ಪದ್ಯ ೭: ವ್ಯಾಸರು ಯಾವ ಶಿಷ್ಯನನ್ನು ಕರೆದರು?

ಸರ್ಪಯಜ್ಞದಲಾದ ದುರಿತದ
ದರ್ಪವನು ಕೆಡೆಬೀಳಲೊದೆಯಲು
ತರ್ಪಣಾದಿ ಕ್ರಿಯೆಗಳಲಿ ಸಾಮರ್ಥ್ಯವಿಲ್ಲೆಂದು
ದರ್ಪಕಾಹಿತಮೂರ್ತಿ ಮುನಿಮುಖ
ದರ್ಪಣನು ಶಿಷ್ಯನನು ಕರೆದು ಸ
ಮರ್ಪಿಸಿದನರಸಂಗೆ ವೇದವ್ಯಾಸ ಮುನಿರಾಯ (ಆದಿ ಪರ್ವ, ೨ ಸಂಧಿ, ೭ ಪದ್ಯ)

ತಾತ್ಪರ್ಯ:
ಮನ್ಮಥನ ಶತ್ರುವೂ, ಮುನಿಗಳಿಗೆ ಕನ್ನಡಿಯಮ್ತಿರುವವನೂ ಆದ, ವೇದವ್ಯಾಸ ಮುನೀಶ್ವರನು ಜನಮೇಜಯರಾಜನಿಗೆ ಸರ್ಪಯಜ್ಞದಲ್ಲಿ ಗಳಿಸಿದ ಮಹಾಪಾಪವನ್ನು ತರ್ಪಣವೇ ಮೊದಲಾದ ಕ್ರಿಯೆಗಳಿಂದ ನಿವಾರಿಸಿಕೊಳ್ಳಲು ಸಾಧ್ಯವಿಲ್ಲವೆಂದು ನಿಶ್ಚಯಿಸಿ ಶಿಷ್ಯನಾದ ವೈಶಂಪಾಯನನ್ನು ಕರೆದು ಜನಮೇಜಯನಿಗೆ ಹೀಗೆಂದು ಹೇಳಿದನು.

ಅರ್ಥ:
ಸರ್ಪ: ಹಾವು; ಯಜ್ಞ: ಕ್ರತು; ದುರಿತ: ಪಾಪ; ದರ್ಪ: ಅಹಂಕಾರ; ಕೆಡೆ: ಬೀಳು, ಕುಸಿ; ಬೀಳು: ಜಾರು; ಒದೆ: ನೂಕು; ತರ್ಪಣ: ತೃಪ್ತಿಪಡಿಸುವಿಕೆ; ಕ್ರಿಯೆ: ಕಾರ್ಯ; ಸಾಮರ್ಥ್ಯ: ದಕ್ಷತೆ, ಯೋಗ್ಯತೆ; ದರ್ಪಕಾಹಿತ: ಶಿವ, ಮನ್ಮಥನ ಶತ್ರು; ಮುನಿ: ಋಷಿ; ಮುಖ: ಆನನ; ದರ್ಪಣ: ಕನ್ನದಿ; ಶಿಷ್ಯ: ವಿದ್ಯಾರ್ಥಿ; ಕರೆ: ಬರೆಮಾಡು; ಸಮರ್ಪಿಸು: ನೀಡು; ಅರಸ: ರಾಜ; ರಾಯ: ರಾಜ; ದರ್ಪಕ: ಮನ್ಮಥ;

ಪದವಿಂಗಡಣೆ:
ಸರ್ಪಯಜ್ಞದಲಾದ +ದುರಿತದ
ದರ್ಪವನು +ಕೆಡೆ+ಬೀಳಲ್+ಒದೆಯಲು
ತರ್ಪಣಾದಿ +ಕ್ರಿಯೆಗಳಲಿ +ಸಾಮರ್ಥ್ಯವಿಲ್ಲೆಂದು
ದರ್ಪಕ+ಅಹಿತಮೂರ್ತಿ+ ಮುನಿ+ಮುಖ
ದರ್ಪಣನು +ಶಿಷ್ಯನನು +ಕರೆದು+ ಸ
ಮರ್ಪಿಸಿದನ್+ ಅರಸಂಗೆ+ ವೇದವ್ಯಾಸ +ಮುನಿರಾಯ

ಅಚ್ಚರಿ:
(೧) ದರ್ಪ, ದರ್ಪಕ, ದರ್ಪಣ – ಪದಗಳ ಬಳಕೆ
(೨) ವ್ಯಾಸರನ್ನು ಕರೆದ ಪರಿ – ದರ್ಪಕಾಹಿತಮೂರ್ತಿ, ಮುನಿಮುಖದರ್ಪಣನು

ಪದ್ಯ ೧೯: ಭಾರತದ ಕತೆಯನ್ನು ಕೇಳುವುದರ ಉಪಯೋಗವೇನು?

ಸರ್ಪಯಾಗದೊಳಾದ ಕರ್ಮದ
ದರ್ಪವನು ಕೆಡೆಯೊದೆದು ಬೆಳಗಿದ
ನುಪ್ಪರದ ರವಿತೇಜದಲಿ ಸುರನರರು ಬೆರಗಾಗೆ
ತಪ್ಪದೀ ಭಾರತವ ಕೇಳ್ದಂ
ಗಪ್ಪುದಮರಸ್ರೀ ಕದಂಬದೊ
ಳೊಪ್ಪುವಿಂದ್ರನ ಪದವಿಯೆಂದನು ಸೂತ ಕೈಮುಗಿದು (ಗದಾ ಪರ್ವ, ೧೩ ಸಂಧಿ, ೧೯ ಪದ್ಯ)

