ಪದ್ಯ ೬೩: ಕೌರವರ ಸೈನ್ಯದ ಬಲವು ಎಷ್ಟಿತ್ತು?

ಹೊಗಳಲನುಪಮ ಸೇನೆಯಿಂತಿದು
ದುಗುಣವಂಧಾಸುರನ ಸೇನೆಗೆ
ತಿಗುಣವಿದು ರಾವಣನ ಮೋಹರಕೆನುತ ಫಲುಗುಣನು
ಹಗೆಯ ಭುಜದಗ್ಗಳಿಕೆಯನು ನೆರೆ
ಹೊಗಳಿ ತೋರಿದನುತ್ತರಗೆ ಮೊಳೆ
ನಗೆಯ ಮನದೊಳಗಾಗ ಸೈವೆರಗಾದ ಸುಕುಮಾರ (ವಿರಾಟ ಪರ್ವ, ೭ ಸಂಧಿ, ೬೩ ಪದ್ಯ)

ತಾತ್ಪರ್ಯ:
ಈ ಸೈನ್ಯವು ಅಂಧಕಾಸುರನ ಸೇನೆಯ ಎರಡರಷ್ಟಿದೆ, ರಾವಣನ ಸೈನ್ಯದ ಮೂರರಷ್ಟಿದೆ ಎಂದು ಅರ್ಜುನನು ನಸುನಗುತ್ತಾ ಶತ್ರುಸೈನ್ಯದ ಬಲವನ್ನು ಹೊಗಳಲು ಉತ್ತರನು ಈ ವಿಷಯವನ್ನು ಕೇಳಿ ಬೆರಗಾದನು.

ಅರ್ಥ:
ಹೊಗಳು: ಪ್ರಶಂಶಿಸು; ಅನುಪಮ: ಉತ್ಕೃಷ್ಟವಾದುದು; ಸೇನೆ: ಸೈನ್ಯ; ದುಗುಣ: ಎರಡು ಪಟ್ಟು; ಅಂಧ: ಕುರುಡ; ಅಸುರ: ರಾಕ್ಷಸ; ತಿಗುಣ: ಮೂರುಪಟ್ಟು; ಮೋಹರ: ಸೈನ್ಯ; ಹಗೆ: ವೈರಿ; ಭುಜ: ಬಾಹು; ಅಗ್ಗಳಿಕೆ: ಶ್ರೇಷ್ಠತೆ; ನೆರೆ: ಸಮೀಪ, ಹತ್ತಿರ; ಹೊಗಳು: ಪ್ರಶಂಶಿಸು; ತೋರು: ಪ್ರದರ್ಶಿಸು, ಕಾಣು; ಮೊಳೆನಗೆ: ಮಂದಸ್ಮಿತ; ಮನ: ಮನಸ್ಸು; ಸೈವೆರಗು: ಆತಿಯಾದ ತಳಮಳ; ಕುಮಾರ: ನಂದನ, ಮಗ;

ಪದವಿಂಗಡಣೆ:
ಹೊಗಳಲ್+ಅನುಪಮ+ ಸೇನೆಯಿಂತ್+ಇದು
ದುಗುಣವ್+ಅಂಧಾಸುರನ+ ಸೇನೆಗೆ
ತಿಗುಣವಿದು+ ರಾವಣನ +ಮೋಹರಕೆನುತ +ಫಲುಗುಣನು
ಹಗೆಯ+ ಭುಜ+ಅಗ್ಗಳಿಕೆಯನು +ನೆರೆ
ಹೊಗಳಿ +ತೋರಿದನ್+ಉತ್ತರಗೆ +ಮೊಳೆ
ನಗೆಯ +ಮನದೊಳಗ್+ಆಗ+ ಸೈವೆರಗಾದ +ಸುಕುಮಾರ

ಅಚ್ಚರಿ:
(೧) ದುಗುಣ, ತಿಗುಣ – ಪದಗಳ ಬಳಕೆ

ಪದ್ಯ ೪೩: ಅರ್ಜುನನು ಶಿವನನ್ನು ಹೇಗೆ ಆರಾಧಿಸಿದನು?

