ಪದ್ಯ ೪೧: ದ್ರೋಣಾಚಾರ್ಯರ ಬಳಿ ಯಾರು ವಿದ್ಯಾರ್ಜನೆಗೆ ಬಂದರು?

ಗರುಡಿಪೂಜಾ ವಿಭವ ಸಮನಂ
ತರದಲನಿಬರು ಸಮವ ತೊಡಗಿದ
ರರಸು ಮಕ್ಕಳು ಕೇಳಿದರು ನಾನಾ ದಿಗಂತದಲಿ
ಬರುತಲಿದ್ದರು ಕೂಡೆ ಹಸ್ತಿನ
ಪುರಿಗೆ ವಿದ್ಯಾರ್ಥಿಗಳು ಪಾರ್ಥಿವ
ವರ ಕುಮಾರರು ಬಂದು ಕಂಡರು ಶಸ್ತ್ರ ಪಂಡಿತನ (ಆದಿ ಪರ್ವ, ೬ ಸಂಧಿ, ೪೧ ಪದ್ಯ)

ತಾತ್ಪರ್ಯ:
ಗರುಡಿಯ ಪೂಜೆಯ ನಮ್ತರ, ರಾಜಕುಮಾರರು ಶಸ್ತ್ರವಿದ್ಯಾಶ್ರಮದಲ್ಲಿ ನಿರತರಾದರು. ಈ ಸುದ್ಧಿಯು ಎಲ್ಲಾ ದಿಕ್ಕುಗಳಲ್ಲಿಯೂ ಹರಡಿ, ಅನೇಕ ಕ್ಷತ್ರಿಯಕುಮಾರರು ದ್ರೋಣಾಚಾರ್ಯರಲ್ಲಿಗೆ ಬಂದು ಶಸ್ತ್ರವಿದ್ಯೆಯನ್ನು ಕಲಿಯಲಾರಂಭಿಸಿದರು.

ಅರ್ಥ:
ಗರುಡಿ: ಶಸ್ತ್ರಾಭ್ಯಾಸದ ಆಲಯ; ವಿಭವ: ವೈಭವ; ಅನಿಬರು: ಅಷ್ಟುಜನ; ನಂತರ: ಆಮೇಲೆ; ಸಮ: ಸರಿಯಾದ; ತೊಡಗು: ಪ್ರಾರಂಭಿಸು; ಅರಸು: ರಾಜ; ಮಕ್ಕಳು: ಕುಮಾರ; ಕೇಳು: ಆಲಿಸು; ನಾನಾ: ಹಲವಾರು; ದಿಗಂತ: ದಿಕ್ಕಿನ ತುದಿ, ಅಂಚು; ಬರು: ಆಗಮಿಸು; ಕೂಡೆ: ಜೊತೆ; ಪಾರ್ಥಿವವರ: ರಾಜರ; ಕುಮಾರ: ಮಕ್ಕಳು; ಕಂಡು: ನೋಡು; ಶಸ್ತ್ರ: ಆಯುಧ; ಪಂಡಿತ: ಪಾಂಡಿತ್ಯ;

ಪದವಿಂಗಡಣೆ:
ಗರುಡಿ+ಪೂಜಾ +ವಿಭವ +ಸಮನಂ
ತರದಲ್+ಅನಿಬರು +ಸಮವ +ತೊಡಗಿದರ್
ಅರಸು+ ಮಕ್ಕಳು+ ಕೇಳಿದರು +ನಾನಾ +ದಿಗಂತದಲಿ
ಬರುತಲಿದ್ದರು +ಕೂಡೆ +ಹಸ್ತಿನ
ಪುರಿಗೆ +ವಿದ್ಯಾರ್ಥಿಗಳು +ಪಾರ್ಥಿವ
ವರ +ಕುಮಾರರು +ಬಂದು +ಕಂಡರು +ಶಸ್ತ್ರ+ ಪಂಡಿತನ

ಅಚ್ಚರಿ:
(೧) ರಾಜರ ಮಕ್ಕಳು ಎಂದು ಹೇಳಲು – ಪಾರ್ಥಿವವರ ಕುಮಾರರು ಪದದ ಬಳಕೆ

ಪದ್ಯ ೪೫: ಕೌರವನನ್ನು ಎಲ್ಲೆಲ್ಲಿ ಹುಡುಕಲಾಯಿತು?

