ಪದ್ಯ ೧೫: ಶ್ರೀಕೃಷ್ಣನ ದ್ವಾರಕೆಯ ಪ್ರವೇಶ ಹೇಗಿತ್ತು?

ದೇವ ದುಂದುಭಿರವದ ಗಗನದ
ಹೂವಳೆಯ ಪುರದ ಸಮಸ್ತ ಜ
ನಾವಳಿಯ ಜಯಜೀಯ ನಿರ್ಘೋಷದ ಗಡಾವಣೆಯ
ದೇವಕಿಯ ವಸುದೇವ ರುಕುಮಿಣಿ
ದೇವಿಯಾದಿಯ ಹರುಷದಾವಿ
ರ್ಭಾವ ಮಿಗೆ ನಿಜಪುರವ ಹೊಕ್ಕನು ವೀರನಾರಾಯಣ (ಗದಾ ಪರ್ವ, ೧೩ ಸಂಧಿ, ೧೫ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ದ್ವಾರಕೆಯನ್ನು ಸೇರುತ್ತಿರಲು, ದೇವ ನಗಾರಿಗಳು ಮೊಳಗಿದವು. ಆಕಾಶದಿಮ್ದ ಹೂಮಳೆಗಳು ಸುರಿದವು. ಜನರೆಲ್ಲರೂ ಜೀಯಾ ಎಂದು ಜಯಕಾರ ಕೂಗಿದರು. ದೇವಕಿ, ವಸುದೇವ, ರುಕ್ಮಿಣೀ ದೇವಿ ಮೊದಲಾದವರ ಹರುಷವು ಹೆಚ್ಚಿತು.

ಅರ್ಥ:
ದೇವ: ಭಗವಂತ; ದುಂದುಭಿ: ಒಂದು ಬಗೆಯ ಚರ್ಮ ವಾದ್ಯ, ನಗಾರಿ; ರವ: ಶಬ್ದ; ಗಗನ: ಆಗಸ; ಹೂವಳೆ: ಹೂವಿನ ಮಳೆ; ಪೂರ: ತುಂಬ; ಸಮಸ್ತ: ಎಲ್ಲಾ; ಜನಾವಳಿ: ಜನರ ಗುಂಪು; ಜಯ: ಉಘೆ; ಜೀಯ: ಒಡೆಯ; ಘೋಷ: ಕೂಗು; ಗಡಾವಣೆ: ಗಟ್ಟಿಯಾದ ಶಬ್ದ; ಹರುಷ: ಸಂತಸ; ಆವಿರ್ಭಾವ: ಹುಟ್ಟುವುದು; ಪುರ: ಊರು; ಹೊಕ್ಕು: ಸೇರು;

ಪದವಿಂಗಡಣೆ:
ದೇವ +ದುಂದುಭಿ+ರವದ +ಗಗನದ
ಹೂವಳೆಯ +ಪುರದ +ಸಮಸ್ತ+ ಜ
ನಾವಳಿಯ +ಜಯ+ಜೀಯ +ನಿರ್ಘೋಷದ +ಗಡಾವಣೆಯ
ದೇವಕಿಯ +ವಸುದೇವ +ರುಕುಮಿಣಿ
ದೇವಿ+ಆದಿಯ +ಹರುಷದ್+ಆವಿ
ರ್ಭಾವ +ಮಿಗೆ +ನಿಜಪುರವ +ಹೊಕ್ಕನು+ ವೀರನಾರಾಯಣ

ಅಚ್ಚರಿ:
(೧) ಜ ಕಾರದ ತ್ರಿವಳಿ ಪದ – ಜನಾವಳಿಯ ಜಯಜೀಯ
(೨) ರವ, ನಿರ್ಘೋಷ – ಸಾಮ್ಯಾರ್ಥ ಪದ

ಪದ್ಯ ೩೨: ಅರ್ಜುನ ಮತ್ತು ಶಿವನ ಯುದ್ಧವು ಯಾರನ್ನು ನಡುಗಿಸಿತು?

