ಪದ್ಯ ೨೧: ಗದೆಯು ಏಕೆ ರಕ್ತಸಿಕ್ತವಾಯಿತು?

ತಪ್ಪಿಸಿದನೇ ಘಾಯವನು ಫಡ
ತಪ್ಪಿಸಿನ್ನಾದಡೆಯೆನುತ ಕಡು
ದರ್ಪದಲಿ ಹೊಯ್ದನು ಸಮೀರಾತ್ಮಜನನವನೀಶ
ತಪ್ಪಿತದು ಗದೆ ತನುವ ರಕುತದ
ದರ್ಪನದ ರಹಿಯಾಯ್ತು ಗದೆ ಮಾ
ರಪ್ಪಿತರಸನನೆನಲು ಹೊಯ್ದನು ಭಾಳದಲಿ ಭೀಮ (ಗದಾ ಪರ್ವ, ೭ ಸಂಧಿ, ೨೧ ಪದ್ಯ)

ತಾತ್ಪರ್ಯ:
ನನ್ನ ಹೊಡೆತವನ್ನು ತಪ್ಪಿಸಿಕೊಂಡನೋ, ಹಾಗಾದರೆ ಈಗ ತಪ್ಪಿಸಿಕೋ ಎಂದು ಕೌರವನು ಹೊಡೆಯಲು, ಆ ಹೊಡೆತ ತಪ್ಪಿತು, ಗದೆಯು ಕೌರವನನ್ನು ಅಪ್ಪಿತೋ ಎಂಬಂತೆ ಭೀಮನು ವೈರಿಯ ಹಣೆಗೆ ಹೊಡೆದನು. ಗದೆಯು ರಕ್ತಸಿಕ್ತವಾಯಿತು.

ಅರ್ಥ:
ಘಾಯ: ಪೆಟ್ಟು; ಫಡ: ತಿರಸ್ಕಾರದ ನುಡಿ; ಕಡು: ಬಹಳ; ದರ್ಪ: ಅಹಂಕಾರ; ಸಮೀರ: ವಾಯು; ಅಮೀರಾತ್ಮಜ: ಭೀಮ; ಅವನೀಶ: ರಾಜ; ಗದೆ: ಮುದ್ಗರ; ತನು: ದೇಹ; ರಕುತ: ನೆತ್ತರು; ದರ್ಪಣ: ಮುಕುರ; ರಹಿ: ರೀತಿ, ಪ್ರಕಾರ; ಅರಸ: ರಾಜ; ಹೊಯ್ದು: ಹೊಡೆ; ಭಾಳ: ಹಣೆ;

ಪದವಿಂಗಡಣೆ:
ತಪ್ಪಿಸಿದನೇ +ಘಾಯವನು +ಫಡ
ತಪ್ಪಿಸಿನ್ನಾದಡೆ+ಎನುತ +ಕಡು
ದರ್ಪದಲಿ+ ಹೊಯ್ದನು+ ಸಮೀರಾತ್ಮಜನನ್+ಅವನೀಶ
ತಪ್ಪಿತದು+ ಗದೆ+ ತನುವ +ರಕುತದ
ದರ್ಪಣದ +ರಹಿಯಾಯ್ತು +ಗದೆ +ಮಾರ್
ಅಪ್ಪಿತ್+ಅರಸನನ್+ಎನಲು +ಹೊಯ್ದನು+ ಭಾಳದಲಿ +ಭೀಮ

ಅಚ್ಚರಿ:
(೧) ಭೀಮನನ್ನು ಸಮೀರಾತ್ಮಜ; ದುರ್ಯೋಧನನನ್ನು ಅವನೀಶ, ಅರಸ ಎಂದು ಕರೆದಿರುವುದು
(೨) ತಪ್ಪಿಸಿ, ತಪ್ಪಿತದು – ೧,೨,೪ ಸಾಲಿನ ಮೊದಲ ಪದ

ಪದ್ಯ ೩೭: ದುರ್ಯೋಧನನು ಯಾವ ವಿಷಯಕ್ಕೆ ಬೆದರಿದನು?

