ಪದ್ಯ ೮: ಧೃತರಾಷ್ಟ್ರನೇಕೆ ಬಳಲುತ್ತಿದ್ದನು?

ನೃಪ ಪರಂಪರೆಯಿಂದ ಬಂದೀ
ವಿಪುಳವಂಶಸ್ಥಿತಿ ವಿಸರ್ಗವ
ನಪಹರಿಸಿದನು ಹಿಂದೆ ವೇದವ್ಯಾಸಮುನಿ ಬಂದು
ಕೃಪೆಯ ಮಾಡೆನೆ ತನ್ನ ಸಂತತಿ
ಕೃಪಣವಾಯ್ತೆಂದನವರತ ಕುರು
ನೃಪತಿ ಚಿಂತಾಭಾರದಲಿ ಬಳಲುವನು ಧೃತರಾಷ್ಟ್ರ (ಆದಿ ಪರ್ವ, ೪ ಸಂಧಿ, ೮ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ, ಪಾಂಡು ಇಬ್ಬರಿಗೂ ಮಕ್ಕಳಾಗಲಿಲ್ಲ. ಚಂದ್ರವಂಶದ ರಾಜರ ಪರಂಪರೆಯು ಈ ಹಿಂದೆ ನಿಂತು ಹೋಗುವಂತೆ ಆದ ಸಮಯದಲ್ಲಿ ವೇದವ್ಯಾಸರು ಬಂದು ಕಷ್ಟವನ್ನು ಪರಿಹರಿಸಿದರು. ನನಗೂ, ನನ್ನ ತಮ್ಮನಿಗೂ ಪುತ್ರಸಂತಾನವಿಲ್ಲ. ಈ ಕಷ್ಟವನ್ನು ಪರಿಹರಿಸುವ ಕೃಪೆಯನ್ನು ವೇದವ್ಯಾಸರು ಮಾಡುವುದಿಲ್ಲವೇ ಎನ್ನುವ ಚಿಂತೆಯ ಭಾರದಿಂದ ಧೃತರಾಷ್ಟ್ರನು ಬಳಲುತ್ತಿದ್ದನು.

ಅರ್ಥ:
ನೃಪ: ರಾಜ; ಪರಂಪರೆ: ಒಂದರ ನಂತರ ಮತ್ತೊಂದು ಬರುವುದು, ಸಾಲು, ಪರಿವಿಡಿ ; ವಿಪುಳ: ತುಂಬ; ವಂಶ: ಕುಲ; ಸ್ಥಿತಿ: ಇರವು, ಅಸ್ತಿತ್ವ; ವಿಸರ್ಗ: ಬಿಡುವಿಕೆ, ತ್ಯಜಿಸುವಿಕೆ; ಅಪಹರಿಸು: ಕಳುವು; ಹಿಂದೆ: ಗತಿಸಿದ; ಮುನಿ: ಋಷಿ; ಬಂದು: ಆಗಮಿಸು; ಕೃಪೆ: ದಯೆ; ಸಂತತಿ: ವಂಶ, ಪೀಳಿಗೆ; ಕೃಪಣ: ದೈನ್ಯದಿಂದ ಕೂಡಿದುದು; ಅನವರತ: ಯಾವಾಗಲು; ನೃಪತಿ: ರಾಜ; ಚಿಂತೆ: ಯೋಚನೆ; ಭಾರ: ಹೊರೆ; ಬಳಲು: ಆಯಾಸ, ದಣಿವು;

ಪದವಿಂಗಡಣೆ:
ನೃಪ +ಪರಂಪರೆಯಿಂದ +ಬಂದ್+ಈ
ವಿಪುಳ+ವಂಶಸ್ಥಿತಿ+ ವಿಸರ್ಗವನ್
ಅಪಹರಿಸಿದನು +ಹಿಂದೆ +ವೇದವ್ಯಾಸ+ಮುನಿ +ಬಂದು
ಕೃಪೆಯ +ಮಾಡೆನೆ +ತನ್ನ+ ಸಂತತಿ
ಕೃಪಣವಾಯ್ತೆಂದ್+ಅನವರತ +ಕುರು
ನೃಪತಿ +ಚಿಂತಾ+ಭಾರದಲಿ+ ಬಳಲುವನು +ಧೃತರಾಷ್ಟ್ರ

ಅಚ್ಚರಿ:
(೧) ವಂಶ, ಸಂತತಿ – ಸಾಮ್ಯಾರ್ಥ ಪದ
(೨) ನೃಪ, ನೃಪತಿ – ೧, ೬ ಸಾಲಿನ ಮೊದಲ ಪದ, ಸಮಾನಾರ್ಥಕ ಪದ

ಪದ್ಯ ೭: ವ್ಯಾಸರು ಯಾವ ಶಿಷ್ಯನನ್ನು ಕರೆದರು?

