ಪದ್ಯ ೩೮: ವಿಚಿತ್ರವೀರ್ಯನ ರಾಜ್ಯದ ವಿಸ್ತಾರವೆಷ್ಟು?

ಅಂಬೆ ಭೀಷ್ಮನ ಬೈದು ಕಂಬನಿ
ದುಂಬಿ ಹೋದಳು ತಪಕೆ ಬಳಿಕೀ
ಯಂಬಿಕೆಯನಂಬಾಲೆಯನು ರಮಿಸಿದನು ನೃಪಸೂನು
ಬೆಂಬಲಕೆ ಕಲಿಭೀಷ್ಮನಿರೆ ಚತು
ರಂಬುಧಿಯ ಮಧ್ಯದ ನೃಪಾಲ ಕ
ದಂಬವೀತಂಗಿದಿರೆ ಸಲಹಿದನಖಿಳ ಭೂತಳವ (ಆದಿ ಪರ್ವ, ೨ ಸಂಧಿ, ೩೮ ಪದ್ಯ)

ತಾತ್ಪರ್ಯ:
ಅಂಬೆಯು ಭೀಷ್ಮನನ್ನು ಬೈದು, ಕಣ್ಣೀರು ಸುರಿಸುತ್ತಾ ತಪಸ್ಸಿಗೆ ಹೋದಳು, ವಿಚಿತ್ರವೀರ್ಯನು ಅಂಬಿಕೆ ಅಂಬಾಲಿಕೆಯರೊಡನೆ ಸಮ್ಸಾರ ಮಾಡುತ್ತಾ ನಾಲ್ಕು ಸಮುದ್ರಗಳ ಮಧ್ಯವಿರುವ ಭೂಮಿಯ ಎಲ್ಲಾ ರಾಜರೂ ಇವನಿಗೆ ಇದಿರೇ? ಮಹಾಪರಾಕ್ರಮಶಾಲಿಯಾದ ಭೀಶ್ಮನು ಬೆಮ್ಬಲಿಸುತ್ತಿರಲು ರಾಜ್ಯವನ್ನಾಳುತ್ತಿದ್ದನು.

ಅರ್ಥ:
ಬೈದು: ಜರಿದು; ಕಂಬನೀ; ಕಣ್ಣೀರು; ಹೋದಳು: ತೆರಳು; ತಪ: ತಪಸ್ಸು; ಬಳಿಕ: ನಂತರ; ರಮಿಸು: ಪ್ರೀತಿಸು; ನೃಪ: ರಾಜ; ಸೂನು: ಮಗ; ಬೆಂಬಲ: ಸಹಾಯ; ಕಲಿ: ಶೂರ; ಚತುರಂಬುಧಿ: ನಾಲ್ಕು ಸಮುದ್ರ; ಮಧ್ಯ: ನಡುವೆ; ನೃಪಾಲ: ರಾಜ; ಕದಂಬ: ಸಮೂಹ; ಮಧ್ಯ: ನಡುವೆ; ಇದಿರು: ಎದುರು; ಸಲಹು: ರಕ್ಷಿಸು; ಭೂತಳ: ಭೂಮಿ;

ಪದವಿಂಗಡಣೆ:
ಅಂಬೆ+ ಭೀಷ್ಮನ+ ಬೈದು +ಕಂಬನಿ
ದುಂಬಿ +ಹೋದಳು +ತಪಕೆ +ಬಳಿಕೀ
ಅಂಬಿಕೆಯನ್+ಅಂಬಾಲೆಯನು +ರಮಿಸಿದನು +ನೃಪಸೂನು
ಬೆಂಬಲಕೆ +ಕಲಿ+ಭೀಷ್ಮನಿರೆ+ ಚತು
ರಂಬುಧಿಯ +ಮಧ್ಯದ+ ನೃಪಾಲ +ಕ
ದಂಬವೀತಂಗ್+ಇದಿರೆ +ಸಲಹಿದನ್+ಅಖಿಳ +ಭೂತಳವ

ಅಚ್ಚರಿ:
(೧) ಅಂಬೆ, ಅಂಬಿಕೆ, ಅಂಬಾಲೆ, ಅಖಿಳ, ಅಂಬುಧಿ – ಪದಗಳ ಬಳಕೆ

ಪದ್ಯ ೧೯: ಭಾರತದ ಕತೆಯನ್ನು ಕೇಳುವುದರ ಉಪಯೋಗವೇನು?

ಸರ್ಪಯಾಗದೊಳಾದ ಕರ್ಮದ
ದರ್ಪವನು ಕೆಡೆಯೊದೆದು ಬೆಳಗಿದ
ನುಪ್ಪರದ ರವಿತೇಜದಲಿ ಸುರನರರು ಬೆರಗಾಗೆ
ತಪ್ಪದೀ ಭಾರತವ ಕೇಳ್ದಂ
ಗಪ್ಪುದಮರಸ್ರೀ ಕದಂಬದೊ
ಳೊಪ್ಪುವಿಂದ್ರನ ಪದವಿಯೆಂದನು ಸೂತ ಕೈಮುಗಿದು (ಗದಾ ಪರ್ವ, ೧೩ ಸಂಧಿ, ೧೯ ಪದ್ಯ)

ತಾತ್ಪರ್ಯ:
ಸೂತ ಪುರಾಣಿಕರು ಶೌನಕಾದಿ ಮುನಿಗಳಿಗೆ, ಮಹರ್ಷಿಗಳೇ, ವೈಶಂಪಾಯನನಿಂದ ಮಹಾಭಾರತವನ್ನು ಕೇಳಿದ ಜನಮೇಜಯರಾಯನು, ಸರ್ಪಯಾಗದಿಮ್ದಾದ ಪಾಪಕರ್ಮದ ದರ್ಪವನ್ನು ತೆಗೆದೊಗೆದು, ಸೂರ್ಯನ ತೇಜಸ್ಸಿಗೆ ಮೀರಿದ ತೇಜಸ್ಸಿನಿಂದ ಹೊಳೆದನು. ಅದನ್ನು ಕಂಡು ಮನುಷ್ಯರೂ, ದೇವತೆಗಳೂ ಬೆರಗಾದರು. ಈ ಭಾರತದ ಕತೆಯನ್ನು ತಪ್ಪದೇ ಕೇಳಿದವನಿಗೆ ದೇವೇಂದ್ರನ ಪದವಿ ದೊರಕುತ್ತದೆ ಎಂದು ಬಿನ್ನೈಸಿದನು.

