ಪದ್ಯ ೭: ಯಾರಿಗೆ ಯಾವ ಪದ ಸಿಕ್ಕಿತು?

ಅರಸ ಕೇಳೈ ಪಟ್ಟವದು ಹಿರಿ
ಯರಸನದು ಯುವರಾಜಪಟ್ಟವೆ
ಹರಿತನೂಜನೊಳಾಯ್ತು ಸೇನಾಪತಿ ಧನಂಜಯನು
ವರ ಕುಮಾರರು ಯಮಳರಲ್ಲಿಗೆ
ಹಿರಿಯ ಸಚಿವನು ವಿದುರನವನಿಪ
ಪರುಠವಿಸಿದ ಯುಯುತ್ಸುವನು ಸರ್ವಾಧಿಕಾರದಲಿ (ಗದಾ ಪರ್ವ, ೧೩ ಸಂಧಿ, ೭ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಧರ್ಮಜನಿಗೆ ಪಟ್ಟ, ಭೀಮನಿಗೆ ಯವುರಾಜ, ಅರ್ಜುನನು ಸೇನಾಧಿಪತಿ, ನಕುಲ ಸಹದೇವರೊಡನೆ ಪ್ರಧಾನಮಂತ್ರಿ ವಿದುರ, ಯುಯುತ್ಸುವಿಗೆ ಸರ್ವಾಧಿಕಾರವನ್ನು ನೀಡಿದರು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಪಟ್ಟ: ಅಧಿಕಾರ ಸೂಚಕವಾದ ಚಿನ್ನದ ಪಟ್ಟಿ, ಹಣೆಗಟ್ಟು; ಹಿರಿ: ದೊಡ್ಡ; ಅರಸ: ರಾಜ; ಯುವರಾಜ: ರಾಜನ ಉತ್ತರಾಧಿಕಾರಿ; ಹರಿ: ವಾಯು; ತನೂಜ: ಮಗ; ಸೇನಾಪತಿ: ಸೇನದ ಮುಖ್ಯಸ್ತ; ವರ: ಶ್ರೇಷ್ಠ; ಕುಮಾರ: ಮುಗ; ಯಮಳ: ಅವಳಿ; ಪರುಠವಿಸು: ಸಿದ್ಧಗೊಳಿಸು; ಸಚಿವ: ಮಂತ್ರಿ; ಅವನಿಪ: ರಾಜ; ಅಧಿಕಾರ: ನಡೆಸುವ;

ಪದವಿಂಗಡಣೆ:
ಅರಸ +ಕೇಳೈ +ಪಟ್ಟವದು +ಹಿರಿ
ಅರಸನದು +ಯುವರಾಜಪಟ್ಟವೆ
ಹರಿ+ತನೂಜನೊಳಾಯ್ತು+ ಸೇನಾಪತಿ +ಧನಂಜಯನು
ವರ +ಕುಮಾರರು +ಯಮಳರಲ್ಲಿಗೆ
ಹಿರಿಯ +ಸಚಿವನು +ವಿದುರನ್+ಅವನಿಪ
ಪರುಠವಿಸಿದ+ ಯುಯುತ್ಸುವನು+ ಸರ್ವಾಧಿಕಾರದಲಿ

ಅಚ್ಚರಿ:
(೧) ಅರಸ, ಹಿರಿಯರಸ – ಅರಸ ಪದದ ಬಳಕೆ

ಪದ್ಯ ೩: ಎಷ್ಟು ಸೈನ್ಯವು ಉಳಿದಿತ್ತು?

ಅರಸ ಕೇಳೈ ಮೂರು ಸಾವಿರ
ಕರಿಘಟೆಗಳಿಪ್ಪತ್ತು ಸಾವಿರ
ತುರಗದಳ ರಥವೆರಡುಸಾವಿರ ಲಕ್ಷ ಕಾಲಾಳು
ಅರಸುಗಳು ಮೂನೂರು ನಿಂದುದು
ಕುರುಬಲದ ವಿಸ್ತಾರ ಕೌರವ
ಧರಣಿಪತಿಯೇಕಾದಶಾಕ್ಷೋಹಿಣಿಯ ಶೇಷವಿದು (ಗದಾ ಪರ್ವ, ೧ ಸಂಧಿ, ೩ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಕೇಳು, ಈಗ ದುರ್ಯೋಧನನ ಬಳಿ ಹನ್ನೊಂದು ಸಾವಿರ ಆನೆಗಳು, ಇಪ್ಪತ್ತು ಸಾವಿರ ಕುದುರೆಗಲು, ಎರಡು ಸಾವಿರ ರಥಗಳು, ಒಂದು ಲಕ್ಷ ಕಾಲಾಳುಗಳು, ಮುನ್ನೂರು ರಾಜರು ಮಾತ್ರ ಉಳಿದಿದ್ದಾರೆ. ಯುದ್ಧದ ಮೊದಲಲ್ಲಿದ್ದ ಹನ್ನೊಂದು ಅಕ್ಷೋಹಿಣಿಯಲ್ಲಿ ಉಳಿದವರು ಇಷ್ಟು ಮಾತ್ರ ಎಂದು ಸಂಜಯನು ಧೃತರಾಷ್ಟ್ರನಿಗೆ ತಿಳಿಸಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಸಾವಿರ: ಸಹಸ್ರ; ಕರಿಘಟೆ: ಆನೆಗಳ ಗುಂಪು; ತುರಗ: ಕುದುರೆ; ದಳ: ಸೈನ್ಯ; ರಥ: ಬಂಡಿ; ಕಾಲಾಳು: ಸೈನಿಕ; ವಿಸ್ತಾರ: ಅಗಲ; ಧರಣಿಪತಿ: ರಾಜ; ಏಕಾದಶ: ಹನ್ನೊಂದು; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ಶೇಷ: ಉಳಿದ; ನಿಂದು: ನಿಲ್ಲು;

