ಪದ್ಯ ೪೮: ದುರ್ಯೋಧನನು ಅಭಿಮನ್ಯುವಿನ ಪೌರುಷವನ್ನು ಹೇಗೆ ಹೊಗಳಿದನು?

ತುಡುಕಲಮ್ಮುವರಿಲ್ಲ ಬಲದಲಿ
ಮಿಡುಕಲಮ್ಮುವರಿಲ್ಲ ರಕುತದ
ಕಡಲೊಳಗೆ ಬೆಂಡೆದ್ದು ನೆಗೆದುದು ಕೋಟಿ ಪಾಯದಳ
ಸಿಡಿಲು ಜಂಗಮವಾಯ್ತೊ ಪ್ರಳಯದ
ಮೃಡನು ಬಾಲಕನಾದನೋ ಕೊಲೆ
ಗಡಿಕನಹುದೋ ಕಂದ ಎಂದನು ಕೌರವರ ರಾಯ (ದ್ರೋಣ ಪರ್ವ, ೬ ಸಂಧಿ, ೪೮ ಪದ್ಯ)

ತಾತ್ಪರ್ಯ:
ನಮ್ಮ ಸೈನ್ಯದಲ್ಲಿ ಇವನೆದುರು ನಿಂತು ಹೋರಾಡುವವರಿಲ್ಲ, ಇವನನ್ನು ಕಂಡು ಯಾರೂ ಅಲುಗಾಡುತ್ತಿಲ್ಲ. ರಕ್ತದ ಕಡಲಲ್ಲಿ ಅಸಂಖ್ಯಾತ ಕಾಲಾಳುಗಳು ಸೈನ್ಯವು ಬೆಂಡೆದ್ದು ನಗೆದುಹೋಯಿತು. ಸಿಡಿಲೇ ಇಲ್ಲಿ ಓಡಾಡುತ್ತಿದೆಯೋ, ಪ್ರಳಯ ರುದ್ರನೇನಾದರೂ ಬಾಲಕನಾದನೋ, ಮಗೂ ನೀನು ಕೊಲೆಗಡುಕನೇ ಹೌದು ಎಂದನು.

ಅರ್ಥ:
ತುಡುಕು: ಹೋರಾಡು; ಅಮ್ಮು: ಸಾಮರ್ಥ್ಯ; ಬಲ: ಶಕ್ತಿ; ಮಿಡುಕು: ಅಲುಗಾಟ, ಚಲನೆ; ರಕುತ: ನೆತ್ತರು; ಕಡಲು: ಸಾಗರ; ಬೆಂಡು: ತಿರುಳಿಲ್ಲದುದು; ನೆಗೆ: ಜಿಗಿ; ಕೋಟಿ: ಅಸಂಖ್ಯಾತ; ಪಾಯದಳ: ಸೈನಿಕ; ಸಿಡಿಲು: ಅಶನಿ; ಜಂಗಮ: ಚಲನೆಯುಳ್ಳದ್ದು; ಪ್ರಳಯ: ಲ್ಪದ ಕೊನೆಯಲ್ಲಿ ಉಂಟಾಗುವ ಪ್ರಪಂಚದ ನಾಶ, ಅಳಿವು; ಮೃಡ: ಶಿವ; ಬಾಲಕ: ಹುಡುಗ; ಕೊಲೆ: ಸಾಯಿಸು; ಕೊಲೆಗಡಿಕ: ಸಾಯಿಸುವವ; ಕಂದ: ಮಗು; ರಾಯ: ರಾಜ;

ಪದವಿಂಗಡಣೆ:
ತುಡುಕಲ್+ಅಮ್ಮುವರಿಲ್ಲ +ಬಲದಲಿ
ಮಿಡುಕಲ್+ಅಮ್ಮುವರಿಲ್ಲ+ ರಕುತದ
ಕಡಲೊಳಗೆ+ ಬೆಂಡೆದ್ದು +ನೆಗೆದುದು +ಕೋಟಿ +ಪಾಯದಳ
ಸಿಡಿಲು +ಜಂಗಮವಾಯ್ತೊ +ಪ್ರಳಯದ
ಮೃಡನು +ಬಾಲಕನಾದನೋ +ಕೊಲೆ
ಗಡಿಕನಹುದೋ +ಕಂದ +ಎಂದನು+ ಕೌರವರ+ ರಾಯ