ಎನುತ ಸಂಜಯಸಹಿತ ಕೌರವ
ಜನಪ ಬಂದನು ತತ್ಸರೋವರ
ಕನಿಲನಿದಿರಾದನು ಸುಗಂಧದ ಶೈತ್ಯಪೂರದಲಿ
ತನುವಿಗಾಪ್ಯಾಯನದಿನಂತ
ರ್ಮನಕೆ ಪಲ್ಲಟವಾಯ್ತು ಭೀಮನ
ಜನಕನರಿದನು ತನ್ನ ಗುಪ್ತಸ್ಥಾನ ಸಂಗತಿಯ (ಗದಾ ಪರ್ವ, ೩ ಸಂಧಿ, ೩೭ ಪದ್ಯ)

ತಾತ್ಪರ್ಯ:
ಹೀಗೆ ಹೇಳಿ, ಕೌರವನು ಸಂಜಯನೊಡನೆ ಸರೋವರ ಬಳಿಗೆ ಬಂದನು. ಆಗ ಸುಗಂಧಪೂರಿತವಾದ ಹಿತಕರವಾದ ತಂಗಾಳಿ ಬೀಸಿ ದೇಹಕ್ಕೆ ಸಂತಸವಾದರೂ, ಭೀಮನ ತಂದೆಯು ತಾನಿರುವ ಗುಪ್ತಸ್ಥಾನವನ್ನರಿತನಂದು ಮನಸ್ಸು ಬೆದರಿತು.

ಅರ್ಥ:
ಸಹಿತ: ಜೊತೆ; ಜನಪ: ದೊರೆ; ಬಂದು: ಆಗಮಿಸು; ಸರೋವರ: ಸರಸಿ; ಅನಿಲ: ವಾಯು; ಇದಿರು: ಎದುರು; ಸುಗಂಧ: ಪರಿಮಳ; ಶೈತ್ಯ: ತಂಪು; ಪೂರ:ಬಹಳವಾಗಿ; ತನು: ದೇಹ; ಆಪ್ಯಾಯ: ಸಂತೋಷ, ಹಿತ; ಅಂತರ್ಮನ: ಅಂತಃಕರಣ; ಪಲ್ಲಟ: ಮಾರ್ಪಾಟು; ಜನಕ: ತಂದೆ; ಅರಿ: ತಿಳಿ; ಗುಪ್ತ: ರಹಸ್ಯ; ಸ್ಥಾನ: ಜಾಗ; ಸಂಗತಿ: ವಿಚಾರ;

ಪದವಿಂಗಡಣೆ:
ಎನುತ+ ಸಂಜಯ+ಸಹಿತ +ಕೌರವ
ಜನಪ+ ಬಂದನು +ತತ್ಸರೋವರಕ್
ಅನಿಲನ್+ಇದಿರಾದನು +ಸುಗಂಧದ +ಶೈತ್ಯ+ಪೂರದಲಿ
ತನುವಿಗ್+ಆಪ್ಯಾಯನದಿನ್+ಅಂತ
ರ್ಮನಕೆ +ಪಲ್ಲಟವಾಯ್ತು +ಭೀಮನ
ಜನಕನ್+ಅರಿದನು +ತನ್ನ +ಗುಪ್ತಸ್ಥಾನ +ಸಂಗತಿಯ

ಅಚ್ಚರಿ:
(೧) ಎರಡು ರೀತಿಯ ಅನುಭವ – ತನುವಿಗಾಪ್ಯಾಯನದಿನಂತರ್ಮನಕೆ ಪಲ್ಲಟವಾಯ್ತು
(೨) ಕೌರವ ಜನಪ, ಭೀಮನ ಜನಕ – ಪದಗಳ ಬಳಕೆ

ಪದ್ಯ ೪೩: ದುರ್ಯೋಧನನ ದೇಹವು ಯಾರಿಗೆ ಮೀಸಲು?

