ಪದ್ಯ ೫೦: ಕರ್ಣನು ಎಷ್ಟು ಬಾರಿ ಭೀಮನೆದುರು ಸೋತನು?

ನವವರೂಥ ತುರಂಗ ಸಾರಥಿ
ಸವಗ ಮೊಚ್ಚೆಯದಲ್ಲಿ ಬಹಳಾ
ಹವದೊಳಗೆ ಮುಂಕೊಂಡು ಭೀಮನ ಹಳಚಿದನು ಕರ್ಣ
ತವಕ ಮಿಗಲೆಚ್ಚಾಡಿ ಪುನರಪಿ
ಪವನಜನ ಘಾಯದಲಿ ಸೋಲಿದು
ಬವರಮುಖದಲಿ ಹಿಂಗಿದನು ಹದಿನೆಂಟು ಸೂಳಿನಲಿ (ದ್ರೋಣ ಪರ್ವ, ೧೩ ಸಂಧಿ, ೫೦ ಪದ್ಯ)

ತಾತ್ಪರ್ಯ:
ಹೊಸ ರಥ, ಕುದುರೆಗಳು, ಸಾರಥಿ, ಕವಚ, ಜೋಡುಗಳನ್ನು ಅಳವಡಿಸಿಕೊಂಡು, ಮೇಲೆಬಿದ್ದು ಭೀಮನೊಡನೆ ಕರ್ಣನು ಯುದ್ಧಮಾಡಿದನು. ಮಹಾ ತವಕದಿಂದ ಹೋರಾಡಿ ಭೀಮನಿಂದ ಗಾಯವಡೆದು ಹದಿನೆಂಟು ಬಾರಿ ಸೋತು ಹಿಮ್ಮೆಟ್ಟಿದನು.

ಅರ್ಥ:
ನವ: ಹೊಸ; ವರೂಥ: ತೇರು, ರಥ; ತುರಂಗ: ಕುದುರೆ; ಸಾರಥಿ: ಸೂತ; ಸವಗ: ಕವಚ; ಮೊಚ್ಚೆ: ಪಾದರಕ್ಷೆ; ಆಹವ: ಯುದ್ಧ; ಮುಂಕೊಂಡು: ಮೇಲೆಬಿದ್ದು, ಎದುರು ನೋಡು; ಹಳಚು: ತಾಗು, ಬಡಿ; ತವಕ: ಬಯಕೆ, ಆತುರ; ಮಿಗಲು: ಹೆಚ್ಚು; ಎಚ್ಚು: ಬಾಣ ಪ್ರಯೋಗ ಮಾಡು; ಪುನರಪಿ: ಮತ್ತೆ; ಪವನಜ: ಭೀಮ; ಘಾಯ: ಪೆಟ್ಟು; ಸೋಲು: ಪರಾಭವ; ಬವರ: ಕಾಳಗ, ಯುದ್ಧ; ಹಿಂಗು: ಹಿಂದಕ್ಕೆ ಹೋಗು, ಹಿಂದೆ ಸರಿ; ಸೂಳು: ಆವೃತ್ತಿ, ಬಾರಿ;

ಪದವಿಂಗಡಣೆ:
ನವ+ವರೂಥ +ತುರಂಗ +ಸಾರಥಿ
ಸವಗ +ಮೊಚ್ಚೆಯದಲ್ಲಿ +ಬಹಳ
ಆಹವದೊಳಗೆ +ಮುಂಕೊಂಡು +ಭೀಮನ +ಹಳಚಿದನು +ಕರ್ಣ
ತವಕ +ಮಿಗಲ್+ಎಚ್ಚಾಡಿ +ಪುನರಪಿ
ಪವನಜನ +ಘಾಯದಲಿ +ಸೋಲಿದು
ಬವರ+ಮುಖದಲಿ +ಹಿಂಗಿದನು +ಹದಿನೆಂಟು +ಸೂಳಿನಲಿ

ಅಚ್ಚರಿ:
(೧) ಕರ್ಣನು ಸಿದ್ಧಪಡಿಸಿದುದು – ವರೂಥ, ತುರಂಗ, ಸಾರಥಿ, ಸವಗ, ಮೊಚ್ಚೆ

ಪದ್ಯ ೨: ಅರ್ಜುನನು ಆಯುಧಗಳನ್ನು ಹೇಗೆ ಪೂಜಿಸಿದನು?