ಸರ್ಪಯಜ್ಞದಲಾದ ದುರಿತದ
ದರ್ಪವನು ಕೆಡೆಬೀಳಲೊದೆಯಲು
ತರ್ಪಣಾದಿ ಕ್ರಿಯೆಗಳಲಿ ಸಾಮರ್ಥ್ಯವಿಲ್ಲೆಂದು
ದರ್ಪಕಾಹಿತಮೂರ್ತಿ ಮುನಿಮುಖ
ದರ್ಪಣನು ಶಿಷ್ಯನನು ಕರೆದು ಸ
ಮರ್ಪಿಸಿದನರಸಂಗೆ ವೇದವ್ಯಾಸ ಮುನಿರಾಯ (ಆದಿ ಪರ್ವ, ೨ ಸಂಧಿ, ೭ ಪದ್ಯ)

ತಾತ್ಪರ್ಯ:
ಮನ್ಮಥನ ಶತ್ರುವೂ, ಮುನಿಗಳಿಗೆ ಕನ್ನಡಿಯಮ್ತಿರುವವನೂ ಆದ, ವೇದವ್ಯಾಸ ಮುನೀಶ್ವರನು ಜನಮೇಜಯರಾಜನಿಗೆ ಸರ್ಪಯಜ್ಞದಲ್ಲಿ ಗಳಿಸಿದ ಮಹಾಪಾಪವನ್ನು ತರ್ಪಣವೇ ಮೊದಲಾದ ಕ್ರಿಯೆಗಳಿಂದ ನಿವಾರಿಸಿಕೊಳ್ಳಲು ಸಾಧ್ಯವಿಲ್ಲವೆಂದು ನಿಶ್ಚಯಿಸಿ ಶಿಷ್ಯನಾದ ವೈಶಂಪಾಯನನ್ನು ಕರೆದು ಜನಮೇಜಯನಿಗೆ ಹೀಗೆಂದು ಹೇಳಿದನು.

ಅರ್ಥ:
ಸರ್ಪ: ಹಾವು; ಯಜ್ಞ: ಕ್ರತು; ದುರಿತ: ಪಾಪ; ದರ್ಪ: ಅಹಂಕಾರ; ಕೆಡೆ: ಬೀಳು, ಕುಸಿ; ಬೀಳು: ಜಾರು; ಒದೆ: ನೂಕು; ತರ್ಪಣ: ತೃಪ್ತಿಪಡಿಸುವಿಕೆ; ಕ್ರಿಯೆ: ಕಾರ್ಯ; ಸಾಮರ್ಥ್ಯ: ದಕ್ಷತೆ, ಯೋಗ್ಯತೆ; ದರ್ಪಕಾಹಿತ: ಶಿವ, ಮನ್ಮಥನ ಶತ್ರು; ಮುನಿ: ಋಷಿ; ಮುಖ: ಆನನ; ದರ್ಪಣ: ಕನ್ನದಿ; ಶಿಷ್ಯ: ವಿದ್ಯಾರ್ಥಿ; ಕರೆ: ಬರೆಮಾಡು; ಸಮರ್ಪಿಸು: ನೀಡು; ಅರಸ: ರಾಜ; ರಾಯ: ರಾಜ; ದರ್ಪಕ: ಮನ್ಮಥ;

ಪದವಿಂಗಡಣೆ:
ಸರ್ಪಯಜ್ಞದಲಾದ +ದುರಿತದ
ದರ್ಪವನು +ಕೆಡೆ+ಬೀಳಲ್+ಒದೆಯಲು
ತರ್ಪಣಾದಿ +ಕ್ರಿಯೆಗಳಲಿ +ಸಾಮರ್ಥ್ಯವಿಲ್ಲೆಂದು
ದರ್ಪಕ+ಅಹಿತಮೂರ್ತಿ+ ಮುನಿ+ಮುಖ
ದರ್ಪಣನು +ಶಿಷ್ಯನನು +ಕರೆದು+ ಸ
ಮರ್ಪಿಸಿದನ್+ ಅರಸಂಗೆ+ ವೇದವ್ಯಾಸ +ಮುನಿರಾಯ

ಅಚ್ಚರಿ:
(೧) ದರ್ಪ, ದರ್ಪಕ, ದರ್ಪಣ – ಪದಗಳ ಬಳಕೆ
(೨) ವ್ಯಾಸರನ್ನು ಕರೆದ ಪರಿ – ದರ್ಪಕಾಹಿತಮೂರ್ತಿ, ಮುನಿಮುಖದರ್ಪಣನು

ಪದ್ಯ ೪: ಜನಮೇಜಯ ಯಾವ ಕಥೆಯನ್ನು ಕೇಳಿದನು?

ಕೇಳಿದನು ಜನಮೇಜಯ ಕ್ಷಿತಿ
ಪಾಲಕನು ವರ ಸರ್ಪಯಜ್ಞ
ಸ್ಥೂಲ ಪಾಪವಿಘಾತಿಗೋಸುಗವೀ ಮಹಾಕಥೆಯ
ಕೇಳಿದೆನು ತಾನಲ್ಲಿ ಮುನಿಜನ
ಮೌಳಿ ಮಂಡಿತ ಚರಣಕಮಲ ವಿ
ಶಾಲ ವೇದವ್ಯಾಸಕೃತ ಭಾರತ ಕಥಾಮೃತವ (ಆದಿ ಪರ್ವ, ೨ ಸಂಧಿ, ೪ ಪದ್ಯ)

ತಾತ್ಪರ್ಯ:
ಹಿಂದೆ ಜನಮೇಜಯರಾಜನು ಸರ್ಪಯಾಗವನ್ನು ಮಾಡಿ ತನಗೆ ಬಂದೊದಗಿದ ಪಾಪವನ್ನು ಕಳೆದುಕೊಳ್ಳುವುದಕ್ಕಾಗಿ ಈ ಕಥೆಯನ್ನು ಕೇಳಿದನು. ಮುನಿಜನರಿಂದ ವಂದಿತವಾದ ಪಾದಕಮಲಗಳನ್ನುಳ್ಳ, ವಿಶಾಲಬುದ್ಧಿಯಾದ ವೇದವ್ಯಾಸರಿಂದ ರಚಿತವಾದ ಭಾರತಕಥಾಮೃತವನ್ನು ನಾನು ಅಲ್ಲಿ ಕೇಳಿದೆನು.