ಅಚ್ಚರಿ:
(೧) ತುಡುಕಲ್, ಮಿಡುಕಲ್ – ಪ್ರಾಸ ಪದ
(೨) ಉಪಮಾನದ ಪ್ರಯೋಗ – ರಕುತದ ಕಡಲೊಳಗೆ ಬೆಂಡೆದ್ದು ನೆಗೆದುದು ಕೋಟಿ ಪಾಯದಳ

ಪದ್ಯ ೪೭: ಕೌರವ ಸೈನ್ಯವು ಅಭಿಮನ್ಯುವನ್ನು ಹೇಗೆ ಹೊಗಳಿತು?

ಹಸುಳೆಯೆನಬಹುದೇ ಮಹಾದೇ
ವಸಮಬಲ ಬಾಲಕನೆನುತ ಚಾ
ಳಿಸಿತು ಪಡೆಯಲ್ಲಲ್ಲಿ ತಲ್ಲಣಿಸಿದರು ನಾಯಕರು
ಮುಸುಡ ತಿರುಹುತ ಮಕುಟವರ್ಧನ
ರುಸುರಲಮ್ಮದೆ ಸಿಕ್ಕಿ ಭೂಪನ
ನುಸುಳುಗಂಡಿಯ ನೋಡುತಿರ್ದರು ಕೂಡೆ ತಮತಮಗೆ (ದ್ರೋಣ ಪರ್ವ, ೬ ಸಂಧಿ, ೪೭ ಪದ್ಯ)

ತಾತ್ಪರ್ಯ:
ಇವನು ಬಾಲಕನೇ? ಶಿವ ಶಿವಾ ಇವನು ಅಸಮಾನ ಬಲಶಾಲಿ ಎಂದು ಕೌರವ ಪಡೆಯು ಅಭಿಮನ್ಯುವಿನ ಶೌರ್ಯವನ್ನು ಕಂಡು ಅಲ್ಲಲ್ಲೇ ನಡುಗಿ ತಲ್ಲಣಿಸಿತು. ನಾಯಕರು ಮುಖವನ್ನು ತಿರುವಿದರು. ರಾಜರು ಮಾತನಾಡಲಾಗದೆ ಕೌರವನಿಂದ ತಪ್ಪಿಸಿಕೊಳ್ಳುವ ದಾರಿಯನ್ನು ಹುಡುಕುತ್ತಿದ್ದರು.

ಅರ್ಥ:
ಹಸುಳೆ: ಚಿಕ್ಕವ; ಮಹಾದೇವ: ಶಂಕರ; ಅಸಮ: ಅಸದೃಶವಾದ; ಬಾಲಕ: ಹುಡುಗ; ಚಾಳಿಸು: ಹೀಯಾಳಿಸು; ಪಡೆ: ಸೈನ್ಯ; ತಲ್ಲಣ: ಅಂಜಿಕೆ, ಭಯ; ನಾಯಕ: ಒಡೆಯ; ಮುಸುಡ: ಮುಖ; ತಿರುಹು: ತಿರುಗಿಸು; ಮಕುಟ: ಕಿರೀಟ; ವರ್ಧನ: ಅಭಿವೃದ್ಧಿ; ಉಸುರು: ಹೇಳು; ಸಿಕ್ಕು: ಪಡೆದು; ಭೂಪ: ರಾಜ; ನುಸುಳು: ನುಣುಚಿಕೊಳ್ಳುವಿಕೆ; ನೋಡು: ವೀಕ್ಷಿಸು; ಕೂಡೆ: ಜೊತೆ;

