ಪದ್ಯ ೨೨: ಜಾಹ್ನವಿಯು ಮಗುವನ್ನು ಎಲ್ಲಿಗೆ ಸೇರಿಸಿದಳು?

ತಾಯೆ ಬಲ್ಲಂದದಲಿ ಕಂದನ
ಕಾಯಿ ಮೇಣ್ ಕೊಲ್ಲೆನುತ ಕಮಲದ
ಳಾಯತಾಕ್ಷಿ ಕುಮಾರಕನ ಹಾಯ್ಕಿದಳು ಮಡುವಿನಲಿ
ರಾಯಕೇಳೈ ಸಕಲಲೋಕದ
ತಾಯಲಾ ಜಾಹ್ನವಿ ತರಂಗದಿ
ನೋಯಲೀಯದೆ ಮುಳುಗಲೀಯದೆ ಚಾಚಿದಳು ತಡಿಗೆ (ಆದಿ ಪರ್ವ, ೩ ಸಂಧಿ, ೨೨ ಪದ್ಯ)

ತಾತ್ಪರ್ಯ:
ಕುಂತಿಯು ಗಂಗಾದೇವಿಗೆ ಅಮ್ಮಾ, ನೀನಗೆ ತಿಳಿದ ಹಾಗೆ ಮಾಡು, ಈ ಮಗುವನ್ನು ಕಾಪಾಡು ಇಲ್ಲವೆ ಕೊಲ್ಲು ಎಂದು ಹೇಳಿ, ಗಂಗಾನದಿಯ ಮಡುವಿನಲ್ಲಿ ಆ ಮಗುವನ್ನು ಹಾಕಿದಳು. ರಾಜ ಜನಮೇಜಯ ಕೇಳು, ಸಕಲಲೋಕಕ್ಕೂ ತಾಯಿಯಾದ ಗಂಗೆಯು ಆ ಮಗುವು ಮುಳುಗದಂತೆ, ನೋಯದಂತೆ ನದಿಯ ತೀರಕ್ಕೆ ಕರೆತಂದು ಬಿಟ್ಟಳು.

ಅರ್ಥ:
ತಾಯಿ: ಮಾತೆ; ಬಲ್ಲೆ: ತಿಳಿ; ಕಂದ: ಮಗು; ಕಾಯಿ: ರಕ್ಷಿಸು; ಮೇಣ್; ಅಥವ; ಕೊಲ್ಲು: ಸಾಯಿಸು; ಕಮಲದಳಾಯತಾಕ್ಷಿ: ಕಮಲದಂತಹ ಕಣ್ಣುಳ್ಳ; ಕುಮಾರ: ಮಗ; ಹಾಯ್ಕು: ಇಡು, ಇರಿಸು; ಮಡು: ಕೊಳ, ಸರೋವರ ; ರಾಯ: ರಾಜ; ಕೇಳು: ಆಲಿಸು; ಸಕಲ: ಎಲ್ಲಾ; ಲೋಕ: ಜಗತ್ತು; ಜಾಹ್ನವಿ: ಗಂಗೆ; ತರಂಗ: ಅಲೆ; ನೋವು: ಪೆಟ್ಟು; ಮುಳುಗು: ತೋಯು, ನೀರಿನಲ್ಲಿ ಮೀಯು; ಚಾಚು: ಹರಡು; ತಡಿ: ದಡ;

ಪದವಿಂಗಡಣೆ:
ತಾಯೆ +ಬಲ್ಲಂದದಲಿ +ಕಂದನ
ಕಾಯಿ +ಮೇಣ್ +ಕೊಲ್ಲೆನುತ +ಕಮಲದ
ಳಾಯತಾಕ್ಷಿ+ ಕುಮಾರಕನ +ಹಾಯ್ಕಿದಳು +ಮಡುವಿನಲಿ
ರಾಯ+ಕೇಳೈ +ಸಕಲ+ಲೋಕದ
ತಾಯಲಾ +ಜಾಹ್ನವಿ+ ತರಂಗದಿ
ನೋಯಲೀಯದೆ +ಮುಳುಗಲೀಯದೆ +ಚಾಚಿದಳು +ತಡಿಗೆ

ಅಚ್ಚರಿ:
(೧) ಜಾಹ್ನವಿಯ ಕಾಳಜಿ – ಸಕಲಲೋಕದ ತಾಯಲಾ ಜಾಹ್ನವಿ ತರಂಗದಿ ನೋಯಲೀಯದೆ ಮುಳುಗಲೀಯದೆ ಚಾಚಿದಳು ತಡಿಗೆ

ಪದ್ಯ ೯: ಭೀಮನ ಶಿರಸ್ತ್ರಾಣವನ್ನು ದುರ್ಯೋಧನನು ಹೇಗೆ ಹೊಡೆದನು?

ಹೊಕ್ಕು ಕುರುಪತಿ ಭೀಮಸೇನನ
ನಿಕ್ಕಿದನು ಕಂದದಲಿ ಗದೆಯನು
ಸೆಕ್ಕಿದನು ವಾಮಾಂಗದಲಿ ಪವಮಾನನಂದನನ
ಜಕ್ಕುಲಿಸಿದವೊಲಾಯ್ತು ಜರೆದು ನ
ಭಕ್ಕೆ ಪುಟನೆಗೆದನಿಲಜನ ಸೀ
ಸಕ್ಕೆ ಹೊಯ್ದಾರಿದನು ಕೌರವನೃಪತಿ ಖಾತಿಯಲಿ (ಗದಾ ಪರ್ವ, ೭ ಸಂಧಿ, ೯ ಪದ್ಯ)

ತಾತ್ಪರ್ಯ:
ಕೌರವನು ಮುನ್ನುಗ್ಗಿ ಭೀಮನ ಹೆಗಲನ್ನು ಗದೆಯಿಮ್ದ ಹೊಡೆದು, ಎಡ ಪಕ್ಕೆಯಲ್ಲಿ ಗದೆಯನ್ನು ಸಿಕ್ಕಿಸಿದನು. ಭೀಮನನ್ನು ಜರೆದು ಮೇಲಕ್ಕೆ ಹಾರಿ ಭೀಮನ ಶಿರಸ್ತ್ರಾನವನ್ನು ಹೊಡೆದು ಕೋಪದಿಂದ ಗರ್ಜಿಸಿದನು.

