ಪದ್ಯ ೭: ಪಾಂಡುವಿನ ಆಳ್ವಿಕೆಯು ಯಾರಿಗೆ ಸಮಾನವಾಗಿತ್ತು?

ಓಲಗಿಸಿ ಕೊಂಬಾತನಂಧ ನೃ
ಪಾಲನುಳಿದಂತಖಿಳ ಧರಣೀ
ಪಾಲಕತ್ವವು ಪಾಂಡುಭೂಪತಿಗೀ ಕುಮಾರಕರ
ಲಾಲಿಸುವ ಕುಲನೀತಿ ವಿಧದಲಿ
ಪಾಲಿಸುವ ಭರ ಭೀಷ್ಮನದು ಸಂ
ಭಾಳಿಸಿತು ನಳನಹುಷಚರಿತವನಿವರ ಪರಿಪಾಟಿ (ಆದಿ ಪರ್ವ, ೪ ಸಂಧಿ, ೭ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ರಾಜ, ರಾಜ್ಯಪರಿಪಾಲನೆ ಮಾಡುವ ಎಲ್ಲಾ ಅಧಿಕಾರಗಳೂ ಪಾಂಡುವಿಗೆ. ಇವರಿಬ್ಬರನ್ನು ಕುಲನೀತಿಗೆ ಅನುಸರಿಸಿ ಲಾಲನೆಮಾಡುವವನು ಭೀಷ್ಮ. ಇವರ ಹಿರಿಮೆಯು ನಳನಹುಷರ ಆಳ್ವಿಕೆಗೆ ಸರಿಸಮನಾಗಿತ್ತು.

ಅರ್ಥ:
ಓಲಗ: ಸೇವೆ; ಅಂಧ: ಕುರುಡ; ನೃಪ: ರಾಜ; ಉಳಿದ: ಮಿಕ್ಕ; ಅಖಿಳ: ಎಲ್ಲಾ; ಧರಣೀಪಾಲಕ: ರಾಜ; ಭೂಪತಿ: ರಾಜ; ಕುಮಾರ: ಮಕ್ಕಳು; ಲಾಲಿಸು: ಅಕ್ಕರೆಯನ್ನು ತೋರಿಸು, ಪೋಷಿಸು; ಕುಲ: ವಂಶ; ನೀತಿ: ಮಾರ್ಗ ದರ್ಶನ; ವಿಧ: ರೀತಿ, ಕ್ರಮ; ಪಾಲಿಸು: ರಕ್ಷಿಸು, ಕಾಪಾಡು; ಭರ: ಭಾರ, ಹೊರೆ; ಸಂಭಾಳಿಸು: ಪೋಷಿಸು, ಸರಿತೂಗಿಸು; ಚರಿತ: ಕಥೆ; ಪರಿಪಾಟಿ: ಸಮಾನತೆ;

ಪದವಿಂಗಡಣೆ:
ಓಲಗಿಸಿ +ಕೊಂಬಾತನ್+ಅಂಧ +ನೃ
ಪಾಲನ್+ಉಳಿದಂತ್+ಅಖಿಳ+ ಧರಣೀ
ಪಾಲಕತ್ವವು+ ಪಾಂಡು+ಭೂಪತಿಗ್+ಈ+ ಕುಮಾರಕರ
ಲಾಲಿಸುವ +ಕುಲನೀತಿ +ವಿಧದಲಿ
ಪಾಲಿಸುವ+ ಭರ +ಭೀಷ್ಮನದು+ ಸಂ
ಭಾಳಿಸಿತು +ನಳ+ನಹುಷ+ಚರಿತವನ್+ಇವರ +ಪರಿಪಾಟಿ

ಅಚ್ಚರಿ:
(೧) ನೃಪಾಲ, ಧರಣೀಪಾಲ, ಭೂಪತಿ – ಸಮಾನಾರ್ಥಕ ಪದ
(೨) ಲಾಲಿಸು, ಪಾಲಿಸು – ಪ್ರಾಸ ಪದಗಳು

ಪದ್ಯ ೧೨: ಧರ್ಮಜನು ಭೀಷ್ಮನ ಬಳಿ ಯಾವುದನ್ನು ಕಲಿಯಲು ಹೋದನು?

ಬಳಿಕ ಭೀಷ್ಮನ ಬಾಣಶಯನ
ಸ್ಥಳಕೆ ಧರ್ಮಜ ಬಂದು ಧರ್ಮಂ
ಗಳನು ಕೇಳಿದು ರಾಜಧರ್ಮ ಸಮಸ್ತಧರ್ಮವನು
ತಿಳಿದನಗ್ಗದ ದಾನಧರ್ಮಾ
ವಳಿಯನಾತನ ರಾಜ್ಯಪಾಲನ
ನಳ ನಹುಷ ಭರತಾದಿ ಭೂಪರ ಗತಿಗೆ ಗುರುವಾಯ್ತು (ಗದಾ ಪರ್ವ, ೧೩ ಸಂಧಿ, ೧೨ ಪದ್ಯ)

