ಪದ್ಯ ೪: ಸಂಜಯನು ಧೃತರಾಷ್ಟ್ರನಿಗೆ ಏನು ಹೇಳಿದನು?

ಹದುಳಿಸೈ ರಾಜೇಂದ್ರ ನೀ ಬಿ
ತ್ತಿದ ವಿಷದ್ರುಮ ಫಲಿತವಾಯಿತು
ಬೆದರಲೇಕಿನ್ನನುಭವಿಸು ಸಾಕುಳಿದ ಮಾತೇನು
ಕದನದಲಿ ಸುತನಿಧಿಯ ಹೋಗಾ
ಡಿದೆ ನಿಜಾನ್ವಯ ಕಲ್ಪತರುವನು
ಮದಕರಿಗೆ ಮಾರಿದೆಯೆನುತ ನೆಗಹಿದನು ಭೂಪತಿಯ (ಶಲ್ಯ ಪರ್ವ, ೧ ಸಂಧಿ, ೪ ಪದ್ಯ)

ತಾತ್ಪರ್ಯ:
ಸಂಜಯನು ಧೃತರಾಷ್ಟ್ರನು ಕೆಳಗೆ ಬಿದ್ದುದನ್ನು ಕಂಡು, ಎಲೈ ಚಕ್ರವರ್ತಿಯೇ ಎಚ್ಚರಗೊಳ್ಳುವವನಾಗು, ನೀನು ಹಿಂದೆ ಬಿತ್ತಿದ್ದ ವಿಷವೃಕ್ಷದ ಬೀಜ ಇಂದು ಬೆಳೆದು ಹೂವಾಗಿ ಫಲಕೊಡುತ್ತಿದೆ, ಅದಕ್ಕೇಕೆ ಹೆದರುವೆ? ಅದನ್ನು ಅನುಭವಿಸು. ಯುದ್ಧದಲ್ಲಿ ಮಕ್ಕಳ ನಿಧಿಯನ್ನೇ ನೀಗಲಿಟ್ಟೆ, ಕಲ್ಪವೃಕ್ಷವನ್ನು ಮದಗಜಕ್ಕೆ ಮಾರಿಬಿಟ್ಟೆ ಎಂದು ಧೃತರಾಷ್ಟ್ರನನ್ನೆತ್ತಿ ಕುಳ್ಳಿರಿಸಿದನು.

ಅರ್ಥ:
ಹದುಳ: ಸೌಖ್ಯ, ಕ್ಷೇಮ; ರಾಜೇಂದ್ರ: ಅರಸ; ಬಿತ್ತು: ನೆಡು, ನೆಟ್ಟಿದ; ವಿಷ: ಗರಳ; ದ್ರುಮ: ಮರ, ವೃಕ್ಷ; ಫಲಿತ: ಫಲಿಸು; ಬೆದರು: ಹೆದರು; ಅನುಭವ: ಅನುಭಾವ; ಸಾಕು: ನಿಲ್ಲು; ಮಾತು: ವಾಣಿ; ಕದನ: ಯುದ್ಧ; ಸುತ: ಪುತ್ರ; ನಿಧಿ: ಐಶ್ವರ್ಯ; ಹೋಗು: ತೆರಳು; ಅನ್ವಯ: ವಂಶ; ಕಲ್ಪತರು: ಕಲ್ಪವೃಕ್ಷ, ಕಲ್ಪಕುಜ; ಮದಕರಿ: ಮದಗಜ; ಮಾರು: ವಿಕ್ರಯಿಸು; ನೆಗಹು: ಮೇಲೆತ್ತು; ಭೂಪತಿ: ರಾಜ;

ಪದವಿಂಗಡಣೆ:
ಹದುಳಿಸೈ+ ರಾಜೇಂದ್ರ +ನೀ +ಬಿ
ತ್ತಿದ +ವಿಷದ್ರುಮ +ಫಲಿತವಾಯಿತು
ಬೆದರಲೇಕಿನ್ನ್+ಅನುಭವಿಸು +ಸಾಕುಳಿದ +ಮಾತೇನು
ಕದನದಲಿ +ಸುತ+ನಿಧಿಯ +ಹೋಗಾ
ಡಿದೆ +ನಿಜಾನ್ವಯ+ ಕಲ್ಪತರುವನು
ಮದಕರಿಗೆ +ಮಾರಿದೆ+ಎನುತ +ನೆಗಹಿದನು +ಭೂಪತಿಯ

ಅಚ್ಚರಿ:
(೧) ಧೃತರಾಷ್ಟ್ರನಿಗೆ ತನ್ನ ತಪ್ಪನ್ನು ತೋರಿಸುವ ಪರಿ – ಹದುಳಿಸೈ ರಾಜೇಂದ್ರ ನೀ ಬಿತ್ತಿದ ವಿಷದ್ರುಮ ಫಲಿತವಾಯಿತು ಬೆದರಲೇಕಿನ್ನನುಭವಿಸು

ಪದ್ಯ ೨೧: ವ್ಯಾಸರು ಯಾರನ್ನು ಸಂತೈಸಿದರು?

