ಪದ್ಯ ೧೯: ಭಾರತದ ಕತೆಯನ್ನು ಕೇಳುವುದರ ಉಪಯೋಗವೇನು?

ಸರ್ಪಯಾಗದೊಳಾದ ಕರ್ಮದ
ದರ್ಪವನು ಕೆಡೆಯೊದೆದು ಬೆಳಗಿದ
ನುಪ್ಪರದ ರವಿತೇಜದಲಿ ಸುರನರರು ಬೆರಗಾಗೆ
ತಪ್ಪದೀ ಭಾರತವ ಕೇಳ್ದಂ
ಗಪ್ಪುದಮರಸ್ರೀ ಕದಂಬದೊ
ಳೊಪ್ಪುವಿಂದ್ರನ ಪದವಿಯೆಂದನು ಸೂತ ಕೈಮುಗಿದು (ಗದಾ ಪರ್ವ, ೧೩ ಸಂಧಿ, ೧೯ ಪದ್ಯ)

ತಾತ್ಪರ್ಯ:
ಸೂತ ಪುರಾಣಿಕರು ಶೌನಕಾದಿ ಮುನಿಗಳಿಗೆ, ಮಹರ್ಷಿಗಳೇ, ವೈಶಂಪಾಯನನಿಂದ ಮಹಾಭಾರತವನ್ನು ಕೇಳಿದ ಜನಮೇಜಯರಾಯನು, ಸರ್ಪಯಾಗದಿಮ್ದಾದ ಪಾಪಕರ್ಮದ ದರ್ಪವನ್ನು ತೆಗೆದೊಗೆದು, ಸೂರ್ಯನ ತೇಜಸ್ಸಿಗೆ ಮೀರಿದ ತೇಜಸ್ಸಿನಿಂದ ಹೊಳೆದನು. ಅದನ್ನು ಕಂಡು ಮನುಷ್ಯರೂ, ದೇವತೆಗಳೂ ಬೆರಗಾದರು. ಈ ಭಾರತದ ಕತೆಯನ್ನು ತಪ್ಪದೇ ಕೇಳಿದವನಿಗೆ ದೇವೇಂದ್ರನ ಪದವಿ ದೊರಕುತ್ತದೆ ಎಂದು ಬಿನ್ನೈಸಿದನು.

ಅರ್ಥ:
ಸರ್ಪ: ಹಾವು, ಉರಗ; ಯಾಗ: ಯಜ್ಞ, ಕ್ರತು; ಕರ್ಮ: ಕೆಲಸ; ದರ್ಪ: ಅಹಂಕಾರ; ಕೆಡೆ: ಬೀಳು, ಕುಸಿ; ಬೆಳಗು: ಪ್ರಕಾಶ; ಉಪ್ಪರ:ಅತಿಶಯ; ರವಿ: ಸೂರ್ಯ; ತೇಜಸ್ಸು: ಪ್ರಕಾಶ; ಸುರ: ದೇವತೆ; ನರ: ಮನುಷ್ಯ; ಬೆರಗು: ಆಶ್ಚರ್ಯ; ತಪ್ಪದು: ಸರಿಯಾಗದು; ಅಪ್ಪುದು: ಆಲಿಂಗಿಸು, ಒಪ್ಪು; ಒಪ್ಪು: ಸಮ್ಮತಿ; ಅಮರಸ್ತ್ರೀ: ಅಪ್ಸರೆ; ಕದಂಬ: ಸಮೂಹ; ಒಪ್ಪು: ಸಮ್ಮತಿ; ಇಂದ್ರ: ದೇವತೆಗಳ ಅರಸ; ಪದವಿ: ಪಟ್ಟ; ಸೂತ: ಪುರಾಣಗಳನ್ನು ಬೋಧಿಸಿದ ಒಬ್ಬ ಋಷಿಯ ಹೆಸರು; ಕೈಮುಗಿ: ನಮಸ್ಕರಿಸು;