ಅರ್ಥ:
ಹೊಕ್ಕು: ಸೇರು; ಇಕ್ಕು: ಹೊಡೆ; ಕಂದ: ಹೆಗಲು; ಗದೆ: ಮುದ್ಗರ; ಸೆಕ್ಕು: ಕುಗ್ಗುವಿಕೆ, ಹಿಡಿದೆಳೆ; ವಾಮಾಂಗ: ಎಡಭಾಗ; ನಂದನ: ಮಗ; ಪವಮಾನ: ವಾಯು; ಜಕ್ಕುಲಿ: ಕಂಕುಳು, ಕಕ್ಷ; ಜರೆ: ಬಯ್ಯು, ಬೀಳಿಸು; ನಭ: ಆಗಸ; ಪುಟ:ಪುಟಿಗೆ, ನೆಗೆತ; ನೆಗೆ: ಜಿಗಿ; ಅನಿಲಜ: ವಾಯುಪುತ್ರ; ಸೀಸಕ: ಶಿರಸ್ತ್ರಾಣ; ಹೊಯ್ದು: ಹೊಡೆ; ನೃಪತಿ: ರಾಜ; ಖಾತಿ: ಕೋಪ;

ಪದವಿಂಗಡಣೆ:
ಹೊಕ್ಕು +ಕುರುಪತಿ +ಭೀಮಸೇನನನ್
ಇಕ್ಕಿದನು +ಕಂದದಲಿ +ಗದೆಯನು
ಸೆಕ್ಕಿದನು +ವಾಮಾಂಗದಲಿ +ಪವಮಾನ+ನಂದನನ
ಜಕ್ಕುಲಿಸಿದವೊಲಾಯ್ತು +ಜರೆದು +ನ
ಭಕ್ಕೆ+ ಪುಟನೆಗೆದ್+ಅನಿಲಜನ +ಸೀ
ಸಕ್ಕೆ+ ಹೊಯ್ದಾರಿದನು+ ಕೌರವ+ನೃಪತಿ +ಖಾತಿಯಲಿ

ಅಚ್ಚರಿ:
(೧) ಭೀಮಸೇನ, ಪವಮಾನನಮ್ದನ, ಅನಿಲಜ – ಭೀಮನನ್ನು ಕರೆದ ಪರಿ
(೨) ಹೊಡೆದ ಪರಿ – ನಭಕ್ಕೆ ಪುಟನೆಗೆದನಿಲಜನ ಸೀಸಕ್ಕೆ ಹೊಯ್ದಾರಿದನು ಕೌರವನೃಪತಿ ಖಾತಿಯಲಿ

ಪದ್ಯ ೩೨: ದುರ್ಯೋಧನನು ಯಾವ ಪ್ರಮಾಣವನ್ನು ಮಾಡಿದನು?

ಆಳು ಬಿದ್ದುದು ಬೇಹ ನಾಯಕ
ರೋಲಗಿಸಿತಮರಿಯರನೀ ರಣ
ದೂಳಿಗಕೆ ನಾನೊಬ್ಬನೆಂದೇ ನಿನಗೆ ತೋರಿತಲಾ
ಆಳ ಹಂಗನು ನಾಯಕರ ಬಿಲು
ಗೋಲ ಜೋಡಿನ ಬಲವ ಚಿತ್ತದೊ
ಳಾಳಿದೊಡೆ ಧೃತರಾಷ್ಟ್ರ ರಾಯನ ಕಂದನಲ್ಲೆಂದ (ಗದಾ ಪರ್ವ, ೩ ಸಂಧಿ, ೩೨ ಪದ್ಯ)

ತಾತ್ಪರ್ಯ:
ದುರ್ಯೋಧನನು ಮಾತನಾಡುತ್ತಾ, ಸೈನಿಕರು ಸತ್ತರು, ಸೇನಾನಾಯಕರು ಅಪ್ಸರೆಯರನ್ನು ಓಲೈಸಿದರು, ಯುದ್ಧಮಾಡಲು ನಾನೊಬ್ಬನೇ ಆದೆ ಎಂದು ನಿನಗೆ ತೋರಿತಲ್ಲವೇ? ಆಳುಗಳ ಹಂಗನ್ನು ಸೇನಾನಾಯಕರ ಬಿಲ್ಲು ಕವಚಗಳ ಬಲವನ್ನೂ ಮನಸ್ಸಿನಲ್ಲಾದರೂ ಬಯಸಿದರೆ ನಾನು ಧೃತರಾಷ್ಟ್ರ ಮಗನೇ ಅಲ್ಲ.

