ಪದ್ಯ ೩: ಧರ್ಮರಾಯ ಕೃಷ್ಣನಿಗೆ ಏನು ಹೇಳಿದನು?

ವಿದಿತವೈದೂರುಗಳ ಕೊಟ್ಟೊಡೆ
ಹದುಳವಿಡುವುದು ಮುನಿದರಾದೊಡೆ
ಕದನವನೆ ಕೈಕೊಳುವುದುಚಿತಾನುಚಿತದನುವರಿದು
ಹದನ ನೀನೇ ಬಲ್ಲೆ ಸಾಕಿ
ನ್ನಿದು ನಿಧಾನವು ಬಗೆಯಲೆಮ್ಮ
ಭ್ಯುದಯ ನಿಮ್ಮಾಧೀನವೆಂದನು ಧರ್ಮನಂದನನು (ಉದ್ಯೋಗ ಪರ್ವ, ೭ ಸಂಧಿ, ೩ ಪದ್ಯ)

ತಾತ್ಪರ್ಯ:
ಈ ಹಿಂದೆ ಒಪ್ಪಿಗೆಯಾದಂತೆ ಐದು ಊರುಗಳನ್ನು ನೀಡಿದರೆ ಒಳ್ಳೆಯದು, ಇದಕ್ಕೆ ವಿರುದ್ಧವಾಗಿ ನಡೆದರೆ ಯುದ್ದವೇ ನಡೆಯುತ್ತದೆ. ಇದರಲ್ಲಿ ಉಚಿತ ಮತ್ತು ಅನುಚಿತವಾವುದೆಂದು ತಿಳಿದು ನಿರ್ಧರಿಸಲಿ, ಸರಿಯಾದ ಸ್ಥಿತಿಯನ್ನು ನೀನೆ ಅರಿತಿರುವೆ, ಈ ವಿಳಂಬ ಇನ್ನು ಸಾಕು, ನಮ್ಮ ಅಭ್ಯುದಯಕ್ಕೆ ಯಾವುದು ಸೂಕ್ತವೋ ಆ ನಿರ್ಧಾರವನ್ನೇ ನೀನು ಮಾಡು, ನಿಮ್ಮ ಅಧೀನದಲ್ಲಿ ನಾವಿರುವೆವು ಎಂದು ಧರ್ಮರಾಯನು ಕೃಷ್ಣನಿಗೆ ಹೇಳಿದನು.

ಅರ್ಥ:
ವಿದಿತ: ಒಪ್ಪಿಗೆ, ಸಮ್ಮತಿ; ಊರು: ಪ್ರದೇಶ; ಕೊಡು: ನೀಡು; ಹದುಳ: ಸೌಖ್ಯ, ಕ್ಷೇಮ; ಮುನಿ: ಕೋಪಗೊಳ್ಳು; ಕದನ: ಯುದ್ಧ; ಉಚಿತ: ಸರಿಯಾದ; ಅನುಚಿತ: ಸರಿಯಲ್ಲದ; ಅರಿ: ತಿಳಿ; ಹದ: ಸರಿಯಾದ ಸ್ಥಿತಿ; ಬಲ್ಲೆ: ತಿಳಿದಿರುವೆ; ಸಾಕು: ನಿಲ್ಲಿಸು; ನಿಧಾನ:ವಿಳಂಬ, ಸಾವಕಾಶ; ಬಗೆ: ಅಭಿಪ್ರಾಯ; ಅಭ್ಯುದಯ: ಏಳಿಗೆ; ಅಧೀನ: ಕೈಕೆಳಗಿರುವ; ನಂದನ: ಮಗ;

ಪದವಿಂಗಡಣೆ:
ವಿದಿತವ್+ಐದ್+ಊರುಗಳ +ಕೊಟ್ಟೊಡೆ
ಹದುಳವ್+ಇಡುವುದು +ಮುನಿದರಾದೊಡೆ
ಕದನವನೆ +ಕೈಕೊಳುವುದ್+ಉಚಿತ+ಅನುಚಿತದನುವ್+ಅರಿದು
ಹದನ +ನೀನೇ +ಬಲ್ಲೆ+ ಸಾಕಿನ್
ಇದು +ನಿಧಾನವು +ಬಗೆಯಲ್+ಎಮ್
ಅಭ್ಯುದಯ +ನಿಮ್ಮ+ಅಧೀನವ್+ಎಂದನು +ಧರ್ಮನಂದನನು

ಅಚ್ಚರಿ:
(೧) ಉಚಿತ ಅನುಚಿತ – ವಿರುದ್ಧ ಪದಗಳ ಬಳಕೆ
(೨) ಕದನ, ಹದನ – ಪ್ರಾಸ ಪದ
(೩) ಅಭ್ಯುದಯ ಅಧೀನ – ಪದಗಳ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