ಪದವಿಂಗಡಣೆ:
ಅರಸ +ಕೇಳೈ +ಮೂರು +ಸಾವಿರ
ಕರಿಘಟೆಗಳ್+ಇಪ್ಪತ್ತು +ಸಾವಿರ
ತುರಗದಳ+ ರಥವ್+ಎರಡು+ಸಾವಿರ +ಲಕ್ಷ +ಕಾಲಾಳು
ಅರಸುಗಳು +ಮೂನೂರು +ನಿಂದುದು
ಕುರುಬಲದ +ವಿಸ್ತಾರ +ಕೌರವ
ಧರಣಿಪತಿ+ಏಕಾದಶ+ಅಕ್ಷೋಹಿಣಿಯ +ಶೇಷವಿದು

ಅಚ್ಚರಿ:
(೧) ಅರಸ, ಧರಣಿಪತಿ – ಸಮಾನಾರ್ಥಕ ಪದ
(೨) ಸಾವಿರ ೧-೩ ಸಾಲಿನಲ್ಲಿ ಬರುವ ಪದ

ಪದ್ಯ ೫೯: ದುರ್ಯೋಧನನು ದ್ರೋಣರಿಗೆ ಏನೆಂದು ಹೇಳಿದನು?

ಕೊಂದವನು ದುಶ್ಯಾಸನನ ಮಗ
ಬಂದುದಪರಾಧವು ಜಯದ್ರಥ
ಗಿಂದಿವನ ಪತಿಕರಿಸಬೇಹುದು ರಣದೊಳರ್ಜುನನ
ಮುಂದುಗೆಡಿಸಲೆಬೇಕು ಭೀಷ್ಮರು
ಸಂದ ಬಳಿಕೆಮಗಾಪ್ತ ನೀನೇ
ತಂದೆ ನೀನೆಂದರಸನೆರಗಿದನವರ ಚರಣದಲಿ (ದ್ರೋಣ ಪರ್ವ, ೮ ಸಂಧಿ, ೫೯ ಪದ್ಯ)

ತಾತ್ಪರ್ಯ:
ಅಭಿಮನ್ಯುವನ್ನು ಕೊಂದವನು ದುಶ್ಯಾಸನನ ಮಗನು. ಆದರೆ ಜಯದ್ರಥನು ಅಪರಾಧಿಯೆಂಬ ಅಪವಾದ ಬಂದಿದೆ. ನಾಳೆಯದಿನ ನೀವು ಯುದ್ಧದಲ್ಲಿ ಅರ್ಜುನನನ್ನು ಮುಂದುಗೆಡಿಸಿ ಸೈಂಧವನನ್ನು ಕಾಪಾಡಬೇಕು. ಭೀಷ್ಮರ ಬಳಿಕ ನೀವೇ ನಮಗೆ ಆಪ್ತರು. ಗುರುವೇ ನೀನೇ ನಮಗೆ ತಂದೆ, ಹೀಗೆಂದು ದುರ್ಯೋಧನನು ದ್ರೋಣರಿಗೆ ನಮಸ್ಕರಿಸಿದನು.

ಅರ್ಥ:
ಕೊಂದು: ಸಾಯಿಸು; ಮಗ: ಸುತ; ಅಪರಾಧ: ತಪ್ಪು; ಪತಿಕರಿಸು: ದಯೆತೋರು, ಅನುಗ್ರಹಿಸು; ರಣ: ಯುದ್ಧ; ಬಳಿಕ: ನಂತರ; ಆಪ್ತ: ಹತ್ತಿರದವ; ಅರಸ: ರಾಜ; ಎರಗು: ಬಾಗು; ಚರಣ: ಪಾದ; ಸಂದ: ನಂತರ;

ಪದವಿಂಗಡಣೆ:
ಕೊಂದವನು+ ದುಶ್ಯಾಸನನ +ಮಗ
ಬಂದುದ್+ಅಪರಾಧವು +ಜಯದ್ರಥಗ್
ಇಂದ್+ಇವನ +ಪತಿಕರಿಸಬೇಹುದು +ರಣದೊಳ್+ಅರ್ಜುನನ
ಮುಂದುಗೆಡಿಸಲೆಬೇಕು+ ಭೀಷ್ಮರು
ಸಂದ +ಬಳಿಕ್+ಎಮಗಾಪ್ತ +ನೀನೇ
ತಂದೆ+ ನೀನೆಂದ್+ಅರಸನ್+ಎರಗಿದನ್+ಅವರ +ಚರಣದಲಿ

ಅಚ್ಚರಿ:
(೧) ದ್ರೋಣರನ್ನು ಹೊಗಳಿದ ಪರಿ – ಭೀಷ್ಮರು ಸಂದ ಬಳಿಕೆಮಗಾಪ್ತ ನೀನೇ ತಂದೆ ನೀನ್

ಪದ್ಯ ೧: ಭೀಮನನ್ನೆದುರಿಸಲು ಯಾರು ಮುಂದೆ ಬಂದರು?

