ಪದ್ಯ ೪೫: ಕೌರವನನ್ನು ಎಲ್ಲೆಲ್ಲಿ ಹುಡುಕಲಾಯಿತು?

ಅರಸ ಕೇಳ್ ಸಮಸಪ್ತಕರ ಸಂ
ಹರಿಸಿ ಶಕುನಿಯ ಮುರಿದು ಕಳನಲಿ
ದೊರೆಯ ಕಾಣದೆ ಭೀಮಸೇನಾರ್ಜುನರು ದುಗುಡದಲಿ
ಹರಿಸಿದರು ದೂತರನು ಕೌರವ
ಧರಣಿಪನ ಪಾಳೆಯಕೆ ಹಸ್ತಿನ
ಪುರಿಗೆ ಕೂಡೆ ದಿಗಂತದಲಿ ಚರರರಸಿದರು ನೃಪನ (ಗದಾ ಪರ್ವ, ೪ ಸಂಧಿ, ೪೫ ಪದ್ಯ)

ತಾತ್ಪರ್ಯ:
ಸಂಶಪ್ತಕರು, ಶಕುನಿ ಇವರನ್ನು ಸಂಹರಿಸಿದ ಮೇಲೆ ರಣರಂಗದಲ್ಲಿ ಕೌರವನು ಕಾಣಲಿಲ್ಲ. ಭೀಮಾರ್ಜುನರು ದೂತರನ್ನು ವೈರಿಪಾಳೆಯಕ್ಕೆ, ಹಸ್ತಿನಾಪುರಕ್ಕೆ, ನಾಲ್ಕು ದಿಕ್ಕುಗಳಿಗೂ ಕಳಿಸಿದರು. ಗೂಢಾಚಾರರು ಕೌರವನನ್ನು ಹುಡುಕಿದರು.

ಅರ್ಥ:
ಅರಸ: ರಾಜ; ಸಮಸಪ್ತಕ: ಪ್ರಮಾಣ ಮಾಡಿ ಯುದ್ಧ ಮಾಡುವವ; ಸಂಹರಿಸು: ನಾಶಮಾಡು; ಮುರಿ: ಸೀಳು; ಕಳ: ಯುದ್ಧ; ದೊರೆ: ರಾಜ; ಕಾಣು: ತೋರು; ದುಗುಡ: ದುಃಖ; ಹರಿಸು: ಹರಡು; ದೂತ: ಸೇವಕ, ಸೈನಿಕ; ಧರಣಿಪ: ರಾಜ; ಪಾಳೆಯ: ಬಿಡಾರ; ಕೂಡೆ: ಜೊತೆ; ದಿಗಂತ: ದಿಕ್ಕು; ಚರ: ಗೂಢಚಾರ, ದೂತ; ನೃಪ: ರಾಜ; ಅರಸು: ಹುಡುಕು;

ಪದವಿಂಗಡಣೆ:
ಅರಸ +ಕೇಳ್ +ಸಮಸಪ್ತಕರ+ ಸಂ
ಹರಿಸಿ +ಶಕುನಿಯ +ಮುರಿದು +ಕಳನಲಿ
ದೊರೆಯ +ಕಾಣದೆ +ಭೀಮಸೇನಾರ್ಜುನರು +ದುಗುಡದಲಿ
ಹರಿಸಿದರು +ದೂತರನು +ಕೌರವ
ಧರಣಿಪನ +ಪಾಳೆಯಕೆ +ಹಸ್ತಿನ
ಪುರಿಗೆ +ಕೂಡೆ +ದಿಗಂತದಲಿ +ಚರರ್+ಅರಸಿದರು +ನೃಪನ

ಅಚ್ಚರಿ:
(೧) ಅರಸ, ನೃಪ, ಧರಣಿಪ, ದೊರೆ – ಸಮಾನಾರ್ಥಕ ಪದ
(೨) ಅರಸ, ನೃಪ – ಮೊದಲ ಮತ್ತು ಕೊನೆಯ ಪದ

ನಿಮ್ಮ ಟಿಪ್ಪಣಿ ಬರೆಯಿರಿ