ಪದ್ಯ ೬೧: ದುರ್ಯೋಧನನ ರಥವು ಹೇಗಿತ್ತು?

ಅಗಿವ ಹಾವಿನ ಹಳವಿಗೆಯ ಕೈ
ನೆಗಹಿ ಮುಸುಕಿದ ಝಲ್ಲರಿಯ ಮಿಗೆ
ಗಗನತಳದೊಳು ಮೆರೆವ ಸೀಗುರಿಗಳ ಪತಾಕೆಗಳ
ನೆಗಹಿ ನಿಮಿರುವ ಟೆಕ್ಕೆಯದ ಮದ
ವೊಗುವ ಕರಿಗಳ ಮಧ್ಯದಲಿ ತಾ
ನಗಡು ದುರಿಯೋಧನನು ಜೂಜಿನ ಜಾಣನವನೆಂದ (ವಿರಾಟ ಪರ್ವ, ೭ ಸಂಧಿ, ೬೧ ಪದ್ಯ)

ತಾತ್ಪರ್ಯ:
ಹೆಡೆಯೆತ್ತಿದ ಹಾವಿನ ಧ್ವಜ, ಸುತ್ತಲೂ ಕಟ್ಟಿದ ಜಾಲರಗಳು, ಆಕಾಶದತ್ತ ಏರಿರುವ ಚಾಮರ ಧ್ವಜಗಳು, ನೇರವಾಗಿ ನಿಂತಿರುವ ಧ್ವಜ ದಂಡದ ಮೇಲಿರುವ ಧ್ವಜ, ಸುತ್ತಲೂ ಮದದಾನೆಗಳ ನಡುವೆ ಇರುವವನು ಜೂಜಾಟದಲ್ಲಿ ಕಪಟ ಜಾಣತನವನ್ನು ಪ್ರದರ್ಶಿಸಿದ ದುರ್ಯೋಧನನ ರಥವನ್ನು ನೋಡೆಂದು ಅರ್ಜುನನು ಉತ್ತರನಿಗೆ ತೋರಿಸಿದನು.

ಅರ್ಥ:
ಅಗಿ: ಕಚ್ಚು, ಹೆಡೆಯೆತ್ತು; ಹಾವು: ಉರಗ; ಹಳವಿಗೆ: ಬಾವುಟ; ಕೈ: ಹಸ್ತ; ನೆಗಹು: ಮೇಲೆತ್ತು; ಕೈನಗಹಿ:
ಮೇಲೆತ್ತು; ಮುಸುಕು: ಆವರಿಸು; ಝಲ್ಲರಿ: ಕುಚ್ಚು, ಗೊಂಡೆ; ಮಿಗೆ: ಅಧಿಕ; ಗಗನ: ಆಕಾಶ; ಮೆರೆ: ಹೊಳೆ; ಸೀಗುರಿ: ಚಾಮರ; ಪತಾಕೆ: ಬಾವುಟ; ನೆಗಹು: ಮೇಲೆತ್ತು; ನಿಮಿರು: ಎದ್ದುನಿಲ್ಲು, ನೆಟ್ಟಗಾಗು; ಟೆಕ್ಕೆ: ಬಾವುಟ, ಧ್ವಜ; ಮದ: ಅಮಲು, ಗರ್ವ; ಕರಿ: ಆನೆ; ಮಧ್ಯ: ನಡುವೆ; ಅಗಡು:ತುಂಟತನ; ಜೂಜು: ಸಟ್ಟ, ಜುಗಾರಿ; ಜಾಣ: ಬುದ್ಧಿವಂತ;

ಪದವಿಂಗಡಣೆ:
ಅಗಿವ +ಹಾವಿನ +ಹಳವಿಗೆಯ +ಕೈ
ನೆಗಹಿ +ಮುಸುಕಿದ +ಝಲ್ಲರಿಯ +ಮಿಗೆ
ಗಗನತಳದೊಳು +ಮೆರೆವ +ಸೀಗುರಿಗಳ +ಪತಾಕೆಗಳ
ನೆಗಹಿ +ನಿಮಿರುವ +ಟೆಕ್ಕೆಯದ +ಮದ
ವೊಗುವ +ಕರಿಗಳ+ಮಧ್ಯದಲಿ +ತಾನ್
ಅಗಡು +ದುರಿಯೋಧನನು +ಜೂಜಿನ +ಜಾಣನವನೆಂದ

ಅಚ್ಚರಿ:
(೧) ದುರ್ಯೋಧನನ ರಥದ ವರ್ಣನೆ – ಅಗಿವ ಹಾವಿನ ಹಳವಿಗೆಯ ಕೈನೆಗಹಿ ಮುಸುಕಿದ ಝಲ್ಲರಿಯ ಮಿಗೆ
ಗಗನತಳದೊಳು ಮೆರೆವ ಸೀಗುರಿಗಳ ಪತಾಕೆಗಳ