ತಾತ್ಪರ್ಯ:
ಆ ಬಳಿಕ ಧರ್ಮಜನು ತಮ್ಮಂದಿರು ಶ್ರೀಕೃಷ್ಣ ಇವರೊಡನೆ ಶರಶಯನದಲ್ಲಿದ್ದ ಭೀಷ್ಮನ ಬಳಿಗೆ ಹೋಗಿ ರಾಜಧರ್ಮ, ಮೋಕ್ಷಧರ್ಮ ಮೊದಲಾದ ಸಮಸ್ತ ಧರ್ಮಗಲನ್ನು ಕೇಳಿ ತಿಳಿದುಕೊಂಡು ಬಂದನು. ದಾನ ಧರ್ಮಗಲನ್ನು ಮಾಡಿದನು. ಧರ್ಮರಾಯನ ರಾಜ್ಯ ಪಾಲನೆಯು ನಳ ನಹುಷ ಭರತ ಮೊದಲಾದ ರಾಜ್ಯಪಾಲನೆಗೆ ಗುರುವೆನ್ನುವಂತಿತ್ತು.

ಅರ್ಥ:
ಬಳಿಕ: ನಂತರ; ಬಾಣ: ಸರಳ; ಶಯನ: ನಿದ್ರೆ; ಸ್ಥಳ: ನಿಲಯ; ಕೇಳಿ: ಕ್ರೀಡೆ, ವಿನೋದ; ಸಮಸ್ತ: ಎಲ್ಲಾ; ಧರ್ಮ: ಧಾರಣೆಮಾಡಿದುದು; ತಿಳಿ: ಎಚ್ಚರಾಗು; ಅಗ್ಗ: ಶ್ರೇಷ್ಠ; ಆವಳಿ: ಸಾಲು; ಭೂಪ: ರಾಜ; ಗತಿ: ಗಮನ, ಸಂಚಾರ;

ಪದವಿಂಗಡಣೆ:
ಬಳಿಕ+ ಭೀಷ್ಮನ+ ಬಾಣ+ಶಯನ
ಸ್ಥಳಕೆ+ ಧರ್ಮಜ+ ಬಂದು +ಧರ್ಮಂ
ಗಳನು +ಕೇಳಿದು +ರಾಜಧರ್ಮ+ ಸಮಸ್ತ+ಧರ್ಮವನು
ತಿಳಿದನ್+ಅಗ್ಗದ+ ದಾನ+ಧರ್ಮ
ಆವಳಿಯನ್+ಆತನ +ರಾಜ್ಯಪಾಲನ
ನಳ +ನಹುಷ +ಭರತಾದಿ +ಭೂಪರ +ಗತಿಗೆ +ಗುರುವಾಯ್ತು

ಅಚ್ಚರಿ:
(೧) ಧರ್ಮಜ, ರಾಜಧರ್ಮ, ಸಮಸ್ತಧರ್ಮ, ದಾನಧರ್ಮ – ಧರ್ಮ ಪದದ ಬಳಕೆ

ಪದ್ಯ ೩೨: ಧರ್ಮಜನು ಕೃಷ್ಣನಲ್ಲಿ ಯಾವ ಸಂಶಯವನ್ನು ಹೇಳಿದನು?

ಲೇಸನಾಡಿದೆ ಕೃಷ್ಣ ಶಲ್ಯಂ
ಗೀಸು ಬಲುಹುಂಟಾದಡನುಜರು
ಘಾಸಿಯಾದರು ಹಿಂದೆ ಭೀಷ್ಮಾದಿಗಳ ಬವರದಲಿ
ಈ ಸಮರಜಯವೆನಗೆ ನಾಳಿನೊ
ಳೈಸಲೇ ನಳ ನಹುಷ ಭರತ ಮ
ಹೀಶ ವಂಶೋತ್ಪನ್ನ ತಾನೆಂದನು ಮಹೀಪಾಲ (ಶಲ್ಯ ಪರ್ವ, ೧ ಸಂಧಿ, ೩೨ ಪದ್ಯ)

ತಾತ್ಪರ್ಯ:
ಧರ್ಮಜನು ಕೃಷ್ಣನಿಗೆ ಉತ್ತರಿಸುತ್ತಾ, ಕೃಷ್ಣ ಒಳ್ಳೆಯ ಮಾತು ಹೇಳಿದೆ. ಶಲ್ಯನು ಇಷ್ಟು ಶಕ್ತಿಶಾಲಿಯೇ? ಹಿಮ್ದೆ ಭೀಷ್ಮಾದಿಗಳೊಡನೆ ಯುದ್ಧಮಾಡಿ ತಮ್ಮಂದಿರು ಬಹಳ ನೊಂದಿದ್ದಾರೆ. ನಾಳೆ ನನಗೆ ಯುದ್ಧದಲ್ಲಿ ಜಯವಾಗುವುದೇ? ನಾನು ನಳ, ನಹುಷ, ಭರತರ ವಂಶದಲ್ಲಿ ಹುಟ್ಟಿದವನು ಎಂದನು.