ಗುರುಗಳಾಡಿದ ಭಾಷೆ ಪರಬಲ
ದರಸ ಕಟ್ಟುವದದು ನಿಲಲಿ ನ
ಮ್ಮರಸ ಸಿಲುಕಿದ ಭೀಮ ಗಜ ಕಟ್ಟಿದುದು ಬೀದಿಗಳ
ತಿರುಗಲಾಪರೆ ಸಮಯವಿದು ಸಂ
ಗರ ಸಮರ್ಥರು ಬರಲಿ ಯೆಂಬ
ಬ್ಬರದೊಳಗೆ ಭಗದತ್ತ ಮೇಳೈಸಿದನು ನಿಜಗಜವ (ದ್ರೋಣ ಪರ್ವ, ೩ ಸಂಧಿ, ೧ ಪದ್ಯ)

ತಾತ್ಪರ್ಯ:
ಶತ್ರುರಾಜನನ್ನು ಸೆರೆಹಿಡಿಯುತ್ತೇನೆ ಎಂದು ಗುರುಗಳು ಶಪಥಮಾಡಿದ್ದರು. ಅದು ಹೋಗಲಿ, ಭೀಮನೆಂಬ ಆನೆ ಬೀದಿಗಳನ್ನು ಕಟ್ಟಿಹಾಕಿತು. ಅದನ್ನು ಈಗ ತಿರುಗಿಸಲು ಸಮರ್ಥರಾದವರು ಬರಲಿ ಎಂಬ ಕೂಗೇಳಲು ಭಗದತ್ತನು ತನ್ನ ಆನೆಯನ್ನು ಸಜ್ಜುಗೊಳಿಸಿದನು.

ಅರ್ಥ:
ಗುರು: ಆಚಾರ್ಯ; ಭಾಷೆ: ನುಡಿ, ಮಾತು; ಪರಬಲ: ವೈರಿಸೈನ್ಯ; ಅರಸ: ರಾಜ; ಕಟ್ಟು: ಬಂಧಿಸು; ನಿಲ್ಲು: ತಡೆ; ಸಿಲುಕು: ಸೆರೆಯಾದ ವಸ್ತು; ಗಜ: ಆನೆ; ಕಟ್ಟು: ಬಂಧಿಸು; ಬೀದಿ: ರಸ್ತೆ; ತಿರುಗು: ಸಂಚರಿಸು; ಸಮಯ: ಕಾಲ; ಸಂಗರ: ಯುದ್ಧ; ಸಮರ್ಥ: ಬಲಶಾಲಿ, ಗಟ್ಟಿಗ; ಬರಲಿ: ಆಗಮಿಸು; ಅಬ್ಬರ: ಆರ್ಭಟ; ಮೇಳೈಸು: ಸೇರು, ಜೊತೆಯಾಗು; ಗಜ: ಆನೆ;

ಪದವಿಂಗಡಣೆ:
ಗುರುಗಳಾಡಿದ +ಭಾಷೆ +ಪರಬಲದ್
ಅರಸ +ಕಟ್ಟುವದ್+ಅದು +ನಿಲಲಿ +ನಮ್ಮ್
ಅರಸ +ಸಿಲುಕಿದ +ಭೀಮ +ಗಜ+ ಕಟ್ಟಿದುದು +ಬೀದಿಗಳ
ತಿರುಗಲಾಪರೆ+ ಸಮಯವಿದು +ಸಂ
ಗರ+ ಸಮರ್ಥರು +ಬರಲಿ +ಯೆಂಬ್
ಅಬ್ಬರದೊಳಗೆ+ ಭಗದತ್ತ+ ಮೇಳೈಸಿದನು +ನಿಜಗಜವ

ಅಚ್ಚರಿ:
(೧) ಪರಬಲದರಸ, ನಮ್ಮರಸ – ದುರ್ಯೋಧನ, ಧರ್ಮಜನನ್ನು ಕರೆದ ಪರಿ

ಪದ್ಯ ೨: ಸೈನ್ಯವು ಹೇಗೆ ಸನ್ನದ್ಧವಾಗಿತ್ತು?