ಪದವಿಂಗಡಣೆ:
ಸರ್ಪಯಾಗದೊಳ್+ಆದ+ ಕರ್ಮದ
ದರ್ಪವನು+ ಕೆಡೆ+ಒದೆದು+ ಬೆಳಗಿದನ್
ಉಪ್ಪರದ +ರವಿತೇಜದಲಿ+ ಸುರನರರು +ಬೆರಗಾಗೆ
ತಪ್ಪದೀ +ಭಾರತವ +ಕೇಳ್ದಂಗ್
ಅಪ್ಪುದ್+ಅಮರಸ್ರೀ+ ಕದಂಬದೊಳ್
ಒಪ್ಪುವ್+ಇಂದ್ರನ +ಪದವಿ+ಎಂದನು +ಸೂತ +ಕೈಮುಗಿದು

ಅಚ್ಚರಿ:
(೧) ರೂಪಕದ ಪ್ರಯೋಗ – ಬೆಳಗಿದನುಪ್ಪರದ ರವಿತೇಜದಲಿ ಸುರನರರು ಬೆರಗಾಗೆ

ಪದ್ಯ ೨೯: ಭೀಮ ದುರ್ಯೋಧನರ ಯುದ್ಧದ ಲೆಕ್ಕಾಚಾರವು ಹೇಗಿತ್ತು?

ನೆನಹು ನೆಗ್ಗಿದುದುಪ್ಪರದ ಕೈ
ಮನವ ಕಬಳಿಸಿ ತೆರಹು ಬಿರುಬಿ
ಮ್ಮಿನಲಿ ಬಿಗಿದುದು ತೆಗೆದವಿಬ್ಬರ ಘಾಯಘಾತಿಗಳು
ಕೊನರ್ವ ಕೋಪದ ಕುದಿವ ಕರಣದ
ತನುವಿಗುಪ್ತಿಯ ಜಯದ ತವಕದ
ತನಿಮನದ ಕಡುತೋಟಿಕಾರರು ಕಾದಿದರು ಕಡುಗಿ (ಗದಾ ಪರ್ವ, ೬ ಸಂಧಿ, ೨೯ ಪದ್ಯ)

ತಾತ್ಪರ್ಯ:
ಅವರ ಲೆಕ್ಕಾಚಾರ ತಪ್ಪಿಹೋಗುತ್ತಿತ್ತು. ಮನಸ್ಸಿನ ಮೇಲುಗೈ ಮನಸ್ಸಿನಲ್ಲೇ ಉಳಿಯುತ್ತಿತ್ತು. ಹೊಡೆತದ ಪೆಟ್ಟುಗಳು ಮನಸ್ಸಿನಲ್ಲೇ ನಿಲ್ಲುತ್ತಿದ್ದವು. ಕೋಪವು ಕ್ಷಣ ಕ್ಷಣಕ್ಕೂ ಹೆಚ್ಚುತ್ತಿತ್ತು. ಮನಸ್ಸುಗಳು ಕುದಿಯುತ್ತಿದ್ದವು. ಜಯವನ್ನು ಶೀಘ್ರವಾಗಿ ಸಾಧಿಸುವ ಛಲದಿಂದ ಇಬ್ಬರೂ ಕಾದಿದರು.

ಅರ್ಥ:
ನೆನಹು: ಜ್ಞಾಪಕ; ನೆಗ್ಗು: ಕುಗ್ಗು, ಕುಸಿ; ಉಪ್ಪರ: ಎತ್ತರ, ಉನ್ನತಿ; ಕೈ: ಹಸ್ತ; ಮನ: ಮನಸ್ಸು; ಕಬಳಿಸು: ನುಂಗು; ತೆರಹು: ಬಿಚ್ಚು, ಎಡೆ, ಜಾಗ; ಬಿಮ್ಮು: ದೊಡ್ಡತನ, ಘನತೆ; ಬಿಗಿ: ಬಂಧಿಸು; ತೆಗೆ: ಹೊರತರು; ಘಾಯ: ಪೆಟ್ಟು; ಘಾತಿ: ಹೊಡೆತ; ಕೋಪ: ಕುಪಿತ; ಕುದಿ: ಶಾಖದಿಂದ ಉಕ್ಕು, ಮರಳು; ಕರಣ: ಕೆಲಸ, ಜ್ಞಾನೇಂದ್ರಿಯ; ತನು: ದೇಹ; ಜಯ: ಗೆಲುವು; ತವಕ: ಬಯಕೆ, ಆತುರ; ತನಿ:ಹೆಚ್ಚಾಗು; ಮನ: ಮನಸ್ಸು; ತೋಟಿಕಾರ: ಜಗಳಗಂಟ; ಕಾದಿದರು: ಹೋರಾಡು; ಕಡುಗು: ತೀವ್ರವಾಗು;