ಅರ್ಥ:
ಲೇಸು: ಒಳಿತು; ಆಡು: ಮಾತಾಡು; ಬಲುಹು: ಶಕ್ತಿ; ಅನುಜ: ತಮ್ಮ; ಘಾಸಿ: ಪೆಟ್ಟು; ಹಿಂದೆ: ನಡೆದ; ಆದಿ: ಮುಂತಾದ; ಬವರ: ಯುದ್ಧ; ಸಮರ: ಯುದ್ಧ; ಜಯ: ಗೆಲುವು; ಐಸಲೇ: ಅಲ್ಲವೇ; ಮಹೀಶ: ರಾಜ; ವಂಶ: ಕುಲ; ಉತ್ಪನ್ನ: ಹುಟ್ಟು; ಮಹೀಪಾಲ: ರಾಜ;

ಪದವಿಂಗಡಣೆ:
ಲೇಸನಾಡಿದೆ +ಕೃಷ್ಣ +ಶಲ್ಯಂಗ್
ಈಸು +ಬಲುಹುಂಟಾದಡ್+ಅನುಜರು
ಘಾಸಿಯಾದರು +ಹಿಂದೆ +ಭೀಷ್ಮಾದಿಗಳ+ ಬವರದಲಿ
ಈ +ಸಮರ+ಜಯವ್+ಎನಗೆ +ನಾಳಿನೊಳ್
ಐಸಲೇ +ನಳ+ ನಹುಷ +ಭರತ+ ಮ
ಹೀಶ +ವಂಶೋತ್ಪನ್ನ +ತಾನೆಂದನು +ಮಹೀಪಾಲ

ಅಚ್ಚರಿ:
(೧) ಸಮರ, ಬವರ; ಮಹೀಪಾಲ, ಮಹೀಶ – ಸಮಾನಾರ್ಥಕ ಪದ

ಪದ್ಯ ೨೨: ಮಲ್ಲರು ಹೇಗೆ ಪರಿಚಯಿಸಿಕೊಂಡರು?

ಇಂದುವಂಶದಲಧಿಕರಾಯರ
ವೃಂದದೊಳಗಾ ನಹುಷಪುತ್ರರು
ಸಂದರಾಮಾಲೆಯಲಿ ಬಳಿಕಾ ಶಾಂತ ಭೂಪತಿಗೆ
ನಂದನನು ಜನಿಸಲ್ಕೆಯವನಿಗೆ
ಯಂಧನೃಪ ಜನಿಸಿದನು ಆತನ
ನಂದನನು ಕುರುರಾಯನಾತನ ಮಲ್ಲರಾವೆಂದ (ವಿರಾಟ ಪರ್ವ, ೪ ಸಂಧಿ, ೨೨ ಪದ್ಯ)

ತಾತ್ಪರ್ಯ:
ಚಂದ್ರವಂಶದಲ್ಲಿ ಹುಟ್ಟಿದ ಅನೇಕ ರಾಜರ ಪರಂಪರೆಯಲ್ಲಿ ನಹುಷನು ಹುಟ್ಟಿದನು. ಅವನ ಪರಂಪರೆಯಲ್ಲಿ ಶಂತನು ಜನಿಸಿದನು. ಅವನ ಮಗನು ವಿಚಿತ್ರವೀರ್ಯ, ಅವನಿಗೆ ಧೃತರಾಷ್ಟ್ರ ಜನಿಸಿದನು. ಅವನ ಮಗನಾದ ದುರ್ಯೋಧನನು ಕುರುಕುಲಾಧಿಪನು, ಅವನ ಮನೆಯ ಮಲ್ಲರು ನಾವು ಎಂದು ಅವರ ಪರಿಚಯವನ್ನು ಮಾಡಿದರು.

ಅರ್ಥ:
ಇಂದು: ಚಂದ್ರ; ವಂಶ: ಕುಲ; ಅಧಿಕ: ಹೆಚ್ಚು; ರಾಯ: ರಾಜ; ವೃಂದ: ಗುಂಪು; ಸಂದು:ಸಂಬಂಧ; ಮಾಲೆ: ಸಾಲು, ಪಂಕ್ತಿ; ಬಳಿಕ: ನಂತರ; ಭೂಪತಿ: ರಾಜ; ನಂದ: ಮಗ; ಜನಿಸು: ಹುಟ್ಟು; ಅಂಧ: ಕುರುಡ; ನೃಪ: ರಾಜ; ಮಲ್ಲ: ಜಟ್ಟಿ;

ಪದವಿಂಗಡಣೆ:
ಇಂದು+ವಂಶದಲ್+ಅಧಿಕ+ರಾಯರ
ವೃಂದದೊಳಗ್+ಆ+ ನಹುಷ+ಪುತ್ರರು
ಸಂದರ್+ಆ+ಮಾಲೆಯಲಿ +ಬಳಿಕಾ+ ಶಾಂತ +ಭೂಪತಿಗೆ
ನಂದನನು +ಜನಿಸಲ್ಕೆ+ಅವನಿಗೆ
ಅಂಧನೃಪ +ಜನಿಸಿದನು +ಆತನ
ನಂದನನು +ಕುರುರಾಯನ್+ಆತನ +ಮಲ್ಲರಾವೆಂದ

ಅಚ್ಚರಿ:
(೧) ನೃಪ, ರಾಯ, ಭೂಪತಿ; ಪುತ್ರ, ನಂದನ – ಸಮನಾರ್ಥಕ ಪದ

ಪದ್ಯ ೬೯: ಧರ್ಮಜನು ಭೀಮನನ್ನು ಹೇಗೆ ಸಮಾಧಾನ ಪಡಿಸಿದನು?