ಅರ್ಥ:
ಕೇಳು: ಆಲಿಸು, ಬೇಡು; ಕ್ಷಿತಿಪಾಲ: ರಾಜ; ವರ: ಶ್ರೇಷ್ಠ; ಯಜ್ಞ: ಯಾಗ, ಕ್ರತು; ಸ್ಥೂಲ: ದೊಡ್ಡ; ಪಾಪ: ಪುಣ್ಯವಲ್ಲದ ಕಾರ್ಯ; ವಿಘಾತ: ನಾಶ, ಧ್ವಂಸ; ಮಹಾಕಥೆ: ದೊಡ್ಡ ವಿಚಾರ; ಮುನಿಜನ: ಋಷಿಗಳ ಗುಂಪು; ಮೌಳಿ: ಶ್ರೇಷ್ಠ; ಮಂಡಿತ: ಶೋಭೆಗೊಂಡ; ಚರಣ: ಪಾದ; ಕಮಲ: ತಾವರೆ; ವಿಶಾಲ: ದೊಡ್ಡ; ಕೃತ: ರಚಿತ; ಅಮೃತ: ಸುಧೆ;

ಪದವಿಂಗಡಣೆ:
ಕೇಳಿದನು +ಜನಮೇಜಯ +ಕ್ಷಿತಿ
ಪಾಲಕನು +ವರ +ಸರ್ಪ+ಯಜ್ಞ
ಸ್ಥೂಲ +ಪಾಪ+ವಿಘಾತಿಗ್+ಓಸುಗವ್+ಈ+ ಮಹಾಕಥೆಯ
ಕೇಳಿದೆನು +ತಾನಲ್ಲಿ+ ಮುನಿಜನ
ಮೌಳಿ +ಮಂಡಿತ +ಚರಣಕಮಲ +ವಿ
ಶಾಲ +ವೇದವ್ಯಾಸ+ಕೃತ +ಭಾರತ +ಕಥಾಮೃತವ

ಅಚ್ಚರಿ:
(೧) ಕೇಳಿದನು, ಕೇಳಿದೆನು – ಪದಗಳ ಬಳಕೆ
(೨) ಗೌರವ ಸೂಚಕ ಪದ – ಮುನಿಜನಮೌಳಿ ಮಂಡಿತ ಚರಣಕಮಲ ವಿಶಾಲ ವೇದವ್ಯಾಸಕೃತ

ಪದ್ಯ ೩೧: ವೇದವ್ಯಾಸರು ಯಾವ ಸಲಹೆಯನ್ನು ನೀಡಿದರು?

ಹರಿಸಹಿತ ಪಾಂಡವರದೊಂದೆಸೆ
ಯಿರೆ ಚತುರ್ವಿಧವಾದುದೀ ಮೋ
ಹರದೊಳಾಯ್ತೆಡೆಯಾಟ ವೇದವ್ಯಾಸ ವಿದುರರಿಗೆ
ಧರಣಿಪನ ಕಾಣಿಸುವುದಂಧನ
ನಿರುಪಮಿತ ಶೋಕಾನಳನ ಸಂ
ಹರಿಸುವುದು ನಯವೆಂದು ವೇದವ್ಯಾಸಮುನಿ ನುಡಿದ (ಗದಾ ಪರ್ವ, ೧೧ ಸಂಧಿ, ೩೧ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣ ಪಾಂಡವರು ಒಂದು ಕಡೆ ಇದ್ದರು. ವೇದವ್ಯಾಸ ವಿದುರರು ಎಲ್ಲಾ ಕಡೆಗೆ ಓಡಾಡುತ್ತಿದ್ದರು. ವೇದವ್ಯಾಸರು ಧೃತರಾಷ್ಟ್ರನನ್ನು ಧರ್ಮಜನನ್ನು ತೋರಿಸಿ, ಉಪಮೇಯವಿಲ್ಲದೆ ಧೃತರಾಷ್ಟ್ರನ ಶೋಕವನ್ನು ಪರಿಹರಿಸಬೇಕು ಎಂದು ಹೇಳಿದರು.

ಅರ್ಥ:
ಹರಿ: ವಿಷ್ಣು, ಕೃಷ್ಣ; ಸಹಿತ: ಜೊತೆ; ಎಸೆ: ಒಗೆ, ಕಡೆ; ಚತುರ್ವಿಧ: ನಾಲ್ಕು ರೀತಿ; ಮೋಹರ: ಯುದ್ಧ; ಎಡೆ: ಬಿಚ್ಚಿ ತೋರು; ಆಟ: ಕ್ರೀಡೆ; ಧರಣಿಪ: ರಾಜ; ಕಾಣಿಸು: ತೋರು; ಅಂಧ: ಕುರುಡ; ನಿರುಪಮ: ಸಾಟಿಯಿಲ್ಲದ, ಅತಿಶಯವಾದ; ಶೋಕ: ದುಃಖ; ಅನಲ: ಬೆಂಕಿ; ಸಂಹರಿಸು: ನಾಶಮಾಡು; ನಯ: ರೀತಿ; ನುಡಿ: ಮಾತಾಡು;

