ಪದ್ಯ ೬೯: ಅರ್ಜುನನನ್ನು ಹೇಗೆ ಮೂದಲಿಸಿದನು?

ವೀರರಿದಿರಹ ಹೊತ್ತು ರಣ ಮೈ
ಲಾರರಾದರು ಮರಳಿ ತೆಗೆವುತ
ಭೈರವನ ಸಾರೂಪ್ಯವಾದರು ಪೂತು ಮಝರೆನುತ
ಕೌರವನು ಕರ್ಣಾದಿಗಳ ನುಡಿ
ಯೋರೆ ಪೋರೆಯೊಳವಗಡಿಸಿ ಹೊಂ
ದೇರ ದೂವಾಳಿಸುತ ಮೂದಲಿಸಿದನು ಫಲುಗುಣನ (ವಿರಾಟ ಪರ್ವ, ೯ ಸಂಧಿ, ೬೯ ಪದ್ಯ)

ತಾತ್ಪರ್ಯ:
ವೀರರಾದವರು ಶತ್ರುವನ್ನು ಎದುರಿಸುವ ಹೊತ್ತಿನಲ್ಲಿ ವೀರರಂತೆ ಕಂಡರೂ ಪರಾಕ್ರಮರಹಿತರಾದರು. ಇವರು ವೀರರೆನಿಸಿಕೊಂಡರಷ್ಟೇ! ಪರಾಕ್ರಮವನ್ನು ಮೆರೆಯಲಿಲ್ಲ ಅಲ್ಲದೆ ಭೈರವನ ಸಾರೂಪ್ಯ ಹೋಂದಿದರು. ಭಲೇ ಎನ್ನುತ್ತಾ ಕರ್ಣಾದಿಗಳನ್ನು ಕೊಂಕುಮಾತಿನಿಂದ ಆಕ್ಷೇಪಿಸಿ, ಹೊನ್ನಿನ ರಥದಲ್ಲಿ ಕುಳಿತು ಅರ್ಜುನನ ಬಳಿಗೆ ಹೋಗಿ ಮೂದಲಿಸಿದನು.

ಅರ್ಥ:
ವೀರ: ಶೂರ; ಇದಿರು: ಎದುರು; ಹೊತ್ತು: ಉಂಟಾಗು, ತಳಹಿಡಿ; ರಣ: ಯುದ್ಧ; ಮರಳಿ: ಮತ್ತೆ; ತೆಗೆ: ಹೊರತರು; ಭೈರವ: ಶಿವನ ಅವತಾರ; ಸಾರೂಪ್ಯ: ಸಮಾನ ರೂಪತ್ವ, ತಾದ್ರೂಪ್ಯ; ಪೂತು: ಹೊಗಳುವ ನುಡಿ; ಮಝ: ಭಲೆ; ಆದಿ: ಮುಂತಾದ; ನುಡಿ: ಮಾತು; ಓರೆ:ವಕ್ರ, ಡೊಂಕು; ಅವಗಡಿಸು: ಕಡೆಗಣಿಸು; ಹೊಂದೇರು: ಚಿನ್ನರ ತೇರು; ದೂವಾಳಿ: ವೇಗವಾಗಿ ಓಡು; ಮೂದಲಿಸು: ಹಂಗಿಸು;

ಪದವಿಂಗಡಣೆ:
ವೀರರ್+ಇದಿರಹ +ಹೊತ್ತು +ರಣ+ ಮೈ
ಲಾರರಾದರು +ಮರಳಿ +ತೆಗೆವುತ
ಭೈರವನ +ಸಾರೂಪ್ಯವಾದರು+ ಪೂತು+ ಮಝರೆನುತ
ಕೌರವನು +ಕರ್ಣಾದಿಗಳ+ ನುಡಿ
ಓರೆ +ಪೋರೆಯೊಳ್+ಅವಗಡಿಸಿ+ ಹೊಂ
ದೇರ +ದೂವಾಳಿಸುತ +ಮೂದಲಿಸಿದನು +ಫಲುಗುಣನ

ಅಚ್ಚರಿ:
(೧) ಓರೆ, ಪೋರೆ – ಪ್ರಾಸ ಪದಗಳು

ಪದ್ಯ ೬೪: ಅರ್ಜುನನ ಕುದುರೆಗಳು ಹೇಗೆ ಓಡಿದವು?