ದುಗುಡದಲಿ ಬರೆ ಭೀಮಸೇನನ
ತೆಗೆದು ಬಿಗಿಯಪ್ಪಿದನು ಖೇದದ
ಹೊಗರಿದೇಕೆ ವ್ಯಥಾಮನೋವ್ಯಥೆಯದನು ತಾಳದಿರು
ಜಗವರಿಯೆ ನಮ್ಮನ್ವಯದ ಪೂ
ರ್ವಿಗನಲಾ ನಹುಷಂಗೆ ಬಂದು
ಬ್ಬೆಗದ ಹದನಿದು ನಮ್ಮ ಪಾಡೇನೆಂದನಾ ಭೂಪ (ಅರಣ್ಯ ಪರ್ವ, ೧೪ ಸಂಧಿ, ೬೯ ಪದ್ಯ)

ತಾತ್ಪರ್ಯ:
ಭೀಮನು ದುಃಖದಿಂದ ಕೂಡಿದವನಾಗಿ ಹಾವಿನ ಬಂಧನದಿಂದ ಸ್ವತಂತ್ರನಾಗಲು, ಯುಧಿಷ್ಠಿರನು ಅವನನ್ನು ಅಪ್ಪಿಕೊಂಡು, ನೀನೇಕೆ ದುಃಖಿಸುವೆ, ನಹುಷನು ನಮ್ಮ ವಂಶದಲ್ಲಿ ಹಿಂದೆ ಹುಟ್ಟಿದವನು, ಅವನಿಗೇ ಇಂತಹ ದುರ್ಗತಿ ಬಂದಿತು, ಇನ್ನು ನಮ್ಮ ಪಾಡೇನು, ವೃಥಾ ಮನಸ್ಸಿನಲ್ಲಿ ದುಃಖಿಸುವುದನ್ನು ಬಿಡು ಎಂದು ಸಮಾಧಾನದ ಮಾತನ್ನು ಹೇಳಿದನು.

ಅರ್ಥ:
ದುಗುಡ: ದುಃಖ; ಬರೆ: ಬಂದು; ಅಪ್ಪು: ಆಲಿಂಗನ; ಖೇದ: ದುಃಖ; ಹೊಗರು: ಕಾಂತಿ, ಪ್ರಕಾಶ; ವೃಥ: ಸುಮ್ಮನೆ; ಮನೋವ್ಯಥೆ: ಮನಸ್ಸಿನ ದುಗುಡ; ತಾಳು: ಸಹಿಸು; ಜಗ: ಜಗತ್ತು; ಅರಿ: ತಿಳಿ; ಅನ್ವಯ: ಅನುಯಾಯಿ, ವಂಶ; ಪೂರ್ವಿಗ: ಪೂರ್ವಜ, ಹಿಂದಿನವರು; ಉಬ್ಬೆಗ: ತೊಂದರೆ; ಹದ: ಸ್ಥಿತಿ; ಪಾಡು: ಸ್ಥಿತಿ; ಭೂಪ: ರಾಜ;

ಪದವಿಂಗಡಣೆ:
ದುಗುಡದಲಿ +ಬರೆ +ಭೀಮಸೇನನ
ತೆಗೆದು +ಬಿಗಿ+ಅಪ್ಪಿದನು +ಖೇದದ
ಹೊಗರಿದ್+ಏಕೆ +ವ್ಯಥಾ+ಮನೋವ್ಯಥೆಯದನು +ತಾಳದಿರು
ಜಗವರಿಯೆ +ನಮ್ಮ್+ಅನ್ವಯದ+ ಪೂ
ರ್ವಿಗನಲಾ +ನಹುಷಂಗೆ+ ಬಂದು
ಬ್ಬೆಗದ +ಹದನಿದು +ನಮ್ಮ +ಪಾಡೇನೆಂದನಾ +ಭೂಪ

ಅಚ್ಚರಿ:
(೧) ಸಮಾಧಾನ ಪಡಿಸುವ ಪರಿ – ಖೇದದ ಹೊಗರಿದೇಕೆ ವ್ಯಥಾಮನೋವ್ಯಥೆಯದನು ತಾಳದಿರು

ಪದ್ಯ ೬೫: ನಹುಷನು ಯಾವುದಕ್ಕೆ ನಿದರ್ಶನನಾದನು?

ಈಸು ನಾರಿಯರಿರಲು ಬಯಲಭಿ
ಲಾಷೆ ದಿವಿಜೇಶ್ವರನ ರಾಣೀ
ವಾಸದಲಿ ಗರಿಗಟ್ಟಿ ತಂದುದು ತನ್ನ ನೀವಿಧಿಗೆ
ಮೀಸಲಿನ ಮಾನಿನಿಯರಲಿ ಮನ
ದಾಸೆ ಮನುಜರ ಮುರಿವುದಕೆ ತಾ
ನೈಸಲೇ ದೃಷ್ಟಾಂತವೆಂದನು ನಹುಷನರಸಂಗೆ (ಅರಣ್ಯ ಪರ್ವ, ೧೪ ಸಂಧಿ, ೬೫ ಪದ್ಯ)

ತಾತ್ಪರ್ಯ:
ಇಷ್ತು ಜನ ಅಪ್ಸರೆಯರಿದ್ದರೂ ನನ್ನ ಕಣ್ಣುಗಳು ದೇವೇಂದ್ರನ ಪತ್ನಿ ಶಚೀದೇವಿಯ ಮೇಲೆ ಬಿದ್ದವು. ಆದ್ದರಿಂದ ನನಗೆ ಈ ದುರ್ಗತಿ ಲಭಿಸಿತು. ಪರಸ್ತ್ರೀಯರ ಮೇಲಿನ ಆಶೆಯು ಮನುಷ್ಯರನ್ನು ನಾಶಗೊಳಿಸುವುದೆಂಬ ಮಾತಿಗೆ ನಾನೆ ನಿದರ್ಶನವೆಂದು ನಹುಷನು ಹೇಳಿದನು.