ಅರ್ಥ:
ಸರ್ಪ: ಹಾವು, ಉರಗ; ಯಾಗ: ಯಜ್ಞ, ಕ್ರತು; ಕರ್ಮ: ಕೆಲಸ; ದರ್ಪ: ಅಹಂಕಾರ; ಕೆಡೆ: ಬೀಳು, ಕುಸಿ; ಬೆಳಗು: ಪ್ರಕಾಶ; ಉಪ್ಪರ:ಅತಿಶಯ; ರವಿ: ಸೂರ್ಯ; ತೇಜಸ್ಸು: ಪ್ರಕಾಶ; ಸುರ: ದೇವತೆ; ನರ: ಮನುಷ್ಯ; ಬೆರಗು: ಆಶ್ಚರ್ಯ; ತಪ್ಪದು: ಸರಿಯಾಗದು; ಅಪ್ಪುದು: ಆಲಿಂಗಿಸು, ಒಪ್ಪು; ಒಪ್ಪು: ಸಮ್ಮತಿ; ಅಮರಸ್ತ್ರೀ: ಅಪ್ಸರೆ; ಕದಂಬ: ಸಮೂಹ; ಒಪ್ಪು: ಸಮ್ಮತಿ; ಇಂದ್ರ: ದೇವತೆಗಳ ಅರಸ; ಪದವಿ: ಪಟ್ಟ; ಸೂತ: ಪುರಾಣಗಳನ್ನು ಬೋಧಿಸಿದ ಒಬ್ಬ ಋಷಿಯ ಹೆಸರು; ಕೈಮುಗಿ: ನಮಸ್ಕರಿಸು;

ಪದವಿಂಗಡಣೆ:
ಸರ್ಪಯಾಗದೊಳ್+ಆದ+ ಕರ್ಮದ
ದರ್ಪವನು+ ಕೆಡೆ+ಒದೆದು+ ಬೆಳಗಿದನ್
ಉಪ್ಪರದ +ರವಿತೇಜದಲಿ+ ಸುರನರರು +ಬೆರಗಾಗೆ
ತಪ್ಪದೀ +ಭಾರತವ +ಕೇಳ್ದಂಗ್
ಅಪ್ಪುದ್+ಅಮರಸ್ರೀ+ ಕದಂಬದೊಳ್
ಒಪ್ಪುವ್+ಇಂದ್ರನ +ಪದವಿ+ಎಂದನು +ಸೂತ +ಕೈಮುಗಿದು

ಅಚ್ಚರಿ:
(೧) ರೂಪಕದ ಪ್ರಯೋಗ – ಬೆಳಗಿದನುಪ್ಪರದ ರವಿತೇಜದಲಿ ಸುರನರರು ಬೆರಗಾಗೆ

ಪದ್ಯ ೨೨: ಊರಿನ ಜನರು ಬ್ರಹ್ಮನನ್ನೇಕೆ ಬಯ್ದರು?

ಗಣಿಕೆಯರನೇಕಾದಶಾಕ್ಷೊ
ಹಿಣಿಯ ನೃಪರಾಣಿಯರನಾ ಪ
ಟ್ಟಣ ಜನದ ಪರಿಜನದ ಬಹುಕಾಂತಾ ಕದಂಬಕವ
ರಣಮಹೀದರುಶನಕೆ ಬಹು ಸಂ
ದಣಿಯ ಕಂಡರು ಧರ್ಮಸುತನಿ
ನ್ನುಣಲಿ ಧರಣಿಯನೆಂದು ಸುಯ್ದರು ಬಯ್ದು ಕಮಲಜನ (ಗದಾ ಪರ್ವ, ೧೧ ಸಂಧಿ, ೨೨ ಪದ್ಯ)

ತಾತ್ಪರ್ಯ:
ಏಕಾದಶಾಕ್ಷೋಣಿಯ ಸೈನ್ಯದಲ್ಲಿದ್ದ ರಾಜರೆಲ್ಲರ ರಾಣಿಯರು, ಪಟ್ಟಣದ ಸ್ತ್ರೀಗಳ ಗುಂಪು, ಗಣಿಕೆಯರು ಇವರೆಲ್ಲರೂ ರಣರಮ್ಗಕ್ಕೆ ಬರುವುದನ್ನು ಅವರು ಕಂಡು, ಇನ್ನು ಧರ್ಮಜನೇ ಈ ಭೂಮಿಯನ್ನು ಅನುಭವಿಸಲಿ, ಎಂದು ಉದ್ಗರಿಸಿ, ನಿಟ್ಟುಸಿರು ಬಿಟ್ಟು ಹಣೆಯ ಬರಹವನ್ನು ಬರೆದ ಚತುರ್ಮುಖ ಬ್ರಹ್ಮನನ್ನು ಬೈದರು.