ಖುರಪುಟದಲಾಕಾಶ ಭಿತ್ತಿಯ
ಬರೆವವೋಲ್ ಸೂರಿಯನ ತುರಗವ
ಕರೆವವೋಲ್ ಕೈಗಟ್ಟಿ ದೂವಾಳಿಸುವಡಾಹವಕೆ
ಅರರೆ ಪೂತುರೆ ಹಯವೆನುತೆ ಚ
ಪ್ಪರಿಸಲೊಡೆ ನಿಗುರಿದವು ಕೆಂದೂ
ಳಿರದೆ ನಭಕುಪ್ಪರಿಸಿ ರವಿಮಂಡಲವನಂಡಲೆಯ (ವಿರಾಟ ಪರ್ವ, ೭ ಸಂಧಿ, ೬೪ ಪದ್ಯ)

ತಾತ್ಪರ್ಯ:
ಗೊರಸಿನಿಂದ ಆಕಾಶದಲ್ಲಿ ಬರೆಯುವಂತೆ, ಸ್ಪರ್ಧೆಗೆ ಸೂರ್ಯನ ಕುದುರೆಗಳನ್ನು ಕರೆಯುವಂತೆ, ಅರ್ಜುನನ ರಥದ ಕುದುರೆಗಳು ಭಲೇ, ಎಂದು ಹೊಗಳಿ ಚಪ್ಪರಿಸಿದ ಕೂಡಲೇ ಮುನ್ನುಗ್ಗಿದವು. ಅವುಗಳ ಖುರಪುಟದಿಂದಾದ ಧೂಳು ಸೂರ್ಯಮಂಡಲವನ್ನು ಬೆನ್ನು ಹತ್ತಿ ಹೋಯಿತು.

ಅರ್ಥ:
ಖುರ: ಕುದುರೆ ದನಕರುಗಳ ಕಾಲಿನ ಗೊರಸು; ಪುಟ: ಪುಟಿಗೆ, ನೆಗೆತ; ಆಕಾಶ: ಆಗಸ; ಭಿತ್ತಿ: ಮುರಿಯುವ, ಒಡೆಯುವ; ಬರೆ: ಲೇಖಿಸು; ಸೂರಿಯ: ಸೂರ್ಯ, ಭಾನು; ತುರಗ: ಅಶ್ವ; ಕರೆ: ಬರೆಮಾಡು; ಕೈಗಟ್ಟು: ಕೈಗೆ ಹಚ್ಚು, ಸೆಣಸು, ಹೊಡೆದಾಡು; ದೂವಾಳಿ: ವೇಗವಾಗಿ ಓಡು; ಆಹವ: ಯುದ್ಧ; ಪೂತು: ಭಲೇ, ಭೇಷ್; ಹಯ: ಕುದುರೆ; ಚಪ್ಪರಿಸು: ಸವಿ, ರುಚಿನೋಡು; ನಿಗುರು: ಹರಡು, ವ್ಯಾಪಿಸು; ಕೆಂದೂಳಿ: ಕೆಂಪಾದ ಧೂಳು; ನಭ: ಆಕಾಶ; ಉಪ್ಪರ: ಎತ್ತರ, ಉನ್ನತಿ; ರವಿ: ಭಾನು; ಮಂಡಲ: ಜಗತ್ತು, ನಾಡಿನ ಒಂದು ಭಾಗ; ಅಂಡಲೆ: ಕಾಡು, ಪೀಡಿಸು;

ಪದವಿಂಗಡಣೆ:
ಖುರಪುಟದಲ್+ಆಕಾಶ +ಭಿತ್ತಿಯ
ಬರೆವವೋಲ್ +ಸೂರಿಯನ +ತುರಗವ
ಕರೆವವೋಲ್ +ಕೈಗಟ್ಟಿ +ದೂವಾಳಿಸುವಡ್+ಆಹವಕೆ
ಅರರೆ +ಪೂತುರೆ +ಹಯವೆನುತೆ +ಚ
ಪ್ಪರಿಸಲ್+ಒಡೆ +ನಿಗುರಿದವು +ಕೆಂದೂ
ಳಿರದೆ+ ನಭಕ್+ಉಪ್ಪರಿಸಿ +ರವಿಮಂಡಲವನ್+ಅಂಡಲೆಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ಖುರಪುಟದಲಾಕಾಶ ಭಿತ್ತಿಯಬರೆವವೋಲ್; ಸೂರಿಯನ ತುರಗವ
ಕರೆವವೋಲ್
(೨) ಸೂರಿಯ, ರವಿ; ಆಕಾಶ, ನಭ – ಸಮನಾರ್ಥಕ ಪದ

ಪದ್ಯ ೩೧: ಊರ್ವಶಿಗೆ ಅರ್ಜುನನ ಉತ್ತರವೇನು?