ಅರ್ಥ:
ಈಸು: ಇಷ್ಟು; ನಾರಿ: ಹೆಂಗಸು; ಬಯಲಭಿಲಾಷೆ: ವ್ಯರ್ಥವಾದ ಅಸೆ; ದಿವಿಜೇಶ್ವರ: ಇಂದ್ರ; ರಾಣಿ: ಅರಸಿ; ರಾಣೀವಾಸ: ಅಂತಃಪುರ; ಗರಿಗಟ್ಟು: ಸಂಭ್ರಮಗೊಳ್ಳು; ತಂದುದು: ಬರೆಮಾದು; ವಿಧಿ: ಸ್ಥಿತಿ; ಮೀಸಲು: ವಿಶೇಷವಾಗಿ ಕಾಯ್ದಿರಿಸು; ಮಾನಿನಿ: ಹೆಂಗಸು; ಮನ: ಮನಸ್ಸು; ಆಸೆ: ಇಚ್ಛೆ; ಮನುಜ: ಮಾನವ; ಮುರಿ: ಸಿಳು; ಐಸಲೇ: ಅಲ್ಲವೇ; ದೃಷ್ಟಾಂತ: ನಿದರ್ಶನ; ಅರಸ: ರಾಜ;

ಪದವಿಂಗಡಣೆ:
ಈಸು +ನಾರಿಯರ್+ಇರಲು +ಬಯಲಭಿ
ಲಾಷೆ +ದಿವಿಜೇಶ್ವರನ+ ರಾಣೀ
ವಾಸದಲಿ +ಗರಿಗಟ್ಟಿ+ ತಂದುದು +ತನ್ನನ್ +ಈ+ವಿಧಿಗೆ
ಮೀಸಲಿನ +ಮಾನಿನಿಯರಲಿ+ ಮನ
ದಾಸೆ +ಮನುಜರ+ ಮುರಿವುದಕೆ+ ತಾನ್
ಐಸಲೇ +ದೃಷ್ಟಾಂತವ್+ಎಂದನು +ನಹುಷನ್+ಅರಸಂಗೆ

ಅಚ್ಚರಿ:
(೧) ಮನುಜರಿಗೆ ಯಾವುದು ಒಳಿತಲ್ಲ – ಮೀಸಲಿನ ಮಾನಿನಿಯರಲಿ ಮನ
ದಾಸೆ ಮನುಜರ ಮುರಿವುದಕೆ ತಾನೈಸಲೇ ದುಷ್ಟಾಂತವೆಂದನು ನಹುಷನರಸಂಗೆ

ಪದ್ಯ ೬೨: ಸರ್ಪವು ತಾನು ಯಾರೆಂದು ಹೇಳಿತು?

ಎನ್ನ ವೃತ್ತಾಂತದ ನಿದಾನವ
ಮುನ್ನ ನೀ ಬೆಸಗೊಳಲು ಹೇಳಿದೆ
ನಿನ್ನು ನಿನ್ನಭಿಧಾನವನು ನೀನಾವನೆಂಬುದನು
ಇನ್ನು ಕೇಳುವೆನೆನಲು ನಿಮ್ಮಲಿ
ಮುನ್ನಿನವನು ಯಯಾತಿಯಯ್ಯನು
ತನ್ನ ನಾಮವು ನಹುಷನೆಂಬುದು ನೃಪತಿ ಕೇಳೆಂದ (ಅರಣ್ಯ ಪರ್ವ, ೧೪ ಸಂಧಿ, ೬೨ ಪದ್ಯ)

ತಾತ್ಪರ್ಯ:
ಎಲೈ ಸರ್ಪನೇ, ನೀನು ಈ ಮೊದಲು ನನ್ನ ವಿಚಾರವನ್ನು ಕೇಳಿದುದರಿಂದ ನಾನು ನನ್ನ ವೃತ್ತಾಂತವನ್ನು ನಿನಗೆ ಹೇಳಿದೆ, ಈಗ ನೀನಾರು, ನಿನ್ನ ಹೆಸರೇನು ಎನ್ನುವುದನ್ನು ಹೇಳು ಎಂದು ಯುಧಿಷ್ಠಿರ ಕೇಳಲು, ಸರ್ಪವು, ನಾನು ನಿಮ್ಮ ಪೂರ್ವಜ, ಯಯಾತಿಯ ತಂದೆ, ನನ್ನ ಹೆಸರು ನಹುಷನೆಂದು ಹೇಳಿತು.