ತರಹರಿಸಿ ನರನಿಕ್ಕಿದನು ಶಂ
ಕರನ ವಕ್ಷಸ್ಥಳವನೆಡೆಯಲಿ
ಮುರಿದು ಕಳಚಿ ಗಿರೀಶ ನೆರಗಿದನಿಂದ್ರನಂದನನ
ಮರಳಿ ತಿವಿದನು ಪಾರ್ಥನಾತನ
ಶಿರಕೆ ಕೊಟ್ಟನು ಶಂಭುವಿಮ್ತಿ
ಬ್ಬರ ವಿಷಮ ಗಾಯದ ಗಡಾವಣೆ ಘಲ್ಲಿಸಿತು ಜಗವ (ಅರಣ್ಯ ಪರ್ವ, ೭ ಸಂಧಿ, ೩೨ ಪದ್ಯ)

ತಾತ್ಪರ್ಯ:
ಅರ್ಜುನನು ಸ್ವಲ್ಪ ಸುಧಾರಿಸಿಕೊಂಡು ಶಿವನೆದೆಗೆ ಹೊಡೆದನು. ಅದನ್ನು ತಪ್ಪಿಸಿಕೊಂಡು ಶಿವನು ಅರ್ಜುನನನ್ನು ತಿವಿದನು. ಪಾರ್ಥನು ಮತ್ತೆ ಶಿವನನ್ನು ತಿವಿದನು. ಶಿವನು ಅರ್ಜುನನ ತಲೆಯನ್ನು ಗುದ್ದಿದನು. ಇವರಿಬ್ಬರ ಹೋರಾಟಕ್ಕೆ ಲೋಕವು ನಡುಗಿತು.

ಅರ್ಥ:
ತರಹರಿಸು: ಸೈರಿಸು, ಸಮ್ಹಾಧಾನ ಗೊಳ್ಳು; ಶಂಕರ: ಶಿವ; ನರ: ಅರ್ಜುನ; ಇಕ್ಕು: ಹೊಡೆ; ವಕ್ಷಸ್ಥಳ: ಎದೆ; ಎಡೆ: ನಡುವೆ, ಮಧ್ಯ; ಮುರಿ: ಸೀಳು; ಕಳಚು: ತೆಗೆ, ಬಿಚ್ಚು; ಗಿರೀಶ: ಶಂಕರ; ಎರಗು: ಬೀಳು; ನಂದನ: ಮಗ; ಮರಳು: ಮತ್ತೆ,ಹಿಂದಿರುಗು; ತಿವಿ: ಚುಚ್ಚು; ಶಿರ: ತಲೆ; ಕೊಡು: ನೀಡು; ವಿಷಮ: ಸಮವಲ್ಲದ್ದು; ಗಾಯ: ಪೆಟ್ಟು; ಗಡಾವಣೆ: ಗಟ್ಟಿಯಾದ ಶಬ್ದ, ಕೋಲಾಹಲ; ಘಲ್ಲಿಸು: ಪೀಡಿಸು; ಜಗ: ಜಗತ್ತು;

ಪದವಿಂಗಡಣೆ:
ತರಹರಿಸಿ +ನರನ್+ಇಕ್ಕಿದನು +ಶಂ
ಕರನ +ವಕ್ಷಸ್ಥಳವನ್+ಎಡೆಯಲಿ
ಮುರಿದು +ಕಳಚಿ +ಗಿರೀಶನ್ +ಎರಗಿದನ್+ಇಂದ್ರ+ನಂದನನ
ಮರಳಿ +ತಿವಿದನು +ಪಾರ್ಥನ್+ಆತನ
ಶಿರಕೆ +ಕೊಟ್ಟನು +ಶಂಭುವ್+ಇಂತಿ
ಬ್ಬರ +ವಿಷಮ +ಗಾಯದ +ಗಡಾವಣೆ +ಘಲ್ಲಿಸಿತು +ಜಗವ

ಅಚ್ಚರಿ:
(೧) ಗ ಕಾರದ ತ್ರಿವಳಿ ಪದ – ಗಾಯದ ಗಡಾವಣೆ ಘಲ್ಲಿಸಿತು
(೨) ಶಂಕರ, ಶಂಭು, ಗಿರೀಶ; ನರ, ಇಂದ್ರನಂದನ, ಪಾರ್ಥ – ಶಿವ ಮತ್ತು ಅರ್ಜುನನನ್ನು ಕರೆದ ಪರಿ