ಅರ್ಥ:
ಆಳು: ಸೇವಕ; ಬಿದ್ದು: ಬೀಳು, ಕುಸಿ; ಬೇಹ: ಬೇಕಾದ; ನಾಯಕ: ಒಡೆಯ; ಓಲಗಿಸು: ಉಪಚರಿಸು; ಅಮರಿ: ಅಪ್ಸರೆ; ರಣ: ಯುದ್ಧ; ಊಳಿಗ: ಕೆಲಸ, ಕಾರ್ಯ; ತೋರು: ಗೋಚರಿಸು; ಹಂಗ: ದಾಕ್ಷಿಣ್ಯ, ಆಭಾರ; ಕೋಲ: ಬಾಣ; ಜೋಡು: ಜೊತೆ, ಜೋಡಿ; ಬಲ: ಶಕ್ತಿ, ಸೇನೆ; ಚಿತ್ತ: ಮನಸ್ಸು; ರಾಯ: ರಾಜ; ಕಂದ: ಮಗ;

ಪದವಿಂಗಡಣೆ:
ಆಳು +ಬಿದ್ದುದು +ಬೇಹ +ನಾಯಕರ್
ಓಲಗಿಸಿತ್+ಅಮರಿಯರನ್+ಈ+ ರಣ
ದೂಳಿಗಕೆ +ನಾನೊಬ್ಬನೆಂದೇ +ನಿನಗೆ +ತೋರಿತಲಾ
ಆಳ +ಹಂಗನು +ನಾಯಕರ+ ಬಿಲು
ಗೋಲ +ಜೋಡಿನ +ಬಲವ+ ಚಿತ್ತದೊಳ್
ಆಳಿದೊಡೆ +ಧೃತರಾಷ್ಟ್ರ +ರಾಯನ +ಕಂದನಲ್ಲೆಂದ

ಅಚ್ಚರಿ:
(೧) ನಾಯಕರು ಸತ್ತರು ಎಂದು ಹೇಳುವ ಪರಿ – ಬೇಹ ನಾಯಕರೋಲಗಿಸಿತಮರಿಯರನೀ

ಪದ್ಯ ೧೭: ಸಂಜಯನು ಯಾರ ಪಾದಗಳಲ್ಲಿ ಬಿದ್ದನು?

ಬಂದು ಕಂಡನು ರಾಜವನ ಮಾ
ಕಂದನನು ಧೃತರಾಷ್ಟ್ರ ರಾಯನ
ಕಂದನನು ದೌರ್ಜನ್ಯವಲ್ಲೀ ವಿಪುಳಕಂದನನು
ಮುಂದುವರಿದ ವಿಲೋಚನಾಂಬುಗ
ಳಿಂದ ಸೈರಣೆ ಮಿಗದೆ ಸಂಜಯ
ನಂದು ದೊಪ್ಪನೆ ಕೆಡೆದು ಹೊರಳಿದನರಸನಂಘ್ರಿಯಲಿ (ಗದಾ ಪರ್ವ, ೩ ಸಂಧಿ, ೧೭ ಪದ್ಯ)

ತಾತ್ಪರ್ಯ:
ಸಂಜಯನು ಹೋಗಿ ರಾಜವನದ ಮಾವಿನಮರದಂತಿದ್ದ ಧೃತರಾಷ್ಟ್ರನ ಮಗನನ್ನು, ದುಷ್ಟತನದ ಬಳ್ಳಿಯು ಹುಟ್ಟುವ ಗಡ್ಡೆಯನ್ನು ಕಂಡನು. ಕೌರವನ ದುಃಸ್ಥಿತಿಯನ್ನು ಕಂಡು ಕಣ್ಣೀರಿನ ಹೊಳೆ ಹರಿಸಿ, ಸಹಿಸಿಕೊಳ್ಳಲಾಗದೆ ಕೌರವನ ಪಾದಗಳ ಮೇಲೆ ದೊಪ್ಪನೆ ಬಿದ್ದನು.

ಅರ್ಥ:
ಬಂದು: ಆಗಮಿಸು; ಕಂಡು: ನೋಡು; ರಾಜ: ನೃಪ; ವನ: ಕಾಡು; ಮಾಕಂದ: ಮಾವು; ರಾಯ: ರಾಜ; ಕಂದ: ಮಗ; ದೌರ್ಜನ್ಯ: ದುಷ್ಟತನ; ವಲ್ಲಿ: ಲತೆ, ಬಳ್ಳಿ; ವಿಪುಳ: ಬಹಳ; ಕಂದ: ಗೆಡ್ಡೆಗಳು; ವಿಲೋಚನ:ಕಣ್ಣು; ಅಂಬು: ನೀರು; ಸೈರಣೆ: ಸಮಾಧಾನ, ತಾಳ್ಮೆ, ಸಹನೆ; ಮಿಗು: ಹೆಚ್ಚಾಗು; ದೊಪ್ಪನೆ: ಒಮ್ಮಲೆ; ಕೆಡೆ: ಬೀಳು, ಕುಸಿ; ಹೊರಳು: ಉರುಳಾಡು; ಅರಸ: ರಾಜ; ಅಂಘ್ರಿ: ಪಾದ;

ಪದವಿಂಗಡಣೆ:
ಬಂದು +ಕಂಡನು+ ರಾಜವನ+ ಮಾ
ಕಂದನನು +ಧೃತರಾಷ್ಟ್ರ +ರಾಯನ
ಕಂದನನು +ದೌರ್ಜನ್ಯ+ವಲ್ಲೀ +ವಿಪುಳ+ಕಂದನನು
ಮುಂದುವರಿದ +ವಿಲೋಚನಾಂಬುಗ
ಳಿಂದ+ ಸೈರಣೆ +ಮಿಗದೆ +ಸಂಜಯ
ನಂದು+ ದೊಪ್ಪನೆ +ಕೆಡೆದು +ಹೊರಳಿದನ್+ಅರಸನ್+ಅಂಘ್ರಿಯಲಿ

ಅಚ್ಚರಿ:
(೧) ದುರ್ಯೋಧನನನ್ನು ಕರೆದ ಪರಿ, ಕಂದ ಪದದ ಬಳಕೆ – ರಾಜವನ ಮಾಕಂದನನು, ಧೃತರಾಷ್ಟ್ರ ರಾಯನ ಕಂದನನು, ದೌರ್ಜನ್ಯವಲ್ಲೀ ವಿಪುಳಕಂದನನು
(೨) ರಾಜ, ಅರಸ, ರಾಯ – ಸಮಾನಾರ್ಥಕ ಪದ

ಪದ್ಯ ೧೫: ಆನೆ ಮತ್ತು ಕುದುರೆಗಳು ಹೇಗೋಡಿದವು?