ಕೊಲುವಡನುಚಿತವಿಂದು ಭೀಮಗೆ
ಕಳೆದ ಮೀಸಲು ನಿನ್ನ ತನು ನೀ
ನೊಲಿದ ಪರಿಯಿಂದೆಸು ವಿಭಾಡಿಸು ರಚಿಸು ಭಾಷೆಗಳ
ಅಳುಕಿದೆವು ನಿನಗೆಂದು ರಾಯನ
ಬಳಿಯ ಜೋದರ ರಾವುತರ ರಥಿ
ಗಳ ಪದಾತಿಯನಿಕ್ಕಿದನು ಸೆಕ್ಕಿದನು ಸರಳುಗಳ (ಗದಾ ಪರ್ವ, ೧ ಸಂಧಿ, ೪೩ ಪದ್ಯ)

ತಾತ್ಪರ್ಯ:
ಅರ್ಜುನನು ಕೌರವನಿಗೆ, ನಿನ್ನ ದೇಹವು ಭೀಮನಿಗೆ ಮೀಸಲಾದುದರಿಂದ ನಿನ್ನನ್ನು ನಾನು ಕೊಲ್ಲುವುದು ಅನುಚಿತ. ನಿನಗೆ ಹೇಗೆ ಬೇಕೋ ಹಾಗೆ ಶಸ್ತ್ರಾಸ್ತ್ರಗಳಿಂದ ನನ್ನನ್ನು ಹೊಡೆ, ಯಾವ ಪ್ರತಿಜ್ಞೆಯನ್ನಾದರೂ ಮಾಡು, ನಾನು ನಿನಗೆ ಹೆದರಿದ್ದೇನೆ ಎಂದು ಹೇಳಿ ಅವನ ಸುತ್ತಲಿನ ಚತುರಂಗ ಸೈನ್ಯವನ್ನು ಬಾಣಗಳಿಂದ ಚುಚ್ಚಿ ಕೊಂದನು.

ಅರ್ಥ:
ಕೊಲು: ಸಾಯಿಸು; ಅನುಚಿತ: ಸರಿಯಲ್ಲದ; ಮೀಸಲು: ಕಾಯ್ದಿರಿಸಿದ; ತನು: ದೇಹ; ಒಲಿ: ಪ್ರೀತಿಸು; ಪರಿ: ರೀತಿ; ವಿಭಾಡಿಸು: ನಾಶಮಾಡು; ರಚಿಸು: ನಿರ್ಮಿಸು; ಭಾಷೆ: ನುಡಿ; ಅಳುಕು: ಹೆದರು; ರಾಯ: ರಾಜ; ಬಳಿ: ಹತ್ತಿರ; ಜೋದರು: ಆನೆ ಮೇಲೆ ಕುಳಿತು ಯುದ್ಧ ಮಾಡುವವರು; ರಥಿ: ರಥದಲ್ಲಿ ಕುಳಿತು ಯುದ್ಧ ಮಾಡುವವನು; ಪದಾತಿ: ಕಾಲಾಳು, ಸೈನಿಕ; ಇಕ್ಕು: ಇರಿಸು, ಇಡು; ಸೆಕ್ಕು: ಒಳಸೇರುವಿಕೆ, ಕುಗ್ಗುವಿಕೆ; ಸರಳು: ಬಾಣ; ಎಸು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಕೊಲುವಡ್+ಅನುಚಿತವ್+ಇಂದು +ಭೀಮಗೆ
ಕಳೆದ +ಮೀಸಲು +ನಿನ್ನ +ತನು +ನೀ
ನೊಲಿದ +ಪರಿಯಿಂದ್+ಎಸು +ವಿಭಾಡಿಸು +ರಚಿಸು +ಭಾಷೆಗಳ
ಅಳುಕಿದೆವು +ನಿನಗೆಂದು +ರಾಯನ
ಬಳಿಯ +ಜೋದರ +ರಾವುತರ+ ರಥಿ
ಗಳ +ಪದಾತಿಯನ್+ಇಕ್ಕಿದನು +ಸೆಕ್ಕಿದನು +ಸರಳುಗಳ