ತಾತ್ಪರ್ಯ:
ಸೂತ ಪುರಾಣಿಕರು ಶೌನಕಾದಿ ಮುನಿಗಳಿಗೆ, ಮಹರ್ಷಿಗಳೇ, ವೈಶಂಪಾಯನನಿಂದ ಮಹಾಭಾರತವನ್ನು ಕೇಳಿದ ಜನಮೇಜಯರಾಯನು, ಸರ್ಪಯಾಗದಿಮ್ದಾದ ಪಾಪಕರ್ಮದ ದರ್ಪವನ್ನು ತೆಗೆದೊಗೆದು, ಸೂರ್ಯನ ತೇಜಸ್ಸಿಗೆ ಮೀರಿದ ತೇಜಸ್ಸಿನಿಂದ ಹೊಳೆದನು. ಅದನ್ನು ಕಂಡು ಮನುಷ್ಯರೂ, ದೇವತೆಗಳೂ ಬೆರಗಾದರು. ಈ ಭಾರತದ ಕತೆಯನ್ನು ತಪ್ಪದೇ ಕೇಳಿದವನಿಗೆ ದೇವೇಂದ್ರನ ಪದವಿ ದೊರಕುತ್ತದೆ ಎಂದು ಬಿನ್ನೈಸಿದನು.

ಅರ್ಥ:
ಸರ್ಪ: ಹಾವು, ಉರಗ; ಯಾಗ: ಯಜ್ಞ, ಕ್ರತು; ಕರ್ಮ: ಕೆಲಸ; ದರ್ಪ: ಅಹಂಕಾರ; ಕೆಡೆ: ಬೀಳು, ಕುಸಿ; ಬೆಳಗು: ಪ್ರಕಾಶ; ಉಪ್ಪರ:ಅತಿಶಯ; ರವಿ: ಸೂರ್ಯ; ತೇಜಸ್ಸು: ಪ್ರಕಾಶ; ಸುರ: ದೇವತೆ; ನರ: ಮನುಷ್ಯ; ಬೆರಗು: ಆಶ್ಚರ್ಯ; ತಪ್ಪದು: ಸರಿಯಾಗದು; ಅಪ್ಪುದು: ಆಲಿಂಗಿಸು, ಒಪ್ಪು; ಒಪ್ಪು: ಸಮ್ಮತಿ; ಅಮರಸ್ತ್ರೀ: ಅಪ್ಸರೆ; ಕದಂಬ: ಸಮೂಹ; ಒಪ್ಪು: ಸಮ್ಮತಿ; ಇಂದ್ರ: ದೇವತೆಗಳ ಅರಸ; ಪದವಿ: ಪಟ್ಟ; ಸೂತ: ಪುರಾಣಗಳನ್ನು ಬೋಧಿಸಿದ ಒಬ್ಬ ಋಷಿಯ ಹೆಸರು; ಕೈಮುಗಿ: ನಮಸ್ಕರಿಸು;

ಪದವಿಂಗಡಣೆ:
ಸರ್ಪಯಾಗದೊಳ್+ಆದ+ ಕರ್ಮದ
ದರ್ಪವನು+ ಕೆಡೆ+ಒದೆದು+ ಬೆಳಗಿದನ್
ಉಪ್ಪರದ +ರವಿತೇಜದಲಿ+ ಸುರನರರು +ಬೆರಗಾಗೆ
ತಪ್ಪದೀ +ಭಾರತವ +ಕೇಳ್ದಂಗ್
ಅಪ್ಪುದ್+ಅಮರಸ್ರೀ+ ಕದಂಬದೊಳ್
ಒಪ್ಪುವ್+ಇಂದ್ರನ +ಪದವಿ+ಎಂದನು +ಸೂತ +ಕೈಮುಗಿದು

ಅಚ್ಚರಿ:
(೧) ರೂಪಕದ ಪ್ರಯೋಗ – ಬೆಳಗಿದನುಪ್ಪರದ ರವಿತೇಜದಲಿ ಸುರನರರು ಬೆರಗಾಗೆ

ಪದ್ಯ ೨೧: ಗದೆಯು ಏಕೆ ರಕ್ತಸಿಕ್ತವಾಯಿತು?

ತಪ್ಪಿಸಿದನೇ ಘಾಯವನು ಫಡ
ತಪ್ಪಿಸಿನ್ನಾದಡೆಯೆನುತ ಕಡು
ದರ್ಪದಲಿ ಹೊಯ್ದನು ಸಮೀರಾತ್ಮಜನನವನೀಶ
ತಪ್ಪಿತದು ಗದೆ ತನುವ ರಕುತದ
ದರ್ಪನದ ರಹಿಯಾಯ್ತು ಗದೆ ಮಾ
ರಪ್ಪಿತರಸನನೆನಲು ಹೊಯ್ದನು ಭಾಳದಲಿ ಭೀಮ (ಗದಾ ಪರ್ವ, ೭ ಸಂಧಿ, ೨೧ ಪದ್ಯ)

ತಾತ್ಪರ್ಯ:
ನನ್ನ ಹೊಡೆತವನ್ನು ತಪ್ಪಿಸಿಕೊಂಡನೋ, ಹಾಗಾದರೆ ಈಗ ತಪ್ಪಿಸಿಕೋ ಎಂದು ಕೌರವನು ಹೊಡೆಯಲು, ಆ ಹೊಡೆತ ತಪ್ಪಿತು, ಗದೆಯು ಕೌರವನನ್ನು ಅಪ್ಪಿತೋ ಎಂಬಂತೆ ಭೀಮನು ವೈರಿಯ ಹಣೆಗೆ ಹೊಡೆದನು. ಗದೆಯು ರಕ್ತಸಿಕ್ತವಾಯಿತು.

