹೇಳಿದ?

ಲೇಸು ಬಿಜಯಂಗೈಯಿ ನೀವೆ
ನ್ನಾಸರಾಗ್ನಿಯನೇಕೆ ಕೆಣಕುವಿ
ರಾಸುರವಿದೇಕೆನ್ನೊಡನೆ ಸೈರಿಸುವುದುಪಹತಿಯ
ಈಸು ನುಡಿವರೆ ಮಾವಯೆನುತ ಮ
ಹೀಶ ಕಂಬನಿದುಂಬ ನೆನಹಿನ
ಬೀಸರಕೆ ಬಿಸುಸುಯ್ದು ಧೊಪ್ಪನೆ ಕೆಡೆದನವನಿಯಲಿ (ಸಭಾ ಪರ್ವ, ೧೩ ಸಂಧಿ, ೧೫ ಪದ್ಯ)

ತಾತ್ಪರ್ಯ:
ದುರ್ಯೋಧನನು ನಿಟ್ಟುಸಿರು ಬಿಟ್ಟು ಕಂಬನಿದುಂಬಿ ಒಳ್ಳೆಯದು, ನೀವು ನನ್ನಲ್ಲಿ ಒಳಹೊಕ್ಕು ಧೃಡವಾಗಿ ನೀಮ್ತ ಮತ್ಸರದ ಬೆಂಕಿಯನ್ನು ಏಕೆ ಕೆಣಕುತ್ತೀರಿ? ತಾವು ಇಲ್ಲಿಂದ ಹೊರಟುಹೋಗಬಹುದು. ನಾನು ನಿಮಗೆ ಮಾತನಾಡಿ ತೊಂದರೆಯನ್ನುಂಟುಮಾಡಿದ್ದರೆ, ಅದನ್ನು ಸಹಿಸಿಕೊಳ್ಳಿ. ನನಗೆ ನೋವನ್ನುಂಟುಮಾಡುವ ಇಂತಹ ಮಾತುಗಳನ್ನು ಆಡಬಹುದೇ ಮಾವ ಎಂದು ಭೂಮಿಯ ಮೇಲೆ ಧೊಪ್ಪನೆ ಬಿದ್ದನು.

ಅರ್ಥ:
ಲೇಸು: ಒಳಿತು; ಬಿಜಯಂಗೈ: ದಯಮಾಡಿಸು; ಆಸರ: ಆಶ್ರಯ; ಅಗ್ನಿ: ಬೆಂಕಿ; ಕೆಣಕು: ರೇಗಿಸು, ಪ್ರಚೋದಿಸು; ಉಪಹತಿ: ಹೊಡೆತ, ಕೇಡು; ಸೈರಿಸು: ತಾಳು, ಸಹಿಸು; ಈಸು: ಇಷ್ಟು; ನುಡಿ: ಮಾತು; ಮಾವ: ತಾಯಿಯ ಸಹೋದರ; ಮಹೀಶ: ರಾಜ; ಕಂಬನಿ: ಕಣ್ಣೀರು; ತುಂಬಿ: ಪೂರ್ಣ; ನೆನಹು: ಜ್ಞಾಪಕ, ನೆನಪು; ಬೀಸರ: ವ್ಯರ್ಥವಾದುದು, ನಿರರ್ಥಕವಾದುದು; ಬಿಸುಸುಯ್ಲು: ನಿಟ್ಟುಸಿರು; ಧೊಪ್ಪನೆ: ಜೋರಾಗಿ; ಕೆಡೆ: ಬೀಳು; ಅವನಿ: ಭೂಮಿ;

ಪದವಿಂಗಡಣೆ:
ಲೇಸು +ಬಿಜಯಂಗೈಯಿ +ನೀವೆನ್
ಆಸರಾಗ್ನಿಯನೇಕೆ +ಕೆಣಕುವಿರ್
ಆಸುರವಿದೇಕ್+ಎನ್ನೊಡನೆ +ಸೈರಿಸುವುದ್+ಉಪಹತಿಯ
ಈಸು +ನುಡಿವರೆ+ ಮಾವ+ಎನುತ +ಮ
ಹೀಶ+ ಕಂಬನಿ+ತುಂಬ +ನೆನಹಿನ
ಬೀಸರಕೆ+ ಬಿಸುಸುಯ್ದು +ಧೊಪ್ಪನೆ +ಕೆಡೆದನ್+ಅವನಿಯಲಿ

ಅಚ್ಚರಿ:
(೧) ದುರ್ಯೋಧನನ ಬೇಸರ ಸ್ಥಿತಿ – ಮಹೀಶ ಕಂಬನಿದುಂಬ ನೆನಹಿನ ಬೀಸರಕೆ ಬಿಸುಸುಯ್ದು ಧೊಪ್ಪನೆ ಕೆಡೆದನವನಿಯಲಿ