ಮಡದ ಸೋಂಕಿಂ ಮುನ್ನ ಗಗನವ
ತುಡುಕ ಬಗೆದವು ತೇಜಿಗಳು ನಸು
ಸಡಿಲ ಬಿಡೆ ವಾಘೆಯಲಿ ಚಿಗಿದುವು ರಥದ ವಾಜಿಗಳು
ತುಡುಕುವಂಕುಶದಿಂದ ಮುನ್ನಿಳೆ
ಯೊಡೆಯೆ ಗಜ ಗಾಡಿಸಿದವರಸರ
ಬಿಡುಹು ತಡೆದೆಡಗಲಸಬಗೆದುವು ವಿಗಡ ಪಾಯದಳ (ಭೀಷ್ಮ ಪರ್ವ, ೨ ಸಂಧಿ, ೨ ಪದ್ಯ)

ತಾತ್ಪರ್ಯ:
ರಾವುತರು, ಚಪ್ಪರಿಸುವ ಮೊದಲೇ ಕುದುರೆಗಳು ಆಕಾಶಕ್ಕೇಳಲು ತವಕಿಸುತ್ತಿದ್ದವು. ಲಗಾಮನ್ನು ಸ್ವಲ್ಪ ಸಡಿಲಬಿಟ್ಟರೂ, ರಥಕ್ಕೆ ಕಟ್ಟಿದ ಕುದುರೆಗಳು ನುಗ್ಗುತ್ತಿದ್ದವು. ಅಂಕುಶದಿಂದ ತಿವಿಯುವ ಮೊದಲೇ ಆನೆಗಲು ಮುನ್ನುಗ್ಗಲು ಸಿದ್ಧವಾಗುತ್ತಿದ್ದವು. ರಾಜರ ಸನ್ನೆಗೆ ಮೊದಲೇ ಕಾಳಗವನ್ನಾರಂಭಿಸಲು ಕಾಲಾಳುಗಳು ತವಕಿಸುತ್ತಿದ್ದರು.

ಅರ್ಥ:
ಮಡ: ರಥದ ಚೌಕಟ್ಟು; ಸೋಂಕು: ಮುಟ್ಟುವಿಕೆ, ಸ್ಪರ್ಶ; ಮುನ್ನ: ಮುಂಚೆ; ಗಗನ: ಆಗಸ; ತುಡುಕ: ಹೋರಾಡು, ಸೆಣಸು; ಬಗೆ: ಕ್ರಮ; ತೇಜಿ: ಕುದುರೆ; ನಸು: ಕೊಂಚ, ಸ್ವಲ್ಪ; ಸಡಿಲಿಸು: ಕಳಚು, ಬಿಚ್ಚು; ವಾಘೆ: ಲಗಾಮು; ಚಿಗಿ: ಬೆರಳುಗಳಿಂದ ಚಿಮ್ಮಿಸು, ಹಾರು; ರಥ: ಬಂಡಿ; ವಾಜಿ: ಕುದುರೆ; ತುಡುಕು: ಹೋರಾಡು, ಸೆಣಸು; ಅಂಕುಶ: ಒಂದು ಬಗೆಯ ಆಯುಧ, ಹಿಡಿತ, ಹತೋಟಿ; ಮುನ್ನ: ಮುಂಚೆ; ಇಳೆ: ಭೂಮಿ; ಒಡೆಯ: ರಾಜ; ಗಜ: ಆನೆ; ಗಾಡಿಸು: ವ್ಯಾಪಿಸು, ಹೊಡೆ; ಅರಸ: ರಾಜ; ಬಿಡುಹು: ಅವಕಾಶ; ತಡೆ: ನಿಲ್ಲು; ಬಗೆ: ಎಣಿಸು, ಯೋಚಿಸು; ವಿಗಡ: ಶೌರ್ಯ, ಪರಾಕ್ರಮ; ಪಾಯದಳ: ಸೈನಿಕರು; ಎಡೆಗಲಸು: ವ್ಯಾಪಿಸು, ನಡುವೆ ಸೇರಿಸು;

ಪದವಿಂಗಡಣೆ:
ಮಡದ +ಸೋಂಕಿಂ +ಮುನ್ನ +ಗಗನವ
ತುಡುಕ +ಬಗೆದವು +ತೇಜಿಗಳು +ನಸು
ಸಡಿಲ +ಬಿಡೆ +ವಾಘೆಯಲಿ +ಚಿಗಿದುವು +ರಥದ +ವಾಜಿಗಳು
ತುಡುಕುವ್+ಅಂಕುಶದಿಂದ +ಮುನ್ನ್+ಇಳೆ
ಯೊಡೆಯೆ +ಗಜ+ ಗಾಡಿಸಿದವ್+ಅರಸರ
ಬಿಡುಹು+ ತಡೆದ್+ಎಡಗಲಸ+ಬಗೆದುವು +ವಿಗಡ+ ಪಾಯದಳ

ಅಚ್ಚರಿ:
(೧) ಸೇನೆಯ ನಾಲ್ಕು ಭಾಗ (ಕುದುರೆ, ರಥ, ಆನೆ, ಪಾಯದಳ) ಹೇಗೆ ಸಿದ್ಧರಾಗಿದ್ದರು ಎಂದು ವಿವರಿಸುವ ಪದ್ಯ
(೨) ಅರಸ, ಇಳೆಯೊಡೆಯ – ಸಮನಾರ್ಥಕ ಪದ

ಪದ್ಯ ೩೭: ಧರ್ಮಜನು ಏನೆಂದು ಘೋಷಿಸಿದನು?