ಪದವಿಂಗಡಣೆ:
ನೆನಹು +ನೆಗ್ಗಿದುದ್+ಉಪ್ಪರದ+ ಕೈ
ಮನವ +ಕಬಳಿಸಿ +ತೆರಹು +ಬಿರು+ಬಿ
ಮ್ಮಿನಲಿ +ಬಿಗಿದುದು +ತೆಗೆದವ್+ಇಬ್ಬರ+ ಘಾಯಘಾತಿಗಳು
ಕೊನರ್ವ+ ಕೋಪದ +ಕುದಿವ +ಕರಣದ
ತನುವಿಗುಪ್ತಿಯ +ಜಯದ +ತವಕದ
ತನಿಮನದ +ಕಡು+ತೋಟಿಕಾರರು +ಕಾದಿದರು +ಕಡುಗಿ

ಅಚ್ಚರಿ:
(೧) ಕ ಕಾರದ ಸಾಲು ಪದ – ಕೊನರ್ವ ಕೋಪದ ಕುದಿವ ಕರಣದ

ಪದ್ಯ ೬: ಸಾತ್ಯಕಿ ಭೂರಿಶ್ರವರ ಖಡ್ಗ ಯುದ್ಧ ಹೇಗಿತ್ತು?

ನೆಲನ ತಗ್ಗಿನಲುಪ್ಪರದ ಮೆ
ಯ್ಯೊಲವಿನಲಿ ಪಾರಗದ ಬವರಿಯ
ಸುಳುಹಿನಲಿ ಚಮ್ಮಟದ ಪಯವಂಚನೆಯಲುಜ್ಝಟದ
ಬಲಿದ ದಂಡೆಯ ಮಸೆಯ ಬಯಸಿಕೆ
ಲುಳಿಯ ಮೈಗಳ ಲವಣಿಸಾರರು
ಕೊಳುಗಿಡಿಯ ಖಂಡೆಯದ ಖಣಿಕಟಿಲೆಸೆಯೆ ಕಾದಿದರು (ದ್ರೋಣ ಪರ್ವ, ೧೪ ಸಂಧಿ, ೬ ಪದ್ಯ)

ತಾತ್ಪರ್ಯ:
ನೆಲದ ತಗ್ಗು, ದಿನ್ನೆಯ ಎತ್ತರಗಳಲ್ಲಿ ಮೈಯನ್ನು ತಿರುಗಿಸ್, ಎದುರಾಳಿಯ ಹೊಡೆತವನ್ನು ಸುತ್ತಿ ತಪ್ಪಿಸಿಕೊಳ್ಳುವ, ಗುರಾಣಿ ಹಿಡಿದು ತಪ್ಪಿಸ್ಕೊಳ್ಳುವ ಮಂಡೆ ತೊರಿ ಹೊಡೆಯುವ ವೀರರು ಕತ್ತಿಗಳು ಕಿಡಿಯುಗುಳುತ್ತಿರಲು ಹೋರಾಡಿದರು.