ಸವಗ ಮೊಚ್ಚಯ ಜೋಡು ಸೀಸಕ
ಕವಚ ಬಾಹುರಿಕೆಗಳ ನಿಲಿಸಿದ
ನವಿರಳಾಕ್ಷತೆ ಗಂಧ ಪುಷ್ಪ ಸುಧೂಪ ದೀಪದಲಿ
ವಿವಿಧ ಸತ್ಕಾರದಲಿ ದುರ್ಗಾ
ಸ್ತವವ ಜಪಿಸಿದ ವರ ಘೃತೋದನ
ನವರುಧಿರ ಮಾಂಸೋಪಹಾರಂಗಳಲಿ ಪೂಜಿಸಿದ (ದ್ರೋಣ ಪರ್ವ, ೯ ಸಂಧಿ, ೨ ಪದ್ಯ)

ತಾತ್ಪರ್ಯ:
ಕವಚ, ಪಾದರಕ್ಷೆ, ಶಿರಸ್ತ್ರಾನ, ಬಾಹುರಕ್ಷೆಗಲನ್ನು ಸಾಲಾಗಿಟ್ಟನು. ಎಲ್ಲವನ್ನೂ ಅಕ್ಷತೆ, ಗಂಧ, ಪುಷ್ಪ, ಧೂಪ, ದೀಪಗಳಿಮ್ದ ಪೂಜಿಸಿದನು. ಅನೇಕ ಸತ್ಕಾರಗಳನ್ನು ಮಾಡಿದನು. ದುರ್ಗಾಸ್ತವವನ್ನು ಜಪಿಸಿದನು. ತುಪ್ಪದನ್ನ, ರಕ್ತ ಮಾಂಸೋಪಹಾರಗಳನ್ನು ನಿವೇದಿಸಿದನು.

ಅರ್ಥ:
ಸವಗ: ಕವಚ; ಮೊಚ್ಚೆ: ಪಾದರಕ್ಷೆ; ಜೋಡು: ಜೊತೆ, ಜೋಡಿ; ಸೀಸಕ: ಶಿರಸ್ತ್ರಾಣ; ಕವಚ: ಉಕ್ಕಿನ ಅಂಗಿ; ಬಾಹುರಿಕೆ: ತೋಳರಕ್ಷೆ; ಅಕ್ಷತೆ: ಮಂತ್ರಿಸಿದ ಅಕ್ಕಿ; ಗಂಧ: ಚಂದನ; ಪುಷ್ಪ: ಹೂವು; ಧೂಪ: ಸುಗಂಧ ದ್ರವ್ಯ; ದೀಪ: ಹಣತೆ; ವಿವಿಧ: ಹಲವಾರು; ಸತ್ಕಾರ: ಗೌರವ, ಉಪಚಾರ; ದುರ್ಗಾಸ್ತವ: ದುರ್ಗೆಯನ್ನು ಆರಾಧಿಸುವ ಸ್ತುತಿ; ಜಪಿಸು: ಮಂತ್ರಿಸು; ವರ: ಶ್ರೇಷ್ಠ; ಘೃತ: ತುಪ್ಪ; ರುಧಿರ: ರಕ್ತ; ನವ: ಹೊಸ; ಮಾಂಸ: ಅಡಗು; ಆಹಾರ: ಊಟ; ಪೂಜಿಸು: ಆರಾಧಿಸು;

ಪದವಿಂಗಡಣೆ:
ಸವಗ +ಮೊಚ್ಚಯ +ಜೋಡು +ಸೀಸಕ
ಕವಚ +ಬಾಹುರಿಕೆಗಳ +ನಿಲಿಸಿದ
ನವಿರಳ+ಅಕ್ಷತೆ +ಗಂಧ +ಪುಷ್ಪ +ಸುಧೂಪ +ದೀಪದಲಿ
ವಿವಿಧ +ಸತ್ಕಾರದಲಿ +ದುರ್ಗಾ
ಸ್ತವವ +ಜಪಿಸಿದ +ವರ +ಘೃತೋದನ
ನವ+ರುಧಿರ +ಮಾಂಸ+ಉಪಹಾರಂಗಳಲಿ +ಪೂಜಿಸಿದ

ಅಚ್ಚರಿ:
(೧) ಅಂಗರಕ್ಷೆಗಳು – ಸವಗ, ಮೊಚ್ಚೆ, ಜೋಡು, ಸೀಸಕ, ಕವಚ, ಬಾಹುರಿಕೆ

ಪದ್ಯ ೪೬: ಸೈನಿಕರು ಯುದ್ಧಕ್ಕೆ ಹೇಗೆ ತಯಾರಾದರು?

