ಪದ್ಯ ೨೮: ಭೀಮನು ಹೇಗೆ ಗರ್ಜಿಸಿದನು?

ಉರಿಯೊಗುವ ಮೀಸೆಯನು ಬೆರಳೊಳು
ಮುರಿದು ನೆಗಹಿದ ವಾಮಕರದೊಳು
ತರುಣಿಯನು ಸಂತೈಸಿ ಕಿಡಿಕಿಡಿಯಾಗಿ ಖಾತಿಯೊಳು
ನರಕಮರ್ದನ ಕೇಳು ಕೌರವ
ನರಿಗಳಿದಿರೇ ಕೀಳುವೆನು ಕುಲ
ಗಿರಿಗಳನು ತೊಡೆವೆನು ಕೃತಾಂತನ ಭಾಳದಕ್ಕರವ (ಉದ್ಯೋಗ ಪರ್ವ, ೬ ಸಂಧಿ, ೨೮ ಪದ್ಯ)

ತಾತ್ಪರ್ಯ:
ಬೆಂಕಿಯನ್ನು ಹೊರಹೊಮ್ಮುವಂತೆ ಕಾಣುವ ಮೀಸೆಯನ್ನು ತನ್ನ ಬೆರಳುಗಳಿಂದ ತಿರುವಿ ಎಡಹಸ್ತದಿಂದ ದ್ರೌಪದಿಯನ್ನು ಸಂತೈಸಿ ಸಿಟ್ಟಿನಿಂದ ಕಿಡಿಕಿಡಿಯಾಗಿ ಭೀಮನು ಕೃಷ್ಣನನ್ನು ನೋಡಿ, ಶ್ರೀಕೃಷ್ಣ ಕೇಳು, ನರಿಗಳಾದ ಕೌರವರು ನನಗೆ ಸರಿಸಮಾನರೇ? ಅವರ ಕುಲಗಿರಿಗಳನ್ನೇ ಕೀಳುತ್ತೇನೆ ಯಮನ ಹಣೆಬರಹವನ್ನೇ ಅಳಿಸುತ್ತೇನೆ ಎಂದು ಗರ್ಜಿಸಿದ.

ಅರ್ಥ:
ಉರಿ: ಬೆಂಕಿ; ಒಗುವ: ಹೊರಹೊಮ್ಮುವಿಕೆ; ಬೆರಳು: ಅಂಗುಲಿ; ಮುರಿ: ತಿರುವು; ನೆಗಹು: ಮೇಲೆತ್ತು; ವಾಮ: ಎಡಭಾಗ; ಕರ: ಕೈ; ತರುಣಿ: ಹೆಣ್ಣು; ಸಂತೈಸು: ಸಮಾಧಾನ ಪಡಿಸು; ಕಿಡಿಕಿಡಿ: ಕುಪಿತನಾಗು; ಖಾತಿ: ಕೋಪ; ನರಕ: ಅಧೋಲೋಕ; ಮರ್ದನ: ನಾಶಮಾಡು; ಕೇಳು: ಆಲಿಸು; ಇದಿರು: ಎದುರು; ಕೀಳು: ಎಳೆದು ಹಾಕು; ಕುಲ: ವಂಶ; ಗಿರಿ: ಬೆಟ್ಟ; ತೊಡು: ಹಾಕಿಕೊ; ಕೃತಾಂತ: ಯಮ; ಭಾಳ: ಹಣೆ; ಅಕ್ಕರ: ಅಕ್ಷರ;

ಪದವಿಂಗಡಣೆ:
ಉರಿಯೊಗುವ +ಮೀಸೆಯನು +ಬೆರಳೊಳು
ಮುರಿದು +ನೆಗಹಿದ +ವಾಮಕರದೊಳು
ತರುಣಿಯನು +ಸಂತೈಸಿ +ಕಿಡಿಕಿಡಿಯಾಗಿ+ ಖಾತಿಯೊಳು
ನರಕಮರ್ದನ +ಕೇಳು +ಕೌರವ
ನರಿಗಳಿದಿರೇ+ ಕೀಳುವೆನು+ ಕುಲ
ಗಿರಿಗಳನು +ತೊಡೆವೆನು +ಕೃತಾಂತನ+ ಭಾಳದ್+ಅಕ್ಕರವ

ಅಚ್ಚರಿ:
(೧) ಭೀಮನ ಹಾವಭಾವವನ್ನು ಚಿತ್ರಿಸಿರುವ ಬಗೆ
(೨) ಕೃಷ್ಣನನ್ನು ನರಕಮರ್ದನ, ಯಮನನ್ನು ಕೃತಾಂತ ಎಂದು ಕರೆದಿರುವುದು