ಅಚ್ಚರಿ:
(೧) ದುರ್ಯೋಧನನ ದೇಹವು ಯಾರಿಗೆ ಮೀಸಲು – ಭೀಮಗೆ ಕಳೆದ ಮೀಸಲು ನಿನ್ನ ತನು
(೨) ದುರ್ಯೋಧನನನ್ನು ಹಂಗಿಸುವ ಪರಿ – ಅಳುಕಿದೆವು ನಿನಗೆಂದು, (ನಾನು ನಿನಗೆ ಹೆದರಿದ್ದೇನೆ)

ಪದ್ಯ ೨೫: ಭೀಷ್ಮರು ಯಾವ ಉಪಾಯವನ್ನು ಹೇಳಿದರು?

ಕೊಂದೆನಗಣಿತ ರಾಯರನು ತಾ
ಮಂದಿಯನು ನಿನಗಾನು ಮುನಿಯೆನು
ಬಂದು ಪಾರ್ಥನ ರಥವ ತಡೆದರೆ ನೀವು ಧೃತಿಗೆಡದೆ
ಇಂದಿನುದಯದಲಾ ಶಿಖಂಡಿಯ
ತಂದು ನಿಲಿಸಿದಡೆನ್ನ ತನುವನು
ಹಿಂದುಗಳೆಯದೆ ನಿಮಗೆ ತೆರುವೆನು ಮಗನೆ ಕೇಳೆಂದ (ಭೀಷ್ಮ ಪರ್ವ, ೭ ಸಂಧಿ, ೨೫ ಪದ್ಯ)

ತಾತ್ಪರ್ಯ:
ಲೆಕ್ಕವಿಲ್ಲದಷ್ಟು ರಾಜರನ್ನು ನಾನು ಇಷ್ಟು ದಿನದ ಯುದ್ಧದಲ್ಲಿ ಸಂಹರಿಸಿದ್ದೇನೆ, ನಿನ್ನ ಮೇಲೆ ನನಗೆ ಕೋಪವಿಲ್ಲ, ಬೆಲಗ್ಗೆ ನಾನು ಬಂದು ಅರ್ಜುನನ ರಥವನ್ನು ತಡೆದಾಗ ಧೈರ್ಯವನ್ನು ಕಳೆದುಕೊಳ್ಳದೆ ನನ್ನೆದುರು ಶಿಖಂಡಿಯನ್ನು ತಂದು ನಿಲ್ಲಿಸಿದರೆ, ನಾನು ಹಿಂದೆಸರಿಯದೆ ಈ ದೇಹವನ್ನು ನಿಮಗೆ ಕೊಡುತ್ತೇನೆ ಎಂದು ಹೇಳಿದನು.

ಅರ್ಥ:
ಕೊಂದು: ಸಾವು; ಅಗಣಿತ: ಲೆಕ್ಕವಿಲ್ಲದಷ್ಟು; ಮಂದಿ: ಜನರು; ಮುನಿ: ಕೋಪಗೊಳ್ಳು; ಬಂದು: ಆಗಮಿಸು; ರಥ: ಬಂಡಿ; ತಡೆ: ನಿಲ್ಲಿಸು; ಧೃತಿ: ಧೈರ್ಯ; ಉದಯ: ಹುಟ್ಟು; ಶಿಖಂಡಿ: ನಪುಂಸಕ; ನಿಲಿಸು: ನಿಲ್ಲಿಸು; ತನು: ದೇಹ; ಹಿಂದುಗಳೆಯದೆ: ಹಿಂದಕ್ಕೆ ಹೋಗದೆ; ತೆರುವೆ: ಕೊಡುವೆ; ಮಗ: ಪುತ್ರ; ಕೇಳು: ಆಲಿಸು;

ಪದವಿಂಗಡಣೆ:
ಕೊಂದೆನ್+ಅಗಣಿತ+ ರಾಯರನು +ತಾ
ಮಂದಿಯನು +ನಿನಗಾನು +ಮುನಿಯೆನು
ಬಂದು +ಪಾರ್ಥನ +ರಥವ +ತಡೆದರೆ+ ನೀವು +ಧೃತಿಗೆಡದೆ
ಇಂದಿನ್+ಉದಯದಲ್+ಆ+ ಶಿಖಂಡಿಯ
ತಂದು +ನಿಲಿಸಿದಡ್+ಎನ್ನ +ತನುವನು
ಹಿಂದುಗಳೆಯದೆ +ನಿಮಗೆ +ತೆರುವೆನು +ಮಗನೆ +ಕೇಳೆಂದ