ಅರ್ಥ:
ನೆಲ: ಭೂಮಿ; ತಗ್ಗು: ಹಳ್ಳ, ಗುಣಿ; ಉಪ್ಪರ: ಎತ್ತರ, ಉನ್ನತಿ; ಒಲವು: ಪ್ರೀತಿ; ಪಾರಗ: ಪಂಡಿತ, ನಿಪುಣ; ಬವರಿ: ತಿರುಗುವುದು; ಸುಳುಹು: ಗುರುತು; ರೂಪ; ಚಮ್ಮಟ: ಚಾವಟಿ; ಪಯ: ನೀರು, ಉದಕ; ವಂಚನೆ: ಮೋಸ; ಉಜ್ಝಟ: ಯುದ್ಧದ ಒಂದು ವರಸೆ; ಬಲಿ: ಗಟ್ಟಿಯಾಗು; ದಂಡೆ: ಗುರಾಣಿ; ಮಸೆ: ಹರಿತವಾದುದು; ಬಯಸು: ಇಚ್ಛಿಸು; ಉಳಿ: ಬಿಡು, ತೊರೆ, ನಿಲ್ಲು; ಮೈ: ತನು; ಲವಣಿ: ಕಾಂತಿ, ನೃತ್ಯಭಂಗಿ; ಕೊಳು

ಪದವಿಂಗಡಣೆ:
ನೆಲನ +ತಗ್ಗಿನಲ್+ಉಪ್ಪರದ+ ಮೆಯ್
ಒಲವಿನಲಿ +ಪಾರಗದ+ ಬವರಿಯ
ಸುಳುಹಿನಲಿ+ ಚಮ್ಮಟದ +ಪಯವಂಚನೆಯಲ್+ಉಜ್ಝಟದ
ಬಲಿದ +ದಂಡೆಯ +ಮಸೆಯ +ಬಯಸಿಕೆಲ್
ಉಳಿಯ +ಮೈಗಳ +ಲವಣಿಸಾರರು
ಕೊಳುಗಿಡಿಯ +ಖಂಡೆಯದ +ಖಣಿಕಟಿಲ್+ಎಸೆಯೆ +ಕಾದಿದರು

ಅಚ್ಚರಿ:
(೧) ತಗ್ಗು, ಉಪ್ಪರ – ವಿರುದ್ಧ ಪದಗಳು
(೨) ಖಡ್ಗದ ಸದ್ದನ್ನು ಹೇಳುವ ಪದ – ಖಂಡೆಯದ ಖಣಿಕಟಿಲೆಸೆಯೆ ಕಾದಿದರು

ಪದ್ಯ ೩೮: ತುಳುವರ ಪಡೆಯ ಆವೇಶ ಹೇಗಿತ್ತು?

ಪಡಿತಳವ ಬೀಸಿದರೆ ಕಾಲಿ
ಕ್ಕಡಿ ನಡುವ ತಾಗಿದರೆ ಮಂಡಲ
ವುಡಿದು ಬಿದ್ದುದು ನಿಲುಕಿನುಪ್ಪರ ಶಿರವ ಮನ್ನಿಸದು
ಮಡುವ ಮೀರುವ ಕಚ್ಚೆ ಮಂಡಿಯ
ಪಡಿದೊಡೆಯ ತಲೆಮರೆಯ ಹರಿಗೆಯ
ಕಡಿತಲೆಯ ಕಲಿ ತುಳುವಪಡೆ ಹೊಯ್ದಾಡಿತಿಳೆ ಹಿಳಿಯೆ (ಭೀಷ್ಮ ಪರ್ವ, ೪ ಸಂಧಿ, ೩೮ ಪದ್ಯ)

ತಾತ್ಪರ್ಯ:
ಕೆಳಗೆ ಕತ್ತಿಯನ್ನು ಬೀಸಿದರೆ ಕಾಲುಗಳು ಕತ್ತರಿಸಿದವು, ನಡುವಿಗೆ ಹೊಡೆದರೆ ದೇಹವೇ ಇಬ್ಭಾಗವಾಗಿ ಬೀಲುತ್ತಿತ್ತು, ಮೇಲೆ ಹೊಡೆದರೆ ತಲೆ ಹಾರುತ್ತಿತ್ತು, ಹಿಮ್ಮಡಿ ಮಂಡಿ ತೊಡೆಗಳನ್ನು ತಿವಿದು, ತುಳುವರು ಪರಾಕ್ರಮದಿಂದ ಕಾದಿದರು. ಅವರ ರಭಸಕ್ಕೆ ಭೂಮಿಯು ಬಿರಿಯಿತು.