ಅರ್ಥ:
ಘಾಯ: ಪೆಟ್ಟು; ಫಡ: ತಿರಸ್ಕಾರದ ನುಡಿ; ಕಡು: ಬಹಳ; ದರ್ಪ: ಅಹಂಕಾರ; ಸಮೀರ: ವಾಯು; ಅಮೀರಾತ್ಮಜ: ಭೀಮ; ಅವನೀಶ: ರಾಜ; ಗದೆ: ಮುದ್ಗರ; ತನು: ದೇಹ; ರಕುತ: ನೆತ್ತರು; ದರ್ಪಣ: ಮುಕುರ; ರಹಿ: ರೀತಿ, ಪ್ರಕಾರ; ಅರಸ: ರಾಜ; ಹೊಯ್ದು: ಹೊಡೆ; ಭಾಳ: ಹಣೆ;

ಪದವಿಂಗಡಣೆ:
ತಪ್ಪಿಸಿದನೇ +ಘಾಯವನು +ಫಡ
ತಪ್ಪಿಸಿನ್ನಾದಡೆ+ಎನುತ +ಕಡು
ದರ್ಪದಲಿ+ ಹೊಯ್ದನು+ ಸಮೀರಾತ್ಮಜನನ್+ಅವನೀಶ
ತಪ್ಪಿತದು+ ಗದೆ+ ತನುವ +ರಕುತದ
ದರ್ಪಣದ +ರಹಿಯಾಯ್ತು +ಗದೆ +ಮಾರ್
ಅಪ್ಪಿತ್+ಅರಸನನ್+ಎನಲು +ಹೊಯ್ದನು+ ಭಾಳದಲಿ +ಭೀಮ

ಅಚ್ಚರಿ:
(೧) ಭೀಮನನ್ನು ಸಮೀರಾತ್ಮಜ; ದುರ್ಯೋಧನನನ್ನು ಅವನೀಶ, ಅರಸ ಎಂದು ಕರೆದಿರುವುದು
(೨) ತಪ್ಪಿಸಿ, ತಪ್ಪಿತದು – ೧,೨,೪ ಸಾಲಿನ ಮೊದಲ ಪದ

ಪದ್ಯ ೩೫: ದುರ್ಯೋಧನು ಕೃಪಾದಿಗಳಿಗೆ ಏನೆಂದು ಹೇಳಿದನು?

ಒಪ್ಪದಿದು ಭೀಷ್ಮಾದಿಯವ್ವನ
ದರ್ಪದಲಿ ಜಾರಿದ ಜಯಾಂಗನೆ
ಮುಪ್ಪಿನಲಿ ನಮಗೊಲಿವುದರಿದೇಕಾಕಿಯಾದೆವಲೆ
ತಪ್ಪಿದುದನೀ ಸಲಿಲವಾಸದೊ
ಳೊಪ್ಪವಿಡುವೆನು ನಾಳೆ ನೀವ್ ತೊಲ
ಗಿಪ್ಪುದಿಂದಿನೊಳೆಂದನವನಿಪನಾ ಕೃಪಾದಿಗಳ (ಗದಾ ಪರ್ವ, ೪ ಸಂಧಿ, ೩೫ ಪದ್ಯ)

ತಾತ್ಪರ್ಯ:
ದುರ್ಯೋಧನನು, ನೀವು ಹೇಳುವ ಮಾತು ಸರಿಯಲ್ಲ. ಭೀಷ್ಮಾದಿಗಳ ಪರಾಕ್ರಮ ಯೌವನಕಾಲದಲ್ಲಿಯೇ ನಮಗೆ ದೊರೆಯದ ಜಯವಧುವು ಅವರೆಲ್ಲ ಕಳೆದುಹೋದ ಮುಪ್ಪಿನಲ್ಲಿ ನಮಗೆ ಒಲಿಯುವಳೆಂಬುದು ಸುಳ್ಳು. ನಾವೀಗ ಏಕಾಕಿಯಾಗಿದ್ದೇವೆ. ನಾನು ಮಾಡಿದ ತಪ್ಪನ್ನು ನೀರಿನಲ್ಲಿ ಈ ದಿವಸ ಇದ್ದು ನಾಳೆ ಸರಿಪಡಿಸುತ್ತೇನೆ. ಈ ದಿವಸ ನೀವು ದೂರಕ್ಕೆ ಹೋಗಿ ಅಲ್ಲಿಯೇ ಇರಬೇಕು ಎಂದು ಕೃಪನೇ ಮೊದಲಾದವರಿಗೆ ಹೇಳಿದನು.

ಅರ್ಥ:
ಒಪ್ಪು: ಒಪ್ಪಿಗೆ, ಸಮ್ಮತಿ; ಆದಿ: ಮುಂತಾದ; ದರ್ಪ: ಹೆಮ್ಮೆ, ಗರ್ವ; ಜಾರು: ಬೀಳು; ಜಯಾಂಗನೆ: ವಿಜಯಲಕ್ಷ್ಮಿ; ಮುಪ್ಪು: ಮುದಿತನ, ವೃದ್ಧಾಪ್ಯ; ಒಲಿವು: ದೊರೆಯುವುದು; ಏಕಾಕಿ: ಏಕಾಂಗಿ; ಸಲಿಲ: ನೀರು; ವಾಸ: ಜೀವನ; ಒಪ್ಪು: ಒಪ್ಪಿಗೆ, ಸಮ್ಮತಿ; ತೊಲಗು: ಹೊರಡು; ಅವನಿಪ: ರಾಜ;

