ಪದ್ಯ ೧೦: ಸಾತ್ಯಕಿಯ ಮೇಲೆ ಯಾರು ಬಾಣಗಳನ್ನೆರದರು?

ಪಾರಸಿಕ ನೇಪಾಳ ಸಿಂಹಳ
ವೀರ ಬಾಹ್ಲಿಕ ಯವನ ಕೌಸಲ
ಪಾರಿಯಾತ್ರರು ತುರುಕ ಬರ್ಬರ ವಂಗ ಮಾಗಧರು
ಕೌರವೇಂದ್ರನ ಮನ್ನಣೆಯ ಪರಿ
ವಾರವೀತನ ಕೆಣಕಿದರು ಸರ
ಳೋರಣವ ಸೈಗರೆದರದುಭುತವಾಯ್ತು ಸಂಗ್ರಾಮ (ದ್ರೋಣ ಪರ್ವ, ೧೧ ಸಂಧಿ, ೧೦ ಪದ್ಯ)

ತಾತ್ಪರ್ಯ:
ಪಾರಸಿಕರು, ನೇಪಾಳ, ಸಿಂಹಳ, ಬಾಹ್ಲಿಕ, ಯವನ, ಕೌಸಲ, ಪಾರಿಯಾತ್ರ, ತುರುಕ, ಬರ್ಬರ, ವಂಗ, ಮಗಧ ದೇಶದ ಕೌರವನ ಪರಿವಾರದವರು ಸಾತ್ಯಕಿಯ ಮೇಲೆ ಸರಳುಗಳ ಸುರಿಮಳೆಗರೆದರು. ಯುದ್ಧವು ಅದ್ಭುತವಾಯಿತು.

ಅರ್ಥ:
ಮನ್ನಣೆ: ಗೌರವ, ಮರ್ಯಾದೆ; ಪರಿವಾರ: ಪರಿಜನ; ಕೆಣಕು: ರೇಗಿಸು; ಸರಳು: ಬಾಣ; ಓರಣ: ಕ್ರಮ, ಸಾಲು; ಅದುಭುತ: ಆಶ್ಚರ್ಯ; ಸಂಗ್ರಾಮ: ಯುದ್ಧ;

ಪದವಿಂಗಡಣೆ:
ಪಾರಸಿಕ+ ನೇಪಾಳ +ಸಿಂಹಳ
ವೀರ+ ಬಾಹ್ಲಿಕ +ಯವನ +ಕೌಸಲ
ಪಾರಿಯಾತ್ರರು +ತುರುಕ +ಬರ್ಬರ +ವಂಗ +ಮಾಗಧರು
ಕೌರವೇಂದ್ರನ +ಮನ್ನಣೆಯ +ಪರಿ
ವಾರವ್+ಈತನ +ಕೆಣಕಿದರು +ಸರ
ಳೋರಣವ +ಸೈಗರೆದರ್+ಅದುಭುತವಾಯ್ತು +ಸಂಗ್ರಾಮ

ಅಚ್ಚರಿ:
(೧) ಬೇರೆ ದೇಶಗಳ ಹೆಸರು – ಪಾರಸಿಕ, ನೇಪಾಳ, ಸಿಂಹಳ, ಬಾಹ್ಲಿಕ, ಯವನ, ಕೌಸಲ, ಪಾರಿಯಾತ್ರ, ತುರುಕ, ಬರ್ಬರ, ವಂಗ, ಮಾಗಧ

ಪದ್ಯ ೪೬: ನಿಶ್ಯಸ್ತ್ರವಾಗಿಯೂ ಅಭಿಮನ್ಯುವಿನ ಪರಾಕ್ರಮವು ಹೇಗಿತ್ತು?

ಸೀಳಿದನು ಸೌಬಲನೊಳಿಪ್ಪ
ತ್ತೇಳನಾ ಮಾದ್ರೇಶರೊಳು ಹದಿ
ನೇಳನಗ್ಗದ ರವಿಸುತನ ಮಂತ್ರಿಗಳೊಳೈವರನು
ಮೇಲೆ ಕೇರಳರೊಳಗೆ ಹತ್ತು ನೃ
ಪಾಲರನು ಕೌಸಲ ಯವನ ನೇ
ಪಾಳ ಬರ್ಬರರೊಳಗೆ ಕೊಂದನು ಹತ್ತು ಸಾವಿರವ (ದ್ರೋಣ ಪರ್ವ, ೬ ಸಂಧಿ, ೪೬ ಪದ್ಯ)

ತಾತ್ಪರ್ಯ:
ಶಕುನಿಯ ಸೈನ್ಯದಲ್ಲಿ ಇಪ್ಪತ್ತೇಳು, ಶಲ್ಯನ ಸೈನ್ಯದಲ್ಲಿ ಹದಿನೇಳು, ಕರ್ಣನ ಬಲದಲ್ಲಿ ಐವರು ಮಂತ್ರಿಗಳನ್ನು ಸೀಳಿದನು. ಕೇರಳದ ಹತ್ತು ರಾಜರನ್ನು ಕೊಂದನು, ಕೌಸಲ, ಯವನ, ನೇಪಾಳ, ಬರ್ಬರ ದೇಶಗಳ ಹತ್ತು ಸಾವಿರ ರಾಜರನ್ನು ಕೊಂದನು.