ದೋಷ ನಿಮಗಿಲ್ಲೆನ್ನ ಮೇಲಭಿ
ಲಾಷೆಯನು ಬಿಡಿ ನಿಮ್ಮ ಮಗ ಕುಲ
ಭೂಷಣನಲಾ ಧರ್ಮಸುತನಾತನಲಿ ಹುರುಡಿಸುವ
ರೋಷವುಂಟೇ ತನಗೆ ನಿಮಗಿದು
ದೂಷಣವೆ ತಾನಲ್ಲ ನಾನೇ
ಘೋಷಿಸುವೆನೈ ಧರ್ಮಸುತನರಸಾಗಬೇಕೆಂದು (ಅರಣ್ಯ ಪರ್ವ, ೨೨ ಸಂಧಿ, ೩೭ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ತಂದೆಗೆ ಉತ್ತರಿಸುತ್ತಾ, ನಿಮ್ಮದೇನೂ ದೋಷವಿಲ್ಲ, ನಾನು ಬದುಕಬೇಕೆಂಬ ಆಶೆಯನ್ನು ಬಿಟ್ಟುಬಿಡಿ, ಕುಲಭೂಷಣನಾದ ನಿಮ್ಮ ಮಗ ಧರ್ಮಜನಿರುವನಲ್ಲಾ ಅವನೊಡನೆ ಮತ್ಸರಿಸುವ, ಪೈಪೋಟಿ ಮಾಡಬೇಕೆಂಬ ಕೋಪವೇನೂ ಇಲ್ಲ. ಅವನನ್ನು ಪ್ರೀತಿಸುವುದು ನಿಮಗೇನೂ ದೋಷವಗುವುದಿಲ್ಲ. ನಾನೇ ಘೋಷಿಸಿಬಿಡುತ್ತೇನೆ, ಧರ್ಮಜನೇ ಅರಸನಾಗಲಿ.

ಅರ್ಥ:
ದೋಷ: ತಪ್ಪು; ಅಭಿಲಾಷೆ: ಆಸೆ, ಬಯಕೆ; ಬಿಡಿ: ತೊರೆ; ಮಗ: ಪುತ್ರ; ಕುಲ: ವಂಶ; ಭೂಷಣ: ಶ್ರೇಷ್ಠ; ಸುತ: ಮಗ; ಹುರುಡಿಸು: ಸ್ಪರ್ಧಿಸು, ಮತ್ಸರಿಸು; ರೋಷ: ಕೋಪ; ದೂಷಣ: ಬೈಗಳು, ನಿಂದನೆ; ಘೋಷಣೆ: ಕೂಗಿ ಹೇಳುವಿಕೆ; ಅರಸ: ರಾಜ;

ಪದವಿಂಗಡಣೆ:
ದೋಷ +ನಿಮಗಿಲ್ಲ್+ಎನ್ನ +ಮೇಲ್+ಅಭಿ
ಲಾಷೆಯನು +ಬಿಡಿ +ನಿಮ್ಮ +ಮಗ +ಕುಲ
ಭೂಷಣನಲಾ+ ಧರ್ಮಸುತನ್+ಆತನಲಿ +ಹುರುಡಿಸುವ
ರೋಷವುಂಟೇ +ತನಗೆ +ನಿಮಗಿದು
ದೂಷಣವೆ+ ತಾನಲ್ಲ +ನಾನೇ
ಘೋಷಿಸುವೆನೈ +ಧರ್ಮಸುತನ್+ಅರಸಾಗಬೇಕೆಂದು

ಅಚ್ಚರಿ:
(೧) ಧರ್ಮಜನನ್ನು ಹೊಗಳುವ ಪರಿ – ಕುಲಭೂಷಣನಲಾ ಧರ್ಮಸುತನ್
(೨) ದೋಷ, ರೋಷ, ಭೂಷಣ, ದೂಷಣ – ಪ್ರಾಸ ಪದಗಳು

ಪದ್ಯ ೧೯: ಧರ್ಮಜನು ಮುನಿಗಳಿಗೆ ಏನು ಹೇಳಿದನು?

ಅರಸಲಾ ಕುರುರಾಯನಾತನ
ಬರವು ತುರುಪಳ್ಳಿಗಳ ಗೋವಿ
ಸ್ತರಣ ಕೋಸುಗವೈಸೆ ಪಾಳೆಯ ಸಾರ್ವಭೌಮನದು
ಪರಿಸರದಲಿದ್ದುದು ವಿನೋದಕೆ
ತರುಣಿಯರು ಬರಲೇಕೆ ನೀವ
ಬ್ಬರಿಸುವಿರಿ ನಮ್ಮವರಲಾಯೆಂದನು ಮಹೀಪಾಲ (ಅರಣ್ಯ ಪರ್ವ, ೧೯ ಸಂಧಿ, ೧೯ ಪದ್ಯ)

ತಾತ್ಪರ್ಯ:
ಮುನಿಗಳೇ, ಈ ದೇಶದ ದೊರೆ ದುರ್ಯೋಧನ. ದನಕರುಗಳ ಹಳ್ಳಿಗಳಿಗೆ ಬಂದು ಗೋವುಗಳನ್ನು ನೋಡಬೇಕೆಂದು ಅವನಿಲ್ಲಿ ಪಾಳೆಯ ಬಿಟ್ಟಿದ್ದಾನೆ, ಸುತ್ತ ಮುತ್ತಲಿನ ಪ್ರದೇಶವನ್ನು ನೋಡಿಕೊಂಡು ಹೋಗಲು ಆ ತರುಣಿಯರು ಬಂದರೆ ನೀವೇಕೆ ಅಬ್ಬರಿಸುತ್ತಿರುವಿರಿ, ಅವರು ನಮ್ಮವರೇ ಅಲ್ಲವೇ ಎಂದು ಧರ್ಮಜನು ಮುನಿಗಳಿಗೆ ಹೇಳಿದನು.