ಪದವಿಂಗಡಣೆ:
ಹಸುಳೆ+ಎನಬಹುದೇ+ ಮಹಾದೇವ್
ಅಸಮಬಲ+ ಬಾಲಕನೆನುತ+ ಚಾ
ಳಿಸಿತು +ಪಡೆ+ಅಲ್ಲಲ್ಲಿ +ತಲ್ಲಣಿಸಿದರು +ನಾಯಕರು
ಮುಸುಡ +ತಿರುಹುತ +ಮಕುಟವರ್ಧನರ್
ಉಸುರಲ್+ಅಮ್ಮದೆ +ಸಿಕ್ಕಿ +ಭೂಪನ
ನುಸುಳುಗಂಡಿಯ +ನೋಡುತಿರ್ದರು +ಕೂಡೆ +ತಮತಮಗೆ

ಅಚ್ಚರಿ:
(೧) ಅಭಿಮನ್ಯುವನ್ನು ಹೊಗಳುವ ಪರಿ – ಹಸುಳೆಯೆನಬಹುದೇ ಮಹಾದೇವಸಮಬಲ ಬಾಲಕನೆನುತ ಚಾ
ಳಿಸಿತು ಪಡೆ

ಪದ್ಯ ೪೬: ನಿಶ್ಯಸ್ತ್ರವಾಗಿಯೂ ಅಭಿಮನ್ಯುವಿನ ಪರಾಕ್ರಮವು ಹೇಗಿತ್ತು?

ಸೀಳಿದನು ಸೌಬಲನೊಳಿಪ್ಪ
ತ್ತೇಳನಾ ಮಾದ್ರೇಶರೊಳು ಹದಿ
ನೇಳನಗ್ಗದ ರವಿಸುತನ ಮಂತ್ರಿಗಳೊಳೈವರನು
ಮೇಲೆ ಕೇರಳರೊಳಗೆ ಹತ್ತು ನೃ
ಪಾಲರನು ಕೌಸಲ ಯವನ ನೇ
ಪಾಳ ಬರ್ಬರರೊಳಗೆ ಕೊಂದನು ಹತ್ತು ಸಾವಿರವ (ದ್ರೋಣ ಪರ್ವ, ೬ ಸಂಧಿ, ೪೬ ಪದ್ಯ)

ತಾತ್ಪರ್ಯ:
ಶಕುನಿಯ ಸೈನ್ಯದಲ್ಲಿ ಇಪ್ಪತ್ತೇಳು, ಶಲ್ಯನ ಸೈನ್ಯದಲ್ಲಿ ಹದಿನೇಳು, ಕರ್ಣನ ಬಲದಲ್ಲಿ ಐವರು ಮಂತ್ರಿಗಳನ್ನು ಸೀಳಿದನು. ಕೇರಳದ ಹತ್ತು ರಾಜರನ್ನು ಕೊಂದನು, ಕೌಸಲ, ಯವನ, ನೇಪಾಳ, ಬರ್ಬರ ದೇಶಗಳ ಹತ್ತು ಸಾವಿರ ರಾಜರನ್ನು ಕೊಂದನು.

ಅರ್ಥ:
ಸೀಳು: ಕತ್ತರಿಸು; ಸೌಬಲ: ಶಕುನಿ; ಮಾದ್ರೇಶ: ಶಲ್ಯ; ಅಗ್ಗ: ಶ್ರೇಷ್ಠ; ರವಿಸುತ: ಸೂರ್ಯನ ಮಗ (ಕರ್ಣ) ಮಂತ್ರಿ: ಸಚಿವ; ನೃಪಾಲ: ರಾಜ; ಕೊಂದು: ಕೊಲ್ಲು; ಸಾವಿರ: ಸಹಸ್ರ;