ತಾಯ ನೇಮದಲಂದು ಕಮಲದ
ಳಾಯತಾಕ್ಷಿಯ ಸಂಗವೈವರಿ
ಗಾಯಿತದು ತಪ್ಪೇನು ಜನನಿಯ ನುಡಿಯಲಂಘ್ಯವಲೆ
ಕಾಯಸೌಖ್ಯಕೆ ಕಾಮತತ್ವವಿ
ಡಾಯಿ ತಪ್ಪದೆ ವೇಡೆಗೊಂಡುನ
ವಾಯಿಯಲಿ ದುರ್ಗತಿಗೆ ದೂವಾಳಿಸುವನಲ್ಲೆಂದ (ಅರಣ್ಯ ಪರ್ವ, ೯ ಸಂಧಿ, ೩೧ ಪದ್ಯ)

ತಾತ್ಪರ್ಯ:
ನಮ್ಮ ತಾಯಿಯ ಆಜ್ಞೆಯಂತೆ ಐವರೂ ದ್ರೌಪದಿಯನ್ನು ವರಿಸಿದೆವು. ತಾಯಿಯ ಮಾತನ್ನು ಮೀರಲಾಗದು. ಆದರೆ ದೇಹ ಸುಖಕ್ಕಾಗಿ ಕಾಮ ಸಂಭ್ರಮವು ಬಲೆ ಬೀಸಿದಾಗು ಅದಕ್ಕೆ ಬಲಿಯಾಗಿ ದುರ್ಗತಿಗೆ ಧಾವಿಸುವುದಿಲ್ಲ ಎಂದು ಅರ್ಜುನನು ಊರ್ವಶಿಗೆ ತಿಳಿಸಿದನು.

ಅರ್ಥ:
ತಾಯ: ತಾಯಿ, ಮಾತೆ; ನೇಮ: ನಿಯಮ; ಕಮಲದಳಾಯತಾಕ್ಷಿ: ಕಮಲದಂತ ಕಣ್ಣುಳ್ಳವಳು (ಸುಂದರಿ, ದ್ರೌಪದಿ); ಸಂಗ: ಜೊತೆ; ತಪ್ಪು: ಸರಿಯಿಲ್ಲದು; ಜನನಿ: ತಾಯಿ; ನುಡಿ: ಮಾತು; ಅಂಘ್ಯ: ಮೀರುವುದು; ಕಾಯ: ದೇಹ; ಸೌಖ್ಯ: ಸಂತೋಷ; ಕಾಮ: ಮೋಹ; ತತ್ವ: ನಿಯಮ, ಅರ್ಥ; ವಿಡಾಯ: ಒಯ್ಯಾರ, ಆಧಿಕ್ಯ; ವೇಡೆ: ಆಕ್ರಮಣ, ಆವರಣ; ನವಾಯಿ: ಠೀವಿ; ದುರ್ಗತಿ: ಕೆಟ್ಟ ಸ್ಥಿತಿ, ಹೀನ ಸ್ಥಿತಿ; ದೂವಾಳಿ: ವೇಗವಾಗಿ ಓಡುವುದು;

ಪದವಿಂಗಡಣೆ:
ತಾಯ +ನೇಮದಲ್+ಅಂದು +ಕಮಲದ
ಳಾಯತಾಕ್ಷಿಯ +ಸಂಗವ್+ಐವರಿಗ್
ಆಯಿತ್+ಅದು+ ತಪ್ಪೇನು+ ಜನನಿಯ+ ನುಡಿಯಲ್+ಅಂಘ್ಯವಲೆ
ಕಾಯಸೌಖ್ಯಕೆ +ಕಾಮತತ್ವ+ವಿ
ಡಾಯಿ +ತಪ್ಪದೆ +ವೇಡೆ+ಕೊಂಡು+ನ
ವಾಯಿಯಲಿ +ದುರ್ಗತಿಗೆ +ದೂವಾಳಿಸುವನಲ್ಲೆಂದ

ಅಚ್ಚರಿ:
(೧) ತಾಯ, ಜನನಿ – ಸಮನಾರ್ಥಕ ಪದ
(೨) ದ್ರೌಪದಿಯನ್ನು ಕಮಲದಳಾಯತಾಕ್ಷಿ ಎಂದು ಕರೆದಿರುವುದು