ಅರ್ಥ:
ಅರಸ: ರಾಜ; ರಾಯ: ರಾಜ; ಬರವು: ಆಗಮನ; ತುರು: ದನಕರು; ಪಳ್ಳಿ: ಹಳ್ಳಿ; ಗೋ: ಗೋವು; ವಿಸ್ತರಣ: ಹರಹು, ವಿಸ್ತಾರ; ಐಸೆ: ಅಷ್ಟು; ಪಾಳೆ:ಸೀಮೆ; ಸಾರ್ವಭೌಮ: ಸಮಸ್ತ ಭೂಮಂಡಲಕ್ಕೆ ಸಂಬಂಧಿಸಿದ್ದು; ಪರಿಸರ: ಸುತ್ತಲೂ ಇರುವ ಸನ್ನಿವೇಶ, ಆವರಣ; ವಿನೋದ: ಸಂತೋಷ, ಹಿಗ್ಗು; ತರುಣಿ: ಹೆಣ್ಣು; ಬರಲು: ಆಗಮನ; ಅಬ್ಬರಿಸು: ಆರ್ಬಟ; ಮಹೀಪಾಲ: ರಾಜ;

ಪದವಿಂಗಡಣೆ:
ಅರಸಲಾ +ಕುರುರಾಯನ್+ಆತನ
ಬರವು +ತುರು+ಪಳ್ಳಿಗಳ +ಗೋ+ವಿ
ಸ್ತರಣ +ಕೋಸುಗವ್+ಐಸೆ +ಪಾಳೆಯ +ಸಾರ್ವಭೌಮನದು
ಪರಿಸರದಲ್+ಇದ್ದುದು +ವಿನೋದಕೆ
ತರುಣಿಯರು +ಬರಲ್+ಏಕೆ+ ನೀವ್
ಅಬ್ಬರಿಸುವಿರಿ +ನಮ್ಮವರಲಾ+ಎಂದನು +ಮಹೀಪಾಲ

ಅಚ್ಚರಿ:
(೧) ಧರ್ಮಜನ ವಿಶಾಲತೆ – ನಮ್ಮವರಲಾಯೆಂದನು ಮಹೀಪಾಲ, ಅರಸಲಾ ಕುರುರಾಯ
(೨) ಅರಸ, ರಾಯ, ಮಹೀಪಾಲ, ಸಾರ್ವಭೌಮ – ಸಾಮ್ಯಾರ್ಥ ಪದಗಳು

ಪದ್ಯ ೧೦: ದ್ರೌಪದಿ ಯಾರನ್ನು ಸುಡಬೇಕೆಂದು ಕೂಗಿದಳು?

ಬೂತುಗೆಡೆವನೊಳೆಂಬೆನೇ ಮರು
ಮಾತನೆಲೆ ಗಾಂಗೇಯ ತಮ್ಮದು
ನೀತಿಯೆ ತಾನಿವರ ಧನವೇ ಧರ್ಮಮಾರ್ಗದಲಿ
ಸೋತನರಸನು ತನ್ನನೆನ್ನನು
ಸೋತುದನುಚಿತವೆಂಬ ಬೆಡಗಿನ
ಮಾತನರಿಯದ ಮೂಢರನು ಸುಡಲೆಂದಳಿಂದುಮುಖಿ (ಸಭಾ ಪರ್ವ, ೧೬ ಸಂಧಿ, ೧೦ ಪದ್ಯ)

ತಾತ್ಪರ್ಯ:
ದ್ರೌಪದಿಯು, ಹೇ ಭೀಷ್ಮ ಭಂಡತನದಿಂದ ನಾಚಿಕೆಗೇಡಿನ ಮಾತನ್ನಾಡುವವನೊಡನೆ ನಾನು ಹೇಗೆ ಮಾತಾಡಲಿ? ನಿಮ್ಮ ಮೌನವು ನೀತಿಯ ನಡೆಯೇ, ಅವರು ನೀತಿವಂತರೇ? ಧರ್ಮಮಾರ್ಗಕ್ಕನುಸಾರವಾಗಿ ನಾನಿವರ ವಸ್ತುವಾಗಿರುವೆನೇ? ಧರ್ಮಜನು ತನ್ನನ್ನು ಸೋತ ನಂತರ ನನ್ನನ್ನು ಸೋತದ್ದು ಅನುಚಿತ, ಇಷ್ಟನ್ನೂ ಅರಿಯದ ಮೂಢರನ್ನು ಸುಡಬೇಕು ಎಂದಳು.