ಮಣಲ ಲಿಂಗವ ಮಾದಿದನು ನಿ
ರ್ಗುಣನ ಸಗುಣಾರಾಧನೆಯ ಮ
ನ್ನಣೆಗಳಲಿ ವಿಸ್ತರಿಸಿದನು ವಿವಿಧಾಗಮೋಕ್ತಿಯಲಿ
ಕಣಗಿಲೆಯ ಬಂದುಗೆಯ ಕಕ್ಕೆಯ
ಸಣಬ ಸಿರಿಸದ ಕುಸುಮದಲಿ ರಿಪು
ಗಣಭಯಂಕರನರ್ಚಿಸಿದನಂಧಾಸುರಾಂತಕನ (ಅರಣ್ಯ ಪರ್ವ, ೭ ಸಂಧಿ, ೪೩ ಪದ್ಯ)

ತಾತ್ಪರ್ಯ:
ಅರ್ಜುನನು ಮರಳಿನ ಲಿಂಗವನ್ನು ಮಾಡಿದನು, ನಿರ್ಗುಣ ಪರಬ್ರಹ್ಮನಾದ ಶಿವನನ್ನು ಸಗುಣಾರಾಧನೆಯಿಂದ ಅರ್ಚಿಸಲು ಆಗಮೋಕ್ತವಾಗಿ ವಿಸ್ತಾರವಾಗಿ ನಿರ್ಮಿಸಿದನು. ಕಣಗಿಲೆ, ದಾಸವಾಳ, ಸಣಬು, ಶಿರೀಷ ಪುಷ್ಪಗಳಿಂದ ಅಂಧಕಾಸುರನನ್ನು ಸಂಹರಿಸಿದ ಶಿವನನ್ನು ಅರ್ಜುನನು ಪೂಜಿಸಿದನು.

ಅರ್ಥ:
ಮಣಲು: ಮರಳು; ಲಿಂಗ: ಶಿವನ ಒಂದು ಪ್ರತೀಕ; ಮಾಡು: ನಿರ್ಮಿಸು; ನಿರ್ಗುಣ: ಪರಮಾತ್ಮ; ಸಗುಣ: ಗುಣಗಳಿಂದ ಕೂಡಿದ ಪರಮಾತ್ಮ; ಆರಾಧನೆ: ಅರ್ಚನೆ, ಪೂಜೆ; ಮನ್ನಣೆ: ಗೌರವ, ಮಾನ್ಯ; ವಿಸ್ತರಿಸು: ಹಬ್ಬು, ಹರಡು; ವಿವಿಧ: ಹಲವಾರು; ಆಗಮ: ದೇವಪೂಜಾ ತಂತ್ರ ವಿಧಾನ ತಿಳಿಸುವ ಶಾಸ್ತ್ರ; ಉಕ್ತ: ವಚನ; ಬಂದುಗೆ: ದಾಸವಾಲ; ಕಕ್ಕೆ: ಹಳದಿ ಹೂವು ಬಿಡುವ ಒಂದು ಮರ; ಸಣಬ: ಸಿರಿಸ: ಶಿರೀಷ, ಒಂದು ಬಗೆಯ ಮರ ಮತ್ತು ಅದರ ಹೂವು; ಕುಸುಮ: ಹೂವು; ರಿಪು: ವೈರಿ; ಗಣ: ಗುಂಪು; ಭಯಂಕರ: ಸಾಹಸಿ, ಗಟ್ಟಿಗ; ಅರ್ಚಿಸು: ಪೂಜಿಸು; ಅಸುರ: ದಾನವ; ಅಂತಕ: ಸಾವು, ಮೃತ್ಯು;

ಪದವಿಂಗಡಣೆ:
ಮಣಲ +ಲಿಂಗವ +ಮಾಡಿದನು +ನಿ
ರ್ಗುಣನ +ಸಗುಣಾರಾಧನೆಯ +ಮ
ನ್ನಣೆಗಳಲಿ +ವಿಸ್ತರಿಸಿದನು +ವಿವಿಧ+ಆಗಮೋಕ್ತಿಯಲಿ
ಕಣಗಿಲೆಯ +ಬಂದುಗೆಯ ಕಕ್ಕೆಯ
ಸಣಬ +ಸಿರಿಸದ +ಕುಸುಮದಲಿ +ರಿಪು
ಗಣ+ಭಯಂಕರನ್+ಅರ್ಚಿಸಿದನ್+ಅಂಧಾಸುರ+ಅಂತಕನ

ಅಚ್ಚರಿ:
(೧) ಹೂವುಗಳ ವಿವರ: ಕಣಗಿಲೆ, ಬಂದುಗೆ, ಕಕ್ಕೆ, ಸಣಬ, ಶಿರೀಷ
(೨) ಸಗುಣ, ನಿರ್ಗುಣ – ಪದಗಳ ಬಳಕೆ
(೩) ಶಿವನ ವಿವರಣೆ – ರಿಪುಗಣಭಯಂಕರನರ್ಚಿಸಿದನಂಧಾಸುರಾಂತಕನ