ಪದವಿಂಗಡಣೆ:
ಹರಿ+ಸಹಿತ+ ಪಾಂಡವರದೊಂದ್+ಎಸೆ
ಯಿರೆ +ಚತುರ್ವಿಧವಾದುದ್+ಈ+ ಮೋ
ಹರದೊಳಾಯ್ತ್+ಎಡೆಯಾಟ +ವೇದವ್ಯಾಸ +ವಿದುರರಿಗೆ
ಧರಣಿಪನ +ಕಾಣಿಸುವುದ್+ಅಂಧನ
ನಿರುಪಮಿತ+ ಶೋಕಾನಳನ +ಸಂ
ಹರಿಸುವುದು +ನಯವೆಂದು +ವೇದವ್ಯಾಸಮುನಿ +ನುಡಿದ

ಅಚ್ಚರಿ:
(೧) ದುಃಖದ ತೀವ್ರತೆ ಎಂದು ಹೇಳುವ ಪರಿ – ಶೋಕಾನಳ

ಪದ್ಯ ೨: ಧೃತರಾಷ್ಟ್ರನನ್ನು ನೋಡಲು ಯಾವ ಮುನಿಗಳು ಬಂದರು?

ಆ ಸಮಯದಲಿ ದೇವ ವೇದ
ವ್ಯಾಸಮುನಿ ಬಂದನು ಗತಾಕ್ಷಮ
ಹೀಶನನು ಚರಣದಲಿ ಹೊರಳಿದಡೆತ್ತಿದನು ಹಿಡಿದು
ಆ ಸತಿಯ ಕರಸಿದನು ರಾಣೀ
ವಾಸವೆಲ್ಲವ ಬರಿಸಿ ಧರ್ಮವಿ
ಲಾಸವನು ವಿಸ್ತರಿಸಿದನು ವೈದಿಕ ವಿಧಾನದಲಿ (ಗದಾ ಪರ್ವ, ೧೧ ಸಂಧಿ, ೨ ಪದ್ಯ)

ತಾತ್ಪರ್ಯ:
ಆ ಸಮಯಕ್ಕೆ ವೇದವ್ಯಾಸ ಮುನಿಗಳು ಆಗಮಿಸಿದರು. ಧೃತರಾಷ್ಟ್ರನು ಅವರ ಪಾದಕಮಲಗಳಿಗೆ ನಮಸ್ಕರಿಸಲು ಅವನನ್ನು ಮೇಲೆತ್ತಿ, ಗಾಂಧಾರಿಯನ್ನೂ ರಾಣೀವಾಸದ ಎಲ್ಲರನ್ನೂ ಕರೆಸಿದನು. ಮಾಡಬೇಕಾದ ವೈದಿಕ ವಿಧಿ ವಿಧಾನಗಳನ್ನು ವಿವರವಾಗಿ ತಿಳಿಸಿದರು.

ಅರ್ಥ:
ಸಮಯ: ಕಾಲ; ದೇವ: ಭಗವಂತ; ಮುನಿ: ಋಷಿ; ಬಂದನು: ಆಗಮಿಸು; ಗತಾಕ್ಷ: ಕಣ್ಣಿಲ್ಲದ; ಮಹೀಶ: ರಾಜ; ಚರಣ: ಪಾದ; ಹೊರಳು: ತಿರುವು, ಬಾಗು; ಎತ್ತು: ಮೇಲೇಳು; ಹಿಡಿ: ಗ್ರಹಿಸು; ಸತಿ: ಹೆಂಡತಿ; ಕರೆಸು: ಬರೆಮಾಡು; ರಾಣೀವಾಸ: ಅಂತಃಪುರ; ಬರಿಸಿ: ಕರೆಸು; ಧರ್ಮ: ಧಾರಣೆ ಮಾಡಿದುದು; ವಿಲಾಸ: ಅಂದ, ಸೊಬಗು; ವಿಸ್ತರಿಸು: ಹಬ್ಬು, ಹರಡು; ವೈದಿಕ: ವೇದದಲ್ಲಿ ಹೇಳಿರುವ, ವೇದೋಕ್ತ; ವಿಧಾನ: ರೀತಿ;

ಪದವಿಂಗಡಣೆ:
ಆ +ಸಮಯದಲಿ +ದೇವ +ವೇದ
ವ್ಯಾಸಮುನಿ +ಬಂದನು +ಗತಾಕ್ಷ+ಮ
ಹೀಶನನು +ಚರಣದಲಿ +ಹೊರಳಿದಡ್+ಎತ್ತಿದನು +ಹಿಡಿದು
ಆ +ಸತಿಯ +ಕರಸಿದನು +ರಾಣೀ
ವಾಸವೆಲ್ಲವ +ಬರಿಸಿ +ಧರ್ಮ+ವಿ
ಲಾಸವನು +ವಿಸ್ತರಿಸಿದನು +ವೈದಿಕ +ವಿಧಾನದಲಿ

ಅಚ್ಚರಿ:
(೧) ವ ಕಾರದ ಸಾಲು ಪದ – ವಿಲಾಸವನು ವಿಸ್ತರಿಸಿದನು ವೈದಿಕ ವಿಧಾನದಲಿ
(೨) ಗತಾಕ್ಷಮಹೀಶನ – ಧೃತರಾಷ್ಟ್ರನನ್ನು ಕರೆದ ಪರಿ
(೩) ಕರಸಿ, ಬರಿಸಿ, ಬಂದು – ಸಾಮ್ಯಾರ್ಥ ಪದ
(೪) ನಮಸ್ಕರಿಸಿದನು ಎಂದು ಹೇಳಲು – ಚರಣದಲಿ ಹೊರಳಿದಡ್ ಎಂಬ ಪದ ಪ್ರಯೋಗ
(೫) ದೇವ, ವೇದ – ಪದ ಪ್ರಯೋಗ

ಪದ್ಯ ೪: ಸಂಜಯನ ಗುರುವರ್ಯರಾರು?