ಅರ್ಥ:
ಬೂತು: ಕುಚೋದ್ಯ, ಕುಚೇಷ್ಟೆ; ಮರುಮಾತು: ಎದುರು ನುಡಿ; ಗಾಂಗೇಯ: ಭೀಷ್ಮ; ನೀತಿ: ಮಾರ್ಗ, ರೀತಿ; ಧನ: ಐಶ್ವರ್ಯ; ಧರ್ಮ: ಧಾರಣೆ ಮಾಡಿದುದು; ಮಾರ್ಗ: ದಾರಿ; ಸೋತ: ಪರಾಭವ; ಅರಸು: ರಾಜ; ಅನುಚಿತ: ಸರಿಯಲ್ಲದ; ಬೆಡಗು: ಅಂದ, ಸೊಬಗು; ಮಾತು: ನುಡಿ; ಅರಿ: ತಿಳಿ; ಮೂಢ: ಮೂರ್ಖ; ಸುಡು: ದಹಿಸು; ಇಂದುಮುಖಿ: ಚಂದ್ರನಂತ ಮುಖವುಳ್ಳವಳು;

ಪದವಿಂಗಡಣೆ:
ಬೂತುಗೆಡೆವನೊಳ್+ಎಂಬೆನೇ+ ಮರು
ಮಾತನೆಲೆ +ಗಾಂಗೇಯ +ತಮ್ಮದು
ನೀತಿಯೆ+ ತಾನಿವರ+ ಧನವೇ +ಧರ್ಮ+ಮಾರ್ಗದಲಿ
ಸೋತನ್+ಅರಸನು +ತನ್ನನ್+ಎನ್ನನು
ಸೋತುದ್+ಅನುಚಿತವೆಂಬ +ಬೆಡಗಿನ
ಮಾತನ್+ಅರಿಯದ +ಮೂಢರನು +ಸುಡಲ್+ಎಂದಳ್+ಇಂದುಮುಖಿ

ಅಚ್ಚರಿ:
(೧) ದ್ರೌಪದಿಯ ತರ್ಕವನ್ನು ಹೇಳುವ ಪರಿ – ಸೋತನರಸನು ತನ್ನನೆನ್ನನು ಸೋತುದನುಚಿತವೆಂಬ ಬೆಡಗಿನ ಮಾತನರಿಯದ ಮೂಢರನು ಸುಡಲೆಂದಳಿಂದುಮುಖಿ

ಪದ್ಯ ೨೪:ದುರ್ಯೋಧನನು ಮಗನನ್ನು ಹೇಗೆ ಕರೆದನು?

ಕರೆಸಿದನು ದುರಿಯೋಧನನನಾ
ದರಿಸಿ ಕಟ್ಟೇಕಾಂತದಲಿ ಮು
ವ್ವರು ವಿಚಾರಿಸಿದರು ನಿಜಾನ್ವಯ ಮೂಲನಾಶನವ
ಭರತಕುಲ ನಿರ್ವಾಹಕನೆ ಬಾ
ಕುರುಕುಲಾನ್ವಯದೀಪ ಬಾ ಎ
ನ್ನರಸ ಬಾ ಎನ್ನಾಣೆ ಬಾಯೆಂದಪ್ಪಿದನು ಮಗನ (ಸಭಾ ಪರ್ವ, ೧೩ ಸಂಧಿ, ೨೪ ಪದ್ಯ)

ತಾತ್ಪರ್ಯ:
ಶಕುನಿಯ ಮಾತಿಗೆ ಓಗೊಟ್ಟು ದುರ್ಯೋಧನನನ್ನು ತನ್ನ ಅರಮನೆಗೆ ಕರೆಸಿದನು. ಏಕಾಂತದಲ್ಲಿ ಆ ಮೂವರೇ ಇದ್ದ ಸಮಯದಲ್ಲಿ ಅವರು ತಮ್ಮ ವಂಶದ ಬೇರನ್ನು ಕೀಳುವ ವಿಧಾನವನ್ನು ಆಲೋಚಿಸಿದರು. ಧೃತರಾಷ್ಟ್ರನು ದುರ್ಯೋಧನನನ್ನು ಭರತಕುಲವನ್ನು ನಡೆಸುವವನೇ, ಕುರುಕುಲದ ಬೆಳಕನ್ನು ಬೆಳಗಿಸುವ ದೀಪವೇ, ನನ್ನ ರಾಜ, ನನ್ನಾನೆ ಬಾ ಎಂದು ದುರ್ಯೋಧನನನ್ನು ಅಪ್ಪಿಕೊಂಡನು.

ಅರ್ಥ:
ಕರೆಸು: ಬರೆಮಾಡು; ಆದರ: ಗೌರವ, ಪ್ರೀತಿ; ಏಕಾಂತ: ಒಂಟಿ; ಮುವ್ವರು: ಮೂರು ಮಂದಿ; ವಿಚಾರಿಸು: ಪರಾಮರ್ಶಿಸು;ಆನ್ವಯ: ಸಂಬಂಧ; ಮೂಲ: ಕಾರಣ, ಹೇತು; ನಾಶ: ಹಾಳು; ಕುಲ: ವಂಶ; ನಿರ್ವಾಹಕ: ನಿರ್ವಹಿಸುವವನು; ದೀಪ: ಬೆಳಗು; ಅರಸ: ರಾಜ; ಆಣೆ: ಪ್ರಮಾಣ; ಅಪ್ಪು: ತಬ್ಬಿಕೊ; ಮಗ: ಪುತ್ರ;