ಪದವಿಂಗಡಣೆ:
ಒಪ್ಪದಿದು+ ಭೀಷ್ಮಾದಿಯವ್ವನ
ದರ್ಪದಲಿ+ ಜಾರಿದ +ಜಯಾಂಗನೆ
ಮುಪ್ಪಿನಲಿ +ನಮಗ್+ಒಲಿವುದ್+ಅರಿದ್+ಏಕಾಕಿ+ಆದೆವಲೆ
ತಪ್ಪಿದುದನ್+ಈ+ ಸಲಿಲವಾಸದೊಳ್
ಒಪ್ಪವಿಡುವೆನು +ನಾಳೆ +ನೀವ್ +ತೊಲ
ಗಿಪ್ಪುದ್+ಇಂದಿನೊಳ್+ಎಂದನ್+ಅವನಿಪನ್+ಆ+ ಕೃಪಾದಿಗಳ

ಅಚ್ಚರಿ:
(೧) ಸೋಲು ಖಚಿತ ಎಂದು ಹೇಳುವ ಪರಿ – ಜಾರಿದ ಜಯಾಂಗನೆ ಮುಪ್ಪಿನಲಿ ನಮಗೊಲಿವುದರಿದೇಕಾಕಿಯಾದೆವಲೆ

ಪದ್ಯ ೨೮: ಧೂಳು ಮತ್ತು ರಕ್ತವು ಹೇಗೆ ದರ್ಪವನ್ನು ಮೆರೆದವು?

ತಪ್ಪಿಸಿದ ಮೈಮೈಗಳಲಿ ಹರಿ
ತಪ್ಪ ರಕ್ತವ ಸುರಿದು ಕೆಂಧೂ
ಳುಪ್ಪರಿಸಿದುದು ಚಟುಳ ಚಾತುರ್ಬಲದ ಪದಹತಿಗೆ
ಅಪ್ಪಿದುದು ಕೆಂಧೂಳಿನೊಡ್ಡಿನ
ದರ್ಪಣದ ತನಿರಕ್ತವೆರಡರ
ದರ್ಪವಡಗದು ನಿಮಿಷದಲಿ ನರನಾಥ ಕೇಳೆಂದ (ಶಲ್ಯ ಪರ್ವ, ೨ ಸಂಧಿ, ೨೮ ಪದ್ಯ)

ತಾತ್ಪರ್ಯ:
ಸೈನ್ಯದ ಮೈಯಿಂದ ಹರಿದು ಕೆಳಗೆಬಿದ್ದು ನೆಲೆ ತೋಯುವಷ್ಟರಲ್ಲಿ ಕಾಲ್ತುಳಿತದಿಂದ ಕೆಂಧೂಳೇಳುತ್ತಿತ್ತು. ಈ ಕೆಂಧೂಳನ್ನು ಚಿಮ್ಮುವ ರಕ್ತ ಅಪ್ಪಿ ಕೆಳಬೀಳಿಸುತ್ತಿತ್ತು.

ಅರ್ಥ:
ತಪ್ಪು: ಸರಿಯಲ್ಲದ್ದು; ಮೈ: ತನು; ಹರಿ: ಸರಿ, ಹರಡು; ರಕ್ತ: ನೆತ್ತರು; ಸುರಿ: ನೀರು ಹಾಕು, ಎರೆ; ಕೆಂಧೂಳು: ಮಣ್ಣಿನ ಪುಡಿ; ಉಪ್ಪರಿಸು: ಮೇಲೇಳು; ಚಟುಲ: ವೇಗ, ತ್ವರಿತ; ಚಾತುರ್ಬಲ: ಚತುರಂಬ ಸೈನ್ಯ; ಪದಹತಿ: ಕಾಲಾಳು; ಅಪ್ಪು: ಆವರಿಸು; ದರ್ಪಣ: ಕನ್ನಡಿ; ತನಿ: ಚಿಗುರು; ರಕ್ತ: ನೆತ್ತರು; ದರ್ಪ: ಅಹಂಕಾರ; ಅಡಗು: ಮರೆಯಾಗು; ನಿಮಿಷ: ಕ್ಷಣಮಾತ್ರ; ನರನಾಥ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ತಪ್ಪಿಸಿದ +ಮೈಮೈಗಳಲಿ +ಹರಿ
ತಪ್ಪ +ರಕ್ತವ +ಸುರಿದು +ಕೆಂಧೂಳ್
ಉಪ್ಪರಿಸಿದುದು +ಚಟುಳ +ಚಾತುರ್ಬಲದ+ ಪದಹತಿಗೆ
ಅಪ್ಪಿದುದು +ಕೆಂಧೂಳಿನ್+ಒಡ್ಡಿನ
ದರ್ಪಣದ +ತನಿ+ರಕ್ತವ್+ಎರಡರ
ದರ್ಪವ್+ಅಡಗದು +ನಿಮಿಷದಲಿ +ನರನಾಥ +ಕೇಳೆಂದ

ಅಚ್ಚರಿ:
(೧) ದರ್ಪಣ, ದರ್ಪ – ಪದಗಳ ಬಳಕೆ
(೨) ರಕ್ತ ಮತ್ತು ಕೆಂಧೂಳಿಯನ್ನು ವಿವರಿಸುವ ಪರಿ – ಅಪ್ಪಿದುದು ಕೆಂಧೂಳಿನೊಡ್ಡಿನ
ದರ್ಪಣದ ತನಿರಕ್ತವೆರಡರ ದರ್ಪವಡಗದು

ಪದ್ಯ ೨೫: ಅಭಿಮನ್ಯುವಿನತ್ತ ಏಕೆ ರಥವನ್ನು ನೂಕಿದರು?