ಅರ್ಥ:
ಸೀಳು: ಕತ್ತರಿಸು; ಸೌಬಲ: ಶಕುನಿ; ಮಾದ್ರೇಶ: ಶಲ್ಯ; ಅಗ್ಗ: ಶ್ರೇಷ್ಠ; ರವಿಸುತ: ಸೂರ್ಯನ ಮಗ (ಕರ್ಣ) ಮಂತ್ರಿ: ಸಚಿವ; ನೃಪಾಲ: ರಾಜ; ಕೊಂದು: ಕೊಲ್ಲು; ಸಾವಿರ: ಸಹಸ್ರ;

ಪದವಿಂಗಡಣೆ:
ಸೀಳಿದನು+ ಸೌಬಲನೊಳ್+ಇಪ್ಪ
ತ್ತೇಳನ್+ಆ+ ಮಾದ್ರೇಶರೊಳು +ಹದಿ
ನೇಳನ್+ಅಗ್ಗದ +ರವಿಸುತನ+ ಮಂತ್ರಿಗಳೊಳ್+ಐವರನು
ಮೇಲೆ +ಕೇರಳರೊಳಗೆ+ ಹತ್ತು +ನೃ
ಪಾಲರನು +ಕೌಸಲ +ಯವನ +ನೇ
ಪಾಳ +ಬರ್ಬರರೊಳಗೆ+ ಕೊಂದನು +ಹತ್ತು +ಸಾವಿರವ

ಅಚ್ಚರಿ:
(೧) ಕೇರಳ, ಕೌಸಲ, ಯವನ, ನೇಪಾಳ, ಬರ್ಬರ, ಮದ್ರ, ಗಾಂಧಾರ – ಕೌರವರೊಂದಿಗಿದ್ದ ರಾಷ್ಟ್ರಗಳು

ಪದ್ಯ ೩೧: ಸಭಾಭವನದಲ್ಲಿ ಯಾರು ಸೇರಿದರು?

ಗುರು ನದೀಸುತ ಕರ್ಣ ಸೈಂಧವ
ಗುರುತನುಜ ಭಗದತ್ತ ಬಾಹ್ಲಿಕ
ನುರುಯವನ ಸಂವೀರ ಕೌಸಲ ಚೈದ್ಯ ಮಾಗಧರು
ಅರಸುಗಳು ನಾನಾ ದಿಗಂತದ
ಧರಣಿಪರು ಸಚಿವರು ಪಸಾಯ್ತರು
ನೆರೆದುದಂದಿನ ದಿವಸದೋಲಗದೊಡ್ಡು ಚೆಲುವಾಯ್ತು (ಸಭಾ ಪರ್ವ, ೧೪ ಸಂಧಿ, ೩೧ ಪದ್ಯ)

ತಾತ್ಪರ್ಯ:
ದ್ರೋಣ, ಭೀಷ್ಮ, ಕರ್ಣ, ಜಯದ್ರಥ, ಅಶ್ವತ್ಥಾಮ, ಭಗದತ್ತ, ಬಾಹ್ಲಿಕ, ಯವನ, ಸಂವೀರ, ಕೌಸಲ, ಚೈದ್ಯ, ಮಾಗಧ ಮೊದಲಾದ ಅನೇಕ ದೇಶಾಂತರದ ರಾಜರು ಅಲ್ಲಿ ಸೇರಿದ್ದರು. ಅಂದು ಆ ಓಲಗವು ಬಹು ಶೋಭಿಸುತ್ತಿತ್ತು.