ಬಳಿಕ ಭೀಮನ ಗದೆಯಲಿಭ ಶತ
ವಳಿದರೊಬ್ಬನೆ ತಿರುಗಿ ಹಾಯ್ದನು
ಕೊಳುಗುಳದ ಕೋಳ್ಗುದಿಯ ಕೋಲಾಹಲದ ಕೆಸರಿನಲಿ
ತಲೆಗೆ ಬಂದುದು ತನಗೆಯಾಖ್ಷನ
ಸುಳಿದರೆಮ್ಮಾರಾಧ್ಯ ವರ ಮುನಿ
ತಿಲಕ ವೇದವ್ಯಾಸದೇವರು ಕೃಪೆಯ ಭಾರದಲಿ (ಗದಾ ಪರ್ವ, ೪ ಸಂಧಿ, ೪ ಪದ್ಯ)

ತಾತ್ಪರ್ಯ:
ಬಳಿಕ ಭೀಮನು ತನ್ನ ಗದೆಯಿಂದ ನೂರಾನೆಗಳನ್ನು ಕೊಲ್ಲಲು ಅರಸನು ಹಿಮ್ಮೆಟ್ತಿ ರಣರಂಗದ ಕೋಲಾಹಲದ ನಡುವೆ ಕೆಸರ್ನ್ನು ತುಳಿಯುತ್ತಾ ಹೋದನು. ಅವನು ಕಾಣದಿರಲು ಹುಡುಕುತ್ತಾ ನಾನು ಬಂದೆ. ಆಗ ನನ್ನ ತಲೆಗೆ ಆಪತ್ತು ಬರಲು, ನಮ್ಮ ಆರಾಧ್ಯಗುರುಗಳಾದ ವೇದವ್ಯಾಸರು ಕರುಣೆಯಿಂದ ಅಲ್ಲಿಗೆ ಬಂದರು.

ಅರ್ಥ:
ಬಳಿಕ: ನಂತರ; ಗದೆ: ಮುದ್ಗರ; ಇಭ: ಆನೆ; ಶತ: ನೂರು; ಅಳಿ: ಸಾವು; ತಿರುಗು: ಓಡಾಡು; ಹಾಯ್ದು: ಹೊಡೆ; ಕೊಳುಗುಳ: ಯುದ್ಧ; ಕೋಳ್ಗುದಿ: ತಕ ತಕ ಕುದಿ, ಅತಿ ಸಂತಾಪ; ಕೋಲಾಹಲ: ಗೊಂದಲ; ಕೆಸರು: ರಾಡಿ; ತಲೆ: ಶಿರ; ಕ್ಷಣ: ಸಮಯ; ಸುಳಿ: ಕಾಣಿಸಿಕೊಳ್ಳು; ಆರಾಧ್ಯ: ಪೂಜನೀಯ; ವರ: ಶ್ರೇಷ್ಠ; ಮುನಿ: ಋಷಿ; ತಿಲಕ: ಶ್ರೇಷ್ಠ; ಕೃಪೆ: ದಯೆ; ಭಾರ: ಹೊರೆ;

ಪದವಿಂಗಡಣೆ:
ಬಳಿಕ +ಭೀಮನ +ಗದೆಯಲ್+ಇಭ +ಶತವ್
ಅಳಿದರ್+ಒಬ್ಬನೆ +ತಿರುಗಿ +ಹಾಯ್ದನು
ಕೊಳುಗುಳದ +ಕೋಳ್ಗುದಿಯ +ಕೋಲಾಹಲದ +ಕೆಸರಿನಲಿ
ತಲೆಗೆ +ಬಂದುದು +ತನಗೆ+ಆ+ಕ್ಷಣ
ಸುಳಿದರ್+ಎಮ್ಮಾರಾಧ್ಯ +ವರ+ ಮುನಿ
ತಿಲಕ +ವೇದವ್ಯಾಸ+ದೇವರು +ಕೃಪೆಯ +ಭಾರದಲಿ

ಅಚ್ಚರಿ:
(೧) ಕ ಕಾರದ ಸಾಲು ಪದ – ಕೊಳುಗುಳದ ಕೋಳ್ಗುದಿಯ ಕೋಲಾಹಲದ ಕೆಸರಿನಲಿ

ಪದ್ಯ ೫೩: ವೇದವ್ಯಾಸರು ಅಶ್ವತ್ಥಾಮನಿಗೆ ಏನು ಹೇಳಿದರು?