ಅರಸ ಕೇಳ್ ಸಮಸಪ್ತಕರ ಸಂ
ಹರಿಸಿ ಶಕುನಿಯ ಮುರಿದು ಕಳನಲಿ
ದೊರೆಯ ಕಾಣದೆ ಭೀಮಸೇನಾರ್ಜುನರು ದುಗುಡದಲಿ
ಹರಿಸಿದರು ದೂತರನು ಕೌರವ
ಧರಣಿಪನ ಪಾಳೆಯಕೆ ಹಸ್ತಿನ
ಪುರಿಗೆ ಕೂಡೆ ದಿಗಂತದಲಿ ಚರರರಸಿದರು ನೃಪನ (ಗದಾ ಪರ್ವ, ೪ ಸಂಧಿ, ೪೫ ಪದ್ಯ)

ತಾತ್ಪರ್ಯ:
ಸಂಶಪ್ತಕರು, ಶಕುನಿ ಇವರನ್ನು ಸಂಹರಿಸಿದ ಮೇಲೆ ರಣರಂಗದಲ್ಲಿ ಕೌರವನು ಕಾಣಲಿಲ್ಲ. ಭೀಮಾರ್ಜುನರು ದೂತರನ್ನು ವೈರಿಪಾಳೆಯಕ್ಕೆ, ಹಸ್ತಿನಾಪುರಕ್ಕೆ, ನಾಲ್ಕು ದಿಕ್ಕುಗಳಿಗೂ ಕಳಿಸಿದರು. ಗೂಢಾಚಾರರು ಕೌರವನನ್ನು ಹುಡುಕಿದರು.

ಅರ್ಥ:
ಅರಸ: ರಾಜ; ಸಮಸಪ್ತಕ: ಪ್ರಮಾಣ ಮಾಡಿ ಯುದ್ಧ ಮಾಡುವವ; ಸಂಹರಿಸು: ನಾಶಮಾಡು; ಮುರಿ: ಸೀಳು; ಕಳ: ಯುದ್ಧ; ದೊರೆ: ರಾಜ; ಕಾಣು: ತೋರು; ದುಗುಡ: ದುಃಖ; ಹರಿಸು: ಹರಡು; ದೂತ: ಸೇವಕ, ಸೈನಿಕ; ಧರಣಿಪ: ರಾಜ; ಪಾಳೆಯ: ಬಿಡಾರ; ಕೂಡೆ: ಜೊತೆ; ದಿಗಂತ: ದಿಕ್ಕು; ಚರ: ಗೂಢಚಾರ, ದೂತ; ನೃಪ: ರಾಜ; ಅರಸು: ಹುಡುಕು;

ಪದವಿಂಗಡಣೆ:
ಅರಸ +ಕೇಳ್ +ಸಮಸಪ್ತಕರ+ ಸಂ
ಹರಿಸಿ +ಶಕುನಿಯ +ಮುರಿದು +ಕಳನಲಿ
ದೊರೆಯ +ಕಾಣದೆ +ಭೀಮಸೇನಾರ್ಜುನರು +ದುಗುಡದಲಿ
ಹರಿಸಿದರು +ದೂತರನು +ಕೌರವ
ಧರಣಿಪನ +ಪಾಳೆಯಕೆ +ಹಸ್ತಿನ
ಪುರಿಗೆ +ಕೂಡೆ +ದಿಗಂತದಲಿ +ಚರರ್+ಅರಸಿದರು +ನೃಪನ

ಅಚ್ಚರಿ:
(೧) ಅರಸ, ನೃಪ, ಧರಣಿಪ, ದೊರೆ – ಸಮಾನಾರ್ಥಕ ಪದ
(೨) ಅರಸ, ನೃಪ – ಮೊದಲ ಮತ್ತು ಕೊನೆಯ ಪದ

ಪದ್ಯ ೩: ಅರ್ಜುನ ಗಾಂಢೀವ ಹೇಗೆ ಟಂಕರಿಸಿತು?