ಅರ್ಥ:
ವೃತ್ತಾಂತ: ವಿವರ; ನಿದಾನ: ಮೂಲಕಾರಣ; ಮುನ್ನ: ಮೊದಲು; ಬೆಸ: ಕೇಳು; ಹೇಳು: ತಿಳಿಸು; ಅಭಿಧಾನ: ಹೆಸರು; ಮುನ್ನ: ಮೊದಲು; ಅಯ್ಯ: ತಂದೆ; ನಾಮ: ಹೆಸರು; ನೃಪತಿ: ರಾಜ;

ಪದವಿಂಗಡಣೆ:
ಎನ್ನ +ವೃತ್ತಾಂತದ +ನಿದಾನವ
ಮುನ್ನ +ನೀ +ಬೆಸಗೊಳಲು +ಹೇಳಿದೆನ್
ಇನ್ನು +ನಿನ್+ಅಭಿಧಾನವನು +ನೀನ್+ಆವನೆಂಬುದನು
ಇನ್ನು +ಕೇಳುವೆನ್+ಎನಲು +ನಿಮ್ಮಲಿ
ಮುನ್ನಿನವನು +ಯಯಾತಿ+ಅಯ್ಯನು
ತನ್ನ+ ನಾಮವು+ ನಹುಷನೆಂಬುದು +ನೃಪತಿ +ಕೇಳೆಂದ

ಅಚ್ಚರಿ:
(೧) ಅಭಿಧಾನ, ನಾಮ – ಸಮನಾರ್ಥಕ ಪದ

ಪದ್ಯ ೪೯: ಬ್ರಾಹ್ಮಣನಾರು ಎಂದು ಧರ್ಮಜನು ತಿಳಿಸಿದನು?

ಉರಗ ಕೇಳ್ ಪಿತೃಮಾತೃ ವಂಶೋ
ತ್ಕರವಿಶುದ್ಧಸದಾಗ್ನಿ ಹೋತ್ರಾ
ಚರಿತವಾಸ್ವಾಧ್ಯಾಯ ಸತ್ಯವಹಿಂಸೆ ಪರಿತೋಷ
ವರಗುಣಂಗಳಿವಾವನಲಿ ಗೋ
ಚರಿಸಿತಾತನೆ ವಿಪ್ರನೆಂಬರು
ಹಿರಿಯರೆಂದನು ಧರ್ಮಸುತ ನಹುಷಂಗೆ ವಿನಯದಲಿ (ಅರಣ್ಯ ಪರ್ವ, ೧೪ ಸಂಧಿ, ೪೯ ಪದ್ಯ)

ತಾತ್ಪರ್ಯ:
ನಹುಷನ ಪ್ರಶ್ನೆಗೆ ಧರ್ಮಜನು, ಎಲೈ ಸರ್ಪ, ಉತ್ತಮ ಕುಲದಲ್ಲಿ ಜನಿಸಿ, ಅಗ್ನಿಹೋತ್ರ ಸ್ವಾಧ್ಯಾಯ, ಸತ್ಯ, ಅಹಿಂಸೆ, ಸಂತೃಪ್ತಿ ಇವೆಲ್ಲವನ್ನೂ ಯಾರು ತನ್ನಲ್ಲಿ ಒಡಗೂಡಿಸಿ ಕೊಂಡಿರುವವರೋ ಅವನನ್ನೇ ವಿಪ್ರನೆಂದು ಹಿರಿಯರು ಕರೆಯುತ್ತಾರೆ ಎಂದು ನಹುಷಂಗೆ ಧರ್ಮಜನು ಹೇಳಿದನು.

ಅರ್ಥ:
ಉರಗ: ಹಾವು; ಕೇಳು: ಆಲಿಸು; ಪಿತೃ: ತಂದೆ; ಮಾತೃ: ತಾಯಿ; ವಂಶ: ಕುಲ; ಉತ್ಕರ: ಸಮೂಹ; ವಿಶುದ್ಧ: ಪರಿಶುದ್ಧವಾದುದು; ಅಗ್ನಿಹೋತ್ರ: ಅಗ್ನಿಯನ್ನು ಉದ್ದೇಶಿಸಿ ಮಾಡುವ ಹೋಮ; ಚರಿತ: ನಡಿಗೆ; ಅಧ್ಯಾಯ: ಓದು; ಸತ್ಯ: ನಿಜ; ಅಹಿಂಸೆ: ಅನ್ಯ ಜೀವಿಗಳಿಗೆ ತೊಂದರೆ ಕೊಡದಿರುವುದು; ಪರಿತೋಷ: ಸಂಪೂರ್ಣ ತೃಪ್ತಿ; ವರ: ಶ್ರೇಷ್ಠ; ಗುಣ: ನಡತೆ, ಸ್ವಭಾವ; ಗೋಚರ: ತೋರು; ವಿಪ್ರ: ಬ್ರಾಹ್ಮಣ; ಹಿರಿಯರು: ದೊಡ್ಡವರು; ಸುತ: ಮಗ; ವಿನಯ: ಒಳ್ಳೆಯತನ, ಸೌಜನ್ಯ;