ಇದಿರೊಳೀಶನ ಭಾಳ ನಯನದ
ಕದಹು ತೆಗೆದಿದೆ ಹಿಂದೆ ಮರಳುವ
ಡಿದೆ ಕೃತಾಂತನ ಕೊಂತವರಸನ ಮೂದಲೆಯ ವಚನ
ಅದಟು ಕೊಳ್ಳದು ರಾಜ ಸೇವೆಯ
ಪದವಿ ಪಾತಕ ಫಲವೆನುತ ನೂ
ಕಿದರು ರಥವನು ಹಳಿವು ದರ್ಪದ ಹೇವ ಮಾರಿಗಳು (ದ್ರೋಣ ಪರ್ವ, ೬ ಸಂಧಿ, ೨೫ ಪದ್ಯ)

ತಾತ್ಪರ್ಯ:
ಎದುರಿನಲ್ಲಿ ಶಿವನ ಹಣೆಗಣ್ಣಿನ ಕದ ತೆಗೆದಂತೆ ಅಭಿಮನ್ಯುವಿದ್ದಾನೆ, ಹಿಂದಕ್ಕೆ ಹೋಗೋಣವೆಂದರೆ ಒಡೆಯನ ಮೂದಲೆಯ ಮಾತುಗಳು ಯಮನ ಕುಂತದಂತೆ ಇರಿಯುತ್ತಿವೆ. ನಮ್ಮ ಪರಾಕ್ರಮ ನಡೆಯುತ್ತಿಲ್ಲ. ರಾಜಸೇವೆಯಲ್ಲಿರುವುದು ಪೂರ್ವ ಜನ್ಮದ ಪಾಪದ ಫಲ ಎಂದುಕೊಂಡು ಅಪಕೀರ್ತಿ ದರ್ಪದ ಆತ್ಮ ಗೌರವಗಳನ್ನು ಒಡೆಯನಿಗೆ ಮಾರಿಕೊಂಡು ಷಡ್ರಥರು ತಮ್ಮ ರಥಗಳನ್ನು ಅಭಿಮನ್ಯುವಿನತ್ತ ನೂಕಿದರು.

ಅರ್ಥ:
ಇದಿರು: ಎದುರು; ಈಶ: ಶಂಕರ; ಭಾಳ: ಹಣೆ; ನಯನ: ಕಣ್ಣು; ಕದ: ಬಾಗಿಲು; ತೆಗೆ: ಹೊರತರು; ಮರಳು: ಹಿಂದಿರುಗು; ಕೃತಾಂತ: ಯಮ; ಕೊಂತು: ಒತ್ತುವಷ್ಟು; ಅರಸ: ರಾಜ; ಮೂದಲೆ: ಹಂಗಿಸು; ವಚನ: ಮಾತು; ಅದಟು: ಪರಾಕ್ರಮ, ಶೌರ್ಯ; ರಾಜ: ನೃಪ; ಸೇವೆ: ಊಳಿಗ, ಚಾಕರಿ; ಪದವಿ: ಮನ್ನಣೆ; ಪಾತಕ: ಪಾಪ; ಫಲ: ಪ್ರಯೋಜನ; ನೂಕು: ತಳ್ಳು; ರಥ: ಬಂಡಿ; ಹಳಿ: ದೂಷಿಸು, ನಿಂದಿಸು; ದರ್ಪ: ಅಹಂಕಾರ; ಹೇವ: ಲಜ್ಜೆ, ಮಾನ; ಮಾರಿ: ಕೆಟ್ಟ, ನೀಚ;

ಪದವಿಂಗಡಣೆ:
ಇದಿರೊಳ್+ಈಶನ +ಭಾಳ +ನಯನದ
ಕದಹು +ತೆಗೆದಿದೆ +ಹಿಂದೆ +ಮರಳುವಡ್
ಇದೆ +ಕೃತಾಂತನ +ಕೊಂತವ್+ಅರಸನ +ಮೂದಲೆಯ+ ವಚನ
ಅದಟು +ಕೊಳ್ಳದು +ರಾಜ +ಸೇವೆಯ
ಪದವಿ +ಪಾತಕ +ಫಲವೆನುತ +ನೂ
ಕಿದರು +ರಥವನು +ಹಳಿವು +ದರ್ಪದ +ಹೇವ +ಮಾರಿಗಳು

ಅಚ್ಚರಿ:
(೧) ಅಭಿಮನ್ಯುವನ್ನು ಹೋಲಿಸಿದ ಪರಿ – ಇದಿರೊಳೀಶನ ಭಾಳ ನಯನದ ಕದಹು ತೆಗೆದಿದೆ

ಪದ್ಯ ೫೪: ಕರ್ಣನ ಬಾಣಗಳು ಅಭಿಮನ್ಯುವನ್ನು ಹೇಗೆ ಆವರಿಸಿದವು?

ಇರುಳುರಾಯನ ಮನೆಗೆ ಕಪ್ಪವ
ತೆರುವುದೋ ಹಗಲೆಲವೊ ಕೆಲಬರ
ನಿರಿದ ದರ್ಪವದಾರೊಡನೆ ಫಡ ಮರಳು ಮರಳೆನುತ
ಕಿರುಮೊನೆಯ ಮುಗುಳಂಬುಗಳ ಸೈ
ಗರೆದನಭಿಮನ್ಯುವಿನ ಮೆಯ್ಯಲಿ
ತುರುಗಿದವು ಮರಿದುಂಬಿ ಕೆಂದಾವರೆಗೆ ಕವಿವಂತೆ (ದ್ರೋಣ ಪರ್ವ, ೫ ಸಂಧಿ, ೫೪ ಪದ್ಯ)

ತಾತ್ಪರ್ಯ:
ರಾತ್ರಿಯ ಹೊತ್ತು ರಾಜನ ಮನೆಗೆ ಕಪ್ಪವನ್ನು ಕೊಡುವೆಯೋ, ಹಗಲೋ? ಯಾರನ್ನೋ ಇರಿದು ಗೆದ್ದಮಾತ್ರಕ್ಕೆ ಯಾರ ಮೇಲೆ ದರ್ಪವನ್ನು ತೋರಿಸುತ್ತಿರುವೇ? ಸುಮ್ಮನೆ ಮರಳಿ ಹೋಗು ಎನ್ನುತ್ತಾ ಕರ್ಣನು ಬಾಣಗಳನ್ನು ಬಿಡಲು ಅವು ಮರಿದುಂಬಿಗಳು ಕೆಂದಾವರೆಗೆ ಮುತ್ತುವಂತೆ ಅಭಿಮನ್ಯುವಿನ ಮೇಲೆ ಮುಸುಕಿದವು.