ಅರ್ಥ:
ಪಡಿತಳ: ಆಕ್ರಮಣ; ಬೀಸು: ತೂಗುವಿಕೆ; ಕಾಲು: ಪಾದ; ನಡು: ಮಧ್ಯಭಾಗ; ತಾಗು: ಮುಟ್ಟು; ಮಂಡಲ: ವರ್ತುಲಾಕಾರ, ದೇಹ; ಉಡಿ: ಮುರಿ; ಬಿದ್ದು: ಕುಸಿ; ನಿಲುಕು: ನೀಡುವಿಕೆ, ಬಿಡುವು; ಉಪ್ಪರ: ಎತ್ತರ, ಉನ್ನತಿ, ಅತಿಶಯ; ಶಿರ: ತಲೆ; ಮನ್ನಿಸು: ಗೌರವಿಸು; ಮಡವ: ಪಾದದ ಹಿಂಭಾಗ, ಹರಡು, ಹಿಮ್ಮಡಿ; ಮೀರು: ದಾಟು; ಕಚ್ಚು: ತಿವಿ; ಮಂಡಿ: ಮೊಳಕಾಲು, ಜಾನು; ಪಡಿ: ಸಮಾನ, ಎದುರಾದ; ತೊಡೆ: ಊರು; ಹರಿಗೆ: ಚಿಲುಮೆ; ಕಡಿತಲೆ: ಕತ್ತಿ, ಗುರಾಣಿ; ಕಲಿ: ಶೂರ; ಇಳೆ: ಭೂಮಿ; ಹಿಳಿ:ನಾಶವಾಗು;

ಪದವಿಂಗಡಣೆ:
ಪಡಿತಳವ +ಬೀಸಿದರೆ +ಕಾಲಿ
ಕ್ಕಡಿ +ನಡುವ ತಾಗಿದರೆ+ ಮಂಡಲವ್
ಉಡಿದು +ಬಿದ್ದುದು +ನಿಲುಕಿನ್+ಉಪ್ಪರ +ಶಿರವ+ ಮನ್ನಿಸದು
ಮಡುವ +ಮೀರುವ+ ಕಚ್ಚೆ+ ಮಂಡಿಯ
ಪಡಿ+ತೊಡೆಯ +ತಲೆಮರೆಯ+ ಹರಿಗೆಯ
ಕಡಿತಲೆಯ+ ಕಲಿ +ತುಳುವಪಡೆ+ ಹೊಯ್ದಾಡಿತ್+ಇಳೆ +ಹಿಳಿಯೆ

ಅಚ್ಚರಿ:
(೧) ತುಳುವಪಡೆಯ ಶೌರ್ಯ – ಮಡುವ ಮೀರುವ ಕಚ್ಚೆ ಮಂಡಿಯ ಪಡಿದೊಡೆಯ ತಲೆಮರೆಯ ಹರಿಗೆಯ
ಕಡಿತಲೆಯ ಕಲಿ ತುಳುವಪಡೆ ಹೊಯ್ದಾಡಿತಿಳೆ ಹಿಳಿಯೆ

ಪದ್ಯ ೩೦: ಸೈನಿಕರು ಹೇಗೆ ಮೂದಲಿಸಿದರು?

ಅಡಸಿ ಕಿಡಿಗಳ ಕಾರೆ ಲೋಹದ
ಕಡಿಕು ಸಿಡಿಲುಗ್ಗಡದಲಡ್ಡಣ
ವೊಡೆದು ಕೈಬಂದಿಗೆಯನೆತ್ತಿದಡಿಕ್ಕಲಿಸಿ ಬೀಳೆ
ಫಡ ಸುಖಾಯವ ಬಿಡದಿರಿಮ್ಮೊನೆ
ಗೊಡದಿರುಪ್ಪರದಲ್ಲಿ ಕೈಯನು
ಕೊಡದಿರಾ ಮಿಡುಕದಿರು ಮಂಡಿಯನೆನುತ ಹಳಚಿದರು (ಭೀಷ್ಮ ಪರ್ವ, ೪ ಸಂಧಿ, ೩೦ ಪದ್ಯ)