ಮುನಿಜನಕೆ ಕೈಮುಗಿದು ಯಮನಂ
ದನನ ಚರಣಕ್ಕೆರಗಿ ಶಂಭುವ
ನೆನೆದು ಗವಸಣಿಗೆಯಲಿ ತೆಗೆದನು ಗರುವ ಗಾಂಡಿವವ
ಜನಪಕೇಳೈ ಕೊಪ್ಪಿನಲಿ ಸಿಂ
ಜಿನಿಯ ಸಿಕ್ಕಿದನಳ್ಳಿರಿದು ಮಾ
ರ್ದನಿ ದಿಗಂತರವೊದರಲೊದರಿಸಿದನು ಮಹಾಧನುವ (ಅರಣ್ಯ ಪರ್ವ, ೧೪ ಸಂಧಿ, ೩ ಪದ್ಯ)

ತಾತ್ಪರ್ಯ:
ಅರ್ಜುನನು ಧರ್ಮಜನಿಗೂ ಮುನಿಗಳಗೂ ನಮಸ್ಕರಿಸಿ, ಶಿವನನ್ನು ನೆನೆದು, ಮುಸುಕಿನ ಬಟ್ಟೆಯನ್ನು ತೆಗೆದು ಗಾಂಡಿವ ಧನುಸ್ಸನ್ನು ತೆಗೆದು ಗಾಂಡಿವ ಧನುಸ್ಸನ್ನು ತೆಗೆದುಕೊಂಡನು. ಕೊಪ್ಪಿನಲ್ಲಿ ಹೆದೆಯನ್ನು ಸಿಕ್ಕಿಸಿ ಟಂಕಾರವನ್ನು ಮಾಡಲು ದಿಕ್ಕುಗಳು ಮಾರ್ದನಿಸಿದವು.

ಅರ್ಥ:
ಮುನಿ: ಋಷಿ; ಜನ: ಗುಂಪು; ಕೈಮುಗಿ: ನಮಸ್ಕರಿಸು; ನಂದನ: ಮಗ; ಚರಣ: ಪಾದ; ಎರಗು:ಬಾಗು; ಶಂಭು: ಶಂಕರ; ನೆನೆ: ಜ್ಞಾಪಿಸಿಕೋ; ಗವಸಣಿಗೆ: ಮುಸುಕು; ತೆಗೆ: ಹೊರತರು; ಗರುವ: ಹಿರಿಯ, ಶ್ರೇಷ್ಠ; ಜನಪ: ರಾಜ; ಕೇಳು: ಆಲಿಸು; ಕೊಪ್ಪು: ಬಿಲ್ಲಿನ ತುದಿ; ಸಿಂಜಿನಿ: ಬಿಲ್ಲಿನ ಹೆದೆ; ಸಿಕ್ಕು: ತೊಡಕಿಕೊಳ್ಳು; ಅಳ್ಳಿರಿ: ನಡುಗಿಸು; ಮಾರ್ದನಿ: ಮರುಧ್ವನಿ, ಪ್ರತಿಧ್ವನಿ; ದಿಗಂತ: ದಿಕ್ಕು; ಒದರು: ಕಿರುಚು, ಗರ್ಜಿಸು; ಮಹಾ: ಶ್ರೇಷ್ಠ; ಧನು: ಬಿಲ್ಲು;

ಪದವಿಂಗಡಣೆ:
ಮುನಿಜನಕೆ +ಕೈಮುಗಿದು +ಯಮ+ನಂ
ದನನ +ಚರಣಕ್ಕೆರಗಿ+ ಶಂಭುವ
ನೆನೆದು+ ಗವಸಣಿಗೆಯಲಿ +ತೆಗೆದನು +ಗರುವ +ಗಾಂಡಿವವ
ಜನಪಕೇಳೈ+ ಕೊಪ್ಪಿನಲಿ+ ಸಿಂ
ಜಿನಿಯ+ ಸಿಕ್ಕಿದನ್+ಅಳ್ಳಿರಿದು +ಮಾ
ರ್ದನಿ +ದಿಗಂತರವ್+ಒದರಲ್+ಒದರಿಸಿದನು +ಮಹಾಧನುವ

ಅಚ್ಚರಿ:
(೧) ಕೈಮುಗಿ, ಎರಗು – ಸಾಮ್ಯಾರ್ಥ ಪದಗಳು
(೨) ಗಾಂಡೀವದ ಹಿರಿಮೆ – ಕೊಪ್ಪಿನಲಿ ಸಿಂಜಿನಿಯ ಸಿಕ್ಕಿದನಳ್ಳಿರಿದು ಮಾರ್ದನಿ ದಿಗಂತರವೊದರಲೊದರಿಸಿದನು ಮಹಾಧನುವ

ಪದ್ಯ ೪೩: ಯಾವ ಕಾಲವು ಯುಧಿಷ್ಠಿರ ಬುದ್ಧಿಯನ್ನು ದೂರಕ್ಕೆ ದಬ್ಬಿತು?