ಅಚ್ಚರಿ:
(೧) ಭೀಷ್ಮರು ತಮ್ಮ ಸಾವನ್ನು ಆಹ್ವಾನಿಸುವ ಪರಿ – ಶಿಖಂಡಿಯ ತಂದು ನಿಲಿಸಿದಡೆನ್ನ ತನುವನು
ಹಿಂದುಗಳೆಯದೆ ನಿಮಗೆ ತೆರುವೆನು

ಪದ್ಯ ೬: ವಿದುರನು ಯಾರನ್ನು ಕಂಡನು?

ಕರಣ ನಿರ್ಮಳವಾಯ್ತು ಮನವು
ಬ್ಬರಿಸಿತತಿ ಪರಿತೋಷದೇಳಿಗೆ
ಪರಮ ಸುಖದಲಿ ತನುವ ಮರೆದನು ನಯನಜಲವೊಗಲು
ಎರಡುದೋರದ ಗಾಢಭಕ್ತಿಯ
ಭರದ ಲವಲವಿಕೆಯಲಿ ನಿಜ ಮಂ
ದಿರವ ಹೊರವಂಡುತ ಕಂಡನು ವಿದುರನಚ್ಯುತನ (ಉದ್ಯೋಗ ಪರ್ವ, ೮ ಸಂಧಿ, ೬ ಪದ್ಯ)

ತಾತ್ಪರ್ಯ:
ಕೃಷ್ಣನ ಆಗಮನವು ಅವನ ಮಾತುಗಳು ಕಿವಿಗಳನ್ನು ಶುಚಿಗೊಳಿಸಿತು, ಮನವು ಹೆಚ್ಚಿನ ಆನಂದದ ಅನುಭವವನ್ನು ಹೊಂದಿತು, ಅತ್ಯಂತ ಸುಖದಲ್ಲಿ ದೇಹವು ತನ್ನಿರುವಿಕೆಯನ್ನೇ ಮರೆಯಿತು, ಕಣ್ಣುಗಳಲ್ಲಿ ಆನಂದದ ನೀರು ಶೇಖರಿಸಿತು. ಭೇದವನ್ನರಿಯದ ಕೃಷ್ಣನಲ್ಲಿಯ ಗಾಢ ಭಕ್ತಿಯ ಭಾರದಲ್ಲಿ ಮನಸ್ಸು ಉತ್ಸಾಹಭರಿತವಾಗಿ ತನ್ನ ಆಲಯದಿಂದ ಹೊರ ಬರಲು ವಿದುರನು ಶ್ರೀಕೃಷ್ಣನನ್ನು ಕಂಡನು.

ಅರ್ಥ:
ಕರಣ: ಕಿವಿ; ನಿರ್ಮಳ: ಪರಿಶುದ್ಧ, ಸ್ವಚ್ಛ; ಮನ: ಮನಸ್ಸು; ಉಬ್ಬರಿಸು:ಹೆಚ್ಚಾಗು; ಪರಿತೋಷ: ಅತಿಯಾದ ಆನಂದ; ಏಳಿಗೆ: ಹೆಚ್ಚಳ; ಪರಮ: ಶ್ರೇಷ್ಠ; ಸುಖ: ನೆಮ್ಮದಿ, ಸಮಾಧಾನ; ತನು: ದೇಹ; ಮರೆ: ಜ್ಞಾಪಕವಿಲ್ಲದಂತಾಗು; ನಯನ: ಕಣ್ಣು; ಜಲ: ನೀರು; ಎರಡುದೋರು: ಭೇದಮಾಡು; ಗಾಢ: ಅತಿಯಾದ, ಹೆಚ್ಚಾದ; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಭರ:ಭಾರ, ಹೊರೆ; ಲವಲವಿಕೆ: ಉತ್ಸಾಹ, ಹುರುಪು; ನಿಜ: ನೈಜ, ಸ್ವಂತ; ಮಂದಿರ: ಆಲಯ; ಹೊರವಡು: ಹೊರಕ್ಕೆ ಹೊರಡಿಸು; ಅಚ್ಯುತ: ಕೃಷ್ಣ;

