ಪದ್ಯ ೧೯: ಸೈನಿಕರು ಯಾರ ಆಶ್ರಯಕ್ಕೆ ಬಂದರು?

ಏನ ಹೇಳುವೆನಮಮ ಬಹಳಾಂ
ಭೋನಿಧಿಯ ವಿಷದುರಿಯ ಧಾಳಿಗೆ
ದಾನವಾಮರರಿಂದುಮೌಳಿಯ ಮರೆಯ ಹೊಗುವಂತೆ
ದಾನವಾಚಳ ಮಥಿತ ಸೇನಾಂ
ಭೋನಿಧಿಯ ಪರಿಭವದ ವಿಷದುರಿ
ಗಾ ನರೇಂದ್ರನಿಕಾಯ ಹೊಕ್ಕುದು ರವಿಸುತನ ಮರೆಯ (ದ್ರೋಣ ಪರ್ವ, ೧೬ ಸಂಧಿ, ೧೯ ಪದ್ಯ)

ತಾತ್ಪರ್ಯ:
ಅಬ್ಬಬ್ಬಾ, ಹಾಲಾಹಲ ವಿಷದ ಉರಿಯನ್ನು ತಡೆದುಕೊಳ್ಳಲಾಗದೇ, ದೇವತೆಗಳೂ ರಾಕ್ಷಸರೂ ಶಿವನ ಮರೆಹೊಕ್ಕಂತೆ, ಘಟೋತ್ಕಚ ಪರ್ವತದಿಂದ ಕಡೆಯಲ್ಪಟ್ಟ ಸೈನ್ಯ ಸಮುದ್ರದ ಸೋಲಿನ ವಿಷದುರಿಯನ್ನು ತಾಳಲಾರದೆ ರಾಜರು ಕರ್ಣನ ಆಶ್ರಯಕ್ಕೆ ಬಂದರು.

ಅರ್ಥ:
ಹೇಳು: ತಿಳಿಸು; ಬಹಳ: ತುಂಬ; ಅಂಭೋನಿಧಿ: ಸಾಗರ; ವಿಷ: ಗರಳ ಉರಿ: ಬೆಂಕಿ; ಧಾಳಿ: ಆಕ್ರಮಣ; ದಾನವ: ರಾಕ್ಷಸ; ಅಮರ: ದೇವತೆ; ಇಂದುಮೌಳಿ: ಶಂಕರ; ಮರೆ: ಆಶ್ರಯ; ಹೊಗು: ತೆರಳು; ದಾನವ: ರಾಕ್ಷಸ; ಅಚಳ: ಬೆಟ್ಟ; ಮಥಿತ: ಕಡಿಯಲ್ಪಟ್ಟ; ಸೇನ: ಸೈನ್ಯ; ಪರಿಭವ: ಸೋಲು; ನರೇಂದ್ರ: ರಾಜ; ನಿಕಾಯ: ಗುಂಪು; ಹೊಕ್ಕು: ಸೇರು; ರವಿಸುತ: ಸೂರ್ಯನ ಮಗ (ಕರ್ಣ); ಮರೆ: ಶರಣಾಗತಿ;

ಪದವಿಂಗಡಣೆ:
ಏನ +ಹೇಳುವೆನಮಮ+ ಬಹಳ+
ಅಂಭೋನಿಧಿಯ +ವಿಷದುರಿಯ +ಧಾಳಿಗೆ
ದಾನವ+ಅಮರರ್+ಇಂದುಮೌಳಿಯ +ಮರೆಯ +ಹೊಗುವಂತೆ
ದಾನವ+ಅಚಳ +ಮಥಿತ +ಸೇನಾಂ
ಭೋನಿಧಿಯ +ಪರಿಭವದ +ವಿಷದುರಿಗ್
ಆ +ನರೇಂದ್ರ+ನಿಕಾಯ +ಹೊಕ್ಕುದು +ರವಿಸುತನ+ ಮರೆಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬಹಳಾಂಭೋನಿಧಿಯ ವಿಷದುರಿಯ ಧಾಳಿಗೆ ದಾನವಾಮರರಿಂದುಮೌಳಿಯ ಮರೆಯ ಹೊಗುವಂತೆ
(೨) ಅಂಭೋನಿಧಿ, ಸೇನಾಂಭೋನಿಧಿ – ೨, ೫ ಸಾಲಿನ ಮೊದಲ ಪದ
(೩) ದಾನವ – ೩,೪ ಸಾಲಿನ ಮೊದಲ ಪದ

ಪದ್ಯ ೩: ಮಾಂಸಖಂಡಗಳು ಹೇಗೆ ಕಂಡವು?