ಅರ್ಥ:
ಗಣಿಕೆ: ವೇಶ್ಯೆ; ಏಕಾದಶ: ಹನ್ನೊಂದು ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ನೃಪ: ರಾಜ; ರಾಣಿ: ರಸೈ; ಪಟ್ಟಣ: ಊರು; ಜನ: ಮನುಷ್ಯರ ಗುಂಪು; ಪರಿಜನ: ಬಂಧುಜನ; ಬಹು: ಬಹಳ; ಕಾಂತಾ: ಹೆಣ್ಣು; ಕದಂಬ: ಗುಂಪು; ರಣ: ಯುದ್ಧ; ರಣಮಹೀ: ರಣಭೂಮಿ; ; ದರುಶನ: ನೋಟ; ಸಂದಣಿ: ಗುಂಪು; ಕಂಡು: ನೋಡು; ಸುತ: ಮಗ; ಉಣು: ಊಟಮಾಡು; ಧರಣಿ: ಭೂಮಿ; ಸುಯ್ದು: ನಿಟ್ಟುಸಿರು; ಬಯ್ದು: ಜರಿ, ಹಂಗಿಸು; ಕಮಲಜ: ಬ್ರಹ್ಮ ;

ಪದವಿಂಗಡಣೆ:
ಗಣಿಕೆಯರನ್+ಏಕಾದಶ+ಅಕ್ಷೊ
ಹಿಣಿಯ +ನೃಪ+ರಾಣಿಯರನ್ +ಆ+ ಪ
ಟ್ಟಣ +ಜನದ +ಪರಿಜನದ +ಬಹು+ಕಾಂತಾ +ಕದಂಬಕವ
ರಣಮಹೀ+ದರುಶನಕೆ +ಬಹು +ಸಂ
ದಣಿಯ+ ಕಂಡರು +ಧರ್ಮಸುತನಿನ್
ಉಣಲಿ +ಧರಣಿಯನೆಂದು +ಸುಯ್ದರು +ಬಯ್ದು +ಕಮಲಜನ

ಅಚ್ಚರಿ:
(೧) ಸುಯ್ದರು, ಬಯ್ದು – ಪದಗಳ ಬಳಕೆ
(೨) ಜನ, ಪರಿಜನ – ಜನ ಪದದ ಬಳಕೆ

ಪದ್ಯ ೧೯: ರಾಣಿಯರ ಕೇಶಗಳಿಂದ ಮುತ್ತು ಹೇಗೆ ಬಿದ್ದವು?

ಉಡಿದು ಬಿದ್ದವು ಸೂಡಗವು ಬಿಗು
ಹಡಗಿ ಕಳೆದವು ತೋಳ ಬಂದಿಗ
ಳೊಡನೊಡನೆ ಚೆಲ್ಲಿದವು ಮುತ್ತಿನ ಹಾರಚಯ ಹರಿದು
ಬಿಡುಮುಡಿಯ ಕಡುತಿಮಿರ ಕಾರಿದು
ದುಡುಗಣವನೆನೆ ಸೂಸಕದ ಮು
ತ್ತಡಿಸಿ ಸುರಿದವು ನೆಲಕೆ ನೃಪವನಿತಾಕದಂಬದಲಿ (ಗದಾ ಪರ್ವ, ೧೧ ಸಂಧಿ, ೧೯ ಪದ್ಯ)

ತಾತ್ಪರ್ಯ:
ಆ ಸ್ತ್ರೀಯರು ಮುಡಿದ ಹೂಗಳು ಕೆಳಕ್ಕೆ ಬಿದ್ದವು. ತೋಳ ಬಂದಿಗಳು ಸಡಿಲಾಗಿ ಬಿದ್ದವು. ಮುತ್ತಿನ ಹಾರಗಳು ಹರಿದು, ಬೈತಲೆ ಬೊಟ್ಟು ಬಿದ್ದು, ಅದರ ಮಣಿಗಳು ರಾಣಿಯರ ಕೂದಲುಗಳ ಕತ್ತಲಿಂದ ನಕ್ಷತ್ರಗಳು ಸುರಿದಂತೆ ಕಾಣಿಸಿತು.

ಅರ್ಥ:
ಉಡಿ: ಸೊಂಟ; ಸೂಡು: ಮುಡಿ, ಧರಿಸು; ಬಿಗು: ಗಟ್ಟಿ, ಭದ್ರ; ಹಡಗಿ: ಸಡಲಿಸಿ; ಕಳೆದು: ಬೀಳು, ನಿವಾರಣೆಯಾಗು; ತೋಳು: ಭುಜ; ಬಂದಿ: ತೋಳಿಗೆ ಧರಿಸುವ ಒಂದು ಬಗೆಯ ಆಭರಣ, ವಂಕಿ; ಚೆಲ್ಲು: ಹರಡು; ಮುತ್ತು: ಬೆಲೆಬಾಳುವ ರತ್ನ; ಹಾರ: ಮಾಲೆ; ಚಯ: ಸಮೂಹ, ರಾಶಿ; ಹರಿ: ಕಡಿ, ಕತ್ತರಿಸು; ಬಿಡುಮುಡಿ: ಹರಡಿದ ಕೇಶ; ಕಡು: ತುಂಬ, ಬಹಳ; ತಿಮಿರ: ಕತ್ತಲೆ; ಕಾರು: ಚೆಲ್ಲು; ಉಡುಗಣ: ತಾರಾಗಣ, ನಕ್ಷತ್ರಗಳ ಸಮೂಹ; ಸುರಿ: ಹರಡು; ನೆಲ: ಭೂಮಿ; ನೃಪ: ರಾಜ; ವನಿತಾ: ಹೆಂಗಸು; ನೃಪವನಿತಾ: ರಾಣಿ; ಕದಂಬ: ಗುಂಪು;