ಪದವಿಂಗಡಣೆ:
ಸೀಳಿದನು+ ಸೌಬಲನೊಳ್+ಇಪ್ಪ
ತ್ತೇಳನ್+ಆ+ ಮಾದ್ರೇಶರೊಳು +ಹದಿ
ನೇಳನ್+ಅಗ್ಗದ +ರವಿಸುತನ+ ಮಂತ್ರಿಗಳೊಳ್+ಐವರನು
ಮೇಲೆ +ಕೇರಳರೊಳಗೆ+ ಹತ್ತು +ನೃ
ಪಾಲರನು +ಕೌಸಲ +ಯವನ +ನೇ
ಪಾಳ +ಬರ್ಬರರೊಳಗೆ+ ಕೊಂದನು +ಹತ್ತು +ಸಾವಿರವ

ಅಚ್ಚರಿ:
(೧) ಕೇರಳ, ಕೌಸಲ, ಯವನ, ನೇಪಾಳ, ಬರ್ಬರ, ಮದ್ರ, ಗಾಂಧಾರ – ಕೌರವರೊಂದಿಗಿದ್ದ ರಾಷ್ಟ್ರಗಳು

ಪದ್ಯ ೪೫: ಅಭಿಮನ್ಯುವಿನ ಶೌರ್ಯವು ಹೇಗಿತ್ತು?

ಅಟ್ಟಿ ಹೊಯ್ದನು ದಂತಿಗಳ ಹುಡಿ
ಗುಟ್ಟಿದನು ವಾಜಿಗಳ ತೇರಿನ
ಥಟ್ಟುಗಳ ಸೀಳಿದನು ಮಿಗೆ ಕಾಲಾಳನಸಿಯರೆದ
ಕೆಟ್ಟು ಬಿಟ್ಟೋಡಿದುದು ಭಟನರೆ
ಯಟ್ಟಿದನು ರಣದೊಳಗೆ ರಾಯ ಘ
ರಟ್ಟ ಪಾರ್ಥನ ತನಯ ಕೊಂದನು ಖಡ್ಗ ಮನ ದಣಿಯೆ (ದ್ರೋಣ ಪರ್ವ, ೬ ಸಂಧಿ, ೪೫ ಪದ್ಯ)

ತಾತ್ಪರ್ಯ:
ಆನೆಗಳನ್ನು ಅಟ್ಟಿಸಿಕೊಂಡು ಹೋಗಿ ಹೊಡೆದನು, ಕುದುರೆಗಳನ್ನು ಪುಡಿಮಾಡಿದನು. ರಥಗಳ ಸೈನ್ಯವನ್ನು ಸೀಳಿದನು. ಕಾಲಾಳುಗಳನ್ನು ಕತ್ತಿಯಿಂದ ಅರೆದು ಹಾಕಿದನು. ಸೈನಿಕರು ತಾವಿದ್ದ ಸ್ಥಳವನ್ನು ಬಿಟ್ಟು ಕೆಟ್ಟೆವೆಂದು ಓಡಿದರು. ಅಭಿಮನ್ಯುವು ಅಟ್ಟಿಸಿಕೊಂಡು ಹೋಗಿ ಅವರನ್ನಪ್ಪಳಿಸಿದನು. ಅವರ ಖಡ್ಗದ ಮನಸ್ಸು ತಣಿದು ಬಿಟ್ಟಿತು.

ಅರ್ಥ:
ಅಟ್ಟು: ಬೆನ್ನುಹತ್ತಿ ಹೋಗು; ಹೊಯ್ದು: ಹೊಡೆ; ದಂತಿ: ಆನೆ; ಹುಡಿ: ಪುಡಿ; ಕುಟ್ಟು: ಹೊಡೆತ, ಪೆಟ್ಟು; ವಾಜಿ: ಕುದುರೆ; ತೇರು: ಬಂಡಿ; ಥಟ್ಟು: ಗುಂಪು; ಸೀಳು: ಚೂರು, ತುಂಡು; ಮಿಗೆ: ಅಧಿಕ; ಕಾಲಾಳು: ಸೈನಿಕ; ಅಸಿ:ಕತ್ತಿ; ಅರಿ: ನಾಶಮಾಡು; ಕೆಟ್ಟು: ಹಾಳು; ಓಡು: ಧಾವಿಸು; ಭಟ: ಸೈನಿಕ; ರಣ: ಯುದ್ಧ; ರಾಯ: ರಾಜ; ಘರಟ್ಟ: ಬೀಸುವ ಕಲ್ಲು, ರಾಗಿಕಲ್ಲು; ತನಯ: ಮಗ; ಕೊಂದು: ಕೊಲ್ಲು; ಖಡ್ಗ: ಕತ್ತಿ; ಮನ: ಮನಸ್ಸು; ದಣಿ: ಆಯಾಸ;