ಪದವಿಂಗಡಣೆ:
ಉರಗ +ಕೇಳ್ +ಪಿತೃ+ಮಾತೃ +ವಂಶೋ
ತ್ಕರ+ವಿಶುದ್ಧ+ಸದಾ+ಅಗ್ನಿ+ ಹೋತ್ರಾ
ಚರಿತವ+ಸ್ವ+ಅಧ್ಯಾಯ +ಸತ್ಯವ್+ಅಹಿಂಸೆ +ಪರಿತೋಷ
ವರ+ಗುಣಂಗಳ್ +ಇವಾವನಲಿ +ಗೋ
ಚರಿಸಿತ್+ಆತನೆ +ವಿಪ್ರನೆಂಬರು
ಹಿರಿಯರ್+ಎಂದನು +ಧರ್ಮಸುತ +ನಹುಷಂಗೆ +ವಿನಯದಲಿ

ಅಚ್ಚರಿ:
(೧) ಬ್ರಾಹ್ಮಣನ ಲಕ್ಷಣ – ಪಿತೃಮಾತೃ ವಂಶೋತ್ಕರವಿಶುದ್ಧಸದಾಗ್ನಿ ಹೋತ್ರಾ ಚರಿತವಾಸ್ವಾಧ್ಯಾಯ ಸತ್ಯವಹಿಂಸೆ ಪರಿತೋಷ ವರಗುಣಂಗಳಿವಾವನಲಿ ಗೋಚರಿಸಿತಾತನೆ ವಿಪ್ರನೆಂಬರು

ಪದ್ಯ ೪೭: ಧರ್ಮಜನು ನಹುಷನಿಗೆ ಏನು ಹೇಳಿದನು?

ಉಸುರಬಹುದೇ ಧರ್ಮತತ್ತ್ವ
ಪ್ರಸರಣವಿದೇಯೆಂದು ನೀ ಶಂ
ಕಿಸಲು ವೇದಸ್ಮೃತಿ ಪುರಾಣ ತ್ರಾಣ ತುಟ್ಟಿಸದೆ
ಎಸೆವ ವಿಪ್ರರ ಮತಿಗೆ ಸಂಭಾ
ವಿಸುವ ಧರ್ಮವನರುಹುವೆನು ನೀ
ಬೆಸಗೊಳೆಂದನು ಧರ್ಮಸುತ ನಹುಷಂಗೆ ವಿನಯದಲಿ (ಅರಣ್ಯ ಪರ್ವ, ೧೪ ಸಂಧಿ, ೪೭ ಪದ್ಯ)

ತಾತ್ಪರ್ಯ:
ಸರ್ಪನ ರೂಪದಲ್ಲಿದ್ದ ನಹುಷನನ್ನುದ್ದೇಶಿಸಿ ಧರ್ಮಜನು ತನ್ನ ವಿಚಾರವನ್ನು ಹೇಳಲು ಪ್ರಾರಂಭಿಸಿದನು. ಧರ್ಮ ತತ್ತ್ವವು ಇದೇ, ಇದರ ವ್ಯಾಪ್ತಿಯಿಷ್ಟೇ ಎಂದು ಹೇಳಲು ಸಾಧ್ಯವೇ? ವೇದಗಳು ಸ್ಮೃತಿಗಳು, ಪುರಾಣಗಳು ಇದೇ ಧರ್ಮವೆಂದು ಹೇಳುವವನ ಮಾತನ್ನು ತಿರಸ್ಕರಿಸುವುದಿಲ್ಲವೇ? ವಿಪ್ರರಾದವರ ಮತಿಗೆ ಗೋಚರವಾದ ಧರ್ಮಮಾರ್ಗವನ್ನು ಅವರಿಂದ ಕೇಳಿ ತಿಳಿದ ವಿಷಯವನ್ನು ಹೇಳುತ್ತೇನೆ, ನೀನು ಕೇಳು ಎಂದು ಧರ್ಮಜನು ಹೇಳಿದನು.

ಅರ್ಥ:
ಉಸುರ: ಹೇಳು, ಮಾತನಾಡು; ಧರ್ಮ: ಧಾರಣೆ ಮಾಡಿದುದು; ತತ್ವ: ಪರಮಾತ್ಮನ ಸ್ವರೂಪವೇ ಆಗಿರುವ ಆತ್ಮನ ಸ್ವರೂಪ, ಸಾರ; ಪ್ರಸರಣ: ಹರಡುವಿಕೆ, ಪ್ರಸಾರ; ಶಂಕೆ: ಸಂದೇಹ, ಸಂಶಯ; ವೇದ: ಶೃತಿ; ಸ್ಮೃತಿ: ಧರ್ಮಶಾಸ್ತ್ರ; ಪುರಾಣ: ಇತಿಹಾಸ; ತ್ರಾಣ: ಕಾಪು, ರಕ್ಷಣೆ, ಶಕ್ತಿ; ತುಟ್ಟಿಸು: ಕಡಿಮೆಯಾಗು, ಕುಂದು; ಎಸೆ: ಶೋಭಿಸು; ಒಗೆ; ವಿಪ್ರ: ಬ್ರಾಹ್ಮಣ; ಮತಿ: ಬುದ್ಧಿ; ಸಂಭಾವಿಸು: ಯೋಚಿಸು, ತೃಪ್ತಿಪಡಿಸು; ಅರುಹು: ತಿಳಿಸು; ಬೆಸ: ಅಪ್ಪಣೆ, ಕೇಳು; ಸುತ: ಮಗ; ವಿನಯ: ಒಳ್ಳೆಯತನ, ಸೌಜನ್ಯ;