ಪದವಿಂಗಡಣೆ:
ಕರಣ +ನಿರ್ಮಳವಾಯ್ತು +ಮನವ್
ಉಬ್ಬರಿಸಿತ್+ಅತಿ +ಪರಿತೋಷದ್+ಏಳಿಗೆ
ಪರಮ +ಸುಖದಲಿ +ತನುವ +ಮರೆದನು +ನಯನ+ಜಲವೊಗಲು
ಎರಡುದೋರದ+ ಗಾಢಭಕ್ತಿಯ
ಭರದ +ಲವಲವಿಕೆಯಲಿ +ನಿಜ +ಮಂ
ದಿರವ +ಹೊರವಂಡುತ +ಕಂಡನು +ವಿದುರನ್+ಅಚ್ಯುತನ

ಅಚ್ಚರಿ:
(೧) ಭಕ್ತಿ ಪರವಶವಾದವನನ್ನು ಚಿತ್ರಿಸಿರುವ ಪದ್ಯ
(೨) ಕಣ್ಣೀರನ್ನು ಸೂಚಿಸಲು ನಯನಜಲವೊಗಲು ಪದದ ಬಳಕೆ

ಪದ್ಯ ೪೦: ರಾಜನೀತಿ ಯಾವುದು?

ಸಿರಿ ನೆಲೆಯೆ ಜವ್ವನ ನೆಲೆಯೆ ಮೈ
ಸಿರಿ ನೆಲೆಯೆ ತನು ನೆಲೆಯೆ ಖಂಡೆಯ
ಸಿರಿ ನೆಲೆಯೆ ನಿನಗರಸುತನವುಳ್ಳನ್ನ ನೀತಿಯಲಿ
ಧರೆಯ ರಕ್ಷಿಸು ಬಂಧುಗಳನು
ದ್ಧರಿಸು ಧರ್ಮವ ಸಾಧಿಸಿಂತಿದು
ನರಪತಿಗಳಿಗೆ ನೀತಿ ಚಿತ್ತೈಸೆಂದನಾ ವಿದುರ (ಉದ್ಯೋಗ ಪರ್ವ, ೩ ಸಂಧಿ, ೪೦ ಪದ್ಯ)

ತಾತ್ಪರ್ಯ:
ಐಶ್ವರ್ಯ, ಯೌವ್ವನ, ದೇಹ ಸೌಂದರ್ಯ, ದೇಹದ ಸುರೂಪ, ಶಸ್ತ್ರಾಸ್ತ್ರದ ಚಾತುರ್ಯ, ಅರಸುತನಗಳು ಇವು ಇರುವವರೆಗೂ ನೀತಿಯಿಂದ ರಾಜ್ಯವನ್ನಾಳು, ಬಂಧುಗಳನ್ನುದ್ಧರಿಸು, ಧರ್ಮವನ್ನು ಆರ್ಜಿಸು ಇದುವೆ ರಾಜನೀತಿ ಎಂದು ವಿದುರ ತಿಳಿಸಿದ.