ಬೆದರಿ ಗಜ ಮುಂಡಾಸನದಲೋ
ಡಿದವು ಚಮರೀಮೃಗದವೊಲು ಬಲು
ಗುದುರೆ ಹಾಯ್ದವು ಕಂದದಲಿ ಬಲುನೊಗನನಸಬಡಿದು
ಕುದುರೆಯೆಳೆದವು ಬರಿರಥವನೋ
ಡಿದ ಪದಾತಿಯ ಬಿಸುಟ ಕೈದುವ
ಹೊದೆದುದಿಳೆ ಕಳನಗಲದಲಿ ಕಂಡೆನು ಮಹಾದ್ಭುತವ (ಗದಾ ಪರ್ವ, ೧ ಸಂಧಿ, ೧೫ ಪದ್ಯ)

ತಾತ್ಪರ್ಯ:
ಜೋದರು ರಣರಂಗಕ್ಕೆ ಧುಮುಕಲು ಆನೆಗಳು ಬರಿಯ ಆಸನಗಳನ್ನು ಹೊತ್ತು ಓಡಿ ಹೋದವು. ರಥದ ಕುದುರೆಗಳು ನೊಗವನ್ನು ಕಿತ್ತೆಸೆದು ಹೋದವು ಬರಿಯ ರಥಗಳನ್ನು ಕುದುರೆಗಳು ಎಳೆಯುತ್ತಾ ಓಡಿದವು. ಕಾಲಾಳುಗಳೆಸೆದ ಆಯುಧಗಳು ರಣರಂಗದ ನೆಲವನ್ನು ಮುಚ್ಚಿದವು.

ಅರ್ಥ:
ಬೆದರು: ಹೆದರು; ಗಜ: ಆನೆ; ಮುಂಡಾಸನ: ತಲೆಕೆಳಗಾಗು; ಓಡು: ಧಾವಿಸು; ಚಮರ: ಬಾಲದಲ್ಲಿ ಉದ್ದವಾದ ಕೂದಲುಳ್ಳ ಒಂದು ಮೃಗ; ಮೃಗ: ಪ್ರಾಣಿ; ಕುದುರೆ: ಅಶ್ವ; ಹಾಯ್ದು: ಹೊಡೆ; ಕಂದ: ಹೆಗಲು; ಬಲು: ದೊಡ್ಡ; ನೊಗ: ಪಲ್ಲಕ್ಕಿಯನ್ನು ಹೊರುವ ಸಾಧನ, ಚಕ್ಕಡಿ ಎಳೆಯಲು ಎತ್ತು ಕಟ್ಟುವ ಸಾಧನ; ಬಡಿ: ಹೊಡೆ, ತಾಡಿಸು; ಎಳೆ: ತನ್ನ ಕಡೆಗೆ ಸೆಳೆದುಕೊ, ಆಕರ್ಷಿಸು; ಬರಿ: ಕೇವಲ; ರಥ: ಬಂಡಿ; ನೋಡು: ವೀಕ್ಷಿಸು; ಪದಾತಿ: ಕಾಲಾಳು; ಬಿಸುಟು: ಹೊರಹಾಕು; ಕೈದು: ಆಯುಧ; ಹೊದೆ:ಬಾಣಗಳನ್ನಿಡುವ ಕೋಶ, ಬತ್ತಳಿಕೆ; ಇಳೆ: ಭೂಮಿ; ಕಳ: ರಣರಂಗ; ಅಗಲ: ವಿಸ್ತಾರ; ಕಂಡು: ನೋಡು; ಅದ್ಭುತ: ಆಶ್ಚರ್ಯ;

ಪದವಿಂಗಡಣೆ:
ಬೆದರಿ+ ಗಜ+ ಮುಂಡಾಸನದಲ್
ಓಡಿದವು +ಚಮರೀಮೃಗದವೊಲು+ ಬಲು
ಕುದುರೆ +ಹಾಯ್ದವು +ಕಂದದಲಿ +ಬಲುನೊಗನನ್+ಅಸಬಡಿದು
ಕುದುರೆ+ಎಳೆದವು+ ಬರಿರಥವನ್
ಓಡಿದ +ಪದಾತಿಯ +ಬಿಸುಟ +ಕೈದುವ
ಹೊದೆದುದ್+ಇಳೆ +ಕಳನ್+ಅಗಲದಲಿ +ಕಂಡೆನು +ಮಹಾದ್ಭುತವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬೆದರಿ ಗಜ ಮುಂಡಾಸನದಲೋಡಿದವು ಚಮರೀಮೃಗದವೊಲು

ಪದ್ಯ ೨೪: ಕುದುರೆಯ ಸ್ಥಿತಿ ಹೇಗಿತ್ತು?