ಬಂದು ವೇದವ್ಯಾಸಮುನಿ ಗುರು
ನಂದನಂಗರುಹಿದನು ಪಾರ್ಥ ಮು
ಕುಂದರನು ಪೂರ್ವದಲಿ ನರನಾರಾಯಣಾಹ್ವಯದ
ಸಂದ ಋಷಿಗಳು ಭೂಮಿಭಾರವ
ನೊಂದುಪಾಯದಲಪಹರಿಸಲೈ
ತಂದ ಹದನನು ತಿಳುಹಿ ಬಂದನು ಫಲುಗುಣನ ಹೊರೆಗೆ (ದ್ರೋಣ ಪರ್ವ, ೧೯ ಸಂಧಿ, ೫೩ ಪದ್ಯ)

ತಾತ್ಪರ್ಯ:
ಕೋಪದ ಸಾಗರದಲ್ಲಿ ಕುದಿಯುತ್ತಿದ್ದ ಅಶ್ವತ್ಥಾಮನ ಬಳಿಗೆ ವೇದವ್ಯಾಸರು ಬಂದರು. ಪೂರ್ವದಲ್ಲಿ ವಿಷ್ಣುವು ನರನಾರಾಯಣ ಋಷಿಗಳಾದನು. ಆ ಋಷಿಗಳೇ ಇಂದು ಅರ್ಜುನ, ಕೃಷ್ಣರಾಗಿ ಅವತರಿಸಿ ಭೂ ಭಾರವನ್ನು ಉಪಾಯದಿಂದ ಇಳಿಸುತ್ತಿದ್ದಾರೆ ಎಂದು ತಿಳಿಸಿ ಅರ್ಜುನನ ಬಳಿಗೆ ಬಂದನು.

ಅರ್ಥ:
ಬಂದು: ಆಗಮಿಸು; ಮುನಿ:ಋಶಿ; ಗುರು: ಆಚಾರ್ಯ; ನಂದನ: ಮಗ; ಅರುಹು: ತಿಳಿಸು; ಪುರ್ವ: ಮುನ್ನ; ಆಹ್ವಯ: ಕರೆಯುವಿಕೆ; ಸಂದು: ಅವಕಾಶ; ಭೂಮಿ: ಅವನಿ; ಭಾರ: ಹೊರೆ; ಉಪಾಯ: ಯುಕ್ತಿ; ಅಪಹರಿಸು: ಕಳ್ಳತನ ಮಾಡು; ಐತಂದು: ಬಂದು ಸೇರು; ಹದ: ಸ್ಥಿತಿ; ತಿಳುಹು: ಅರಿ, ಗೊತ್ತುಮಾಡು; ಹೊರೆ: ರಕ್ಷಣೆ, ಆಶ್ರಯ;

ಪದವಿಂಗಡಣೆ:
ಬಂದು +ವೇದವ್ಯಾಸಮುನಿ +ಗುರು
ನಂದನಂಗ್+ಅರುಹಿದನು +ಪಾರ್ಥ +ಮು
ಕುಂದರನು +ಪೂರ್ವದಲಿ +ನರ+ನಾರಾಯಣ+ಆಹ್ವಯದ
ಸಂದ +ಋಷಿಗಳು +ಭೂಮಿ+ಭಾರವನ್
ಒಂದ್+ಉಪಾಯದಲ್+ಅಪಹರಿಸಲ್
ಐತಂದ +ಹದನನು +ತಿಳುಹಿ +ಬಂದನು +ಫಲುಗುಣನ +ಹೊರೆಗೆ

ಅಚ್ಚರಿ:
(೧) ಮುನಿ, ಋಷಿ – ಸಾಮ್ಯಾರ್ಥ ಪದ

ಪದ್ಯ ೩೯: ಕೃಷ್ಣನ ಮನದೊಳಗೆ ಏನನ್ನು ತಿಳಿದನು?

ಎಂದು ಷೋಡಶರಾಯರಾ ಕಥೆ
ಯಿಂದ ನೃಪತಿಯ ಸಂತವಿಟ್ಟನು
ಬಂದು ಧರ್ಮಜನೆರಗಿದನು ಮುನಿರಾಯನಂಘ್ರಿಯಲಿ
ಅಂದು ವೇದವ್ಯಾಸ ಪಾಳಯ
ದಿಂದ ಕಳುಹಿಸಿಕೊಂಡನಿತ್ತ ಮು
ಕುಂದನಭಿಮನ್ಯುವಿನ ಮರಣವನರಿದ ಮನದೊಳಗೆ (ದ್ರೋಣ ಪರ್ವ, ೭ ಸಂಧಿ, ೩೯ ಪದ್ಯ)

ತಾತ್ಪರ್ಯ:
ಹದಿನಾರು ರಾಜರ ಚರಿತ್ರೆಯನ್ನು ವ್ಯಾಸರು ಹೇಳಿ ಸಂತೈಸಲು, ಧರ್ಮಜನು ಅವನಿಗೆ ನಮಸ್ಕರಿಸಿದನು. ವ್ಯಾಸರು ಪಾಂಡವರ ಬಿಡಾರದಿಂದ ಹೊರಟರು. ಇತ್ತ ಶ್ರೀಕೃಷ್ಣನು ತನ್ನ ಮನಸ್ಸಿನಲ್ಲಿ ಅಭಿಮನ್ಯುವಿನ ಸಾವಿನ ವಿಷಯವನ್ನು ತಿಳಿದನು.