ಅರ್ಥ:
ಸಿರಿ: ಐಶ್ವರ್ಯ; ನೆಲೆ: ಆಶ್ರಯ, ಆಧಾರ; ಜವ್ವನ: ಯೌವ್ವನ; ಮೈಸಿರಿ: ದೇಹ ಸೌಂದರ್ಯ; ತನು: ದೇಹ; ಖಂಡೆಯ: ಕತ್ತಿ;ಅರಸು: ರಾಜ; ನೀತಿ:ಮಾರ್ಗ ದರ್ಶನ; ಧರೆ: ಭೂಮಿ; ರಕ್ಷಿಸು: ಕಾಪಾಡು; ಬಂಧು: ಸಂಬಂಧಿಕರು; ಉದ್ಧರಿಸು: ಮೇಲಕ್ಕೆ ಎತ್ತುವುದು; ಧರ್ಮ: ಧಾರಣ ಮಾಡುವುದು, ನಿಯಮ, ಆಚಾರ; ಸಾಧಿಸು: ಪಡೆ, ದೊರ ಕಿಸಿಕೊಳ್ಳು; ನರಪತಿ: ರಾಜ; ನರ: ಮನುಷ್ಯ; ಚಿತ್ತೈಸು: ಗಮನವಿಡು;

ಪದವಿಂಗಡಣೆ:
ಸಿರಿ +ನೆಲೆಯೆ +ಜವ್ವನ +ನೆಲೆಯೆ +ಮೈ
ಸಿರಿ +ನೆಲೆಯೆ +ತನು +ನೆಲೆಯೆ +ಖಂಡೆಯ
ಸಿರಿ +ನೆಲೆಯೆ +ನಿನಗ್+ಅರಸುತನವುಳ್ಳನ್ನ+ ನೀತಿಯಲಿ
ಧರೆಯ +ರಕ್ಷಿಸು+ ಬಂಧುಗಳನ್
ಉದ್ಧರಿಸು +ಧರ್ಮವ +ಸಾಧಿಸ್+ಇಂತಿದು
ನರಪತಿಗಳಿಗೆ+ ನೀತಿ +ಚಿತ್ತೈಸೆಂದನಾ +ವಿದುರ

ಅಚ್ಚರಿ:
(೧) ಸಿರಿ, ಯೌವ್ವನ, ಮೈಸಿರಿ, ತನು, ಖಂಡೆಯ, ಅರಸುತನ – ಇವುಗಳಿದ್ದಲ್ಲಿ ಧರ್ಮವನ್ನಾಚರಿಸಬೇಕು.
(೨) ನೆಲೆಯೆ – ೫ ಬಾರಿ ಪ್ರಯೋಗ
(೩) ಧರೆ, ಬಂಧು, ಧರ್ಮ – ಈ ಮೂರನ್ನು ರಕ್ಷಿಸಿ ಉದ್ಧರಿಸಿ ಸಾಧಿಸಬೇಕೆಂದು ವಿದುರ ತಿಳಿಸಿದ್ದಾನೆ.

ಪದ್ಯ ೫: ಭೀಮನ ಮಾತೃವಾತ್ಸಲ್ಯದ ನಿದರ್ಶನವೇನು?

ತಳಿರ ತರಿದೊಟ್ಟಿದನು ತರುವಿನ
ನೆಳಲೊಳಗೆ ವಿಶ್ರಮಿಸಿದರು ತನು
ಬಳಲಿಕೆಯ ಭಾರಣೆಯ ಕಡು ಜೋಡಿಸಿದ ಝೋಂಪಿನಲಿ
ಝಳಕೆ ಕಂದಿದ ಮೈಯ ಬಾಡಿದ
ಲಲಿತವದನದ ಮಾಸಿ ಕೆದರಿದ
ತಲೆಯೊಳಿರೆ ತನ್ನೈವರನು ಕಂಡಳಲಿದನು ಭೀಮ (ಆದಿ ಪರ್ವ, ೯ ಸಂಧಿ, ೫ ಪದ್ಯ)