ಏನ ಹೇಳುವೆನುಭಯ ಬಲದಲಿ
ಲೂನ ನಿವಹದ ಹಯವನಡೆಗೆಡೆ
ವಾನೆಗಳ ಹೊದರೆದ್ದು ಮುಗ್ಗಿದ ರಥದ ವಾಜಿಗಳ
ಮಾನವರ ಕಡಿಖಂಡ ದೊಂಡೆಯ
ನೇನನೆಂಬೆನು ಹರಿವ ರುಧಿರಾಂ
ಭೋನಿಧಿಯ ಹರಹುಗಳ ಪೂರದ ವಿಗಡ ವಿಗ್ರಹವ (ಭೀಷ್ಮ ಪರ್ವ, ೬ ಸಂಧಿ, ೩ ಪದ್ಯ)

ತಾತ್ಪರ್ಯ:
ಉಭಯ ಸೈನ್ಯಗಳಲ್ಲೂ ಕುದುರೆ, ಆನೆ, ರಥ, ಅಶ್ವ, ಯೋಧರು ಕಡಿದ ಪರಿಣಾಮವಾಗಿ ತುಂಡಾದ ಮಾಂಸ ರಕ್ತಗಳು ಬೆಟ್ಟ ಹೊಳೆಗಳಂತೆ ಕಾಣಿಸಿದವು.

ಅರ್ಥ:
ಹೇಳು: ತಿಳಿಸು; ಉಭಯ: ಎರಡು; ಬಲ: ಸೈನ್ಯ; ಲೂನ: ಕತ್ತರಿಸಿದ, ಕಡಿದ; ನಿವಹ: ಗುಂಪು; ಹಯ: ಕುದುರೆ; ಅಡೆ: ಅಡ್ಡ; ಕೆಡೆ: ಬೀಳು, ಕುಸಿ; ಆನೆ: ಕರಿ; ಹೊದರು: ಗುಂಪು, ಸಮೂಹ; ಎದ್ದು: ಮೇಲೇಳು; ಮುಗ್ಗು: ಬಾಗು, ಮಣಿ; ರಥ: ಬಂಡಿ; ವಾಜಿ: ಕುದುರೆ; ಮಾನವ: ಮನುಷ್ಯ; ಕಡಿ: ಸೀಳು; ಖಂಡ: ತುಂಡು, ಚೂರು; ದೊಂಡೆ: ಗಂಟಲು, ಕಂಠ; ಹರಿ: ಸಾಗು; ರುಧಿರ: ರಕ್ತ; ಅಂಭೋನಿಧಿ: ಸಾಗರ; ಅಂಬು: ನೀರು; ಹರಹು: ವಿಸ್ತಾರ, ವೈಶಾಲ್ಯ; ಪೂರದ: ಪೂರ್ತಿ, ನೆರೆ; ವಿಗಡ: ಶೌರ್ಯ, ಪರಾಕ್ರಮ; ವಿಗ್ರಹ: ಯುದ್ಧ;

ಪದವಿಂಗಡಣೆ:
ಏನ +ಹೇಳುವೆನ್+ಉಭಯ +ಬಲದಲಿ
ಲೂನ +ನಿವಹದ +ಹಯವನ್+ಅಡೆ+ಕೆಡೆವ್
ಆನೆಗಳ +ಹೊದರೆದ್ದು+ ಮುಗ್ಗಿದ+ ರಥದ+ ವಾಜಿಗಳ
ಮಾನವರ+ ಕಡಿ+ಖಂಡ +ದೊಂಡೆಯನ್
ಏನನೆಂಬೆನು+ ಹರಿವ+ ರುಧಿರ
ಅಂಭೋನಿಧಿಯ +ಹರಹುಗಳ+ ಪೂರದ+ ವಿಗಡ+ ವಿಗ್ರಹವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹರಿವ ರುಧಿರಾಂಭೋನಿಧಿಯ ಹರಹುಗಳ ಪೂರದ ವಿಗಡ ವಿಗ್ರಹವ

ಪದ್ಯ ೫೭: ಕೌರವನ ಸಂಬಂಧಿಕರು ಹೇಗೆ ಇದ್ದರು?