ಅರ್ಥ:
ಇರುಳು: ರಾತ್ರಿ; ರಾಯ: ರಾಜ; ಮನೆ: ಆಲಯ; ಕಪ್ಪ: ಕಾಣಿಕೆ; ತೆರುವು: ನೀಡು; ಹಗಲು: ಬೆಳಗ್ಗೆ; ಕೆಲಬರು: ಕೆಲವರು, ಸ್ವಲ್ಪ; ಇರಿ: ಚುಚ್ಚು; ದರ್ಪ: ಅಹಂಕಾರ; ಫಡ: ಗರ್ವ; ಮರಳು: ಸುತ್ತು, ತಿರುಗು, ಹಿಂದಿರುಗು; ಮೊನೆ: ತುದಿ, ಕೊನೆ, ಚೂಪಾದ; ಮುಗುಳು: ಮೊಗ್ಗು, ಚಿಗುರು; ಅಂಬು: ಬಾಣ; ಕರೆ: ಬರೆಮಾಡು; ಮೆಯ್ಯ: ತನು, ದೇಹ; ತುರುಗು: ಸಂದಣಿಸು; ದುಂಬಿ: ಭ್ರಮರ, ಜೇನು; ಕೆಂದಾವರೆ: ಕೆಂಪಾದ ಕಮಲ; ಕವಿ: ಆವರಿಸು;

ಪದವಿಂಗಡಣೆ:
ಇರುಳುರಾಯನ +ಮನೆಗೆ+ ಕಪ್ಪವ
ತೆರುವುದೋ +ಹಗಲ್+ಎಲವೊ +ಕೆಲಬರನ್
ಇರಿದ+ ದರ್ಪವದ್+ಆರೊಡನೆ +ಫಡ +ಮರಳು +ಮರಳೆನುತ
ಕಿರುಮೊನೆಯ +ಮುಗುಳಂಬುಗಳ+ ಸೈ
ಗರೆದನ್+ಅಭಿಮನ್ಯುವಿನ +ಮೆಯ್ಯಲಿ
ತುರುಗಿದವು+ ಮರಿದುಂಬಿ +ಕೆಂದಾವರೆಗೆ+ ಕವಿವಂತೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಿರುಮೊನೆಯ ಮುಗುಳಂಬುಗಳ ಸೈಗರೆದನಭಿಮನ್ಯುವಿನ ಮೆಯ್ಯಲಿ
ತುರುಗಿದವು ಮರಿದುಂಬಿ ಕೆಂದಾವರೆಗೆ ಕವಿವಂತೆ

ಪದ್ಯ ೫೩: ದ್ರೋಣನ ಬಾಣಗಳು ಯಾವ ಪರಿಣಾಮ ಬೀರಿದವು?

ದರ್ಪದಾಭರಣಕ್ಕೆ ಸೂಸಿದ
ವೊಪ್ಪ ಸಲಿಗೆಗಳೆನಲು ಗರಿಗಳು
ಚಪ್ಪರಿಸಿ ತುರುಗಿದುವು ರಿಪುಸೇನಾಸಮುದ್ರದಲಿ
ಹಿಪ್ಪೆಗರ ಹರಗಡಿದು ಹೊಗರಲ
ಗೊಪ್ಪಿದವು ಕರುಳುಗಳ ನಿಮಿಷದೊ
ಳೊಪ್ಪಗೆಡಿಸಿದವರಿಕದಂಬವನೀತನಂಬುಗಳು (ದ್ರೋಣ ಪರ್ವ, ೨ ಸಂಧಿ, ೫೩ ಪದ್ಯ)

ತಾತ್ಪರ್ಯ:
ಪರಾಕ್ರಮ ದರ್ಪಕ್ಕೆ ಅನುಗುಣವಾದ ಬಾಣಗಳೆಲ್ಲ್ನಲು, ದ್ರೋಣನ ಗರಿಸಹಿತವಾದ ಬಾಣಗಳು ಪಾಂಡವ ಸೈನ್ಯದಲ್ಲಿ ತುಂಬಿದವು. ಶೌರ್ಯ ಹೀನರನ್ನು ಕಡಿದು, ಕರುಳುಗಳನ್ನು ಕತ್ತರಿಸಿ ನಿಮಿಷಮಾತ್ರದಲ್ಲೇ ಪಾಂಡವ ಸೈನ್ಯವನು ಅಂದಗೆಡಿಸಿದವು.