ಕಡಿಯಣವ ಕಾರಿದವು ಕಂದವ
ನಡಿಗಡಿಗೆ ಹಾಯ್ಕಿದವು ಸುತ್ತಿದ
ಕುಡಿನೊರೆಯ ಕಟವಾಯ ಲೋಳೆಯ ನಿಮಿರ್ದ ಮೈಲುಳಿಯ
ತಡಿನೆನೆದ ಬಲುಬೆಮರ ಘುಡುಘುಡು
ಘುಡಿಪ ನಾಸಾಶ್ವಾಸ ಲಹರಿಯ
ಕಡುಮನದ ರಥತುರಗ ಮಿಕ್ಕವು ಸರಳಸೂಠಿಯಲಿ (ದ್ರೋಣ ಪರ್ವ, ೧೦ ಸಂಧಿ, ೨೪ ಪದ್ಯ)

ತಾತ್ಪರ್ಯ:
ಕಡಿವಾಣವನ್ನು ದೂರತಳ್ಳಿವೆ, ಕತ್ತನ್ನು ಮತ್ತೆ ಮತ್ತೆ ಕುಗ್ಗಿಸುತ್ತಿವೆ, ಬಾಯಿಯ ಕೊನೆಯಲ್ಲಿ ನೊರೆಯ ಲೋಳೆ ಹೊರಬರುತ್ತಿದೆ, ಮೈಯ ವೇಗೆ ನಿಂತಿದೆ, ಅವುಗಳ ಮೈ ಬೆವರು ತಡಿಗಲನ್ನು ನೆನೆಸಿದೆ, ಉಸಿರು ಘುಡುಘುಡಿಸುತ್ತಿದೆ, ಅವುಗಳ ಮನಸ್ಸಿನ ಶಕ್ತಿ ಬಾಣಗಳ ಹೊಡೆತದಿಂದ ಜರ್ಝರಿತವಾಗಿದೆ ಎಂದು ಅರ್ಜುನನು ಕುದುರೆಯ ಸ್ಥಿತಿಯನ್ನು ವರ್ಣಿಸಿದನು.

ಅರ್ಥ:
ಕಡಿಯಣ: ಕಡಿವಾಣ; ಕಾರು: ಮಳೆಗಾಲ; ಕಂದ: ಹೆಗಲು; ಅಡಿಗಡಿಗೆ: ಮತ್ತೆ ಮತ್ತೆ; ಹಾಯ್ಕು: ಇಡು, ಇರಿಸು; ಸುತ್ತು: ಆವರಿಸು; ಕುಡಿನೊರೆ: ಹೆಚ್ಚಾದ ಬುರುಗು, ಫೇನ; ಕಟವಾಯಿ: ಬಾಯಿಯ ಕೊನೆ; ಲೋಳೆ: ಅ೦ಟಾಗಿರುವ ದ್ರವ್ಯ; ನಿಮಿರ್: ಹರಡು, ವ್ಯಾಪಿಸು; ಲುಳಿ: ರಭಸ; ತಡಿ: ತೇವ, ಒದ್ದೆ, ಎಲ್ಲೆ, ಮಿತಿ; ನೆನೆ: ಒದ್ದೆ; ಬೆಮರು: ಸ್ವೇದ ಜಲ; ಘುಡು: ಶಬ್ದವನ್ನು ವಿವರಿಸುವ ಪದ; ನಾಸ: ಮೂಗು; ಶ್ವಾಸ: ಉಸಿರು; ಲಹರಿ: ರಭಸ, ಅಲೆ; ಮನ: ಮನಸ್ಸು; ರಥ: ಬಂಡಿ; ತುರಗ: ಅಶ್ವ; ಮಿಕ್ಕ: ಉಳಿದ; ಸರಳ: ಬಾಣ; ಸೂಠಿ: ವೇಗ;

ಪದವಿಂಗಡಣೆ:
ಕಡಿಯಣವ +ಕಾರಿದವು +ಕಂದವನ್
ಅಡಿಗಡಿಗೆ +ಹಾಯ್ಕಿದವು +ಸುತ್ತಿದ
ಕುಡಿನೊರೆಯ +ಕಟವಾಯ +ಲೋಳೆಯ +ನಿಮಿರ್ದ +ಮೈಲುಳಿಯ
ತಡಿನೆನೆದ +ಬಲುಬೆಮರ+ ಘುಡುಘುಡು
ಘುಡಿಪ +ನಾಸಾಶ್ವಾಸ +ಲಹರಿಯ
ಕಡುಮನದ +ರಥ+ತುರಗ+ ಮಿಕ್ಕವು +ಸರಳ+ಸೂಠಿಯಲಿ

ಅಚ್ಚರಿ:
(೧)ಉಸಿರನ್ನು ವಿವರಿಸುವ ಪರಿ – ಘುಡುಘುಡುಘುಡಿಪ ನಾಸಾಶ್ವಾಸ ಲಹರಿ
(೨) ಕ ಕಾರದ ತ್ರಿವಳಿ ಪದ – ಕಡಿಯಣವ ಕಾರಿದವು ಕಂದವನಡಿಗಡಿಗೆ

ಪದ್ಯ ೫೧: ದ್ರೋಣನು ಅರ್ಜುನನನ್ನು ಏನೆಂದು ಕರೆದನು?