ಶಿರದೊಳಾಂತರು ಮೊಚ್ಚೆಯವನಾ
ಚರಣದಲಿ ಸೀಸಕವ ತೋಳಲಿ
ಬರಿಯ ಕವಚವ ಬೆನ್ನಿನಲಿ ಕಟ್ಟಿದರು ಕೈಹೊಡೆಯ
ಸುರಗಿಗಳನೀಡಾಡಿ ತಿರುಹಿದ
ರೊರೆಗಳನು ಬತ್ತಳಿಕೆಯನು ಬಿಲು
ದಿರುವಿನಲಿ ಮೋಹಿದರು ತಲ್ಲಣಿಸಿತ್ತು ತಮತಮಗೆ (ದ್ರೋಣ ಪರ್ವ, ೮ ಸಂಧಿ, ೪೬ ಪದ್ಯ)

ತಾತ್ಪರ್ಯ:
ಪಾದರಕ್ಷೆಯನ್ನು ತಲೆಗೆ ಹಾಕಿ, ಕಾಲಿಗೆ ಶಿರಸ್ತ್ರಾಣವನ್ನು ಬಿಗಿದರು. ತೋಳಿಗೆ ಕವಚವನ್ನು ಹಾಕಿ ದಾರವನ್ನು ಬೆನ್ನಿಗೆ ಬಿಗಿದರು. ಕೈಯ್ಯಲ್ಲಿದ್ದ ಸುರಗಿಗಳನ್ನೆಸೆದು ಒರೆಗಳನ್ನು ಬೀಸಿದರು. ಬತ್ತಳಿಕೆಯನ್ನು ಬಿಲ್ಲ ತಿರುವಿನಲ್ಲಿ ತೂರಿಸಿದರು.

ಅರ್ಥ:
ಶಿರ: ತಲೆ; ಮೊಚ್ಚೆ: ಪಾದರಕ್ಷೆ; ಚರಣ: ಪಾದ; ಸೀಸಕ: ಶಿರಸ್ತ್ರಾಣ; ತೋಳು: ಬಾಹು; ಬರಿ: ಪಕ್ಕ, ಬದಿ; ಕವಚ: ಹೊದಿಕೆ; ಬೆನ್ನು: ಹಿಂಭಾಗ; ಕಟ್ಟು: ಬಂಧಿಸು; ಕೈ: ಹಸ್ತ; ಹೊಡೆ: ಏಟುಕೊಡು; ಸುರಗಿ: ಸಣ್ಣ ಕತ್ತಿ, ಚೂರಿ; ಈಡಾಡು: ಕಿತ್ತು, ಒಗೆ, ಚೆಲ್ಲು; ತಿರುಹು: ತಿರುಗಿಸು; ಒರೆ: ಗುಣ, ದೋಷ ಪರೀಕ್ಷೆಮಾಡು; ಬತ್ತಳಿಕೆ: ಬಾಣಗಳನ್ನಿಡುವ ಕೋಶ, ತೂಣೀರ; ಬಿಲು: ಬಿಲ್ಲು; ಮೋಹ: ಮೈ ಮರೆಯುವಿಕೆ, ಭ್ರಾಂತಿ; ತಲ್ಲಣ: ಅಂಜಿಕೆ, ಭಯ;

ಪದವಿಂಗಡಣೆ:
ಶಿರದೊಳಾಂತರು+ ಮೊಚ್ಚೆಯವನ್+ಆ
ಚರಣದಲಿ +ಸೀಸಕವ +ತೋಳಲಿ
ಬರಿಯ +ಕವಚವ +ಬೆನ್ನಿನಲಿ +ಕಟ್ಟಿದರು +ಕೈಹೊಡೆಯ
ಸುರಗಿಗಳನ್+ಈಡಾಡಿ +ತಿರುಹಿದರ್
ಒರೆಗಳನು +ಬತ್ತಳಿಕೆಯನು +ಬಿಲು
ದಿರುವಿನಲಿ +ಮೋಹಿದರು +ತಲ್ಲಣಿಸಿತ್ತು +ತಮತಮಗೆ

ಅಚ್ಚರಿ:
(೧) ಸೈನಿಕರು ಭಯಪಟ್ಟಿದ್ದರು ಎಂದು ತೋರಿಸುವ ಪರಿ – ಶಿರದೊಳಾಂತರು ಮೊಚ್ಚೆಯವನಾ
ಚರಣದಲಿ ಸೀಸಕವ

ಪದ್ಯ ೩೬: ಬಾಣಗಳು ಅರ್ಜುನನನ್ನು ಹೇಗೆ ಆವರಿಸಿದವು?