ಅರ್ಥ:
ದರ್ಪ: ಅಹಂಕಾರ; ಆಭರಣ: ಒಡವೆ; ಸೂಸು: ಎರಚುವಿಕೆ, ಚಲ್ಲುವಿಕೆ; ಒಪ್ಪು: ಸಮ್ಮತಿ; ಸಲಿಗೆ: ಸದರ, ನಿಕಟ ಸಂಪರ್ಕ; ಗರಿ: ಬಾಣದ ಹಿಂಭಾಗ; ಚಪ್ಪರಿಸು: ರುಚಿನೋಡು, ಅಪ್ಪಳಿಸು; ತುರುಗು: ಸಂದಣಿಸು, ಇಟ್ಟಣಿಸು; ರಿಪು: ವೈರಿ; ಸೇನೆ: ಸೈನ್ಯ; ಸಮುದ್ರ: ಸಾಗರ; ಹಿಪ್ಪೆಗರು: ಸತ್ವವಿಲ್ಲದವರು; ಹರ: ಪರಿಹಾರ; ಕಡಿ: ಸೀಳು; ಹೊಗರು: ಹೆಚ್ಚಳ, ಆಧಿಕ್ಯ; ಒಪ್ಪು: ಸಮ್ಮತಿ; ಕರುಳು: ಪಚನಾಂಗ; ನಿಮಿಷ: ಕ್ಷಣಮಾತ್ರ; ಕೆಡಿಸು: ಹಾಳುಮಾಡು; ಅರಿ: ವೈರಿ; ಕದಂಬ: ಗುಂಪು; ಅಂಬು: ಬಾಣ;

ಪದವಿಂಗಡಣೆ:
ದರ್ಪದ+ಆಭರಣಕ್ಕೆ+ ಸೂಸಿದವ್
ಒಪ್ಪ +ಸಲಿಗೆಗಳ್+ಎನಲು +ಗರಿಗಳು
ಚಪ್ಪರಿಸಿ +ತುರುಗಿದುವು +ರಿಪುಸೇನಾ+ಸಮುದ್ರದಲಿ
ಹಿಪ್ಪೆಗರ+ ಹರ+ಕಡಿದು +ಹೊಗರಲಗ್
ಒಪ್ಪಿದವು +ಕರುಳುಗಳ+ ನಿಮಿಷದೊಳ್
ಒಪ್ಪ+ಕೆಡಿಸಿದವರಿ+ಕದಂಬವನ್+ಈತನ್+ಅಂಬುಗಳು

ಅಚ್ಚರಿ:
(೧) ರೂಪಕದ ಪ್ರಯೋಗ – ದರ್ಪದಾಭರಣಕ್ಕೆ ಸೂಸಿದವೊಪ್ಪ ಸಲಿಗೆಗಳೆನಲು
(೨) ಹ ಕಾರದ ತ್ರಿವಳಿ ಪದ – ಹಿಪ್ಪೆಗರ ಹರಗಡಿದು ಹೊಗರಲ

ಪದ್ಯ ೭೦: ಕೌರವನು ಯಾವ ಯಜ್ಞವನ್ನು ಮಾಡಿದನು?

ಮರೆದು ಕಳೆದನು ಬಂದಲಜ್ಜೆಯ
ಬರನ ದಿನವನು ಮುಂದಣುಪಹತಿ
ಗುರುವ ದೈತ್ಯರ ಮೈತ್ರಿಯನು ನೆನೆ ನೆನೆದು ಹಿಗ್ಗಿದನು
ಮುರಿದುದಿನ್ನೇ ನಹಿತ ದರ್ಪದ
ಹೊರಿಗೆಯೆಂದುತ್ಸವದಲವನಿಪ
ಮೆರೆದನಧ್ವರ ಶಾಲೆಯಲಿ ಮಾಡಿದ ಮಹಾಕ್ರತುವ (ಅರಣ್ಯ ಪರ್ವ, ೨೨ ಸಂಧಿ, ೭೦ ಪದ್ಯ)

ತಾತ್ಪರ್ಯ:
ಹಿಂದೆ ಒದಗಿದ್ದ ನಾಚಿಕೆಗೇಡಿನ ಮಾನಭಂಗವನ್ನು ದುರ್ಯೋಧನನು ಮರೆತನು. ಮುಂದಿನ ಯುದ್ಧದಲ್ಲಿ ದೈತ್ಯರ ಬೆಮ್ಬಲವಿರುವುದನ್ನು ನೆನೆದು ಹಿಗ್ಗಿದನು. ಶತುಗಲ ದರ್ಪವು ಇನ್ನೇನು ಮುರಿಯಿತೆಂಬ ಉತ್ಸಾಹದಿಂದ ಕೌರವನು ಯಾಗಶಾಲೆಯಲ್ಲಿ ಮಹಾಯಜ್ಞವನ್ನು ಮಾಡಿದನು.

ಅರ್ಥ:
ಮರೆ: ಗುಟ್ಟು, ರಹಸ್ಯ; ಕಳೆ:ತೊರೆ; ಲಜ್ಜೆ: ನಾಚಿಕೆ, ಅವಮಾನ; ಬರ: ಕ್ಷಾಮ; ದಿನ: ದಿವಸ; ಮುಂದು: ಮುಂದೆ; ಉಪಹತಿ: ಹೊಡೆತ; ಗುರುವ: ಅಹಂಕಾರ; ದೈತ್ಯ: ರಾಕ್ಷಸ; ಮೈತ್ರಿ: ಸ್ನೇಹ; ನೆನೆ: ಜ್ಞಾಪಿಸಿಕೊಳ್ಳು; ಹಿಗ್ಗು: ಸಂತೋಷ, ಆನಂದ; ಮುರಿ: ಸೀಳು; ಅಹಿತ: ಶತ್ರು; ದರ್ಪ: ಅಹಂಕಾರ; ಹೊರಿಗೆ: ಭಾರ, ಹೊರೆ; ಉತ್ಸವ: ಸಂಭ್ರಮ; ಅವನಿಪ: ರಾಜ; ಮೆರೆ: ಹೊಳೆ, ಪ್ರಕಾಶಿಸು; ಅಧ್ವರ: ಯಜ್ಞ, ಯಾಗ; ಶಾಲೆ: ಮನೆ; ಕ್ರತು: ಯಾಗ, ಯಜ್ಞ;