ಕಂದನಶ್ವತ್ಥಾಮ ಹುಸಿಯೆನ
ಗಿಂದು ಬೇಹ ಕುಮಾರ ನೀ ನಿ
ನ್ನಿಂದ ತನ್ನಯ ಕೀರ್ತಿ ಮೆರೆವುದು ಮೂರುಲೋಕದಲಿ
ತಂದೆ ನಿನಗಾ ಮುನಿಯಲಾಪೆನೆ
ಸಂದುದಾಡಿದ ಭಾಷೆ ನೀ ಹೋ
ಗೆಂದು ಗುಣದಲಿ ಬೀಳುಕೊಟ್ಟನು ದ್ರೋಣನರ್ಜುನನ (ದ್ರೋಣ ಪರ್ವ, ೯ ಸಂಧಿ, ೫೧ ಪದ್ಯ)

ತಾತ್ಪರ್ಯ:
ದ್ರೋಣನು ಉತ್ತರಿಸುತ್ತಾ, ಅರ್ಜುನಾ, ಅಶ್ವತ್ಥಾಮನು ನನ್ನ ಮಗನೆಂಬುದು ಸುಳ್ಳು, ನನಗೆ ಬೇಕಾದ ಪ್ರೀತಿಯ ಮಗನು ನೀನೇ. ನಿನ್ನಿಂದ ನನ್ನ ಕೀರ್ತಿ ಮೂರು ಲೋಕಗಳಲ್ಲೂ ಹರಡುತ್ತದೆ. ಅಪ್ಪಾ, ನಿನ್ನ ಮೇಲೆ ನನಗೆ ಕೋಪವೇ? ನೀನು ಮಾಡಿದ ಪ್ರತಿಜ್ಞೆ ನಡೆದ ಹಾಗೇ, ನೀನಿನ್ನ ತೆರಳು ಎಂದು ಅರ್ಜುನನು ದ್ರೋಣನನ್ನು ಬೀಳುಕೊಟ್ಟನು.

ಅರ್ಥ:
ಕಂದ: ಮಗ; ಹುಸಿ: ಸುಳ್ಳು; ಬೇಹು: ಬೇಕಾದ; ಕುಮಾರ: ಮಗ; ಕೀರ್ತಿ: ಯಶಸ್ಸು; ಮೆರೆ: ಹೊಳೆ; ಲೋಕ: ಜಗತ್ತು; ತಂದೆ: ಅಪ್ಪಾ; ಮುನಿ: ಕೋಪ; ಸಂದು: ಅವಕಾಶ, ಸಂದರ್ಭ, ಪಡೆ; ಆಡು: ಮಾತಾದು; ಭಾಷೆ: ನುಡಿ; ಹೋಗು: ತೆರಳು; ಗುಣ: ನಡತೆ, ಸ್ವಭಾವ; ಬೀಳುಕೊಡು: ತೆರಳು;

ಪದವಿಂಗಡಣೆ:
ಕಂದನ್+ಅಶ್ವತ್ಥಾಮ +ಹುಸಿ+ಎನಗ್
ಇಂದು +ಬೇಹ +ಕುಮಾರ +ನೀ +ನಿ
ನ್ನಿಂದ +ತನ್ನಯ +ಕೀರ್ತಿ +ಮೆರೆವುದು +ಮೂರು+ಲೋಕದಲಿ
ತಂದೆ +ನಿನಗಾ +ಮುನಿಯಲಾಪೆನೆ
ಸಂದುದ್+ಆಡಿದ +ಭಾಷೆ +ನೀ +ಹೋ
ಗೆಂದು +ಗುಣದಲಿ+ ಬೀಳುಕೊಟ್ಟನು +ದ್ರೋಣನ್+ಅರ್ಜುನನ

ಅಚ್ಚರಿ:
(೧) ಅರ್ಜುನನನ್ನು ಹೊಗಳಿದ ಪರಿ – ನಿನ್ನಿಂದ ತನ್ನಯ ಕೀರ್ತಿ ಮೆರೆವುದು ಮೂರುಲೋಕದಲಿ

ಪದ್ಯ ೨೧: ಅರ್ಜುನನು ಹೇಗೆ ದುಃಖಿಸಿದನು?

ಕಂದ ಬಾರೋ ಎನ್ನ ಮನಕಾ
ನಂದ ಬಾರೋ ಬಾಲಕರ ಪೂ
ರ್ಣೇಂದು ಬಾರೋ ರಿಪುಕುಲಾಂತಕ ನಿಪುಣ ಮುಖದೋರೋ
ತಂದೆ ನಿನಗೆನ್ನಲ್ಲಿ ಋಣ ಸಂ
ಬಂಧ ಸವೆದುದೆ ಶಿವ ಶಿವಾ ತಾ
ಮಂದಭಾಗ್ಯಂಗಣುಗ ದಕ್ಕುವನಲ್ಲ ಎನಗೆಂದ (ದ್ರೋಣ ಪರ್ವ, ೮ ಸಂಧಿ, ೨೧ ಪದ್ಯ)

ತಾತ್ಪರ್ಯ:
ಅರ್ಜುನನು ಕೊರಗುತ್ತಾ ಕಂದ ಬಾರೋ, ನನ್ನ ಮನಸ್ಸಿಗೆ ಆನಂದವನ್ನು ನೀಡುವ ಮಗನೆ ಬಾರೋ, ಬಾಲಕರ ನಡುವೆ ಹುಣ್ಣಿಮೆ ಚಂದ್ರನಂತ್ತಿದ್ದವನೇ ಬಾರೋ, ಶತ್ರುಕುಲ ಸಂಹಾರ ನಿಪುಣನೇ ಮುಖದೋರು. ಅಪ್ಪ ನಿನಗೆ ನನ್ನ ಋಣ ಸಂಬಂಧ ತೀರಿತೇ? ಶಿವ ಶಿವಾ ಮಂದಭಾಗ್ಯನಿಗೆ ನೀನು ದಕ್ಕುವವನಲ್ಲ ಎಂದು ದುಃಖಿಸಿದನು.