ಪದವಿಂಗಡಣೆ:
ಅಟ್ಟಿ +ಹೊಯ್ದನು +ದಂತಿಗಳ+ ಹುಡಿ
ಕುಟ್ಟಿದನು +ವಾಜಿಗಳ +ತೇರಿನ
ಥಟ್ಟುಗಳ +ಸೀಳಿದನು +ಮಿಗೆ +ಕಾಲಾಳನ್+ಅಸಿ+ಅರೆದ
ಕೆಟ್ಟು +ಬಿಟ್ಟೋಡಿದುದು+ ಭಟನ್+ಅರೆ
ಅಟ್ಟಿದನು +ರಣದೊಳಗೆ +ರಾಯ +ಘ
ರಟ್ಟ +ಪಾರ್ಥನ +ತನಯ+ ಕೊಂದನು +ಖಡ್ಗ +ಮನ +ದಣಿಯೆ

ಅಚ್ಚರಿ:
(೧) ಹೊಯ್ದನು, ಸೀಳಿದನು, ಅಟ್ಟಿದನು, ಕೊಂದನು – ಹೋರಟವನ್ನು ವಿವರಿಸುವ ಪದಗಳು
(೨) ಅಟ್ಟಿ, ಕುಟ್ಟಿ; ಥಟ್ಟು, ಕೆಟ್ಟು – ಪ್ರಾಸ ಪದಗಳು

ಪದ್ಯ ೪೪: ಅಭಿಮನ್ಯುವು ಶತ್ರುಸೈನ್ಯವನ್ನು ಹೇಗೆ ನಾಶ ಮಾಡಿದನು?

ಶಾಕಿನಿಯರೋಕುಳಿಯ ಧಾರೆಯ
ಜೀಕೊಳವೆಯೋ ಜವನ ಜಳ ಜಂ
ತ್ರಾಕರುಷಣವೊ ರಕುತ ಲತೆಗಳ ಕುಡಿಯ ಕೊನರುಗಳೊ
ನೂಕಿ ಕೊಯ್ಗೊರಳುಗಳ ಮುಂಡದ
ಮೂಕಿನಲಿ ನೆಗೆದೊಗುವ ನೆತ್ತರು
ನಾಕವನು ನಾದಿದುದೆನಲು ಸವರಿದನು ಪರಬಲವ (ದ್ರೋಣ ಪರ್ವ, ೬ ಸಂಧಿ, ೪೪ ಪದ್ಯ)

ತಾತ್ಪರ್ಯ:
ಶಾಕಿನಿಯರು ಚಿಮ್ಮುವ ಜೀರ್ಕೊಳವೆಯ ಓಕುಳಿಯೋ, ಯಮನ ಜಲಯಂತ್ರವೋ ರಕ್ತಲತೆಗಳ ಕುಡಿಯ ಚಿಗುರುಗಳೋ ಎನ್ನುವಂತೆ ಕೊಯ್ದ ಕೊರಳುಗಳ ಮೂಂಡದ ಮೂಕಿಯ ಮೇಲೆ ಚಿಮ್ಮುತ್ತಿರುವ ರಕ್ತದಿಂದ ಆಕಾಶವನ್ನು ತೋಯಿಸುತ್ತಿರಲು ಅಭಿಮನ್ಯುವು ಖಡ್ಗದಿಂದ ಶತ್ರು ಸೈನ್ಯವನ್ನು ಸವರಿದನು.