ತಾತ್ಪರ್ಯ:
ಕತ್ತಿಗಳು ಕಿಡಿಗಳನ್ನು ಕಾಡಿ ಸಿಡಿಲಿನಂತಹ ಸದ್ದನ್ನು ಮಾಡಿದವು. ಗುರಾಣಿಗಳು ಒದೇದವು, ಕೈಬಂದಿಗಳು ತುಂಡಾದವು, ಸುಖವಾಗಿ ಕುಳಿತು ಬಿಡು, ಯುದ್ಧದ ಉದ್ಯಮವನ್ನು ಬಿಡಬೇಡ ಕೈಯೆತ್ತಿ ಕೊಟ್ಟು ಕಳೆದುಕೊಳ್ಳಬೇಡ, ಮಂಡಿಹಚ್ಚಿಯೇ ಕುಳಿತಿರು ಎಂದು ಮೂದಲಿಸುತ್ತಾ ಕತ್ತಿಗಳನ್ನು ಹಿಡಿದು ಹೋರಾಡಿದರು.

ಅರ್ಥ:
ಅಡಸು: ಆಕ್ರಮಿಸು; ಕಿಡಿ: ಬೆಂಕಿ; ಲೋಹ: ಖನಿಜ, ಧಾತು; ಕಡಿ: ತುಂಡು; ಸಿಡಿಲು: ಅಶನಿ; ಉಗ್ಗಡ: ಉತ್ಕಟತೆ, ಅತಿಶಯ; ಅಡ್ಡಣ: ಗುರಾಣಿ; ಒಡೆ: ಸೀಳು; ಕೈ:ಹಸ್ತ; ಬಂದಿ: ಒಂದು ಬಗೆಯ ಆಭರಣ; ಎತ್ತು: ಮೇಲಕ್ಕೆ ಎಳೆ; ಇಕ್ಕೆಲ: ಎರಡುಕಡೆ; ಬೀಳು: ಜಾರು; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಸುಖ: ನಲಿವು, ಸಂತಸ; ಉಪ್ಪರ: ಅತಿಶಯ; ಮೊನೆ: ಮುಖ; ಕೊಡು: ನೀಡು; ಮಿಡುಕು: ಅಲುಗಾಟ; ಮಂಡಿ: ಮೊಳಕಾಲು, ಜಾನು; ಹಳಚು:ತಾಗು, ಬಡಿ; ಇಮ್ಮೊನೆ: ಎರಡೂ ಕಡೆ ಹರಿತವಾದ;

ಪದವಿಂಗಡಣೆ:
ಅಡಸಿ +ಕಿಡಿಗಳ +ಕಾರೆ +ಲೋಹದ
ಕಡಿಕು +ಸಿಡಿಲ್+ಉಗ್ಗಡದಲ್+ಅಡ್ಡಣ
ವೊಡೆದು+ ಕೈಬಂದಿಗೆಯನ್+ಎತ್ತಿದಡ್+ಇಕ್ಕಲಿಸಿ +ಬೀಳೆ
ಫಡ+ ಸುಖಾಯವ +ಬಿಡದಿರ್+ಇಮ್ಮೊನೆ
ಕೊಡದಿರ್+ಉಪ್ಪರದಲ್ಲಿ +ಕೈಯನು
ಕೊಡದಿರ್+ಆ+ ಮಿಡುಕದಿರು +ಮಂಡಿಯನೆನುತ +ಹಳಚಿದರು

ಅಚ್ಚರಿ:
(೧) ಯುದ್ಧದ ತೀವ್ರತೆ – ಅಡಸಿ ಕಿಡಿಗಳ ಕಾರೆ ಲೋಹದ ಕಡಿಕು ಸಿಡಿಲುಗ್ಗಡದಲ್