ಅರ್ಥ:
ಕಂದ: ಮಗು; ಬಾರೋ: ಆಗಮಿಸು; ಆನಂದ: ಹರ್ಷ; ಬಾಲಕ: ಮಕ್ಕಳ; ಪೂರ್ಣೇಂದು: ಹುಣ್ಣಿಮೆ ಚಂದ್ರ; ರಿಪು: ವೈರಿ; ಕುಲ: ವಂಶ; ಅಂತಕ: ಯಮ; ನಿಪುಣ: ನುರಿತ, ಪ್ರವೀಣ; ಮುಖ: ಆನನ; ತಂದೆ: ಪಿತ; ಋಣ: ಹಂಗು; ಸಂಬಂಧ: ಸಂಪರ್ಕ, ಸಹವಾಸ; ಸವೆ: ತೀರು; ಶಿವ: ಶಂಕರ; ಮಂದ: ನಿಧಾನ, ತೀಕ್ಷ್ಣತೆಯನ್ನು ಕಳೆದುಕೊಂಡ; ಭಾಗ್ಯ: ಅದೃಷ್ಟ; ದಕ್ಕು: ಪಡೆ; ಅಣುಗ: ಮಗ; ತೋರೋ – ಪ್ರದರ್ಶಿಸು;

ಪದವಿಂಗಡಣೆ:
ಕಂದ +ಬಾರೋ +ಎನ್ನ +ಮನಕ್
ಆನಂದ +ಬಾರೋ +ಬಾಲಕರ+ ಪೂ
ರ್ಣೇಂದು +ಬಾರೋ +ರಿಪುಕುಲಾಂತಕ +ನಿಪುಣ +ಮುಖ+ತೋರೋ
ತಂದೆ+ ನಿನಗೆನ್ನಲ್ಲಿ +ಋಣ +ಸಂ
ಬಂಧ +ಸವೆದುದೆ +ಶಿವ +ಶಿವಾ +ತಾ
ಮಂದಭಾಗ್ಯಂಗ್+ಅಣುಗ +ದಕ್ಕುವನಲ್ಲ +ಎನಗೆಂದ

ಅಚ್ಚರಿ:
(೧) ಕಂದ ಆನಂದ, ಸಂಬಂಧ, ಮಂದ; ಬಾರೋ, ತೋರೋ – ಪ್ರಾಸ ಪದಗಳು
(೨) ಮಗನ ಪ್ರೀತಿಯನ್ನು ವರ್ಣಿಸುವ ಪರಿ – ಬಾಲಕರ ಪೂರ್ಣೇಂದು ಬಾರೋ ರಿಪುಕುಲಾಂತಕ ನಿಪುಣ ಮುಖದೋರೋ

ಪದ್ಯ ೧೭: ಅರ್ಜುನನು ದುಃಖದಿಂದ ಅಭಿಮನ್ಯುವನ್ನು ಹೇಗೆ ಕರೆದನು?

ಕಂದನಾವೆಡೆ ತನ್ನ ಮೋಹದ
ಸಿಂಧುವಾವೆಡೆ ತನುಜವನ ಮಾ
ಕಂದನಾವೆಡೆ ಹೇಳೆನುತ ಫಲುಗುಣನು ತೊದಳಿಸುತ
ನೊಂದು ಮನದಲಿ ಪಾರ್ಥನಾ ಸತಿ
ಯಂದವನು ಕಾಣುತ್ತ ಬೆದೆಬೆದೆ
ಬೆಂದು ಯಮರಾಜನ ಕುಮಾರನ ಮೊಗವ ನೋಡಿದನು (ದ್ರೋಣ ಪರ್ವ, ೮ ಸಂಧಿ, ೧೭ ಪದ್ಯ)

ತಾತ್ಪರ್ಯ:
ಅರ್ಜುನನು ತೊದಲುತ್ತಾ, ಮಗನೆಲ್ಲಿ, ನನ್ನ ಪ್ರೀತಿಯ ಸಾಗರವೆಲ್ಲಿ, ಬಾಲಕರ ಉದ್ಯಾನದ ಮಾವಿನ ಮರವೆಲ್ಲಿ ಹೇಳು ಎಂದು ಮನಸ್ಸಿನಲ್ಲಿ ನೊಂದು, ಸುಭದ್ರೆಯ ಸ್ಥಿತಿಯನ್ನು ನೋಡಿ, ಬೆದೆ ಬೆದೆ ಬೆಂದು ಯುಧಿಷ್ಠಿರನ ಮುಖವನ್ನು ನೋಡಿದನು.

ಅರ್ಥ:
ಕಂದ: ಮಗು; ಮೋಹ: ಪ್ರೀತಿ; ಸಿಂಧು: ಸಾಗರ; ತನುಜ: ಮಗ; ವನ: ಉದ್ಯಾನವನ, ಕಾಡು; ಮಾಕಂದ: ಮಾವಿನ ಮರ; ಹೇಳು: ತಿಳಿಸು; ತೊದಲು: ಸರಿಯಾಗಿ ಮಾತನಾಡದ ಸ್ಥಿತಿ; ನೊಂದು: ನೋವನ್ನುಂಡು; ಮನ: ಮನಸ್ಸು; ಸತಿ: ಹೆಂಡತಿ; ಅಂದ: ಸ್ಥಿತಿ; ಕಾಣು: ತೋರು; ಬೆದೆ: ಬೇಯುವುದನ್ನು ವರ್ಣಿಸುವ ಪದ; ಬೆಂದು: ಸಂಕಟಕ್ಕೊಳಗಾಗು; ಯಮ: ಜವ; ಕುಮಾರ: ಮಗ; ಮೊಗ: ಮುಖ; ನೋಡು: ವೀಕ್ಷಿಸು;