ಅರ್ಥ:
ಶಾಕಿನಿ: ಕ್ಷುದ್ರ ದೇವತೆ; ಓಕುಳಿ: ಎರಚುವ ಬಣ್ಣದ ನೀರು; ಧಾರೆ: ವರ್ಷ; ಜೀಕೊಳವೆ: ಪಿಚಕಾರಿ; ಜವ: ಯಮ; ಜಳ: ನೀರು; ಜಂತ್ರ: ಯಂತ್ರ; ಆಕರುಷಣ: ಆಕರ್ಷಣೆ; ರಕುತ: ನೆತ್ತರು; ಲತೆ: ಬಳ್ಳಿ; ಕುಡಿ: ಚಿಗುರು; ಕೊನರು: ಚಿಗುರು, ಕುಡಿ; ನೂಕು: ತಳ್ಳು; ಕೊಯ್: ಸೀಳು; ಕೊರಳು: ಕಂಠ; ಮುಂಡ: ತಲೆ; ಮೂಕ: ಮೌನಿ; ನೆಗೆ: ಜಿಗಿ; ಒಗು: ಚೆಲ್ಲು, ಸುರಿ; ನೆತ್ತರು: ರಕ್ತ; ನಾಕ: ಸ್ವರ್ಗ; ನಾದು: ಒದ್ದೆ ಮಾಡು; ಸವರು: ನಾಶಗೊಳಿಸು; ಪರಬಲ: ವೈರಿ ಸೈನ್ಯ;

ಪದವಿಂಗಡಣೆ:
ಶಾಕಿನಿಯರ್+ಓಕುಳಿಯ +ಧಾರೆಯ
ಜೀಕೊಳವೆಯೋ +ಜವನ+ ಜಳ+ ಜಂ
ತ್ರಾಕರುಷಣವೊ +ರಕುತ +ಲತೆಗಳ +ಕುಡಿಯ +ಕೊನರುಗಳೊ
ನೂಕಿ +ಕೊಯ್+ಕರಳುಗಳ+ ಮುಂಡದ
ಮೂಕಿನಲಿ+ ನೆಗೆದೊಗುವ +ನೆತ್ತರು
ನಾಕವನು +ನಾದಿದುದೆನಲು +ಸವರಿದನು +ಪರಬಲವ

ಅಚ್ಚರಿ:
(೧) ನ ಕಾರದ ಸಾಲು ಪದ – ನೆಗೆದೊಗುವ ನೆತ್ತರು ನಾಕವನು ನಾದಿದುದೆನಲು
(೨) ಜ ಕಾರದ ತ್ರಿವಲಿ ಪದ – ಜವನ ಜಳ ಜಂತ್ರಾಕರುಷಣವೊ
(೩) ಉಪಮಾನದ ಪ್ರಯೋಗ – ಶಾಕಿನಿಯರೋಕುಳಿಯ ಧಾರೆಯ ಜೀಕೊಳವೆಯೋ ಜವನ ಜಳ ಜಂ
ತ್ರಾಕರುಷಣವೊ ರಕುತ ಲತೆಗಳ ಕುಡಿಯ ಕೊನರುಗಳೊ

ಪದ್ಯ ೪೩: ಅಭಿಮನ್ಯುವಿನ ಖಡ್ಗವು ಹೇಗೆ ಶೋಭಿಸಿತು?

ವೈರಿ ವೀರಪ್ರತತಿಗಮರೀ
ನಾರಿಯರಿಗೆ ವಿವಾಹವನು ವಿ
ಸ್ತಾರಿಸುವ ಸಮಯದೊಳಗಾಂತ ಸಿತಾಕ್ಷತಾವಳಿಯ
ತಾರಕಿಗಳೆಸೆದಭ್ರವೆನೆ ರಿಪು
ವಾರಣದ ಮಸ್ತಕದ ಮುತ್ತುಗ
ಳೋರಣಿಸಲೊಪ್ಪಿದುದು ಖಡ್ಗ ಸುರೇಂದ್ರಸುತಸುತನ (ದ್ರೋಣ ಪರ್ವ, ೬ ಸಂಧಿ, ೪೩ ಪದ್ಯ)