ಅರ್ಥ:
ಷೋಡಶ: ಹದಿನಾರು; ರಾಯ: ರಾಜ; ಕಥೆ: ಚರಿತ್ರೆ; ನೃಪತಿ: ರಾಜ; ಸಂತವಿಡು: ಸಮಾಧಾನ ಪಡಿಸು; ಬಂದು: ಆಗಮಿಸು; ಎರಗು: ಬಾಗು; ಮುನಿ: ಋಷಿ; ಅಂಘ್ರಿ: ಪಾದ; ಪಾಳಯ: ಬಿಡಾರ; ಕಳುಹಿಸು: ಬೀಳ್ಕೊಡು; ಮುಕುಂದ: ಕೃಷ್ಣ; ಮರಣ: ಸಾವು; ಅರಿ: ತಿಳಿ; ಮನ: ಮನಸ್ಸು;

ಪದವಿಂಗಡಣೆ:
ಎಂದು +ಷೋಡಶ+ರಾಯರ+ಆ+ ಕಥೆ
ಯಿಂದ +ನೃಪತಿಯ +ಸಂತವಿಟ್ಟನು
ಬಂದು +ಧರ್ಮಜನ್+ಎರಗಿದನು +ಮುನಿರಾಯನ್+ಅಂಘ್ರಿಯಲಿ
ಅಂದು +ವೇದವ್ಯಾಸ +ಪಾಳಯ
ದಿಂದ +ಕಳುಹಿಸಿಕೊಂಡನ್+ಇತ್ತ +ಮು
ಕುಂದನ್+ಅಭಿಮನ್ಯುವಿನ +ಮರಣವನ್+ಅರಿದ +ಮನದೊಳಗೆ

ಅಚ್ಚರಿ:
(೧) ಎಂದು, ಬಂದು, ಅಂದು – ಪ್ರಾಸ ಪದಗಳು
(೨) ರಾಯ, ನೃಪತಿ – ಸಮಾನಾರ್ಥಕ ಪದ
(೩) ಮುನಿರಾಯ, ಷೋಡಶರಾಯ – ರಾಯ ಪದದ ಬಳಕೆ

ಪದ್ಯ ೩೦: ಯಾವುದಕ್ಕೆ ಯಾವುದು ಮೂಲವೆಂದು ವ್ಯಾಸರು ತಿಳಿಸಿದರು?

ಇರುಳು ಹಗಲಿನ ಬೀಜ ನೆರವಿಯೆ
ಹರೆವುದಕೆ ಮೊದಲುನ್ನತೋಜ್ಜತ
ಮರುಳೆ ಕೇಡಿನ ಕಾಳಕೂಟವೆ ವೀರನಿರ್ವಹಣ
ಸಿರಿ ದರಿದ್ರತೆಗಡಹು ಜನನವೆ
ಮರಣ ಫಲವಿದನರಿದು ಬುಧರಾ
ಚರಿಸುವುದು ಕೇಳೆಂದು ವೇದವ್ಯಾಸ ಮುನಿ ನುಡಿದ (ದ್ರೋಣ ಪರ್ವ, ೭ ಸಂಧಿ, ೩೦ ಪದ್ಯ)

ತಾತ್ಪರ್ಯ:
ರಾತ್ರಿಯು ಹಗಲಿನ ಮೂಲ, ಕೂಡುವುದೇ ಅಗಲುವುದಕ್ಕೆ ಮೂಲ, ಹುಚ್ಚರಲ್ಲಿ ಮಹಾಹುಚ್ಚನೇ ಕೇಳು, ವೀರರನ್ನು ಸಾಕುವುದೇ ಕೇಡಿನ ವಿಷಸಂಗ್ರಹಣೆ. ದಾರಿದ್ರ್ಯಕ್ಕೆ ಸಿರಿಯೇ ಗ್ರಾಸ, ಮರಣದ ಫಲ ಜನನ, ಇದನ್ನರಿತು ತಿಳಿದವರು ನಡೆಯಬೇಕೆಂದು ವ್ಯಾಸರು ನುಡಿದರು.

ಅರ್ಥ:
ಇರುಳು: ರಾತ್ರಿ: ಹಗಲು: ದಿನ; ಬೀಜ: ಮೂಲವಸ್ತು; ನೆರವಿ: ಗುಂಪು, ಸಮೂಹ; ಹರೆ:ವ್ಯಾಪಿಸು, ವಿಸ್ತರಿಸು; ಮೊದಲು: ಮುನ್ನ; ಉನ್ನತೋನ್ನತ: ಶ್ರೇಷ್ಠ; ಮರುಳೆ: ಮೂಢ; ಕೇಡು: ನಾಶ; ಕಾಳಕೂಟ: ವಿಷ; ವೀರ: ಶೂರ, ಪರಾಕ್ರಮಿ; ನಿರ್ವಹಣೆ: ನಿಭಾಯಿಸುವಿಕೆ; ಸಿರಿ: ಐಶ್ವರ್ಯ; ದರಿದ್ರತೆ: ಬಡತನ; ಎಡರು: ಅಡಚಣೆ; ಜನನ: ಹುಟ್ಟು; ಮರಣ: ಸಾವು; ಫಲ: ಪ್ರಾಪ್ತಿ, ಪ್ರಯೋಜನ; ಅರಿ: ತಿಳಿ; ಬುಧ: ಪಂಡಿತ; ಆಚರಿಸು: ನಿರ್ವಹಿಸು; ಕೇಳು: ತಿಳಿಸು; ಮುನಿ: ಋಷಿ; ನುಡಿ: ಮಾತು;