ಕುರುಪತಿಯ ಕೃತ ಪುಣ್ಯ ಬೀಜಾಂ
ಕುರದ ಕಾಲ ದಿಗಂತದವನೀ
ಶ್ವರ ಸಮೂಹ ಚಮೂನಿಬರ್ಹಣ ಸೂಚನಾ ಸಮಯ
ಅರಸ ಕೇಳ್ ಕುಂತೀ ಕುಮಾರರ
ಸಿರಿಯ ದುಗುಡದ ಹೊತ್ತು ಮಿಗೆ ಗ
ಬ್ಬರಿಸಿತೈ ಧರ್ಮಜನ ಗಾಢದ ಬುದ್ಧಿ ಪರ್ವತವ (ಸಭಾ ಪರ್ವ, ೧೪ ಸಂಧಿ, ೪೩ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಆ ಕಾಲವು ದುರ್ಯೋಧನನು ಹಿಂದೆ ಮಾಡಿದ ಪುಣ್ಯದ ಬೀಜವು ಮೊಳೆಯುವ ಕಾಲವಾಗಿತ್ತು, ದೇಶದೇಶಾಂತರದ ಸಮಸ್ತ ರಾಜರು, ಅವರ ಸೈನ್ಯಗಳು ನಿರ್ನಾಮವಾಗುವುದನ್ನು ಸೂಚಿಸುವ ಕಾಲವಾಗಿತ್ತು. ಪಾಂಡವರ ಐಶ್ವರ್ಯ ವೈಭವ ಲಕ್ಷ್ಮಿಗೆ ದುಃಖಕವಿಯುವ ಕಾಲವಾಗಿತ್ತು. ಆ ಕಾಲವು ಯುಧಿಷ್ಠಿರನ ಬೆಟ್ಟದಂತಿದ್ದ ಬುದ್ಧಿಯನ್ನು ದೂರಕ್ಕೆ ತಳ್ಳಿತು.

ಅರ್ಥ:
ಕುರುಪತಿ: ದುರ್ಯೋಧನ; ಕೃತ: ಮಾಡಿದ; ಪುಣ್ಯ: ಸತ್ಕೃತಿ; ಬೀಜ: ಮೂಲ; ಅಂಕುರ: ಚಿಗುರು,ಮೊಳಕೆ; ಕಾಲ: ಸಮಯ; ದಿಗಂತ: ದಿಕ್ಕಿನ ತುದಿ; ಅವನೀಶ್ವರ: ರಾಜ; ಅವನೀ: ಭೂಮಿ; ಸಮೂಹ: ಗುಂಪು; ಚಮೂ: ಸೈನ್ಯ; ಚಮೂನಿಬರ್ಹಣ: ಸೈನ್ಯದ ನಿರ್ವಹಣೆ; ಸೂಚನೆ: ತಿಳಿಸುವಿಕೆ; ಸಮಯ: ಕಾಲ; ಅರಸ: ರಾಜ; ಕೇಳ್: ಆಲಿಸು; ಕುಮಾರ: ಮಕ್ಕಳು; ಸಿರಿ: ಐಶ್ವರ್ಯ; ದುಗುಡ: ದುಃಖ; ಹೊತ್ತು: ಹೇರು; ಮಿಗೆ: ಹೆಚ್ಚು; ಗಬ್ಬರಿಸು: ತೋಡು, ಆವರಿಸು; ಗಾಢ: ಹೆಚ್ಚಳ, ಅತಿಶಯ; ಬುದ್ಧಿ: ಚಿತ್ತ; ಪರ್ವತ: ಬೆಟ್ಟ;

ಪದವಿಂಗಡಣೆ:
ಕುರುಪತಿಯ+ ಕೃತ +ಪುಣ್ಯ +ಬೀಜ
ಅಂಕುರದ +ಕಾಲ +ದಿಗಂತದ್+ಅವನೀ
ಶ್ವರ +ಸಮೂಹ +ಚಮೂನಿಬರ್ಹಣ+ ಸೂಚನಾ +ಸಮಯ
ಅರಸ+ ಕೇಳ್ +ಕುಂತೀ +ಕುಮಾರರ
ಸಿರಿಯ +ದುಗುಡದ +ಹೊತ್ತು +ಮಿಗೆ +ಗ
ಬ್ಬರಿಸಿತೈ +ಧರ್ಮಜನ +ಗಾಢದ +ಬುದ್ಧಿ +ಪರ್ವತವ