ಪದವಿಂಗಡಣೆ:
ಕಂದನ್+ಆವೆಡೆ +ತನ್ನ +ಮೋಹದ
ಸಿಂಧುವ್+ಆವೆಡೆ +ತನುಜ+ವನ+ ಮಾ
ಕಂದನ್+ಆವೆಡೆ +ಹೇಳೆನುತ +ಫಲುಗುಣನು+ ತೊದಳಿಸುತ
ನೊಂದು +ಮನದಲಿ +ಪಾರ್ಥನಾ +ಸತಿ
ಅಂದವನು+ ಕಾಣುತ್ತ +ಬೆದೆ+ಬೆದೆ
ಬೆಂದು +ಯಮರಾಜನ +ಕುಮಾರನ +ಮೊಗವ +ನೋಡಿದನು

ಅಚ್ಚರಿ:
(೧) ಧರ್ಮಜನನ್ನು ಯಮರಾಜನ ಕುಮಾರ ಎಂದು ಕರೆದಿರುವುದು
(೨) ಅಭಿಮನ್ಯುವನ್ನು ಕರೆಯುವ ಪರಿ – ತನ್ನ ಮೋಹದ ಸಿಂಧುವಾವೆಡೆ ತನುಜವನ ಮಾಕಂದನಾವೆಡೆ
(೩) ಕಂದ, ಮಾಕಂದ – ಪದದ ಬಳಕೆ

ಪದ್ಯ ೧೦: ಅರ್ಜುನನು ಏನು ಯೋಚಿಸುತ್ತಾ ಅರಮನೆಗೆ ಬಂದನು?

ತಂದೆ ಧೃತಿಗೆಡಬೇಡ ನಡೆ ನಿಜ
ನಂದನನನಾರೈವೆವೆನುತೈ
ತಂದು ಕೋಟೆಯ ಕಳೆದು ಬಂದರು ರಾಜ ಬೀದಿಯಲಿ
ಕಂದನಿರವನು ಕಾಣಲಾಪೆನೊ
ಕೊಂದರೆಂಬುದು ಕೇಳುವೆನೊ ತನ
ಗಿಂದು ಗತಿಯೇನೆನುತ ಬಂದನು ರಾಜಮಂದಿರಕೆ (ದ್ರೋಣ ಪರ್ವ, ೮ ಸಂಧಿ, ೧೦ ಪದ್ಯ)

ತಾತ್ಪರ್ಯ:
ಅಪ್ಪ ಅರ್ಜುನ ಧೈರ್ಯಗೆಡಬೇಡ, ನಡೆ ಅಭಿಮನ್ಯುವನ್ನು ಹುಡುಕೋಣ, ಎನ್ನುತ್ತಾ ಕೋಟೆಯನ್ನು ದಾಟಿ ರಾಜಬೀದಿಯಲ್ಲಿ ರಥವನ್ನು ನಡೆಸಿದನು. ಮಗನನ್ನು ನೋಡುವೆನೋ ಅಥವ ಅವನನ್ನು ಕೊಂದರೆಂಬ ವಾರ್ತೆಯನ್ನು ಕೇಳುವೆನೋ, ನನ್ನ ಗತಿಯೇನು ಎಂದು ಯೋಚಿಸುತ್ತಾ ರಾಜಮಂದಿರಕ್ಕೆ ಬಂದನು.

ಅರ್ಥ:
ತಂದೆ: ಪಿತ; ಧೃತಿ: ಧೈರ್ಯ, ಧೀರತನ; ಕೆಡು: ಹಾಳಾಗು; ನಡೆ: ಚಲಿಸು; ನಂದನ: ಮಗ; ಆರೈ: ಉಪಚರಿಸು, ರಕ್ಷಿಸು; ಐತಂದು: ಬಂದು ಸೇರು; ಕೋಟೆ: ದುರ್ಗ; ಬಂದು: ಆಗಮಿಸು; ರಾಜ: ಅರಸ; ಬೀದಿ: ಮಾರ್ಗ; ಕಂದ: ಮಗು; ಕಾಣು: ತೋರು; ಕೊಂದು: ಸಾಯಿಸು; ಕೇಳು: ಆಲಿಸು; ಗತಿ: ಸ್ಥಿತಿ; ಬಂದು: ಆಗಮಿಸು; ರಾಜಮಂದಿರ: ಅರಮನೆ;

ಪದವಿಂಗಡಣೆ:
ತಂದೆ+ ಧೃತಿಗೆಡಬೇಡ +ನಡೆ +ನಿಜ
ನಂದನನನ್+ಆರೈವೆವ್+ಎನುತ್+
ಐತಂದು +ಕೋಟೆಯ +ಕಳೆದು +ಬಂದರು +ರಾಜ +ಬೀದಿಯಲಿ
ಕಂದನಿರವನು +ಕಾಣಲಾಪೆನೊ
ಕೊಂದರೆಂಬುದು +ಕೇಳುವೆನೊ +ತನ
ಗಿಂದು +ಗತಿಯೇನೆನುತ+ ಬಂದನು +ರಾಜಮಂದಿರಕೆ

ಅಚ್ಚರಿ:
(೧) ಅರ್ಜುನನನ್ನು ಸಂತೈಸುವ ಪರಿ – ತಂದೆ ಧೃತಿಗೆಡಬೇಡ
(೨) ಕ ಕಾರದ ಸಾಲು ಪದಗಳು – ಕಂದನಿರವನು ಕಾಣಲಾಪೆನೊ ಕೊಂದರೆಂಬುದು ಕೇಳುವೆನೊ