ಇದು ಹೊಸತು ಬಾಣಾಬ್ಧಿ ವೇಲೆಯ
ನೊದೆದು ಹಾಯ್ದುದೊ ಭುವನವಳಿವಂ
ದುದಯಿಸಿದ ಮಳೆಗಾಲವೋ ಮಾಮಾ ಶರಾವಳಿಯೊ
ಹೊದರಡಸಿ ಕಿಡಿಯೆದ್ದು ದೆಸೆಗಳ
ಹೊದಿಸಿದವು ಹೊಳೆದರ್ಜುನನ ಮು
ತ್ತಿದವು ಕೆತ್ತಿದವರಿಯ ಸೀಸಕ ಜೋಡು ಮೊಚ್ಚೆಯವ (ಭೀಷ್ಮ ಪರ್ವ, ೯ ಸಂಧಿ, ೩೬ ಪದ್ಯ)

ತಾತ್ಪರ್ಯ:
ಬಾಣಗಳ ಸಮುದ್ರವು ಮರಳ ದಂಡೆಯನ್ನು ಮೀರಿ ಉಕ್ಕಿತೋ, ಪ್ರಳಯಕಾಲದ ಮಳೆಗಾಲವೋ, ಬಾಣ ಪರಂಪರೆಯೋ ಅಬ್ಬಬ್ಬಾ, ಪೊದೆಗಳಂತೆ ಒಟ್ಟಾಗಿ ಬಂದು, ಕಿಡಿಗಳಿಂದ ದಿಕ್ಕುಗಳನ್ನು ಹೊದ್ದಿಸಿದವು. ಅರ್ಜುನನನ್ನು ಮುತ್ತಿ ಕವಚ ಶಿರಸ್ತ್ರಾಣ ಪಾದರಕ್ಷೆಗಳನ್ನು ಕೆತ್ತಿದವು.

ಅರ್ಥ:
ಹೊಸತು: ನವೀನ; ಬಾಣಾಬ್ಧಿ: ಬಾಣಗಳ ಸಾಗರ; ವೇಲೆ: ಸಮುದ್ರ ತೀರ; ಒದೆ: ತಳ್ಳು; ಹಾಯಿ: ಚಾಚು; ಭುವನ: ಭೂಮಿ; ಉದಯಿಸು: ಹುಟ್ಟು; ಮಳೆಗಾಲ: ವರ್ಷಕಾಲ; ಶರಾವಳಿ: ಬಾಣಗಳ ಗುಂಪು; ಹೊದರು: ಪೊದೆ, ಹಿಂಡಲು; ಅಡಸು: ಬಿಗಿಯಾಗಿ ಒತ್ತು; ಕಿಡಿ: ಬೆಂಕಿ; ದೆಸೆ: ದಿಕ್ಕು; ಹೊದ್ದಿಸು: ಸೇರಿಸು, ಕೂಡಿಸು; ಹೊಳೆ: ಪ್ರಕಾಶಿಸು; ಮುತ್ತು: ಆವರಿಸು; ಕೆತ್ತು: ಅದಿರು, ನಡುಗು; ಸೀಸಕ: ಶಿರಸ್ತ್ರಾಣ; ಜೋಡು: ಜೊತೆ, ಜೋಡಿ; ಮೊಚ್ಚೆ:ಪಾದರಕ್ಷೆ; ಅಳಿ: ನಾಶ; ಮಾ ಮಾ: ಬೇಡ, ಬೇಡ; ಅರಿ: ಶತ್ರು;

ಪದವಿಂಗಡಣೆ:
ಇದು +ಹೊಸತು +ಬಾಣಾಬ್ಧಿ +ವೇಲೆಯನ್
ಒದೆದು +ಹಾಯ್ದುದೊ +ಭುವನವ್+ಅಳಿವಂದ್
ಉದಯಿಸಿದ+ ಮಳೆಗಾಲವೋ+ ಮಾಮಾ +ಶರಾವಳಿಯೊ
ಹೊದರ್+ಅಡಸಿ+ ಕಿಡಿ+ಎದ್ದು +ದೆಸೆಗಳ
ಹೊದಿಸಿದವು +ಹೊಳೆದ್+ಅರ್ಜುನನ +ಮು
ತ್ತಿದವು +ಕೆತ್ತಿದವ್+ಅರಿಯ+ ಸೀಸಕ+ ಜೋಡು +ಮೊಚ್ಚೆಯವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಇದು ಹೊಸತು ಬಾಣಾಬ್ಧಿ ವೇಲೆಯನೊದೆದು ಹಾಯ್ದುದೊ ಭುವನವಳಿವಂ
ದುದಯಿಸಿದ ಮಳೆಗಾಲವೋ