ಪದವಿಂಗಡಣೆ:
ಮರೆದು +ಕಳೆದನು +ಬಂದ+ಲಜ್ಜೆಯ
ಬರನ +ದಿನವನು +ಮುಂದಣ್+ಉಪಹತಿ
ಗುರುವ +ದೈತ್ಯರ +ಮೈತ್ರಿಯನು +ನೆನೆ +ನೆನೆದು +ಹಿಗ್ಗಿದನು
ಮುರಿದುದ್+ಇನ್ನೇನ್+ಅಹಿತ +ದರ್ಪದ
ಹೊರಿಗೆಯೆಂದ್+ಉತ್ಸವದಲ್+ಅವನಿಪ
ಮೆರೆದನ್+ಅಧ್ವರ +ಶಾಲೆಯಲಿ +ಮಾಡಿದ +ಮಹಾಕ್ರತುವ

ಅಚ್ಚರಿ:
(೧) ದುರ್ಯೋಧನನು ಹಿಗ್ಗಲು ಕಾರಣ – ಗುರುವ ದೈತ್ಯರ ಮೈತ್ರಿಯನು ನೆನೆ ನೆನೆದು ಹಿಗ್ಗಿದನು

ಪದ್ಯ ೬೭: ನಹುಷನ ಶಾಪವಿಮೋಚನೆಯ ಮಾರ್ಗವೇನು?

ಸರ್ಪ ಪರಿಸರ್ಪತ್ವಮನೆ ಫಡ
ಸರ್ಪ ನೀನಾಗೆನಲು ತನ್ನಯ
ದರ್ಪವನು ಕೆಡೆನೂಕಿ ಬಿದ್ದೆನು ಮುನಿಯ ಚರಣದಲಿ
ಸರ್ಪತನದನುಭವಕೆ ಕಡೆಯೆಂ
ದಪ್ಪುದೆನೆ ಧರ್ಮಜನ ವರವಾ
ಗ್ದರ್ಪಣದಲಹುದೆಂದೊಡಿದು ಸಂಘಟಿಸಿತೆನಗೆಂದ (ಅರಣ್ಯ ಪರ್ವ, ೧೪ ಸಂಧಿ, ೬೭ ಪದ್ಯ)

ತಾತ್ಪರ್ಯ:
ನಹುಷನು ತನ್ನ ಮಾತನ್ನು ಮುಂದುವರಿಸುತ್ತಾ, ನಾನು ಅಗಸ್ತ್ಯನಿಗೆ ಬೇಗ ಬೇಗ ಓಡು ಎಂದೆನು ಅವನು ಫಡ, ನೀನು ಸರ್ಪನಾಗು ಎಂದು ಶಪಿಸಲು, ನಾನು ದರ್ಪವನ್ನು ತೊರೆದು ಅವನಿಗೆ ಶರಣಾಗತನಾದೆನು. ನನಗೆ ಹಾವಿನ ದೇಹವು ಎಂದಿಗೆ ಹೋಗುವುದು ಎಂದು ಕೇಳಲು ಆತನು, ಧರ್ಮಜನ ನಿರ್ಮಲವಾದ ಮಾತುಗಳ ಕನ್ನಡಿಯಿಂದ ನಿನ್ನ ಸರ್ಪತ್ವವು ಹೋಗುತ್ತದೆ ಎಂದನು. ಅದರಂತೆ ಈಗ ನನಗೆ ಸರ್ಪತ್ವವು ಹೋಗುತ್ತದೆ ಎಂದನು.

ಅರ್ಥ:
ಸರ್ಪ: ಹಾವು, ಉರಗ; ಪರಿ: ಓಟ, ಧಾವಿಸುವಿಕೆ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ದರ್ಪ: ಗರ್ವ, ಠೀವಿ; ಕೆಡೆ: ಬೀಳು, ಕುಸಿ; ಬಿದ್ದು: ಕೆಳಗೆ ಬೀಳು; ಮುನಿ: ಋಷಿ; ಚರಣ: ಪಾದ; ಅನುಭವ: ಇಂದ್ರಿಯಗಳ ಮೂಲಕ ಬರುವ ಜ್ಞಾನ; ಅಪ್ಪುದು: ಅಪ್ಪುಗೆ, ಆಲಂಗಿಸು; ವರ: ಶ್ರೇಷ್ಠ; ವಾಗ್: ವಾಕ್, ವಾಣಿ; ದರ್ಪಣ: ಕನ್ನಡಿ; ಸಂಘಟಿಸು: ಸಾಧ್ಯವಾಗುವಂತೆ ಮಾಡು, ಕೂಡು; ಕಡೆ: ಕೊನೆ;

ಪದವಿಂಗಡಣೆ:
ಸರ್ಪ+ ಪರಿಸರ್ಪತ್ವಮನೆ +ಫಡ
ಸರ್ಪ +ನೀನಾಗೆನಲು+ ತನ್ನಯ
ದರ್ಪವನು+ ಕೆಡೆನೂಕಿ+ ಬಿದ್ದೆನು+ ಮುನಿಯ +ಚರಣದಲಿ
ಸರ್ಪತನದ್+ಅನುಭವಕೆ +ಕಡೆಯೆಂದ್
ಅಪ್ಪುದೆನೆ +ಧರ್ಮಜನ +ವರ+ವಾಗ್
ದರ್ಪಣದಲಹುದೆಂದ್+ಒಡಿದು +ಸಂಘಟಿಸಿತ್+ಎನಗೆಂದ

ಅಚ್ಚರಿ:
(೧) ಬೇಗ ಹೋಗು ಎಂದು ಹೇಳುವ ಪರಿ – ಸರ್ಪ ಪರಿಸರ್ಪತ್ವಮನೆ