ಪದ್ಯ ೧೭: ಮಾದ್ರಿಯು ನೋವಿನಿಂದ ಏನು ನುಡಿದಳು?

ಅಕಟ ಪಾಂಡು ಮಹೀಶ ವಿಷಕ
ನ್ನಿಕೆಯನೆನ್ನನು ಮುಟ್ಟಿದೈ ಬೇ
ಡಕಟ ಕೆಡಿಸದಿರೆನ್ನೆನೇ ತಾನರಿಯನೇ ಹದನ
ಪ್ರಕಟ ಕುರುಕುಲ ತಿಲಕರೀ ಬಾ
ಲಕರನಾರಿಗೆ ಕೊಟ್ಟೆ ತನ್ನೊಡ
ನಕಟ ಮುನಿದೈ ಮಾತಾನಾಡೆಂದೊರಲಿದಳು ಮಾದ್ರಿ (ಆದಿ ಪರ್ವ, ೫ ಸಂಧಿ, ೧೭ ಪದ್ಯ)

ತಾತ್ಪರ್ಯ:
ಅಯ್ಯೋ, ಪಾಂಡುಮಹಾರಾಜನೇ, ವಿಷಕನ್ಯೆಯಾದ ನನ್ನನ್ನು ಮುಟ್ಟಿದೆ, ನಿನಗೆ ಗೊತ್ತಿರಲಿಲ್ಲವೇ? ಬೇಡ, ಕೆಡಿಸಬೇಡೆಂದು ಹೇಳಲಿಲ್ಲವೇ? ಕುರುಕುಲವಂಶ ತಿಲಕರಾದ ಈ ಮಕ್ಕಳನ್ನು ಯಾರಿಗೆ ಕೊಟ್ಟುಹೋದೆ? ಅಯ್ಯೋ ನನ್ನ ಮೇಲೆ ಸಿಟ್ಟಾದೆಯಾ? ಮಾತನಾಡು ಎಂದು ಮಾದ್ರಿಯು ಅರಚಿದಳು.

ಅರ್ಥ:
ಅಕಟ: ಅಯ್ಯೋ; ಮಹೀಶ: ರಾಜ; ವಿಷ: ಗರಳ, ನಂಜು; ಕನ್ನಿಕೆ: ಹೆಣ್ಣು; ಮುಟ್ಟು: ತಾಗು; ಬೇಡ: ತ್ಯಜಿಸು; ಕೆಡಿಸು: ಹಾಳುಮಾಡು; ಅರಿ: ತಿಳಿ; ಹದ: ಸ್ಥಿತಿ; ಪ್ರಕಟ: ಸ್ಪಷ್ಟವಾದುದು, ನಿಚ್ಚಳವಾದುದು; ತಿಲಕ: ಶ್ರೇಷ್ಠ; ಬಾಲಕ: ಮಕ್ಕಳು; ಕೊಡು: ನೀಡು; ಮುನಿ: ಕೋಪ; ಮಾತು: ವಾಣಿ; ಒರಲು: ಅರಚು, ಕೂಗಿಕೊಳ್ಳು;

ಪದವಿಂಗಡಣೆ:
ಅಕಟ+ ಪಾಂಡು +ಮಹೀಶ +ವಿಷ+ಕ
ನ್ನಿಕೆಯನ್+ಎನ್ನನು +ಮುಟ್ಟಿದೈ +ಬೇಡ್
ಅಕಟ +ಕೆಡಿಸದಿರ್+ಎನ್ನ್+ಏನೇ +ತಾನರಿಯನೇ +ಹದನ
ಪ್ರಕಟ+ ಕುರುಕುಲ +ತಿಲಕರ್+ಈ+ ಬಾ
ಲಕರನ್+ಆರಿಗೆ +ಕೊಟ್ಟೆ +ತನ್ನೊಡನ್
ಅಕಟ +ಮುನಿದೈ +ಮಾತಾನಾಡೆಂದ್+ಒರಲಿದಳು +ಮಾದ್ರಿ

ಅಚ್ಚರಿ:
(೧) ಅಕಟ – ೧, ೩, ೬ ಸಾಲಿನ ಮೊದಲ ಪದ
(೨) ಅಕಟ, ಪ್ರಕಟ – ಪ್ರಾಸ ಪದಗಳು