ಬಂದು ವೇದವ್ಯಾಸಮುನಿ ನೃಪ
ಮಂದಿರವ ಹೊಗಲೆದ್ದು ಪದದಲಿ
ಸಂದಣಿಸಿ ಚಾಚಿದನು ಮಕುಟವನವನಿಪಾಲಕನು
ನೊಂದವರು ಸತ್ಸಂಗತಿಯಲಾ
ನಂದವಡೆವುದೆನುತ್ತ ಮುನಿಪತಿ
ಕಂದು ಮೋರೆಯ ಮಹಿಪತಿಯ ನೆಗಹಿದನು ಕರುಣದಲಿ (ದ್ರೋಣ ಪರ್ವ, ೭ ಸಂಧಿ, ೨೧ ಪದ್ಯ)

ತಾತ್ಪರ್ಯ:
ವೇದವ್ಯಾಸ ಮುನಿಗಳು ರಾಜನ ಮಂದಿರಕ್ಕೆ ಬಂದನು. ಯುಧಿಷ್ಠಿರ ಎದ್ದು ಅವರ ಪಾದಕಮಲಗಳ ಮೇಲೆ ತನ್ನ ಕಿರೀಟವನ್ನು ಹರಡಿ ನಮಸ್ಕರಿಸಿದನು. ಯುಧಿಷ್ಠಿರ ನೀವು ಬಹಳ ನೊಂದಿರುವಿರಿ, ಈ ಸಮಯವನ್ನು ಸತ್ಕಥಾ ಪ್ರಸಂಗದಿಂದ ಕಳೆಯಬೇಕೆ ಎಂದು ಹೇಳುತ್ತಾ ವ್ಯಾಸನು ಬಾಡಿದ ಮುಖದ ಧರ್ಮಜನನ್ನೆತ್ತಿದನು.

ಅರ್ಥ:
ಮುನಿ: ಋಷಿ; ನೃಪ: ರಾಜ; ನೃಪಮಂದಿರ: ಅರಮನೆ; ಹೊಗಲು: ಬರಲು; ಎದ್ದು: ಮೇಲೇಳು; ಪದ: ಚರಣ; ಸಂದಣಿಸು: ಗುಂಪು; ಚಾಚು: ಹರಡು; ಮಕುಟ: ಕಿರೀಟ; ಅವನಿಪಾಲಕ: ರಾಜ; ನೊಂದು: ನೋವು; ಸಂಗತಿ: ವಿಷಯ, ವಿಚಾರ; ಆನಂದ: ಸಂತಸ; ಕಂದು: ಬಾಡು; ಮೋರೆ: ಮುಖ; ಮಹಿಪತಿ: ರಾಜ; ನೆಗಹು: ತಬ್ಬಿಕೊ; ಕರುಣ: ದಯೆ;

ಪದವಿಂಗಡಣೆ:
ಬಂದು+ ವೇದವ್ಯಾಸ+ಮುನಿ +ನೃಪ
ಮಂದಿರವ +ಹೊಗಲ್+ಎದ್ದು +ಪದದಲಿ
ಸಂದಣಿಸಿ +ಚಾಚಿದನು +ಮಕುಟವನ್+ಅವನಿಪಾಲಕನು
ನೊಂದವರು +ಸತ್ಸಂಗತಿಯಲ್
ಆನಂದವಡೆವುದ್+ಎನುತ್ತ +ಮುನಿಪತಿ
ಕಂದು +ಮೋರೆಯ +ಮಹಿಪತಿಯ +ನೆಗಹಿದನು +ಕರುಣದಲಿ

ಅಚ್ಚರಿ:
(೧) ಯುಧಿಷ್ಠಿರನ ಸ್ಥಿತಿಯನ್ನು ಚಿತ್ರಿಸುವ ಪರಿ – ಮುನಿಪತಿ ಕಂದು ಮೋರೆಯ ಮಹಿಪತಿಯ ನೆಗಹಿದನು ಕರುಣದಲಿ
(೨) ನಮಸ್ಕರಿಸಿದನು ಎಂದು ಹೇಳುವ ಪರಿ – ಪದದಲಿ ಸಂದಣಿಸಿ ಚಾಚಿದನು ಮಕುಟವನವನಿಪಾಲಕನು