ಏನ ಹೇಳುವೆನರಸ ಕೌರವ
ಸೇನೆ ಗರಹೊಡೆದಂತೆ ಬಹಳಾಂ
ಭೋನಿಧಿಯಲದಂತೆ ಬೆಗಡಿನ ಸೊಗಡ ಸೆರೆವಿಡಿದು
ಮೋನದಲಿ ಮನವಳುಕಿ ಯೋಗ
ಧ್ಯಾನಪರರಾದಂತೆ ಚಿತ್ತ
ಗ್ಲಾನಿಯೊಳಗೆಲೆಮಿಡುಕದಿದ್ದುದು ನಿನ್ನ ಪರಿವಾರ (ಕರ್ಣ ಪರ್ವ, ೧೯ ಸಂಧಿ, ೫೭ ಪದ್ಯ)

ತಾತ್ಪರ್ಯ:
ಎಲೆ ರಾಜ ಧೃತರಾಷ್ಟ್ರ ದುಶ್ಯಾಸನನು ಸತ್ತ ಮೇಲೆ ಉಳಿದವರ ಸ್ಥಿತಿಯನ್ನು ನಾನೇನೆಂದು ಹೇಳಲಿ, ಕೌರವ ಸೈನ್ಯವು ಗರಬಡಿದಂತೆ ಸಮುದ್ರದಲ್ಲಿ ಮುಳುಗಿದಂತೆ, ಪರಮಾಶ್ಚರ್ಯದ ಸೆರೆಯಲ್ಲಿ ಸಿಲುಕಿ, ಅಳುಕಿ, ಯೋಗಧ್ಯಾನಪರರೋ ಎಂಬಂತೆ, ಮನಸ್ಸಿನ ಗ್ಲಾನಿಯೊಳಗೆ ಸಿಲುಕಿ, ಮೌನದಿಂದ ಎಲೆಯಷ್ಟೂ ಅಲುಗದೆ ಸುಮ್ಮನಿದ್ದರು.

ಅರ್ಥ:
ಹೇಳು: ತಿಳಿಸು; ಅರಸ: ರಾಜ; ಸೇನೆ: ಸೈನ್ಯ; ಗರ: ವಿಷ; ಬಹಳ: ತುಂಬ; ಅಂಭೋನಿಧಿ: ಸಮುದ್ರ; ಅದ್ದು: ಮುಳುಗು; ಬೆಗಡು: ಆಶ್ಚರ್ಯ, ಬೆರಗು; ಸೊಗಡು: ಕಂಪು, ವಾಸನೆ; ಸೆರೆ: ಬಂಧಿಸು; ಮೋನ: ಮೌನ, ಶಬ್ದರಹಿತ ಸ್ಥಿತಿ; ಮನ: ಮನಸ್ಸು; ಅಳುಕು: ಹೆದರು; ಧ್ಯಾನ: ಮನನ, ಏಕಾಗ್ರತೆ; ಪರ: ಕಡೆ, ಪಕ್ಷ; ಚಿತ್ತ: ಮನಸ್ಸು; ಗ್ಲಾನಿ: ಜಡತ್ವ, ನಾಶ; ಎಲೆ: ಪರ್ಣ; ಮಿಡುಕು: ಅಲುಗು; ಪರಿವಾರ: ಸಂಬಂಧಿಕರು;

ಪದವಿಂಗಡಣೆ:
ಏನ +ಹೇಳುವೆನ್+ಅರಸ +ಕೌರವ
ಸೇನೆ +ಗರಹೊಡೆದಂತೆ +ಬಹಳ+ಅಂ
ಭೋನಿಧಿಯಲದಂತೆ+ ಬೆಗಡಿನ+ ಸೊಗಡ+ ಸೆರೆವಿಡಿದು
ಮೋನದಲಿ+ ಮನವಳುಕಿ+ ಯೋಗ
ಧ್ಯಾನಪರರಾದಂತೆ +ಚಿತ್ತ
ಗ್ಲಾನಿಯೊಳಗ್+ಎಲೆಮಿಡುಕದಿದ್ದುದು +ನಿನ್ನ +ಪರಿವಾರ

ಅಚ್ಚರಿ:
(೧) ಸಮುದ್ರವನ್ನು ಅಂಭೋನಿಧಿ ಎಂದು ಕರೆದಿರುವುದು
(೨) ಉಪಮಾನಗಳ ಪ್ರಯೋಗ – ಗರಹೊಡೆದಂತೆ, ಬಹಳಾಂಭೋನಿಧಿಯಲದಂತೆ, ಯೋಗಧ್ಯಾನಪರರಾದಂತೆ