ಪದವಿಂಗಡಣೆ:
ಉಡಿದು +ಬಿದ್ದವು +ಸೂಡಗವು +ಬಿಗು
ಹಡಗಿ +ಕಳೆದವು +ತೋಳ +ಬಂದಿಗಳ್
ಒಡನೊಡನೆ +ಚೆಲ್ಲಿದವು +ಮುತ್ತಿನ+ ಹಾರಚಯ +ಹರಿದು
ಬಿಡುಮುಡಿಯ +ಕಡು+ತಿಮಿರ +ಕಾರಿದುದ್
ಉಡುಗಣವವ್+ಎನೆ +ಸೂಸಕದ +ಮುತ್ತ್
ಅಡಿಸಿ +ಸುರಿದವು +ನೆಲಕೆ +ನೃಪವನಿತಾ+ಕದಂಬದಲಿ

ಅಚ್ಚರಿ:
(೧) ರಾಣಿಯನ್ನು ನೃಪವನಿತ ಎಂದು ಕರೆದಿರುವುದು
(೨) ಉಪಮಾನದ ಪ್ರಯೋಗ – ಬಿಡುಮುಡಿಯ ಕಡುತಿಮಿರ ಕಾರಿದು ದುಡುಗಣವನೆನೆ ಸೂಸಕದ ಮು
ತ್ತಡಿಸಿ ಸುರಿದವು ನೆಲಕೆ ನೃಪವನಿತಾಕದಂಬದಲಿ

ಪದ್ಯ ೧: ಅಶ್ವತ್ಥಾಮನು ಉಬ್ಬಿ ಯಾರನ್ನು ನೋಡಲು ಹೋದನು?

ಕೇಳು ಧೃತರಾಷ್ಟ್ರವನಿಪ ರಿಪು
ಜಾಲಗೀರ್ವಾಣಿ ಕದಂಬ
ಸ್ಥೂಲವಕ್ಷನು ಬಂದು ಕಂಡನು ಭೋಜಗೌತಮರ
ಲೀಲೆಯಲಿ ರಥವೇರಿ ಕುರುಭೂ
ಪಾಲನಲ್ಲಿಗೆ ಬಂದರುಬ್ಬಿನ
ಮೇಲುಮದದ ಜಯಪ್ರಚಂಡರು ಕಂಡರವನಿಪನ (ಗದಾ ಪರ್ವ, ೧೦ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಶತ್ರುಗಳನ್ನು ಅಪ್ಸರೆಯರ ಬಳಿಗೆ ಕಳಿಸಿದ ಅಶ್ವತ್ಥಾಮನು ಬಂದು ಕೃತವರ್ಮ, ಕೃಪರನ್ನು ಕಂಡನು. ಅವರೆಲ್ಲರೂ ಸಂತೋಷದಿಂದ ರಥವನ್ನು ಹತ್ತಿ ಕೌರವನತ್ತ ಹೊರಟರು. ಪ್ರಚಂಡರಾದ ಅವರು ವಿಜಯದಿಂದ ಉಬ್ಬಿದವರಾಗಿ ಕೌರವನನ್ನು ಕಂಡರು.

ಅರ್ಥ:
ಕೇಳು: ಆಲಿಸು; ಅವನಿಪ: ರಾಜ; ರಿಪು: ವೈರಿ; ಜಾಲ: ಬಲೆ, ಸಮೂಹ; ಗೀರ್ವಾಣಿ: ದೇವತಾ ಸ್ತ್ರೀ, ಅಪ್ಸರೆ; ಕದಂಬ: ಗುಂಪು; ಸ್ಥೂಲ: ದಪ್ಪ, ದೊಡ್ಡ; ವಕ್ಷ: ಎದೆ, ಉರಸ್ಸು; ಕಂಡು: ನೋಡು; ಗೌತಮ: ಕೃಪ; ಭೋಜ: ಕೃತವರ್ಮ; ಲೀಲೆ: ಆನಂದ, ವಿಲಾಸ; ರಥ: ಬಂಡಿ; ಏರು: ಹತ್ತು; ಭೂಪಲ: ರಾಜ; ಬಂದು: ಆಗಮಿಸು; ಉಬ್ಬು: ಹಿಗ್ಗು, ಗರ್ವಿಸು; ಮದ: ಅಹಂಕಾರ; ಜಯ: ಗೆಲುವು; ಪ್ರಚಂಡ: ಭಯಂಕರವಾದುದು;

ಪದವಿಂಗಡಣೆ:
ಕೇಳು +ಧೃತರಾಷ್ಟ್ರ್+ ಅವನಿಪ +ರಿಪು
ಜಾಲ+ಗೀರ್ವಾಣಿ +ಕದಂಬ
ಸ್ಥೂಲವಕ್ಷನು+ ಬಂದು +ಕಂಡನು +ಭೋಜ+ಗೌತಮರ
ಲೀಲೆಯಲಿ +ರಥವೇರಿ +ಕುರು+ಭೂ
ಪಾಲನಲ್ಲಿಗೆ+ ಬಂದರ್+ಉಬ್ಬಿನ
ಮೇಲುಮದದ +ಜಯ+ಪ್ರಚಂಡರು +ಕಂಡರ್+ಅವನಿಪನ

ಅಚ್ಚರಿ:
(೧) ಅವನಿಪ – ೨ ಬಾರಿ ಪ್ರಯೋಗ ಒಂದು ಧೃತರಾಷ್ಟ್ರನಿಗೆ ಮತ್ತೊಂದು ದುರ್ಯೋಧನನಿಗೆ
(೨) ವೈರಿಯನ್ನು ಸಾಯಿಸಿದನು ಎಂದು ಹೇಳುವ ಪರಿ – ರಿಪುಜಾಲಗೀರ್ವಾಣಿ ಕದಂಬ
(೩) ಭೂಪಾಲ, ಅವನಿಪ – ಸಮಾನಾರ್ಥಕ ಪದ

ಪದ್ಯ ೫೩: ದ್ರೋಣನ ಬಾಣಗಳು ಯಾವ ಪರಿಣಾಮ ಬೀರಿದವು?