ಅಚ್ಚರಿ:
(೧) ಮೂರು ರೀತಿ ಸಮಯವನ್ನು ಸೂಚಿಸುವ ಕಾಲ: ಬಿಜ ಅಂಕುರದ ಕಾಲ; ಚಮೂನಿಬರ್ಹಣ ಸೂಚನಾ ಸಮಯ; ಸಿರಿಯ ದುಗುಡದ ಹೊತ್ತು
(೨) ಉಪಮಾನ ಬಳಕಿ – ಗಬ್ಬರಿಸಿತೈ ಧರ್ಮಜನ ಗಾಢದ ಬುದ್ಧಿ ಪರ್ವತವ

ಪದ್ಯ ೩೧: ಸಭಾಭವನದಲ್ಲಿ ಯಾರು ಸೇರಿದರು?

ಗುರು ನದೀಸುತ ಕರ್ಣ ಸೈಂಧವ
ಗುರುತನುಜ ಭಗದತ್ತ ಬಾಹ್ಲಿಕ
ನುರುಯವನ ಸಂವೀರ ಕೌಸಲ ಚೈದ್ಯ ಮಾಗಧರು
ಅರಸುಗಳು ನಾನಾ ದಿಗಂತದ
ಧರಣಿಪರು ಸಚಿವರು ಪಸಾಯ್ತರು
ನೆರೆದುದಂದಿನ ದಿವಸದೋಲಗದೊಡ್ಡು ಚೆಲುವಾಯ್ತು (ಸಭಾ ಪರ್ವ, ೧೪ ಸಂಧಿ, ೩೧ ಪದ್ಯ)

ತಾತ್ಪರ್ಯ:
ದ್ರೋಣ, ಭೀಷ್ಮ, ಕರ್ಣ, ಜಯದ್ರಥ, ಅಶ್ವತ್ಥಾಮ, ಭಗದತ್ತ, ಬಾಹ್ಲಿಕ, ಯವನ, ಸಂವೀರ, ಕೌಸಲ, ಚೈದ್ಯ, ಮಾಗಧ ಮೊದಲಾದ ಅನೇಕ ದೇಶಾಂತರದ ರಾಜರು ಅಲ್ಲಿ ಸೇರಿದ್ದರು. ಅಂದು ಆ ಓಲಗವು ಬಹು ಶೋಭಿಸುತ್ತಿತ್ತು.

ಅರ್ಥ:
ಗುರು: ಆಚಾರ್ಯ (ದ್ರೋಣ); ಸುತ: ಮಗ; ಸೈಂಧವ: ಜಯದ್ರಥ; ತನುಜ: ಮಗ; ಅರಸ: ರಾಜ; ದಿಗಂತ: ದಿಕ್ಕು; ಧರಣಿಪ: ರಾಜ; ಸಚಿವ: ಮಂತ್ರಿ; ಪಸಾಯ್ತ: ಸಾಮಂತರಾಜ; ನೆರೆದು: ಸೇರು; ದಿವಸ: ದಿನ, ವಾರ; ಓಲಗ: ದರ್ಬಾರು; ಚೆಲುವು: ಸುಂದರ;

ಪದವಿಂಗಡಣೆ:
ಗುರು +ನದೀಸುತ +ಕರ್ಣ +ಸೈಂಧವ
ಗುರುತನುಜ +ಭಗದತ್ತ+ ಬಾಹ್ಲಿಕನ್
ಉರು+ಯವನ+ ಸಂವೀರ +ಕೌಸಲ +ಚೈದ್ಯ +ಮಾಗಧರು
ಅರಸುಗಳು +ನಾನಾ +ದಿಗಂತದ
ಧರಣಿಪರು +ಸಚಿವರು +ಪಸಾಯ್ತರು
ನೆರೆದುದ್+ಅಂದಿನ +ದಿವಸದ್+ಓಲಗ+ದೊಡ್ಡು +ಚೆಲುವಾಯ್ತು

ಅಚ್ಚರಿ:
(೧) ಅರಸು, ಧರಣಿಪ; ಸುತ, ತನುಜ – ಸಮನಾರ್ಥಕ ಪದ