ಪದವಿಂಗಡಣೆ:
ಇರುಳು +ಹಗಲಿನ +ಬೀಜ +ನೆರವಿಯೆ
ಹರೆವುದಕೆ +ಮೊದಲ್+ಉನ್ನತೋನ್ನತ
ಮರುಳೆ +ಕೇಡಿನ +ಕಾಳಕೂಟವೆ + ವೀರ+ನಿರ್ವಹಣ
ಸಿರಿ +ದರಿದ್ರತೆಗ್+ಅಡಹು +ಜನನವೆ
ಮರಣ +ಫಲವಿದನ್+ಅರಿದು +ಬುಧರ್
ಆಚರಿಸುವುದು +ಕೇಳೆಂದು +ವೇದವ್ಯಾಸ +ಮುನಿ +ನುಡಿದ

ಅಚ್ಚರಿ:
(೧) ವ್ಯಾಸರ ನುಡಿಗಳು – ಕೇಡಿನ ಕಾಳಕೂಟವೆ ವೀರನಿರ್ವಹಣ; ಇರುಳು ಹಗಲಿನ ಬೀಜ; ಸಿರಿ ದರಿದ್ರತೆಗಡಹು; ಜನನವೆಮರಣ ಫಲ

ಪದ್ಯ ೨೧: ವ್ಯಾಸರು ಯಾರನ್ನು ಸಂತೈಸಿದರು?

ಬಂದು ವೇದವ್ಯಾಸಮುನಿ ನೃಪ
ಮಂದಿರವ ಹೊಗಲೆದ್ದು ಪದದಲಿ
ಸಂದಣಿಸಿ ಚಾಚಿದನು ಮಕುಟವನವನಿಪಾಲಕನು
ನೊಂದವರು ಸತ್ಸಂಗತಿಯಲಾ
ನಂದವಡೆವುದೆನುತ್ತ ಮುನಿಪತಿ
ಕಂದು ಮೋರೆಯ ಮಹಿಪತಿಯ ನೆಗಹಿದನು ಕರುಣದಲಿ (ದ್ರೋಣ ಪರ್ವ, ೭ ಸಂಧಿ, ೨೧ ಪದ್ಯ)

ತಾತ್ಪರ್ಯ:
ವೇದವ್ಯಾಸ ಮುನಿಗಳು ರಾಜನ ಮಂದಿರಕ್ಕೆ ಬಂದನು. ಯುಧಿಷ್ಠಿರ ಎದ್ದು ಅವರ ಪಾದಕಮಲಗಳ ಮೇಲೆ ತನ್ನ ಕಿರೀಟವನ್ನು ಹರಡಿ ನಮಸ್ಕರಿಸಿದನು. ಯುಧಿಷ್ಠಿರ ನೀವು ಬಹಳ ನೊಂದಿರುವಿರಿ, ಈ ಸಮಯವನ್ನು ಸತ್ಕಥಾ ಪ್ರಸಂಗದಿಂದ ಕಳೆಯಬೇಕೆ ಎಂದು ಹೇಳುತ್ತಾ ವ್ಯಾಸನು ಬಾಡಿದ ಮುಖದ ಧರ್ಮಜನನ್ನೆತ್ತಿದನು.

ಅರ್ಥ:
ಮುನಿ: ಋಷಿ; ನೃಪ: ರಾಜ; ನೃಪಮಂದಿರ: ಅರಮನೆ; ಹೊಗಲು: ಬರಲು; ಎದ್ದು: ಮೇಲೇಳು; ಪದ: ಚರಣ; ಸಂದಣಿಸು: ಗುಂಪು; ಚಾಚು: ಹರಡು; ಮಕುಟ: ಕಿರೀಟ; ಅವನಿಪಾಲಕ: ರಾಜ; ನೊಂದು: ನೋವು; ಸಂಗತಿ: ವಿಷಯ, ವಿಚಾರ; ಆನಂದ: ಸಂತಸ; ಕಂದು: ಬಾಡು; ಮೋರೆ: ಮುಖ; ಮಹಿಪತಿ: ರಾಜ; ನೆಗಹು: ತಬ್ಬಿಕೊ; ಕರುಣ: ದಯೆ;

ಪದವಿಂಗಡಣೆ:
ಬಂದು+ ವೇದವ್ಯಾಸ+ಮುನಿ +ನೃಪ
ಮಂದಿರವ +ಹೊಗಲ್+ಎದ್ದು +ಪದದಲಿ
ಸಂದಣಿಸಿ +ಚಾಚಿದನು +ಮಕುಟವನ್+ಅವನಿಪಾಲಕನು
ನೊಂದವರು +ಸತ್ಸಂಗತಿಯಲ್
ಆನಂದವಡೆವುದ್+ಎನುತ್ತ +ಮುನಿಪತಿ
ಕಂದು +ಮೋರೆಯ +ಮಹಿಪತಿಯ +ನೆಗಹಿದನು +ಕರುಣದಲಿ

ಅಚ್ಚರಿ:
(೧) ಯುಧಿಷ್ಠಿರನ ಸ್ಥಿತಿಯನ್ನು ಚಿತ್ರಿಸುವ ಪರಿ – ಮುನಿಪತಿ ಕಂದು ಮೋರೆಯ ಮಹಿಪತಿಯ ನೆಗಹಿದನು ಕರುಣದಲಿ
(೨) ನಮಸ್ಕರಿಸಿದನು ಎಂದು ಹೇಳುವ ಪರಿ – ಪದದಲಿ ಸಂದಣಿಸಿ ಚಾಚಿದನು ಮಕುಟವನವನಿಪಾಲಕನು