ದರ್ಪದಾಭರಣಕ್ಕೆ ಸೂಸಿದ
ವೊಪ್ಪ ಸಲಿಗೆಗಳೆನಲು ಗರಿಗಳು
ಚಪ್ಪರಿಸಿ ತುರುಗಿದುವು ರಿಪುಸೇನಾಸಮುದ್ರದಲಿ
ಹಿಪ್ಪೆಗರ ಹರಗಡಿದು ಹೊಗರಲ
ಗೊಪ್ಪಿದವು ಕರುಳುಗಳ ನಿಮಿಷದೊ
ಳೊಪ್ಪಗೆಡಿಸಿದವರಿಕದಂಬವನೀತನಂಬುಗಳು (ದ್ರೋಣ ಪರ್ವ, ೨ ಸಂಧಿ, ೫೩ ಪದ್ಯ)

ತಾತ್ಪರ್ಯ:
ಪರಾಕ್ರಮ ದರ್ಪಕ್ಕೆ ಅನುಗುಣವಾದ ಬಾಣಗಳೆಲ್ಲ್ನಲು, ದ್ರೋಣನ ಗರಿಸಹಿತವಾದ ಬಾಣಗಳು ಪಾಂಡವ ಸೈನ್ಯದಲ್ಲಿ ತುಂಬಿದವು. ಶೌರ್ಯ ಹೀನರನ್ನು ಕಡಿದು, ಕರುಳುಗಳನ್ನು ಕತ್ತರಿಸಿ ನಿಮಿಷಮಾತ್ರದಲ್ಲೇ ಪಾಂಡವ ಸೈನ್ಯವನು ಅಂದಗೆಡಿಸಿದವು.

ಅರ್ಥ:
ದರ್ಪ: ಅಹಂಕಾರ; ಆಭರಣ: ಒಡವೆ; ಸೂಸು: ಎರಚುವಿಕೆ, ಚಲ್ಲುವಿಕೆ; ಒಪ್ಪು: ಸಮ್ಮತಿ; ಸಲಿಗೆ: ಸದರ, ನಿಕಟ ಸಂಪರ್ಕ; ಗರಿ: ಬಾಣದ ಹಿಂಭಾಗ; ಚಪ್ಪರಿಸು: ರುಚಿನೋಡು, ಅಪ್ಪಳಿಸು; ತುರುಗು: ಸಂದಣಿಸು, ಇಟ್ಟಣಿಸು; ರಿಪು: ವೈರಿ; ಸೇನೆ: ಸೈನ್ಯ; ಸಮುದ್ರ: ಸಾಗರ; ಹಿಪ್ಪೆಗರು: ಸತ್ವವಿಲ್ಲದವರು; ಹರ: ಪರಿಹಾರ; ಕಡಿ: ಸೀಳು; ಹೊಗರು: ಹೆಚ್ಚಳ, ಆಧಿಕ್ಯ; ಒಪ್ಪು: ಸಮ್ಮತಿ; ಕರುಳು: ಪಚನಾಂಗ; ನಿಮಿಷ: ಕ್ಷಣಮಾತ್ರ; ಕೆಡಿಸು: ಹಾಳುಮಾಡು; ಅರಿ: ವೈರಿ; ಕದಂಬ: ಗುಂಪು; ಅಂಬು: ಬಾಣ;

ಪದವಿಂಗಡಣೆ:
ದರ್ಪದ+ಆಭರಣಕ್ಕೆ+ ಸೂಸಿದವ್
ಒಪ್ಪ +ಸಲಿಗೆಗಳ್+ಎನಲು +ಗರಿಗಳು
ಚಪ್ಪರಿಸಿ +ತುರುಗಿದುವು +ರಿಪುಸೇನಾ+ಸಮುದ್ರದಲಿ
ಹಿಪ್ಪೆಗರ+ ಹರ+ಕಡಿದು +ಹೊಗರಲಗ್
ಒಪ್ಪಿದವು +ಕರುಳುಗಳ+ ನಿಮಿಷದೊಳ್
ಒಪ್ಪ+ಕೆಡಿಸಿದವರಿ+ಕದಂಬವನ್+ಈತನ್+ಅಂಬುಗಳು

ಅಚ್ಚರಿ:
(೧) ರೂಪಕದ ಪ್ರಯೋಗ – ದರ್ಪದಾಭರಣಕ್ಕೆ ಸೂಸಿದವೊಪ್ಪ ಸಲಿಗೆಗಳೆನಲು
(೨) ಹ ಕಾರದ ತ್ರಿವಳಿ ಪದ – ಹಿಪ್ಪೆಗರ ಹರಗಡಿದು ಹೊಗರಲ

ಪದ್ಯ ೩೮: ಭೀಮನು ಕೋಪದ ನುಡಿಗಳು ಹೇಗಿದ್ದವು?