ತಾತ್ಪರ್ಯ:
ಶತ್ರುವೀರರಿಗೂ ಅಪ್ಸರೆಯರಿಗೂ ನಡೆಯುವ ವಿವಾಹ ಸಮಯದಲ್ಲಿ ಎರಚುವ ಬಿಳಿಯ ಅಕ್ಷತೆಗಳು ನಕ್ಷತ್ರದಂತೆ ತೋರಿ, ನಕ್ಷತ್ರದಿಂದ ತುಂಬಿದ ಆಗಸವೋ ಎಂಬಂತೆ ಶತ್ರುಸೈನ್ಯದ ಆನೆಗಳ ತಲೆಯ ಮುತ್ತುಗಳ ಸುತ್ತಲೂ ಸಿಡಿಯುತ್ತಿರಲು ಅಭಿಮನ್ಯುವಿನ ಖಡ್ಗವು ಶೋಭಿಸಿತು.

ಅರ್ಥ:
ವೈರಿ: ಶತ್ರು; ವೀರ: ಶೂರ; ಪ್ರತತಿ: ಗುಂಪು, ಸಮೂಹ; ಅಮರೀನಾರಿ: ದೇವಲೋಕದ ಅಪ್ಸರೆ; ವಿವಾಹ: ಮದುವೆ; ವಿಸ್ತಾರ: ವೈಶಾಲ್ಯ; ಸಮಯ: ಗಳಿಗೆ; ಸಿತ: ಬಿಳಿ; ಅಕ್ಷತೆ: ನಕ್ಷತ್ರ; ಆವಳಿ: ಸಾಲು; ತಾರಕಿ: ನಕ್ಷತ್ರ; ಎಸೆ: ತೋರು; ಅಭ್ರ: ಆಗಸ; ರಿಪು: ವೈರಿ; ವಾರಣ: ಆನೆ; ಮಸ್ತಕ: ತಲೆ; ಮುತ್ತು: ಬೆಲೆಬಾಳುವ ರತ್ನ; ಓರಣೆ: ಸಾಲು; ಒಪ್ಪು: ಅಂಗೀಕರಿಸು; ಖಡ್ಗ: ಕತ್ತಿ; ಸುರೇಂದ್ರ: ಇಂದ್ರ; ಸುತ: ಮಗ;

ಪದವಿಂಗಡಣೆ:
ವೈರಿ +ವೀರ+ಪ್ರತತಿಗ್+ಅಮರೀ
ನಾರಿಯರಿಗೆ +ವಿವಾಹವನು +ವಿ
ಸ್ತಾರಿಸುವ +ಸಮಯದೊಳಗಾಂತ+ ಸಿತ+ಅಕ್ಷತಾವಳಿಯ
ತಾರಕಿಗಳ್+ಎಸೆದ್+ಅಭ್ರವೆನೆ +ರಿಪು
ವಾರಣದ +ಮಸ್ತಕದ +ಮುತ್ತುಗಳ್
ಓರಣಿಸಲ್+ಒಪ್ಪಿದುದು +ಖಡ್ಗ+ ಸುರೇಂದ್ರ+ಸುತ+ಸುತನ

ಅಚ್ಚರಿ:
(೧) ಅಭಿಮನ್ಯುವನ್ನು ಸುರೇಂದ್ರಸುತಸುತ ಎಂದು ಕರೆದಿರುವುದು
(೨) ಶತ್ರುವನ್ನು ಸಾಯಿಸಿದ ಎಂದು ಹೇಳಲು ಮದುವೆಯ ಶುಭ ಸಂದರ್ಭವನ್ನು ಕಲ್ಪಿಸುವ ಪರಿ – ವೈರಿ ವೀರಪ್ರತತಿಗಮರೀನಾರಿಯರಿಗೆ ವಿವಾಹವನು