ಪದವಿಂಗಡಣೆ:
ಉಸುರಬಹುದೇ+ ಧರ್ಮತತ್ತ್ವ
ಪ್ರಸರಣವ್+ಇದೇ+ಎಂದು +ನೀ +ಶಂ
ಕಿಸಲು +ವೇದಸ್ಮೃತಿ +ಪುರಾಣ +ತ್ರಾಣ +ತುಟ್ಟಿಸದೆ
ಎಸೆವ +ವಿಪ್ರರ +ಮತಿಗೆ +ಸಂಭಾ
ವಿಸುವ +ಧರ್ಮವನ್+ಅರುಹುವೆನು +ನೀ
ಬೆಸಗೊಳೆಂದನು +ಧರ್ಮಸುತ +ನಹುಷಂಗೆ +ವಿನಯದಲಿ

ಅಚ್ಚರಿ:
(೧) ಧರ್ಮದ ಬಗ್ಗೆ ಧರ್ಮಜ ಹೇಳಿದುದು – ಎಸೆವ ವಿಪ್ರರ ಮತಿಗೆ ಸಂಭಾವಿಸುವ ಧರ್ಮವನರುಹುವೆನು

ಪದ್ಯ ೨೫: ಊರ್ವಶಿ ಹೇಗೆ ಭರತಕುಲದ ಜನನಿ?

ನಾರಿ ನೀ ಪೂರ್ವದಲಿ ನಮ್ಮ ಪು
ರೂರವನ ಸತಿ ನಿನಗೆ ಬಳಿಕ ಕು
ಮಾರ ಜನಿಸಿದನಾಯುವಾತನೊಳುದಿಸಿದನು ನಹುಷ
ವೀರರಾಜ ಪರಂಪರೆಯು ಬರ
ಲಾರಿಗಾವುದಿಸಿದೆವು ನಮ್ಮ ವಿ
ಚಾರಿಸಿದುದಿಲ್ಲಾಯೆನುತ ವಿನಯದಲಿ ನರ ನುಡಿದ (ಅರಣ್ಯ ಪರ್ವ, ೯ ಸಂಧಿ, ೨೫ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನ ಮಾತನ್ನು ಮುಂದುವರೆಸುತ್ತಾ, ತಾಯಿ, ನೀವು ನಮ್ಮ ಪೂರ್ವಜರಾದ ಪುರೂರವನ ಪತ್ನಿಯಾಗಿದ್ದಿರಿ, ನಿಮಗೆ ಆಯುವೆಂಬ ಮಗನು ಹುಟ್ಟಿದನು, ಆಯಿವಿಗೆ ನಹುಷನು ಮಗ. ಈ ವೀರ ರಾಜರ ಪರಂಪರೆಯಲ್ಲಿ ಯಾರು ಯಾರು ಹುಟ್ಟಿದರು, ನಾವು ಯಾರ ಮಕ್ಕಳೆಂದು ನೀವು ವಿಚಾರಿಸಲಿಲ್ಲವೇ? ಎಂದು ಅರ್ಜುನನು ವಿನಯದಿಂದ ಕೇಳಿದನು.

ಅರ್ಥ:
ನಾರಿ: ಹೆಣ್ಣು; ಪೂರ್ವ: ಹಿಂದೆ; ಸತಿ: ಹೆಂಡತಿ; ಬಳಿಕ: ನಂತರ; ಕುಮಾರ: ಮಗ; ಜನಿಸು: ಹುಟ್ಟು; ಉದಿಸು: ಹುಟ್ಟು; ವೀರ: ಶೂರ; ರಾಜ: ನೃಪ; ಪರಂಪರೆ: ಪರಿವಿಡಿ, ಹಿನ್ನಲೆ, ಕುಲ; ಬರಲು: ಆಗಮಿಸು; ವಿಚಾರಿಸು: ತಿಳಿದುಕೊಳ್ಳು; ವಿನಯ: ಸೌಜನ್ಯ; ನರ: ಅರ್ಜುನ; ನುಡಿ: ಮಾತಾಡು;

ಪದವಿಂಗಡಣೆ:
ನಾರಿ +ನೀ +ಪೂರ್ವದಲಿ +ನಮ್ಮ +ಪು
ರೂರವನ +ಸತಿ +ನಿನಗೆ +ಬಳಿಕ +ಕು
ಮಾರ +ಜನಿಸಿದನ್+ಆಯುವ್+ಆತನೊಳ್+ಉದಿಸಿದನು +ನಹುಷ
ವೀರ+ರಾಜ +ಪರಂಪರೆಯು +ಬರಲ್
ಆರಿಗ್+ಆವ್+ಉದಿಸಿದೆವು +ನಮ್ಮ +ವಿ
ಚಾರಿಸಿದುದ್+ಇಲ್ಲಾ+ಎನುತ +ವಿನಯದಲಿ +ನರ+ ನುಡಿದ

ಅಚ್ಚರಿ:
(೧) ಊರ್ವಶಿಯ ಹಿನ್ನಲೆ – ನಾರಿ ನೀ ಪೂರ್ವದಲಿ ನಮ್ಮ ಪುರೂರವನ ಸತಿ