ತಿಂಬೆನೀತನ ಜೀವವನು ಪತಿ
ಯೆಂಬ ಗರಿವಿತನಿವನ ನೆತ್ತಿಯ
ತುಂಬು ಬಿಡಲೆರಗುವೆನು ತರಿವೆನು ಮತ್ಸ್ಯಸಂತತಿಯ
ಅಂಬುಜಾಕ್ಷಿಗೆ ಕೀಚಕನ ಬೇ
ಳಂಬವೀತನ ಕೂಟ ಭೂತ ಕ
ದಂಬ ತುಷ್ಟಿಯ ಮಾಡಬೇಹುದು ಸೆರಗ ಬಿಡಿಯೆಂದ (ವಿರಾಟ ಪರ್ವ, ೧೦ ಸಂಧಿ, ೩೮ ಪದ್ಯ)

ತಾತ್ಪರ್ಯ:
ಭೀಮನು ಕೋಪದಿಂದ, ವಿರಾತನ ಜೀವವನ್ನು ತಿನ್ನುತ್ತೇನೆ, ತಾನು ರಾಜನೆಂಬ ಗರ್ವ ಇವನ ನೆತ್ತಿಗೇರಿದೆ. ನೆತ್ತಿಯು ಮುರಿಯುವಂತೆ ಹೊಡೆದು, ಮತ್ಸ್ಯವಂಶವನ್ನು ಸಂಹರಿಸುತ್ತೇನೆ. ಕೀಚಕನಿಗೆ ದ್ರೌಪದಿಯ ಮೋಹ, ಇವನ ಈ ದುರ್ವರ್ತನೆಗಳು ಅಸಹನೀಯ, ಭೂತ ತೃಪ್ತಿಯನ್ನು ಮಾಡಿಸುತ್ತೇನೆ. ನನ್ನ ಉತ್ತರೀಯವನ್ನು ಬಿಡಿ, ತಡೆಯಬೇಡಿರಿ, ಎಂದು ಧರ್ಮಜನಿಗೆ ಹೇಳಿದನು.

ಅರ್ಥ:
ತಿಂಬೆ: ತಿನ್ನುತ್ತೇನೆ; ಜೀವ: ಪ್ರಾಣ; ಪತಿ: ಗಂಡ; ಗರ್ವ: ಅಹಂಕಾರ; ನೆತ್ತಿ: ತಲೆ; ಎರಗು: ಬಾಗು; ತರಿ: ಕಡಿ, ಕತ್ತರಿಸು, ಛೇದಿಸು; ಸಂತತಿ: ವಂಶ, ಪೀಳಿಗೆ; ಅಂಬುಜಾಕ್ಷಿ: ಕಮಲದಂತ ಕಣ್ಣು; ಬೇಳಂಬ: ವಿಡಂಬನೆ, ಅಣಕ; ಕೂಟ: ರಾಶಿ, ಸಮುದಾಯ; ತುಷ್ಟಿ: ತೃಪ್ತಿ, ಆನಂದ; ಸೆರಗು: ಸೀರೆಯಲ್ಲಿ ಹೊದೆಯುವ ಭಾಗ, ಮೇಲುದು; ಬಿಡಿ: ತೊರೆ;

ಪದವಿಂಗಡಣೆ:
ತಿಂಬೆನ್+ಈತನ +ಜೀವವನು +ಪತಿ
ಯೆಂಬ +ಗರಿವಿತನ್+ಇವನ+ ನೆತ್ತಿಯ
ತುಂಬು +ಬಿಡಲ್+ಎರಗುವೆನು +ತರಿವೆನು +ಮತ್ಸ್ಯ+ಸಂತತಿಯ
ಅಂಬುಜಾಕ್ಷಿಗೆ +ಕೀಚಕನ+ ಬೇ
ಳಂಬವ್+ಈತನ +ಕೂಟ +ಭೂತ +ಕ
ದಂಬ +ತುಷ್ಟಿಯ +ಮಾಡಬೇಹುದು +ಸೆರಗ+ ಬಿಡಿಯೆಂದ

ಅಚ್ಚರಿ:
(೧) ಭೀಮನ ಕೋಪದ ನುಡಿ: ತಿಂಬೆನೀತನ ಜೀವವನು ಪತಿಯೆಂಬ ಗರಿವಿತನಿವನ ನೆತ್ತಿಯ
ತುಂಬು ಬಿಡಲೆರಗುವೆನು ತರಿವೆನು ಮತ್ಸ್ಯಸಂತತಿಯ

ಪದ್ಯ ೩೭: ದೇವತೆಗಳ ಆಶ್ರಯ ಸ್ಥಾನಗಳಾವುವು?

ಸುರಪತಿಯ ದಿಕ್ಕಿನಲಿ ಬೆಳೆದಿಹು
ದರಳಿ ಜಂಬೂವೃಕ್ಷ ತೆಂಕಲು
ಹಿರಿದೆನಿಪ ತನಿವಣ್ಣರಸ ನದಿಯಾಗಿ ಹರಿದಿಹುದು
ವರುಣನಿಹ ದೆಸೆಯಲಿ ಕದಂಬವು
ಹರಸಖನ ದಿಕ್ಕಿನಲಿ ವಟಕುಜ
ಸುರರಿಗಾಶ್ರಯವೆನಿಸಿ ಕೀಲಕ ಗಿರಿಯ ಮೇಲಿಹುದು (ಅರಣ್ಯ ಪರ್ವ, ೮ ಸಂಧಿ, ೩೭ ಪದ್ಯ)

ತಾತ್ಪರ್ಯ:
ಕೀಲಕಗಿರಿಯ ಶಿಖರದ ಮೇಲೆ ಪೂರ್ವದಲ್ಲಿ ಅಶ್ವತ್ಥ ವೃಕ್ಷವಿದೆ. ದಕ್ಷಿಣದಲ್ಲಿ ನೇರಳೆ ವೃಕ್ಷವಿದೆ, ಅದರ ಹಣ್ಣುಗಳುದುರಿ ಅದರ ರಸವು ನದಿಯಾಗಿ ಹರಿಯುತ್ತದೆ. ಪಶ್ಚಿಮದಲ್ಲಿ ಕದಂಬ ವೃಕ್ಷವಿದೆ, ಉತ್ತರ ದಿಕ್ಕಿನಲ್ಲಿ ಆಲದ ಮರವಿದೆ, ಇವು ದೇವತೆಗಳಿಗೆ ಆಶ್ರಯ ಸ್ಥಾನಗಳು.