ಪದವಿಂಗಡಣೆ:
ಕರೆಸಿದನು+ ದುರಿಯೋಧನನನ್
ಆದರಿಸಿ+ ಕಟ್+ಏಕಾಂತದಲಿ+ ಮು
ವ್ವರು+ ವಿಚಾರಿಸಿದರು +ನಿಜಾನ್ವಯ +ಮೂಲನಾಶನವ
ಭರತಕುಲ+ ನಿರ್ವಾಹಕನೆ+ ಬಾ
ಕುರುಕುಲಾನ್ವಯದೀಪ +ಬಾ +ಎ
ನ್ನರಸ+ ಬಾ + ಎನ್ನಾಣೆ +ಬಾ+ಎಂದ್+ಅಪ್ಪಿದನು +ಮಗನ

ಅಚ್ಚರಿ:
(೧) ದುರ್ಯೋಧನನನ್ನು ಕರೆದ ಬಗೆ – ಭರತಕುಲ ನಿರ್ವಾಹಕ, ಕುರುಕುಲಾನ್ವಯದೀಪ, ಅರಸ

ಪದ್ಯ ೧೧: ದಕ್ಷಿಣದ ಯಾವ ರಾಜರು ಯಾಗದ ನಂತರ ಹಿಂದಿರುಗಿದರು?

ಅರಸ ಕೇಳೈ ಪಾಂಡ್ಯ ಭೂಮೀ
ಶ್ವರ ಕಳಿಂಗ ಪ್ರಮುಖ ತೆಂಕಣ
ಧರಣಿಪರ ಬಳಿಯಲಿ ಘಟೋತ್ಕಚ ಯೋಜನಾಂತರವ
ವರಕುಮಾರರು ನಿಖಿಳ ಪೃಥ್ವೀ
ಶ್ವರರನವರವರುಚಿತದಲಿ ಸತು
ಕರಿಸಿ ಮರಳಿದು ಬಂದರಿಂದ್ರಪ್ರಸ್ಥಪುರವರಕೆ (ಸಭಾ ಪರ್ವ, ೧೨ ಸಂಧಿ, ೧೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ದಕ್ಷಿಣದ ದೊರೆಗಳಾದ ಪಾಂಡ್ಯರಾಜ, ಕಳಿಂಗರಾಜ ಮೊದಲಾದವರನ್ನು ಘಟೋತ್ಕಚನು ಒಂದು ಯೋಜನ ದೂರ ಕಳುಹಿಸಿ ಬಂದನು. ಪಾಂಡವರ ಮಕ್ಕಳು ಎಲ್ಲಾ ರಾಜರನ್ನು ಸರಿಯಾದ ರೀತಿಯಲ್ಲಿ ಸತ್ಕರಿಸಿ ಅವರವರ ಊರುಗಳಿಗೆ ಕಳಿಸಿ ಇಂದ್ರಪ್ರಸ್ಥಪುರಕ್ಕೆ ಮರಳಿದರು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಭೂಮೀಶ್ವರ: ರಾಜ; ಪ್ರಮುಖ: ಮುಖ್ಯ; ತೆಂಕಣ: ದಕ್ಷಿಣ; ಧರಣಿಪ: ರಾಜ; ಬಳಿ: ಹತ್ತಿರ; ಯೋಜನ: ಅಳತೆಯ ಪ್ರಮಾಣ; ಅಂತರ: ದೂರ; ವರ: ಶ್ರೇಷ್ಠ; ಕುಮಾರ: ಮಕ್ಕಳು; ನಿಖಿಳ: ಎಲ್ಲಾ; ಪೃಥ್ವೀಶ್ವರ: ರಾಜ; ಉಚಿತ: ಸರಿಯಾದ; ಸತುಕರಿಸು: ಗೌರವ; ಮರಳು: ಹಿಂದಿರುಗು; ಬಂದು: ಆಗಮಿಸು; ಪುರ: ಊರು;

ಪದವಿಂಗಡಣೆ:
ಅರಸ +ಕೇಳೈ +ಪಾಂಡ್ಯ +ಭೂಮೀ
ಶ್ವರ +ಕಳಿಂಗ +ಪ್ರಮುಖ +ತೆಂಕಣ
ಧರಣಿಪರ+ ಬಳಿಯಲಿ+ ಘಟೋತ್ಕಚ +ಯೋಜನ+ಅಂತರವ
ವರಕುಮಾರರು +ನಿಖಿಳ +ಪೃಥ್ವೀ
ಶ್ವರರನ್+ಅವರವರ್+ಉಚಿತದಲಿ+ ಸತು
ಕರಿಸಿ +ಮರಳಿದು+ ಬಂದರ್+ಇಂದ್ರಪ್ರಸ್ಥ+ಪುರವರಕೆ

ಅಚ್ಚರಿ:
(೧) ಅರಸ, ಭೂಮೀಶ್ವರ, ಧರಣಿಪ, ಪೃಥ್ವೀಶ್ವರ – ರಾಜ ಪದದ ಸಮನಾರ್ಥಕ ಪದಗಳು
(೨) ೧ ಸಾಲಿನ ಮೊದಲ ಮತ್ತು ಕೊನೆ ಪದ ಸಮಾನಾರ್ಥಕ ಪದ