ಪದ್ಯ ೭೫: ಅಭಿಮನ್ಯುವು ಯಾರಿಗೆ ಭೂಮಿವಾಸವನ್ನು ಕೊನೆಗೊಳಿಸಿದನು?

ಆ ಸುಯೋಧನ ಸುತರ ಸರಳ ವಿ
ಳಾಸವನು ಖಂಡಿಸಿದನವದಿರ
ಬೀಸರಕೆ ಬಂದಡ್ಡಬೀಳುವ ಭಟರ ಕೆಡೆಯೆಚ್ಚ
ರೋಷವಹ್ನಿಯ ಕೆದರೆ ಕವಿವ ಮ
ಹೀಶರನು ಮಾಣಿಸಿದನವನೀ
ವಾಸವನು ವಾಸವನ ಮೊಮ್ಮನುದಾರ ಸಮರದಲಿ (ದ್ರೋಣ ಪರ್ವ, ೫ ಸಂದಿ, ೭೫ ಪದ್ಯ)

ತಾತ್ಪರ್ಯ:
ಕೌರವನ ಮಕ್ಕಳ ಬಾಣಗಳನ್ನು ಖಂಡಿಸಿದನು. ಅವರ ರಕ್ಷಣೆಗೆ ಅಡ್ಡವಾಗಿ ಬಂದ ಭಟರನ್ನು ಬೀಳಿಸಿದನು. ಅಭಿಮನ್ಯುವು ಅವರ ಸಹಾಯಕ್ಕೆ ಬಂದ ರಾಜರಿಗೆ ಭೂಮಿಯ ವಾಸವನ್ನು ಕೊನೆಗೊಳಿಸಿದನು.

ಅರ್ಥ:
ಸುತ: ಮಕ್ಕಳು, ಮಗ; ಸರಳ: ಬಾಣ; ವಿಳಾಸ: ಕ್ರೀಡೆ, ವಿಹಾರ; ಖಂಡಿಸು: ಧ್ವಂಸಗೊಳಿಸು; ಅವದಿರ: ಅಷ್ಟು ಜನ; ಬೀಸರ: ವ್ಯರ್ಥವಾದುದು; ಅಡ್ಡಬೀಳು: ಮಧ್ಯ ಪ್ರವೇಶಿಸು; ಭಟ: ಸೈನಿಕ; ಕೆಡೆ: ಬೀಳು, ಕುಸಿ; ಎಚ್ಚು: ಬಾಣ ಪ್ರಯೋಗ ಮಾಡು; ರೋಷ: ಕೋಪ; ವಹ್ನಿ: ಬೆಂಕಿ; ಮಾಣು: ನಿಲ್ಲಿಸು; ಕವಿ: ಆವರಿಸು; ಮಹೀಶ: ರಾಜ; ಅವನೀ: ಭೂಮಿ; ವಾಸ: ಬದುಕು; ವಾಸವ: ಇಂದ್ರ; ಮೊಮ್ಮ: ಮೊಮ್ಮಗ; ಉದಾರ: ವಿಸ್ತಾರವಾದ; ಸಮರ: ಯುದ್ಧ;

ಪದವಿಂಗಡಣೆ:
ಆ +ಸುಯೋಧನ+ ಸುತರ +ಸರಳ+ ವಿ
ಳಾಸವನು +ಖಂಡಿಸಿದನ್+ಅವದಿರ
ಬೀಸರಕೆ+ ಬಂದ್+ಅಡ್ಡಬೀಳುವ +ಭಟರ +ಕೆಡೆ+ಯೆಚ್ಚ
ರೋಷವಹ್ನಿಯ +ಕೆದರೆ+ ಕವಿವ+ ಮ
ಹೀಶರನು+ ಮಾಣಿಸಿದನ್+ಅವನೀ
ವಾಸವನು +ವಾಸವನ+ ಮೊಮ್ಮನ್+ಉದಾರ+ ಸಮರದಲಿ

ಅಚ್ಚರಿ:
(೧) ವಾಸವ ಪದದ ಬಳಕೆ – ಮಹೀಶರನು ಮಾಣಿಸಿದನವನೀವಾಸವನು ವಾಸವನ ಮೊಮ್ಮನುದಾರ ಸಮರದಲಿ
(೨) ಸಾಯಿಸಿದನು ಎಂದು ಹೇಳುವ ಪರಿ – ಮಹೀಶರನು ಮಾಣಿಸಿದನವನೀವಾಸವನು

ನಿಮ್ಮ ಟಿಪ್ಪಣಿ ಬರೆಯಿರಿ