ಅರ್ಥ:
ಸುರಪತಿ: ಇಂದ್ರ; ದಿಕ್ಕು: ದಿಶೆ; ಬೆಳೆದಿಹು: ಮರ, ಗಿಡ ಬೆಳೆದುದು; ಅರಳಿ: ಅಶ್ವತ್ಥ ಮರ; ವೃಕ್ಷ: ಮರ, ತರು; ತೆಂಕಲು: ದಕ್ಷಿಣ; ರಸ: ಸಾರ; ಹರಿ: ನಿವಾರಿಸು, ಪರಿಹಾರ; ವರುಣ: ನೀರಿನ ಅಧಿದೇವತೆ; ದೆಸೆ: ದಿಕ್ಕು; ಹರಸಖ: ಕುಬೇರ; ವಟ: ಆಲದ ಮರ; ಆಶ್ರಯ: ಆಸರೆ, ಅವಲಂಬನ; ಗಿರಿ: ಬೆಟ್ಟ;

ಪದವಿಂಗಡಣೆ:
ಸುರಪತಿಯ +ದಿಕ್ಕಿನಲಿ +ಬೆಳೆದಿಹುದ್
ಅರಳಿ +ಜಂಬೂ+ವೃಕ್ಷ+ ತೆಂಕಲು
ಹಿರಿದೆನಿಪ+ ತನಿವಣ್ಣರಸ+ ನದಿಯಾಗಿ +ಹರಿದಿಹುದು
ವರುಣನಿಹ +ದೆಸೆಯಲಿ +ಕದಂಬವು
ಹರಸಖನ +ದಿಕ್ಕಿನಲಿ +ವಟ+ಕುಜ
ಸುರರಿಗ್+ಆಶ್ರಯವೆನಿಸಿ+ ಕೀಲಕ +ಗಿರಿಯ +ಮೇಲಿಹುದು

ಅಚ್ಚರಿ:
(೧) ಪೂರ್ವ ದಿಕ್ಕಿಗೆ – ಸುರಪತಿಯ ದಿಕ್ಕು, ಉತ್ತರ ದಿಕ್ಕು – ಹರಸಖನ ದಿಕ್ಕು, ಪಶ್ಚಿಮ – ವರುಣನಿಹ ದಿಶೆ, ದಕ್ಷಿಣ – ತೆಂಕಲು;

ಪದ್ಯ ೯: ರಾಜರನ್ನು ಧರ್ಮರಾಯ ಹೇಗೆ ಬೀಳ್ಕೊಟ್ಟನು?

ರಾಜವರ್ಗವನವರವರ ನಿಜ
ತೇಜ ಮಾನ್ಯೋಚಿತದ ಗಜರಥ
ವಾಜಿ ವಿವಿಧಾಭರಣ ವಸನ ವಧೂಕದಂಬದಲಿ
ಆ ಜಗತ್ಪತಿಯುಳಿಯೆ ಪಾರ್ಥಿವ
ರಾಜಿಯನು ಮನ್ನಿಸಿ ಯುಧಿಷ್ಠಿರ
ರಾಜನನುಜರು ಕೂಡಿ ಕಳುಹಿಸಿದನು ಮಹೀಶ್ವರರ (ಸಭಾ ಪರ್ವ, ೧೨ ಸಂಧಿ, ೯ ಪದ್ಯ)

ತಾತ್ಪರ್ಯ:
ರಾಜಸೂಯ ಯಾಗಕ್ಕೆ ಬಂದಿದ್ದ ರಾಜರನ್ನೆಲ್ಲಾ ಅವರವರ ಪರಾಕ್ರಮ, ಐಶ್ವರ್ಯಕ್ಕೆ ಅನುಗುಣವಗಿ ಸರಿಯಾದ ರೀತಿಯಲ್ಲಿ ಆನೆ, ಕುದುರೆ, ರಥ, ಆಭರಣ, ವಸ್ತ್ರ, ಸ್ತ್ರೀಯರು, ಪರಿಮಳದ ವಸ್ತುಗಳನ್ನು ನೀಡಿ ಗೌರವಿಸಿ ಧರ್ಮರಾಜನು ತನ್ನ ತಮ್ಮಂದಿರೊಡನೆ ಅವರೆಲ್ಲರನ್ನು ಬೀಳ್ಕೊಟ್ಟನು. ಕೃಷ್ಣನು ಇಂದ್ರಪ್ರಸ್ಥದಲ್ಲೇ ಉಳಿದನು.

ಅರ್ಥ:
ರಾಜ: ಅರಸ; ವರ್ಗ: ಗುಂಪು; ನಿಜ: ಸತ್ಯ; ತೇಜ: ಕಾಂತಿ, ಶ್ರೇಷ್ಠತೆ; ಮಾನ: ಮರ್ಯಾದೆ, ಗೌರವ; ಉಚಿತ: ಸರಿಯಾದ; ಗಜ: ಆನೆ; ರಥ; ಬಂಡಿ; ವಾಜಿ: ಕುದುರೆ; ವಿವಿಧ: ಹಲವಾರು; ಆಭರಣ: ಒಡವೆ; ವಸನ: ಬಟ್ಟೆ; ವಧು: ಸ್ತ್ರೀ, ಹೆಣ್ಣು; ಕದಂಬ: ಪರಿಮಳ ವಸ್ತು; ಜಗತ್ಪತಿ: ಜಗತ್ತಿನ ಒಡೆಯ (ಕೃಷ್ಣ); ಉಳಿ: ತಂಗು; ಪಾರ್ಥಿವ: ರಾಜ; ಮನ್ನಿಸು: ಗೌರವಿಸು; ಅನುಜ: ತಮ್ಮ; ಕೂಡಿ: ಜೊತೆ; ಕಳುಹಿಸು: ಬೀಳ್ಕೊಡು; ಮಹೀಶ್ವರ: ರಾಜ; ಮಹೀ: ಭೂಮಿ;