ತಾತ್ಪರ್ಯ:
ತನ್ನ ತಾಯಿ,ಸೋದರರನ್ನು ಹೊತ್ತು ಬಹಳ ಯೋಜನಗಳನ್ನು ಸಾಗಿದ ನಂತರ, ಎಲ್ಲರೂ ಬಳಲಿದ್ದರು. ಆಗ ಕಾಡಿನ ಮರದ ನೆರಳಲ್ಲಿ ಚಿಗುರಿದ ಮರದ ರಂಬೆಗಳನ್ನು ತಂದು ಹಾಸಿ, ಅದರಮೇಲೆ ಎಲ್ಲರು ಕುಳಿತು ವಿಶ್ರಮಿಸುತ್ತಾ, ಬಳಲಿದ ದೇಹದ ಆಯಾಸಕ್ಕೆ ಅವರೆಲ್ಲರೂ ನಿದ್ರೆಯ ಝೋಂಪಿನಲ್ಲಿ ಮಲಗಿದರು. ಅವರೆಲ್ಲರ ದೇಹವು ಬಿಸಿಲಿನ ತಾಪಕ್ಕೆ ಕಂದಿತ್ತು, ಮುಖವು ಬಾಡಿತ್ತು, ತಲೆಕೂದಲು ಕೆದರಿತ್ತು, ಸ್ಥಿತಿಯನ್ನು ಕಂಡು, ತನ್ನವರ ಸ್ಥಿತಿ ಹೀಗಿರುವುದನ್ನು ಕಂಡು ಭೀಮನು ದುಃಖಿಸಿದನು.

ಅರ್ಥ:
ತಳಿರು: ಚಿಗುರು; ತರಿ: ಕಡಿ, ಕತ್ತರಿಸು; ತರು: ಮರ; ನೆಳಲು: ನೆರಳು; ವಿಶ್ರಮ: ವಿಶ್ರಾಂತಿ, ವಿರಾಮ, ಶ್ರಮಪರಿಹಾರ; ತನು: ದೇಹ; ಬಳಲಿಕೆ: ಆಯಾಸ; ಭಾರಣೆ: ಭಾರ, ಹೊರೆ; ಕಡು: ತುಂಬ; ಜೋಡಿ: ಜೊತೆ; ಝೋಂಪು: ತೂಕಡಿಕೆ; ಝಳ: ಶಾಖ, ಉಷ್ಣತೆ; ಕಂದು: ಕಳೆಗುಂದು, ಬಣ್ಣಗೆಡು; ಮೈಯ: ದೇಹ; ಬಾಡು: ಸೊರಗು; ಲಲಿತ: ಚೆಲುವು, ಸೌಂದರ್ಯ; ವದನ: ಮುಖ; ಮಾಸು: ಮಲಿನವಾಗು, ಕಾಂತಿಗುಂದು; ಕೆದರು: ಚೆಲ್ಲಾಪಿಲ್ಲಿ, ಹರಡು; ತಲೆ: ಶಿರ; ಅಳಲು: ಅಳು, ಕೊರಗು;

ಪದವಿಂಗಡನೆ:
ತಳಿರ +ತರಿ+ದೊಟ್ಟಿದನು+ ತರುವಿನ
ನೆಳಲ್+ಒಳಗೆ+ ವಿಶ್ರಮಿಸಿದರು+ ತನು
ಬಳಲಿಕೆಯ+ ಭಾರಣೆಯ+ ಕಡು+ ಜೋಡಿಸಿದ+ ಝೋಂಪಿನಲಿ
ಝಳಕೆ+ ಕಂದಿದ+ ಮೈಯ +ಬಾಡಿದ
ಲಲಿತ+ವದನದ+ ಮಾಸಿ +ಕೆದರಿದ
ತಲೆ+ಯೊಳ್+ಇರೆ+ ತನ್ನ್+ಐವರನು+ ಕಂಡ್+ಅಳಲಿದನು+ ಭೀಮ

ಅಚ್ಚರಿ:
(೧) ಬಳಲಿದವರ ಲಕ್ಷಣ: ಝಳಕೆ ಕಂದಿದ ಮೈ, ಬಾಡಿದ ಲಲಿತ ವದನ, ಮಾಸಿ ಕೆದರಿದ ತಲೆ
(೨) “ತ” ಕಾರದ ಪದಗಳು: ತಳಿರ, ತರಿ, ತರು, ತನು, ತಲೆ, ತನ್ನ
(೩) ಮೈಯ್, ತನು – ಸಮಾನಾರ್ಥಕ ಪದ
(೪) “ಕ” ಕಾರದ ಪದಗಳು: ಕಡು, ಕಂದು, ಕಂಡ, ಕೆದರು