ಅರ್ಥ:
ಗುರು: ಆಚಾರ್ಯ (ದ್ರೋಣ); ಸುತ: ಮಗ; ಸೈಂಧವ: ಜಯದ್ರಥ; ತನುಜ: ಮಗ; ಅರಸ: ರಾಜ; ದಿಗಂತ: ದಿಕ್ಕು; ಧರಣಿಪ: ರಾಜ; ಸಚಿವ: ಮಂತ್ರಿ; ಪಸಾಯ್ತ: ಸಾಮಂತರಾಜ; ನೆರೆದು: ಸೇರು; ದಿವಸ: ದಿನ, ವಾರ; ಓಲಗ: ದರ್ಬಾರು; ಚೆಲುವು: ಸುಂದರ;

ಪದವಿಂಗಡಣೆ:
ಗುರು +ನದೀಸುತ +ಕರ್ಣ +ಸೈಂಧವ
ಗುರುತನುಜ +ಭಗದತ್ತ+ ಬಾಹ್ಲಿಕನ್
ಉರು+ಯವನ+ ಸಂವೀರ +ಕೌಸಲ +ಚೈದ್ಯ +ಮಾಗಧರು
ಅರಸುಗಳು +ನಾನಾ +ದಿಗಂತದ
ಧರಣಿಪರು +ಸಚಿವರು +ಪಸಾಯ್ತರು
ನೆರೆದುದ್+ಅಂದಿನ +ದಿವಸದ್+ಓಲಗ+ದೊಡ್ಡು +ಚೆಲುವಾಯ್ತು

ಅಚ್ಚರಿ:
(೧) ಅರಸು, ಧರಣಿಪ; ಸುತ, ತನುಜ – ಸಮನಾರ್ಥಕ ಪದ

ಪದ್ಯ ೧೦: ಯಾವ ರಾಜರು ರಾಜಸೂಯಯಾಗದ ನಂತರ ಹಿಂದಿರುಗಿದರು?

ಫಲುಗುಣನು ಧೃತರಾಷ್ಟ್ರಭೀಷ್ಮರ
ಕಳುಹಿದನು ಗುರು ಗುರುತನೂಜರ
ಬಳಿಯೊಳನಿಲಜ ಬಂದನಾ ಕೃಪನೊಡನೆ ಸಹದೇವ
ಬಲಿಯಲೈದಿದ ನಕುಲನಾ ಸೌ
ಬಲನ ಸೈಂಧವ ಶಲ್ಯನನು ಕೌ
ಸಲ ವಿರಾಟ ದ್ರುಪದ ಭಗದತ್ತಾದಿ ಭೂಪರನು (ಸಭಾ ಪರ್ವ, ೧೨ ಸಂಧಿ, ೧೦ ಪದ್ಯ)

ತಾತ್ಪರ್ಯ:
ಅರ್ಜುನನು ಧೃತರಾಷ್ಟ್ರ ಭೀಷ್ಮರನ್ನು ಬೀಳ್ಕೊಟ್ಟನು. ಭೀಮನು ದ್ರೋಣ, ಅಶ್ವತ್ಥಾಮರನ್ನು ಕಳುಹಿಸಿದನು. ಕೃಪನನ್ನು ಸಹದೇವನು, ನಕುಲನು ಶಕುನಿ, ಜಯದ್ರಥ, ಶಲ್ಯ, ಕೌಸಲ, ವಿರಾಟ, ದ್ರುಪದ, ಭಗದತ್ತನೇ ಮೊದಲಾದವರನ್ನು ಕಳುಹಿಸಿದನು.

ಅರ್ಥ:
ಫಲುಗುಣ: ಅರ್ಜುನ; ಕಳುಹು: ಬೀಳ್ಕೊಡು; ಗುರು: ಆಚಾರ್ಯ; ತನೂಜ: ಮಗ; ಬಳಿ: ನಂತರ; ಅನಿಲಜ: ವಾಯುಪುತ್ರ (ಭೀಮ); ಐದು: ಹೋಗಿಸೇರು; ಭೂಪ: ರಾಜ;

ಪದವಿಂಗಡಣೆ:
ಫಲುಗುಣನು +ಧೃತರಾಷ್ಟ್ರ+ಭೀಷ್ಮರ
ಕಳುಹಿದನು +ಗುರು +ಗುರು+ತನೂಜರ
ಬಳಿಯೊಳ್+ಅನಿಲಜ +ಬಂದನಾ+ ಕೃಪನೊಡನೆ+ ಸಹದೇವ
ಬಳಿಯಲ್+ಐದಿದ +ನಕುಲನಾ+ ಸೌ
ಬಲನ +ಸೈಂಧವ +ಶಲ್ಯನನು +ಕೌ
ಸಲ +ವಿರಾಟ +ದ್ರುಪದ +ಭಗದತ್ತಾದಿ +ಭೂಪರನು

ಅಚ್ಚರಿ:
(೧) ಸೌಬಲ, ಕೌಸಲ – ೪,೫ ಸಾಲಿನ ಕೊನೆಯ ಅಕ್ಷರಗಳು