ಪದವಿಂಗಡಣೆ:
ರಾಜವರ್ಗವನ್+ಅವರವರ +ನಿಜ
ತೇಜ +ಮಾನ್ಯ+ಉಚಿತದ +ಗಜ+ರಥ
ವಾಜಿ +ವಿವಿಧ+ಆಭರಣ+ ವಸನ +ವಧೂ+ಕದಂಬದಲಿ
ಆ +ಜಗತ್ಪತಿ+ಉಳಿಯೆ +ಪಾರ್ಥಿವ
ರಾಜಿಯನು +ಮನ್ನಿಸಿ +ಯುಧಿಷ್ಠಿರ
ರಾಜನ್+ಅನುಜರು +ಕೂಡಿ +ಕಳುಹಿಸಿದನು +ಮಹೀಶ್ವರರ

ಅಚ್ಚರಿ:
(೧) ರಾಜ, ಪಾರ್ಥಿವ – ಸಮನಾರ್ಥಕ ಪದ
(೨) ರಾಜ – ೧, ೬ ಸಾಲಿನ ಮೊದಲ ಪದ
(೩) ವಾಜಿ, ರಾಜಿ – ಪ್ರಾಸ ಪದಗಳು

ಪದ್ಯ ೧೧: ಧೃತರಾಷ್ಟ್ರನು ಸಂಜಯನಿಂದ್ ಏನನ್ನು ತಿಳಿಯಲು ಬಯಸಿದ?

ಹೇಳು ಸಂಜಯ ನಮ್ಮ ಭಾಗ್ಯದ
ಶಾಳಿವನ ಫಲವಾಯ್ತಲಾ ಕೈ
ಮೇಳವಿಸಿದನೆ ಕರ್ಣನಮರಸ್ತ್ರೀ ಕದಂಬದಲಿ
ಹೇಳು ಹೇಳೆನ್ನಾಣೆ ಮಾತಿನ
ಜಾಳಿಗೆಯ ಮರೆ ಬೇಡ ಕುರುಪತಿ
ಕಾಳಗದೊಳಸ್ತಮಿಸಿದನೆ ನುಡಿಯಂಜಬೇಡೆಂದ (ಕರ್ಣ ಪರ್ವ, ೧ ಸಂಧಿ, ೧೧ ಪದ್ಯ)

ತಾತ್ಪರ್ಯ:
ಸಂಜಯ ಹೇಳು ನಮ್ಮ ಭಾಗ್ಯವು ಬತ್ತದ ಗದ್ದೆಯಂತೆ ಆಯ್ತಲಾ, ಕರ್ಣನು ಸ್ವರ್ಗಸ್ತನಾದನೇ? ಹೇಳು ನನ್ನ ಮೇಲಾಣಿ ಅಂಜದೆ ಹೇಳು ಕೌರವನು ಸಹ ಯುದ್ಧದಲ್ಲಿ ಅಳಿದನೇ ಎಂದು ದುಃಖದಿಂದ ಕೇಳಿದನು.

ಅರ್ಥ:
ಹೇಳು: ತಿಳಿಸು; ಭಾಗ್ಯ: ಮಂಗಳ; ಶಾಳಿವನ: ಬತ್ತದ ಗದ್ದೆ; ಫಲ: ಬೆಳೆ, ಪೈರು; ಮೇಳ: ಸೇರುವಿಕೆ, ಕೂಡುವಿಕೆ; ಕೈ: ಹಸ್ತ; ಅಮರ: ಸುರರು; ಸ್ತ್ರೀ: ಹೆಣ್ಣು; ಅಮರಸ್ತ್ರೀ: ಅಪ್ಸರೆ; ಕದಂಬ: ಸಮೂಹ; ಆಣೆ: ಪ್ರಮಾಣ; ಮಾತು: ನುಡಿ; ಜಾಳಿಗೆ: ಹಬ್ಬುವಿಕೆ, ಬಲೆ; ಮರೆ: ಗುಟ್ಟು, ರಹಸ್ಯ; ಕಾಳಗ: ಯುದ್ಧ; ಅಸ್ತಮಿಸು: ಅಳಿ, ಮುಳುಗು; ಅಂಜಬೇಡ: ಹೆದರಬೇಡ;

ಪದವಿಂಗಡಣೆ:
ಹೇಳು +ಸಂಜಯ +ನಮ್ಮ +ಭಾಗ್ಯದ
ಶಾಳಿವನ +ಫಲವಾಯ್ತಲಾ +ಕೈ
ಮೇಳವಿಸಿದನೆ +ಕರ್ಣನ್+ಅಮರಸ್ತ್ರೀ +ಕದಂಬದಲಿ
ಹೇಳು +ಹೇಳೆನ್ನಾಣೆ +ಮಾತಿನ
ಜಾಳಿಗೆಯ +ಮರೆ +ಬೇಡ +ಕುರುಪತಿ
ಕಾಳಗದೊಳ್+ಅಸ್ತಮಿಸಿದನೆ +ನುಡಿ+ಅಂಜಬೇಡೆಂದ

ಅಚ್ಚರಿ:
(೧) ಕರ್ಣನು ಸತ್ತನೆ ಎಂದು ಹೇಳಲು – ಕೈಮೇಳವಿಸಿದನೆ ಕರ್ಣನಮರಸ್ತ್ರೀ ಕದಂಬದಲಿ
(೨) ದುರ್ಯೋಧನನು ಸತ್ತನೆ ಎಂದು ಹೇಳಲು – ಕುರುಪತಿ ಕಾಳಗದೊಳಸ್ತಮಿಸಿದನೆ